ಬಂಗಾಳಿ ಬೆಡಗಿಯ ಬಿನ್ನಾಣಕ್ಕೆ ಮನಸೋತ ಕನ್ನಡ ಕುವರ
ಸ್ಯಾಂಡಲ್ ವುಡ್ ನಲ್ಲಿ ಆನ್ ಸ್ಕ್ರೀನ್ ಮತ್ತು ಆಫ್ ಸ್ಕ್ರೀನ್ ನಲ್ಲೂ ಕ್ಯೂಟ್ ಜೋಡಿ ದಿಗಂತ್ ಮತ್ತು ಐಂದ್ರಿತಾ ರೇ. `ಮೆರವಣಿಗೆ' ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ಬಂಗಾಳಿಯ ಗುಳಿ ಕೆನ್ನೆಯ ಚೆಲುವೆ ಇಂದು ಕರುನಾಡಿನ ಸೊಸೆ. ಮೊದಲ ಸಿನಿಮಾ ಮೂಲಕವೇ ಚಿತ್ರರಸಿಕರ ಮನಸೆಳೆದ ಐಂದ್ರಿತಾ, ಕನ್ನಡದ ಕುವರ ದೂದ್ ಪೇಡಾ ದಿಗಂತ್ ರನ್ನು ಮದುವೆಯಾಗಿದ್ದು, ಕರ್ನಾಟಕದ ಮನೆ ಮಗಳಾಗಿದ್ದಾರೆ. ಬಂಗಾಳಿ ಮತ್ತು ಕರ್ನಾಟಕದ ಸಂಪ್ರದಾಯದಂತೆ ಮದುವೆ ಮಾಡಿಕೊಂಡ ಇವರು, ಎರಡೂ ಸಂಸ್ಕೃತಿಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ನವರಾತ್ರಿಯ ದುರ್ಗಾ ಪೂಜೆಯ ಹಬ್ಬದಷ್ಟೇ ವೈಭವವಾಗಿ ಈ ಜೋಡಿ ಯುಗಾದಿ ಹಬ್ಬ ಆಚರಿಸುತ್ತಾ, ಎರಡೂ ಕಡೆಯ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಸಾಂಸ್ಕೃತಿಕ ವೈಭವ ಬೆಸೆಯುವ ಹಬ್ಬ
ಸ್ಯಾಂಡಲ್ ವುಡ್ ನ ಮಾದರಿ ಜೋಡಿ ರಿಯಲ್ ಸ್ಟಾರ್ ಉಪೇಂದ್ರ ಮಿಸ್ ಕೋಲ್ಕತಾ ಪ್ರಿಯಾಂಕಾ. ಕೋಲ್ಕತಾ ಬೆಡಗಿ ಪ್ರಿಯಾಂಕಾರನ್ನು ಪ್ರೀತಿಸಿ ಮದುವೆಯಾದ ಉಪ್ಪಿ, ಪ್ರಿಯಾಂಕರೊಂದಿಗೆ ಹಬ್ಬ ಆಚರಿಸುವುದೇ ಚೆಂದ ಅಂತಾರೆ. ಸಿನಿಮಾ ಕ್ಷೇತ್ರದಲ್ಲಿ ಎಷ್ಟೇ ಬ್ಯುಸಿಯಿದ್ದರೂ, ಶಾಸ್ತ್ರ ಸಂಪ್ರದಾಯಗಳನ್ನು ಬಿಟ್ಟುಕೊಡದ ಈ ಜೋಡಿ, ಎಲ್ಲಾ ಹಬ್ಬಗಳನ್ನೂ ಸಡಗರ ಸಂಭ್ರಮದಿಂದ ಆಚರಿಸುವ ಮೂಲಕ ಕರುನಾಡ ಮನ ಸೆಳೆಯುತ್ತದೆ. ವರ್ಷದ ಮೊದಲ ಹಬ್ಬವಾದ ಯುಗಾದಿಯನ್ನು ಮಕ್ಕಳೊಂದಿಗೆ ಕುಟುಂಬದವರೆಲ್ಲರೂ ಒಟ್ಟುಗೂಡಿ ಗ್ರಾಂಡಾಗಿ ಹಬ್ಬ ಆಚರಿಸುವುದೇ ಈ ಜೋಡಿಯ ವೈಶಿಷ್ಟ್ಯ.

ಕುಟುಂಬದೊಂದಿಗೆ ಕಾಲ ಕಳೆಯೋದೇ ಇಷ್ಟ!
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಪ್ರಿಯಾರದ್ದು ಲವ್ ಮ್ಯಾರೇಜ್. ಆನ್ ಸ್ಕ್ರೀನ್ ಮತ್ತು ಆಫ್ ಸ್ಕ್ರೀನ್ ನಲ್ಲೂ ಸದಾ ಸುದ್ದಿಯಲ್ಲಿರುವ ಹೆಸರು ಕಿಚ್ಚ ಸುದೀಪ್. ಸಿನಿಮಾ ಬೇರೆ, ಪರ್ಸನಲ್ ಲೈಫ್ ಬೇರೆ ಅಂತಲೇ ಕಿಚ್ಚ ಸುದೀಪ್ ಸಿನಿಮಾ ಶೂಟಿಂಗ್ ಬ್ಯುಸಿ ನಡುವೆ ಮನೆಯಲ್ಲಿ ಯುಗಾದಿ ಹಬ್ಬವನ್ನು ಪತ್ನಿ ಹಾಗೂ ಮಗಳ ಜೊತೆ ಬಹಳ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಎಲ್ಲಾ ಸಂದರ್ಭಗಳಲ್ಲೂ ಕುಟುಂಬಕ್ಕೆ ಹೆಚ್ಚಿನ ಸಮಯ ಕೊಡಲು ಸಾಧ್ಯವಾಗುವುದಿಲ್ಲ. ಆದರೆ ಹಬ್ಬ ಹರಿದಿನಗಳಲ್ಲಾದರೂ ಹಬ್ಬದ ನೆಪದಲ್ಲಿ ಕುಟುಂಬಕ್ಕೆ ಸಮಯ ನೀಡಬೇಕು ಎನ್ನುವುದು ಕಿಚ್ಚನ ಕಿವಿಮಾತು.

ಕುಟುಂಬದೊಂದಿಗೆ ಹಬ್ಬದೂಟ
ಸ್ಯಾಂಡಲ್ ವುಡ್ ಕ್ಯೂಟ್ ಕಪಲ್ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ, ಯುಗಾದಿ ಹಬ್ಬವನ್ನು ಬಲು ಸಂಭ್ರಮದಿಂದ ಆಚರಿಸುತ್ತಾರೆ. ಹಬ್ಬದಂದು ಎಲ್ಲರಿಗೂ ಬೇವುಬೆಲ್ಲ ಹಂಚಿದ ನಂತರ, ಇವರು ಕುಟುಂಬಸ್ಥರ ಜೊತೆಗೆ ಕುಳಿತು ಹಬ್ಬದೂಟ ಸವಿಯುತ್ತಾರೆ. ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ತೆಲುಗಿನ `ಎವರು' ರೀಮೇಕ್ ಸಿನಿಮಾದಲ್ಲಿ ನಟಿಸಿದ್ದರು. ಆರು ವರ್ಷಗಳ ಕಾಲ ಗೆಳೆತನದಲ್ಲಿದ್ದ ಈ ಜೋಡಿಯ ಸ್ನೇಹ ಪ್ರೀತಿಗೆ ತಿರುಗಿದ ನಂತರವಷ್ಟೇ ಮದುವೆ ನಿರ್ಧಾರ ತೆಗೆದುಕೊಂಡು, ನಮ್ಮ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಗಳನ್ನು ಉಳಿಸಿಕೊಂಡು ಹೋಗಬೇಕು ಎಂಬುದೇ ಇವರ ಮಹದಾಸೆ.

ಗೋಪೂಜೆ ಮೂಲಕ ಸಂಭ್ರಮ
ಸ್ಯಾಂಡಲ್ ವುಡ್ ನ ಕ್ರೇಜಿ ಕ್ವೀನ್ ರಕ್ಷಿತಾ ಹಾಗೂ ನಿರ್ದೇಶಕ ಪ್ರೇಮ್ ಪ್ರೀತಿಸಿ ಮದುವೆಯಾದರು. ಹಳ್ಳಿ ಹೈದ ಪ್ರೇಮ್ ಗೆ ಮನಸೋತ ಸಿಟಿ ಕ್ವೀನ್ ರಕ್ಷಿತಾ ವಿವಾಹ ಬಂಧನಕ್ಕೆ ಒಳಗಾದರು. ಮದುವೆಯಾದ ಮೊದಲ ವರ್ಷದಿಂದಲೇ, ಪ್ರೇಮ್ ರವರ ತೋಟದ ಮನೆಯಲ್ಲೇ ಯುಗಾದಿ ಹಬ್ಬವನ್ನು ಸಡಗರದಿಂದ ಆಚರಿಸುವ ಈ ಜೋಡಿ, ದೇಸಿ ಸ್ಟೈಲ್ ನಲ್ಲೇ ಯುಗಾದಿ ಎಂಜಾಯ್ ಮಾಡುತ್ತಾರೆ. ಗೋಪೂಜೆ ಮೂಲಕ ಆರಂಭವಾಗುವ ಇವರ ಯುಗಾದಿ ಹಬ್ಬದ ಸಡಗರ, ಸಂಭ್ರಮ ಮನೆಯವರಿಗೆ ಮಾತ್ರವಲ್ಲ ಹಳ್ಳಿಜನರಿಗೂ ಅಚ್ಚುಮೆಚ್ಚು!





