ಭರತ ಭೂಮಿಯ ಹಣೆಬರಹ ಬದಲಿಸಿದ ಬಿರುಗಾಳಿ ಸಂತ!
ಚಿಕಾಗೋದ ಭವ್ಯ ಸಭಾಂಗಣ…
ಅಲ್ಲಿ ಆ ದಿನ ಗಾಳಿಯೂ ಹೆಪ್ಪುಗಟ್ಟಿತ್ತು.
ಜೇಬಿನಲ್ಲಿ ಕಾಸಿಲ್ಲ,
ಕೈಯಲ್ಲಿ ಅಧಿಕೃತ ಆಮಂತ್ರಣವಿಲ್ಲ,
ಜಗತ್ತಿಗೆ ಪರಿಚಯಿಸಲು ಬೆನ್ನ ಹಿಂದೆ ದೊಡ್ಡ ಹೆಸರಿಲ್ಲ!
ಆ ಗ್ಯಾಲರಿಯಲ್ಲಿ ಕುಳಿತಿದ್ದ ಸಾವಿರಾರು ಮುಖಗಳಲ್ಲಿದ್ದದ್ದು ತನ್ನ ಕುರಿತಾದ ಅಪಹಾಸ್ಯದ ಕರಿನೆರಳು!
ಆದರೆ ಆ ವ್ಯಕ್ತಿಯ ಕಣ್ಣುಗಳಲ್ಲಿ ಮಾತ್ರ ಅಗಾಧ ಮೌನ!

ಅದು 1893ರ ಸೆಪ್ಟೆಂಬರ್ 11…
ಚಿಕಾಗೋದ ಸರ್ವಧರ್ಮ ಸಮ್ಮೇಳನ..
ಜಾಗತಿಕ ಧರ್ಮಗಳ ಆ ಮಹಾಸಭೆಯ ವೇದಿಕೆಗೆ ಹೆಜ್ಜೆ ಇಟ್ಟ ಅಜುಮಾಸು 30 ವರ್ಷದ ಭಾರತೀಯ ಸನ್ಯಾಸಿ ದಿಢೀರ್ ಜಗತ್ತಿನ ಕಣ್ಣಿಗೆ ಬಿದ್ದರು.
ಮೈಮೇಲೆ ಕೇಸರಿ ವಸ್ತ್ರ,
ಮುಖದಲ್ಲಿ ಅಚಲವಾದ ಸ್ಥಿರತೆ.
ಅಲ್ಲಿಯವರೆಗೆ ಪಶ್ಚಿಮದ ದೇಶಗಳು ಭಾರತವನ್ನು ಬರೀ ಬಡತನ, ಮೂಢನಂಬಿಕೆ ಮತ್ತು ಅವನತಿಯ ಕನ್ನಡಿಯ ಮೂಲಕವೇ ನೋಡಿದ್ದವು.
ಆದರೆ ಈಗ ಹಿಸ ದೃಷ್ಟಿಕೋನವೊಂದು ಉದ್ಭವಿಸುವ ಅದ್ಭುತ ಕ್ಷಣ ಸಂಭವಿಸಲಿತ್ತು..

ಆ ದಿನ ಸ್ವಾಮಿ ವಿವೇಕಾನಂದರು ಅದೇ ವೇದಿಕೆಯ ಮೇಲೆ ಸಿಂಹನಾದಗೈದರು!
ಅದು ಬರೀ ಭಾಷಣವಲ್ಲ..  ಉಪನ್ಯಾಸವಲ್ಲ..
ಕ್ರಾಂತಿ!
ಅದೊಂದು ಮಾನಸಿಕ ಕ್ರಾಂತಿ!!
ಬ್ರಿಟೀಷರ ಗುಲಾಮಗಿರಿಯಲ್ಲಿ ನಲುಗಿ,
ಕೀಳರಿಮೆಯಿಂದ ಸೊರಗಿದ್ದ ಭಾರತೀಯರ ನರನಾಡಿಗಳಲ್ಲಿ ವಿದ್ಯುತ್ ಸಂಚರಿಸುವಂತೆ ಮಾಡಿದ ಐತಿಹಾಸಿಕ ಸಿಡಿಲು ಅದು..

ಆ ದಿನದ ಪ್ರಭಾವ ಗೊತ್ತಾಗಬೇಕಿದ್ದಾರೆ ಅದಕ್ಕೂ ಮುನ್ನ ನಮ್ಮ ಪರಿಸ್ಥಿತಿ ಹೇಗಿತ್ತು ಅಂತ ನೋಡಬೇಕು..

19ನೇ ಶತಮಾನದ ಅಂತ್ಯದ ಕಥೆ ಇದು.
ನಾವಾಗ ಸಂಪೂರ್ಣವಾಗಿ ಬ್ರಿಟೀಷರ ಅಹಂಕಾರದಡಿಯಲ್ಲಿ ಸಿಲುಕಿದ್ದೆವು.
ಒಂದೆಡೆ ಬಡತನ, ಹಸಿವು, ಬರಗಾಲ…
ಇನ್ನೊಂದೆಡೆ ನಮ್ಮ ಸಂಪತ್ತನ್ನೆಲ್ಲಾ ಲೂಟಿ ಮಾಡುತ್ತಿದ್ದ ಪರಕೀಯರು.
ಇದೆಲ್ಲಕ್ಕಿಂತ ಹೆಚ್ಚಾಗಿ ನಮ್ಮನ್ನು ಕಾಡುತ್ತಿದ್ದದ್ದು ‘ಕೀಳರಿಮೆ’!

ಪಾಶ್ಚಿಮಾತ್ಯರು ನಮ್ಮನ್ನು “ಅನಾಗರಿಕರು, ಹಾವಾಡಿಗರು, ಮೂಢನಂಬಿಕೆಯ ದೇಶ” ಅಂತ ಹೀನಾಯವಾಗಿ ಹಂಗಿಸುತ್ತಿದ್ದರು.
ನಮ್ಮದೇ ದೇಶದ ಓದಿದ ಯುವಕರಿಗೆ ತಮ್ಮ ಸಂಸ್ಕೃತಿಯ ಬಗ್ಗೆಯೇ ನಾಚಿಕೆ ಶುರುವಾಗಿತ್ತು.

ದೇಶ ಸುತ್ತಿ, ಕನ್ಯಾಕುಮಾರಿಯ ಬಂಡೆಯ ಮೇಲೆ ಕುಳಿತು ಧ್ಯಾನ ಮಾಡಿದ್ದ ಆ ಯುವ ಸನ್ಯಾಸಿ ವಿವೇಕಾನಂದರಿಗೆ ಇದೆಲ್ಲವೂ ಅರ್ಥವಾಗಿತ್ತು.
ಜೇಬಿನಲ್ಲಿ ಸರಿಯಾಗಿ ದುಡ್ಡಿಲ್ಲದೆ,
ಸಮ್ಮೇಳನಕ್ಕೆ ಅಧಿಕೃತ ಆಹ್ವಾನವೂ ಇಲ್ಲದೆ ಆತ ಅಮೆರಿಕದ ನೆಲದ ಮೇಲೆ ಕಾಲಿಟ್ಟಿದ್ದರು..!
ಆಮೇಲೆ ನಡೆದದ್ದೇ ಇತಿಹಾಸ!

ಸೆಪ್ಟೆಂಬರ್ 11, 1893.
30 ವರ್ಷದ ಆ ಯುವ ಸನ್ಯಾಸಿ ವೇದಿಕೆ ಏರಿದರು.. ಎದುರಿಗೆ ಇಡೀ ಪಾಶ್ಚಿಮಾತ್ಯ ಜಗತ್ತಿನ ಘಟಾನುಘಟಿಗಳು. ವಿವೇಕಾನಂದರು ಮೈಕ್ ಹಿಡಿದು,
“ಅಮೆರಿಕದ ನನ್ನ ಸಹೋದರ ಸಹೋದರಿಯರೇ…” (Sisters and Brothers of America)
ಎನ್ನುತ್ತಿದ್ದಂತೆ ಏನಾಯ್ತು ಗೊತ್ತಾ?
ಸಭಾಂಗಣದಲ್ಲಿದ್ದ ಸಾವಿರಾರು ಜನ ಎದ್ದು ನಿಂತು ಬರೋಬ್ಬರಿ ಎರಡು ನಿಮಿಷಗಳ ಕಾಲ ನಿರಂತರವಾಗಿ ಚಪ್ಪಾಳೆ ತಟ್ಟಿದರು!

ಭಾರತೀಯ ಧರ್ಮದ ಸಹಿಷ್ಣುತೆ,
“ಎಲ್ಲಾ ಧರ್ಮಗಳು ಸತ್ಯ.
ಎಲ್ಲಾ ಧರ್ಮಗಳೂ ತಮ್ಮ ತಮ್ಮ ಮಾರ್ಗಗಳಲ್ಲಿ ಸತ್ಯದತ್ತ ಸಾಗುತ್ತವೆ ಎಂಬ ಭಾರತದ ವಿಶಾಲ ದೃಷ್ಟಿಕೋನವನ್ನು,
ಮತ್ತು ಜಗತ್ತಿನ ನೊಂದವರಿಗೆ ಆಶ್ರಯ ಕೊಟ್ಟ ಭಾರತದ ಇತಿಹಾಸವನ್ನು ಅವರು ಎಳೆಎಳೆಯಾಗಿ ಬಿಚ್ಚಿಟ್ಟಾಗ ಅಮೆರಿಕ ಮಂತ್ರಮುಗ್ಧವಾಯಿತು.

“ಹಸಿದ ಹೊಟ್ಟೆಗೆ ಮೊದಲು ಅನ್ನ ಬೇಕು, ಆಮೇಲೆ ತತ್ವಜ್ಞಾನ” ಅಂತ ಕಡ್ಡಿಮುರಿದಂತೆ ಹೇಳಿದರು.
ಮರುದಿನ ಅಮೆರಿಕದ ಪತ್ರಿಕೆಗಳೆಲ್ಲಾ
“ಈ ಸಮ್ಮೇಳನದ ಅತ್ಯಂತ ಶ್ರೇಷ್ಠ ವ್ಯಕ್ತಿ ವಿವೇಕಾನಂದರು” ಅಂತ ಬರೆದುಕೊಂಡವು.

ಈ ಭಾಷಣದ ಸುದ್ದಿ ಸಮುದ್ರ ದಾಟಿ ಭಾರತಕ್ಕೆ ಬಂತು.. ಆಗೆಲ್ಲಾ ಬ್ರಿಟೀಷರ ಮುಂದೆ ತಲೆ ತಗ್ಗಿಸಿ ನಿಲ್ಲುತ್ತಿದ್ದ ಭಾರತೀಯರ ಕಣ್ಣಲ್ಲಿ ಒಮ್ಮೇಲೆ ಒಂದು ಅದ್ಭುತವಾದ ‘ಸ್ವಾಭಿಮಾನದ ಬೆಂಕಿ’ ಹೊತ್ತಿಕೊಂಡಿತು!
“ನಮ್ಮ ಧರ್ಮ ಕೀಳಲ್ಲ, ಪಾಶ್ಚಿಮಾತ್ಯರಿಗಿಂತ ನಮ್ಮ ತತ್ವಜ್ಞಾನ ಎಷ್ಟೋ ಮೇಲಿದೆ”
ಅನ್ನೋದು ಭಾರತೀಯರಿಗೆ ಅರಿವಾಯ್ತು.
ನಮ್ಮ ಸಂಸ್ಕೃತಿಯ ಬಗ್ಗೆ ನಮಗಿದ್ದ ಕೀಳರಿಮೆ ಸುಟ್ಟು ಬೂದಿಯಾಯ್ತು!

ವಿವೇಕಾನಂದರು ಕೇವಲ ಸನ್ಯಾಸಿಯಾಗಿರಲಿಲ್ಲ, ಅವರೊಬ್ಬ ರಾಷ್ಟ್ರಭಕ್ತ.
ಯುವಕರಲ್ಲಿ ಶಕ್ತಿ ತುಂಬುವ ಕೆಲಸ ಮಾಡಿದರು.
ಸುಭಾಷ್ ಚಂದ್ರ ಬೋಸ್ ಅವರಂತವರು ವಿವೇಕಾನಂದರನ್ನು
“ಆಧುನಿಕ ಭಾರತದ ನಿರ್ಮಾತೃ”
ಅಂತ ಕರೆದರು.
ಬ್ರಿಟೀಷರ ವಿರುದ್ಧ ಸಿಡಿದೇಳಲು ಬೇಕಾದ ನೈತಿಕ ಬಲ ಸಿಕ್ಕಿದ್ದೇ ವಿವೇಕಾನಂದರ ವಿಚಾರಗಳಿಂದ ಅಂದರೂ ಏನೇನೂ ಅತಿಶಯೋಕ್ತಿ ಇಲ್ಲ.

ಅಮೆರಿಕಾದಿಂದ ಮರಳಿ ಭಾರತಕ್ಕೆ ಬಂದ ಸ್ವಾಮಿಜಿ ಬರೀ ಉಪದೇಶ ಮಾಡಲಿಲ್ಲ.
‘ರಾಮಕೃಷ್ಣ ಮಿಷನ್’ ಸ್ಥಾಪಿಸಿ, ಶಿಕ್ಷಣ, ಆಸ್ಪತ್ರೆ, ಬಡವರ ಸೇವೆ ಶುರು ಮಾಡಿದರು.
“ದೀನ ದಲಿತರ ಸೇವೆಯೇ ದೇವರ ಸೇವೆ” ಅಂತ ಹೊಸ ಭಾಷ್ಯ ಬರೆದರು..

ಅಲ್ಲಿಂದ ಮುಂದೆ ಜಗತ್ತಿನ ಕಣ್ಣಲ್ಲಿ ಭಾರತ ಅಂದ್ರೆ ಕೇವಲ ಬಡವರ ದೇಶವಾಗಿರಲಿಲ್ಲ. .
ಯೋಗ, ವೇದಾಂತ, ತತ್ವಜ್ಞಾನವನ್ನು ಜಗತ್ತಿಗೆ ಕಲಿಸಬಲ್ಲ ‘ವಿಶ್ವಗುರು’ ಅನ್ನೋ ಸಾಫ್ಟ್ ಪವರ್ ಕ್ರಿಯೇಟ್ ಆಯ್ತು.

ಒಟ್ಟಿನಲ್ಲಿ ಹೇಳಬೇಕೆಂದರೆ…
ಚಿಕಾಗೋ ಭಾಷಣಕ್ಕೂ ಮುನ್ನ ನಾವು ಬ್ರಿಟೀಷರು ಹೇಳಿದ್ದನ್ನೇ ಕೇಳಿಕೊಂಡು,
ನಮಗೆ ನಾವೇ ಶಾಪ ಹಾಕಿಕೊಳ್ಳುತ್ತಿದ್ದೆವು.
ಆದರೆ ಆ ಭಾಷಣದ ನಂತರ, ಭಾರತ ತನ್ನ ಬೆನ್ನೆಲುಬನ್ನು ನೇರಗೊಳಿಸಿ ನಿಂತಿತು!
“ನಾವು ಯಾರಿಗೂ ಕಮ್ಮಿ ಇಲ್ಲ”
ಅನ್ನೋ ಆತ್ಮವಿಶ್ವಾಸ ಬಂತು.
ಅದೇ ಆತ್ಮವಿಶ್ವಾಸ ಮುಂದೆ ಬ್ರಿಟೀಷರನ್ನು ದೇಶದಿಂದ ಓಡಿಸುವ ದೊಡ್ಡ ಅಸ್ತ್ರವಾಯ್ತು..

ಒಬ್ಬ ಯುವ ಸನ್ಯಾಸಿ, ಕೇವಲ ತನ್ನ ಮಾತಿನಿಂದ ಮತ್ತು ಅದಮ್ಯವಾದ ನಂಬಿಕೆಯಿಂದ ಇಡೀ ದೇಶದ ಆತ್ಮವಿಶ್ವಾಸವನ್ನೇ ಹೇಗೆ ಬಡಿದೆಬ್ಬಿಸಬಹುದು ಅನ್ನೋದಕ್ಕೆ ಇದಕ್ಕಿಂತ ರೋಮಾಂಚಕ ಉದಾಹರಣೆ ಇತಿಹಾಸದಲ್ಲಿ ಇನ್ನೊಂದಿಲ್ಲ!
#ಸಂತ_ಮಹಾಂತ ಸ್ವಾಮಿ ವಿವೇಕಾನಂದರ ಆ ಭಾಷಣ… ಭಾರತದ ಪಾಲಿಗೆ ನಿಜಕ್ಕೂ ಮರುಹುಟ್ಟು!!

ದೀಪ್ತನಯನಾರವಿಂದಂ
ಶ್ರೀ ಸ್ವಾಮಿ ವಿವೇಕಾನಂದಂ
ಭಾರತ ಧೀರ ನರೇಂದ್ರಂ
ತ್ವಾಂ ವಂದೇ ಸಿಂಹನಿನಾದಂ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ