– ರಾಘವೇಂದ್ರ ಅಡಿಗ ಎಚ್ಚೆನ್.

ಕನ್ನಡ ಚಿತ್ರರಂಗದ ನಟ, ಗಾಯಕ, ನಿರ್ಮಾಪಕ ಮತ್ತು ವಿತರಕ ಕಮಲ್ ರಾಜ್ (ಕಲೀಂ ಪಾಷಾ) ಅವರ ಆಯೋಜನೆಯಲ್ಲಿ ಮೂಡಿಬರುತ್ತಿರುವ ‘ಚಿಟ್ಟೀ ಆಯೀ ಹೈ’ ಕಾರ್ಯಕ್ರಮ ಇದೇ 2026ರ ಸೆ. 19ರ ಶನಿವಾರ ಸಂಜೆ 6.00 ಗಂಟೆಗೆ ಬೆಂಗಳೂರಿನ ವಸಂತನಗರದಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಆಡಿಟೋರಿಯಂನಲ್ಲಿ ನಡೆಯಲಿದೆ. ಸಮಾರಂಭದಲ್ಲಿ ಭಾರತೀಯ ಸಂಗೀತ, ಸಿನೆಮಾ, ಉದ್ಯಮ, ರಾಜಕೀಯ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

chitti

ಇದರ ತಯಾರಿ ಭರದಿಂದ ಸಾಗಿದೆ.
ಕಾರ್ಯಕ್ರಮದ ಪೋಸ್ಟರ್ ಮತ್ತು ಆಹ್ವಾನ ಪತ್ರಿಕೆ ಅಧಿಕೃತವಾಗಿ ಬಿಡುಗಡೆಯಾಗಿದೆ. ಹಿರಿಯ ನಟಿ ಶ್ರೀಮತಿ ಭವ್ಯಾ, ನಟ ಪ್ರಥಮ್, ಕಮಲ್ ರಾಜ್ (ಕಲೀಂ ಪಾಷಾ) ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಕಾರ್ಯಕ್ರಮದ ಪೋಸ್ಟರ್ ಮತ್ತು ಆಹ್ವಾನ ಪತ್ರಿಕೆ ಬಿಡುಗಡೆ ಆಗಿದೆ.

1001815048

ಈ ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಹಿರಿಯ ನಟಿ ಶ್ರೀಮತಿ ಭವ್ಯಾ, ‘ಭಾರತೀಯ ಸಂಗೀತ ಲೋಕದ ವಿವಿಧ ಪ್ರಾಕಾರದ ಸಂಗೀತ ಮತ್ತು ಗೀತೆಗಳನ್ನು ‘ಚಿಟ್ಟೀ ಆಯೀ ಹೈ’ ಕಾರ್ಯಕ್ರಮದ ಮೂಲಕ ಒಂದೇ ವೇದಿಕೆಗೆ ತರುತ್ತಿರುವುದು ಕರ್ನಾಟಕದ ಮಟ್ಟಿಗೆ ಹೊಸ ಪ್ರಯೋಗ. ಭಾರತದ ‘ಗಾನ ಕೋಗಿಲೆ’ ಲತಾ ಮಂಗೇಶ್ಕರ್ ಅವರ ಸಂಸ್ಮರಣೆಯಲ್ಲಿ ಈ ಕಾರ್ಯಕ್ರಮ ತುಂಬ ಅರ್ಥಪೂರ್ಣವಾಗಿ ಮೂಡಿಬರುತ್ತಿದೆ. ಎಲ್ಲಾ ಥರದ ಸಂಗೀತವನ್ನೂ ಆಸ್ವಾಧಿಸುವವರಿಗೆ ಈ ಕಾರ್ಯಕ್ರಮ ಹೊಸ ಅನುಭವ, ಆನಂದ ನೀಡಲಿದೆ. ಸಂಗೀತ ಮತ್ತು ಕೇಳುಗರನ್ನು ಬೆಸೆಯುವ ಇಂಥ ಕಾರ್ಯಕ್ರಮ ಆಯೋಜಿಸಿರುವ ಕಮಲ್ ರಾಜ್ (ಕಲೀಂ ಪಾಷಾ) ಅವರ ಪ್ರಯತ್ನ ಎಲ್ಲರೂ ಮೆಚ್ಚುವಂಥದ್ದು’ ಎಂದರು.

1001815040

ಕಾರ್ಯಕ್ರಮದ ಬಗ್ಗೆ ಮಾತನಾಡಿದ ನಟ, ನಿರ್ಮಾಪಕ, ಗಾಯಕ ಮತ್ತು ಆಯೋಜಕ ಕಮಲ್ ರಾಜ್ (ಕಲೀಂ ಪಾಷಾ), ‘ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಸಂಸ್ಮರಣೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಲತಾ ಮಂಗೇಶ್ಕರ್ ಅವರ ಸೋದರಿ ಉಷಾ ಮಂಗೇಶ್ಕರ್ ಮತ್ತು ಅವರ ಕುಟುಂಬ ವರ್ಗದವರು ಭಾಗಿಯಾಗಲಿದ್ದಾರೆ. ಭಾರತದ ವಿವಿಧ ಭಾಷೆಯ ಅನೇಕ ಗಾಯಕರು ಹತ್ತಾರು ಗೀತೆಗಳಿಗೆ ಧ್ವನಿಯಾಗಲಿದ್ದಾರೆ. ಇದು ಬೆಂಗಳೂರು ಹಾಗೂ ಸಮಸ್ತ ಕರ್ನಾಟಕದ ಸಂಗೀತ ಪ್ರೇಮಿಗಳಿಗೆ ಹೆಮ್ಮೆಯ ಐತಿಹಾಸಿಕ ಕ್ಷಣವಾಗಲಿದೆ. ಈ ಕಾರ್ಯಕ್ರಮ ಕೇವಲ ವೇದಿಕೆ ಪ್ರದರ್ಶನವಾಗಿರುವುದಿಲ್ಲ. ಭಾರತದ ವಿವಿಧ ಭಾಷೆ, ಪ್ರದೇಶ ಮತ್ತು ಸಂಸ್ಕೃತಿಗಳ ಎಲ್ಲೆಯನ್ನು ಮೀರಿ ಜನರ ಹೃದಯಗಳನ್ನು ಸಂಗೀತದ ಮೂಲಕ ಒಂದಾಗಿಸುವ ಪ್ರಯತ್ನವಾಗಿದೆ. ಹಿಂದೂಸ್ಥಾನಿ, ಕರ್ನಾಟಿಕ್, ಘಜಲ್, ಸೂಫೀ ಹೀಗೆ ಹಲವು ಶೈಲಿಯ ಗೀತೆಗಳು ಇಲ್ಲಿ ಅನಾವರಣವಾಗಲಿದೆ’ ಎಂದರು.

1001815049

ಕಾರ್ಯಕ್ರಮದಲ್ಲಿ ಹಾಜರಿದ್ದ ನಟ ಪ್ರಥಮ್ ಮತ್ತು ಇತರರು ‘ಚಿಟ್ಟೀ ಆಯೀ ಹೈ’ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ಮತ್ತು ನಿರೀಕ್ಷೆಯ ಮಾತುಗಳನ್ನಾಡಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ