ನವದೆಹಲಿ: ಸಂಚಾರ ನಿಯಮಗಳನ್ನು ಉಲ್ಲಂಘಿಸಿ ದಂಡ ಪಾವತಿಸದೆ ಜಾರಿಕೊಳ್ಳುವ ವಾಹನ ಸವಾರರಿಗೆ ಸುಪ್ರೀಂ ಕೋರ್ಟ್ ಭಾರೀ ಶಾಕ್ ನೀಡಿದೆ.

ಬಾಕಿ ಇರುವ ಇ-ಚಲನ್ (E-Challan) ಸಂಚಾರ ದಂಡವನ್ನು ವಸೂಲಿ ಮಾಡಲು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಈ ದಂಡದ ಮೊತ್ತವನ್ನು ‘ವಿದ್ಯುತ್ ಬಿಲ್’ಗಳೊಂದಿಗೆ (Electricity Bills) ಸಂಯೋಜಿಸುವ (ಲಿಂಕ್) ಕುರಿತು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ಸಲಹೆ ನೀಡಿದೆ.

ಸಂಚಾರ ನಿಯಮ ಉಲ್ಲಂಘನೆಯ ಎಲೆಕ್ಟ್ರಾನಿಕ್ ಜಾರಿ ಹಾಗೂ ಬಾಕಿ ಇರುವ ದಂಡದ ವಸೂಲಾತಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಹಾಗೂ ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠವು ಈ ಪ್ರಸ್ತಾಪ ಮಾಡಿದೆ.

ವಿಚಾರಣೆ ವೇಳೆ, ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 45,000 ಕೋಟಿ ರೂಪಾಯಿ ಮೌಲ್ಯದ ಇ-ಚಲನ್ ದಂಡದ ಮೊತ್ತ ಬಾಕಿ ಉಳಿದಿದೆ. ಈ ಪೈಕಿ ಇದುವರೆಗೆ ಕೇವಲ 25,000 ಕೋಟಿ ರೂಪಾಯಿ ಮಾತ್ರ ವಸೂಲಿಯಾಗಿದೆ ಎಂದು ‘ಬಾರ್ ಆಂಡ್ ಬೆಂಚ್’ ವರದಿ ಮಾಡಿದೆ.

ಕಠಿಣ ಕ್ರಮಗಳು
ದಂಡ ವಸೂಲಿ ಪ್ರಕ್ರಿಯೆಯನ್ನು ಪರಿಣಾಮಕಾರಿಗೊಳಿಸಲು ನ್ಯಾಯಮೂರ್ತಿ ಪರ್ದಿವಾಲಾ ಅವರು, “ಸಂಚಾರ ದಂಡವನ್ನು ನಿಗದಿತ ಅವಧಿಯಲ್ಲಿ ಪಾವತಿಸದಿದ್ದಲ್ಲಿ ಅಂತಹ ಸವಾರರ ಮನೆ ಅಥವಾ ವಾಣಿಜ್ಯ ಮಳಿಗೆಗಳ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸುವ (Power Disconnection) ಕ್ರಮ ಕೈಗೊಳ್ಳುವ ಬಗ್ಗೆ ಪ್ರಾಧಿಕಾರಗಳು ಯೋಚಿಸಬಹುದು” ಎಂದು ಸುಳಿವು ನೀಡಿದ್ದಾರೆ. ಇದರ ಜೊತೆಗೆ, ರಸ್ತೆಗಳಲ್ಲಿ ದಿಢೀರ್ ವಾಹನ ತಪಾಸಣೆ (Random Vehicle Checks) ನಡೆಸಿ, ಬಾಕಿ ಇ-ಚಲನ್‌ಗಳನ್ನು ಹೊಂದಿರುವ ವಾಹನಗಳನ್ನು ತಕ್ಷಣವೇ ಜಪ್ತಿ (Impound) ಮಾಡಬಹುದು ಎಂದು ಪೀಠವು ಚರ್ಚಿಸಿದೆ.
ಸೇವೆಗಳಿಗೆ ಬ್ರೇಕ್
ಬಾಕಿ ದಂಡವನ್ನು ಪಾವತಿಸುವವರೆಗೆ ವಾಹನಕ್ಕೆ ಸಂಬಂಧಿಸಿದ ಪ್ರಮುಖ ಸೇವೆಗಳನ್ನು ತಡೆಹಿಡಿಯುವ ಪ್ರಸ್ತಾಪವನ್ನು ಪೀಠವು ಪರಿಶೀಲಿಸಿದೆ. ಅವುಗಳೆಂದರೆ, ಚಾಲನಾ ಪರವಾನಗಿ (Driving Licence) ಅಮಾನತುಗೊಳಿಸುವುದು, ಆರ್‌ಸಿ (Registration Certificate) ಅಪ್‌ಡೇಟ್‌ ತಡೆಹಿಡಿಯುವುದು., ಫಿಟ್‌ನೆಸ್ ಹಾಗೂ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUC) ನೀಡುವುದನ್ನು ತಡೆಯುವುದು, ನಕಲಿ ಆರ್‌ಸಿ (Duplicate RC) ನೀಡುವುದು ಹಾಗೂ ವಾಹನದ ಮಾಲೀಕತ್ವ ವರ್ಗಾವಣೆಯನ್ನು (Ownership Transfer) ನಿರ್ಬಂಧಿಸುವುದು ಹಾಗೂ ಅಂತಹ ವಾಹನಗಳನ್ನು ಕೇಂದ್ರ ಸರ್ಕಾರದ ‘ಪರಿವಾಹನ್’ (Parivahan) ಪೋರ್ಟಲ್‌ನಲ್ಲಿ ಕಪ್ಪುಪಟ್ಟಿಗೆ (Blacklist) ಸೇರಿಸುವ ಸಲಹೆ ನೀಡಿದೆ.

ಇದು ಅಂತಿಮ ಆದೇಶವಲ್ಲ, ಪ್ರಸ್ತಾಪವಷ್ಟೇ
ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಹಾಗೂ ದಂಡ ವಸೂಲಾತಿಯನ್ನು ಸುಧಾರಿಸಲು ಕೋರ್ಟ್‌ ಈ ಎಲ್ಲಾ ಪ್ರಸ್ತಾಪಗಳನ್ನು ಸುಳಿವಾಗಿ ನೀಡಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ