ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗ ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ಉದ್ವಿಗ್ನತೆ ಮತ್ತಷ್ಟು ಉಲ್ಬಣಗೊಂಡಿದೆ.
ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಯತ್ನಿಸುತ್ತಿದ್ದ 20ಕ್ಕೂ ಹೆಚ್ಚು ವಾಣಿಜ್ಯ ಹಡಗುಗಳ ಮೇಲೆ ಇರಾನ್ ಸೇನೆ ದಾಳಿ ನಡೆಸಿದೆ. ಇದರ ಬೆನ್ನಲ್ಲೇ ಜಲಸಂಧಿಯ ಹೊರಗಿನ ಸಂಚಾರ ನಿರ್ಬಂಧಿತ ವಲಯವನ್ನು (No-go zone) ಇರಾನ್ ವಿಸ್ತರಿಸಿದ್ದು, ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದೆ. ಈ ಬೆಳವಣಿಗೆಯಿಂದಾಗಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 100 ಡಾಲರ್ ಗಡಿ ದಾಟಿದೆ.
ಇರಾನ್ ಹಾರ್ಮುಜ್ ಜಲಸಂಧಿಯ ಸಂಚಾರ ತಡೆಯುತ್ತಿರುವ ಸಂದರ್ಭದಲ್ಲಿ, ಅಮೆರಿಕ ಕೂಡ ಇರಾನ್‌ನ ಬಂದರುಗಳ ವಿರುದ್ಧ ಪ್ರತಿಬಂಧಕ ಕ್ರಮಗಳನ್ನು ಮುಂದುವರಿಸಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 101.21 ಡಾಲರ್‌ಗೆ ವಹಿವಾಟು ಮುಗಿಸಿದೆ.
ಇರಾನ್‌ನ ಕ್ರಾಂತಿಕಾರಿ ರಕ್ಷಣಾ ಪಡೆ ಬುಧವಾರ ಎರಡು ಅಮೆರಿಕದ ಹಡಗುಗಳು, ಎಂಟು ತೈಲ ಸಾಗಣೆ ಹಡಗುಗಳು ಹಾಗೂ ಮಾರ್ಗದ ಮೂಲಕ ಸಾಗಲು ಇರಾನ್‌ನ ಸೂಚನೆಗಳನ್ನು ಪಾಲಿಸದ 10 ಹಡಗುಗಳ ಮೇಲೆ ದಾಳಿ ನಡೆಸಿರುವುದಾಗಿ ಹೇಳಿದೆ.
ಗಲ್ಫ್ ಆಫ್ ಓಮನ್ ಮತ್ತು ಗಲ್ಫ್ ಪ್ರದೇಶದಲ್ಲಿನ ಹಲವು ಹಡಗುಗಳು ಈ ಪ್ರದೇಶದಲ್ಲಿ ನಡೆಯುತ್ತಿರುವ ಸೇನಾ ಚಟುವಟಿಕೆಯ ಭಾಗವಾಗಿ ನಿಷ್ಕ್ರಿಯಗೊಳಿಸುವ ಗುಂಡಿನ ದಾಳಿಗೆ ಒಳಗಾಗಿವೆ ಎಂದು ಬ್ರಿಟನ್‌ನ ಯುನೈಟೆಡ್ ಕಿಂಗ್‌ಡಮ್ ಮೆರಿಟೈಮ್ ಟ್ರೇಡ್ ಆಪರೇಷನ್ಸ್ ತಿಳಿಸಿದೆ.
ಹಾರ್ಮುಜ್ ಜಲಸಂಧಿಯ ಸಮುದ್ರದಾಚೆಯ ಭಾಗದಲ್ಲಿರುವ ಗಲ್ಫ್ ಆಫ್ ಓಮನ್ ಹಿಂದೂ ಮಹಾಸಾಗರದೊಂದಿಗೆ ಸಂಪರ್ಕ ಹೊಂದಿದೆ. ಜಗತ್ತಿನ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲದ ಸುಮಾರು ಐದನೇ ಒಂದು ಭಾಗ ಸಾಮಾನ್ಯವಾಗಿ ಈ ಪ್ರಮುಖ ಜಲಮಾರ್ಗದ ಮೂಲಕ ಸಾಗುತ್ತದೆ.
ಇರಾನ್‌ನ ಕ್ರಾಂತಿಕಾರಿ ರಕ್ಷಣಾ ಪಡೆ ಇದೇ ಮೊದಲ ಬಾರಿಗೆ ಗಲ್ಫ್ ಆಫ್ ಓಮನ್ ಹಾಗೂ ಅರಬ್ಬೀ ಸಮುದ್ರದ ಕೆಲವು ಭಾಗಗಳನ್ನು ಹೊಸ ‘ನಿಷೇಧಿತ ವಲಯ’ದ ವ್ಯಾಪ್ತಿಗೆ ಸೇರಿಸಿದೆ. ಈ ವಲಯದ ನಿಖರ ಭೌಗೋಳಿಕ ನಿರ್ದೇಶಾಂಕಗಳನ್ನು ನಂತರ ಪ್ರಕಟಿಸಲಾಗುವುದು ಎಂದು ತಿಳಿಸಿದೆ.
“ಸಮನ್ವಯವಿಲ್ಲದೆ ಯಾವುದೇ ಹಡಗು ಈ ಪ್ರದೇಶ ಪ್ರವೇಶಿಸಿದರೆ, ಅದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕ್ರಾಂತಿಕಾರಿ ರಕ್ಷಣಾ ಪಡೆಯ ವಕ್ತಾರ ಹೊಸೈನ್ ಮೊಹೆಬಿ ತಿಳಿಸಿದ್ದಾರೆ.
ಅಮೆರಿಕದ ಪಡೆಗಳು ಒಂದು ದಿನದ ಹಿಂದೆ 5 ಇರಾನ್‌ನ ತೈಲ ಸಾಗಣೆ ಹಡಗುಗಳನ್ನು ನಾಶಪಡಿಸಿದ್ದಕ್ಕೆ ಪ್ರತಿಯಾಗಿ ಜೋರ್ಡನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಯ ಮೇಲೂ ದಾಳಿ ನಡೆಸಿರುವುದಾಗಿ ಇರಾನ್‌ನ ಪಡೆಗಳು ಹೇಳಿವೆ. ಇದಕ್ಕೆ ಪ್ರತಿಯಾಗಿ ಜೋರ್ಡನ್ ಸೇನೆ ತನ್ನತ್ತ ಉಡಾಯಿಸಲಾದ 18 ಕ್ಷಿಪಣಿಗಳನ್ನು ಹೊಡೆದುರುಳಿಸಿರುವುದಾಗಿ ತಿಳಿಸಿದೆ.
ಇರಾನ್‌ನ ತೈಲ ಸಾಗಣೆ ಹಡಗುಗಳ ಮೇಲಿನ ದಾಳಿಯನ್ನು ಆ ದೇಶದ ವಿದೇಶಾಂಗ ಸಚಿವಾಲಯ ಖಂಡಿಸಿದ್ದು, ಇದು “ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಶಾಂತಿ ಹಾಗೂ ಭದ್ರತೆಗೆ ಬಹಿರಂಗ ಬೆದರಿಕೆ”ಎಂದು ಹೇಳಿದೆ.
ಈ ಪ್ರದೇಶದಲ್ಲಿನ ಅಮೆರಿಕದ ಸೇನಾ ನೆಲೆಗಳ ಮೇಲೆ ನಡೆಸಿದ ದಾಳಿಗಳು ಆತ್ಮರಕ್ಷಣೆಯ ಕ್ರಮ ಎಂದು ಇರಾನ್ ಸಮರ್ಥಿಸಿಕೊಂಡಿದೆ.
ಅಮೆರಿಕದ ಸೇನಾ ಪಡೆಗಳು, ಅಮೆರಿಕದ ಯುದ್ಧನೌಕೆಯನ್ನು ಗುರಿಯಾಗಿಸಿಕೊಂಡ ಇರಾನ್ ದಾಳಿಗೆ ಪ್ರತಿಕ್ರಿಯೆಯಾಗಿ ಈ ಕ್ರಮ ಕೈಗೊಂಡಿರುವುದಾಗಿ ಹೇಳಿವೆ. ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ ಅಮೆರಿಕದ ನೌಕೆಯ ಮೇಲೆ ನಡೆದ ಎರಡನೇ ದಾಳಿ ಇದಾಗಿದೆ ಎಂದು ತಿಳಿಸಿದೆ.
ಇರಾನ್‌ನ ಕ್ರಾಂತಿಕಾರಿ ರಕ್ಷಣಾ ಪಡೆ, ಅಮೆರಿಕ ತನ್ನ ಕೆಲವು ಷರತ್ತುಗಳನ್ನು ಒಪ್ಪಿಕೊಂಡರೆ ಯುದ್ಧವನ್ನು ಅಂತ್ಯಗೊಳಿಸಬಹುದು ಎಂದು ಹೇಳಿದೆ. ಲೆಬನಾನ್ ಮತ್ತು ಯೆಮೆನ್‌ನಲ್ಲಿನ ಯುದ್ಧಗಳಿಗೆ ಸಂಬಂಧಿಸಿದ ಬೇಡಿಕೆಗಳನ್ನೂ ಇರಾನ್ ಮುಂದಿಟ್ಟಿದೆ.
ಅಮೆರಿಕವು ಮರುದಾಳಿ ನಡೆಸುವ ಬೆದರಿಕೆಗಳನ್ನು ಕೈಬಿಡಬೇಕು, ಇಸ್ರೇಲ್ ಸೇನೆಯನ್ನು ಲೆಬನಾನ್‌ನಿಂದ ಹಿಂಪಡೆಯಬೇಕು, ಯೆಮೆನ್ ಮೇಲಿನ ನಿರ್ಬಂಧವನ್ನು ಕೊನೆಗೊಳಿಸಬೇಕು, ಇರಾನ್‌ನ 24 ಬಿಲಿಯನ್ ಡಾಲರ್‌ನಷ್ಟು ಸ್ಥಗಿತಗೊಂಡಿರುವ ಆಸ್ತಿಗಳನ್ನು ಬಿಡುಗಡೆ ಮಾಡಬೇಕು ಹಾಗೂ ತನ್ನ ಪರಮಾಣು ಮತ್ತು ಕ್ಷಿಪಣಿ ಸಾಮರ್ಥ್ಯಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಮೊಹೆಬಿ ಹೇಳಿದ್ದಾರೆ.
ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆ ಮುಗಿದ ತಕ್ಷಣ ಸಂಘರ್ಷ ಅಂತ್ಯಗೊಳ್ಳಲಿದೆ ಎಂದು ಹೇಳಿದ್ದಾರೆ.





