ಇದು ಭಾರತದ ಅಂಧರ ವಿಶ್ವಕಪ್‌ ಕ್ರಿಕೆಟ್‌ ತಂಡದ ಇಬ್ಬರು ಕನ್ನಡತಿಯರ ಜೀವನದ ಯಶೋಗಾಥೆ. ಅಂಧತ್ವ ಕೇವಲ ಕಣ್ಣಿಗೆ ಅಂಧತ್ವವೇ ಹೊರತು ಮನಸ್ಸಿಗಲ್ಲ ಎನ್ನುವುದನ್ನು ತಮ್ಮ ಆತ್ಮಬಲ, ಇಚ್ಛಾಶಕ್ತಿಯ ಮೂಲಕ ಸಾಬೀತುಪಡಿಸಿದ್ದ ಅಂಧರ ವಿಶ್ವಕಪ್ ವಿಜೇತ ಭಾರತ ಮಹಿಳಾ ತಂಡದಲ್ಲಿ ಭಾಗಿಗಳಾಗಿದ್ದ ಇಬ್ಬರು ಕರ್ನಾಟಕದ ಸ್ಛೂರ್ತಿದಾಯಕ ಯುವತಿಯರ ಕುರಿತ ಪರಿಚಯ ಇಲ್ಲಿದೆ!

ಈ ಇಬ್ಬರ ಪೈಕಿ ಒಬ್ಬರು ಭಾರತ ತಂಡದ ನಾಯಕಿಯಾದ ತುಮಕೂರಿನ ದೀಪಿಕಾ. ಇನ್ನೊಬ್ಬರು ಅದೇ ತಂಡದ ಭಾಗವಾಗಿದ್ದ ಶಿವಮೊಗ್ಗದ ಕಾವ್ಯಾ.

ಈ ಇಬ್ಬರ ಯಶೋಗಾಥೆ ನಮ್ಮ ನಾಡಿನ ಸಮಸ್ತ ಹೆಣ್ಣುಮಕ್ಕಳಿಗೆ ಪ್ರೇರಣೆಯಾಗಲಿ ಎನ್ನುವುದು `ಗೃಹಶೋಭಾ’ದ ಆಶಯವಾಗಿದೆ.

ಜಗತ್ತನ್ನೇ ನೋಡದ ಹುಡುಗಿ ಜಗತ್ತನ್ನೇ ನೋಡುವಂತೆ ಮಾಡಿದಳು!

`ನಿಮಗೆ ಸಾಧ್ಯವಿಲ್ಲ’ ಎಂದು ಜಗತ್ತು ಅವಳಿಗೆ ಹೇಳಿದಾಗ, ಅವಳು ಮತ್ತು ಅವಳ ಹೆತ್ತವರು ಈಗಾಗಲೇ ದೊಡ್ಡ ಕನಸುಗಳನ್ನು ಕಾಣುತ್ತಿದ್ದರು. ಇಂದು, ಅವರು ಭಾರತವನ್ನು ಮೊದಲ ಮಹಿಳಾ ಟಿ-20 ಅಂಧರ ಕ್ರಿಕೆಟ್‌ ವಿಶ್ವಕಪ್‌ ನಲ್ಲಿ ಗೆಲುವಿನತ್ತ ಕೊಂಡೊಯ್ದರು.

ದೃಢನಿಶ್ಚಯ ಮತ್ತು ಕುಟುಂಬದ ನಂಬಿಕೆ ಪರ್ವತಗಳನ್ನು ಸಹ ಅಲುಗುವಂತೆ ಮಾಡಲಿದೆ ಎನ್ನುವುದನ್ನು ಸಾಬೀತುಪಡಿಸಿದರು. ಅವರು ಕೇವಲ ರನ್‌ ಗಳಿಸಲಿಲ್ಲ. ಅವರು ಅನುಮಾನಗಳನ್ನು ಹೋಗಲಾಡಿಸಿದರು. ಅವರು ಧೈರ್ಯವನ್ನು ಮರು ವ್ಯಾಖ್ಯಾನಿಸಿದರು. ಅವರು ತಮ್ಮದೇ ಆದ ಸ್ಕ್ರಿಪ್ಟ್ ನ್ನು ಬರೆದರು.

ಇದು ಅಂಧರ ಟಿ-20 ವಿಶ್ವಕಪ್‌ ಚಾಂಪಿಯನ್‌ ಭಾರತ ತಂಡವನ್ನು ಮುನ್ನಡೆಸಿದ ವೀರ ನಾರಿಯ ಕಹಾನಿ.

“ನಾವು ಯಾರಿಗೂ ಕಡಿಮೆಯೇನಲ್ಲ!”

Deepika-TC

ದೀಪಿಕಾ ಟಿ.ಸಿ.

ಮೊದಲ ಮಹಿಳಾ ಅಂಧರ ಟಿ-20 ವಿಶ್ವಕಪ್‌ ನಲ್ಲಿ ಭಾರತದ ಐತಿಹಾಸಿಕ ಗೆಲುವಿನ ಹಿಂದಿನ ನಿರ್ಭೀತ ನಾಯಕಿ ದೀಪಿಕಾ. ಶ್ರೀಲಂಕಾದ ಕೊಲಂಬೋದ ಪಿ ಸಾರಾ ಓವಲ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನೇಪಾಳ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ಕ್ ಸೋತು ಮೊದಲು ಬ್ಯಾಟಿಂಗ್‌ ಮಾಡಿ ನೇಪಾಳ ತಂಡ ನಿಗದಿತ 20 ಓವರ್‌ ನಲ್ಲಿ ಐದು ವಿಕೆಟ್‌ ನಷ್ಟಕ್ಕೆ 114 ರನ್‌ ಗಳಿಸಿ ಭಾರತಕ್ಕೆ 115 ರನ್‌ ಗಳ ಗೆಲುವಿನ ಗುರಿ ನೀಡಿತು. ಗೆಲುವಿನ ಗುರಿ ಬೆನ್ನಟ್ಟಿದ್ದ ಭಾರತ ತಂಡ ಮೊದಲ 10 ಓವರ್‌ ಗಳಲ್ಲಿಯೇ ಶತಕದ ಗಡಿ ದಾಟಿದ್ದರು. 12 ಓವರ್‌ ಗಳಲ್ಲೇ ಮೂರು ವಿಕೆಟ್‌ ನಷ್ಟಕ್ಕೆ 117 ರನ್‌ ಗಳಿಸಿ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಭಾರತ ಮಹಿಳಾ ತಂಡ ಚೊಚ್ಚಲ ಬಾರಿಗೆ ಅಂಧರ ಟಿ-20 ವಿಶ್ವಕಪ್‌ ಮುಡಿಗೇರಿಸಿಕೊಂಡು ಇತಿಹಾಸವನ್ನೇ ನಿರ್ಮಿಸಿತು!

ಹಾದಿ ಸುಲಭವಾಗಿರಲಿಲ್ಲ

ಈ ಕ್ಷಣಕ್ಕೆ ಅವರ ಹಾದಿ ಸುಲಭವಾಗಿರಲಿಲ್ಲ. ದೀಪಿಕಾ ಆರಂಭಿಕ ಕಷ್ಟಗಳಿಂದ ಮೇಲೆದ್ದು, ಹೋರಾಟವನ್ನು ಶಕ್ತಿಯನ್ನಾಗಿ ಪರಿವರ್ತಿಸಿದರು ಮತ್ತು ದೇಶಾದ್ಯಂತ ಅಸಂಖ್ಯಾತ ಯುವತಿಯರಿಗೆ ಭರವಸೆಯ ದಾರಿದೀಪವಾದರು.

ದೀಪಿಕಾ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಚಿಕ್ಕತಿಮ್ಮನಹಳ್ಳಿ ಗ್ರಾಮದಲ್ಲಿ, ಬಡ ಕೃಷಿಕರ ಕುಟುಂಬದಲ್ಲಿ ಜನಿಸಿದರು. ತಂದೆ ಚಿಕ್ಕತಿಮ್ಮಪ್ಪ ಮತ್ತು ತಾಯಿ ಚಿತ್ರಮ್ಮ ಇಬ್ಬರೂ ಕೃಷಿ ಕೂಲಿ ಕಾರ್ಮಿಕರು. ಬಡ ಕುಟುಂಬದಲ್ಲಿ ದೀಪಿಕಾ ಬಾಲ್ಯದಿಂದಲೇ ಕಷ್ಟ, ಸವಾಲುಗಳನ್ನು ಎದುರಿಸುತ್ತಾ ಬೆಳೆಯಬೇಕಾಯಿತು. ಕೃಷಿಕರಾದ ತಾಯಿ ತಂದೆ, ಮಗಳ ಭವಿಷ್ಯದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಆದರೆ ಜೀವನದ ಸನ್ನಿವೇಶಗಳು ಅನಿರೀಕ್ಷಿತ ತಿರುವಿಗೆ ಸಾಕ್ಷಿಯಾದವು.

ದೀಪಿಕಾ 5 ತಿಂಗಳ ಮಗುವಾಗಿದ್ದಾಗ ಕಣ್ಣು ಪರಚಿಕೊಂಡು ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡರು. ವೈದ್ಯರಿಗೆ ತೋರಿಸಿದರೆ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡುವುದು ಸೂಕ್ತವಾಗುವುದಿಲ್ಲ. 10 ವರ್ಷದ ಮೇಲೆ ಬನ್ನಿ ನೋಡೋಣ ಎಂದು ಕಳುಹಿಸಿದರು. 12 ವರ್ಷದ ಮಗುವನ್ನು ಕರೆದುಕೊಂಡು ಹೋದಾಗ ಶಸ್ತ್ರಚಿಕಿತ್ಸೆ ಮಾಡಬಹುದು, ಆದರೆ ದೃಷ್ಟಿ ಬರುವುದು ಖಚಿತವಿಲ್ಲ ಎಂದು ಹೇಳಿದರು.

Kavya-V

ಬಡತನದ ಪರಿಸ್ಥಿತಿ

ಬಡತನದ ಆ ಪರಿಸ್ಥಿತಿ ಹೆಚ್ಚಿನ ಚಿಕಿತ್ಸೆ ಪಡೆದುಕೊಳ್ಳಲು ಅನುವು ಮಾಡಿಕೊಡಲಿಲ್ಲ. ಸಾಲದೆ ಅಕ್ಕಪಕ್ಕದವರು, ಸಂಬಂಧಿಗಳು ಸೇರಿ ಸಮಾಜ ಅವಳ ಕಣ್ಣಿನ ದೋಷವನ್ನು ಕಾರಣವಾಗಿಸಿಕೊಂಡು ಹೀಯಾಳಿಸಿ ಅಪಹಾಸ್ಯ ಮಾಡಿದ. ಆದರೆ ಇದರಿಂದ ಎದೆಗುಂದದೆ ದೀಪಿಕಾ ಕುಣಿಗಲ್ ನ ದೊಡ್ಡ ಬಾಣಗೆರೆಯ ಅಂಧಮಕ್ಕಳ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದಾರೆ. ಅವರು ಮೈಸೂರಿನ ರಂಗರಾವ್‌ಪ್ರೌಢಶಾಲೆಯಲ್ಲಿ 45ರವರೆಗಿನ ಆಟದ ಸಮಯದಲ್ಲಿ ಕ್ರಿಕೆಟ್‌ ಆಡುತ್ತಿದ್ದರು.

ಆದಾಗ್ಯೂ ಬ್ಯಾಟಿಂಗ್‌ ಮಾಡುವ ದೀಪಿಕಾಗೆ ಅಂಧರ ಕ್ರಿಕೆಟ್‌ ಬಗ್ಗೆಯಾಗಲಿ, ವಿಶೇಷ ಬಾಲ್ ‌(ಅಂದರೆ ಕ್ರಿಕೆಟ್‌ ಗೆ ಬಳಸಲಾಗುವ ಚೆಂಡು) ಬಗ್ಗೆಯಾಗಲಿ ಅರಿವಿರಲಿಲ್ಲ. ಅದಕ್ಕೂ ಹೆಚ್ಚಾಗಿ ಅದೇ ಕ್ರಿಕೆಟ್‌ ಒಂದು ದಿನ ಅವರನ್ನು ವಿಶ್ವ ಚಾಂಪಿಯನ್‌ ಮಾಡುತ್ತದೆ ಎಂಬುದರ ಪರಿಕಲ್ಪನೆಯೂ ಇರಲಿಲ್ಲ.

ದೈಹಿಕ ಶಿಕ್ಷಕರ ಸಹಕಾರ

ಅಲ್ಲಿನ ಮೋಹನ್‌ ಕುಮಾರ್‌ ಮತ್ತು ಹರಿ ಎಂಬ ದೈಹಿಕ ಶಿಕ್ಷಕರ ಸಹಕಾರದಿಂದ ಹೆಚ್ಚಿನ ಆಸಕ್ತಿಯಿಂದ ಕ್ರಿಕೆಟ್‌ ಅಭ್ಯಾಸ ನಡೆಸಿದರು ದೀಪಿಕಾ. ಅವರ ಆಟದ ಶೈಲಿ, ಕೌಶಲ್ಯ ಹಾಗೂ ಸಮರ್ಪಣೆಯನ್ನು ಗಮನಿಸಿದ ತರಬೇತುದಾರರು ಸಹ ವಿಶೇಷವಾಗಿ ಮಾರ್ಗದರ್ಶನ ನೀಡಿದರು. ನಿರಂತರ ಅಭ್ಯಾಸ ಮತ್ತು ಶ್ರಮದ ಫಲವಾಗಿ ಅವರು ಕರ್ನಾಟಕ ಅಂಧರ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದರು. ದೀಪಿಕಾ 10ನೇ ತರಗತಿಯಲ್ಲಿದ್ದಾಗ ರಾಜ್ಯ ಮಟ್ಟದ ಅಂತರ ಶಾಲಾ ಅಂಧರ ಕ್ರಿಕೆಟ್‌ ಕೂಟ ನಡೆಸಲಾಗಿತ್ತು. ಮೈಸೂರು ಮತ್ತು ರಾಮನಗರದ ನಡುವೆ ನಡೆದ ಈ ಪಂದ್ಯದಲ್ಲಿ ಚಮತ್ಕಾರ ಎನ್ನುವಂತೆ ಶತಕ ಬಾರಿಸಿದ  ದೀಪಿಕಾ, ಎಲ್ಲರ ಗಮನ ಸೆಳೆದಿದ್ದರು. ಆಗಲೇ ರಾಜ್ಯ ಕ್ರಿಕೆಟ್‌ ತಂಡದ ಆಯ್ಕೆದಾರರ ಕಣ್ಣುಗಳೂ ಅವರ ಮೇಲೆ ಬಿದ್ದು, 2019ರಲ್ಲಿ ದೀಪಿಕಾ ಪ್ರೌಢಶಾಲೆ ಮುಗಿಸಿ ಪಿಯುಸಿ ಓದುತ್ತಿರುವಾಗ, ಅಂಧರ ಕ್ರಿಕೆಟ್‌ ತಂಡದ ಮ್ಯಾನೇಜರ್‌ ಆಗಿರುವ ಶಿಖಾರಿಂದ ದೀಪಿಕಾಗೆ ಕರೆ ಬಂದು, ಕರ್ನಾಟಕ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ನಿರ್ದೇಶನ ಸಿಕ್ಕಿತ್ತು.

IMG-20251029-WA0165-scaled

ಆಯ್ಕೆ ಪ್ರಕ್ರಿಯೆ

ಆದರೆ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲಿಕ್ಕಾಗಿ ಬೆಂಗಳೂರಿಗೆ ಹೋಗಲೂ ಕೂಡ ದೀಪಿಕಾ ಬಳಿ ಸಾಕಷ್ಟು ಹಣ ಇರಲಿಲ್ಲ. ಆಗ ತಮ್ಮ ತರಬೇತುದಾರ ಮೋಹನ್‌ ಕುಮಾರ್‌ ಸಹಾಯದಿಂದ ಇರುವ ಒಳ್ಳೇ ಬಟ್ಟೆ ಹಾಗೂ ಊಟ, ವಸತಿಯ ಖರ್ಚು ಸರಿದೂಗಿಸಲು ಹಣ ಹೊಂದಿಸಿಕೊಂಡು ಕಷ್ಟದಲ್ಲೇ ಬೆಂಗಳೂರು ಮುಟ್ಟಿದ್ದರು.

“ಶಿಖಾ ಮೇಡಂ ನನಗೆ ಕರೆ ಮಾಡಿ ಆಯ್ಕೆ ಪ್ರಕ್ರಿಯೆಗೆ ಬಾ, ಎಂದು ಕರೆದಾಗ ನಾನು ಭಯಭೀತಳಾಗಿದ್ದೆ. ನಮ್ಮ ತಂದೆ ತಾಯಿಗೂ ಭಯವಿತ್ತು. ಮುಖ್ಯವಾಗಿ ಬೆಂಗಳೂರಿಗೆ ಕಳುಹಿಸಿ ಕೊಟ್ಟು ಅಲ್ಲಿ ಇರುವ ವ್ಯವಸ್ಥೆ ಮಾಡಿಕೊಳ್ಳುವುದಕ್ಕೂ ನಮ್ಮಲ್ಲಿ ದುಡ್ಡಿರಲಿಲ್ಲ. ಊರಿನ ಕಡೆಯೆಲ್ಲ, ಇವಳಿಗೆ ಕಣ್ಣು ಕಾಣಿಸುವುದಿಲ್ಲ, ಇವಳೇನು ಮಾಡುತ್ತಾಳೆ ಎಂದೆಲ್ಲಾ ಹೀಯಾಳಿಸಿ ನೋಡಿದ್ದರು. “ಚಿಂತಿತ ತಾಯಿ ತಂದೆಗೆ ಸಾಧನೆ ಮಾಡಿ ಎಲ್ಲದಕ್ಕೂ ಉತ್ತರ ನೀಡುತ್ತೇನೆ ಎಂದವಳೇ ಬೆಂಗಳೂರಿಗೆ ಹೊರಟು ಆಯ್ಕೆಯಾದ ಅಂದಿನ ಪರಿಸ್ಥಿತಿ ನೆನೆದುಕೊಂಡರೆ, ಈಗಲೂ ಕಣ್ಣೀರು ಬರುತ್ತದೆ,” ದೀಪಿಕಾ ಅಂದಿನ ತಮ್ಮ ಕಷ್ಟದ ದಿನಗಳ ಕುರಿತು ನೆನೆಯುತ್ತಾರೆ.

ಪರಿಪೂರ್ಣ ಆಲ್ ರೌಂಡರ್

ಆಲ್ ರೌಂಡರ್‌ ಆಗಿ, ಬ್ಯಾಟಿಂಗ್‌ ಮತ್ತು ಬೌಲಿಂಗ್‌ ನಲ್ಲೂ ತಮ್ಮದೇ ಆದ ಸಾಮರ್ಥ್ಯ ತೋರಿಸುತ್ತಾ, ರಾಜ್ಯ ಮಟ್ಟದ ಹಲವು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಈ ಸಾಧನೆಗಳು ಅವರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವಂತೆ ಮಾಡಿತು. 2023ರಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗುವವರೆಗೂ ದೀಪಿಕಾ ತಾಯಿ ತಂದೆಗೆ ಧೈರ್ಯ ಇರಲಿಲ್ಲ. ಆದಾಗ್ಯೂ ಕ್ರಿಕೆಟ್‌ ನಲ್ಲಿ ಆಸಕ್ತಿ ಹೊಂದಿದ್ದ ದೀಪಿಕಾ ತಂದೆ, ರೋಹಿತ್‌ ಶರ್ಮರನ್ನು ನೋಡಿ, ನೀನೂ ಒಂದು ದಿನ ಅವರಂತೆಯೇ ನಾಯಕಿಯಾಗಬೇಕು ಅದು ನನ್ನ ಆಸೆ ಎಂದಿದ್ದರು. ಭಾಗಶಃ ದೃಷ್ಟಿ ಹೊಂದಿರುವ ವ‌ರ್ಗದ ಆಟಗಾರ್ತಿಯಾಗಿ ದೀಪಿಕಾ ರಾಷ್ಟ್ರೀಯ ತಂಡದ ಪ್ರಮುಖ ಆಧಾರವಾದರು.

newindianexpress-2025-11-16-lj84jpax-deepika-extra

ನಾಯಕಿಯಾಗಿ ಮುನ್ನಡೆ

ಒಬ್ಬ ಆಟಗಾರ್ತಿಯಾಗಿ ಯಶಸ್ವಿಯಾಗುವುದರೊಡನೆ ನಾಯಕಿಯಾಗಿ ಸಹ ಒಂದು ತಂಡವನ್ನು ಮುನ್ನಡೆಸುವುದು ಹೆಚ್ಚಿನ ಜವಾಬ್ದಾರಿಯುತ ಕೆಲಸವಾಗುತ್ತದೆ. ಭಾರತೀಯ ಅಂಧರ ಮಹಿಳಾ ಕ್ರಿಕೆಟ್‌ ತಂಡದ ನಾಯಕಿಯಾಗಿ ಆಯ್ಕೆಯಾದಾಗ ದೀಪಿಕಾ ಅವರ ಹೆಗಲ ಮೇಲೆ ದೊಡ್ಡ ಜವಾಬ್ದಾರಿ ಬಿದ್ದಿತ್ತು. ಏಕೆಂದರೆ ಆಟಗಾರರು ದೇಶದ ವಿವಿಧ ಮೂಲೆಗಳಿಂದ ಬಂದವರು. ಭಾಷೆ, ಸಂಸ್ಕೃತಿ ಬೇರೆ ಬೇರೆ. ಆದರೆ ನಾಯಕಿಯಾಗಿ ದೀಪಿಕಾ ಅವರೆಲ್ಲರನ್ನೂ ಒಂದಾಗಿ ಮಾಡಿದ್ದರು. ಮೈದಾನದಲ್ಲಿ ಆಕ್ರಮಣಕಾರಿ ಆಟ, ಮೈದಾನದ ಹೊರಗೆ ಶಾಂತ ಸ್ವಭಾವ. ಅಂತೂ ದೀಪಿಕಾ ಎಲ್ಲಾ ಅಡ್ಡಿ ಆತಂಕವನ್ನೂ ಮೆಟ್ಟಿ ನಿಂತು ತಮ್ಮ ತಂಡವನ್ನು ಬಲಿಷ್ಠವಾಗಿ ರೂಪಿಸಿದರು.

2023ರಲ್ಲಿ ಇಂಗ್ಲೆಂಡಿನ ಬರ್ಮಿಂಗ್‌ ಹ್ಯಾಮ್ ನಲ್ಲಿ ಆಯೋಜಿಸಲಾದ ಐ.ಬಿ.ಎಸ್‌.ಎ ವಿಶ್ವ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಅಂಧರ ಮಹಿಳಾ ಕ್ರಿಕೆಟ್‌ ಸೇರಿಸಲಾಯಿತು. ಇದು ದೀಪಿಕಾ ಮತ್ತು ಭಾರತೀಯ ತಂಡಕ್ಕೆ ತಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸುವ ಅಪರೂಪದ ಅವಕಾಶವಾಗಿತ್ತು. ಲೀಗ್‌ ಹಂತದಲ್ಲಿ ಭಾರತ ತಂಡ ಅಪ್ರತಿಮ ಪ್ರದರ್ಶನ ನೀಡಿತು.

ಅಂತಾರಾಷ್ಟ್ರೀಯ ಪ್ರದರ್ಶನ

ಆಸ್ಟ್ರೇಲಿಯಾ, ಇಂಗ್ಲೆಂಡಿನಂತಹ ಬಲಿಷ್ಠ ತಂಡವನ್ನು ಸೋಲಿಸಿ, ದೀಪಿಕಾ ಅವರ ಶಾಂತ, ದೃಢ ನಾಯಕತ್ವದಲ್ಲಿ ಭಾರತ ಅಜೇಯವಾಗಿ ಫೈನಲ್ ಗೆ ಪ್ರವೇಶಿಸಿತು. ಫೈನಲ್ ನಲ್ಲಿ ಎದುರಾಳಿಯಾಗಿದ್ದ ಆಸ್ಟ್ರೇಲಿಯಾದ ಮೇಲೆ ಭಾರತೀಯ ತಂಡ ತೀವ್ರ ಒತ್ತಡ ಹೇರಿತು. ಮಳೆಯ ಅಡ್ಡಿಯ ನಡುವೆಯೂ ಭಾರತೀಯ ಬೌಲರ್‌ ಗಳ ಶಿಸ್ತುಬದ್ಧ ಬೌಲಿಂಗ್‌ ಮತ್ತು ಫೀಲ್ಡಿಂಗ್ ಎದುರಾಳಿಗಳನ್ನು ಕಡಿಮೆ ಮೊತ್ತಕ್ಕೆ ಸೀಮಿತಗೊಳಿಸಿತು.

ನಂತರ ಗುರಿ ಬೆನ್ನಟ್ಟುವಾಗ ದೀಪಿಕಾರ ತಾಳ್ಮೆಯ ದಾರಿಯಲ್ಲಿ ಭಾರತ ಸುಲಭವಾಗಿ 9 ವಿಕೆಟ್‌ ಗಳಿಂದ ಸೋಲಿಸಿ ಐತಿಹಾಸಿಕ ಜಯ ದಾಖಲಿಸಿತು. ಚಿನ್ನದ ಪದಕವನ್ನು ಕೈಯಲ್ಲಿ ಹಿಡಿದು ಟ್ರೋಫಿಯನ್ನು ಎತ್ತಿದ ದೀಪಿಕಾರ ಆ ಮಹತ್ವದ ಕ್ಷಣ, ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದರು. ಜಯಿಸಿದ್ದು ಪಂದ್ಯವಷ್ಟೇ ಅಲ್ಲ, ಅಂಧ ಕ್ರೀಡಾಕೂಟಗಳ ನಡೆಯನ್ನು ಬದಲಿಸಿದ ಧೈರ್ಯ ಮತ್ತು ಸಾಮರ್ಥ್ಯದ ಘೋಷಣೆ ಆಗಿತ್ತು!

IMG-20251112-WA0270

ಇತ್ತೀಚಿನ ವಿಶ್ವಕಪ್ಪಂದ್ಯಾವಳಿ

ಇತ್ತೀಚೆಗೆ ನಡೆದ ವಿಶ್ವಕಪ್‌ ಪಂದ್ಯಾವಳಿಯಲ್ಲಿ ದೀಪಿಕಾ ಪಾಕಿಸ್ತಾನ್‌ ವಿರುದ್ಧ 21 ಬಾಲಿನಲ್ಲಿ 45 ರನ್‌ ಗಳಿಸಿ ಸೆಮಿಫೈನ್‌ ಗೆಲ್ಲಲು ಕಾರಣರಾದರು. ಅಲ್ಲದೇ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ 91 ರನ್‌ ನ್ನು ಕೇವಲ 58 ಬಾಲ್ ‌ನಲ್ಲಿ ಸಿಡಿಸಿದ್ದರು. ಸ್ಛೋಟಕ ಬ್ಯಾಟರ್ ಆಗಿ ಇರುವ 5 ಇನ್ನಿಂಗ್ಸ್ ನಲ್ಲಿ 2 ಅರ್ಧಶತಕ ಸೇರಿದಂತೆ 246 ರನ್‌ ಗಳಿಸಿ ಭಾರತ ತಂಡದ ಕಪ್‌ ರೇಸಿಗೆ ಶಕ್ತಿಯಾದರು! ಇವರು ಸದ್ಯ ಮುಂಬೈನ ಆದಾಯ ತೆರಿಗೆ ಇಲಾಖೆಯಲ್ಲಿ ನೌಕರಿ ಮಾಡುತ್ತಿದ್ದಾರೆ, ತಮ್ಮ ಇಡೀ ಕುಟುಂಬಕ್ಕೆ ಆಧಾರವಾಗಿದ್ದಾರೆ.

ದೀಪಿಕಾ ಒಬ್ಬ ಪರಿಪೂರ್ಣ ಆಲ್ ರೌಂಡರ್‌ ಎಂಬುದು ಅವರ ಆಟದ ಪ್ರತಿಯೊಂದು ಅಂಶದಿಂದ ಸ್ಪಷ್ಟವಾಗುತ್ತದೆ. ಬ್ಯಾಟಿಂಗ್ ನಲ್ಲಿ ಅವರು ಬಲಗೈ ಬ್ಯಾಟರ್‌ ಆಗಿ ಬಿಕ್ಕಟ್ಟಿನ ಕ್ಷಣಗಳಲ್ಲೂ ತಾಳ್ಮೆ ಕಳೆದುಕೊಳ್ಳದೆ, ಅಗತ್ಯವಿದ್ದಾಗ ಹೊಣೆ ಮತ್ತು ಬೌಂಡರಿಗಳನ್ನು ಬಾರಿಸುವ ಸಾಮರ್ಥ್ಯ ಹೊಂದಿದ್ದಾರೆ. ತಂಡಕ್ಕೆ ಸ್ಥೈರ್ಯ ನೀಡುವ ಮಧ್ಯಮ ಕ್ರಮದ ಸಾಂದರ್ಭಿಕ ಆಟಗಾರ್ತಿ ಎಂಬ ಹೆಗ್ಗಳಿಕೆ ಇವರಿಗೆ ಸರಿ ಹೊಂದುತ್ತದೆ.

ಬೌಲಿಂಗ್‌ ನಲ್ಲಿ ದೀಪಿಕಾ ವಿಕೆಟ್‌ ಪಡೆಯುವ ಚಾಕಚಕ್ಯತೆಯಿಂದ ಹೆಸರುವಾಸಿ, ಎದುರಾಳಿ ಬ್ಯಾಟರ್‌ ಗಳ ಮನೋಭಾವವನ್ನು ಗ್ರಹಿಸಿ, ತಕ್ಷಣಕ್ಕೆ ಬೌಲಿಂಗ್‌ ರೀತಿಯನ್ನು ಬದಲಾಯಿಸುವ ನಿಪುಣತೆ ಇವರ ಯಶಸ್ಸಿನ ಕೀಲಿಕೈ. ದೃಷ್ಟಿ ದೋಷವಿದ್ದರೂ, ಫೀಲ್ಡಿಂಗ್‌ ನಲ್ಲಿ ದೀಪಿಕಾ ಅಸಾಧಾರಣ. ಚೆಂಡಿನ ಸದ್ದು ಮತ್ತು ದಿಕ್ಕನ್ನು ಅರ್ಥ ಮಾಡಿಕೊಂಡು ಕ್ಷಣಾರ್ಧದಲ್ಲಿ ಡೈವ್ ಹೊಡೆದು ಚೆಂಡನ್ನು ತಡೆಯುವ ಇವರ ಚುರುಕುತನ ತಂಡಕ್ಕೆ ಅಮೂಲ್ಯ. ಎಲ್ಲ ವಿಭಾಗಗಳಲ್ಲೂ, ಇಂತಹ ಸಮತೋಲನ ತೋರಿಸುವ ದೀಪಿಕಾ ನಿಜವಾದ ಆಲ್ ರೌಂಡರ್‌.

ಬೆನ್ನಿಗೆ ನಿಂತ ಸಮರ್ಥನಂ ಸಂಸ್ಥೆ

ರಾಷ್ಟ್ರೀಯ ಪುರಸ್ಕಾರ ಪಡೆದ ಬೆಂಗಳೂರಿನ ಸಂಸ್ಥೆ ಸಮರ್ಥನಂ, ದೀಪಿಕಾ ಅಂತಹ ಎಷ್ಟೋ ಜನರಿಗೆ ಬೆಂಬಲ ನೀಡುತ್ತಾ ಬಂದಿದೆ. ಮುಖ್ಯವಾಗಿ ದೀಪಿಕಾ ವಿಚಾರದಲ್ಲಿ ಕ್ರಿಕೆಟ್‌ ಗೆ ಬೇಕಾದ ಖರ್ಚು ವೆಚ್ಚ ನೀಡಿ ಡಿಗ್ರಿ, ಕಲಿಯುವುದಕ್ಕೆ ಸಹಾಯ ಮಾಡಿತ್ತು. ಅದರೊಂದಿಗೆ ಸಮರ್ಥನಂ ಅಡಿಯಲ್ಲೇ ಮುನ್ನಡೆಯುವ ಕರ್ನಾಟಕ ತಂಡದ ನಾಯಕತ್ವ ನೀಡಿ, ರಾಷ್ಟ್ರೀಯ ತಂಡದಲ್ಲಿ ಆಯ್ಕೆಯಾಗುವಷ್ಟು ಬೆಂಬಲ ನೀಡಿತು. ಅಭ್ಯಾಸಕ್ಕೂ ಬೆಂಬಲಿಸಿತು. ಅಲ್ಲದೆ, ಇಂದಿಗೂ ನೂರಾರು ದೃಷ್ಟಿ ದೋಷ ಇರುವ ಮಕ್ಕಳಿಗೆ ಬೆಳಕಾಗಿ ಈ ಸಂಸ್ಥೆ ನಿಂತಿದೆ ಎನ್ನುವುದು ಗಮನೀಯ ಅಂಶ.

“ಒಬ್ಬ ಹೆಣ್ಣು ಅದೂ ಕೂಡ ನೇತ್ರ ದೋಷ ಇರುವ ಮಹಿಳೆ ಸಮಾಜದಲ್ಲಿ ಸಾಕಷ್ಟು ತೊಂದರೆ ಮತ್ತು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನಾವು ಸಾಧನೆ ಮಾಡುವುದಕ್ಕಾಗಿ ಹೊರಟಾಗೆಲ್ಲ ಮೊದಲಿಗೆ ತಮ್ಮ ತಾಯಿ ತಂದೆಯರೇ ಭಯಭೀತರಾಗುತ್ತಾರೆ, ಆತಂಕಗೊಳ್ಳುತ್ತಾರೆ.

“ನಮ್ಮ ಕೌಶಲ್ಯ ಮತ್ತು ನಮ್ಮ ಮನಸ್ಥಿತಿ ಬಗ್ಗೆ ಸಂಶಯ ಪಡುತ್ತಾರೆ. ಹಾಗೆ ಮಾಡಿದರೆ, ಯಾರಿಂದಲೂ ಸಾಧನೆ ಮಾಡಲು ಸಾಧ್ಯವಿಲ್ಲ. ನಾನು ಕೇಳಿಕೊಳ್ಳುವುದೇನೆಂದರೆ, ಒಂದು ವೇಳೆ ನಿಮ್ಮ ಮಗಳಲ್ಲಿ ಏನಾದರೂ ಪ್ರತಿಭೆ ಕಂಡರೆ ಅವರಿಗೆ ಅವಕಾಶ ನೀಡಿ, ಅವರು ಖಂಡಿತವಾಗ್ಯೂ ಸಾಧಿಸಿ ತೋರಿಸುತ್ತಾರೆ,” ಎನ್ನುವುದು ದೀಪಿಕಾರ ಮನದಾಳದ ಮಾತು.

“ನನ್ನ ಸಾಧನೆ ನನ್ನೊಬ್ಬಳದ್ದಲ್ಲ, ಅದು ಇಡೀ ತಂಡದ ಶ್ರಮ ಮತ್ತು ಪೋಷಕರ ತ್ಯಾಗದ ಫಲ,” ಎನ್ನುವ ಆಕೆಯ ವಿನಮ್ರತೆ ಎಲ್ಲರನ್ನೂ ಸೆಳೆಯುತ್ತದೆ.

“ದೃಷ್ಟಿ ಇಲ್ಲದಿರಬಹುದು, ಆದರೆ ನಾವು ಯಾರಿಗೂ ಕಡಿಮೆಯೇನಲ್ಲ. ಅವಕಾಶ ಸಿಕ್ಕರೆ ಜಗತ್ತನ್ನೇ ಗೆಲ್ಲಬಲ್ಲೆ! ಕನಸು ಕಾಣಲು ಕಣ್ಣುಗಳೇ ಬೇಕಿಲ್ಲ, ಮನಸ್ಸು ಇದ್ದರೆ ಸಾಕು,” ಎನ್ನುವ ದೀಪಿಕಾರ ಸಂದೇಶ ಗುರಿ ಸಾಧಿಸುವ ಪ್ರತಿಯೊಬ್ಬರಿಗೂ ಪ್ರೇರಣಾದಾಯಕ.

blend-kriket-teem-2

ರಾಘವೇಂದ್ರ ಅಡಿಗ ಎಚ್ಚೆನ್

“ಇಚ್ಛಾಶಕ್ತಿ ಒಂದಿದ್ದರೆ ಯಾವುದೂ ಅಸಾಧ್ಯವಲ್ಲ!”

ವಿ. ಕಾವ್ಯಾ ಒಂದು ಚಿಕ್ಕ ಮುರುಕಲು ಮನೆ, ಅದರಲ್ಲಿ ಕೂದಲು ಮಾಸಿದ ಹಿರಿಯ ದಂಪತಿ, ಸಾದಾ ಸೀದಾ ಉಡುಪಿನ ಹೆಣ್ಣುಮಗಳೊಬ್ಬಳಿದ್ದಾಳೆ. ಆದರೆ ಇದು ಸಾಮಾನ್ಯ ಹೆಣ್ಣೊಬ್ಬಳ ಕಥೆ ಅಲ್ಲ. ಏಕೆಂದರೆ ಭಾರತಕ್ಕೆ ವಿಶ್ವಕಪ್‌ ಗೆದ್ದುಕೊಟ್ಟ ಹುಡುಗಿಯ ಕಥೆ ಇದು.

ಕಾವ್ಯಾ ವಿ. ಕಳೆದ ವರ್ಷ ನಡೆದ ಅಂಧರ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾರತಕ್ಕೆ ಅಂಧರ ವಿಶ್ವಕಪ್‌ ಟ್ರೋಫಿ ದೊರಕಿಸಿಕೊಟ್ಟ ಹೆಮ್ಮೆಯ ಕನ್ನಡತಿ! ಇವರ ಊರು ಶಿವಮೊಗ್ಗದ ರಿಪ್ಪನ್‌ ಪೇಟೆ. ರಿಪ್ಪನ್‌ ಪೇಟೆಯ ಬರುವೆ ಗ್ರಾಮದ ಆಚಾರ್ ಕೇರಿ ನಿವಾಸಿ ಜಯಮ್ಮ ವೆಂಕಟೇಶ್‌ ಆಚಾರ್‌ ದಂಪತಿಯ ಪುತ್ರಿ. ಒಟ್ಟು 4 ಜನ ಸಹೋದರಿಯರ ಬಡ ಕುಟುಂಬದಲ್ಲಿ ಹುಟ್ಟಿದ ಈಕೆ ನಾಲ್ಕನೆಯವರು.

ಮೂರು ಅಕ್ಕಂದಿರು ಹಾಗೂ ಒಬ್ಬ ತಂಗಿ ಸೇರಿ ಎಲ್ಲರೂ ಆರೋಗ್ಯವಾಗಿದ್ದು, ಕಾವ್ಯಾಗೆ ದೃಷ್ಟಿ ದೋಷವಿದೆ. ನಾಲ್ಕನೇ ತರಗತಿಯವರೆಗೂ ಪಟ್ಟಣದ ಬರುವೆ ಶಾಲೆಯಲ್ಲಿ ವ್ಯಾಸಂಗ ಮಾಡಿ ದೃಷ್ಟಿಯಲ್ಲಿ ಸಮಸ್ಯೆ ಉಂಟಾದ ಕಾರಣ ಶಿವಮೊಗ್ಗದ ಗೋಪಾಲ ಬಡಾವಣೆಯ ಅಂಧರ ಶಾಲೆಯಲ್ಲಿ 2009-2015ರವರೆಗೆ ಶಿಕ್ಷಣ ಪಡೆದುಕೊಂಡರು.

ಬಳಿಕ ಬೆಂಗಳೂರಿನ ಸಮರ್ಥನಂ ಅಂಧರ ವಿಕಾಸ ಕೇಂದ್ರದಲ್ಲಿ ಬಿ.ಎ. ಪದವಿ ಪೂರೈಸಿದ ಕಾವ್ಯಾ ಪ್ರಸ್ತುತ ಜ್ಞಾನಭಾರತಿ ಎಜುಕೇಶನ್‌ ಸೊಸೈಟಿಯಲ್ಲಿ ಎಂ.ಎ. ವ್ಯಾಸಂಗ ಮಾಡುತ್ತಿದ್ದಾರೆ.

ಕಾವ್ಯಾರ ಕ್ರೀಡಾ ಜೀವನಕ್ಕೆ ಶಿವಮೊಗ್ಗದ ಅಂಧರ ವಿಕಾಸ ಕೇಂದ್ರದ ಶಿಕ್ಷಕರಾದ ಸುರೇಶ್‌ ಹಾಗೂ ಈಶ್ವರ್‌ ಪ್ರೇರಣೆ ಮತ್ತು ಮಾರ್ಗದರ್ಶನ ನೀಡಿದ್ದಾರೆ. ಬೆಂಗಳೂರಿನ ಶಿಖಾ ಶೆಟ್ಟಿ ಮತ್ತು ಚಂದು ನೀಡಿದ ಕೋಚಿಂಗ್‌ ಅವರ ಆಟಕ್ಕೆ ಶಕ್ತಿ ತುಂಬಿದೆ. ಜ್ಞಾನಭಾರತಿ ಎಜುಕೇಶನ್‌ ಸೊಸೈಟಿಯ ಸಹಕಾರ ಸಹ ಕಾವ್ಯಾರ ಕ್ರೀಡಾ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವಹಿಸಿದೆ. ಕಾವ್ಯಾ 2022ರಿಂದ ನಾಲ್ಕು ರಾಷ್ಟ್ರಿಯ ಟೂರ್ನಿಗಳಲ್ಲಿ ಆಡಿದ್ದಾರೆ. ಎರಡು ಅಂತಾರಾಷ್ಟ್ರೀಯ ಪಂದ್ಯಗಳನ್ನು ಸಹ ಆಡಿದ್ದಾರೆ. ವಿಶ್ವಕಪ್ ನಲ್ಲಿ ಆಡಲು ಆಯ್ಕೆಯಾದದ್ದು ಇದೇ ಮೊದಲು ಎನ್ನುವ ಕಾವ್ಯಾ, ಕ್ರಿಕೆಟ್‌ ಗೆ ಬರುವ ಮುನ್ನ ಅಥ್ಲೆಟಿಕ್ಸ್ ನಲ್ಲೂ ರನ್ನಿಂಗ್‌, ಲಾಂಗ್ ಜಂಪ್‌ ನಂತಹ ಸ್ಪೋರ್ಟ್ಸ್ ನಲ್ಲಿ ಕಾವ್ಯಾ ಭಾಗವಹಿಸಿದ್ದರು.

`ಈ ಜಗತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ. ಯಾವುದೇ ವ್ಯಕ್ತಿಗೂ ಇಚ್ಛಾಶಕ್ತಿಯೇ ದೊಡ್ಡ ಸಂಪತ್ತು,’ ಎನ್ನುವ ಕಾವ್ಯಾ, ಶಾಲಾ ದಿನಗಳಲ್ಲಿ ಶಿಕ್ಷಕರು ನನಗೆ ನನ್ನೊಳಗೆ ಕೀಳರಿಮೆ ಮತ್ತು ಭಯ ಇರಬಾರದು ಎಂದು ಹೇಳುತ್ತಿದ್ದರು. `ಕಣ್ಣು ಕಾಣುವುದಿಲ್ಲ ಎಂಬ ಕಾರಣಕ್ಕೆ ಜನ ನನ್ನನ್ನು ತಾತ್ಸಾರದಿಂದ ಕಾಣುತ್ತಿದ್ದರು. ಜೊತೆಗೆ ಓದುತ್ತಿದ್ದರೂ ಕೇವಲವಾಗಿ ನಡೆಸಿಕೊಳ್ಳುತ್ತಿದ್ದರು. ಆ ನೋವು ಅವಮಾನಗಳೇ ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿವೆ ಎನ್ನುತ್ತಾರೆ ಕಾವ್ಯಾ.

`ಹಿರಿಯರು ನನಗೆ ತುಂಬಾ ಪ್ರೋತ್ಸಾಹ ನೀಡುತ್ತಿದ್ದರು. ತುಂಬಾ ಬಡತನದಿಂದ ಬಂದಿದ್ದು, ಪೋಷಕರು ಸಣ್ಣಪುಟ್ಟ ಕೆಲಸಗಳನ್ನು ಮಾಡುವ ಮೂಲಕ ಬದುಕು ಸಾಗಿಸುತ್ತಿದ್ದಾರೆ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬುದು ಅಪ್ಪನ ಕನಸಾಗಿತ್ತು.

`ಈ ಕಾರಣಕ್ಕೇ ಅವರು ಬಡತನವನ್ನೂ ಲೆಕ್ಕಿಸದೆ ಶಿವಮೊಗ್ಗದ ಅಂಧರ ಶಾಲೆಗೆ ಸೇರಿಸಿದರು. ನನ್ನನ್ನು ಅಲ್ಲಿ ಬಿಟ್ಟು ಬರಲು ಮನಸ್ಸಿಲ್ಲದಿದ್ದರೂ ಕಠಿಣ ನಿರ್ಧಾರ ಕೈಗೊಂಡರು. ಆಗ ಊರಿನಿಂದ ಶಿವಮೊಗ್ಗಕ್ಕೆ ಹೋಗಲು ಬಸ್‌ ಟಿಕೆಟ್‌ ಗೂ ಅವರ ಬಳಿ ದುಡ್ಡಿರಲಿಲ್ಲ. ಅದಕ್ಕಾಗಿ ಅವರಿವರ ಬಳಿ ಸಾಲ ಮಾಡಿದ್ದಿದೆ.

`ಹಸಿವಿನಿಂದ ಬಳಲುತ್ತಿದ್ದ ನನಗೆ ಆಗ ಉಪಾಹಾರ ಕೊಡಿಸಲೂ ಆಗದ ಸ್ಥಿತಿಯಲ್ಲಿ ಅವರಿದ್ದರು. ಕಷ್ಟದಲ್ಲಿಯೂ ನಮ್ಮ ತಂದೆ ನಮ್ಮನ್ನು ಈ ಮಟ್ಟಕ್ಕೆ ಬೆಳೆಸಿದ್ದಾರೆ. ಆ ದಿನಗಳನ್ನು ನೆನೆಪಿಸಿಕೊಂಡಾಗ ಈಗಲೂ ಹೃದಯ ಭಾರವಾಗುತ್ತದೆ,’ ಎನ್ನುತ್ತಾರೆ ಕಾವ್ಯಾ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ