–  ರಾಘವೇಂದ್ರ ಅಡಿಗ ಎಚ್ಚೆನ್.

ಕಥೆ, ಹಾಡು ಮತ್ತು ಮೇಕಿಂಗ್‌ನಿಂದ ಗಮನ ಸೆಳೆಯುತ್ತಿರುವ ‘ಪಾರ್ಟ್ನರ್’ ಸಿನಿಮಾದ ಮತ್ತೊಂದು ಹಾಡು ಬಿಡುಗಡೆಯಾಗಿದೆ. ‘ಮಳೆ’, ‘ಧೈರ್ಯಂ’, ‘ದಿಲ್ ಪಸಂದ್’ ಖ್ಯಾತಿಯ ನಿರ್ದೇಶಕ ಶಿವತೇಜಸ್ ನಿರ್ದೇಶನದ ಈ ಸಿನಿಮಾದ ‘ಅಮೋರಾ’ ಹಾಡು ಈಗಾಗಲೇ ಗಮನ ಸೆಳೆದಿತ್ತು. ಇದೀಗ ‘ಲವಲವಿಕೆ’ ಹಾಡು ಬಿಡುಗಡೆಯಾಗಿದ್ದು, ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.

ಅಜಯ್ ರಾವ್ ಮತ್ತು ಬೃಂದಾ ಆಚಾರ್ಯ ನಾಯಕ-ನಾಯಕಿಯಾಗಿ ನಟಿಸಿರುವ ‘ಪಾರ್ಟ್ನರ್’ ಲವ್ ಮತ್ತು ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ. ಇಂದಿನ ಯುವಜನರ ಜೀವನಶೈಲಿ, ಪ್ರೀತಿ, ಬ್ರೇಕಪ್ ಮತ್ತು ಲಿವಿಂಗ್ ರಿಲೇಶನ್‌ಶಿಪ್ ಸುತ್ತ ಕಥೆ ಸಾಗಲಿದೆ. ಈ ವಿಚಾರಗಳ ಜೊತೆಗೆ ಸುಂದರವಾದ ಸಂದೇಶವೂ ಸಿನಿಮಾದಲ್ಲಿದೆ ಎಂದು ಚಿತ್ರತಂಡ ಹೇಳಿದೆ.

‘ಲವಲವಿಕೆ’ ಹಾಡಿಗೆ ಕವಿರಾಜ್ ಸಾಹಿತ್ಯ ಬರೆದಿದ್ದು, ಕಾರ್ತೀಕ್ ಮತ್ತು ರಮ್ಯ ಅಭ್ಯಂಕರ್ ಧ್ವನಿ ನೀಡಿದ್ದಾರೆ. ನಕುಲ್ ಅಭ್ಯಂಕರ್ ಸಂಗೀತ ಸಂಯೋಜಿಸಿದ್ದಾರೆ. ಮುರಳಿ ಮಾಸ್ಟರ್ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ಸುಜ್ಞಾನ್ ಅವರ ಛಾಯಾಗ್ರಹಣದಲ್ಲಿ ಹಾಡು ಕಲರ್‌ಫುಲ್ ಆಗಿ ಮೂಡಿಬಂದಿದೆ. ನಿರ್ಮಾಪಕರ ಆಧ್ಯಾತ್ಮಿಕ ಗುರುಗಳಾದ ರಂಗನಾಥ್ ಮತ್ತು ಮಂಜುನಾಥ್ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಹಾಡು ಬಿಡುಗಡೆ ವೇಳೆ ನಿರ್ದೇಶಕ ಶಿವತೇಜಸ್ ಮಾತನಾಡಿ, ಸಿನಿಮಾ ತಾವು ಅಂದುಕೊಂಡಿದ್ದಕ್ಕಿಂತಲೂ ಚೆನ್ನಾಗಿ ಮೂಡಿಬಂದಿದೆ ಎಂದು ಹೇಳಿದ್ದಾರೆ. ‘ಲವಲವಿಕೆ’ ಸಿನಿಮಾದ ಎರಡನೇ ಹಾಡಾಗಿದ್ದು, ಇದನ್ನು ವಿಶೇಷವಾಗಿ ಕಲರ್‌ಫುಲ್ ಆಗಿ ಚಿತ್ರೀಕರಿಸಲಾಗಿದೆ. ಪ್ರತಿ ಹಾಡನ್ನೂ ವಿಭಿನ್ನ ಕಲರ್ ಪ್ಯಾಟರ್ನ್‌ನಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

‘ಪಾರ್ಟ್ನರ್’ ಸಿನಿಮಾದ ಚಿತ್ರೀಕರಣ ಪಾಂಡಿಚೇರಿ ಮತ್ತು ಬೆಂಗಳೂರಿನಲ್ಲಿ ನಡೆದಿದೆ. ರಂಗಾಯಣ ರಘು, ಚಿತ್ಕಲಾ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ‘ಪ್ರೇಮದ ಊರಲಿ’ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಹೊಸ ಚೈತನ್ಯ ನೀಡಿದಂತೆ, ‘ಪಾರ್ಟ್ನರ್’ ಕೂಡ ಫ್ಯಾಮಿಲಿ ಸಬ್ಜೆಕ್ಟ್ ಮೂಲಕ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬ ವಿಶ್ವಾಸವಿದೆ ಎಂದು ಶಿವತೇಜಸ್ ಹೇಳಿದ್ದಾರೆ.

ನಿರ್ಮಾಪಕ ಹರೀಶ್ ದೇವಿತಂದ್ರೆ ಮಾತನಾಡಿ, ಸಿನಿಮಾ ವಿತರಣೆ ಮತ್ತು ಚಾನೆಲ್‌ನಲ್ಲಿ ಕೆಲಸ ಮಾಡಿದ ಅನುಭವ ತನಗಿದೆ ಎಂದು ಹೇಳಿದ್ದಾರೆ. ಇಡೀ ಕುಟುಂಬ ಯಾವುದೇ ಮುಜುಗರವಿಲ್ಲದೆ ಒಟ್ಟಿಗೆ ಕುಳಿತು ನೋಡಬಹುದಾದ ಸಿನಿಮಾ ಇದಾಗಿದೆ. ಬಿಸಿನೆಸ್ ದೃಷ್ಟಿಯಿಂದಲೂ ಸಿನಿಮಾವನ್ನು ರೂಪಿಸಿದ್ದು, ಪ್ರೇಕ್ಷಕರಿಗೆ ತಲುಪಿಸಲು ಈಗಾಗಲೇ ಯೋಜನೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ನಟ ಅಜಯ್ ರಾವ್ ಅವರಿಗೆ ಶಿವತೇಜಸ್ ಹೇಳಿದ ಕಥೆ ತುಂಬಾ ಇಷ್ಟವಾಗಿದ್ದು, ಸಿನಿಮಾ ತಮ್ಮ ಮನಸ್ಸಿಗೆ ಹತ್ತಿರವಾಗಿದೆ ಎಂದು ಹೇಳಿದ್ದಾರೆ. ಹಾಡುಗಳಂತೆಯೇ ಸಿನಿಮಾದ ದೃಶ್ಯಗಳೂ ಕಲರ್‌ಫುಲ್ ಆಗಿವೆ. ಹ್ಯೂಮನ್ ವ್ಯಾಲ್ಯೂಸ್ ಮತ್ತು ಎಮೋಷನ್ಸ್‌ಗಳನ್ನು ಸಿನಿಮಾದಲ್ಲಿ ಚೆನ್ನಾಗಿ ತೋರಿಸಲಾಗಿದೆ ಎಂದು ತಿಳಿಸಿದ್ದಾರೆ.

ಶಿವತೇಜಸ್ ಜೊತೆ ಸುಮಾರು 25 ವರ್ಷಗಳ ಸ್ನೇಹವಿದೆ ಎಂದು ಅಜಯ್ ರಾವ್ ಹೇಳಿದ್ದಾರೆ. ಚಿತ್ರದ ಟೈಟಲ್‌ಗೆ ತಕ್ಕಂತೆ ಒಳ್ಳೆಯ ‘ಪಾರ್ಟ್ನರ್’ ಆಗಿ ನಿರ್ಮಾಪಕರು ಸಿಕ್ಕಿದ್ದಾರೆ. ಸಿನಿಮಾದ ಮೇಲೆ ನೂರಕ್ಕೆ ನೂರರಷ್ಟು ನಂಬಿಕೆ ಇದೆ ಎಂದು ಅಜಯ್ ರಾವ್ ತಿಳಿಸಿದ್ದಾರೆ.

ನಾಯಕಿ ಬೃಂದಾ ಆಚಾರ್ಯ ಕೂಡ ಚಿತ್ರತಂಡದ ಬಾಂಡಿಂಗ್ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಮಾಡುವಾಗ ಎಲ್ಲರ ನಡುವೆ ಉತ್ತಮ ಬಾಂಡಿಂಗ್ ಇತ್ತು. ಆರಂಭದಲ್ಲಿ ಅಜಯ್ ರಾವ್ ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಸಿಡುಕುಮೂತಿ ಸಿದ್ದಪ್ಪನಂತಿದ್ದವರು ನಂತರ ಸ್ವೀಟ್ ಸಿದ್ದಪ್ಪ ಆಗಿಬಿಟ್ಟರು ಎಂದು ನಗುತ್ತಲೇ ಹೇಳಿದ್ದಾರೆ. ಹಾಡುಗಳ ಸಂದರ್ಭದಲ್ಲಿ ಅಜಯ್ ಸಾಕಷ್ಟು ಹೇಳಿಕೊಟ್ಟಿದ್ದಾರೆ ಎಂದು ಬೃಂದಾ ತಿಳಿಸಿದ್ದಾರೆ.

ಹೆಚ್.ಪಿ.ಆರ್. ಎಂಟರ್‌ಪ್ರೈಸಸ್ ಬ್ಯಾನರ್ ಅಡಿ ಹರೀಶ್ ದೇವಿತಂದ್ರೆ ‘ಪಾರ್ಟ್ನರ್’ ಸಿನಿಮಾವನ್ನು ನಿರ್ಮಿಸಿದ್ದಾರೆ. ಸುಜ್ಞಾನ್ ಛಾಯಾಗ್ರಹಣ ಮತ್ತು ಕೆ.ಎಂ. ಪ್ರಕಾಶ್ ಸಂಕಲನ ಚಿತ್ರಕ್ಕಿದೆ. ಇದೀಗ ‘ಲವಲವಿಕೆ’ ಹಾಡು ಬಿಡುಗಡೆಯಾಗಿದ್ದು, ಸಿನಿಮಾದ ಬಗ್ಗೆ ಸಿನಿರಸಿಕರ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ