ಕಥೆ ಸವಿತಾ ಮುದ್ಗಲ್

ಶ್ರಮಜೀವಿ ಶಾಂತಾ ಬಡವಳಾದರೂ ಸ್ವಾಭಿಮಾನಿ. ತನ್ನ ಬದುಕು ರೂಪಿಸಿಕೊಳ್ಳಲು, ತಾಯಿ ತಂದೆಗೆ ನೆರವಾಗಲು ಹೊಲಿಗೆ ಕೆಲಸ ಹಿಡಿದಳು. ಇವಳಿಂದ ಅಸೂಯೆಗೊಂಡ ಜಲಜಾ ಮಾಡಿದ ಕುತಂತ್ರವೇನು……? ಮುಂದೆ ಏನಾಯಿತು……?

ಮುದ್ದೇಬಿಹಾಳದ ಪುಟ್ಟ ಊರು, ಒಂದು ಓಣಿಯಲ್ಲಿ ಈಶಪ್ಪನ ಪುಟ್ಟ ಕುಟುಂಬ. ಹೆಂಡತಿ, ಒಬ್ಬ ಮಗಳು. ಬಡತನವಿದ್ದರೂ, ಇದ್ದುದರಲ್ಲಿ ಸುಖವಾಗಿ ಇದ್ದವು. ಮಗಳು ಶಾಂತಾ ನೋಡಲು ಸುಂದರವಾಗಿದ್ದರೂ ಅವಿದ್ಯಾವಂತೆ.

ಶಾಂತಾಗೆ ಸುಮಾರು ವರಗಳು ಬಂದು ಹೋದವು. ಒಂದು ಕೂಡ ಗಟ್ಟಿಯಾಗೋ ತರ ಕಾಣ್ತಾ ಇಲ್ಲ. ನಮ್ಮ ಕರ್ಮನೊ ಏನೋ ನೋಡು ಎಂದು ಈಶಪ್ಪ ತನ್ನ ಹೆಂಡ್ತಿ ಬಾಳಮ್ಮಗೆ ಹೇಳ್ತಾ ಇದ್ದ.

“ಅಷ್ಟು ಅವಸರ ಯಾಕೆ ಮಾಡ್ತೀರಿ…. ದೇವರು ಹುಟ್ಟಿಸಿದ ಮೇಲೆ ಹಕ್ಕಿಗೊಂದು ಪಕ್ಕಿ ಅಂತ, ಗಾದೇನೇ ಇದೆಯಲ್ವಾ….? ಕಾದಷ್ಟು ಮುಂದೊಂದು ದಿನ ಒಳ್ಳೆ ಸಂಬಂಧ ಕೂಡಿ ಬರಬಹುದು.”

“ಇದೆ ಸಮಾಧಾನದ ಮಾತು ನಿನ್ನಿಂದ. ಬೇರೆ ಏನು ಮಾಡೋದು ಬಾಳು, ಸಾಕಾಯ್ತು…..” ಎಂದು ಈಶಪ್ಪ ನಿಟ್ಟಿಸಿರು ಬಿಡುತ್ತಾ, “ಒಂದು ಕಪ್‌ ಟೀ ಆದ್ರೂ ಕೊಡೆ, ಯಾಕೋ ತಲೆ ತುಂಬಾ ನೋಯ್ತಾ ಇದೆ,” ಎಂದು ಹೊರಗಡೆ ಕಟ್ಟೆ ಮೇಲೆ ಬಂದು ಕುಳಿತ.

ಮಗಳಿಗೆ ಟೀ ಮಾಡಲು ಹೇಳಿದಳು. ಶಾಂತಾ ಟೀ ಮಾಡಿ, ತಂದೆಗೆ ಕೊಟ್ಟು ಬಂದಳು.

ಶಾಂತಾ ಓದಿದ್ದು ಕೇವಲ ಏಳನೇ ತರಗತಿ ಅಷ್ಟೇ. ಓದು ತಲೆಗೆ ಹತ್ತಲಿಲ್ಲ, ಮನೇಲಿ ಬಡತನ, ತಂದೆಗೆ ಆಸ್ತಮಾ ಕಾಯಿಲೆ, ತಾಯಿ ಊರಿನ ಗೌಡ್ರು ಮನೇಲಿ ಅಡುಗೆ ಮಾಡ್ಲಿಕ್ಕೆ ಹೋಗ್ತಾ ಇದ್ಲು. ಜೀವನೋಪಾಯಕ್ಕೆ ಮಗಳಿಗೆ ಏನಾದ್ರೂ ಉದ್ಯೋಗ ಮಾಡಲು ವಿದ್ಯೆ ಇಲ್ಲ.

ತಾಯಿ ಯೋಚನೆ ಮಾಡಿ, ಮಗಳಿಗೆ ವಿದ್ಯೆ ಅಂತೂ ಕೈ ಹಿಡಿಯಲಿಲ್ಲ, ಹೊಲಿಗೆ ಕಲಿಸಿದ್ರೆ, ನಾಲ್ಕೈದು ಅರಿವೆ ಹೊಲಿದಾದ್ರೂ ಬದುಕು ಕಟ್ಟುತ್ತಾಳೆ ಎಂದು ಊರಿನಲ್ಲಿ ಸಹಕಾರ ಕೇಂದ್ರದಲ್ಲಿ ಒಂದು ದಿನ, ಈ ಬಡವರ ಸ್ಕೀಮ್ ನಲ್ಲಿ ಉಚಿತ ರಾಟೆ ಕೊಡುವುದು ಗೊತ್ತಾಗಿ, ಮಗಳನ್ನು ಕರೆದುಕೊಂಡು ಅಲ್ಲಿಗೆ ಹೋದಳು.

ಆಕೆಯ ಆಧಾರ್‌ ಕಾರ್ಡ್‌ ಫೋಟೋ, ಅರ್ಜಿ ತುಂಬಲು 100 ರೂ. ಕೊಟ್ಟು ಬಂದರು. ತಮ್ಮ ಓಣಿಯಲ್ಲಿ ತರಬೇತಿ ಕೇಂದ್ರದಲ್ಲಿ ಮಗಳನ್ನು ಸೇರಿಸಿದ ನಂತರ, ಶಾಂತಾ ಮೂರು ತಿಂಗಳಲ್ಲಿ ಬಟ್ಟೆ ಹೊಲಿಯೋದು ಕಲಿತುಕೊಂಡಳು. ಇವಳು ಬಟ್ಟೆ ಹೊಲಿಯೋದು ಗೊತ್ತಾದ ಮೇಲೆ ಓಣಿಯಲ್ಲಿ ಒಬ್ಬೊಬ್ಬರೆ ಬ್ಲೌಸ್‌, ಮಕ್ಕಳ ಫ್ರಾಕ್‌, ಗಂಡಸರ ಶರ್ಟ್‌, ಪ್ಯಾಂಟ್‌ ಹೊಲಿಯಲು ಕೊಡ ತೊಡಗಿದರು. ಅವಳು ಚೆನ್ನಾಗಿ ಹೊಲಿಯುತ್ತಾಳೆಂದು ಇಡೀ ಊರಿಗೆ ಪ್ರಚಾರವಾಯಿತು. ಶಾಂತಾಳಿಗೆ ಈ ಕೆಲಸ ಕೈಹಿಡಿದಿತ್ತು.

ಒಂದು ವರ್ಷದಲ್ಲಿ ಅವಳಿಗೆ ಆರ್ಡರ್‌ ಹೆಚ್ಚಾಗಿ ಬರತೊಡಗಿದ್ದರಿಂದ ಅಷ್ಟನ್ನೂ ಅವಳೇ ಹೊಲಿಯಾಗದೆ ನಾಲ್ಕು ಹುಡುಗಿಯರಿಗೆ ಹೊಲಿಗೆ ಕಲಿಸಿ, ಕೆಲಸಕ್ಕೆ ಇಟ್ಟುಕೊಂಡಳು. ಅಂಗಡಿಗೆ ಒಂದು ಹೆಸರು ಕೂಡ ಇಟ್ಟು, ಬೋರ್ಡ್‌ ಹಾಕಿದಳು.

ಇದನ್ನು ಸಹಿಸದ, ಪಕ್ಕದ ಮನೆ ಜಲಜಾ, ಅವಳೂ ಕೂಡ ಓದದೇ ಮನೆಯಲ್ಲೇ ಇದ್ದಳು. ಆದರೆ ಶ್ರೀಮಂತ ಕುಟುಂಬ. ಒಂದು ದಿನ ಅವಳ ತಾಯಿ, “ನೋಡು ಆ ಹುಡುಗಿ ಬಡತನ ಸೋಸಿ, ನಾಲ್ಕು ಮಕ್ಕಳಿಗೆ ಕೆಲಸ ಕೊಟ್ಟು ಮನೆ ನಡೆಸುತ್ತಿದ್ದಾಳೆ. ನೀನೂ ಇದ್ದೀಯಾ, ತಿನ್ನೋದು ಅಡ್ಡಾಡೋದು ಇದೇ ಆಗೋಯ್ತು,” ಎಂದು ಜಲಜಾಳನ್ನು ಬೈದಾಗ, ಅದವಳಿಗೆ ಮನಸ್ಸಿನಲ್ಲಿ ತೀವ್ರವಾದ ಅಸಹನೆ ಉಂಟು ಮಾಡಿತು.

ಹೇಗಾದರೂ ಇವಳಿಗೆ ಕೆಟ್ಟ ಹೆಸರು ತರಬೇಕೆಂದು ಯೋಚಿಸಿದ ಜಲಜಾ, ಒಂದು ದಿನ ತನ್ನ ಬ್ಲೌಸ್‌ ಹೊಲಿಸಲು ಶಾಂತಾಳ ಅಂಗಡಿಗೆ ಹೋದಳು. ಶಾಂತಾ ನಗುತ್ತಲೇ ಅವಳನ್ನು, “ಬಾ….” ಎಂದು ಕರೆದು ಕೂಡಲೇ ಒಂದು ಕುರ್ಚಿಯನ್ನು ಕೊಟ್ಟಳು.

ತನ್ನ ಕೈಯಲ್ಲಿದ್ದ ಬಟ್ಟೆ ಕವರ್‌ ನ್ನು ಕೊಟ್ಟು, “ನೋಡೇ, ನನ್ನ ಸೀರೆಗೆ ಚಂದದ ಡಿಸೈನರ್‌ ಬ್ಲೌಸ್‌ ಹೊಲಿದು ಕೊಡು,” ಎಂದಳು.

ಶಾಂತಾ ತನ್ನಲ್ಲಿದ್ದ ಒಂದು ಬುಕ್‌ ಲೆಟ್‌ ಕೊಟ್ಟು, “ಇದರಲ್ಲಿ ನಿನಗೆ ಯಾವ ಡಿಸೈನ್‌ ಬೇಕು, ಸೆಲೆಕ್ಟ್ ಮಾಡಿ ಹೇಳು,” ಎಂದಳು. ಜಲಜಾ ಪುಟಗಳನ್ನು ತಿರುವಿ ಹಾಕುತ್ತಾ ತನಗೆ ಇಷ್ಟವಾದ ಒಂದು ಡಿಸೈನ್‌ ನ್ನು ತೋರಿಸಿದಳು.

“ಮೆಷರ್ಮೆಂಟಿಗೆ ಬ್ಲೌಸ್‌ ತಂದಿದ್ದೀಯಾ…?” ಎಂದು ಕೇಳಿದಳು.

“ಇದೆ ನೋಡು,” ಎಂದು ತನ್ನ ಇನ್ನೊಂದು ಬ್ಯಾಗ್‌ ನಲ್ಲಿದ್ದ ಬ್ಲೌಸ್‌ ಕೊಟ್ಟಳು.

“ಸರಿ ಜಲಜಾ, ಒಂದು ತಿಂಗಳಲ್ಲಿ ನಿನಗೆ ಇದನ್ನು ಕೊಡ್ತೀನಿ,” ಎಂದಳು ಶಾಂತಾ.

“ಏನು ಒಂದು ಬ್ಲೌಸ್‌ ಹೊಲಿಯಲು ನಿನಗೆ ಒಂದು ತಿಂಗಳು ಬೇಕಾ….? ನನಗೆ ಒಂದು ವಾರದಲ್ಲಿ ಕೊಡಬೇಕು,” ಎಂದು ಆಗ್ರಹಿಸಿದಳು.

“ಆಗೋದಿಲ್ಲಾ…. ಏಕೆಂದರೆ ಮದುವೆಯ ಬಟ್ಟೆಗಳು ಬಹಳ ಇವೆ. ಸ್ವಲ್ಪ ಸಮಯ ಆಗುತ್ತೆ,” ಎಂದಳು ಶಾಂತಾ.

“ಇಲ್ಲ…. ಇಲ್ಲ…. ನಾನು ನಿನ್ನ ಕ್ಲೋಸ್‌ ಗೆಳತಿ, ನಿಮ್ಮ ಪಕ್ಕದ ಮನೆಯಲ್ಲಿ ಇರೋದು, ನನಗೇ ಹೀಗೆ ಹೇಳ್ತೀಯಲ್ಲಾ…..” ಎಂದು ಜಲಜಾ ವಾದಿಸಿದಳು.

“ಹಾಗೇನಿಲ್ಲ…. ಪ್ರಯತ್ನ ಪಡ್ತೀನಿ. ಆದರೆ ನಿನಗೆ ಒಂದೇ ವಾರದಲ್ಲಿ ಕೊಡ್ತೀನಿ,” ಎಂದು ಹೇಳಿ ಕಳುಹಿಸಿದಳು.

ಅದೇ ಸಮಯಕ್ಕೆ ಅಲ್ಲಿಗೆ ಒಬ್ಬ ವ್ಯಕ್ತಿ ಶರ್ಟ್‌ ಹೊಲಿಸಲು ಬಂದ. ಶಾಂತಾ, “ಬನ್ನಿ ಸರ್‌,” ಎಂದು ನಗುತ್ತಾ ಅವರಿಗೂ ಚೇರ್ ಹಾಕಿ ಕೂರಿಸಿ, ಬಟ್ಟೆ ತೆಗೆದುಕೊಂಡು ಸ್ವಲ್ಪ ಸಮಯಾವಕಾಶ ಬೇಕು, ಎಂದು ಕೇಳಿಕೊಂಡಳು. ಅವನು ಸರಿ ಎಂದು ಅಲ್ಲೇ ಕುಳಿತುಕೊಂಡ.

ಅವನ ಮನಸ್ಸಿಗೆ ಶಾಂತಾ ತುಂಬಾ ಇಷ್ಟವಾಗಿದ್ದಳು. ತಾವಿಬ್ಬರೂ ಒಂದೇ ಜಾತಿಯವರು ಎಂದು ಅವನಿಗೆ ಗೊತ್ತಿದ್ದರಿಂದ ಅವಳನ್ನು ಮದುವೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದ. ಆದರೆ ಅವನಿಗೆ ತಾಯಿ ತಂದೆ ಇರಲಿಲ್ಲ. ಅವನ ದೊಡ್ಡಪ್ಪ ಕಾಳಿನ ವ್ಯಾಪಾರ ಮಾಡುತ್ತಿದ್ದರು. ಅದರಲ್ಲಿ ಅವನು ಲೆಕ್ಕ ಬರೆಯುವ ಕೆಲಸ ಮಾಡುತ್ತಿದ್ದ. ಅವನ ಹೆಸರು ಮಹೇಶ್‌. ಒಂದು ದಿನ ಮಹೇಶ, ತನ್ನ ದೊಡ್ಡಪ್ಪನ ಬಳಿ, ತಾನು ಶಾಂತಾಳನ್ನು ಮದುವೆಯಾಗುವುದಾಗಿ ಹೇಳಿದ. ಆದರೆ ದೊಡ್ಡಪ್ಪನಿಗೆ ಈ ಸಂಬಂಧ ಇಷ್ಟ ಆಗಿರಲಿಲ್ಲ. ಅದಕ್ಕಿದ್ದ ಒಂದೇ ಕಾರಣ ಎಂದರೆ ಶಾಂತಾ ಬಡವರು. ಜೊತೆಗೆ ಅವಳು ಹೆಚ್ಚು ಓದಿಲ್ಲ, ಕೇವಲ 7ನೇ ತರಗತಿವರೆಗೂ ಓದಿದ್ದಾಳೆಂಬ ಕಾರಣದಿಂದ ಬೇಡ ಎಂದು ಹೇಳಿದರು.

“ನೀನು ಡಬಲ್ ಡಿಗ್ರಿ ಮಾಡಿಕೊಂಡು, ಹೋಗಿ ಹೋಗಿ 7ನೇ ತರಗತಿವರೆಗೆ ಓದಿರುವ ಹುಡುಗಿಯನ್ನು ಮದುವೆಯಾಗ್ತೀಯಾ….? ನಿನಗೆ ಬುದ್ಧಿ ಏನಾದರೂ ಇದೆಯಾ…?” ಎಂದು ಗದರಿದರು.

“ದೊಡ್ಡಪ್ಪಾ…. ನನಗೆ ಶ್ರೀಮಂತ ಕುಟುಂಬದ ಹೆಣ್ಣು ಬೇಡ, ನನಗೆ ನನ್ನ ಮನಸ್ಸನ್ನು ಅರಿತುಕೊಂಡು, ನನ್ನ ಜೊತೆ ನಗು ನಗುತ್ತಾ ಬದುಕು ಸಾಗಿಸಿದರೆ ಅಷ್ಟೇ ಸಾಕು. ನಾನು ಎಂದಿಗೂ ದುಡ್ಡಿಗೆ ಮಹತ್ವ ಕೊಡುವುದಿಲ್ಲ. ಅವರು ಬಡವರಾದರೇನು…. ಮರ್ಯಾದೆಯಿಂದ ಬದುಕು ಸಾಗಿಸುತ್ತಿಲ್ಲವೇ….?”

“ಇದೆಲ್ಲಾ ಉಪದೇಶ ನನಗೆ ಮಾಡಲು ಬರಬೇಡ. ನಾನು ತೋರಿಸುವ ಹುಡುಗಿಯನ್ನೇ ನೀನು ಮದುವೆಯಾಗಬೇಕು. ಇಲ್ಲದಿದ್ದರೆ ಇಂದೇ ನೀನು ಮನೆ ಬಿಟ್ಟು ಹೋಗು,” ಎಂದು ದೊಡ್ಡಪ್ಪ ಹೇಳಿದಾಗ, ಮಹೇಶನಿಗೆ ಮನಸ್ಸು ಬೇಸರವಾಗಿ ಸುಮ್ಮನಾದ.

ಈ ವಿಷಯ ಜಲಜಾಳ ತಂದೆಯ ಮುಖಾಂತರ ಮನೆಯಲ್ಲಿ ಪ್ರಸ್ತಾಪವಾಯಿತು. ಜಲಜಾಳ ತಂದೆಯೂ ವ್ಯಾಪಾರಸ್ಥರಾಗಿದ್ದರ ಜೊತೆಗೆ ಮಹೇಶನ ದೊಡ್ಡಪ್ಪನೊಂದಿಗೆ ಆತ್ಮೀಯರಾಗಿದ್ದರು. ಆದರೆ ಜಾತಿ ಮಾತ್ರ ಬೇರೆಯಾಗಿತ್ತು.

ಜಲಜಾಳಿಗೆ ಶಾಂತಾಳ ಮೇಲಿದ್ದ ತನ್ನ ಕೋಪವನ್ನು ಹೇಗಾದರೂ ತೀರಿಸಿಕೊಳ್ಳಬೇಕೆಂದು ಒಂದು ಉಪಾಯ ಮಾಡಿದಳು. ಈ ಮಧ್ಯೆ ಶಾಂತಾಳಿಗೆ ಮಹೇಶ್‌ ತನ್ನನ್ನು ಪ್ರೀತಿಸುತ್ತಿರುವುದು ಗೊತ್ತಿದ್ದರೂ ತನ್ನ ತಾಯಿ ತಂದೆ ಮುಂದೆ ಈ ವಿಷಯ ತಿಳಿಸದೆ ತನ್ನ ಪಾಡಿಗೆ ತಾನಿದ್ದಳು.

ಒಂದು ದಿನ ವ್ಯವಹಾರಕ್ಕೆ ಸಂಬಂಧಪಟ್ಟ ಹಣವನ್ನು ಜಲಜಾಳ ತಂದೆಗೆ ಕೊಡಲು ಮಹೇಶನ ದೊಡ್ಡಪ್ಪ ಅವನನ್ನು ಅವರ ಮನೆಗೆ ಕಳುಹಿಸಿದರು. ಮನೆಯಲ್ಲಿ ಜಲಜಾ ಬಿಟ್ಟು ಯಾರೂ ಇರಲಿಲ್ಲ. ಆದ್ದರಿಂದ ಹಣವನ್ನು ಜಲಜಾಳ ಕೈಗೆ ಕೊಟ್ಟು ಹೋದರಾಯಿತು ಎಂದುಕೊಂಡ.

“ಜಲಜಾ, ನಿಮ್ಮ ತಂದೆಗೆ ಈ ದುಡ್ಡನ್ನು ಕೊಡಿ, ನಾನು ಹೊರಡ್ತೀನಿ,” ಎಂದ.

“ಸ್ವಲ್ಪ ಇಲ್ಲೇ ಇರಿ, ಬರ್ತೀನಿ,” ಎಂದವಳೇ ಶಾಂತಾಳ ಅಂಗಡಿಗೆ ಹೋಗಿ, “ಶಾಂತಾ, ಸ್ವಲ್ಪ ಮನೆಗೆ ಬರ್ತೀಯಾ, ಅರ್ಜೆಂಟ್‌ ಕೆಲಸ ಇದೆ ಅಮ್ಮ ಕರೀತಾ ಇದಾರೆ,” ಎಂದು ಕರೆದಳು.

“ಯಾಕೆ….? ನನಗೆ ಕೆಲಸ ಇದೆ ಆಮೇಲೆ ಬರ್ತೀನಿ,” ಎಂದಳು ಶಾಂತಾ.

ಜಲಜಾ ಅದನ್ನು ಕೇಳದೆ, “ಇಲ್ಲಾ…. ಹತ್ತು ನಿಮಿಷ ಬಂದು ಹೋಗು,” ಎಂದು ಬಲವಂತ ಮಾಡಿದಾಗ ಎಲ್ಲಾ ಕೆಲಸ ಬಿಟ್ಟು ಅವಳ ಜೊತೆ ಹೋದಳು.

“ಅಮ್ಮ ಒಳಗಡೆ ಇದ್ದಾರೆ ನೀನು ಹೋಗು,” ಎಂದು ಶಾಂತಾಳನ್ನು ಒಳಗೆ ಕಳುಹಿಸಿ ಬಾಗಿಲಲ್ಲಿ ನಿಂತಳು ಜಲಜಾ.

ಶಾಂತಾ ಏಕಭಾವದಿಂದ ಒಳಗೆ ಹೋದಳು. ಅವಳು ಒಳ ಹೋಗುತ್ತಿದ್ದಂತೆ ಜಲಜಾ ಹಿಂದಿನಿಂದ ಬಾಗಿಲು ಹಾಕಿ, ಹೊರಗಡೆ ನಿಂತು, “ಅಯ್ಯೋ…. ಅಯ್ಯೋ…. ಇಲ್ನೋಡಿ ಮನೇಗೆ ಕಳ್ಳಿ ಬಂದಿದ್ದಾಳೆ….” ಎಂದು ಜೋರಾಗಿ ಬೊಬ್ಬೆ ಹೊಡೆದಳು. ಸುತ್ತಮುತ್ತಲಿನವರೆಲ್ಲಾ ಓಡೋಡಿ ಬಂದು ಅಲ್ಲಿ ಸೇರಿದರು.

ಇತ್ತ ಒಳಗೆ ಹೋದ ಶಾಂತಾಳಿಗೆ ಮಹೇಶನನ್ನು ನೋಡಿ ಆಶ್ಚರ್ಯದಿಂದ, “ಇದೇನು ನೀವು ಇಲ್ಲಿ….?” ಎಂದು ಕೇಳಿದಳು.

ಮಹೇಶ್‌ ದುಡ್ಡು ಕೊಡಲು ಬಂದ ವಿಷಯ ತಿಳಿಸಿದ. ಹೊರಗಿನಿಂದ ಬಾಗಿಲು ಹಾಕಿದ್ದು ನೋಡಿ ಇಬ್ಬರಿಗೂ ಏನು ಮಾಡಬೇಕೆಂದು ತಿಳಿಯದೆ ಬಾಗಿಲು ತಟ್ಟತೊಡಗಿದರು. ಜಲಜಾ ಬಾಗಿಲು ತೆಗೆದಳು. ಒಳಗಿದ್ದ ಇಬ್ಬರನ್ನು ನೋಡಿದ ಜನರು ಗುಸುಗುಸು ಮಾತಾಡತೊಡಗಿದರು.

“ಅಯ್ಯೋ….. ಏನೇ ಇದು ಶಾಂತಾ…. ಮನೇಲಿ ಕಳ್ಳಿ ಬಂದಿದ್ದಾಳೆ ಅಂತ ಜಲಜಾ ಹೇಳ್ತಾ ಇದ್ದಳು. ನೀನೇನು ಕಳ್ಳತನ ಮಾಡ್ಲಿಕ್ಕೆ ಒಳಗೆ ಹೋಗಿದ್ದೆ?” ಎಂದು ಯಾರೋ ಅಸಹ್ಯವಾಗಿ ಹೇಳಿದರು.

ಅಲ್ಲಿ ನಿಂತಿದ್ದ ಮಹೇಶ್‌ ಗೆ ಕೋಪ ಬಂದು, “ಬಾಯಿಗೆ ಬಂದ ಹಾಗೆ ಮಾತಾಡಬೇಡಿ….” ಎಂದ.

“ಓಹೋ…. ಹಾಗಿದ್ರೆ, ನೀನೇ ಹೇಳಪ್ಪ…. ಜಲಜಾ ಮನೆಯಲ್ಲಿ ನಿಮ್ಮಿಬ್ಬರಿಗೆ ಏನು ಕೆಲಸ ಅಂತ. ಊರೆಲ್ಲಾ ನಿಮ್ಮ ವಿಷಯ ಗುಲ್ಲಾಗಿದೆ. ಬೆಕ್ಕು ಕಣ್ಮುಚ್ಕೊಂಡು ಹಾಲು ಕುಡಿದ್ರೆ ಗೊತ್ತಾಗಲ್ಲ ಅಂದುಕೊಂಡಿದೀರಾ…..? ಮದುವೆಗೆ ಒಪ್ಪಿಗೆ ಕೊಟ್ಟಿಲ್ಲ ಅಂತ ಇಂತಹ ದರಿದ್ರ ದಾರಿ ಹಿಡಿದ್ರಾ…..” ಎಂದು ಅಲ್ಲಿ ಸೇರಿದ ಜನ ತಲೆಗೊಂದು ಮಾತನಾಡಿದರು.

ಅಪವಾದ ಹೊತ್ತು ನಿಂತಿದ್ದ ಶಾಂತಾಳ ಕಣ್ಣಲ್ಲಿ ಕಂಬನಿ ಜಿನುಗಿತು. ಅಲ್ಲೆ ನಿಂತಿದ್ದ ಅವಳ ತಾಯಿ ತಂದೆಗೆ ಮರ್ಯಾದೆ ಹೋಯಿತು. ಅವರು ಅವಳನ್ನು ಹಿಡಿದು ಎಳೆದುಕೊಂಡು ಮನೆಯೊಳಗೆ ಹೋದರು.

ಜಲಜಾ ಬಳಿ ಬಂದ ಮಹೇಶ್‌, “ಏನು….. ನೀನೂ ಒಂದು ಹೆಣ್ಣಾ……? ಸುಟ್ಟಿಲ್ಲ, ಬೆಂದಿಲ್ಲ….. ಥೂ ನಿನ್ನ, ಮಾರಿ ನೀನು…. ಈ ತರ ಚಿಲ್ಲರೆ ಬುದ್ಧಿ ಮಾಡಿ, ಶಾಂತಾಳ ಮೇಲೆ ಅಪವಾದ ಬರೋ ಹಾಗೆ ಮಾಡಿದೆಯಲ್ಲಾ….. ನಿನಗೆ ಸ್ವಲ್ಪವೂ ನಾಚಿಕೆ ಆಗೊಲ್ವಾ…..?” ಎಂದು ಕೋಪದಿಂದ ಅವಳನ್ನು ತರಾಟೆಗೆ ತೆಗೆದುಕೊಂಡ.

ಅಷ್ಟೊತ್ತಿಗೆ, ಹೊರಗೆ ಹೋಗಿದ್ದ ಜಲಜಾಳ ತಾಯಿ ತಂದೆಗೆ ತಮ್ಮ ಮನೆ ಮುಂದೆ ಜಮಾಯಿಸಿದ್ದ ಜನರನ್ನು ನೋಡಿ ಏನಾಯಿತೋ ಎಂದು ಗಾಬರಿಗೊಂಡರು. ಅಲ್ಲೇ ಇದ್ದ ಮಹೇಶ ನಡೆದ ಎಲ್ಲಾ ವಿಚಾರನ್ನು ಜಲಜಾಳ ತಂದೆಗೆ ತಿಳಿಸಿ, ತಾನು ತಂದ ಹಣವನ್ನು ಅವರಿಗೆ ಕೊಟ್ಟು, “ಸರ್‌, ನಾನು ಹೊರಡ್ತೀನಿ,” ಎಂದ.

“ನಿಲ್ಲಪ್ಪ ನೀನು ಹೋಗಬೇಡ….. ಇನ್ನೂ ಕೆಲಸ ಮುಗಿದಿಲ್ಲ,” ಎಂದವರೇ ಮಗಳ ಕೆನ್ನೆಗೆ ಎಲ್ಲರೆದುರು ಜೋರಾಗಿ ಬಾರಿಸಿದರು.

ಜಲಜಾಳ ತಾಯಿ ಕೂಡ ಸಭ್ಯರಾಗಿದ್ದರಿಂದ ಮಗಳ ಮೇಲೆ ಕೋಪಗೊಂಡು, “ಛೇ…. ನೀನೂ ಒಂದು ಹೆಣ್ಣು, ಇನ್ನೊಂದು ಹೆಣ್ಣಿಗೆ ಈ ರೀತಿ ಮಾಡಲಿಕ್ಕೆ ನಿನಗೆ ಏನೂ ಅನಿಸಲಿಲ್ವಾ…… ಅವಳು ಪಾಪದ ಹುಡುಗಿ, ಅವಳು ನಿನಗೆ ಮಾಡಿದ್ದಾದರೂ ಏನು….? ಅವಳ ಮೇಲೆ ನಿನಗೇಕೆ ಇಷ್ಟೊಂದು ಹೊಟ್ಟೆಕಿಚ್ಚು…..” ಎಂದು ಮಗಳನ್ನು ಹಿಡಿದು ಎಳೆದಾಡಿದರು.

ರೊಚ್ಚಿಗೆದ್ದ ಜಲಜಾ, “ಹೌದಮ್ಮಾ…. ನೀನು ಯಾವಾಗಲೂ ಅವಳನ್ನು ನೋಡಿ ಕಲಿ ಅಂತ ಅವಳಿಗೆ ಹೋಲಿಸಿ ನನ್ನನ್ನು ಬೈಯುತ್ತದ್ದೆಯಲ್ಲಾ ಅದರಿಂದ ನನಗೆ ಬಹಳ ನೋವಾಗ್ತಿತ್ತು. ಅದಕ್ಕೇ ನಾನು ಈ ರೀತಿ ಮಾಡಿ ನನ್ನ ಸೇಡು ತೀರಿಸಿಕೊಂಡೆ,” ಎಂದಳು.

ನಂತರ ಜಲಜಾಳ ತಂದೆ ಮಹೇಶನ ದೊಡ್ಡಪ್ಪನಿಗೆ ಫೋನ್‌ ಮಾಡಿ ಅವರನ್ನು ಕರೆಸಿ, ಮನೆಯಲ್ಲಿ ನಡೆದ ಎಲ್ಲಾ ಘಟನೆಯನ್ನು ವಿವರಿಸಿ ಹೇಳಿ, ಮಹೇಶ್‌ ಮತ್ತು ಶಾಂತಾರಿಗೆ ಮದುವೆ ಮಾಡಿಸಲು ಒಪ್ಪಿಸಿದರು.

ಸ್ವತಃ ಜಲಜಾಳ ತಾಯಿಯೇ, ಶಾಂತಾಳ ಮನೆಗೆ ಹೋಗಿ ಶಾಂತಾ ಮತ್ತು ಅವಳ ಹೆತ್ತವರನ್ನು ತಮ್ಮ ಮನೆಗೆ ಕರೆತಂದರು. ಶಾಂತಾಳ ತಾಯಿ ತಂದೆ ಎಲ್ಲರನ್ನೂ ನೋಡಿ ನಮಸ್ಕರಿಸಿ, ನೆಲದಲ್ಲಿ ಕುಳಿತುಕೊಂಡರು. ಅವರನ್ನು ಜಲಜಾಳ ತಂದೆ, “ನೆಲದಲ್ಲಿ ಕೂರಬೇಡಿ ಮೇಲೆ ಏಳಿ,” ಎಂದು ಇಬ್ಬರನ್ನೂ ಸೋಫಾದಲ್ಲಿ ಕೂರಿಸಿದರು.

ನಂತರ, “ನೋಡು ಈಶಪ್ಪಾ…. ಇಷ್ಟೆಲ್ಲಾ ಆಗಿದ್ದು ನನ್ನ ಮಗಳಿಂದ. ಅವಳು ತನ್ನ ಹೊಟ್ಟೆಕಿಚ್ಚಿನಿಂದ ನಿನ್ನ ಮಗಳನ್ನು ಅಪವಾದಕ್ಕೆ ಗುರಿ ಮಾಡಿದ್ದಾಳೆ. ಈ ಅಪವಾದ ನೀಗಿಸಲು ನಾವೆಲ್ಲ ಇವರಿಬ್ಬರಿಗೆ ಮದುವೆ ಮಾಡಿಸುವುದು ಸೂಕ್ತವೆಂದು ನಿರ್ಧರಿಸಿದ್ದೇವೆ. ಇದಕ್ಕೆ ನಿನ್ನ ಸಮ್ಮತಿ ಬೇಕು. ಜೊತೆಗೆ ಮಹೇಶ ಕೂಡ ನಿನ್ನ ಮಗಳನ್ನು ಪ್ರೀತಿಸ್ತಿದ್ದಾನೆ. ಆದರೆ ಈ ವಿಷಯವನ್ನು ನಿಮಗೆ ತಿಳಿಸಿಲ್ಲ. ಆ ದೇವರು ಈ ರೂಪದಲ್ಲಿ ಹೊರ ಹಾಕಿದ್ದಾನೆ. ಇಬ್ಬರದೂ ಒಳ್ಳೆಯ ಜೋಡಿ. ನೀನು ಏನಂತೀಯ…..” ಎಂದು ಕೇಳಿದರು.

ಶಾಂತಾಳ ತಂದೆ ಈಶಪ್ಪಾ, `ನೋಡ್ರಪ್ಪಾ…. ನಾವು ಬಡವರು. ಇರೋ ಒಬ್ಬ ಮಗಳಿಗೆ ವಿದ್ಯೆ ಕಲಿಸಲಾಗಲಿಲ್ಲ. ಏನೋ ಬಟ್ಟೆ ಹೊಲಿಯೋದು ಕಲಿತಿದ್ದಾಳೆ. ನಾಲ್ಕು ಜನಕ್ಕೆ ಕೆಲಸ ಕೊಟ್ಟು, ಸಂಪಾದಿಸ್ತಾ ಇದ್ದಾಳೆ. ಇಂದು ನಡೆದ ವಿಚಾರ ನಮ್ಮ ಮನಸ್ಸಿಗೆ ಬಹಳ ನೋವಾಗಿದೆ. ನಮ್ಮಂಥ ಬಡವರಿಗೆ ಶ್ರೀಮಂತರನ್ನು ಎದುರು ಹಾಕಿಕೊಳ್ಳೋಕೆ ಆಗುತ್ತಾ… ಅದಕ್ಕೆ ಅಳುತ್ತಾ ಮನೆಯಲ್ಲೇ ಕುಳಿತುಕೊಂಡ್ವಿ. ಅಷ್ಟರಲ್ಲಿ ಅಮ್ಮಾವರು ಬಂದು ನಮ್ಮನ್ನು ಕರೆದುಕೊಂಡು ಬಂದಿದ್ದಾರೆ,” ಎಂದ.

ಆಗ ಮಹೇಶ ಅವರ ಬಳಿ, “ನೋಡಿ, ನೀವು ಒಪ್ಪಿಗೆ ನೀಡಿದರೆ ನಾನು ಶಾಂತಾಳನ್ನು ಮದುವೆಯಾಗ್ತೀನಿ, ಚೆನ್ನಾಗಿ ನೋಡಿಕೊಳ್ತೀನಿ,” ಎಂದು ಹೇಳಿದಾಗ, ಶಾಂತಾಳ ತಂದೆ ಮಗಳ ಮುಖ ನೋಡಿದರು. ಅಳುತ್ತಿದ್ದ ಅವಳ ಮುಖದಲ್ಲಿ ಮಂದಹಾಸ ಮೂಡಿತು.

“ಇನ್ನೇನು ಶಾಂತಾ ಕೂಡ ಒಪ್ಪಿಗೆ ಕೊಟ್ಟಂತಾಯಿತು. ನಾವೆಲ್ಲರೂ ಸೇರಿ ಇವರಿಬ್ಬರಿಗೂ ಭರ್ಜರಿಯಾಗಿ ಮದುವೆ ಮಾಡೋಣ. ಏನ್‌ ಅಂತೀರಾ….?” ಎಂದು ಮಹೇಶನ ದೊಡ್ಡಪ್ಪ ಕೇಳಿದರು.

ಮಹೇಶನಿಗೂ ಬಹಳ ಸಂತೋಷವಾಯಿತು. ಜಲಜಾಳ ಹೆತ್ತವರಿಗೂ ನೆಮ್ಮದಿಯೂ ಖುಷಿಯೂ ಆಯಿತು. ಒಂದೇ ತಿಂಗಳಲ್ಲಿ ಇಬ್ಬರಿಗೂ ಊರಿನ ವೆಂಕಟೇಶ್ವರ ದೇವಸ್ಥಾನದಲ್ಲಿ ಮದುವೆ ಮಾಡಿದರು. ಅಂತೂ ಕೊನೆಗೆ ಅಪವಾದ ಹೊತ್ತ ಶಾಂತಾಳ ಬದುಕು ಸುಖಾಂತ್ಯವಾಯಿತು. ಇತ್ತ ಜಲಜಾಳ ಮನಸ್ಸಿಗೆ ಜಳ್ಳು ಹಿಡಿದಂತಾಗಿತ್ತು!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ