ದಾಂಪತ್ಯ ಜೀವನನ್ನು ದೀರ್ಘಾವಧಿಯವರೆಗೂ ಸದಾ ತಾಜಾ ಆಗಿಟ್ಟುಕೊಳ್ಳಲು, ಇಲ್ಲಿನ ಮಾಹಿತಿಯನ್ನು ಮರೆಯದೆ ಬಳಸಿಕೊಳ್ಳಿ…..
ಇತ್ತೀಚಿನ ಓಡುಯುಗದ ಧಾವಂತದ ಜೀವನದಲ್ಲಿ ಟೆನ್ಶನ್ಸ್ ಬಿಟ್ಟರೆ ಏನೂ ಇಲ್ಲ. ಇಂತ ಲೈಫ್ ಸೆಲ್ ಫಾಲೋ ಮಾಡು ನಮಗೆ ಕಿರಿಯ ವಯಸ್ಸಿನಲ್ಲೇ ರೋಗಗಳ ಕಾಟ ತಪ್ಪಿದ್ದಲ್ಲ. ಅಗತ್ಯವಾಗಿ ಇದರ ಪರಿಣಾಮ ನಮ್ಮ ಸೆಕ್ಸ್ ಲೈಫ್ ಮೇಲಾಗುತ್ತದೆ. ಹಾಗಾದಾಗ ಸೆಕ್ಸ್ ಲೈಫ್ ಬಲು ಬೇಗ ಮುಗಿದೇ ಹೋಗುತ್ತದೆ. ಇದರ ಬದಲಿಗೆ ನೀವು ನಿಮ್ಮ ದಾಂಪತ್ಯವನ್ನು ಸದಾ ನಳನಳಿಸುವಂತೆ ಇರಿಸಿಕೊಳ್ಳ ಬಯಸಿದರೆ, ಇಲ್ಲಿನ ಸಲಹೆಗಳನ್ನು ಅಗತ್ಯವಾಗಿ ಅನುಸರಿಸಿ.
ಸದಾ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ : `ಆರೋಗ್ಯಕ್ಕೆ ಮಿಗಿಲಾದ ಭಾಗ್ಯವಿಲ್ಲ!’ ಹೀಗಾಗಿ ಸ್ವಸ್ಥ ದೇಹ ಮಾತ್ರ ಖುಷಿಯಾಗಿರಲು ಸಾಧ್ಯ. ನಮಗೆ ರೋಗ ಬಂದುಬಿಟ್ಟರೆ, ನಾವು ಸುಖವಾಗಿರೋದಿಲ್ಲ, ನಮ್ಮನ್ನು ನಂಬಿಕೊಂಡವರಿಗೂ ನೆಮ್ಮದಿ ಇರೋದಿಲ್ಲ. ಹಾಗಿರುವಾಗ ಅದು ದಂಪತಿಗಳ ದಾಂಪತ್ಯ ಸುಖಕ್ಕೆ ಅನ್ವಯಿಸದೆ ಇರಲು ಸಾಧ್ಯವೇ? ಅಸ್ವಸ್ಥ ದೇಹ ಸೆಕ್ಸ್ ಸುಖ ಸವಿಯಲು ಸಾಧ್ಯವಿಲ್ಲ. ಹೀಗಾಗಿ ನಿಮ್ಮ ದೇಹಾರೋಗ್ಯದ ಕಡೆ 200% ಗಮನಹರಿಸಿ, ಸದಾ ಆರೋಗ್ಯ ಚೆನ್ನಾಗಿರುವಂತೆ ನೋಡಿಕೊಳ್ಳಿ. ಆಗ ಮಾತ್ರ ನಿಮ್ಮ ದಾಂಪತ್ಯ ದೀವಿಗೆ ಸದಾ ಉಜ್ವಲವಾಗಿ ಬೆಳಗುತ್ತಿರಲು ಸಾಧ್ಯ. ಸದಾ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಪೌಷ್ಟಿಕ ಆಹಾರ, ಒಂದಿಷ್ಟು ಹೊತ್ತು ವ್ಯಾಯಾಮ, ಯೋಗ, ಬೆಳಗಿನ ಬ್ರಿಸ್ಕ್ ವಾಕಿಂಗ್, ಜಾಗಿಂಗ್ ಇತ್ಯಾದಿ ರೂಢಿಸಿಕೊಳ್ಳಿ. ಟೆನ್ಶನ್ಸ್ ದೂರವಿರಿಸಿ, ಚಿಂತೆ ಕಾಡದಂತೆ ನೋಡಿಕೊಳ್ಳಿ. ಇದ್ದಕ್ಕಿದ್ದಂತೆ ಅಕಾಲದಲ್ಲಿ ಕಾಡಬಹುದಾದ ದೊಡ್ಡ ರೋಗಗಳಿಂದ ದೂರವಿರಲು ಯತ್ನಿಸಿ.
ಸದಾ ದೇಹವನ್ನು ಫಿಟ್ & ಫೈನ್ ಆಗಿ ಇರಿಸಿಕೊಳ್ಳಿ : ಪ್ರತಿ ದಂಪತಿಗಳೂ ತಮ್ಮ ಸಂಗಾತಿ ಸುಂದರ, ಸದೃಢವಾಗಿ ಇರಲೆಂದು ಬಯಸುತ್ತಾರೆ. ಇದಕ್ಕಾಗಿ ಇಬ್ಬರೂ ಸ್ಥೂಲತೆಗೆ ಬಲಿಯಾಗದಿರಲು ಸದಾ ಪ್ರಯತ್ನಿಸಬೇಕು. ಆಗ ಮಾತ್ರ ನಿಮ್ಮ ಮೈಮಾಟ ಸದೃಢವಾಗಿರಲು ಸಾಧ್ಯ. ನಿಮ್ಮ ದೇಹವನ್ನು ಸದಾ ಫಿಟ್‌ಫೈನ್ ಆಗಿ ಇರಿಸಿಕೊಳ್ಳಿ. ಆಗ ಮಾತ್ರ ನೀವು ನಿಮ್ಮ ಸಂಗಾತಿಯ ಆಕರ್ಷಣೆ ಗೆಲ್ಲಬಹುದು. ಸಹಜವಾಗಿ ಅದು ನಿಮ್ಮ ದಾಂಪತ್ಯ ಜೀವನ ನಂದನವನ ಆಗಿಸಲು ಸಹಕಾರಿ. ಇದಕ್ಕಾಗಿ ನೀವು ನಿಯಮಿತವಾಗಿ ಪೌಷ್ಟಿಕ ಆಹಾರ ಸೇವನೆ ಜೊತೆ ಜಂಕ್ ಫುಡ್, ಫಾಸ್ಟ್ ಫುಡ್ ದೂರ ಇರಿಸಬೇಕು. ಯೋಗ, ವ್ಯಾಯಾಮ ರೂಢಿಸಿಕೊಳ್ಳಬೇಕು. ದೇಹ ತೂಕ ನಿಯಂತ್ರಣದಲ್ಲಿದ್ದಾಗ ಮಾತ್ರ ನೀವು ಫಿಟ್ & ಫೈನ್ ಆಗಿ ಇರಬಲ್ಲಿರಿ. ಮಾನಸಿಕ ಸಂತೃಪ್ತಿಯೂ ಅಷ್ಟೇ ಮುಖ್ಯ.
ವಯಸ್ಸಿಗೆ ತಕ್ಕಂತೆ ನಿಮ್ಮ ಡಯೆಟ್ ಪ್ಲಾನ್ ಇರಲಿ : ದಾಂಪತ್ಯ ಜೀವನ ಬಹುಕಾಲ ನಳನಳಿಸುತ್ತಿರಲಿ ಎಂದು ಬಯಸಿದರೆ, ಅದರಲ್ಲಿ ಸೆಕ್ಸ್ ನ ಸಂತೃಪ್ತಿ ಮುಖ್ಯ ಪಾತ್ರ ವಹಿಸುತ್ತದೆ. ಇದಕ್ಕೆ ಅತಿ ಮುಖ್ಯವಾದುದು ಎಂದರೆ, ನಿಮ್ಮನ್ನು ನೀವು ಆದಷ್ಟೂ ಯುಂಗ್‌ಎನರ್ಜಿಟಿಕ್ ಆಗಿ ಇರಿಸಿಕೊಳ್ಳುವುದು. ಪತಿ/ಪತ್ನಿ ಯಾರೇ ಇರಲಿ, ತಮ್ಮ ವಯಸ್ಸಿಗೆ ತಕ್ಕಂತೆ ಡಯೆಟ್ ಪ್ಲಾನ್ ಇರಿಸಿಕೊಳ್ಳಬೇಕು. ಅದರಲ್ಲೂ ಮುಖ್ಯವಾಗಿ ಹೆಂಗಸರು ತಮ್ಮ ಡಯೆಟ್ ಕುರಿತಾಗಿ ಹೆಚ್ಚು ಕಾನ್ಶಿಯಸ್ ಆಗಿರಬೇಕು. ಏಕೆಂದರೆ ಅವರು ಮನೆವಾರ್ತೆ, ಆಫೀಸ್, ಮನೆ ಮಂದಿಯ ಎಲ್ಲರ ಬಗೆಗೂ ಸದಾ ಚಿಂತಿತರಾಗಿರುತ್ತಾರೆ. ಇದಕ್ಕಾಗಿ ಹೆಂಗಸರು ಸದಾ ಫಿಟ್‌ಸ್ಟ್ರಾಂಗ್ ಆಗಿರಬೇಕು. ಅವರ ಆಹಾರ ಕ್ರಮ ಸರಿಯಾಗಿದ್ದು, ತುಂಬಾ ಪೌಷ್ಟಿಕತೆಯಿಂದ ಕೂಡಿರಬೇಕು. ಹೆಂಗಸರು ಹೆಚ್ಚುತ್ತಿರುವ ತಮ್ಮ ವಯಸ್ಸಿನ ಪ್ರತಿ ಘಟ್ಟದಲ್ಲೂ, ಬೇರೆ ಬೇರೆ ನ್ಯೂಟ್ರಿಯಸ್ ಹೆಲ್ದಿ ಡಯೆಟ್ ಫಾಲೋ ಮಾಡಬೇಕು. ಏಕೆಂದರೆ 40-45 ನಂತರ, ಹೆಂಗಸರ ದೇಹದಲ್ಲಿ ಹಾರ್ಮೋನ್ ಬದಲಾವಣೆ ಅತಿ ಸಹಜ. ಇನ್ ಸುಲಿನ್ ಲೆವೆಲ್ ನಲ್ಲಿ ಸಹ ಏರುಪೇರು ಉಂಟಾಗುತ್ತದೆ. ಮೂಳೆಗಳ ಸವೆಯುವಿಕೆ, ಮೆನೋಪಾಸ್, ಇನ್ನಿತರ ದೈಹಿಕ ತೊಂದರೆಗಳು ಕಾಡತೊಡಗುತ್ತವೆ. ಹೀಗಾಗಿ ಈ ವಯಸ್ಸಿನಲ್ಲಿ ಅವರು ತಮ್ಮ ದೈನಂದಿನ ಆಹಾರದತ್ತ ಹೆಚ್ಚು ಎಚ್ಚರ ವಹಿಸಬೇಕು. ಹೆಚ್ಚು ಫೈಬರ್, ಪ್ರೋಟೀನ್ ಯುಕ್ತ ಪ್ರಾಡಕ್ಟ್ಸ್, ತಾಜಾ ಹಸಿರು ತರಕಾರಿ, ಕ್ಯಾಲ್ಶಿಯಂಯುಕ್ತ ಡೇರಿ ಪ್ರಾಡಕ್ಟ್ಸ್, ನಟ್ಸ್ ಇತ್ಯಾದಿಗಳನ್ನು ತಮ್ಮ ಡಯೆಟ್ ನಲ್ಲಿ ಅಳವಡಿಸಿಕೊಳ್ಳಬೇಕು, ಆಗ ಮಾತ್ರ ಆರೋಗ್ಯ ಚೆನ್ನಾಗಿರುತ್ತದೆ.
ಮುಕ್ತವಾಗಿ ಮನ ತೆರೆದು ಪರಸ್ಪರ ಚರ್ಚಿಸಿರಿ : ಇಂದು ನೀವು ರೊಮ್ಯಾಂಟಿಕ್ ಮೂಡ್ ನಲ್ಲಿದ್ದು ಸಂಗಾತಿ ಜೊತೆ ಕ್ವಾಲಿಟಿ ಟೈಂ ಕಳೆಯಲು ಬಯಸಿದರೆ, ಇದಕ್ಕಾಗಿ ಇಬ್ಬರೂ ತೆರೆದ ಮನದಿಂದ ಮುಕ್ತವಾಗಿ ಚರ್ಚಿಸಬೇಕು. ಆಗ ಮಾತ್ರ ಸಮಯಕ್ಕೆ ಸರಿಯಾಗಿ ಇಬ್ಬರೂ ತಂತಮ್ಮ ಕೆಲಸಕಾರ್ಯ ಮುಗಿಸಿಕೊಂಡು, ಮೊದಲೇ ಮೂಡ್ ಸರಿ ಮಾಡಿ ಇಟ್ಟುಕೊಳ್ಳಿ. ಸಂಗಾತಿ ಜೊತೆ ಇಂದು ರೋಮಾಂಚಕಾರಿ, ಪ್ರಣಯದ ಕ್ಷಣಗಳನ್ನು ಕಳೆಯಬೇಕೆಂದು ಇಬ್ಬರೂ ಆಳವಾದ ಮನಸ್ಸಿನಿಂದ ಅದಕ್ಕಾಗಿ ಸಿದ್ಧರಾಗಿ. ಇಬ್ಬರಲ್ಲಿ ಒಬ್ಬರು ಟೆನ್ಶನ್ ಗೆ ಗುರಿಯಾಗಿದ್ದರೂ, ಸೆಕ್ಸ್ ನ ಮಜಾ ಸಿಗದು.
ಹಿತಕರ ವಾತಾವರಣ ಇರಲಿ : ಸೆಕ್ಸ್ ಲೈಫ್ ಎಂಜಾಯ್ ಮಾಡಲು, ನಿಮ್ಮ ಮನೆಯ ವಾತಾವರಣ ಶಾಂತ ಹಾಗೂ ಸಂತಸಮಯವಾಗಿ ಇರಬೇಕು. ಅಕಸ್ಮಾತ್ ಮನೆ ಬೇಡ ಎನಿಸಿದರೆ, ಇಬ್ಬರಿಗೂ ಹಿತಕರ ಎನಿಸುವ ಹಿಲ್ ಸ್ಟೇಷನ್ ಆದರೂ ಸರಿ. ನಿಮ್ಮ ಬೆಡ್ ರೂಮಿನಲ್ಲಿ ಮಂದ ನೀಲಿ ಬೆಳಕು ಇರಲಿ, ಲೈಟ್ ಮ್ಯೂಸಿಕ್ ಸಹ. ರೊಮ್ಯಾಂಟಿಕ್ ಮೂಡ್ ತಂದುಕೊಳ್ಳುತ್ತಾ, ಪರಸ್ಪರ ಪ್ರೀತಿ ಪ್ರಣಯಗಳ ಮಾತುಕಥೆಯಲ್ಲಿ ತೊಡಗಿಸಿಕೊಳ್ಳಿ. ಆಗ ಮಾತ್ರ ನಿಮ್ಮ ಶೃಂಗಾರಪೂರ್ಣ ಕ್ಷಣಗಳು ರಸಮಯ ಆಗಲು ಸಾಧ್ಯ.

ಮೇಕ್ ಓವರ್ ಉತ್ತಮ ಆಗಿರಲಿ : ಪ್ರತಿಯೊಬ್ಬ ಪಾರ್ಟ್ ನರ್ ಗೂ ಅನಿಸುವುದೆಂದರೆ, ತನ್ನ ಸಂಗಾತಿ ಸದಾ ಆಕರ್ಷಕವಾಗಿ ಕಂಡುಬರಬೇಕು. ಹೀಗಾಗಿ ಪಾರ್ಟ್ ನರ್ ಡ್ರೆಸ್ ನೀವೇ ಆರಿಸಿ. ಹೆಣ್ಣಾಗಿ ನೀವು ಉತ್ತಮ ಮೇಕಪ್, ಅಲಂಕಾರದಿಂದ ಸಂಗಾತಿಯನ್ನು ಪರವಶಗೊಳಿಸಲು ಯತ್ನಿಸಿ.
ಪರಸ್ಪರ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ : ಸೆಕ್ಸ್ ಗೆ ಮುನ್ನ ಪರಸ್ಪರ ಇಬ್ಬರೂ ಮನಬಿಚ್ಚಿ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳುವುದು ಅತಿ ಅಗತ್ಯ. ಇದರಿಂದ ಸಂಗಾತಿ ಏನು ಮಾಡಿದರೆ ನೀವು ಉತ್ತೇಜಿತರಾಗುತ್ತೀರಿ ಎಂಬುದು ಇಬ್ಬರಿಗೂ ಗೊತ್ತಾಗಬೇಕು. ಈ ಆಪ್ಯಾಯಮಾನ ಅನುಭವ ಇಬ್ಬರಿಗೂ ಹಿತಕರ ತಾನೇ ಎಂಬುದನ್ನು ತಿಳಿದುಕೊಳ್ಳಿ. ಒಬ್ಬರಿಗೆ ಆಸಕ್ತಿ ಇದ್ದು, ಇನ್ನೊಬ್ಬರಿಗೆ ಆ ದಿನ ಏಕೋ ಮೂಡ್ ಸರಿ ಇರದಿದ್ದರೆ, ಎಲ್ಲ ರಸಾಭಾಸ ಆದೀತು. ಹೀಗಾಗಿ ಸಂಗಾತಿಗಳಿಬ್ಬರೂ ಪರಸ್ಪರ ಮನಬಿಚ್ಚಿ ಮಾತನಾಡಿಕೊಳ್ಳುವುದು ಅತಿ ಅವಶ್ಯಕ. ಯಾರಿಗೆ ಏನೇ ತೊಂದರೆ ಇದ್ದರೂ, ಅದಕ್ಕೆ ಇಬ್ಬರೂ ಕೂಡಿ ಪರಿಹಾರ ಕಂಡುಕೊಳ್ಳಬೇಕು.
ಟೆನ್ಶನ್ಸ್ ನಿಮ್ಮನ್ನು ಕಾಡದಿರಲಿ : ಗಂಡು ಹೆಣ್ಣು ಯಾರೇ ಇರಲಿ, ಇಬ್ಬರಲ್ಲೂ ಸೆಕ್ಸ್ ಕುರಿತಾಗಿ ಆಸಕ್ತಿ ತಗ್ಗಲು ಹಾರ್ಮೋನ್ಸ್ ನ ಏರುಪೇರು ಕಾರಣವಾಗುತ್ತದೆ. ದೈನಂದಿನ ಕೆಲಸ ಕಾರ್ಯದ ಒತ್ತಡ, ನಾಳೆಗೇನು ಪರಿಹಾರ ಹುಡುಕುವುದು ಎಂಬ ಟೆನ್ಶನ್ಸ್, ವಯಸ್ಸಿಗೆ ತಕ್ಕಂತೆ ಕುಗ್ಗುವ ಶಕ್ತಿಸಾಮರ್ಥ್ಯ ಇತ್ಯಾದಿ ಅನೇಕ ಕಾರಣಗಳಿರುತ್ತವೆ. ಹಾಗೆ ನೋಡಿದರೆ ಸೆಕ್ಸ್ ನಿಮ್ಮ ಟೆನ್ಶನ್ಸ್ ನ್ನು ತಗ್ಗಿಸುತ್ತದೆ. ಆದರೆ ಇದು ಉಲ್ಟಾ ಆಗಿ ಮಾನಸಿಕ ಒತ್ತಡದ ಪ್ರಾಬಲ್ಯವೇ ಹೆಚ್ಚಾಗಿ ನಿಮಗೆ ಸಮಾಗಮದಲ್ಲಿ ಸುಖವಿಲ್ಲ ಎಂದು ಮನಸ್ಸಿಗೆ ಬಂದುಬಿಟ್ಟರೆ, ಅಂದು ಆ ಬಗ್ಗೆ ಹೆಚ್ಚು ಆಸೆ ಇರಿಸಿಕೊಳ್ಳದೇ ಇರುವುದೇ ಸರಿ. ಇದಕ್ಕಾಗಿ ಇಬ್ಬರೂ ಸೂಕ್ತ ವಿಶ್ರಾಂತಿ ಪಡೆಯಿರಿ, ಆ ಮೂಲಕ ದೈನಂದಿನ ಒತ್ತಡಗಳನ್ನು ನಿವಾರಿಸಿಕೊಳ್ಳಿ. ಪ್ರತಿದಿನ ಯೋಗ, ಧ್ಯಾನಗಳ ಮೂಲಕ ಮನಸ್ಸನ್ನು ಕಂಟ್ರೋಲ್ ನಲ್ಲಿ ಇರಿಸಿಕೊಳ್ಳಿ. ಇದರಿಂದ ನಿಮ್ಮ ಎನರ್ಜಿ ಲೆವೆಲ್ ಹೆಚ್ಚಿ ಸಹಜವಾಗಿ ಕಾಮಾಸಕ್ತಿ ಮೂಡುತ್ತದೆ.
ಮೊಬೈಲ್ ಇತ್ಯಾದಿ ಗೆಜೆಟ್ಸ್ ನ್ನು ಸ್ವಿಚ್ ಆಫ್ ಮಾಡಿಬಿಡಿ : ಇತ್ತೀಚೆಗಂತೂ ಎಲ್ಲರ ಕೈಯಲ್ಲಿ ಸದಾ ಮೊಬೈಲ್ ಮೊಳಗುತ್ತಿರುತ್ತದೆ. ಅದರಲ್ಲಿ ಸದಾ ಮೂಡಿಬರುವ ನೋಟಿಫಿಕೇಶನ್ಸ್, ಅಲರ್ಟ್ಸ್, ಮೆಸೇಜ್ ಗಳು ನಮ್ಮ ಮನಸ್ಸಿಗೆ ಬೇಕಾದ ಏಕಾಗ್ರತೆ ತಂದುಕೊಳ್ಳಲು ಬಿಡುವುದಿಲ್ಲ. ಇದರಿಂದ ಪಾರಾಗಲು ನೀವು ಸೆಕ್ಸ್ ಮೂಲಕ ಆನಂದ ಪಡೆಯಲು, ಬೆಡ್ ರೂಮಿಗೆ ಹೋದ ತಕ್ಷಣ ಮೊಬೈಲ್ ಇತ್ಯಾದಿ ಸ್ವಿಚ್ ಆಫ್ ಮಾಡಲೇಬೇಕು. ಆಗ ಮಾತ್ರ ನೀವು ಸಂಗಾತಿ ಜೊತೆ ನೆಮ್ಮದಿ ಕಾಣಲು ಸಾಧ್ಯ.
ಸಮಾಗಮದಲ್ಲಿ ಸದಾ ಹೊಸತನ ಇರಲಿ : ಜೀವನದಲ್ಲಿ ಯಾವ ವಿಚಾರವೇ ಆಗಲಿ, ಹೊಸತನ ತುಂಬಿದ್ದರೆ ಮಾತ್ರ ಅದು ರಸಪೂರ್ಣ ಎನಿಸುತ್ತದೆ. ಇದೇ ತರಹ ನಿಮ್ಮ ಸೆಕ್ಸ್ ಲೈಫ್ ನಲ್ಲೂ ಸದಾ ಏನಾದರೊಂದು ಹೊಸತನ, ಹೊಸ ಚಟುವಟಿಕೆ ಇರುವಂತೆ ನೋಡಿಕೊಳ್ಳಿ. ಆಗ ಸಹಜವಾಗಿ ಸಮಾಗಮ ಒಂದು ಯಾಂತ್ರಿಕ ಬೋರಿಂಗ್ ಕ್ರಿಯೆ ಆಗು ಬದಲು, ಆಸಕ್ತಿದಾಯಕ ಎನಿಸುತ್ತದೆ. ಇದಕ್ಕಾಗಿ ಸಂಗಾತಿ ಜೊತೆ ಹೊಸ ಹೊಸ ಆಸನ ಟ್ರೈ ಮಾಡಿ. ಮದುವೆಯಾದ ಕೆಲವು ವರ್ಷಗಳ ನಂತರ ಈ ಕ್ರಿಯೆ ಬಲು ರೊಟೀನ್ ಆಗಿಹೋಗುತ್ತದೆ. ಅದರಲ್ಲಿ ಯಾವುದೇ ಹೊಸತನ ಇಲ್ಲದೆ, ಏನೂ ಬೇಡ ಎಂದು ಮಗ್ಗಲು ಬದಲಿಸುವವರೇ ಹೆಚ್ಚು. ಹೀಗಾಗುವುದು ಬೇಡ, ಸೆಕ್ಸ್ ಲೈಫ್ ಬಾಡಿಹೋದೀತು. ಆದ್ದರಿಂದ ಅದನ್ನು ರೋಮಾಂಚಕಗೊಳಿಸಲು ಪ್ರತಿ ಸಲ ಏನೋ ಒಂದು ಹೊಸತನ ಟ್ರೈ ಮಾಡಿ. ಆಗ ಹಲವು ವರ್ಷ ನಿಮ್ಮ ಸೆಕ್ಸ್ ಲೈಫ್ ಸುಖಕರ ಎನಿಸುತ್ತದೆ.
ದೇಹ ಸದಾ ಫ್ಲೆಕ್ಸಿಬಲ್ ಆಗಿರಲಿ : ಸೆಕ್ಸ್ ನ ಪೂರ್ತಿ ಮಜಾ ಪಡೆಯಬೇಕಿದ್ದರೆ ಯಾವ ಹೊಸ ಹೊಸ ಆಸನ ಬಳಸಿಕೊಳ್ಳಬೇಕಿದ್ದರೆ, ನಿಮ್ಮ ದೇಹ ಸದಾ ಫ್ಲೆಕ್ಸಿಬಲ್ ಆಗಿರಬೇಕೇ ವಿನಾ ನೀರಸವಾಗಿ ತಣ್ಣೀರು ಸುರಿದಂತಾಗಬಾರದು. ಇದಕ್ಕಾಗಿ ದೇಹ ಸದಾ ಚಟುವಟಿಕೆಯಿಂದ ಕೂಡಿರುವಂತೆ, ಅಂಗಾಂಗ ಫುಲ್ ಫ್ಲೆಕ್ಸಿಬಲ್ ಆಗಿ ಬಳಕುವಂತಿರಬೇಕು. ಆಗ ಮಾತ್ರ ಸಮಾಗಮ ಕಂಫರ್ಟೆಬಲ್ ಎನಿಸುತ್ತದೆ. ಇದಕ್ಕಾಗಿ ಯೋಗ, ವ್ಯಾಯಾಮಗಳಿಂದ ದೇಹ ದಂಡಿಸಿ, ನೀವು ಹೇಳಿದಂತೆ ಅದು ಕೇಳುವಂತಾಗಲಿ. ಆಗ ಮಾತ್ರ ನೀವು ಪ್ರತಿ ರಾತ್ರಿಯೂ ಸಂಗಾತಿ ಜೊತೆ ಹುಣ್ಣಿಮೆಯಲ್ಲಿ ಕಳೆಯುತ್ತಿರುವಂತೆ ಆನಂದಪಡಲು ಸಾಧ್ಯ.
– ಶೋಭಾ ಕುಮಾರ್





