Sj*
ಗುರತೇಜ್ ಶೆಟ್ಟಿ ನಿರ್ದೇಶನದ, ಕಿರಣ್ ರಾಜ್ ನಾಯಕನಾಗಿ ನಟಿಸಿರುವ “ಜಾಕಿ 42″ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ನವೆಂಬರ್ 20 ರಂದು ರಾಜ್ಯಾದ್ಯಂತ ಈ ಚಿತ್ರ ಬಿಡುಗಡೆಯಾಗುತ್ತಿದೆ. ಹೆಸರಾಂತ ಜಯಣ್ಣ ಫಿಲಂಸ್ ಈ ಚಿತ್ರವನ್ನು ವಿತರಣೆ ಮಾಡುತ್ತಿದೆ.
ಗೋಲ್ಡನ್ ಗೇಟ್ ಬ್ಯಾನರ್ ನಡಿಯಲ್ಲಿ ಭಾರತಿ ಸತ್ಯ ನಾರಾಯಣ್ ನಿರ್ಮಾಣದ ಮೊದಲ ಚಿತ್ರ ಇದಾಗಿದ್ದು, ಕುದುರೆ ರೇಸ್ ಹಿನ್ನೆಲೆಯಲ್ಲಿ ನಡೆಯುವ ಕಥೆಯಾಗಿದೆ. ಕೌಟುಂಬಿಕ ಮೌಲ್ಯಗಳನ್ನೊಳಗೊಂಡ ” ಜಾಕಿ 42″ ಚಿತ್ರದ ಎರಡು ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ಇದೀಗ ಬಿಡುಗಡೆಯ ದಿನಾಂಕ ನಿಗದಿಯಾಗಿದ್ದು, ದಸರಾ ಹಬ್ಬಕ್ಕೆ ಚಿತ್ರದ ಮತ್ತೊಂದು ಹಾಡನ್ನು ಬಿಡುಗಡೆ ಮಾಡುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ.
ಸ್ಪೋರ್ಟ್ಸ್ ಜಾನರ್ ಸಿನಿಮಾ ಅದರೂ, ಫ್ಯಾಮಿಲಿ ಎಮೋಷನ್ಸ್ ಸನ್ನಿವೇಶಗಳು ಸಹ ಇದೆ. ಮೂರು ಹಾಡುಗಳು ಹಾಗೂ ಒಂದು ಸಾಹಸ ಸನ್ನಿವೇಶವಿದ್ದು, ಹಾಸ್ಯ ಸನ್ನಿವೇಶಗಳು ಸಹ ಜನರಿಗೆ ಮನೋರಂಜನೆ ನೀಡುತ್ತದೆ. ಇದೊಂದು ಸಂಪೂರ್ಣ ಕಮರ್ಷಿಯಲ್ ಸಿನಿಮಾ ಎಂದು ತಿಳಿಸಿರುವ ನಿರ್ದೇಶಕರು, ಪೂರ್ಣ ಪ್ರಮಾಣದಲ್ಲಿ ಹಾರ್ಸ್ ರೇಸ್ ಹಿನ್ನಲೆಯಲ್ಲಿ ಬರುತ್ತಿರುವ ಮೊದಲ ಭಾರತೀಯ ಚಿತ್ರ ಇದಾಗಿದೆ ಎನ್ನುತ್ತಾರೆ.

“ಜಾಕಿ 42” ಚಿತ್ರವನ್ನು 200 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಮಾಡುವುದಾಗಿ ವಿತರರಕ ಜಯಣ್ಣ ಹಾಗೂ ನಿರ್ಮಾಪಕಿ ಭಾರತಿ ಸತ್ಯನಾರಾಯಣ್ ತಿಳಿಸಿದ್ದಾರೆ.
ಹೃತಿಕ ಶ್ರೀನಿವಾಸ್ ನಾಯಕಿಯಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಯುಕ್ತ, ರಾಜೇಂದ್ರ ಕಾರಂತ್, ಬಲ ರಾಜ್ ವಾಡಿ, ಗಿರೀಶ್ ಹೆಗ್ಡೆ, ಅರುಣ್ ಆಚಾರ್, ಯಶ್ ಶೆಟ್ಟಿ, ದೀಪಕ್ ರೈ ಪಣಜೆ, ಶಾಂತಲಾ ಕಾಮತ್ ಹಾಗೂ ಹೆಸರಾಂತ ಕಲಾವಿದರು ಅಭಿನಯಿಸಿದ್ದಾರೆ, ವಿನೋದ್ ಯಜಮಾನ್ಯ ಸಂಗೀತ ನಿರ್ದೇಶನ, ರಾಘವೇಂದ್ರ ಬಿ ಕೋಲಾರ್ ಛಾಯಾಗ್ರಹಣ, ಭೂಷಣ್ ನೃತ್ಯ ನಿರ್ದೇಶನ ಹಾಗೂ ಉಮೇಶ್ ಆರ್ ಬಿ ಸಂಕಲನ “ಜಾಕಿ 42” ಚಿತ್ರಕ್ಕಿದೆ.
ಕನ್ನಡ ಚಿತ್ರೋದ್ಯಮದಲ್ಲಿ ಸಾಲು ಸಾಲು ಯಶಸ್ವಿ ಚಲನಚಿತ್ರಗಳ ಸುಗ್ಗಿ ಸಂಭ್ರಮದಲ್ಲಿ ಮತ್ತೊಂದು ಯಶಸ್ಸಿಗೆ ಸಾಕ್ಷಿಯಾಗುವ ಸೂಚನೆ “ಜಾಕಿ 42” ಕೊಟ್ಟಿದ್ದು, ಪ್ರೇಕ್ಷಕರ ಕಣ್ಣು ನವೆಂಬರ್ 20ರ ಮೇಲೆ ಬಿದ್ದಿದೆ.





