Sj*
ಭಾರತೀಯ ಚಿತ್ರರಂಗದ ಜನಪ್ರಿಯ ಗಾಯಕಿ, ‘ಭಾರತ ರತ್ನ’ ದಿ. ಲತಾ ಮಂಗೇಶ್ಕರ್ ಅವರ ಸ್ಮರಣಾರ್ಥವಾಗಿ ಬೆಂಗಳೂರಿನಲ್ಲಿ ‘ಚಿಟ್ಟೀ ಆಯೀ ಹೈ’ ಎಂಬ ಹೆಸರಿನಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದ್ದು, ಇದರ ತಯಾರಿ ಭರದಿಂದ ಸಾಗಿದೆ.
ಕನ್ನಡ ಚಿತ್ರರಂಗದ ನಟ, ಗಾಯಕ, ನಿರ್ಮಾಪಕ ಮತ್ತು ವಿತರಕ ಕಮಲ್ ರಾಜ್ (ಕಲೀಂ ಪಾಷಾ) ಅವರ ಆಯೋಜನೆಯಲ್ಲಿ ಮೂಡಿಬರುತ್ತಿರುವ ‘ಚಿಟ್ಟೀ ಆಯೀ ಹೈ’ ಕಾರ್ಯಕ್ರಮ ಇದೇ 2026ರ ಸೆ. 19ರ ಶನಿವಾರ ಸಂಜೆ 6.00 ಗಂಟೆಗೆ ಬೆಂಗಳೂರಿನ ವಸಂತನಗರದಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಆಡಿಟೋರಿಯಂನಲ್ಲಿ ನಡೆಯಲಿದೆ. ಸಮಾರಂಭದಲ್ಲಿ ಭಾರತೀಯ ಸಂಗೀತ, ಸಿನೆಮಾ, ಉದ್ಯಮ, ರಾಜಕೀಯ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ.
ಸದ್ಯ ‘ಚಿಟ್ಟೀ ಆಯೀ ಹೈ’ ಕಾರ್ಯಕ್ರಮದ ತಯಾರಿ ನಡೆಯುತ್ತಿದ್ದು, ಇದೇ ವೇಳೆ ಕಾರ್ಯಕ್ರಮದ ಪೋಸ್ಟರ್ ಮತ್ತು ಆಹ್ವಾನ ಪತ್ರಿಕೆ ಅಧಿಕೃತವಾಗಿ ಬಿಡುಗಡೆಯಾಗಿದೆ. ಹಿರಿಯ ನಟಿ ಶ್ರೀಮತಿ ಭವ್ಯಾ, ನಟ ಪ್ರಥಮ್, ಕಮಲ್ ರಾಜ್ (ಕಲೀಂ ಪಾಷಾ) ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಕಾರ್ಯಕ್ರಮದ ಪೋಸ್ಟರ್ ಮತ್ತು ಆಹ್ವಾನ ಪತ್ರಿಕೆ ಹೊರಬಂದಿತು.

‘ಚಿಟ್ಟೀ ಆಯೀ ಹೈ’ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ನಟಿ ಶ್ರೀಮತಿ ಭವ್ಯಾ, ‘ಭಾರತೀಯ ಸಂಗೀತ ಲೋಕದ ವಿವಿಧ ಪ್ರಾಕಾರದ ಸಂಗೀತ ಮತ್ತು ಗೀತೆಗಳನ್ನು ‘ಚಿಟ್ಟೀ ಆಯೀ ಹೈ’ ಕಾರ್ಯಕ್ರಮದ ಮೂಲಕ ಒಂದೇ ವೇದಿಕೆಗೆ ತರುತ್ತಿರುವುದು ಕರ್ನಾಟಕದ ಮಟ್ಟಿಗೆ ಹೊಸ ಪ್ರಯೋಗ. ಭಾರತದ ‘ಗಾನ ಕೋಗಿಲೆ’ ಲತಾ ಮಂಗೇಶ್ಕರ್ ಅವರ ಸಂಸ್ಮರಣೆಯಲ್ಲಿ ಈ ಕಾರ್ಯಕ್ರಮ ತುಂಬ ಅರ್ಥಪೂರ್ಣವಾಗಿ ಮೂಡಿಬರುತ್ತಿದೆ. ಎಲ್ಲಾ ಥರದ ಸಂಗೀತವನ್ನೂ ಆಸ್ವಾಧಿಸುವವರಿಗೆ ಈ ಕಾರ್ಯಕ್ರಮ ಹೊಸ ಅನುಭವ, ಆನಂದ ನೀಡಲಿದೆ. ಸಂಗೀತ ಮತ್ತು ಕೇಳುಗರನ್ನು ಬೆಸೆಯುವ ಇಂಥ ಕಾರ್ಯಕ್ರಮ ಆಯೋಜಿಸಿರುವ ಕಮಲ್ ರಾಜ್ (ಕಲೀಂ ಪಾಷಾ) ಅವರ ಪ್ರಯತ್ನ ಎಲ್ಲರೂ ಮೆಚ್ಚುವಂಥದ್ದು’ ಎಂದರು.
ಇದೇ ವೇಳೆ ‘ಚಿಟ್ಟೀ ಆಯೀ ಹೈ’ ಕಾರ್ಯಕ್ರಮದ ಬಗ್ಗೆ ಮಾತನಾಡಿದ ನಟ, ನಿರ್ಮಾಪಕ, ಗಾಯಕ ಮತ್ತು ಆಯೋಜಕ ಕಮಲ್ ರಾಜ್ (ಕಲೀಂ ಪಾಷಾ), ‘ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಸಂಸ್ಮರಣೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಲತಾ ಮಂಗೇಶ್ಕರ್ ಅವರ ಸೋದರಿ ಉಷಾ ಮಂಗೇಶ್ಕರ್ ಮತ್ತು ಅವರ ಕುಟುಂಬ ವರ್ಗದವರು ಭಾಗಿಯಾಗಲಿದ್ದಾರೆ. ಭಾರತದ ವಿವಿಧ ಭಾಷೆಯ ಅನೇಕ ಗಾಯಕರು ಹತ್ತಾರು ಗೀತೆಗಳಿಗೆ ಧ್ವನಿಯಾಗಲಿದ್ದಾರೆ. ಇದು ಬೆಂಗಳೂರು ಹಾಗೂ ಸಮಸ್ತ ಕರ್ನಾಟಕದ ಸಂಗೀತ ಪ್ರೇಮಿಗಳಿಗೆ ಹೆಮ್ಮೆಯ ಐತಿಹಾಸಿಕ ಕ್ಷಣವಾಗಲಿದೆ. ಈ ಕಾರ್ಯಕ್ರಮ ಕೇವಲ ವೇದಿಕೆ ಪ್ರದರ್ಶನವಾಗಿರುವುದಿಲ್ಲ. ಭಾರತದ ವಿವಿಧ ಭಾಷೆ, ಪ್ರದೇಶ ಮತ್ತು ಸಂಸ್ಕೃತಿಗಳ ಎಲ್ಲೆಯನ್ನು ಮೀರಿ ಜನರ ಹೃದಯಗಳನ್ನು ಸಂಗೀತದ ಮೂಲಕ ಒಂದಾಗಿಸುವ ಪ್ರಯತ್ನವಾಗಿದೆ. ಹಿಂದೂಸ್ಥಾನಿ, ಕರ್ನಾಟಿಕ್, ಘಜಲ್, ಸೂಫೀ ಹೀಗೆ ಹಲವು ಶೈಲಿಯ ಗೀತೆಗಳು ಇಲ್ಲಿ ಅನಾವರಣವಾಗಲಿದೆ’ ಎಂದರು.
‘ಚಿಟ್ಟೀ ಆಯೀ ಹೈ’ ಕಾರ್ಯಕ್ರಮದಲ್ಲಿ ಭಾರತೀಯ ಸಂಗೀತ ಕ್ಷೇತ್ರದ ಅನೇಕ ಸಂಗೀತಗಾರರು, ಚಿತ್ರರಂಗದ ಅನೇಕ ಗಣ್ಯರು ವಿಶೇಷ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ. ಈ ಸಂಗೀತ ಸಂಜೆಯಲ್ಲಿ ಮನಸ್ಸನ್ನು ಮುದಗೊಳಿಸುವ ಶಾಸ್ತ್ರೀಯ ಸಂಗೀತ, ವಿವಿಧ ಭಾಷೆಗಳ ಕಾಲಾತೀತ ಗೀತೆಗಳು, ಜನಪದ ಸೊಗಡಿನ ಸಂಗೀತ ಸಂಗಮ ಇರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಹಾಜರಿದ್ದ ನಟ ಪ್ರಥಮ್ ಮತ್ತು ಇತರರು ‘ಚಿಟ್ಟೀ ಆಯೀ ಹೈ’ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ಮತ್ತು ನಿರೀಕ್ಷೆಯ ಮಾತುಗಳನ್ನಾಡಿದರು.
*— ಕೋಟ್ಸ್ —*
‘ಇದು ಕೇವಲ ಸಂಗೀತ ಕಾರ್ಯಕ್ರಮವಲ್ಲ; ನನ್ನ ಜೀವನದ ಅತ್ಯಂತ ಅಮೂಲ್ಯ ಕ್ಷಣಗಳಲ್ಲಿ ಒಂದಾಗಿದೆ. ನಮ್ಮ ಬೆಂಗಳೂರಿನಲ್ಲಿ ಉಷಾ ಮಂಗೇಶ್ಕರ್ ಅವರಂಥ ಸಾಧಕರ ಸಮ್ಮುಖದಲ್ಲಿ ಇಂಥದ್ದೊಂದು ಕಾರ್ಯಕ್ರಮ ನಡೆಸುತ್ತಿರುವುದು ಮರೆಯಲಾಗದಂಥ ಸಂದರ್ಭ. ನನ್ನ ಕಲಾಯಾತ್ರೆಯನ್ನು ಪ್ರೋತ್ಸಾಹಿಸಿದ, ನನ್ನ ಧ್ವನಿಯನ್ನು ನಂಬಿದ ಮತ್ತು ನನಗೆ ಬೆಂಬಲವಾಗಿ ನಿಂತ ಪ್ರತಿಯೊಬ್ಬ ಸಂಗೀತಪ್ರೇಮಿಗೂ ಈ ಸಂಗೀತ ಸಂಜೆಯನ್ನು ಅರ್ಪಿಸುತ್ತಿದ್ದೇವೆ’
⁃ ಕಮಲ್ ರಾಜ್ (ಕಲೀಂ ಪಾಷಾ),
ನಟ, ಗಾಯಕ, ನಿರ್ಮಾಪಕ ‘ಚಿಟ್ಟೀ ಆಯೀ ಹೈ’ ಕಾರ್ಯಕ್ರಮ ಆಯೋಜಕ





