ಚಾಲುಕ್ಯ ರಾಜಮನೆತನದ ಐಹೊಳೆ, ಪಟ್ಟದಕಲ್ಲು ಬಾದಾಮಿಯ ಅದ್ಭುತ ಮರಳು ಶಿಲ್ಪಕಲೆಗಳನ್ನು ವರ್ಣಿಸಲು ಪದಗಳೇ ಸಾಲದು. ಈ ನಿಟ್ಟಿನಲ್ಲಿ ಉತ್ತರ ಕರ್ನಾಟಕದ ಬಾದಾಮಿ ಹಾಗೂ ಪಟ್ಟದಕಲ್ಲು ಗುಹಾಂತರ ದೇವಾಲಯಗಳ ಕುರಿತು ವಿವರವಾಗಿ ತಿಳಿಯೋಣವೇ……?
ಐಹೊಳೆ, ಕರ್ನಾಟಕ ರಾಜ್ಯದ ಬಾಗಲಕೋಟೆ ಜಿಲ್ಲೆಯಲ್ಲಿದೆ. ಇದು ಒಂದು ಐತಿಹಾಸಿಕ ಮತ್ತು ಸಾಂಸ್ಕೃತಿಕ ಸ್ಥಳವಾಗಿದೆ. ಐಹೊಳೆಯಲ್ಲಿ ಮೊದಲು ನಾವು ದುರ್ಗಾ ದೇವಾಲಯಕ್ಕೆ ಭೇಟಿ ನೀಡಿದೆವು. ಈ ದೇವಾಲಯ ಸೂರ್ಯ ದೇವರಿಗೆ ಅರ್ಪಿತವಾಗಿದ್ದು, ಚಾಲುಕ್ಯರ ರಾಜ ವಿಕ್ರಮಾದಿತ್ಯನು ಕಟ್ಟಿಸಿದ್ದು ಎನ್ನಲಾಗಿದೆ. ಈ ದೇವಾಲಯ ಕುದುರೆ ಲಾಳದ (U) ಆಕಾರದಲ್ಲಿದ್ದು, ಎತ್ತರವಾದ ಜಗುಲಿಯ ಮೇಲೆ ನಿರ್ಮಾಣಗೊಂಡಿದೆ.
ದೇವಾಲಯದ ದ್ವಾರದಲ್ಲಿ ಆನೆಯ ಸೊಂಡಿಲಿನ ಆಕಾರದ ಶಿಲೆಗಳು ಇಡೀ ದೇವಾಲಯವನ್ನು ಎತ್ತಿ ಹಿಡಿದಂತೆ ಭಾಸವಾಗುತ್ತದೆ. ಇಲ್ಲಿ ಗರ್ಭಗುಡಿ, ಪ್ರದಕ್ಷಿಣ ಪಥ, ಸಭಾಮಂಟಪವಿದೆ.
ದ್ವಾರದಲ್ಲಿ ನಾಗರಾಣಿಯರು, ದೇವತೆಗಳು, ಹೂಬಳ್ಳಿಗಳು, ಪತಿಪತ್ನಿಯರ ಸರಸ ಶಿಲ್ಪಕಲೆಗಳನ್ನು ನೋಡಬಹುದು. ಈ ದೇವಾಲಯದ ಸುತ್ತಲೂ ಶಿವ, ಪಾರ್ವತಿ, ವರಾಹಸ್ವಾಮಿ, ಮಹಿಷಾಸುರ ಮರ್ದಿನಿ, ನರಸಿಂಹ, ಹರಿಹರನ ಶಿಲ್ಪಕಲೆಗಳನ್ನು ನೋಡಬಹುದು.
ನಂತರ ಲಾಡ್ಖಾನ ದೇವಾಲಯದಲ್ಲಿ ಶಿವಲಿಂಗ ಹಾಗೂ ನಂದಿ ಮಂಟಪವಿದೆ. ಲಾಡ್ ಖಾನ್ ಎಂಬ ಮುಸ್ಲಿಂ ಸಂತನೊಬ್ಬ ಈ ದೇವಾಲಯದಲ್ಲಿ ವಾಸವಿದ್ದುದರಿಂದ ಈ ದೇವಾಲಯಕ್ಕೆ ಲಡ್ಖನ್ ಎಂಬ ಹೆಸರು ಬಂದಿದೆ ಎನ್ನಲಾಗಿದೆ. ಹೀಗೆ ಐಹೊಳೆಯಲ್ಲಿ ಸಣ್ಣ ಸಣ್ಣ ದೇವಾಲಯವಿದ್ದು, ಪ್ರತಿ ಗರ್ಭಗುಡಿಯಲ್ಲೂ ಶಿವಲಿಂಗ ಹಾಗೂ ನಂದಿ ವಿಗ್ರಹ ಇರುವುದನ್ನು ನೋಡಬಹುದು.

ಮಲಪ್ರಭಾ ನದಿಯ ದಂಡೆ
ಗುಂಟ ಹಬ್ಬಿದ ಬೆಟ್ಟದ ತುದಿಯಲ್ಲಿ ನಿಂತು ಐಹೊಳೆಯ ಮಡಿಲಿನಲ್ಲಿ ಇವರು ನೂರಾರು ದೇವಾಲಯಗಳನ್ನು ನೋಡುವುದೇ ಒಂದು ಅಂದ. ಅದರ ಸೊಗಸನ್ನು ಅನುಭವಿಸಿದವರಿಗೆ ಗೊತ್ತು.
ಮುಂದೆ ನಾವು ಪಟ್ಟದಕಲ್ಲು ದೇವಾಲಯಕ್ಕೆ ಭೇಟಿ ನೀಡಿದೆ. ಇಲ್ಲಿ ಒಟ್ಟು 10 ಮಂದಿರಗಳಿದ್ದು, 4 ದೇವಾಲಯ ದ್ರಾವಿಡ ಶೈಲಿಯಲ್ಲಿದ್ದು, ಉಳಿದ ದೇವಾಲಯಗಳು ನಾಗರಶೈಲಿಯಲ್ಲಿವೆ. ಇಲ್ಲಿರುವ ಪ್ರತಿ ದೇವಾಲಯ ಶಿವನಿಗೆ ಅರ್ಪಿತವಾಗಿದ್ದು, ಬೇರೆ ಬೇರೆ ಹೆಸರುಗಳಿಂದ ಮಾತ್ರ ಕರೆಯಲ್ಪಡುತ್ತವೆ. ಅದರಲ್ಲಿ ಸಂಗಮೇಶ್ವರ, ಮಲ್ಲಿಕಾರ್ಜುನ, ವಿರೂಪಾಕ್ಷ ದೇವಾಲಯಗಳು ಪ್ರಮುಖವಾದವು.
ಹೀಗೆ ಐಹೊಳೆ ಹಾಗೂ ಪಟ್ಟದಕಲ್ಲು ದೇವಾಲಯದ ಗೋಡೆಗಳ ಮೇಲೆ ರಾಮಾಯಣ, ಮಹಾಭಾರತ, ಶಿವ, ವಿಷ್ಣು ಹಾಗೂ ಪಂಚತಂತ್ರ ಕಥೆಗಳನ್ನು ಸಾರುವ ಶಿಲ್ಪಕಲೆಗಳನ್ನು ಆನಂದಿಸಲು ಎರಡೂ ಕಣ್ಣುಗಳು ಸಾಲದು. ಪಟ್ಟದಕಲ್ಲಿನ ದೇವಾಲಯಗಳ ಮಹಾಕೂಟವನ್ನು ಸೂರ್ಯೋದಯದ ಹೊಂಗಿರಣಗಳ ಸಂದರ್ಭದಲ್ಲಿಯೇ ನೋಡಬೇಕು.

ಬನಶಂಕರಿ ದೇವಸ್ಥಾನ
ಮಾರನೆಯ ದಿನ ನಾವು ಬನಶಂಕರಿ ದೇವಾಲಯಕ್ಕೆ ಹೊರಟೆವು. ಬನಶಂಕರಿ ದೇವಸ್ಥಾನ ಅತಿ ಪ್ರಾಚೀನ ದೇವಾಲಯವಾಗಿದ್ದು, ದೇವಿಯನ್ನು ಶಾಕಾಂಬರಿ ಎಂದೂ ಕರೆಯಲಾಗುತ್ತದೆ. ಸ್ಥಳ ಪುರಾಣದ ಪ್ರಕಾರ ಇಲ್ಲಿ ಬರಗಾಲ ಬಂದಾಗ ದೇವಿ ತಾಯಿಯು ತನ್ನ ದೇಹದಿಂದ ತರಕಾರಿಗಳನ್ನು ಸೃಷ್ಟಿಸಿ ಭಕ್ತರಿಗೆ ಆಹಾರ ನೀಡಲು, ಈಕೆ ಶಾಕಾಂಬರಿ ಎಂದು ಕರೆಯಲ್ಪಟ್ಟಳು.
ಗರ್ಭಗುಡಿಯಲ್ಲಿ ದೇವಿ ಸಿಂಹವಾಹಿನಿಯಾಗಿ ದುಷ್ಟ ಶಕ್ತಿಯನ್ನು ನಿಗ್ರಹಿಸುವ ರೀತಿಯಲ್ಲಿ ಆಸೀನಳಾಗಿದ್ದಾಳೆ. ದೇವಾಲಯದ ಗರ್ಭಗುಡಿಯ ಮೇಲ್ಭಾಗ ದ್ರಾವಿಡ ಶೈಲಿಯ ಶಿಖರವನ್ನು ಹೊಂದಿದೆ. ದೇವಾಲಯದ ಮುಂದೆ ವಿಶಾಲವಾದ ಕಾವ್ಯವಾಣಿ ಇದೆ. ಇದನ್ನು ಹರಿಶ್ಚಂದ್ರ ತೀರ್ಥ ಎಂದು ಕರೆಯುತ್ತಾರೆ.

ಬಾದಾಮಿ ಗುಹಾಂತರ ದೇವಾಲಯಗಳು
ಕೊನೆಯ ದಿನ ನಾವು ಬಾದಾಮಿಗೆ ಭೇಟಿ ನೀಡಿದೆ. ಬಾದಾಮಿ ಗುಹಾಲಯ ಮರಳು ಶಿಲೆಯಿಂದ ಕೂಡಿದ್ದು, ಚಾಲುಕ್ಯ ರಾಜರು ನಿರ್ಮಿಸಿದ್ದಾರೆ ಎನ್ನುತ್ತದೆ ಇತಿಹಾಸ. ಬಾದಾಮಿಯ ಗುಹಾಲಯಗಳು ಬಾದಾಮಿ ಬಣ್ಣದಲ್ಲಿರುವುದರಿಂದ ಇದಕ್ಕೆ ಬಾದಾಮಿ ಎಂಬ ಹೆಸರು ಬಂದಿದೆ.
ಇದರ ವಿಶೇಷತೆ ಏನೆಂದರೆ ಇದನ್ನು ಏಕಶಿಲೆಯಲ್ಲಿ ಮೇಲಿನಿಂದ ಕೆಳಗಿನವರೆಗೆ ಕೆತ್ತಿ ನಿರ್ಮಿಸಿದ್ದಾರೆ. ಇಲ್ಲಿ ಒಟ್ಟು 4 ಗುಹಾಂತರ ದೇವಾಲಯಗಳಿದ್ದು, ಮೊದಲನೆಯ ಗುಹಾಲಯ ಶಿವನಿಗೆ ಅಂದರೆ ಶೈವ ಧರ್ಮಕ್ಕೆ, 2 ಹಾಗೂ 3ನೇ ಗುಹಾಲಯ ವಿಷ್ಣುವಿಗೆ ಅಂದರೆ ವೈಷ್ಣವ ಧರ್ಮಕ್ಕೆ ಹಾಗೂ ಕೊನೆಯ ಗುಹಾಲಯ ಜೈನ ಧರ್ಮಕ್ಕೆ ಸೇರಿದೆ.

ಮೊದಲನೆಯ ಗುಹಾಲಯ
ಶಿವನ ಗುಹಾಲಯದಲ್ಲಿ ನಾವು ಶಿವನ ನಟರಾಜ ಮೂರ್ತಿಯನ್ನು ನೋಡಬಹುದು. ಈ ನಟರಾಜನ ವಿಗ್ರಹಕ್ಕೆ 18 ಕೈಗಳಿದ್ದು, 18 ಬಗೆಯ ನೃತ್ಯ ಭಂಗಿಯನ್ನು ತೋರುತ್ತದೆ. ಇಲ್ಲಿ ನಾವು ಶಿವ ಪಾರ್ವತಿಯರು ನಂದಿಯ ಮೇಲೆ ಸವಾರಿ ಮಾಡುವುದು, ಹರಿಹರನ ವಿಗ್ರಹ, ಅರ್ಧನಾರೀಶ್ವರ ಶಿಲ್ಪಕಲೆಯನ್ನು ಗಮನಿಸಬಹುದು.

2 ಹಾಗೂ 3ನೇ ಗುಹಾಲಯ
ಇಲ್ಲಿ ನಾವು ವಿಷ್ಣುವಿನ ವರಾಹ ಅವತಾರ, ವಾಮನ ಅವತಾರ, ವಿಷ್ಣು ಶಸ್ತ್ರಗಳನ್ನು ಹಿಡಿದು ಯುದ್ಧಕ್ಕೆ ಹೊರಟ ಶಿಲ್ಪಕಲೆ ಹಾಗೂ ವಿಷ್ಣು ನಾಗಶೇಷನ ಮೇಲೆ ಕುಳಿತು ಲಕ್ಷ್ಮೀದೇವಿ ಹಾಗೂ ಗರುಡನ ಜೊತೆ ವಿಶ್ರಾಂತಿ ಪಡೆಯುತ್ತಿರುವ ಶಿಲ್ಪಕಲೆಯೂ ಅತ್ಯುತ್ತಮವಾಗಿ ಮೂಡಿಬಂದಿದೆ. ಇಲ್ಲಿ ನಾವು ವಿಷ್ಣುವಿನ ವಿಜಯನಾರಸಿಂಹ ಅವತಾರ, ಗಂಡ ಹೆಂಡತಿಯ ಸರಸ, ನಾಟ್ಯ ಮಾಡುತ್ತಿರುವ ಗಣಗಳನ್ನು ನೋಡಬಹುದು.

ಕೊನೆಯ ಜೈನ ಗುಹಾಲಯ
ಇಲ್ಲಿ ನಾವು ಜೈನ ಮಹಾವೀರರ ಶಿಲ್ಪಕಲೆ ಹಾಗೂ ದಿಗಂಬರ ಬಾಹುಬಲಿಯ ವಿಗ್ರಹವನ್ನು ಗಮನಿಸಬಹುದು. ಈ ಗುಹಾಲಯದ ಎದುರು ಬದಿಯಲ್ಲಿ ಅಗಸ್ತ್ಯ ನದಿಯನ್ನು ನೋಡಬಹುದು. ಈ ನದಿಯಲ್ಲಿ ಅಗಸ್ತ್ಯ ಮಹಾ ಮುನಿಗಳು ಧ್ಯಾನ ಮಾಡಿ ವಾತಾಪಿ ಹಾಗೂ ಇಲ್ವಲ ಎಂಬ ರಾಕ್ಷಸರ ವಧೆ ಮಾಡಿದರು ಎಂದು ಪುರಾಣ ಹೇಳುತ್ತದೆ.
ಅಗಸ್ತ್ಯ ನದಿಯ ತೀರದಲ್ಲಿ ಕಾಣುವುದೇ ಶಿವನ ಭೂತನಾಥ ದೇವಾಲಯ. ಈ ದೇವಾಲಯವನ್ನು ಬನವಾಸಿಯ ಮಧುಕೇಶ್ವರ ದೇವಾಲಯದ ಮಾದರಿಯಲ್ಲೇ ನಿರ್ಮಿಸಲಾಗಿದೆ. ವಿಶಾಲವಾದ ತೆರೆದ ಮಂಟಪದಲ್ಲಿ ನಂದಿ ವಿಗ್ರಹ ಹಾಗೂ ಗರ್ಭಗುಡಿಯಲ್ಲಿ ಶಿವನ ಲಿಂಗವಿದೆ.
ಹೀಗೆ ಬಾದಾಮಿ ಬೆಟ್ಟದ ಮೇಲೆ ನಿಂತು ಸುತ್ತೆಲ್ಲ ಕಾಣುವ ಬಂಡೆಗಳ ಮತ್ತು ಆ ಬಂಡೆಗಳಲ್ಲಿ ಕೊರೆದ ಗುಹಾಲಯಗಳನ್ನು ಕಂಡು ನಿಬ್ಬೆರಗಾಗಿ, ಚಾಲುಕ್ಯರ ಅದ್ಭುತ ಕಲ್ಪನಾಶಕ್ತಿಗೆ ನಮ್ಮ ತಲೆಬಾಗಿತು.
– ಸಂಜ್ಞಾ ಭಟ್





