ಹಿರಿಯ ನಟಿ ಅಂಬಿಕಾ ವಿರುದ್ಧ ಅವರ ಸಹೋದರಿ ರಾಧಾ ಚೆಕ್ ವಂಚನೆಯ ದೂರು ದಾಖಲಿಸಿದ್ದಾರೆ.

ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ಇರಿಸಿದ್ದ ಸಹಿ ಮಾಡಿದ ಖಾಲಿ ಚೆಕ್‌ಗಳನ್ನು ತಮ್ಮ ಗಮನಕ್ಕೆ ಬಾರದೆ ತೆಗೆದುಕೊಂಡು, ಸುಮಾರು 46 ಕೋಟಿ ರೂ. ಪಡೆಯಲು ಪ್ರಯತ್ನಿಸಲಾಗಿದೆ ಎಂದು ರಾಧಾ ಆರೋಪಿಸಿದ್ದಾರೆ.

ಅಂಬಿಕಾ ಮತ್ತು ಅವರ ಸಹೋದರ ಮಲ್ಲಿಕಾರ್ಜುನ ಕುಂಜನ್ ನಾಯರ್ ಅವರ ಹೆಸರನ್ನು ಉಲ್ಲೇಖಿಸಿರುವ ಈ ದೂರನ್ನು ಸೆಪ್ಟೆಂಬರ್ 21 ರಂದು ಗ್ರೇಟರ್ ಚೆನ್ನೈ ಪೊಲೀಸ್ ಆಯುಕ್ತರಿಗೆ ಸಲ್ಲಿಸಲಾಗಿದೆ.

ರಾಧಾ ದೂರಿನ ಪ್ರಕಾರ, ತಾನು ವ್ಯವಹಾರ ಸಂಬಂಧಿತ ವೆಚ್ಚಗಳಿಗಾಗಿ ಐಡಿಬಿಐ (IDBI) ಬ್ಯಾಂಕ್‌ನಲ್ಲಿ ಚಾಲ್ತಿ ಖಾತೆಯನ್ನು (current account) ಹೊಂದಿದ್ದು, ಚೆನ್ನೈ ನಿವಾಸದಲ್ಲಿರುವ ತಮ್ಮ ಕೊಠಡಿಯಲ್ಲಿ ಸಹಿ ಮಾಡಿದ ಕೆಲವು ಖಾಲಿ ಚೆಕ್‌ಗಳನ್ನು ಇರಿಸಿದ್ದೆ. ಪ್ರಯಾಣದಲ್ಲಿರುವಾಗ ವೇತನ, ಉಪಯುಕ್ತ ಸೇವೆಗಳ ಬಿಲ್‌ಗಳು, ತೆರಿಗೆಗಳು ಮತ್ತು ತೋಟದ ನಿರ್ವಹಣೆಯಂತಹ ದಿನನಿತ್ಯದ ಪಾವತಿಗಳಿಗಾಗಿ ಈ ಚೆಕ್‌ಗಳನ್ನು ಇರಿಸಲಾಗಿತ್ತು.

ಆರಂಭದಲ್ಲಿ ‘ARS ಗಾರ್ಡನ್ ಸ್ಟುಡಿಯೋ’ ಹೆಸರಿನಲ್ಲಿ ಈ ಖಾತೆ ನಿರ್ವಹಿಸಲಾಗುತ್ತಿತ್ತು. ಜನವರಿ 2025 ರಲ್ಲಿ ವ್ಯವಹಾರದ ಹೆಸರನ್ನು ‘RR ಗಾರ್ಡನ್ಸ್’ ಎಂದು ಬದಲಾಯಿಸಿದ ನಂತರ, ಹೊಸ ಚೆಕ್ ಬುಕ್ ಸಿಕ್ಕಿತು. ಹಾಗಾಗಿ ಹಿಂದಿನ ಚೆಕ್ ಬುಕ್ ಬಳಕೆಯನ್ನು ನಿಲ್ಲಿಸಿದ್ದೆ. ಮನೆಯಲ್ಲಿದ್ದ ಹಳೆಯ ಚೆಕ್‌ಗಳ ಬಗ್ಗೆ ತಾವು ಮರೆತಿದ್ದಾಗಿ ಅವರು ತಿಳಿಸಿದ್ದಾರೆ.

ಸೆಪ್ಟೆಂಬರ್ 17 ರಂದು ಬ್ಯಾಂಕ್ ಅಧಿಕಾರಿಗಳು ಅವರನ್ನು ಸಂಪರ್ಕಿಸಿದ್ದು,. ಹಳೆಯ ಚೆಕ್‌ಗಳ ಪೈಕಿ ಐದು ಚೆಕ್‌ಗಳನ್ನು ಅಂಬಿಕಾ ಅವರ ಹೆಸರಿನಲ್ಲಿ ಒಟ್ಟು 46 ಕೋಟಿ ರೂ. ಪಡೆಯಲು ಬ್ಯಾಂಕ್‌ಗೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಂಬಿಕಾ ಅವರಿಗೆ ತಾವು ಯಾವುದೇ ಚೆಕ್‌ಗಳನ್ನು ನೀಡಿರಲಿಲ್ಲ ಅಥವಾ ಅಂತಹ ಪಾವತಿಗಳಿಗೆ ಕಾರಣವಾಗುವ ಯಾವುದೇ ಆರ್ಥಿಕ ಒಪ್ಪಂದವನ್ನು ಅವರೊಂದಿಗೆ ಮಾಡಿಕೊಂಡಿರಲಿಲ್ಲ ಎಂದು ಹೇಳಿರುವ ರಾಧಾ, ತಕ್ಷಣವೇ ಪಾವತಿಯನ್ನು ತಡೆಯುವಂತೆ ಬ್ಯಾಂಕ್‌ಗೆ ಸೂಚಿಸಿದ್ದಾರೆ. ಆ ಚೆಕ್‌ಗಳನ್ನು ತಮ್ಮ ಸಹೋದರ ಮಲ್ಲಿಕಾರ್ಜುನ ಭರ್ತಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾನೂನುಬಾಹಿರ ಆರ್ಥಿಕ ಲಾಭಕ್ಕಾಗಿ ಆ ದಾಖಲೆಗಳನ್ನು ಬಳಸಲು ಅಂಬಿಕಾ ಮತ್ತು ಮಲ್ಲಿಕಾರ್ಜುನ ಒಟ್ಟಾಗಿ ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ. ಅಲ್ಲದೆ, ತಾವು ಚೆನ್ನೈನಿಂದ ಹೊರಗಿದ್ದಾಗ ತಮ್ಮ ಕೊಠಡಿಯಿಂದ ಆ ಚೆಕ್‌ಗಳನ್ನು ಪಡೆಯಲಾಗಿದೆ ಎಂದೂ ಆರೋಪಿಸಿದ್ದಾರೆ.

ಕುಟುಂಬದ ಆಸ್ತಿ ವಿಚಾರದಲ್ಲಿಯೂ ಕಳವಳ ವ್ಯಕ್ತಪಡಿಸಿರುವ ರಾಧಾ, ಸುಮಾರು ಒಂದೂವರೆ ವರ್ಷದಿಂದ ತನ್ನ ಆಸ್ತಿಯನ್ನು ಪ್ರವೇಶಿಸದಂತೆ ತಡೆಯಲಾಗಿದೆ ಎಂದು ಆರೋಪಿಸಿದ್ದಾರೆ.

ಅಲ್ಲಿ ಬೆಲೆಬಾಳುವ ವಸ್ತುಗಳು, ಆಭರಣಗಳು, ಆಸ್ತಿ ದಾಖಲೆಗಳು ಮತ್ತು ಇತರ ದಾಖಲೆಗಳನ್ನು ಇಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಆರೋಪ ಸಾಬೀತಾದರೆ ಕ್ರಿಮಿನಲ್ ಕ್ರಮ ಕೈಗೊಳ್ಳುವಂತೆ ರಾಧಾ ಪೊಲೀಸರಿಗೆ ಕೇಳಿಕೊಂಡಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ