ಅದು 1990ನೇ ವರ್ಷ. ನಾನು ಆಗ ಬೆಳಗಾವಿಯ ‘ಕನ್ನಡಮ್ಮ’ ಪತ್ರಿಕೆಯಲ್ಲಿ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೆ. ಸಾಪ್ತಾಹಿಕ ಪುರವಣಿಯ ಜವಾಬ್ದಾರಿಯೊಂದಿಗೆ, ಶುಕ್ರವಾರದ ಸಿನಿಮಾ ಪುಟವನ್ನು ನಿರ್ವಹಿಸುವ ಹೊಣೆಯೂ ನನ್ನ ಮೇಲಿತ್ತು. ಬೆಳಗಾವಿ ಆಸುಪಾಸಿನಲ್ಲಿ ಯಾವುದೇ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ ಎಂದು ತಿಳಿದರೆ ಸಾಕು, ಅಲ್ಲಿಗೆ ದೌಡಾಯಿಸಿ ನಟ-ನಟಿಯರ ವಿಶೇಷ ಸಂದರ್ಶನಗಳನ್ನು ಮಾಡುವುದು ನನ್ನ ಹುಮ್ಮಸ್ಸಾಗಿತ್ತು.

ಗುರುವಾರದಂದು ನಮ್ಮನ್ನು ಅಗಲಿದ ಹಿಂದಿ ಹಾಗೂ ಮರಾಠಿ ಚಿತ್ರರಂಗದ ಅಪರೂಪದ, ವಿಶಿಷ್ಟ ನಟ ನಾನಾ ಪಾಟೇಕರ್ ಅವರ ಕುರಿತು ಒಂದು ರೋಮಾಂಚಕ ಅನುಭವ ನೆನಪಾಗುತ್ತದೆ.

‘ಪ್ರಹಾರ್ – ದಿ ಫೈನಲ್ ಅಟ್ಯಾಕ್’ ಚಿತ್ರಕ್ಕಾಗಿ ಅವರು ಬೆಳಗಾವಿಯ ಮಿಲಿಟರಿ ಪ್ರದೇಶದಲ್ಲಿ ಸೈನಿಕರೊಂದಿಗೆ ದೀರ್ಘಕಾಲ ನೆಲೆಸಿ ಚಿತ್ರೀಕರಣ ನಡೆಸಿದ್ದರು.

​ಆ ಸಂದರ್ಭದಲ್ಲಿ ಅವರು ಬೆಳಗಾವಿಯ ‘ಹೊಟೆಲ್ ಗ್ರೀನ್’ನಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ‘ಕನ್ನಡಮ್ಮ’ ಪತ್ರಿಕೆಯ ಪ್ರತಿನಿಧಿಯಾಗಿ ನನಗೆ ಅವರನ್ನು ಕಣ್ಣಾರೆ ಕಾಣುವ ಅವಕಾಶ ಸಿಕ್ಕಿತ್ತು. ಅವರ ಮೈಕಟ್ಟು ಅಕ್ಷರಶಃ ಮಿಲಿಟರಿ ಸೈನಿಕನಂತೆಯೇ ಕಟ್ಟುಮಸ್ತಾಗಿತ್ತು. ಅವರ ಕೈಗಳನ್ನು ಹತ್ತಿರದಿಂದ ನೋಡಿದಾಗ ಕಬ್ಬಿಣದ ಹಗ್ಗಗಳೇನೋ ಎಂಬಂತೆ ಭಾಸವಾಗುತ್ತಿತ್ತು. ‘ಪ್ರಹಾರ್’ ಚಿತ್ರದ ಪಾತ್ರಕ್ಕಾಗಿ ಅವರು ಎಷ್ಟೊಂದು ಕಠಿಣ ಶಿಸ್ತನ್ನು ಮೈಗೂಡಿಸಿಕೊಂಡಿದ್ದರು ಎಂಬುದು ಅದರಿಂದ ಸ್ಪಷ್ಟವಾಗುತ್ತಿತ್ತು.

ಇದೇ ಸಿನಿಮಾದಲ್ಲಿ ಖ್ಯಾತ ನಟಿ ಮಾಧುರಿ ದೀಕ್ಷಿತ್ ಕೂಡ ಅಭಿನಯಿಸಿದ್ದರು.

ಮುಂಬೈನಿಂದ ವಿಮಾನದಲ್ಲಿ ಬೆಳಗಾವಿಗೆ ಬಂದಿಳಿಯುವಾಗಲೆಲ್ಲ, ತಾವೊಬ್ಬ ಪ್ರಸಿದ್ಧ

ನಟಿ ಎಂಬುದು ಯಾರಿಗೂ ತಿಳಿಯಬಾರದೆಂಬ ಕಾರಣಕ್ಕೆ ಅವರು ಬುರ್ಖಾ ಧರಿಸಿ

ಬರುತ್ತಿದ್ದರೆಂಬ ಸಂಗತಿಯನ್ನು ಅಂದಿನ ದಿನಗಳಲ್ಲಿ ಕೆಲವರು ಹೇಳುತ್ತಿದ್ದುದನ್ನು

ಗಮನಿಸಿದ್ದೆ.

​-ಅಶೋಕ ಚಿಕ್ಪರಪ್ಪಾ

ಪತ್ರಕರ್ತ – ಅನುವಾದಕ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ