– ರಾಘವೇಂದ್ರ ಅಡಿಗ ಎಚ್ಚೆನ್.
‘ಟಾಕ್ಸಿಕ್’, ‘ಜನ ನಾಯಗನ್’ ಸೇರಿದಂತೆ ಹಲವು ಸಿನಿಮಾಗಳ ನಿರ್ಮಾಣ ಮತ್ತು ವಿತರಣೆಯಲ್ಲಿ ತೊಡಗಿರುವ ಕೆವಿಎನ್ ಪ್ರೊಡಕ್ಷನ್ಸ್ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಇತ್ತೀಚೆಗೆ ಬಿಡುಗಡೆಯಾದ ‘ಬಲರಾಮನ ದಿನಗಳು’ ಸಿನಿಮಾದ ವಿತರಣೆ ವ್ಯವಹಾರದಲ್ಲಿ ತಮಗೆ ಬರಬೇಕಾದ ಹಣ ನೀಡಿಲ್ಲ ಎಂದು ಆರೋಪಿಸಿ ಪದ್ಮಾವತಿ ಫಿಲಮ್ಸ್ ನಿರ್ಮಾಪಕರು ನಿರ್ಮಾಪಕರ ಸಂಘಕ್ಕೆ ದೂರು ಸಲ್ಲಿಸಿದ್ದಾರೆ. ನಷ್ಟಕ್ಕೆ ಪರಿಹಾರವಾಗಿ ಕೆವಿಎನ್ ಸಂಸ್ಥೆಯಿಂದ ₹2 ಕೋಟಿ ಕೊಡಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಪದ್ಮಾವತಿ ಫಿಲಮ್ಸ್ ನಿರ್ಮಾಣದ ‘ಬಲರಾಮನ ದಿನಗಳು’ ಸಿನಿಮಾದ ವಿತರಣೆಯನ್ನು ಕೆವಿಎನ್ ಪ್ರೊಡಕ್ಷನ್ಸ್ ವಹಿಸಿಕೊಂಡಿತ್ತು. ಆದರೆ ಸಿನಿಮಾ ವಿತರಣೆಯ ಬಳಿಕ ಬಂದ ಲಾಭದ ಮೊತ್ತವನ್ನು ನಿರ್ಮಾಪಕರಿಗೆ ನೀಡಿಲ್ಲ ಎಂದು ಪದ್ಮಾವತಿ ಫಿಲಮ್ಸ್ ಆರೋಪಿಸಿದೆ.
ದೂರಿನ ಪ್ರಕಾರ, ಕೆವಿಎನ್ ಸಂಸ್ಥೆಯ ಕಡೆಯವರು ಎಂದು ಪರಿಚಯಿಸಿಕೊಂಡ ಸುಪ್ರೀತ್ ಎಂಬವರು ಸಿನಿಮಾದ ವಿತರಣಾ ಹಕ್ಕುಗಳನ್ನು ಖರೀದಿಸಿದ್ದರು. ಆದರೆ ಹಕ್ಕು ಖರೀದಿಸುವ ಸಂದರ್ಭದಲ್ಲಿ ನಿರ್ಮಾಪಕರಿಗೆ ಯಾವುದೇ ಹಣ ಪಾವತಿಸಿರಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬಳಿಕ ಸಿನಿಮಾದ ಲೆಕ್ಕಾಚಾರದ ಬಗ್ಗೆ ವಿಚಾರಿಸಿದಾಗ, ₹43 ಸಾವಿರಕ್ಕೂ ಹೆಚ್ಚಿನ ಗಳಿಕೆಯಾದ ಬಳಿಕವಷ್ಟೇ ಚಿತ್ರಮಂದಿರಗಳಿಂದ ಹಣ ಪಾವತಿಯಾಗಲಿದೆ ಎಂದು ತಿಳಿಸಲಾಗಿತ್ತು ಎಂದು ನಿರ್ಮಾಪಕರು ಆರೋಪಿಸಿದ್ದಾರೆ. ಆದರೆ ಚಿತ್ರಮಂದಿರಗಳು ಶೇ.50ರಷ್ಟು ಶೇರ್ ನೀಡಿರುವುದಾಗಿ ತಮಗೆ ತಿಳಿದುಬಂದಿದೆ. ಆ ಹಣವನ್ನು ಮಾತ್ರ ತಮ್ಮ ಸಂಸ್ಥೆಗೆ ನೀಡಲಾಗಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದರ ಜತೆಗೆ ‘ಬಲರಾಮನ ದಿನಗಳು’ ಸಿನಿಮಾದ ಒಟಿಟಿ ಹಾಗೂ ಟಿವಿ ಸ್ಯಾಟಲೈಟ್ ಹಕ್ಕುಗಳನ್ನು ಕೊಡಿಸುವುದಾಗಿ ವಿತರಣೆ ಹಕ್ಕು ಖರೀದಿ ವೇಳೆ ಭರವಸೆ ನೀಡಲಾಗಿತ್ತು. ಆದರೆ ಆ ಕಾರ್ಯವೂ ನಡೆದಿಲ್ಲ. ಸಿನಿಮಾವನ್ನು ಪ್ರಮುಖ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡದೆ, ತಮ್ಮ ಹಿಡಿತದಲ್ಲಿರುವ ಚಿತ್ರಮಂದಿರಗಳಲ್ಲಿ ಮಾತ್ರ ಪ್ರದರ್ಶಿಸಲಾಗಿದೆ ಎಂದು ನಿರ್ಮಾಪಕರು ದೂರಿದ್ದಾರೆ.
ಸಿನಿಮಾದ ಪೋಸ್ಟರ್ಗಳಲ್ಲಿ ‘ಕೆವಿಎನ್ ವಿತರಣೆ’ ಎಂದು ಪ್ರಚಾರ ಮಾಡಲಾಗಿತ್ತು. ಆದರೆ ಸಿನಿಮಾದ ವ್ಯವಹಾರಗಳು ಎಸ್ಎಸ್ಎಸ್ ಎಂಟರ್ಪ್ರೈಸ್ ಹೆಸರಿನ ಸಂಸ್ಥೆಯ ಮೂಲಕ ನಡೆದಿವೆ. ತಮಗೆ ನೀಡಿರುವ ಇನ್ವಾಯ್ಸ್ ಕೂಡ ಅದೇ ಸಂಸ್ಥೆಯಿಂದ ಬಂದಿದೆ ಎಂದು ಪದ್ಮಾವತಿ ಫಿಲಮ್ಸ್ ಆರೋಪಿಸಿದೆ.
ಇದರಿಂದ ತೆರಿಗೆ ವಂಚನೆ ನಡೆದಿರುವ ಶಂಕೆಯಿದ್ದು, ಈ ಕುರಿತು ನಿರ್ಮಾಪಕರ ಸಂಘ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ. ತಮ್ಮ ಸಂಸ್ಥೆಗೆ ಆಗಿರುವ ನಷ್ಟಕ್ಕೆ ಕೆವಿಎನ್ ವತಿಯಿಂದ ₹2 ಕೋಟಿ ಪರಿಹಾರ ಕೊಡಿಸಬೇಕು ಎಂದು ಪದ್ಮಾವತಿ ಫಿಲಮ್ಸ್ ನಿರ್ಮಾಪಕರು ಮನವಿ ಮಾಡಿದ್ದಾರೆ





