ಇದು ಭಾರತದ ಅಂಧರ ವಿಶ್ವಕಪ್ ಕ್ರಿಕೆಟ್ ತಂಡದ ಇಬ್ಬರು ಕನ್ನಡತಿಯರ ಜೀವನದ ಯಶೋಗಾಥೆ. ಅಂಧತ್ವ ಕೇವಲ ಕಣ್ಣಿಗೆ ಅಂಧತ್ವವೇ ಹೊರತು ಮನಸ್ಸಿಗಲ್ಲ ಎನ್ನುವುದನ್ನು ತಮ್ಮ ಆತ್ಮಬಲ, ಇಚ್ಛಾಶಕ್ತಿಯ ಮೂಲಕ ಸಾಬೀತುಪಡಿಸಿದ್ದ ಅಂಧರ ವಿಶ್ವಕಪ್ ವಿಜೇತ ಭಾರತ ಮಹಿಳಾ ತಂಡದಲ್ಲಿ ಭಾಗಿಗಳಾಗಿದ್ದ ಇಬ್ಬರು ಕರ್ನಾಟಕದ ಸ್ಛೂರ್ತಿದಾಯಕ ಯುವತಿಯರ ಕುರಿತ ಪರಿಚಯ ಇಲ್ಲಿದೆ!
ಈ ಇಬ್ಬರ ಪೈಕಿ ಒಬ್ಬರು ಭಾರತ ತಂಡದ ನಾಯಕಿಯಾದ ತುಮಕೂರಿನ ದೀಪಿಕಾ. ಇನ್ನೊಬ್ಬರು ಅದೇ ತಂಡದ ಭಾಗವಾಗಿದ್ದ ಶಿವಮೊಗ್ಗದ ಕಾವ್ಯಾ.
ಈ ಇಬ್ಬರ ಯಶೋಗಾಥೆ ನಮ್ಮ ನಾಡಿನ ಸಮಸ್ತ ಹೆಣ್ಣುಮಕ್ಕಳಿಗೆ ಪ್ರೇರಣೆಯಾಗಲಿ ಎನ್ನುವುದು `ಗೃಹಶೋಭಾ'ದ ಆಶಯವಾಗಿದೆ.
ಜಗತ್ತನ್ನೇ ನೋಡದ ಹುಡುಗಿ ಜಗತ್ತನ್ನೇ ನೋಡುವಂತೆ ಮಾಡಿದಳು!
`ನಿಮಗೆ ಸಾಧ್ಯವಿಲ್ಲ' ಎಂದು ಜಗತ್ತು ಅವಳಿಗೆ ಹೇಳಿದಾಗ, ಅವಳು ಮತ್ತು ಅವಳ ಹೆತ್ತವರು ಈಗಾಗಲೇ ದೊಡ್ಡ ಕನಸುಗಳನ್ನು ಕಾಣುತ್ತಿದ್ದರು. ಇಂದು, ಅವರು ಭಾರತವನ್ನು ಮೊದಲ ಮಹಿಳಾ ಟಿ-20 ಅಂಧರ ಕ್ರಿಕೆಟ್ ವಿಶ್ವಕಪ್ ನಲ್ಲಿ ಗೆಲುವಿನತ್ತ ಕೊಂಡೊಯ್ದರು.
ದೃಢನಿಶ್ಚಯ ಮತ್ತು ಕುಟುಂಬದ ನಂಬಿಕೆ ಪರ್ವತಗಳನ್ನು ಸಹ ಅಲುಗುವಂತೆ ಮಾಡಲಿದೆ ಎನ್ನುವುದನ್ನು ಸಾಬೀತುಪಡಿಸಿದರು. ಅವರು ಕೇವಲ ರನ್ ಗಳಿಸಲಿಲ್ಲ. ಅವರು ಅನುಮಾನಗಳನ್ನು ಹೋಗಲಾಡಿಸಿದರು. ಅವರು ಧೈರ್ಯವನ್ನು ಮರು ವ್ಯಾಖ್ಯಾನಿಸಿದರು. ಅವರು ತಮ್ಮದೇ ಆದ ಸ್ಕ್ರಿಪ್ಟ್ ನ್ನು ಬರೆದರು.
ಇದು ಅಂಧರ ಟಿ-20 ವಿಶ್ವಕಪ್ ಚಾಂಪಿಯನ್ ಭಾರತ ತಂಡವನ್ನು ಮುನ್ನಡೆಸಿದ ವೀರ ನಾರಿಯ ಕಹಾನಿ.
``ನಾವು ಯಾರಿಗೂ ಕಡಿಮೆಯೇನಲ್ಲ!''

ದೀಪಿಕಾ ಟಿ.ಸಿ.
ಮೊದಲ ಮಹಿಳಾ ಅಂಧರ ಟಿ-20 ವಿಶ್ವಕಪ್ ನಲ್ಲಿ ಭಾರತದ ಐತಿಹಾಸಿಕ ಗೆಲುವಿನ ಹಿಂದಿನ ನಿರ್ಭೀತ ನಾಯಕಿ ದೀಪಿಕಾ. ಶ್ರೀಲಂಕಾದ ಕೊಲಂಬೋದ ಪಿ ಸಾರಾ ಓವಲ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನೇಪಾಳ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ಕ್ ಸೋತು ಮೊದಲು ಬ್ಯಾಟಿಂಗ್ ಮಾಡಿ ನೇಪಾಳ ತಂಡ ನಿಗದಿತ 20 ಓವರ್ ನಲ್ಲಿ ಐದು ವಿಕೆಟ್ ನಷ್ಟಕ್ಕೆ 114 ರನ್ ಗಳಿಸಿ ಭಾರತಕ್ಕೆ 115 ರನ್ ಗಳ ಗೆಲುವಿನ ಗುರಿ ನೀಡಿತು. ಗೆಲುವಿನ ಗುರಿ ಬೆನ್ನಟ್ಟಿದ್ದ ಭಾರತ ತಂಡ ಮೊದಲ 10 ಓವರ್ ಗಳಲ್ಲಿಯೇ ಶತಕದ ಗಡಿ ದಾಟಿದ್ದರು. 12 ಓವರ್ ಗಳಲ್ಲೇ ಮೂರು ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಭಾರತ ಮಹಿಳಾ ತಂಡ ಚೊಚ್ಚಲ ಬಾರಿಗೆ ಅಂಧರ ಟಿ-20 ವಿಶ್ವಕಪ್ ಮುಡಿಗೇರಿಸಿಕೊಂಡು ಇತಿಹಾಸವನ್ನೇ ನಿರ್ಮಿಸಿತು!
ಹಾದಿ ಸುಲಭವಾಗಿರಲಿಲ್ಲ
ಈ ಕ್ಷಣಕ್ಕೆ ಅವರ ಹಾದಿ ಸುಲಭವಾಗಿರಲಿಲ್ಲ. ದೀಪಿಕಾ ಆರಂಭಿಕ ಕಷ್ಟಗಳಿಂದ ಮೇಲೆದ್ದು, ಹೋರಾಟವನ್ನು ಶಕ್ತಿಯನ್ನಾಗಿ ಪರಿವರ್ತಿಸಿದರು ಮತ್ತು ದೇಶಾದ್ಯಂತ ಅಸಂಖ್ಯಾತ ಯುವತಿಯರಿಗೆ ಭರವಸೆಯ ದಾರಿದೀಪವಾದರು.
ದೀಪಿಕಾ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಚಿಕ್ಕತಿಮ್ಮನಹಳ್ಳಿ ಗ್ರಾಮದಲ್ಲಿ, ಬಡ ಕೃಷಿಕರ ಕುಟುಂಬದಲ್ಲಿ ಜನಿಸಿದರು. ತಂದೆ ಚಿಕ್ಕತಿಮ್ಮಪ್ಪ ಮತ್ತು ತಾಯಿ ಚಿತ್ರಮ್ಮ ಇಬ್ಬರೂ ಕೃಷಿ ಕೂಲಿ ಕಾರ್ಮಿಕರು. ಬಡ ಕುಟುಂಬದಲ್ಲಿ ದೀಪಿಕಾ ಬಾಲ್ಯದಿಂದಲೇ ಕಷ್ಟ, ಸವಾಲುಗಳನ್ನು ಎದುರಿಸುತ್ತಾ ಬೆಳೆಯಬೇಕಾಯಿತು. ಕೃಷಿಕರಾದ ತಾಯಿ ತಂದೆ, ಮಗಳ ಭವಿಷ್ಯದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಆದರೆ ಜೀವನದ ಸನ್ನಿವೇಶಗಳು ಅನಿರೀಕ್ಷಿತ ತಿರುವಿಗೆ ಸಾಕ್ಷಿಯಾದವು.





