ಡಾ. ನವ್ಯಾ ಒಬ್ಬ ಯಶಸ್ವಿ ದಂತವೈದ್ಯೆ ಮಾತ್ರವಲ್ಲದೆ, ಅದ್ಭುತ ಕಲಾವಿದೆಯೂ ಹೌದು. ಇವರ ಬಹುಮುಖ ಸಾಧನೆಗಳ ಬಗ್ಗೆ ವಿವರವಾಗಿ ತಿಳಿಯೋಣವೇ…..?
ಮಗಳಿಗೆ ವಿಪರೀತ ಹಲ್ಲು ನೋವು ಎಂದು ನರಳುತ್ತಿದ್ದಾಗ, ನಮ್ಮ ಬಡಾವಣೆಯ ಸಮೀಪವೇ ಇದ್ದ ಆದ್ಯ ಡೆಂಟಲ್ ಕ್ಲಿನಿಕ್ ಗೆ ಭೇಟಿಯಾಗಲು ಅಪಾಯಿಂಟ್ ಮೆಂಟ್ ತೆಗೆದುಕೊಂಡು ನಿಗದಿತ ಅವಧಿಗೆ ಹತ್ತು ನಿಮಿಷ ಮೊದಲೇ ಹೋದೆ.
ವೇಟಿಂಗ್ ರೂಮ್ ನಲ್ಲಿ ಕುಳಿತು ಸುಮ್ಮನೆ ಕಣ್ಣಾಡಿಸಿದೆ. ಅಲ್ಲಲ್ಲಿ ಗೋಡೆಯನ್ನು ಅಲಂಕರಿಸಿರುವ ಪೇಂಟಿಂಗ್ ಸೆಳೆಯುತ್ತಿತ್ತು. ಮಗಳು ಪರೀಕ್ಷಾ ಕೊಠಡಿಗೆ ಹೋದಾಗ, ಮತ್ತೆ ಕ್ಲಿನಿಕ್ ನ ಒಳ ಗೋಡೆಗಳತ್ತ ಸಾಗಿದೆ.

ಒಂದಕ್ಕಿಂತ ಒಂದು ಅದ್ಭುತ ಚಿತ್ರಗಳು. ಮತ್ತೊಂದೆಡೆ ಕನ್ನಡ, ಇಂಗ್ಲಿಷ್ ಪತ್ರಿಕೆಗಳು, ಹೆಸರಾಂತ ಕನ್ನಡ ಕೃತಿಗಳು! ಕುವೆಂಪುರವರ ಪುಸ್ತಕವೊಂದನ್ನು ತೆಗೆದು ನೋಡುತ್ತಿದ್ದೆ. ಅಷ್ಟರಲ್ಲಿ ಡಾಕ್ಟರ್ ರಿಂದ ಕರೆ, ಮಗಳ ಹಲ್ಲಿನ ತೊಂದರೆ ಮತ್ತು ಚಿಕಿತ್ಸೆ ಕುರಿತು ಮಾಹಿತಿ ನೀಡಿದರು. ನನಗೆ ಆಪ್ತವೆನಿಸಿದ್ದು, ನಗುಮುಖದಿಂದ ಕನ್ನಡದಲ್ಲಿ ಸರಳವಾಗಿ ತಿಳಿಹೇಳಿದ್ದು, ಅಲ್ಲೊಂದು ಸ್ನೇಹಮಯ ವಾತಾವರಣ. ನಂತರ ನಾನು ಕಂಡಿದ್ದ ಪೇಂಟಿಂಗ್ ಕುರಿತು ಕುತೂಹಲವಿದ್ದದ್ದರಿಂದ ಡಾಕ್ಟರ್ ಬಳಿ ಕೇಳಿದೆ. ಆ ಪೇಂಟಿಂಗ್ ಒಡತಿ ತಾವೇ ಎಂದಾಗ ಬಹಳ ಹೆಮ್ಮೆ ಎನಿಸಿತು.

ಹೆಸರಿನಲ್ಲೇ ಕಲೆಯ ಸಾಂಗತ್ಯ!
ಉಡುಪಿ ಜಿಲ್ಲೆಯ ಪ್ರಾಕೃತಿಕ ಸೌಂದರ್ಯದ ನೆಲೆಯಾದ ಕುಂದಾಪುರ ಇವರ ಜನ್ಮಸ್ಥಳ. ತಂದೆ ಬಿ.ಜಿ. ಕಲೈಕರ್, ವ್ಯಂಗ್ಯ ಚಿತ್ರ ಕಲಾವಿದರು. ತಾಯಿ ಸರಸ್ವತಿ ಕಲೈಕರ್, ನವ್ಯಾ ತಾಯಿಯ ಹೆಸರಿಗೆ ತಕ್ಕಂತೆ ಸರಸ್ವತಿ ಪುತ್ರಿಯೇ! ಬಾಲ್ಯದಿಂದಲೂ ಆಟೋಟಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ನವ್ಯಾ, ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವನ್ನು ಕುಂದಾಪುರದಲ್ಲಿ ಮುಗಿಸಿದರು.

ಬಾಲ್ಯದ ಆಟೋಟಗಳು
ಏಳನೇ ತರಗತಿಯಲ್ಲಿದ್ದಾಗ, ರಾಜ್ಯ ಮಟ್ಟದ ಸ್ಪೋರ್ಟ್ಸ್ ಶಾಲೆಯಾದ ಡಿವೈಎಸ್‌ಎಸ್ ನಲ್ಲಿ ಆಯ್ಕೆಯಾಗಿ ಹೈಸ್ಕೂಲ್ ಶಿಕ್ಷಣವನ್ನು ಅದೇ ಬೋರ್ಡಿಂಗ್ ಶಾಲೆಯಲ್ಲಿ ಪಡೆದರು. ಆ ದಿನಗಳಲ್ಲಿ ಅವರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ 400-800 ಮೀ. ಹರ್ಡ್ಸ್ ವಿಭಾಗದಲ್ಲಿ ಪ್ರತಿನಿಧಿಸಿ ಬಹುಮಾನಗಳನ್ನು ಗಳಿಸಿದ್ದಾರೆ.
ಈ ಮುಖ್ಯವಾದ ಹಂತದಲ್ಲಿ ಕ್ರೀಡೆಯೋ ಅಥವಾ ಉನ್ನತ ವ್ಯಾಸಂಗವೋ? ಯಾವ ಕ್ಷೇತ್ರದಲ್ಲಿ ಮುಂದುವರಿಯುವುದು ಎಂಬ ಪ್ರಶ್ನೆ ಕಾಡಿದಾಗ ಗೆದ್ದದ್ದು ಚಿಕ್ಕವಳಾಗಿದ್ದಿನಿಂದ ವೈದ್ಯೆಯಾಗಬೇಕೆಂದು ಕಂಡಿದ್ದ ಕನಸು. ದಂತವೈದ್ಯಕೀಯ ವ್ಯಾಸಂಗ ಅಂತೆಯೇ ಓದಿನಲ್ಲಿ ಗಮನ ಹರಿಸಿ ಪಿಯುಸಿಯನ್ನು ಪುನಃ ತವರೂರಿನಲ್ಲಿ ಮುಗಿಸಿ ತುಮಕೂರಿನ ಪ್ರಖ್ಯಾತ ಸಿದ್ದಾರ್ಥ ದಂತವೈದ್ಯಕೀಯ ಕಾಲೇಜಿನಲ್ಲಿ ಬಿ.ಡಿ.ಎಸ್ ಪದವಿ, ಅಲೈನರ್ಸ್‌ಕಾಸ್ಮೆಟಿಕ್‌ಡೆಂಟಿಸ್ಟ್ರಿ ಕೋರ್ಸ್ ನಲ್ಲಿ ಪರಿಣತಿ ಪಡೆದಿದ್ದಾರೆ.

ಆದ್ಯ ಡೆಂಟಲ್ ಕೇರ್
ಶ್ರೀಕೃಷ್ಣದೇವರಾಯ ಡೆಂಟಲ್ ಕಾಲೇಜಿನಲ್ಲಿ ಎರಡು ವರ್ಷ ಜೂನಿಯರ್ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ ನಂತರ ತಮ್ಮ ಪತಿ ಡಾ. ದೇವರಾಜ್ ದೇವಯ್ಯರೊಂದಿಗೆ `ಆದ್ಯ ಡೆಂಟಲ್ ಕೇರ್’ ಪ್ರಾರಂಭಿಸಿದರು. ಮಗ ಆದ್ಯ ಹುಟ್ಟಿದ ಮೇಲೆ ಒಂದೂವರೆ ವರ್ಷದ ಬ್ರೇಕ್. ಆ ಅವಧಿಯಲ್ಲಿಯೇ ಅವರಲ್ಲಿ ಮರೆಯಾಗಿದ್ದ ಚಿತ್ರಕಲೆಯ ಆಸಕ್ತಿಗೆ ನವ ಚೇತನ ಹುಟ್ಟಿದ್ದು.
ತಂದೆ ವ್ಯಂಗ್ಯ ಚಿತ್ರಕಲಾವಿದರು. ಸಹಜವಾಗಿಯೇ ಮನೆಯಲ್ಲಿ ಬಣ್ಣ, ಚಿತ್ರಕಲೆಯ ವಾತಾವರಣ. ಆಸಕ್ತಿಯಿಂದ ಚಿತ್ರಗಳನ್ನು ಬಿಡಿಸುತ್ತಿದ್ದ ಬಾಲ್ಯದ ದಿನಗಳು ಪುನಶ್ಚೇತನಗೊಂಡು, ಸ್ವಚಂದವಾಗಿ ಬೆಳಕಿಗೆ ಬಂದದ್ದು ಮಗುವಿನ ಲಾಲನೆ ಪಾಲನೆ ನಡುವೆ ಬಿಡುವಿನ ವೇಳೆಯಲ್ಲಿ. ಈ ದಿಸೆಯಲ್ಲಿ ವೀಣಾ ಚಂದ್ರಶೇಖರ್ ರಿಂದ ತೈಲ ಚಿತ್ರಕಲೆ ಕಲಿತರು.

ಚಿತ್ರಕಲೆಯ ಉಪಾಸನೆ
2020ರಲ್ಲಿ ಕೋವಿಡ್ ನಿಂದ ಜಗತ್ತೇ ತಲ್ಲಣಿಸಿ ಲಾಕ್ ಡೌನ್ ಘೋಷಣೆಯಾಗಿದ್ದ 21 ದಿನಗಳಲ್ಲಿ ಇವರ ಬೇಸರ ನೀಗಿಸಿದ್ದು ಇದೇ ಚಿತ್ರಕಲೆ. 21 ದಿನಕ್ಕೆ 21 ಪೇಟಿಂಗ್ ಎಂಬ ಯೋಜನೆ ಹಾಕಿ ಚಿತ್ರಗಳನ್ನು ಬಿಡಿಸಿದ ಹೆಗ್ಗಳಿಕೆ ಇವರದ್ದು.
ಚಿಕಿತ್ಸೆಗೆ ಬರುವ ರೋಗಿಗಳು ಮತ್ತು ಅವರ ಸಂಗಡಿಗರಿಗೆ ಚಿಕಿತ್ಸಾಲಯ ಒಂದು ಮಿನಿ ಚಿತ್ರಕಲಾಗಾರದಂತೆ ಭಾಸವಾಗುತ್ತದೆ. ವಿವಿಧ ರೀತಿಯ ಚಿತ್ರಪಟಗಳಿಂದ ನಳನಳಿಸಿರುವ ಇವರ ಕ್ಲಿನಿಕ್ ಕಲಾರಾಧಕರಿಗೆ ಸುಗ್ಗಿ! ತೈಲಚಿತ್ರ, ಆ್ಯಕ್ರಿಲಿಕ್, ಪೆನ್ಸಿಲ್ ಸ್ಕೆಚಿಂಗ್ ಗಳಲ್ಲಿ ಇವರ ಕೈಚಳಕ ಎದ್ದು ಕಾಣುತ್ತದೆ.

ಚಿತ್ರಕಲಾ ಪ್ರದರ್ಶನಗಳು
ಇವರ ಚಿತ್ರಗಳು ಕರ್ನಾಟಕ ಚಿತ್ರಸಂತೆಯಲ್ಲಿ 4 ಬಾರಿ, ಶ್ರಾವ್ಯಾ ಆರ್ಟ್ಸ್ ಎಕ್ಸಿಬಿಷನ್, ಡಾಕ್ಟರ್ಸ್ ಟ್ಯಾಲೆಂಟ್ ಶೋ ವೇದಿಕೆಗಳಲ್ಲಿ ಪ್ರದರ್ಶನಗೊಂಡಿವೆ. ಬಿಡುವಿದ್ದಾಗೆಲ್ಲ ಕುಂಚ ಹಿಡಿಯುವ ತುಡಿತ ಇದ್ದೇ ಇದೆ. ಇವೆಲ್ಲಕ್ಕೂ ಮೀರಿ ಡಾ. ನವ್ಯಾ ಭರತನಾಟ್ಯದಲ್ಲಿ ಅಪಾರ ಪರಿಣತಿ ಹೊಂದಿದ್ದಾರೆ.

ಯುವ ಪೀಳಿಗೆಗೆ ಸಂದೇಶ
ಡಾ. ನವ್ಯಾ, ಇಂದಿನ ಯುವ ಪೀಳಿಗೆಗೆ ನೀಡುವ ಮಹತ್ವದ ಸಂದೇಶವನ್ನು ಅವರದೇ ಮಾತುಗಳಲ್ಲಿ ಹೇಳುವುದಾದರೆ, “ನಿಮ್ಮ ಇಷ್ಟ ಆಸಕ್ತಿಗಳನ್ನು ಗುರುತಿಸಿ ಅದಕ್ಕೆ ಸಮಯ ಒದಗಿಸಿಕೊಳ್ಳಿ.
“ಅವು ಹವ್ಯಾಸಗಳಾಗಿ ಬೆಳೆದಾಗ ಒತ್ತಡ ದೂರವಾಗಿ, ಬದುಕು ಉತ್ಸಾಹ, ಉಲ್ಲಾಸಕರ ಮತ್ತು ನಿಮ್ಮೊಳಗಿನ ನಿಮ್ಮನ್ನು ಜಾಗೃತಗೊಳಿಸಬಹುದು. ಹವ್ಯಾಸಗಳು ಎಂದಿಗೂ ರದ್ದಿಯಲ್ಲ. ಬದಲು ಆನಂದಮಯ, ರಸಭರಿತ ಜೀವನಕ್ಕೆ ಪೂರಕ.
“ಫೋನ್ ಗಳಿಗೆ ಅಂಟಿಕೊಳ್ಳುವುದನ್ನು ಬಿಟ್ಟು ಕ್ರೀಡೆ, ಸಂಗೀತ, ಸಾಹಿತ್ಯ, ಕಲೆ ಇತ್ಯಾದಿ ಒಳ್ಳೆಯ ಹವ್ಯಾಸಗಳನ್ನು ನಮ್ಮದಾಗಿಸಿಕೊಂಡರೆ, ದುರ್ಗುಣ, ದುಶ್ಚಟಗಳು ನಮ್ಮ ಹತ್ತಿರಕ್ಕೂ ನುಸುಳ.”

ಸಮಾಜಕ್ಕೆ ಕೊಡುಗೆ
ದಂತ ವೈದ್ಯೆಯಾಗಿ ಹಲ್ಲಿನ ಚಿಕಿತ್ಸೆಗೆ ನಾಜೂಕಾಗಿ ಶಸ್ತ್ರಚಿಕಿತ್ಸೆಯಲ್ಲಿ ತೊಡಗಿ ರೋಗಿಗಳ ಮುಖದಲ್ಲಿ ನಗುವನ್ನು ಮರಳಿಸುತ್ತಲೇ, ಮತ್ತೊಂದೆಡೆ ಅಂದವಾಗಿ ಕುಂಚದಿಂದ ಅನೇಕಾನೇಕ ಚಿತ್ರಗಳನ್ನು ಬಿಡಿಸಿ ಕಲಾರಸಿಕರ ಮನಸ್ಸನ್ನೂ ಗೆದ್ದಿದ್ದಾರೆ. ಸಮಾಜಕ್ಕೆ ಇವರ ಕೊಡುಗೆ ಶ್ಲಾಘನೀಯ. ಡಾ. ನವ್ಯಾ ಒಬ್ಬ ಯಶಸ್ವಿ ದಂತವೈದ್ಯೆ ಮಾತ್ರವಲ್ಲದೆ, ಅದ್ಭುತ ಕಲಾವಿದೆಯೂ ಹೌದು. ಇದು ಚಿಕಿತ್ಸೆಗೆಂದು ಭೇಟಿ ನೀಡುವವರ, ಅವರ ಸಂಬಂಧಿಗಳ ಮುಕ್ತ ಅಭಿನಂದನೀಯ ಮಾತುಗಳು.
– ಕೆ.ವಿ. ರಾಜಲಕ್ಷ್ಮಿ





