ನಟಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ತಮ್ಮ ಎರಡನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವುದಾಗಿ ಬುಧವಾರ ಘೋಷಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂನಲ್ಲಿ ಜಂಟಿ ಪೋಸ್ಟ್ ಹಂಚಿಕೊಂಡಿದ್ದು, ಕಿಯಾರಾ, ಸಿದ್ಧಾರ್ಥ್ ಮತ್ತು ಅವರ ಮಗಳ ಕೈನಲ್ಲಿ ಪುಟ್ಟ ಸಾಕ್ಸ್‌ ಹಿಡಿದಿರುವುದು ಕಾಣಿಸುತ್ತದೆ.

‘ಎಲ್ಲಕ್ಕಿಂತ ಶ್ರೇಷ್ಠವಾದ ಉಡುಗೊರೆಯೊಂದಿಗೆ ಮತ್ತೊಮ್ಮೆ ಆಶೀರ್ವದಿಸಲ್ಪಟ್ಟಿದ್ದೇವೆ. ನಮ್ಮ ಹೃದಯಗಳು ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬಿವೆ’ ಎಂದು ಆ ಪೋಸ್ಟ್‌ಗೆ ಶೀರ್ಷಿಕೆ ನೀಡಲಾಗಿದೆ. ಗಮನಾರ್ಹ ಸಂಗತಿಯೆಂದರೆ, ತಮ್ಮ ಮೊದಲ ಮಗುವಿನ ಗರ್ಭಧಾರಣೆ, ಮಗು ಜನನದ ಸುದ್ದಿಯಿಂದ ಹಿಡಿದು ಎರಡನೇ ಮಗುವಿನ ಗರ್ಭಧಾರಣೆ ಘೋಷಣೆವರೆಗೂ, ಈ ಜೋಡಿಯು ಪುಟ್ಟ ಸಾಕ್ಸ್‌ನ ಚಿತ್ರವನ್ನೇ ಬಳಸುತ್ತಾ ಬಂದಿದೆ.

ಸಿದ್ಧಾರ್ಥ್ ಮತ್ತು ಕಿಯಾರಾ ಕಳೆದ ವರ್ಷದ ಜುಲೈ 15 ರಂದು ತಮ್ಮ ಮೊದಲ ಮಗುವನ್ನು ಬರಮಾಡಿಕೊಂಡರು. ಕಿಯಾರಾ ತಮ್ಮ ಮಗಳಿಗೆ ‘ಸರಾಯ್ ಮಲ್ಹೋತ್ರಾ’ ಎಂದು ಹೆಸರಿಟ್ಟಿದ್ದಾರೆ.

ಸಿದ್ಧಾರ್ಥ್ ಮತ್ತು ಕಿಯಾರಾ ಅವರು 2023ರ ಫೆಬ್ರುವರಿ 7ರಂದು ರಾಜಸ್ಥಾನದ ಸೂರ್ಯಗಢ ಅರಮನೆಯಲ್ಲಿ ವಿವಾಹವಾದರು. ‘ಶೇರ್‌ಶಾ’ (Shershaah) ಚಿತ್ರದ ಚಿತ್ರೀಕರಣದ ಸಮಯದಲ್ಲಿ ಈ ಜೋಡಿಯ ನಡುವೆ ಪ್ರೀತಿ ಚಿಗುರಿತ್ತು.

‘ಕಾಫಿ ವಿತ್ ಕರಣ್’ ಸೀಸನ್ 8ರ ಸಂಚಿಕೆಯೊಂದರಲ್ಲಿ, ಸಿದ್ಧಾರ್ಥ್ ಮಲ್ಹೋತ್ರಾ ಅವರು ಇಟಲಿಯ ರೋಮ್‌ನಲ್ಲಿ ತಮಗೆ ಪ್ರೇಮ ನಿವೇದನೆ ಮಾಡಿದ್ದರು ಎಂದು ಕಿಯಾರಾ ಅಡ್ವಾಣಿ ಬಹಿರಂಗಪಡಿಸಿದ್ದರು. ‘ಸಿದ್ಧಾರ್ಥ್ ಅವರು ‘ಕಾಫಿ ವಿತ್ ಕರಣ್’ ಕಾರ್ಯಕ್ರಮದ ಆ ಸಂಚಿಕೆಗೆ ಬಂದಿದ್ದಾಗ, ನಾವು ಆಗಷ್ಟೇ ರೋಮ್‌ನಿಂದ ಮರಳಿದ್ದೆವು; ಅಲ್ಲಿಯೇ ಅವರು ನನಗೆ ಪ್ರೇಮ ನಿವೇದನೆ ಮಾಡಿದ್ದರು. ಆ ಸಮಯದಲ್ಲಿ ನನ್ನ ಪೋಷಕರು ಅಲ್ಲಿರಲಿಲ್ಲ. ಅದು ನನ್ನ ಮತ್ತು ಅವರ ಕುಟುಂಬದವರೊಂದಿಗೆ ನಡೆದ ನಮ್ಮ ಮೊದಲ ಕೌಟುಂಬಿಕ ಪ್ರವಾಸವಾಗಿತ್ತು’ ಎಂದು ಹೇಳಿದರು.

‘ಆಗ ನಾನು ತುಂಬಾ ಭಾವುಕಳಾಗಿದ್ದೆ. ಆಗ ಅವರು ‘ಶೇರ್‌ಶಾ’ (Shershaah) ಚಿತ್ರದ ಸಂಭಾಷಣೆಗಳನ್ನು ಹೇಳಲು ಪ್ರಾರಂಭಿಸಿದರು… ‘ನಾನು ದೆಹಲಿಯ ಒಬ್ಬ ಸರಳ ಹುಡುಗ’ ಎಂದು ಆ ಚಿತ್ರದ ಸಂಭಾಷಣೆಗಳನ್ನೇ ಪೂರ್ತಿಯಾಗಿ ಹೇಳಿದಾಗ, ನನಗೆ ನಗು ತಡೆಯಲಾಗಲಿಲ್ಲ’ ಎಂದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ