–  ರಾಘವೇಂದ್ರ ಅಡಿಗ ಎಚ್ಚೆನ್.

ರಾಜ್ಯಾದ್ಯಂತ ತೀವ್ರ ಕುತೂಹಲ ಮೂಡಿಸಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ 59ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಮುಂದುವರಿದಿದೆ.  ವಿಚಾರಣೆ ವೇಳೆ ನಟ ದರ್ಶನ್ ಪರ ವಕೀಲರು ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ.

59ನೇ ಸಿಸಿಹೆಚ್ ಕೋರ್ಟ್‌ನ ನ್ಯಾಯಾಧೀಶರಾದ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ಈ ಆದೇಶ ನೀಡಿದ್ದಾರೆ.

ಪ್ರಕರಣದ ಮಾಫಿ ಸಾಕ್ಷಿ ಪ್ರದೋಷ್ ಅವರ ವಿಚಾರಣೆ ವೇಳೆ, ಪೊಲೀಸರು ಪ್ರದೋಷ್‌ಗೆ ಹೇಳಿಕೆ ನೀಡುವಂತೆ ತರಬೇತಿ ನೀಡುತ್ತಿದ್ದಾರೆ ಎಂದು ದರ್ಶನ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಆಕ್ಷೇಪಣೆಯನ್ನು ಸಿಆರ್‌ಪಿಸಿ ಹಾಗೂ ಎವಿಡೆನ್ಸ್ ಆ್ಯಕ್ಟ್ ಅಡಿಯಲ್ಲಿ ಸಾಕ್ಷ್ಯ ವಿಚಾರಣೆಯ ಸಂದರ್ಭದಲ್ಲಿ ಅಧಿಕೃತವಾಗಿ ದಾಖಲಿಸಿಕೊಳ್ಳಬೇಕು ಎಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು.

ಆದರೆ, ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಅದನ್ನು ವಜಾಗೊಳಿಸಿದೆ. ಹೀಗಾಗಿ ಪ್ರದೋಷ್ ಅವರ ವಿಚಾರಣೆ ಹಾಗೂ ಮಹಜರ್‌ನಲ್ಲಿ ಸಂಗ್ರಹಿಸಲಾದ ಸಾಕ್ಷ್ಯಗಳಿಗೆ ಸಂಬಂಧಿಸಿದ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಮುಂದುವರಿಯಲಿದೆ.

ಜೈಲು ಸೌಲಭ್ಯಗಳ ಬಗ್ಗೆ ಪವಿತ್ರಾ ಗೌಡ, ಪ್ರದೋಷ್ ಅರ್ಜಿ

ಇನ್ನೊಂದೆಡೆ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೂಲಭೂತ ಸೌಕರ್ಯ ಹಾಗೂ ಸೂಕ್ತ ರಕ್ಷಣೆ ಸಿಗುತ್ತಿಲ್ಲ ಎಂದು ಎ1 ಆರೋಪಿ ಪವಿತ್ರಾ ಗೌಡ ಮತ್ತು ಪ್ರದೋಷ್ ನ್ಯಾಯಾಲಯದ ಮೊರೆ ಹೋಗಿದ್ದರು.

ಜೈಲಿನಲ್ಲಿರುವ ನೈಜೀರಿಯಾ ಮೂಲದ ಮಹಿಳಾ ಸಹಕೈದಿಗಳಿಂದ ಕಿರಿಕಿರಿ ಆಗುತ್ತಿದೆ ಎಂದು ಪವಿತ್ರಾ ಗೌಡ ದೂರಿದ್ದರು. ತಮ್ಮ ಬ್ಯಾರಕ್ ಬದಲಾಯಿಸುವಂತೆ ಅವರು ಮನವಿ ಮಾಡಿದ್ದರು.

ಇದೇ ವೇಳೆ, ಜೈಲಿನಲ್ಲಿ ಕುಟುಂಬಸ್ಥರನ್ನು ಭೇಟಿಯಾಗಲು ಸೂಕ್ತ ಅವಕಾಶ ನೀಡುತ್ತಿಲ್ಲ ಎಂದು ಪ್ರದೋಷ್ ಆಕ್ಷೇಪಿಸಿದ್ದರು.

ಈ ಕುರಿತು ನ್ಯಾಯಾಲಯದ ಸೂಚನೆಯಂತೆ ಜೈಲು ಅಧಿಕಾರಿಗಳು ಪರಿಶೀಲನೆ ನಡೆಸಿ 59ನೇ ಸಿಸಿಹೆಚ್ ಕೋರ್ಟ್‌ಗೆ ಇ-ಮೇಲ್ ಮೂಲಕ ವರದಿ ಸಲ್ಲಿಸಿದ್ದಾರೆ. ವರದಿಯನ್ನು ಪರಿಶೀಲಿಸಿರುವ ನ್ಯಾಯಾಲಯವು ಆದೇಶವನ್ನು ಕಾಯ್ದಿರಿಸಿದ್ದು, ಶೀಘ್ರದಲ್ಲೇ ತೀರ್ಪು ಪ್ರಕಟಿಸುವ ಸಾಧ್ಯತೆಯಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ