ಗೃಹಶೋಭಾ ಮಹಿಳಾ ಓದುಗರ ವಿಶೇಷ ಅಭಿವೃದ್ಧಿ, ವ್ಯಕ್ತಿತ್ವ ವಿಕಾಸ, ಏಳಿಗೆಗಾಗಿ ಎಂದೇ, ಡೆಲ್ಲಿ ಪ್ರೆಸ್ ಪ್ರಕಟಣಾ ತಂಡ, ಗೃಹಶೋಭಾ ಮಾಸಪತ್ರಿಕೆಯ ವತಿಯಿಂದ `ಗೃಹಶೋಭಾ ಹಬ್ಬ ಸಂಭ್ರಮ’ ಕಾರ್ಯಕ್ರಮವನ್ನು ಇತ್ತೀಚೆಗೆ ಬಲು ಅದ್ಧೂರಿಯಾಗಿ, ಸೆಪ್ಟೆಂಬರ್ 6 ರಂದು, ಬೆಂಗಳೂರಿನ ರಾಜಭವನ್ ರಸ್ತೆಯ ಹೋಟೆಲ್ ಕ್ಯಾಪಿಟಲ್ ನಲ್ಲಿ ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕಾಗಿ ಬಂದಿದ್ದ 150ಕ್ಕೂ ಹೆಚ್ಚು ಮಂದಿ ಮಹಿಳೆಯರು ಅತಿ ಉತ್ಸಾಹದಿಂದ ತಮ್ಮ ಆರೋಗ್ಯ, ಪೌಷ್ಟಿಕ ಆಹಾರ, ಸೆಲೆಬ್ರಿಟಿ ಶೆಫ್ ರಿಂದ ಅಡುಗೆ ಡೆಮೊ, ಹೆಚ್ಚಿನ ಮನರಂಜನೆ ಇತ್ಯಾದಿಗಳಿಗಾಗಿ ಇಲ್ಲಿ ಸೇರಿದ್ದರು.

ಶ್ರಾವಣ ಮಾಸದಿಂದ ಶುರುವಾಗುವ ಸಾಲು ಸಾಲು ಹಬ್ಬಗಳ ಸಲುವಾಗಿ, ತನ್ನ ಮಹಿಳಾ ಓದುಗರಿಗೆಂದೇ, `ಗೃಹಶೋಭಾ ಹಬ್ಬ ಸಂಭ್ರಮ’ ಇವೆಂಟ್ ನ್ನು ಏರ್ಪಡಿಸಿತ್ತು. ಈ ಕಾರ್ಯಕ್ರಮದ ರೂಪುರೇಷೆ ವಿವರಿಸುತ್ತಾ, ಆ್ಯಂಕರ್ ಭಾನುಪ್ರಿಯಾ ಬಂದಿದ್ದ ಎಲ್ಲಾ ಅತಿಥಿಗಳನ್ನೂ ಅಭಿನಂದಿಸುತ್ತಾ, ಪಾರ್ಟ್ ನರ್ಸ್ ನ್ನು ಪರಿಚಯಿಸಿದರು.
ಟೇಸ್ಟ್ ಪಾರ್ಟ್ ನರ್ : ಸನ್ ಪ್ಯೂರ್ ಹಾಗೂ ಡೇರಿ ಪಾರ್ಟ್ ನರ್ : ನಂದಿನಿ.
‘The Festive Season Starts Here’ ಎಂಬ ಆಶಯದೊಂದಿಗೆ ನಡೆದ ಕಾರ್ಯಕ್ರಮದ ಸೌಂದರ್ಯ, ಫ್ಯಾಷನ್, ಅಡುಗೆ, ಆರೋಗ್ಯ, ಗೃಹಾಲಂಕಾರ, ಕಲೆ, ಸಂಸ್ಕೃತಿ, ಜೀವನಶೈಲಿಗೆ ಸಂಬಂಧಿಸಿದ ಹಲವು ವಿಶೇಷ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ವಿವಿಧ ಕ್ಷೇತ್ರಗಳ ತಜ್ಞರು ಭಾಗವಹಿಸಿ ಮಹಿಳೆಯರ ದೈನಂದಿನ ಜೀವನಕ್ಕೆ ಉಪಯುಕ್ತವಾಗುವ, ಹಬ್ಬಗಳ ಸಡಗರ ಸಂಭ್ರಮ ಹೆಚ್ಚಿಸುವ ಹಲವಾರು ಮಾಹಿತಿ ಕುರಿತು ತಿಳಿಸಿಕೊಟ್ಟರು.
ಫೆಸ್ಟಿವ್ ವೆಲ್ ನೆಸ್ ಸೆಷನ್ : ಆರೋಗ್ಯವೇ ಭಾಗ್ಯ! ಹೀಗಾಗಿ ಹಬ್ಬಗಳಲ್ಲಿ ಮಹಿಳೆಯರು ಹೇಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಡಯೆಟಿಶಿಯನ್ ಯಶಸ್ವಿನಿ ಎಂ.ಎಸ್.

ತಿಳಿಸಿಕೊಟ್ಟರು. ಕ್ಲಿನಿಕ್ ಡಯೆಟಿಶಿಯನ್, ನ್ಯೂಟ್ರೀಶನ್, ವೆಲ್ ನೆಸ್ ಪ್ರೊಫೆಶನ್ ತಜ್ಞರಾದ ಇವರು ಹಬ್ಬಗಳಲ್ಲಿ ಹೆಂಗಸರು ಹೇಗೆ ತಮ್ಮ ವೆಲ್ ನೆಸ್ ಸ್ಥಿರಪಡಿಸಿಕೊಳ್ಳಬೇಕು ಎಂಬುದನ್ನು ಹಲವು ಉದಾಹರಣೆ, ಮಾಹಿತಿಗಳ ಮೂಲಕ ತಿಳಿಸಿಕೊಟ್ಟರು. ಹಬ್ಬ ಅಂದ ಮೇಲೆ ಗ್ರಾಂಡ್ ಲಂಚ್, ವಿಶೇಷ ತಿಂಡಿತಿನಿಸು ಇದ್ದೇ ಇರುತ್ತದೆ. ಹಬ್ಬದ ಸಡಗರ ಸಂಭ್ರಮಕ್ಕೆ ಧಕ್ಕೆ ಬರದಂತೆ ಇದನ್ನೆಲ್ಲ ಹೇಗೆ ಸೇವಿಸಬೇಕೆಂದು ತಿಳಿಸಿಕೊಟ್ಟರು. ಮುಖ್ಯ ಧಾರಾಳ ನೀರು ಕುಡಿಯುತ್ತಿರಬೇಕು, ಹೆವಿ ಸ್ವೀಟ್ಸ್ ನ್ನು ಸಣ್ಣ ಪೋರ್ಶರ್ನ್ಸ್ ಆಗಿ ಮಧ್ಯೆ ಮಧ್ಯೆ ಸವಿಯಬೇಕು, ಭಾರಿ ಗ್ರಾಂಡ್ ಲಂಚ್ ನಂತರ ತಕ್ಷಣ ಮಲಗದೆ ತುಸು ಓಡಾಡಬೇಕು. ಪೌಷ್ಟಿಕ ಆಹಾರದಲ್ಲಿನ ಪ್ರೋಟೀನ್, ಕಾರ್ಬೊಹೈಡ್ರೇಟ್ಸ್, ವಿಟಮಿನ್ಸ್, ಮಿನರಲ್ಸ್ ಎಲ್ಲದರ ಮಹತ್ವ ತಿಳಿಸಿಕೊಟ್ಟು, ಮಹಿಳಾ ವೃಂದದ ಹಲವಾರು ಸಂದೇಹಗಳನ್ನು ನಿವಾರಿಸಿ, ಅವರಿಗೆ ಸೂಕ್ತ ಸಲಹೆಗಳನ್ನೂ ನೀಡಿದರು.
ಫೆಸ್ಟಿವ್ ಸ್ಪೇಸಸ್ ಸೆಷನ್ : ನಂತರದ ಸೆಷನ್ ಗೃಹಾಲಂಕಾರದ ಕುರಿತಾಗಿತ್ತು. ಸೃಜನಾ ಹಿರೇಮಠ್ ಮೂಲತಃ ಆರ್ಕಿಟೆಕ್ಟ್ ಹಾಗೂ ಇಂಟೀರಿಯರ್ ಡಿಸೈನರ್. ಬೆಂಗಳೂರಿನ ರಶ್ ಡಿಸೈನ್ ಸ್ಟುಡಿಯೋ ನಿರ್ವಾಹಕಿ.

ಕಂಟೆಂಪರರಿ ಡಿಸೈನ್ಸ್ ನ್ನು ಇಂಡಿಯನ್ ಏಸ್ಥೆಟಿಕ್ಸ್ ಜೊತೆ ಬೆರೆಸಿ ಮನೆಗಳಿಗೆ ಅದ್ಭುತ ಒಳಾಲಂಕಾರದ ಜೀವಕಳೆ ತುಂಬಿಸುತ್ತಾರೆ. ಇವರು ಮುಖ್ಯವಾಗಿ ಹಬ್ಬಗಳಲ್ಲಿ ಹೆಂಗಸರು ಹೇಗೆಲ್ಲ ತಮ್ಮ ಮನೆಯ ಅಲಂಕಾರದಿಂದ ಹಬ್ಬದ ಸಡಗರ ಸಂಭ್ರಮವನ್ನು ಹಸಿರಿನಿಂದ ಹೆಚ್ಚಿಸಬಹುದೆಂದು ತಿಳಿಸಿಕೊಟ್ಟರು.
ಅದು ತಳಿರು ತೋರಣ, ಹೂ ಬಳ್ಳಿಗಳ ಅಲಂಕಾರ, ಟೆಕ್ಸ್ ಟೈಲ್ಸ್ ಇಂಡಿಯನ್ ಟ್ರೆಡಿಶನಲ್ ಐಟೆಮ್ಸ್, ರಂಗೋಲಿ, ದೀಪಹಣತೆ, ವೈಬ್ರೆಂಟ್ ಕಲರ್ಸ್, ಹಳೆಯ ಉಪ್ಪಿನಕಾಯಿ ಜಾಡಿಗಳಿಂದ ಮಾಡಬಹುದಾದ ಅಲಂಕಾರ, ಮನೆಗೆ ಚಂದದ ಪೇಂಟಿಂಗ್, ಬೆಳಕಿನ ವ್ಯವಸ್ಥೆ, ಫ್ರಾಗ್ರೆನ್ಸ್, ಫುಡ್‌ಫೆಸ್ಟಿವ್ ಟೇಬಲ್ಸ್…. ಇತ್ಯಾದಿ ಹಬ್ಬಗಳ ಸಮಸ್ತ ಗೃಹಾಲಂಕಾರದ ಮಹತ್ವ ತಿಳಿಸಿಕೊಟ್ಟು, ಪ್ರೇಕ್ಷಕರ ಹಲವಾರು ಸಂದೇಹ ನಿವಾರಿಸಿ, ಸಲಹೆ ನೀಡಿದರು.
ಭರತನಾಟ್ಯದ ಸೆಶನ್ : ಆ ನಂತರ ಶಾಸ್ತ್ರೀಯ ನೃತ್ಯ ಪ್ರದರ್ಶನ ಏರ್ಪಡಿಸಲಾಗಿತ್ತು.

ಭರತನಾಟ್ಯದ ಈ ಮೇರು ಪ್ರದರ್ಶನವನ್ನು ಶಾಸ್ತ್ರೀಯ ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವೀಧರೆಯಾದ ಸುಮಾ ಪ್ರಭು ಅದ್ಭುತವಾಗಿ ಪ್ರದರ್ಶಿಸಿದರು. ಮೊದಲಿಗೆ ಹಂಸಧ್ವನಿ ರಾಗದಲ್ಲಿ ಗಣಪತಿಗೆ ಪುಷ್ಪಾಂಜಲಿ ನಮನ ಸಲ್ಲಿಸುವ ನೃತ್ಯ. ನಂತರ ಚಾಮುಂಡೇಶ್ವರಿ ಪಾಲಯಮಾಮ್ ಎಂದು ಬರಲಿರುವ ನವರಾತ್ರಿ ಹಬ್ಬಕ್ಕಾಗಿ `ಯಾ ದೇವಿ… ಸರ್ವಭೂತೇಶು….’ ಸ್ತುತಿಯೊಂದಿಗೆ, ಆ ಮಹಿಷಾಸುರ ಮರ್ದಿನಿಯ ವಿವಿಧ ಭಾವಭಂಗಿಗಳ ಮೂಲಕ ಪ್ರೇಕ್ಷಕರಿಂದ ಪ್ರಚಂಡ ಕರತಾಡನ ಗಿಟ್ಟಿಸಿದರು.
ಫೆಸ್ಟಿವ್ ಫ್ಲೇವರ್ಸ್ ಸೆಷನ್ : ಹಬ್ಬದ ಸಂಭ್ರಮ ಎಂದ ಮೇಲೆ ವಿಶೇಷ ರುಚಿಕರ ಅಡುಗೆ ತಯಾರಗಬೇಕಲ್ಲವೇ?

ಈ ನಿಟ್ಟಿನಲ್ಲಿ ಶೆಫ್ ಸವಿತಾ ಕೃಷ್ಣಮೂರ್ತಿ ವಿಶೇಷ ಹಬ್ಬದಡುಗೆ ಮಾಡಿ ತೋರಿಸಿಕೊಟ್ಟರು. ಉದಯ ಟವಿ, ಕಲರ್ಸ್ ಕನ್ನಡ, ಝೀ ಕನ್ನಡ, ಸುವರ್ಣಾ ಟಿವಿ ಇತ್ಯಾದಿಗಳಲ್ಲಿ ಜನಪ್ರಿಯ ಶೆಫ್ ಆಗಿ ಮಿಂಚುತ್ತಿರುವ, ಕಿರುತೆರೆಯಲ್ಲಿ ಹಲವು ಧಾರಾವಾಹಿಗಳಿಂದ ಖ್ಯಾತಿವೆತ್ತ ಸವಿತಾ ಕೃಷ್ಣಮೂರ್ತಿಯವರು ನೂರಾರು ಟಿವಿ ಅಡುಗೆ ಕಾರ್ಯಕ್ರಮಗಳಿಂದ, ನಮ್ಮ ಓದುಗರಿಗೆ ತಮ್ಮ `ಅಮೃತರ್ಷಿಣಿ’ಯ ಯಶೋದಮ್ಮ ಪಾತ್ರದಿಂದ ಚಿರಪರಿಚಿತರು. ಪ್ರಸ್ತುತ ಝೀ ಟವಿಯ `ಆದಿಲಕ್ಷ್ಮಿ ಪುರಾಣ’ ಧಾರಾವಾಹಿಯಲ್ಲಿ ಪ್ರಮುಖ ವ್ಯಾಂಪ್ ಆಗಿ ತಮ್ಮ ನಟನಾ ಕೆರಿಯರ್ ಮುಂದುವರಿಸುತ್ತಿರುವ ಇವರು ಪ್ರೇಕ್ಷಕರಿಗಾಗಿ ಬ್ರೆಡ್, ಹಾಲು, ಸಕ್ಕರೆ, ಮಿಲ್ಕ್ ಮೇಡ್ ಬಳಸಿ `ಮಲಾಯ್ ರಾಜ್ ಭೋಗ್’ ಎಂಬ ಅದ್ಭುತ ಸಿಹಿ ಹಾಗೂ `ವೆಜ್ ಚೀಸ್ ಪ್ಯಾಟೀಸ್’ ಎಂಬ ಖಾರದ ಕರಿದ ವ್ಯಂಜನಕ್ಕೆ ಬೇಕಾದ ಎಲ್ಲಾ ಸಾಮಗ್ರಿ, ಮಾಡುವ ವಿಧಾನವನ್ನು ಹಂತ ಹಂತವಾಗಿ ತೋರಿಸಿಕೊಟ್ಟು, ಅದ್ಭುತ ಪ್ಲೇಟಿಂಗ್ ಮೂಲಕ, ಮಹಿಳಾ ವೃಂದಕ್ಕೆ ಅದನ್ನು ಸವಿಯಲು ನೀಡಿದರು. ಅದನ್ನು ಸವಿದು ಚಪ್ಪರಿಸಿದ ಅತಿಥಿಗಳು, ಅಡುಗೆ ಕುರಿತಾಗಿ ಇವರಿಂದ ವಿಶೇಷ ಸಲಹೆ ಸೂಚನೆ ಪಡೆದು, ತಮ್ಮ ಎಲ್ಲಾ ಸಂದೇಹ ನಿವಾರಿಸಿಕೊಂಡರು.
ಫೆಸ್ಟಿವ್ ಗ್ಲೋ ಸೆಷನ್ : ಬೆಂಗಳೂರಿನ ಹಿರಿಯ ಸೌಂದರ್ಯ ತಜ್ಞೆ `ಒನ್ ಮಿನಿಟ್ ಉಮಾ’ರ ಪರಿಚಯ ಹೊಸದಾಗಿ ಹೇಳಬೇಕಿಲ್ಲ.

ಇವರು ಅದ್ವಿತೀಯ ಬ್ಯೂಟೀಶನ್ ಮಾತ್ರವಲ್ಲದೆ, ಸೀರೆ ಡ್ರೇಪಿಂಗ್, ವಿವಿಧ ಬಗೆಯ ಹೇರ್ ಸ್ಟೈಲ್, ಬ್ಯೂಟಿ ಸ್ಟೈಲಿಂಗ್, ಸ್ಟನ್ನಿಂಗ್ ಮೇಕಪ್‌ಗೆ ಇಡೀ ಕರ್ನಾಟಕವೇ ಮೆಚ್ಚಿ `ಸಿಂಗಾರವ್ವನ ಅರಮನೆ’ ಎಂದು ಕೊಂಡಾಡಿದೆ. ಬ್ರೈಡಲ್ ಮೇಕಪ್ ನಲ್ಲಿ 10ಕ್ಕಿಂತ ಹೆಚ್ಚು ಲಿಮ್ಕಾ ರೆಕಾರ್ಡ್ಸ್ ಗಳಿಸಿರುವುದು ಇವರ ಮೇರು ಸಾಧನೆ.
ಈ ಸಲದ ಸೆಷನ್ ನಲ್ಲಿ ಹೆಣ್ಣುಮಕ್ಕಳಿಗೆ ಹಬ್ಬದ ಸಂದರ್ಭಕ್ಕೆ ಬೇಕಾಗುವ ವಿವಿಧ ಬಗೆಯ ಸೀರೆ ಡ್ರೇಪಿಂಗ್ ಬಗ್ಗೆ ಅಚ್ಚುಕಟ್ಟಾಗಿ ತಿಳಿಸಿಕೊಟ್ಟರು. ಮೂವರು ಹೆಣ್ಣುಮಕ್ಕಳನ್ನು ವೇದಿಕೆಗೆ ಕರೆದು, ವಿವಿಧ ಶೈಲಿಗಳಲ್ಲಿ ಗುಜರಾತಿ ಸ್ಟೈಲ್, ಸೀದಾ ಪಲ್ಲು, ಉಲ್ಟಾ ಪಲ್ಲು, ಕಚ್ಚೆ ಶೈಲಿ ಇತ್ಯಾದಿ ಬಗೆಬಗೆಯಾಗಿ ಕೆಲವೇ ನಿಮಿಷಗಳಲ್ಲಿ ಹೇಗೆ ಸೀರೆ ಉಡಬಹುದೆಂದು ತೋರಿಸಿಕೊಟ್ಟರು. ಲೂಸಾದ ಬ್ಲೌಸ್ ಸರಿಪಡಿಸುವಿಕೆ, ಬೈತಲೆ ಬೊಟ್ಟು ಅಳವಡಿಕೆ ಇತ್ಯಾದಿ ಕ್ಷಣಾರ್ಧದಲ್ಲಿ ತೋರಿಸಿಕೊಟ್ಟು ಇಡೀ ಮಹಿಳಾ ಸಮುದಾಯ ಬೆರಗಾಗುವಂತೆ ಮಾಡಿದರು. ಅವರೆಲ್ಲರ ಸಂದೇಹಗಳನ್ನೂ ನಿವಾರಿಸಿಕೊಟ್ಟು ಹಬ್ಬಕ್ಕೆ ಹೇಗೆ ಬೇಗ ಸೀರೆ ಉಟ್ಟು ರೆಡಿಯಾಗಬಹುದೆಂಬ ಅಮೂಲ್ಯ ಸಲಹೆ ನೀಡಿದರು.
ಇಷ್ಟೆಲ್ಲಾ ಕಾರ್ಯಕ್ರಮ ಮುಗಿಸಿಕೊಂಡು, ಇವೆಂಟ್ ಗೆ ಬಂದಿದ್ದ ಹೆಂಗಸರು, ಅತ್ಯುತ್ತಮ ಪೌಷ್ಟಿಕ ಆಹಾರ ಸೇವಿಸಿ, ಪ್ರತಿಯೊಬ್ಬರೂ ಅಪಾರ ಉಡುಗೊರೆ ತುಂಬಿದ್ದ ಗುಡೀ ಬ್ಯಾಗ್ ನ್ನು ಪಡೆದು, ಸಂತೋಷದಿಂದ ವಿದಾಯ ಕೋರಿದರು. ಒಟ್ಟಾರೆ ಗೃಹಶೋಭಾ ಹಬ್ಬ ಸಂಭ್ರಮಕ್ಕೆ ಬಂದಿದ್ದ ಹೆಂಗಸರೆಲ್ಲರೂ ಇದನ್ನು ಬಹಳ ಎಂಜಾಯ್ ಮಾಡಿದರು. ಇವೆಂಟ್ ಬಹಳ ಯಶಸ್ವಿಯಾಗಿ ನೆರವೇರಿತು!
– ಪ್ರತಿನಿಧಿ





