“ಸಂಡೇ ಸ್ಪೆಷಲ್ ಗಾಗಿ ಏನಾದರೂ ಹೊಸತನ್ನು ಮಾಡುವ ಐಡಿಯಾ ಇದೆಯೇ? ಹಾಗಾದರೆ ಇಲ್ಲಿನ ವೈವಿಧ್ಯಮಯ ರೆಸಿಪಿಗಳನ್ನು ಟ್ರೈ ಮಾಡಿ ನೋಡಿ…..!”
ಕಾಶ್ಮೀರಿ ಪನೀರ್ ಮಸಾಲ
ಪನೀರ್ ರೆಡಿ ಮಾಡಲು ಸಾಮಗ್ರಿ : 800 ಗ್ರಾಂ ತಾಜಾ ಪನೀರ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಚಿಟಕಿ ಅರಿಶಿನ.
ಗ್ರೇವಿಗಾಗಿ ಸಾಮಗ್ರಿ : 1 ದೊಡ್ಡ ಈರುಳ್ಳಿ ಹೆಚ್ಚಿ ಎಣ್ಣೆಯಲ್ಲಿ ಕರಿದು ತೆಗೆಯಿರಿ, 2-3 ಪಲಾವ್ ಎಲೆ, ತುಸು ಚಕ್ಕೆ, ಮೊಗ್ಗು, ಏಲಕ್ಕಿ ತುಪ್ಪದಲ್ಲಿ ಹುರಿದ ಪನೀರ್ ಕ್ಯೂಬ್ಸ್, ರೆಡಿಮೇಡ್ ಮಸಾಲ, ತುಸು ಹೆಚ್ಚಿದ ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಇಂಗು, ಅರ್ಧ ಕಪ್ ತುಪ್ಪ.
ಪನೀರ್ ಕರಿಯಲು ಸಾಮಗ್ರಿ : ಒಂದಿಷ್ಟು ಪನೀರ್ ಕ್ಯೂಬ್ಸ್, ಕರಿಯಲು ರೀಫೈಂಡ್ ಎಣ್ಣೆ.
ಮಸಾಲೆಗಾಗಿ ಸಾಮಗ್ರಿ : 2-3 ಚಮಚ ಎಣ್ಣೆ, 2 ಕಪ್ ಟೊಮೇಟೊ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಎಲ್.ಜಿ. ಇಂಗು, ಸಕ್ಕರೆ, ಶುಂಠಿ ಪುಡಿ, ಸೋಂಪು, ಅರ್ಧ ಕಪ್ ಬಾಡಿಸಿ ಪೇಸ್ಟ್ ಮಾಡಿದ ಈರುಳ್ಳಿ.
ಪನೀರ್ ಗಾಗಿ ವಿಧಾನ : ಬಾಣಲೆಯಲ್ಲಿ 1 ಲೀ. ನೀರು ಕುದಿಸಿರಿ. ಇದಕ್ಕೆ ಹಿಂದೆ ಹೇಳಿದ ಎಲ್ಲಾ ಸಾಮಗ್ರಿ ಸೇರಿಸಿ ಕುದಿಸಬೇಕು. 10 ನಿಮಿಷ ಮಂದ ಉರಿಯಲ್ಲಿ ಕುದಿಯಲಿ. ನಂತರ ಇದನ್ನು ಕೆಳಗಿಳಿಸಿ ಒಂದು ಬದಿಗಿಡಿ.
ಪನೀರ್ ಕರಿಯಲು ವಿಧಾನ : ಬಾಣಲೆಯಲ್ಲಿ ರೀಫೈಂಡ್ ಎಣ್ಣೆ ಬಿಸಿ ಮಾಡಿ, ಪನೀರ್ ಕ್ಯೂಬ್ಸ್ ಹಾಕಿ ಕರಿದು ತೆಗೆಯಿರಿ. ಇದನ್ನೂ ಒಂದು ಬದಿಗಿಡಿ.
ಮಸಾಲೆ ರೆಡಿ ಮಾಡುವ ವಿಧಾನ : ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ. ಇದಕ್ಕೆ ಟೊಮೇಟೊ ಪೇಸ್ಟ್ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ನಂತರ ಉಪ್ಪು, ಖಾರ, ಎಲ್.ಜಿ. ಇಂಗು, ಸಕ್ಕರೆ ಹಾಕಿ 4-5 ನಿಮಿಷ ಹಾಕಿ ಕೈಯಾಡಿಸಿ. ಆಮೇಲೆ ಶುಂಠಿಪುಡಿ, ಸೋಂಪು, ಬಾಡಿಸಿಕೊಂಡಿದ್ದ ಈರುಳ್ಳಿ ಪೇಸ್ಟ್ ಇತ್ಯಾದಿ ಹಾಕಿ. ಇದನ್ನು 2-3 ನಿಮಿಷ ಕೆದಕಿ ಕೆಳಗಿಳಿಸಿ, ಒಂದು ಪಕ್ಕಕ್ಕಿಡಿ.
ಗ್ರೇವಿ ತಯಾರಿಸುವ ವಿಧಾನ : ಬಾಣಲೆಯಲ್ಲಿ ಅರ್ಧ ಲೀ. ನೀರು, ಹಿಂದೆ ಹೇಳಿದ ಎಲ್ಲಾ ಸಾಮಗ್ರಿ ಹಾಕಿ ಮಂದ ಉರಿಯಲ್ಲಿ 10 ನಿಮಿಷ ಕುದಿಸಿರಿ. ನಂತರ ಇದನ್ನು ಕೆಳಗಿಳಿಸಿ ಒಂದು ಬದಿಗಿಡಿ. ನಂತರ ಇದಕ್ಕೆ ಕರಿದ ಪನೀರ್ ಸೇರಿಸಿ, ಮತ್ತಷ್ಟು ಹೊತ್ತು ಕುದಿಸಿರಿ. ನಂತರ ರೆಡಿ ಮಾಡಿದ ಮಸಾಲೆ ಇದಕ್ಕೆ ಬೆರೆಸಿ ಕುದಿಸಿರಿ. ಕೊನೆಗೆ ಕೊ.ಸೊಪ್ಪು ಉದುರಿಸಿ. 2 ನಿಮಿಷ ಬಿಟ್ಟು ಚೆನ್ನಾಗಿ ಕೆದಕಿ ಕೆಳಗಿಳಿಸಿ. ಚಿತ್ರದಲ್ಲಿರುವಂತೆ ಅಲಂಕರಿಸಿ, ಬಿಸಿ ಬಿಸಿಯಾಗಿ ಅನ್ನಕ್ಕೆ ತುಪ್ಪ ಹಾಕಿ ಇದರೊಂದಿಗೆ ಸವಿಯಿರಿ.

ಪಾಲಕ್ ಸಾಬೂದಾಣಿ ಟಿಕ್ಕಿ
ಸಾಮಗ್ರಿ : 1-1 ಕಪ್ ಸಬ್ಬಕ್ಕಿ ಹೆಚ್ಚಿದ ಪಾಲಕ್ ಸೊಪ್ಪು, ತುರಿದ ಪನೀರ್ ಹುರಿದು ತರಿ ಮಾಡಿದ ಶೇಂಗಾ (ಅರ್ಧರ್ಧ ಕಪ್), ಬೇಯಿಸಿ ಮಸೆದ 2 ಆಲೂ, ಸಣ್ಣಗೆ ಹೆಚ್ಚಿದ ಹಸಿಮೆಣಸು, ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಎಲ್.ಜಿ. ಇಂಗು, ಕರಿಯಲು ಎಣ್ಣೆ.
ವಿಧಾನ : ಸಬ್ಬಕ್ಕಿಯನ್ನು 1 ಗಂಟೆ ನೆನೆಸಿ. ಇದನ್ನು ಸೋಸಿಕೊಂಡು ಇದಕ್ಕೆ ಎಲ್.ಜಿ. ಇಂಗು, ಉಳಿದೆಲ್ಲ ಪದಾರ್ಥ ಹಾಕಿ ಮಿಶ್ರಣ ಕಲಸಿಡಿ. ಇದರಿಂದ ಸಣ್ಣ ಉಂಡೆ ಮಾಡಿ ವಡೆ ತರಹ ತಟ್ಟಿಕೊಳ್ಳಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಇವನ್ನು ಹೊಂಬಣ್ಣ ಬರುವಂತೆ ಕರಿಯಿರಿ. ಪುದೀನಾ ಚಟ್ನಿ, ಟೊಮೇಟೊ ಸಾಸ್ ಜೊತೆ ಸವಿಯಲು ಕೊಡಿ.

ನುಗ್ಗೆ ಸೊಪ್ಪಿನ ಫ್ರೀಟರ್ಸ್
ಸಾಮಗ್ರಿ : ತಾಜಾ ನುಗ್ಗೆಸೊಪ್ಪು ಕಡಲೆಬೇಳೆ (1-1 ಕಪ್), ಸಣ್ಣಗೆ ಹೆಚ್ಚಿದ ಕೆಂಪು, ಹಳದಿ, ಹಸಿರು ಕ್ಯಾಪ್ಸಿಕಂ (ಒಟ್ಟಾರೆ 1 ಕಪ್), 2 ಈರುಳ್ಳಿ, 4 ಹಸಿ ಮೆಣಸು, ತುಸು ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಖಾರ, ಎಲ್.ಜಿ. ಇಂಗು, ಕರಿಯಲು ಎಣ್ಣೆ.
ವಿಧಾನ : ಕಡಲೆಬೇಳೆಯನ್ನು 2 ಗಂಟೆ ಕಾಲ ನೆನೆಸಿ ತರಿತರಿಯಾಗಿ ರುಬ್ಬಿಕೊಳ್ಳಿ. ಇದಕ್ಕೆ ಹೆಚ್ಚಿದ ಎಲ್ಲಾ ಪದಾರ್ಥ, ಎಲ್.ಜಿ. ಇಂಗು, ಮೇಲಿನ ಸಾಮಗ್ರಿ ಸೇರಿಸಿ ಪಕೋಡ ಮಿಶ್ರಣದಂತೆ ಕಲಸಿಡಿ. ನಂತರ ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಇದರಿಂದ ಸಣ್ಣ ಪಕೋಡ ಕರಿದು ಸಾಸ್ ಜೊತೆ ಬಿಸಿಯಾಗಿ ಸವಿಯಲು ಕೊಡಿ.

ಬೇಸನ್ ಪಕೋಡ
ಸಾಮಗ್ರಿ : 1 ಕಪ್ ಬೇಸನ್, 2 ಕಪ್ ಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಎಲ್.ಜಿ. ಇಂಗು, ಜೀರಿಗೆ ಪುಡಿ, ಕರಿಯಲು ಎಣ್ಣೆ, ಜೊತೆಗೆ ಹುಳಿಸಿಹಿ ಚಟ್ನಿ.
ವಿಧಾನ : ಕಡಲೆಹಿಟ್ಟಿಗೆ ತುಸು ಉಪ್ಪು, ಖಾರ, ಎಲ್.ಜಿ. ಇಂಗು, ನೀರು ಬೆರೆಸಿ ಪಕೋಡ ಮಿಶ್ರಣದ ಹದಕ್ಕೆ ಕಲಸಿಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಇದರಿಂದ ಸ್ವಲ್ಪ ಸ್ವಲ್ಪವೇ ಮಿಶ್ರಣವನ್ನು ಎಣ್ಣೆಗೆ ಬಿಡುತ್ತಾ, ಪಕೋಡ ಕರಿದು ತೆಗೆಯಿರಿ. ಇವನ್ನು ನೇರವಾಗಿ ತಣ್ಣೀರಿಗೆ ಹಾಕಿ ಕೂಲ್ ಆಗಲು ಬಿಡಿ. 1 ಗಂಟೆ ಬಿಟ್ಟು ಇವನ್ನು ಹಿಂಡಿ, ನೀರು ಬೇರ್ಪಡಿಸಿ. ಕಡೆದ ಮೊಸರಿಗೆ ಉಪ್ಪು, ಖಾರ, ಜೀರಿಗೆ ಪುಡಿ ಸೇರಿಸಿ. ಇದಕ್ಕೆ ಈ ಪಕೋಡ ಸೇರಿಸಿ ಮತ್ತೆ 1 ಗಂಟೆ ಕಾಲ ನೆನೆಯಲು ಬಿಡಿ. ಇದನ್ನು ಹುಳಿಸಿಹಿ ಚಟ್ನಿಯೊಂದಿಗೆ, ಬಿಸಿ ಬಿಸಿ ಕಾಫಿ/ಟೀ ಜೊತೆ ಸೇವಿಸಿ.

ಸಾಬೂದಾಣಿ ಮಿನಿ ಕಟ್ ಲೆಟ್
ಸಾಮಗ್ರಿ : ಅರ್ಧ ಕಪ್ ಸಾಬೂದಾಣಿ, 1-2 ಆಲೂ (ಬೇಯಿಸಿ ಮಸೆದಿಡಿ), ಅರ್ಧರ್ಧ ಕಪ್ ಬ್ರೆಡ್ ಕ್ರಂಬ್ಸ್, ತುರಿದ ಪನೀರ್, ತುಸು ಹೆಚ್ಚಿದ ಹಸಿಶುಂಠಿ, ಹಸಿಮೆಣಸು, ಈರುಳ್ಳಿ, ಬೆಳ್ಳುಳ್ಳಿ, ಕೊ.ಸೊಪ್ಪು, ಪುದೀನಾ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಎಲ್.ಜಿ. ಇಂಗು, ಚಾಟ್ ಮಸಾಲ, ವೈಟ್ ಪೆಪ್ಪರ್, ಜೇನುತುಪ್ಪ, ಅಮ್ಚೂರ್ ಪುಡಿ, ಕರಿಯಲು ಎಣ್ಣೆ.
ವಿಧಾನ : 1 ಗಂಟೆ ಕಾಲ ಸಬ್ಬಕ್ಕಿ ನೆನೆಸಿ, ನೀರು ಬೇರ್ಪಡಿಸಿ ಅರ್ಧದಷ್ಟನ್ನು ಸ್ವಲ್ಪ ಹೊತ್ತು ಬಟ್ಟೆ ಮೇಲೆ ಹರಡಿ ಒಣಗಿಸಿ, ನಂತರ ಮಿಕ್ಸಿಯಲ್ಲಿ ತರಿ ತರಿ ಮಾಡಿ. ಉಳಿದ ಸಬ್ಬಕ್ಕಿಗೆ ಬೇರೆಲ್ಲ ಸಾಮಗ್ರಿ, ಎಲಿ.ಜಿ. ಇಂಗು, ಬೆರೆಸಿ ಮಿಶ್ರಣ ಕಲಸಿಡಿ. ಇದರಿಂದ ಸಣ್ಣ ಉಂಡೆ ಮಾಡಿ ಕಟ್ ಲೆಟ್ ಗಳಾಗಿ ತಟ್ಟಿಕೊಳ್ಳಿ. ತರಿಗೆ ಚಿಟಕಿ ಉಪ್ಪು, ನೀರು ಬೆರೆಸಿ ಪೇಸ್ಟ್ ಆಗಿಸಿ. ಅದರಲ್ಲಿ ಈ ಕಟ್ ಲೆಟ್ ಹೊರಳಿಸಿ, ಕಾದ ಎಣ್ಣೆಯಲ್ಲಿ ಕರಿಯಿರಿ. ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

ಸೀಮೆಗೆಡ್ಡೆಯ ಕಟ್ ಲೆಟ್
ಸಾಮಗ್ರಿ : 300 ಗ್ರಾಂ ಸೀಮೆಗೆಡ್ಡೆ (ಬೇಯಿಸಿ ಮಸೆದಿಡಿ), ರುಚಿಗೆ ತಕ್ಕಷ್ಟು ಉಪ್ಪು, ಖಾರ, ಎಲ್.ಜಿ. ಇಂಗು, ತುಪ್ಪ, ಜೀರಿಗೆ ಪುಡಿ, ಹೆಚ್ಚಿದ ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ, ಇಂಗು, ಫ್ರೂಟ್ ಜ್ಯಾಂ, ಅರಿಶಿನ, ಬ್ರೆಡ್ ಕ್ರಂಬ್ಸ್, ಕರಿಯಲು ಎಣ್ಣೆ.
ವಿಧಾನ : ಚಿಕ್ಕ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಮೇಲೆ ಹೇಳಲಾದ ಎಲ್ಲಾ ಮಸಾಲೆ, ಎಲ್.ಜಿ. ಇಂಗು ಹಾಕಿ ಕೆದಕಿ ಕೆಳಗಿಳಿಸಿ. ಇದನ್ನು ಮಸೆದ ಗೆಡ್ಡೆಗೆ ಸೇರಿಸಿ. ಈ ಮಿಶ್ರಣವನ್ನು ಉಂಡೆ ಆಗಿಸಿ, ಕಟ್ ಲೆಟ್ ಆಕಾರದಲ್ಲಿ ತಟ್ಟಿ, ಒಳಗೆ ಜ್ಯಾಂ ಸೇರಿಸಿ, ಬ್ರೆಡ್ ಕ್ರಂಬ್ಸ್ ನಲ್ಲಿ ಹೊರಳಿಸಿ ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

ಟೇಸ್ಟಿ ಪನೀರ್ ಕ್ಯೂಬ್ಸ್
ಸಾಮಗ್ರಿ : 1 ಕಪ್ ಪನೀರ್ ಕ್ಯೂಬ್ಸ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಎಲ್.ಜಿ. ಇಂಗು, ಅರಿಶಿನ, ಹುರಿದ ಎಳ್ಳಿನ ಪುಡಿ, ನಿಂಬೆರಸ ಅದರ ತಿರುಳಿನ ತುರಿ, ಒಂದಿಷ್ಟು ಜಜ್ಜಿದ ಬೆಳ್ಳುಳ್ಳಿ, 4 ಚಮಚ ರೀಫೈಂಡ್ ಎಣ್ಣೆ, ಜೇನುತುಪ್ಪ, ವೈಟ್ ಪೆಪ್ಪರ್.
ವಿಧಾನ : ಅರಿಶನಕ್ಕೆ ಉಪ್ಪು, ಎಳ್ಳು ಸೇರಿಸಿ ಮಿಶ್ರಣ ಮಾಡಿ, ತುಸು ಪೇಸ್ಟ್ ತರಹ ಮಾಡಿ, ಪನೀರ್ ಕ್ಯೂಬ್ಸ್ ಹಾಕಿ ನೆನೆಯಲು ಬಿಡಿ. ಒಂದು ನಾನ್ ಸ್ಟಿಕ್ ಪ್ಯಾನಿನಲ್ಲಿ ಎಣ್ಣೆ ಬಿಸಿ ಮಾಡಿ ಬೆಳ್ಳುಳ್ಳಿ, ಎಲ್.ಜಿ. ಇಂಗು ಹಾಕಿ ಬಾಡಿಸಿ. ನಂತರ ಇದಕ್ಕೆ ಪನೀರ್‌ಹಾಕಿ ಮಂದ ಉರಿಯಲ್ಲಿ ಬೇಗ ಬೇಗ ಕೈಯಾಡಿಸಿ. ನಂತರ ನಿಂಬೆ ಸಿಪ್ಪೆ ತುರಿ, ಹಾಕಿ ಕೆದಕಿ ಕೆಳಗಿಳಿಸಿ. ಜೇನುತುಪ್ಪಕ್ಕೆ ನಿಂಬೆರಸ, ಪೆಪ್ಪರ್, ಉಪ್ಪು ಹಾಕಿ ಬೆರೆಸಿಡಿ. ಇದನ್ನು ಪನೀರ್ ಕ್ಯೂಬ್ಸ್ ಮೇಲೆ ಹರಡಿ, ಟೂತ್ ಪಿಕ್ ಸಿಗಿಸಿ ಸವಿಯಲು ಕೊಡಿ.

ಪೌಷ್ಟಿಕ ಮಸಾಲೆ ಪೂರಿ
ಸಾಮಗ್ರಿ : ಹೆಸರುಬೇಳೆ, ರವೆ (ಅರ್ಧರ್ಧ ಕಪ್), 2 ಕಪ್ ಗೋಧಿಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಎಲ್.ಜಿ. ಇಂಗು, ಧನಿಯಾಪುಡಿ, ಅರಿಶಿನ, ಸೋಂಪು ಪುಡಿ, ಇಂಗು, 4 ಚಮಚ ತುಪ್ಪ, ಕರಿಯಲು ಎಣ್ಣೆ.
ವಿಧಾನ : ಮೊದಲು ಹೆಸರುಬೇಳೆ 1 ಗಂಟೆ ಕಾಲ ನೆನೆಸಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಬೇಸನ್ನಿಗೆ ಇದರ ಜೊತೆ ಮೇಲೆ ಹೇಳಿದ ಎಲ್ಲಾ ಸಾಮಗ್ರಿ, ಎಲ್.ಜಿ. ಇಂಗು ಹಾಕಿ, ತುಪ್ಪ, ನೀರು ಬೆರೆಸಿ ಮೃದುವಾದ ಪೂರಿ ಹಿಟ್ಟಿನ ಹದಕ್ಕೆ ಕಲಸಿ, ನಾದಿಕೊಳ್ಳಿ. ಇದರಿಂದ ಸಣ್ಣ ಉಂಡೆಗಳಾಗಿಸಿ, ಪೂರಿ ಲಟ್ಟಿಸಿಕೊಂಡು, ಕಾದ ಎಣ್ಣೆಯಲ್ಲಿ ಕರಿಯಿರಿ. ಬಾಂಬೆ ಆಲೂ ಸಾಗು ಜೊತೆ ಇದನ್ನು ಬಿಸಿ ಬಿಸಿಯಾಗಿ ಸವಿಯಲು ಕೊಡಿ.

ಬೇಸನ್ ಇಡ್ಲಿ
ಸಾಮಗ್ರಿ : ಅರ್ಧ ಕಪ್‌ಉದ್ದಿನ ಬೇಳೆ, 1 ಕಪ್ ಕಡಲೆಹಿಟ್ಟು, 2 ಕಪ್ ಹುಳಿ ಮೊಸರು, ತುಸು ಹೆಚ್ಚಿದ ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಎಲ್.ಜಿ. ಇಂಗು, ಈನೋ, ಫ್ರೂಟ್ ಸಾಲ್ಟ್, ಅರಿಶಿನ, ಒಗ್ಗರಣೆಗೆ ಎಣ್ಣೆ, ಸಾಸುವೆ, ಕರಿಬೇವು.
ವಿಧಾನ : 2 ಗಂಟೆ ಕಾಲ ಉದ್ದಿನಬೇಳೆ ನೆನೆಹಾಕಿಡಿ. ನಂತರ ಅದನ್ನು ಮೊಸರು, ಉಪ್ಪು, ಶುಂಠಿ, ಹಸಿಮೆಣಸು ಹಾಕಿ ನುಣ್ಣಗೆ ತಿರುವಿಕೊಳ್ಳಿ. ಈ ಮಿಶ್ರಣಕ್ಕೆ ಬೇಸನ್, ಅರಿಶಿನ, ಈನೋ, ಫ್ರೂಟ್ ಸಾಲ್ಟ್ ಎಲ್ಲಾ ಸೇರಿಸಿ ಚೆನ್ನಾಗಿ ಗೊಟಾಯಿಸಿ. ನಂತರ ಇಡ್ಲಿ ಸ್ಟ್ಯಾಂಡಿಗೆ ಎಣ್ಣೆ ಸವರಿ, ಇದನ್ನು ಎಲ್ಲಾ ತಟ್ಟೆಗೂ ಸಮನಾಗಿ ಹರಡಿ, ಆವಿಯಲ್ಲಿ ಹದನಾಗಿ ಇಡ್ಲಿ ಬೇಯಿಸಿ. ಚಿಕ್ಕ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸುವೆ, ಎಲ್.ಜಿ. ಇಂಗು, ಕರಿಬೇವಿನ ಒಗ್ಗರಣೆ ಕೊಡಿ. ಇದನ್ನು ಇವುಗಳ ಮೇಲೆ ಹರಡಿ, ಕಾಯಿ ಚಟ್ನಿ ಜೊತೆ ಬಿಸಿಯಾಗಿ ಸವಿಯಲು ಕೊಡಿ.





