ಕಥೆ ಪದ್ಮಾ ಮೂರ್ತಿ

ತಾನು ಗಂಡೆಂಬ ಅಹಂಕಾರದಲ್ಲಿ ಸತೀಶ ಬೇಕೆಂದೇ ಗುಣವತಿಯಾದ ನಿರ್ಮಲಾಳನ್ನು ಮದುವೆಯಾಗಲು ನಿರಾಕರಿಸಿದ. ಮುಂದೆ ಅವಳ ಎದುರು ಅವನು ಕೈಕಟ್ಟಿ ಕ್ಷಮೆ ಕೇಳುವಂತೆ ಕಾಲ ಬುದ್ಧಿ ಕಲಿಸಿದ್ದು ಹೇಗೆ…..?

“ಸತೀಶ…..  ಹುಡುಗಿ ಮನೆಯವರಿಗೆ ಏನೋ ಹೇಳೋದು….? ನೋಡು, ಈ ಸಂಬಂಧ ಒಪ್ಪಿಕೊ, ಹುಡುಗಿ ಚೆನ್ನಾಗಿದ್ದಾಳೆ.  ಜೊತೆಗೆ ಇಂಟರ್ಮೀಡಿಯೇಟ್‌ ಓದಿದ್ದಾಳೆ. ಹುಡುಗಿಗೆ ಮನೆ ತೂಗಿಸಿಕೊಂಡು ಹೋಗುವ ಚಾಕಚಕ್ಯತೆ ಇದೆ. ಇನ್ನೇನು ಬೇಕು ಹೇಳು….? ಅವರಪ್ಪ ನನ್ನ ಹಳೆ ಸ್ನೇಹಿತ. ಕಂಡವರು, ಕೇಳಿದರು,” ಎಂದು ತಂದೆ ಹೇಳಿದರು.

“ಅಪ್ಪಾ….. ನಾನು ಎಂಎಸ್ಸಿ ಫಸ್ಟ್ ಕ್ಲಾಸ್‌! ಮುಂದಕ್ಕೆ ಡಾಕ್ಟರೇಟ್‌ ಕೂಡ ಮಾಡಬೇಕೆಂಬ ಯೋಚನೆ ಇದೆ. ನನ್ನಂಥವನಿಗೆ ಒಂದು ಡಿಗ್ರಿಯನ್ನು ಸಹ ಮಾಡದ ದಡ್ಡ ಹುಡುಗಿಯನ್ನು ತಂದು ಕಟ್ಟುತ್ತೀರಾ….? ಖಂಡಿತಾ ಸಾಧ್ಯವಿಲ್ಲ! ಮಗ ಒಪ್ಪಲಿಲ್ಲ ಎಂದು ಹೇಳಿಬಿಡಿ,” ಎಂದು ದುರ್ದಾನ ತೆಗೆದುಕೊಂಡನಂತೆ ಹೊರನಡೆದ ಸತೀಶ.

ಹುಡುಗಿ ಡಿಗ್ರಿ ಮಾಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಇಂತಹ ಒಳ್ಳೆಯ ಹುಡುಗಿಯನ್ನು ಬಿಡಬೇಕಲ್ಲ ಎಂದು ರಾಯರಿಗೆ ಕಸಿವಿಸಿಯಾಯಿತು.  `ಅವರವರ ಹಣೇಬರಹ ನಾವು ಏನು ಮಾಡಲು ಸಾಧ್ಯ….? ನನ್ನ ಪ್ರಯತ್ನ ನಾನು ಮಾಡಿದೆ. ನಮಗೆ ಆ ಹುಡುಗಿಯನ್ನು ಸೊಸೆಯಾಗಿ ಪಡೆಯುವ ಭಾಗ್ಯ ಇಲ್ಲ ಅಷ್ಟೇ…..’ ಎಂದುಕೊಂಡು ನಿರಾಸೆಯಿಂದಲೇ ಸ್ನೇಹಿತ ಕೇಶವಮೂರ್ತಿಗೆ ಫೋನ್‌ ಮಾಡಿ ಮಗ ಹೇಳಿದ ವಿಷಯ ತಿಳಿಸಿ, ಕ್ಷಮಿಸುವಂತೆ ಕೇಳಿಕೊಂಡರು.

ವಿಷಯ ಮಗಳು ನಿರ್ಮಲಾಳಿಗೂ ತಿಳಿದಾಗ, ಅವಳಿಗೆ ಬಹಳ ಅವಮಾನವಾಯಿತು. ಬೇಡ ಅಂದಿದ್ದಕ್ಕೆ ಅಲ್ಲಾ…. ತನ್ನನ್ನು ದಡ್ಡಿ ಎಂದ ಕಾರಣಕ್ಕೆ…. `ಹೌದು ಹಳ್ಳಿಯಲ್ಲಿರುವ ಕಾರಣ ಕಾಲೇಜ್‌ ವಿದ್ಯಾಭ್ಯಾಸವನ್ನು ನಿಲ್ಲಿಸಬೇಕಾಯಿತು. ಇಷ್ಟರ ಮೇಲೆ ಓದಿನಲ್ಲಿ ನನಗೆ ಆಸಕ್ತಿ ಇದ್ದುದು ಅಷ್ಟಕಷ್ಟೇ…. ಆದರೆ ನಾನು ಯಾವುದರಲ್ಲಿ ಕಡಿಮೆ ಇದ್ದೆ, ಬುದ್ಧಿವಂತೆ ಎಂದು ಎಲ್ಲರೂ ಹೇಳುತ್ತಿರುತ್ತಾರೆ. ನಾನೂ ರೂಪಸ್ಥೆ! ಒಳ್ಳೆಯ ಹುಡುಗಿ, ಕೇವಲ ಪದವಿ ಪಡೆದಿಲ್ಲ ಎಂಬ ಒಂದೇ ಕಾರಣಕ್ಕೆ ದಡ್ಡಿ ಎಂದು ನನ್ನ ಆತ್ಮಗೌರವಕ್ಕೆ ಅಮಾನಿಸಿದ್ದಾನೆ,’ ಇದನ್ನು ನಿರ್ಮಲಾಳಿಂದ ಅರಗಿಸಿಕೊಳ್ಳಲಾಗಲಿಲ್ಲ.

ರಾತ್ರಿಯೆಲ್ಲಾ ನಿರ್ಮಲಾಳಿಗೆ ನಿದ್ದೆ ಬರಲಿಲ್ಲ, `ದಡ್ಡಿ’ಯನ್ನು ಕಟ್ಟಿಕೊಳ್ಳಲೇ ಎಂದ ಸತೀಶನ ಮಾತೇ ನೆನಪಾಗುತ್ತಿತ್ತು. ಕೊನೆಗೆ ಏನೋ ಒಂದು ನಿರ್ಧಾರಕ್ಕೆ ಬಂದವಳಂತೆ ಮಲಗಿ ನಿದ್ರಿಸಿದಳು. ಬೆಳಗ್ಗೆ ಎದ್ದ ತಕ್ಷಣ ತಂದೆ ಹತ್ತಿರ ಹೋಗಿ, “ಅಪ್ಪಾ….. ನಾನು ಮುಂದೆ ಓದಲು ಕಾಲೇಜಿಗೆ ಸೇರಿಕೊಳ್ತೀನಿ. ಇದಕ್ಕೆ ನೀವು, ಅಮ್ಮಾ ಒಪ್ಪಲೇಬೇಕು. ನಗರದಲ್ಲೇ ಹಾಸ್ಟೆಲ್ ‌ನಲ್ಲಿದ್ದು, ವಿದ್ಯಾಭ್ಯಾಸ ಮುಂದುವರಿಸ್ತೀನಿ. ನೀವಿಬ್ಬರೂ ಇದಕ್ಕೆ ಒಪ್ಪಿಕೊಳ್ಳಲೇಬೇಕು. ಸಂತೋಷದಿಂದ ಆಶೀರ್ದಿಸಿ ನನ್ನನ್ನು ಓದಿಸಿ,” ಎಂದಾಗ ಕೇಶವ ಮೂರ್ತಿಗಳು ತಬ್ಬಿಬ್ಬಾದರು. ಮಗಳ ಹಠಕ್ಕೆ ಗಂಡ ಹೆಂಡತಿ ಇಬ್ಬರೂ ಮಣಿಯಬೇಕಾಯಿತು. ಸತೀಶನ ಹೇಳಿದ, `ದಡ್ಡಿ’ ಎಂಬ ಒಂದು ಮಾತು ಅವಳನ್ನು ಓದುವುದಕ್ಕೆ ರೊಚ್ಚಿಗೆಬ್ಬಿಸಿತ್ತು. ಮೂರು ವರ್ಷಗಳ ಕಾಲ ಓದಿ ಪದವಿ ಮುಗಿಸಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದುಕೊಂಡ ನಂತರ, ಮಾಸ್ಟರ್‌ ಡಿಗ್ರಿಯಲ್ಲೂ ಐದು ಚಿನ್ನದ ಪದಕ ಗಳಿಸಿದಳು. ಈ ಮಧ್ಯೆ ಮೂರ್ತಿಗಳು ಮಗಳನ್ನು ಮದುವೆಗೆ ಒತ್ತಾಯ ಮಾಡಲಾರಂಭಿಸಿದರು.

“ಅಪ್ಪಾ….. ಬೇಸರಿಸಬೇಡಿ! ನನಗೆ ಡಾಕ್ಟರೇಟ್‌ ಮಾಡಲು ವಿಶ್ವವಿದ್ಯಾನಿಲಯದ ಕಡೆಯಿಂದ ಆಹ್ವಾನ ಬಂದಿದೆ. ಅದನ್ನು ಮುಗಿಸಿಕೊಳ್ಳುವೆ. ದಯಮಾಡಿ ನನಗೆ ಅವಕಾಶ ಮಾಡಿಕೊಡಿ. ಆನಂತರ ನಿಮ್ಮ ಆಸೆಯಂತೆ ಆಗಲಿ,” ಎಂದು ನಿರ್ಮಲಾ ಹೇಳಿದಾಗ ಅವರಿಗೆ ಮಗಳ ಮಾತನ್ನು ತೆಗೆದುಹಾಕಲು ಮನಸ್ಸಾಗಲಿಲ್ಲ.

ಈ ಮಧ್ಯೆ ಸತೀಶನಿಗೆ ಮದುವೆಯಾಗಿತ್ತು. ಹೆಂಡತಿಯೇನೋ ವಿದ್ಯಾವಂತೆಯೇ ಸರಿ! ಆದರೆ ಬಂದ ಮನೆಗೆ ಹೊಂದಾಣಿಕೆ ಕಾಣದೆ ಗಂಡನನ್ನು ಕರೆದುಕೊಂಡು ಬೇರೆಯಾದಳು. ಅವಳ ಹಠಮಾರಿತನ, ಅಹಮಿಕೆಯಿಂದ ಸಂಸಾರದಲ್ಲಿ ನೆಮ್ಮದಿ ಕಾಣದ ಸತೀಶನಿಗೆ ಮುಂದಿನ ಓದು ಸಾಧ್ಯವಾಗಲಿಲ್ಲ. ಸರ್ಕಾರಿ ಕೆಲಸ ಎಂದು ರೆವಿನ್ಯೂ ಇಲಾಖೆಯಲ್ಲಿ ಕೆಲಸ ಮಾಡಬೇಕಾಗಿ ಬಂದಿತು.

ಅಪ್ಪ ಅಮ್ಮನಿಗೆ ತಾನೊಬ್ಬನೇ ಮಗ, ಅವರನ್ನು ಬಿಟ್ಟು ಹೆಂಡತಿಯ ಮಾತನ್ನು ಕೇಳಿಕೊಂಡು ಬೇರೆ ಬಂದಿದ್ದಾಯ್ತು ಎಂಬ ನೋವು ಅವನನ್ನು ಕಾಡುತ್ತಿತ್ತು. ಆಗಾಗ್ಗೆ ಒಬ್ಬನೇ ಮಗನಾಗಿ ತಂದೆ, ತಾಯಿಯನ್ನು ನೋಡಿಕೊಳ್ಳದ ನೋವು, ಒಂದು ಕ್ಷುಲ್ಲಕ ಕಾರಣದಿಂದ ಗುಣವಂತೆಯಾದ ಹುಡುಗಿಯನ್ನು ತ್ಯಜಿಸಿ, ಬೆಟ್ಟದಷ್ಟು ಕಷ್ಟವನ್ನು ಮೈಮೇಲೆ ಎಳೆದುಕೊಂಡಂತೆ ಆಗಿತ್ತು ಅವನಿಗೆ.

ಆಗಾಗ್ಗೆ ಸತೀಶನಿಗೆ, ನಿರ್ಮಲಾಳ ನೆನಪಾಗಿ ಜೊತೆಯಲ್ಲಿ, `ಆ ಹುಡುಗಿ ಮನೆಗೆ ಬಂದರೆ ಹೊಂದಿಕೊಳ್ಳುತ್ತಾಳೆ. ಜೊತೆಗೂ ನಮ್ಮನ್ನೂ ಚೆನ್ನಾಗಿ ನೋಡಿಕೊಳ್ಳುತ್ತಾಳೆ. ನೀನೂ ಸುಖವಾಗಿರುತ್ತೀಯಾ ಒಪ್ಪಿಕೋ,’ ಎಂದು ಅಪ್ಪ ಹೇಳಿದ ಮಾತು ಪದೇ ಪದೇ ನೆನಪಾಗುತ್ತಿತ್ತು. ತಂದೆಯ ಮಾತು ಕೇಳದೆ ತಪ್ಪು ಮಾಡಿಬಿಟ್ಟೆ ಎಂದು ಸತೀಶ ಪಶ್ಚಾತ್ತಾಪ ಪಡುತ್ತಿದ್ದ.

basharte-tum-story

ಸತೀಶನಿಗೆ ಇದ್ದಕ್ಕಿದ್ದ ಹಾಗೆ, ಒಂದು ಲ್ಯಾಂಡ್‌ ವಿಚಾರದಲ್ಲಿ ಸುಳ್ಳುಸಾಕ್ಷಿಯಾಗಿ, ಲಕ್ಷಾಂತರ ರೂಪಾಯಿ ಕಬಳಿಸಿದ್ದಾನೆ ಎಂಬ ಆಪಾದನೆ ಬಂದು, ಇಲಾಖೆಯಿಂದ ಸಸ್ಪೆಂಡ್‌ ಮಾಡಿದರು. ಆದರೆ ಅವನಿಗೆ ಅವಮಾನವಾಗಿದ್ದು ಕೆಲಸ ಹೋದದ್ದಕ್ಕಲ್ಲ. ಲಂಚ ಹೊಡೆದಿದ್ದಾನೆ ಎಂಬು ಸುಳ್ಳು ಆಪಾದನೆ ಕಾರಣದಿಂದ ಸಸ್ಪೆಂಡ್‌ ಆಗಿದ್ದಕ್ಕೆ.

`ಇದನ್ನು ಒಪ್ಪಿಕೊಂಡರೆ ನಾನು ತಪ್ಪಿತಸ್ಥ ಆಗ್ತೀನಿ. ನ್ಯಾಯಾಲಯಕ್ಕೆ ಹೋದರೆ, ಯಾವಾಗ ನಾನು ನಿರಪರಾಧಿಯೆಂದು ತೀರ್ಮಾನವಾಗುತ್ತದೋ ಗೊತ್ತಿಲ್ಲ…..? ತೀರ್ಮಾನವಾಗುವವರೆಗೂ  `ದುಡ್ಡು ಹೊಡೆದ ಕಳ್ಳ,’ ಎಂದೇ ಬಾಳು ಸಾಗಿಸಬೇಕಾಗುತ್ತದೆ. ಬದಲಾಗಿ ಮೇಲಿನ ಅಧಿಕಾರಿಗಳ ಗಮನಕ್ಕೆ ತಂದು ನನ್ನ ಪ್ರಾಮಾಣಿಕತೆಯ ಈ ಕಂಟಕವನ್ನು ನಿವಾರಿಸಿಕೊಳ್ಳಬೇಕು,’ ಎಂದು ನಿಶ್ಚಯಿಸಿ, ಇಲಾಖೆಯ ಜಾಯಿಂಟ್‌ ಡೈರೆಕ್ಟರ್‌ ನ್ನು ಕಾಣಲು ಹೋಗಬೇಕೆಂದು ನಿರ್ಧರಿಸಿದ.

ಮಾರನೇ ದಿನವೇ ಬೆಂಗಳೂರಿನ ಮುಖ್ಯ ಆಫೀಸಿಗೆ, ತನ್ನ ಎಲ್ಲಾ ದಾಖಲೆ, ಸಾಕ್ಷಿ, ರುಜುವಾತಿನ ಸಮೇತ ಬಂದು ಅವರನ್ನು ಕಾಯುತ್ತಾ, ಬೆಂಚಿನ ಮೇಲೆ ಕುಳಿತ. ಸುಮಾರು 11 ಗಂಟೆಯ ಸಮಯಕ್ಕೆ ಜೆ.ಡಿ.ಯವರ ಆಗಮನವಾಯಿತು. ಎಲ್ಲರೂ ಸಡಗರದಿಂದ ಎದ್ದು ಕೈ ಮುಗಿದರು. ಸತೀಶನಿಗೆ ಆಶ್ಚರ್ಯವಾಯಿತು. ಜೆ.ಡಿ. ಒಬ್ಬರು ಲೇಡಿ ಎಂದು ಗೊತ್ತಿತ್ತೇ ವಿನಾ ಅವರು ಇಷ್ಟು ಚಿಕ್ಕ ವಯಸ್ಸಿನವರು ಎಂದು ತಿಳಿದಿರಲಿಲ್ಲ. ವಯಸ್ಸಾದ ಮಹಿಳೆ ಎಂದು ಅವನ ಭಾವನೆಯಾಗಿತ್ತು. ಸರದಿಯಂತೆ ಎಲ್ಲರದೂ ಮುಗಿದ ಮೇಲೆ, ಸತೀಶ ಫೈಲ್ ‌ತೆಗೆದುಕೊಂಡು ಒಳಗೆ ಹೋದ.

ಮೇಡಂ ತಲೆ ತಗ್ಗಿಸಿಕೊಂಡು ಯಾವುದೋ ಫೈಲಿನ ಪರಿಶೀಲನೆಯಲ್ಲಿದ್ದರು. ಎದುರಿಗೆ ವ್ಯಕ್ತಿ ನಿಂತಿರುವುದನ್ನು ಗಮನಿಸಿದ ಅವರು, “ಪ್ಲೀಸ್‌ ಸಿಡೌನ್‌…..” ಎಂದು ತಲೆಯೆತ್ತಿ ನೋಡಿದರು. ಆ ಮುಖವನ್ನು ಎಲ್ಲೋ ನೋಡಿದ ನೆನಪಾಯಿತು. ಆದರೆ ಎಲ್ಲಿ ಎಂದು ಗೊತ್ತಾಗಲಿಲ್ಲ.

ಸತೀಶನಿಗೆ ಆ ಮುಖ ಬೇಗನೆ ಪರಿಚಯವಾಗಿ ಹೋಯಿತು. `ಇವಳು ನಿರ್ಮಲಾ….! ತಾನು ಪೆದ್ದು ದಡ್ಡಿ ಎಂದು ತಿರಸ್ಕರಿಸಿದ್ದ ನಿರ್ಮಲಾ….! ಈಗ ಇವಳ ಮುಂದೆ ನನ್ನನ್ನು ಕಾಪಾಡುವ ಎಂದು ಕೈ ಮುಗಿದು ನಿಂತಿದ್ದೇನೆ. ಅಯ್ಯೋ! ಭಗವಂತಾ…. ಎಂತಹ ಲೀಲೆ ನಿನ್ನದು!  ನನ್ನ ಅಹಂಕಾರಕ್ಕೆ ತಕ್ಕ ಶಿಕ್ಷೆಯನ್ನೇ ಕೊಟ್ಟಿದ್ದೀಯಾ…..’ ಎಂದು ಬೆವರಿದ ಮುಖವನ್ನು ಒರೆಸಿಕೊಳ್ಳತೊಡಗಿದ.

ಅವನ ಅರ್ಜಿಯನ್ನು ನೋಡುತ್ತಾ, “ನಿಮ್ಮ ಸಮಸ್ಯೆ ಏನು…..?” ಎಂದು ನಿರ್ಮಲಾ ಶಾಂತವಾಗಿ ಕೇಳಿದಳು.

ಸತೀಶನ ಗಂಟಲು ಗದ್ಗದಿತವಾಗಿ, ನಾಲಿಗೆ ತಡವರಿಸಿ, ಮಾತು ಹೊರಬರಲಿಲ್ಲ. ಅವನ ಅರ್ಜಿ, ಹೆಸರು, ವಿಳಾಸ ನೋಡುತ್ತಿದ್ದಂತೆ ತನ್ನ ಮುಂದೆ ನಿಂತಿರುವವನು ತನ್ನನ್ನು ಪೆದ್ದು ಎಂದಿದ್ದ ಸತೀಶನೇ ಎಂದು ನಿರ್ಮಲಾಗೆ ಗೊತ್ತಾಗಿ ಹೋಯಿತು. ಆದರೂ ಅದನ್ನು ತೋರಗೊಡಗದೆ, “ಏನಾಗಬೇಕಾಗಿದೆ ನನ್ನಿಂದ?” ಎಂದು ಮತ್ತೆ ಕೇಳಿದಳು.

ಸತೀಶನಿಗೆ ಮತ್ತೆ ನಾಲಿಗೆ ಒಣಗಿತು. ತನ್ನ ಗುರುತು ನಿರ್ಮಲಾಳಿಗೆ ತಿಳಿದರೂ ಅದನ್ನು ತೋರಗೊಡದೆ ಮಾತನಾಡುತ್ತಿದ್ದಾಳೆ ಎಂದು ಕೂಡ ಅರ್ಥವಾಯಿತು. ಅವನು ತಡರಿಸುತ್ತಲೇ, “ನನ್ನನ್ನು ಕ್ಷಮಿಸಿ ಮೇಡಂ……” ಎನ್ನುತ್ತಾ ತನ್ನ ಅಳಲು ತೋಡಿಕೊಂಡ.

“ಯಾವುದನ್ನು ಕ್ಷಮಿಸುವುದು….? ನೀವು ಕೊಟ್ಟ ಅರ್ಜಿಯನ್ನು ನೋಡಿದರೆ, ಅವೆಲ್ಲಾ ಸರ್ಕಾರಿ ಭೂಮಿ! ಬಡಬಗ್ಗರಿಗೆ ಎಂದು ಮೀಸಲಾದ ಭೂಮಿಯನ್ನು, ಅಪಾತ್ರರಿಗೆ ನೀಡಿ ಲಕ್ಷಾಂತರ ಹಣ ಪಡೆದಿದ್ದೀರಿ ಎಂಬ ದೂರು ನನ್ನ ಬಳಿ ಬಂದಿದೆ. ಈ ವಿಷಯದಲ್ಲಿ ನನ್ನ ತಪ್ಪೇನೂ ಇಲ್ಲ ಎಂದು ಅರ್ಜಿ ಹಿಡಿದು ಬಂದಿದ್ದೀರಿ. ನೀವು ಮಾಡಿದ್ದು ತಪ್ಪು ತಾನೇ….? ಮಾಡಿದ ತಪ್ಪಿಗೆ ನೀವು ಶಿಕ್ಷೆ ಅನುಭವಿಸಲೇಬೇಕು,” ಎಂದಾಗ, ಸತೀಶನಿಗೆ ಬೀಸಿ ಹೊಡೆದಂತಾಯಿತು. `ಇವಳು ಹಿಂದಿನ ಕೋಪದಿಂದ, ಯಾವ ತಪ್ಪಿಗೆ ಶಿಕ್ಷೆ, ಎನ್ನುತ್ತಿದ್ದಾಳೋ ಗೊತ್ತಾಗಲಿಲ್ಲವಲ್ಲ,’ ಎಂದು ಮನದಲ್ಲೇ ಮುಜುಗರ ಪಟ್ಟುಕೊಂಡ.

ಅವನು ಎಷ್ಟು ನಿರ್ಬಲನಾದನೆಂದರೆ, ದೀನನಾಗಿ ಅವಳನ್ನೇ ನೋಡತೊಡಗಿದ. ನಾಲಿಗೆ ಒಣಗಿತು. ಅಪಮಾನದಿಂದ ಶರೀರ ಕಂಪಿಸತೊಡಗಿತು. ಸತೀಶ ಅವಳನ್ನೇ ಎಲೆಯಿಕ್ಕದೆ ನೋಡಿದಾಗ, `ತಾನು ಮೊದಲ ಬಾರಿ ಹುಡುಗಿ ನೋಡಲು ಹೋಗಿದ್ದಾಗ, ಹೇಗಿದ್ದಳೋ ಈಗಲೂ ಹಾಗೆ ಇದ್ದಾಳೆ,’ ಎನಿಸಿತು.

`ಹೌದು…. ಶಾಂತ ಸ್ವಭಾವದ ಹುಡುಗಿ, ಮನಸ್ಸಿನಲ್ಲಿ ಕಲ್ಮಶವಿಲ್ಲದವಳು. ಹೌದು…. ಇವಳು ಯಾವಾಗ ಇಷ್ಟು ಓದಿಕೊಂಡಳು…. ಯಾವಾಗ ನನಗೆ ಅಧಿಕಾರಿಯಾದಳು? ನನ್ನ ಅಹಂಕಾರದಿಂದ ಇಂಥ ಸುಶೀಲೆಯನ್ನು ತಿರಸ್ಕರಿಸಿದ್ದಕ್ಕೆ, ಇಂದು ಇವಳ ಮುಂದೆ ಯಾಚಕನಾಗಿ, ನನ್ನನ್ನು ಕಾಪಾಡು ಎನ್ನುತ್ತಾ ನಿಲ್ಲಬೇಕಾದ ಶಿಕ್ಷೆ….’ ಎಂದು ತಲೆ ತಗ್ಗಿಸಿಕೊಂಡ ಯೋಚಿಸತೊಡಗಿದ.

“ಏನು ಯೋಚಿಸುತ್ತಿರುವಿರಿ…..? ಹಿಂದಿನ ನೆನಪಾಯಿತೇ….? ಈಗ ಅದನ್ನು ಬಿಡಿ. ನನಗೂ ಮದುವೆಯಾಗಿದೆ. ನನ್ನ ಯಜಮಾನರು ಮೈಸೂರಿನಲ್ಲಿ ಡಿ.ಸಿಯಾಗಿದ್ದಾರೆ,” ಎಂದು ತನಗೆ ಅವನ ಪರಿಚಯ ಹತ್ತಿದೆ ಎಂಬ ಸೂಚನೆಯನ್ನು ನಿರ್ಮಲಾ ಕೊಟ್ಟಾಗ, ಅವನು ಇನ್ನೂ ತಲೆತಗ್ಗಿಸಬೇಕಾಯಿತು.

`ಈಗ ಇವಳೇ ಆಧಾರ….! ಈಗ ನಾನು ಸ್ವಾಭಿಮಾನ, ಮರ್ಯಾದೆ ಎಂದು ಯೋಚಿಸುತ್ತಿದ್ದರೆ, ಲಂಚಕೋರ ಎಂಬ ಹಣೆಪಟ್ಟಿ ಅಂಟಿಸಿಕೊಂಡು ಕೆಲಸ ಕಳೆದುಕೊಳ್ಳಬೇಕಾಗುತ್ತದೆ,’ ಎಂದು ಯೋಚಿಸಿ ತನ್ನೆಲ್ಲಾ ವಿಚಾರಗಳನ್ನು ಹೇಳಿಕೊಂಡ.

“ನೋಡಿ, ನಿಮ್ಮ ಹೇಳಿಕೆ ಸತ್ಯವಾದರೆ ಮಾತ್ರ ನಾನು ನಿಮಗೆ ಸಹಕರಿಸಬಹುದು. ನಿಮ್ಮ ಹೇಳಿಕೆಗಳು ಪ್ರಾಮಾಣಿಕವಾಗಿರಬೇಕು. ನಾನು ಕೂಡ ಕೆಳಗಿನ ಕಛೇರಿಯಿಂದ ಎಲ್ಲ ಎವಿಡೆನ್ಸ್ ಗಳನ್ನು ತರಿಸಿಕೊಂಡು ಇದು ಸತ್ಯವೇ….? ಅಥವಾ ವೃತ್ತಿ ದ್ವೇಷದಿಂದ ಮಾಡಿರುವ ಕೆಲಸವೇ….? ಎಂದು ಪರಿಶೀಲಿಸುತ್ತೇನೆ. ತಪ್ಪಿತಸ್ಥರು ಯಾರೇ ಆಗಿರಲಿ, ಅಂತಹವರು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ನಿಮ್ಮನ್ನೂ ಸೇರಿಸಿ……” ಎಂದು ನಿಷ್ಠೂರವಾಗಿ ನಿರ್ಮಲಾ ಹೇಳಿದಳು.

ಸತೀಶ ಮುಖದಲ್ಲಿ ಇಳಿದ ಬೆವರನ್ನು ಒರೆಸಿಕೊಳ್ಳುತ್ತಾ, “ನನ್ನನ್ನು ಕ್ಷಮಿಸುವಿರಾ ಮೇಡಂ…..?” ಎಂದು ಕೇಳಿದ. ಅವನಿಗೆ ತನ್ನ ಈಗಿನ ಸಮಸ್ಯೆಗಿಂತಲೂ ಹಿಂದೆ ತಾನು ನಿರ್ಮಲಾಳನ್ನು ದಡ್ಡಿ ಎಂದು ಹಂಗಿಸಿದ್ದು ಬಹಳ ನೋವು ಮತ್ತು ಮುಜುಗರವನ್ನು ಉಂಟು ಮಾಡತೊಡಗಿತು.

ನಿರ್ಮಲಾ ನಗುತ್ತಾ, “ಯಾವ ವಿಚಾರಕ್ಕೆ ಕ್ಷಮಿಸುವುದು…..? ನಿಮ್ಮಿಂದ ನನಗೂ ಒಂದು ತರಹ ಅನುಕೂಲವೇ ಆಯಿತು. ಅಂದಿನ ಅವಮಾನದ ಮಾತಿಗೂ ಇಂದಿನ ಪ್ರಸಂಗಕ್ಕೂ ತಳುಕು ಹಾಕುವ ಸಣ್ಣ ಮನಸ್ಸಿನವಳಲ್ಲ ನಾನು,” ಎಂದಾಗ ಸತೀಶ ಮತ್ತಷ್ಟೂ ಕುಗ್ಗಿಹೋದ.

ನಿರ್ಮಲಾ ತಡಮಾಡದೆ ಬಹಳ ಕಾಳಜಿ ವಹಿಸಿ ಎಲ್ಲಾ ಕಡತಗಳನ್ನು ಪರಿಶೀಲನೆ ನಡೆಸಿದಾಗ, ಸತೀಶನದು ಯಾವ ತಪ್ಪೂ ಇಲ್ಲ ಎಂದು ರುಜುವಾಯಿತು. ತಪ್ಪಿತಸ್ಥರಿಗೆ ಶಿಕ್ಷೆಯಾಗಿ ಸತೀಶನ ಮೇಲಿದ್ದ ಸುಳ್ಳು ಆಪಾದನೆ ರದ್ದಾಯಿತು.

ತೀರ್ಪು ಬಂದ ದಿನ ಸತೀಶ ಸಂಕೋಚದಿಂದಲೇ ಬಂದು ನಿರ್ಮಲಾಗೆ ಅರಿಶಿನ ಕುಂಕುಮ, ಹೂ ಹಣ್ಣುಹಂಪಲುಗಳನ್ನು ಕೊಟ್ಟು, ಕೈ ಮುಗಿದುಕೊಂಡು, “ನನ್ನನ್ನು ಕ್ಷಮಿಸುವಿರಾ…? ಅಂದಿನ ನನ್ನ ಅಹಂಕಾರದಿಂದಾಗಿ ಒಂದು ಅನರ್ಘ್ಯ ರತ್ನವನ್ನು ಕಳೆದುಕೊಂಡುಬಿಟ್ಟೆ,” ಎಂದು ವಿನಯದಿಂದ ಹೇಳಿದ.

ನಿರ್ಮಲಾ ನಸುನಗುತ್ತಾ, “ಮತ್ತೆ ಯಾವ ತಪ್ಪಿಗೆ ಕ್ಷಮೆ ಕೇಳುತ್ತಿದ್ದೀರಿ….? ನಿಮ್ಮ ಕೆಲಸವಾಯಿತು ತಾನೇ…..? ಒಳ್ಳೆಯದಾಯ್ತಲ್ಲ…. ಈ ಚೇರಿನಲ್ಲಿ ಕುಳಿತಿದ್ದ ಕಾರಣದಿಂದಲೇ ನಿಮ್ಮ ಸಮಸ್ಯೆಯನ್ನು ಬೇಗ ಪರಿಹರಿಸಲು ಅನುಕೂಲವಾಯಿತು. ನನ್ನ ಯಜಮಾನರು ಮೈಸೂರಿನ ಡಿ.ಸಿಯಾಗಿ ಕೆಲಸ ಮಾಡುತ್ತಿದ್ದಾರೆ,” ಎಂದು ತನ್ನನ್ನು ಮದುವೆಯಾಗಿರುವವರು ನಿನಗಿಂತಲೂ ಮೇಲ್ಮಟ್ಟದ ಅಧಿಕಾರಿ ಎಂಬುದನ್ನು ಸೂಚ್ಯವಾಗಿ ತಿಳಿಸುತ್ತಾ, “ಹೋಗಿಬನ್ನಿ, ದೇವರು ಒಳ್ಳೆಯದು ಮಾಡಲಿ,” ಎಂದಳು.

ಸತೀಶ ತನ್ನ ಸಮಸ್ಯೆಯಿಂದ ಹೊರ ಬಂದಿದ್ದರೂ ಏಕೋ ಏನೋ….. ಮನಸ್ಸು ಭಾರವಾಗಿತ್ತು. `ಮನುಷ್ಯ ಯಾರನ್ನೂ ಅಹಂಕಾರವಾಗಿ ಕಾಣಬಾರದು…. `ಕಾಲಾಯ ತಸ್ಮೈ ನಮಃ’ ಎಂದು ಕೃಷ್ಣ ಹೇಳಿರುವುದು ನಿಜ ಅಲ್ಲವೇ….? ಕಾಲ ಎಲ್ಲರಿಗೂ ಪಾಠ ಕಲಿಸುತ್ತದೆ. ನನ್ನ ಅಹಂಕಾರದ ಮಾತಿಗೆ ತಕ್ಕ ಶಿಕ್ಷೆಯಾಗಿದೆ,’ ಎಂದುಕೊಳ್ಳುತ್ತಾ ಸೋತು ಹೋದನಂತೆ, ಅಲ್ಲಿಂದ ಹೆಜ್ಜೆ ಹಾಕಿದ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ