Sj*

ಕನ್ನಡ ಸಂಗೀತಕ್ಕೆ ಮತ್ತೊಂದು ಅಂತರರಾಷ್ಟ್ರೀಯ ಮನ್ನಣೆ ದೊರೆತಿದೆ. ಭಾರತೀಯ ಸಂಗೀತ ಸಂಯೋಜಕ ಮಹೇಶ್ ಮಹದೇವ್ ಹಾಗೂ ಸಿಂಗಾಪುರ ಮೂಲದ ಬಹುಭಾಷಾ ಹಿನ್ನೆಲೆಯ ಗಾಯಕಿ ಡಾ. ಪ್ರಿಯದರ್ಶಿನಿ ಅವರ ಸಹಯೋಗದಲ್ಲಿ ಮೂಡಿಬಂದ ‘ಜೈ ಶಿವಾಜಿ ಜೈ ಭವಾನಿ’ಗೀತೆಗೆ ಅಮೆರಿಕದ ಟೆನ್ನೆಸ್ಸೀ ರಾಜ್ಯದ ನ್ಯಾಶ್‌ವಿಲ್‌ನಲ್ಲಿ ನಡೆದ 12ನೇ ವಾರ್ಷಿಕ ಜೋಸಿ ಮ್ಯೂಸಿಕ್ ಅವಾರ್ಡ್ಸ್ನಲ್ಲಿ ಅಂತರರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ‘ವಿಶ್ವದ ಸಂಗೀತದ ರಾಜಧಾನಿ’ ಎಂದೇ ಪ್ರಸಿದ್ಧಿಯಾಗಿರುವ ನ್ಯಾಶ್‌ವಿಲ್‌ನ ವಿಶ್ವವಿಖ್ಯಾತ “ಗ್ರ್ಯಾಂಡ್ ಓಲೆ ಓಪ್ರಿ” ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಅದ್ದೂರಿಯಾಗಿ ನಡೆಯಿತು.

ಮಹೇಶ್ ಮಹದೇವ್ ಅವರ ಅರ್ಥಪೂರ್ಣ ಸಾಹಿತ್ಯ, ಮನಮೋಹಕ ಸಂಗೀತ ಸಂಯೋಜನೆ ಹಾಗೂ ಸೃಜನಶೀಲ ನಿರ್ದೇಶನದಲ್ಲಿ ಈ ಗೀತೆ ರೂಪುಗೊಂಡಿದೆ. ಛತ್ರಪತಿ ಶಿವಾಜಿ ಮಹಾರಾಜರ ಜೀವನ, ಶೌರ್ಯ, ಆದರ್ಶ ಮತ್ತು ಪರಂಪರೆಯನ್ನು ಸಮಕಾಲೀನ ಸಂಗೀತ ಹಾಗೂ ಸಿನಿಮೀಯ ಕಥನದ ಮೂಲಕ ಪರಿಚಯಿಸುವ ಪ್ರಯತ್ನ ಈ ಗೀತೆಯಲ್ಲಿದೆ. ನೃತ್ಯಾಧಾರಿತ ಹಾಗೂ ಲಯಬದ್ಧವಾಗಿರುವ ಗೀತೆಗೆ ಪ್ರಿಯದರ್ಶಿನಿ ಮತ್ತು ಮಹೇಶ್ ಮಹದೇವ್ ಅವರು ಧ್ವನಿ ನೀಡಿದ್ದಾರೆ. ಸಿದ್ಧಾರ್ಥ್ ಶಾಂಡಿಲ್ಯಾಸ ಅವರ ಸಹಗಾಯನ ಗೀತೆಗೆ ಮತ್ತಷ್ಟು ಮೆರುಗು ನೀಡಿದೆ.

ಕನ್ನಡ, ಮರಾಠಿ ಹಾಗೂ ಹಿಂದಿ ಭಾಷೆಗಳಲ್ಲಿ ಹಾಡನ್ನು ರೂಪಿಸುವ ಉದ್ದೇಶ ಹೊಂದಲಾಗಿದ್ದು, ಸದ್ಯಕ್ಕೆ ಕನ್ನಡ ಆವೃತ್ತಿ ಮಾತ್ರ ಬಿಡುಗಡೆಯಾಗಿದೆ. ಸಂಗೀತ ವಿಡಿಯೋದಲ್ಲಿ ಪ್ರಿಯದರ್ಶಿನಿ, ಮಹೇಶ್ ಮಹದೇವ್ ಹಾಗೂ ಖ್ಯಾತ ಚಲನಚಿತ್ರ ನಟ ಗಣೇಶ್ ರಾವ್ ಕೇಸರ್ಕರ್ ಸೇರಿದಂತೆ ಹಲವು ಕಲಾವಿದರು ಕಾಣಿಸಿಕೊಂಡಿದ್ದಾರೆ. ಶಿವಶಕ್ತಿ ಗ್ರೂಪ್ ಸಂಗೀತ ವಿಡಿಯೋವನ್ನು ತಯಾರಿಸಿದ್ದು, ಪಿ.ಎಂ. ಆಡಿಯೋಸ್ ಮತ್ತು ಎಂಟರ್ಟೈನ್ಮೆಂಟ್ಸ್ಪ್ರಸ್ತುತಪಡಿಸಿದೆ. ಬೆಂಗಳೂರಿನ ಪ್ರಿಸಮ್ ರೆಕಾರ್ಡಿಂಗ್ ಸ್ಟುಡಿಯೊಸ್ನಲ್ಲಿ ರೆಕಾರ್ಡಿಂಗ್, ಮಿಕ್ಸಿಂಗ್ ಮತ್ತು ಮಾಸ್ಟರಿಂಗ್ ನಡೆದಿದ್ದು, ಸುನಿಲ್ ಮಹದೇವ್ ಅವರು ಗ್ರಾಫಿಕ್ಸ್ ಹಾಗೂ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ.

priya1

ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತಿಯ ಅಂಗವಾಗಿ ಈ ವರ್ಷದ ಆರಂಭದಲ್ಲಿ ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥನಾರಾಯಣ ಅವರು ಗೀತೆಯನ್ನು ಬಿಡುಗಡೆ ಮಾಡಿದ್ದರು. ಕರ್ನಾಟಕ ಸರ್ಕಾರ ಆಯೋಜಿಸಿದ್ದ ಅಧಿಕೃತ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿಯೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಈ ಸಂಗೀತ ವಿಡಿಯೋವನ್ನು ವಿಶೇಷವಾಗಿ ಪ್ರದರ್ಶಿಸಲಾಗಿತ್ತು.

2026ರ ಜೋಸಿ ಮ್ಯೂಸಿಕ್ ಅವಾರ್ಡ್ಸ್‌ಗೆ ವಿಶ್ವದ ವಿವಿಧ ಭಾಗಗಳ ಕಲಾವಿದರಿಂದ 1,01,000ಕ್ಕೂ ಅಧಿಕ ಸಲ್ಲಿಕೆಗಳು ಬಂದಿದ್ದವು. ಸೃಜನಶೀಲತೆ, ಸಾಹಿತ್ಯದ ಗುಣಮಟ್ಟ, ವೈಶಿಷ್ಟ್ಯತೆ ಹಾಗೂ ಸಂಗೀತ ಕ್ಷೇತ್ರದಲ್ಲಿನ ಕಲಾತ್ಮಕ ಸಾಧನೆ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ಪ್ರಶಸ್ತಿಗೆ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಸಂಗೀತ ಕ್ಷೇತ್ರದ ಅನುಭವಿ ವೃತ್ತಿಪರರು ಹಾಗೂ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ಕಲಾವಿದರು ಸೇರಿದಂತೆ ತೀರ್ಪುಗಾರರು ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಈ ಜಾಗತಿಕ ಮಟ್ಟದ ಸಲ್ಲಿಕೆಗಳ ನಡುವೆ ಕನ್ನಡದಲ್ಲಿ ಮೂಡಿಬಂದ ‘ಜೈ ಶಿವಾಜಿ ಜೈ ಭವಾನಿ’ ಗೀತೆಗೆ ಪ್ರಶಸ್ತಿ ದೊರೆತಿರುವುದು ಕನ್ನಡ ಸಂಗೀತ ಕ್ಷೇತ್ರದ ಗಮನಾರ್ಹ ಸಾಧನೆಯಾಗಿದೆ.

ಮಹೇಶ್ ಮಹದೇವ್ ಮಾತನಾಡಿ, “ಇದು ನಮ್ಮಿಬ್ಬರಿಗೂ ದೊರೆತ 3ನೇ ಅಂತಾರಾಷ್ಟ್ರೀಯ ಪ್ರಶಸ್ತಿ ಹಾಗೂ ಜೋಸಿ ಮ್ಯೂಸಿಕ್ ಅವಾರ್ಡ್ಸ್‌ನಿಂದ ದೊರೆತ ಮೊದಲ ಪ್ರಶಸ್ತಿ. ಕಲಾವಿದರಿಗೆ ಇಂತಹ ಪ್ರತಿಷ್ಠಿತ ಅಂತರರಾಷ್ಟ್ರೀಯ ವೇದಿಕೆಯನ್ನು ಕಲ್ಪಿಸಿರುವ ಜೋಸಿ ಪಸಾಂಟಿನೋ ಮತ್ತು ಟಿನಾಮೇರಿ ಪಸಾಂಟಿನೋ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ನನ್ನ ಮಾತೃಭಾಷೆ ಮರಾಠಿಯಾದರೂ, ನಾನು ಹುಟ್ಟಿದ್ದು ಕರ್ನಾಟಕದಲ್ಲಿ. ಕರ್ನಾಟಕವೇ ನನ್ನ ಮಾತೃಭೂಮಿ. ಕನ್ನಡದಲ್ಲಿ ಹಲವಾರು ಸಾಹಿತ್ಯಗಳನ್ನು ಬರೆದು, ಅನೇಕ ಗೀತೆಗಳನ್ನು ರಚಿಸಿದ್ದೇನೆ. ಕನ್ನಡದಲ್ಲಿ ರಚಿಸಿರುವ ಈ ಗೀತೆಗೆ ವಿಶ್ವ ಮಟ್ಟದಲ್ಲಿ ಮನ್ನಣೆ ದೊರೆತಿರುವುದು ನನಗೆ ಅಪಾರ ಹೆಮ್ಮೆ ಹಾಗೂ ಆತ್ಮತೃಪ್ತಿ ತಂದಿದೆ,” ಎಂದು ಹೇಳಿದರು.

ಪ್ರಿಯದರ್ಶಿನಿ ಮಾತನಾಡಿ, “ನಮ್ಮ ಸಾಂಸ್ಕೃತಿಕ ಕಥನಗಳಿಗೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಮನ್ನಣೆ ದೊರೆತಿರುವುದು ಈ ಗೌರವದ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ. ವಿವಿಧ ಭಾಷೆ, ಸಂಸ್ಕೃತಿ ಹಾಗೂ ಸಂಗೀತ ಪರಂಪರೆಗಳಿಗೆ ಸೇರಿದ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುತ್ತಿರುವ ಜೋಸಿ ಮ್ಯೂಸಿಕ್ ಸಂಸ್ಥೆಗೆ ನಾನು ಕೃತಜ್ಞಳಾಗಿದ್ದೇನೆ. ಕನ್ನಡನಾಡಿನ ಹಾಗೂ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂಗೀತದ ಮೂಲಕ ಜಾಗತಿಕ ಪ್ರೇಕ್ಷಕರಿಗೆ ಪರಿಚಯಿಸುವ ನಮ್ಮ ಪ್ರಯತ್ನಕ್ಕೆ ಈ ಗೌರವ ಮತ್ತಷ್ಟು ಪ್ರೋತ್ಸಾಹ ನೀಡಿದೆ,” ಎಂದು ಹೇಳಿದರು.

2026ರ ಜೋಸಿ ಮ್ಯೂಸಿಕ್ ಅವಾರ್ಡ್ಸ್‌ನಲ್ಲಿ ಪ್ರಿಯದರ್ಶಿನಿ ಅವರು ‘World Artist of the Year’ ಸೇರಿದಂತೆ ಒಟ್ಟು ಎರಡು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದ್ದರು. PM Audios & Entertainments ಸಂಸ್ಥೆಯೂ ‘Record Label of the Year’ ವಿಭಾಗದಲ್ಲಿ ನಾಮನಿರ್ದೇಶನಗೊಂಡಿತ್ತು.

ಭಾರತೀಯ ಹಾಗೂ ಸಿಂಗಾಪುರದ ಕಲಾವಿದರ ಸಹಯೋಗದಲ್ಲಿ ಮೂಡಿಬಂದ ಈ ಕನ್ನಡ ಗೀತೆಗೆ ದೊರೆತಿರುವ ಅಂತರರಾಷ್ಟ್ರೀಯ ಗೌರವವು ಕನ್ನಡ ಸಂಗೀತವನ್ನು ಜಾಗತಿಕ ವೇದಿಕೆಯಲ್ಲಿ ಪ್ರತಿನಿಧಿಸುವ ಪ್ರಯತ್ನಕ್ಕೆ ಮಹತ್ವದ ಮಾನ್ಯತೆ ನೀಡಿದೆ. ಭಾರತ ಮತ್ತು ಸಿಂಗಾಪುರದ ಕಲಾವಿದರ ಸೃಜನಾತ್ಮಕ ಸಹಯೋಗಕ್ಕೂ ಈ ಪ್ರಶಸ್ತಿ ಗಮನಾರ್ಹ ಮನ್ನಣೆಯಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ