ಬಡತನದಿಂದ ರಾಷ್ಟ್ರಪ್ರಶಸ್ತಿ, ಸೇನಾ ಸೇವೆಯಿಂದ ಸಮಾಜಸೇವೆ, ಸಿನಿಮಾದಿಂದ ಶೂಟಿಂಗ್‌ವರೆಗೆ ಅಪರೂಪದ ಬದುಕಿನ ಪಯಣ

ಬಾಲಿವುಡ್ ಹಾಗೂ ಮರಾಠಿ ಚಿತ್ರರಂಗದ ಹಿರಿಯ ನಟ ನಾನಾ ಪಾಟೇಕರ್ ಅವರು 2026ರ ಆಕ್ಟೋಬರ್ 8, ಗುರುವಾರ ಬೆಳಗಿನ ಜಾವ ತಮ್ಮ 75 ವರ್ಷ ವರ್ಷದಲ್ಲಿ ಗೋವಾದ ಡೋನಾ ಪೌಲಾದಲ್ಲಿರುವ ತಮ್ಮ ನಿವಾಸದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದದ್ದನ್ನು ಗಮನಿಸಿ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಸುಮಾರು 45 ನಿಮಿಷಗಳ ಕಾಲ ನಿರಂತರವಾಗಿ ಕಾರ್ಡಿಯೋಪಲ್ಮನರಿ ರಿಸಸ್ಸಿಟೇಶನ್ (CPR) ನಡೆಸಿದರೂ ಫಲಕಾರಿಯಾದೇ, 5:20ಕ್ಕೆ ಮೃತಪಟ್ಟಿದ್ದಾರೆ.

Image of Nana Patekar - IMDb

ಜಾತಸ್ಯ ಮರಣಂ ಧೃವಂ. ಹುಟ್ಟಿದವರು ಸಾಯಲೇ ಬೇಕು ಎಂಬ ಜಗದ ಎನ್ನುವುದನ್ನು ಚೆನ್ನಾಗಿಯೇ ಅರಿತಿದ್ದ ನಾನಾ ಪಟೇಕರ್, ಅವರ ನಿಧನಕ್ಕೆ ಕೇವಲ ನಾಲ್ಕು ದಿನಗಳ ಮುನ್ನವೇ ಬಿಳಿ ಕುರ್ಥಾ ಮತ್ತು ಬಿಳಿ ಶಾಲು ಧರಿಸಿ ಗೋವಾದಲ್ಲಿ ನಡೆದ ಸಾಮ್ರಾಟ್ ಕ್ಲಬ್ ಇಂಟರ್‌ನ್ಯಾಷನಲ್ ಸಂಸ್ಥೆಯ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದ ಪಾಟೇಕರ್, ಮಾಜಿ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಅವರನ್ನು ಸ್ಮರಿಸಿ ಅವರ ರಾಜಕೀಯ ಕಾರ್ಯಶೈಲಿಯನ್ನು ಶ್ಲಾಘಿಸಿದ್ದರು. ಹಾಗೆಯೇ ಪರ್ರಿಕರ್ ಅವರ ಬಗ್ಗೆ ನೆನಪುಗಳನ್ನು ಹಂಚಿಕೊಳ್ಳುವ ವೇಳೆ ಜೀವನದ ಸೀಮಿತ ಅವಧಿಯ ಕುರಿತು ಚಿಂತನೆ ವ್ಯಕ್ತಪಡಿಸುತ್ತಾ, ನಾವೆಲ್ಲರೂ ಒಂದಲ್ಲೊಂದು ದಿನ ಈ ಲೋಕವನ್ನು ತೊರೆಯಲೇಬೇಕು. ನಾನು ನಾಳೆ ಇರುತ್ತೇನೆಯೋ ಇಲ್ಲವೋ ಎಂಬುದೂ ನನಗೆ ಗೊತ್ತಿಲ್ಲ. ಆ ಕ್ಷಣ ಪ್ರತಿಯೊಬ್ಬರ ಜೀವನದಲ್ಲೂ ಬರುತ್ತದೆ. ಆದರೆ ಆ ಸಮಯ ಬರುವುದಕ್ಕೂ ಮುನ್ನ, ನಾನು ಮಾಡಲು ಬಯಸಿದ್ದುದನ್ನು ಮಾಡುತ್ತಿದ್ದೇನೆಯೇ? ಅದಕ್ಕಾಗಿ ಅಗತ್ಯವಾದ ಪ್ರಯತ್ನವನ್ನು ಮಾಡಿದ್ದೇನೆಯೇ? ಎಂಬ ಬಗ್ಗೆ ನಾವು ನಮ್ಮನ್ನೇ ಪ್ರಶ್ನಿಸಿಕೊಳ್ಳಬೇಕು ಎಂದಿದ್ದ ನಾನಾ ಪಾಟೇಕರ್ ಕೇವಲ ನಾಲ್ಕು ದಿನಗಳಲ್ಲೇ ಇಹಲೋಕ ತ್ಯಜಿಸಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ

ಭಾರತೀಯ ಚಿತ್ರರಂಗದಲ್ಲಿ ಕೆಲವು ನಟರು ತಮ್ಮ ಪಾತ್ರಗಳಿಂದ ಜನರ ಮನಸ್ಸಿನಲ್ಲಿ ಉಳಿಯುತ್ತಾರೆ. ಕೆಲವರು ತಮ್ಮ ಧ್ವನಿಯಿಂದ, ಕೆಲವರು ತಮ್ಮ ಸಂಭಾಷಣೆಯಿಂದ, ಇನ್ನೂ ಕೆಲವರು ತಮ್ಮ ವ್ಯಕ್ತಿತ್ವದಿಂದ. ಆದರೆ ನಾನಾ ಪಾಟೇಕರ್ ಈ ಎಲ್ಲವನ್ನೂ ಮೀರಿ ನಿಲ್ಲುವ ಅಪರೂಪದ ಕಲಾವಿದ. ಅವರು ನಾಯಕನಾಗಿದ್ದರೂ, ಖಳನಾಯಕನಾಗಿದ್ದರೂ, ಪೊಲೀಸ್ ಅಧಿಕಾರಿಯಾಗಿದ್ದರೂ, ಗ್ಯಾಂಗ್‌ಸ್ಟರ್ ಆಗಿದ್ದರೂ, ರಾಜಕಾರಣಿಯಾಗಿದ್ದರೂ, ವಯೋವೃದ್ಧ ರಂಗಕಲಾವಿದನಾಗಿದ್ದರೂ—ಪಾತ್ರವನ್ನು “ನಟಿಸುವುದಕ್ಕಿಂತ” ಆ ಪಾತ್ರದೊಳಗೆ ಬದುಕುವ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾದವರು.

2026ರ ಅಕ್ಟೋಬರ್ 8ರಂದು 75ನೇ ವಯಸ್ಸಿನಲ್ಲಿ ಅವರ ನಿಧನದ ಸುದ್ದಿ ಭಾರತೀಯ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದೆ. ಹೃದಯಾಘಾತದಿಂದ ಗೋವಾದ ನಿವಾಸದಲ್ಲಿ ಅವರು ನಿಧನರಾದರು. ಆದರೆ ನಾನಾ ಪಾಟೇಕರ್ ಅವರ ಬದುಕನ್ನು ಕೇವಲ ಒಬ್ಬ ನಟನ ಜೀವನಚರಿತ್ರೆಯಾಗಿ ನೋಡಿದರೆ ಅವರ ವ್ಯಕ್ತಿತ್ವದ ಬಹುಮುಖ್ಯ ಭಾಗ ನಮ್ಮ ಕಣ್ಣಿಗೆ ಬೀಳುವುದೇ ಇಲ್ಲ.

ಅವರು ಚಿತ್ರಕಲಾವಿದ, ರಂಗಭೂಮಿ ಕಲಾವಿದ, ನಟ, ನಿರ್ದೇಶಕ, ಬರಹಗಾರ, ಸೈನಿಕ ತರಬೇತಿ ಪಡೆದ ವ್ಯಕ್ತಿ, ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಸೈನಿಕರೊಂದಿಗೆ ಕಾಲ ಕಳೆದ ದೇಶಭಕ್ತ, ರಾಷ್ಟ್ರೀಯ ಮಟ್ಟದ ಶೂಟರ್, ರೈತರ ಪರ ಹೋರಾಡಿದ ಸಮಾಜಸೇವಕ ಮತ್ತು ಸರಳ ಬದುಕನ್ನು ಇಷ್ಟಪಟ್ಟ ಮನುಷ್ಯ.

ಮೂಲ ಹೆಸರು ವಿಶ್ವನಾಥ ಪಾಟೇಕರ್

ನಾನಾ ಪಾಟೇಕರ್ ಅವರ ಮೂಲ ಹೆಸರು ವಿಶ್ವನಾಥ ಪಾಟೇಕರ್. 1951ರ ಜನವರಿ 1ರಂದು ಮಹಾರಾಷ್ಟ್ರದ ಮುರುಡ್ ಜಂಜೀರಾ ಪ್ರದೇಶದಲ್ಲಿ ಅವರು ಜನಿಸಿದರು. ಅವರ ತಂದೆ ಗಜಾನನ್ ಪಾಟೇಕರ್ ಜವಳಿ ವ್ಯಾಪಾರ ಮಾಡುತ್ತಿದ್ದರು. ಕುಟುಂಬದ ಆರ್ಥಿಕ ಪರಿಸ್ಥಿತಿ ಒಂದು ಹಂತದಲ್ಲಿ ಬಹಳ ಕೆಟ್ಟ ಸ್ಥಿತಿಗೆ ತಲುಪಿತು.  ಇಲ್ಲಿಂದಲೇ ನಾನಾ ಅವರ ಬದುಕಿನ ಮೊದಲ ದೊಡ್ಡ ಪಾಠ ಆರಂಭವಾಯಿತು.

13ನೇ ವಯಸ್ಸಿನಲ್ಲಿ ಸಿನಿಮಾ ಪೋಸ್ಟರ್ ಬರೆದ ಹುಡುಗ

ಇದು ನಾನಾ ಪಾಟೇಕರ್ ಅವರ ಜೀವನದ ಅತ್ಯಂತ ಪ್ರೇರಣಾದಾಯಕ ಅಧ್ಯಾಯಗಳಲ್ಲಿ ಒಂದು. ಅವರಿಗೆ ಕೇವಲ 13 ವರ್ಷ. ಇನ್ನೂ ಶಾಲೆಯಲ್ಲಿ ಓದುತ್ತಿದ್ದ ವಯಸ್ಸು. ಕುಟುಂಬದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರಿಂದ ಅವರು ಶಾಲೆಯ ನಂತರ ಸಿನಿಮಾ ಪೋಸ್ಟರ್‌ಗಳನ್ನು ಬಣ್ಣಿಸುವ ಕೆಲಸ ಮಾಡುತ್ತಿದ್ದರು. ಅವರು ಸ್ವತಃ ಹೇಳಿಕೊಂಡಿರುವ ಪ್ರಕಾರ, ಪ್ರತಿದಿನ ಸುಮಾರು 8 ಕಿಲೋಮೀಟರ್ ನಡೆದು ಕೆಲಸಕ್ಕೆ ಹೋಗಿ, 8 ಕಿಲೋಮೀಟರ್ ನಡೆದು ಹಿಂದಿರುಗುತ್ತಿದ್ದರು—ಅಂದರೆ ದಿನಕ್ಕೆ ಸುಮಾರು 16 ಕಿಲೋಮೀಟರ್. ತಿಂಗಳಿಗೆ ಸಿಗುತ್ತಿದ್ದ ಸಂಬಳ ಕೇವಲ ₹35 ಮತ್ತು ಒಂದು ಹೊತ್ತಿನ ಊಟ.

ಇಂದು ಕೋಟಿ ಕೋಟಿ ರೂಪಾಯಿಗಳ ಸಂಭಾವನೆ ಪಡೆಯುವ ನಟನ ಜೀವನದ ಆರಂಭ ಹೀಗಿತ್ತು.  ನಾನಾ ಅವರ ಬದುಕಿನ ಈ ಘಟನೆ ಅವರ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲು ಬಹಳ ಮುಖ್ಯ. ಹಸಿವು ಅವರಿಗೆ ಕೇವಲ ಅನುಭವವಲ್ಲ; ಅದು ಅವರ ಗುರು.

ರೊಟ್ಟಿಯ ವಾಸನೆ ನನಗೆ ಅತ್ಯಂತ ಇಷ್ಟವಾದ ವಾಸನೆ

ಬಡತನದ ದಿನಗಳ ಬಗ್ಗೆ ಮಾತನಾಡುವಾಗ ನಾನಾ ಪಾಟೇಕರ್ ಒಮ್ಮೆ ತಮ್ಮ ಬಾಲ್ಯದ ಅನುಭವವನ್ನು ಬಹಳ ಸರಳವಾಗಿ ವಿವರಿಸಿದ್ದರು. ಒಂದು ಹೊತ್ತಿನ ಊಟಕ್ಕಾಗಿ ಅವರು ಕೆಲಸ ಮಾಡುತ್ತಿದ್ದರು. ಅವರ ಬಳಿ ಹಣವಿರಲಿಲ್ಲ. ಕೆಲವೊಮ್ಮೆ ನಾಲ್ಕಾಣೆಯಷ್ಟು ಪಾಕೆಟ್ ಮನಿ. ಅದರಲ್ಲಿ ಉಸಲ್ ಮತ್ತು ಬಾಳೆಹಣ್ಣು ತಿನ್ನುತ್ತಿದ್ದ ದಿನಗಳಿದ್ದವು. ಆ ದಿನಗಳಲ್ಲಿ ಅವರು ಕಲಿತದ್ದು ಯಾವುದೇ ಕಾಲೇಜು ಕಲಿಸದ ಪಾಠಗಳು ಎಂದು ಅವರು ಹೇಳಿದ್ದರು.

ಇದಕ್ಕಾಗಿಯೇ ಬಹುಶಃ ಅವರ ಅಭಿನಯದಲ್ಲಿ ಹಸಿವು, ಕೋಪ, ಅವಮಾನ, ನೋವು, ಬಡತನ ಮತ್ತು ಬದುಕಿನ ಹೋರಾಟ ಇಷ್ಟು ನೈಜವಾಗಿ ಕಾಣುತ್ತಿತ್ತು. ಅವರು ಬಡತನವನ್ನು ಪುಸ್ತಕದಲ್ಲಿ ಓದಿರಲಿಲ್ಲ. ಅದನ್ನು ಬದುಕಿದ್ದರು.

ಕಲಾವಿದನಾಗುವ ಮೊದಲು ಅವರು ಚಿತ್ರಕಲಾವಿದ

ನಾನಾ ಪಾಟೇಕರ್ ಕೇವಲ ನಟನೆಯಿಂದ ಕಲೆಗೆ ಬಂದವರಲ್ಲ. ಅವರು Sir J.J. School of Art / Sir J.J. Institute of Applied Artನಲ್ಲಿ ಕಮರ್ಷಿಯಲ್ ಆರ್ಟ್ ಅಧ್ಯಯನ ಮಾಡಿದರು. ನಂತರ ಜಾಹೀರಾತು ಸಂಸ್ಥೆಯಲ್ಲೂ ಕೆಲಸ ಮಾಡಿದರು. ಆದರೆ ಅವರ ಮನಸ್ಸು ರಂಗಭೂಮಿಯಲ್ಲಿತ್ತು. ಉದ್ಯೋಗವೋ ಅಥವಾ ರಂಗಭೂಮಿಯೋ ಎಂಬ ಪ್ರಶ್ನೆ ಎದುರಾದಾಗ ಅವರು ಉದ್ಯೋಗವನ್ನು ಬಿಟ್ಟು ರಂಗಭೂಮಿಯತ್ತ ಹೆಜ್ಜೆ ಹಾಕಿದರು. ಇದು ಅವರ ವ್ಯಕ್ತಿತ್ವದ ಮತ್ತೊಂದು ಪ್ರಮುಖ ಲಕ್ಷಣವನ್ನು ತೋರಿಸುತ್ತದೆ: ಹಣಕ್ಕಿಂತ ಕಲೆಯ ಮೇಲಿನ ನಂಬಿಕೆ.

ರಂಗಭೂಮಿ, ನಾನಾ ಪಾಟೇಕರ್ ಅವರ ನಿಜವಾದ ವಿಶ್ವವಿದ್ಯಾಲಯ

ಸಿನಿಮಾಕ್ಕೆ ಬರುವ ಮೊದಲು ನಾನಾ ಪಾಟೇಕರ್ ರಂಗಭೂಮಿಯಲ್ಲಿ ತಮ್ಮ ಅಭಿನಯವನ್ನು ಗಟ್ಟಿಗೊಳಿಸಿಕೊಂಡರು. ಅವರ ಅಭಿನಯದ ಶಕ್ತಿ ಕ್ಯಾಮೆರಾದ ಮುಂದೆ ಮಾತ್ರ ಹುಟ್ಟಿದ್ದಲ್ಲ. ರಂಗಭೂಮಿಯ ನೇರ ಅನುಭವ, ಪ್ರೇಕ್ಷಕರ ಉಸಿರು, ಸಂಭಾಷಣೆಯ ತೂಕ, ದೇಹಭಾಷೆ ಮತ್ತು ಪಾತ್ರದ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ.  ಇವೆಲ್ಲ ಅವರ ಅಭಿನಯದ ಮೂಲಭೂತ ಅಂಶಗಳಾದವು.ಅವರು ನಂತರ ಸಿನಿಮಾದಲ್ಲಿ ಎಷ್ಟೇ ದೊಡ್ಡ ನಟರಾದರೂ, ರಂಗಭೂಮಿ ಅವರ ಕಲಾತ್ಮಕ ಬೇರು ಆಗಿಯೇ ಉಳಿಯಿತು.

1978, ಗಮನ್ ಮೂಲಕ ಸಿನಿಮಾ ಪ್ರವೇಶ

1978ರ ಗಮನ್ ಮೂಲಕ ನಾನಾ ಪಾಟೇಕರ್ ಸಿನಿಮಾ ಜಗತ್ತಿಗೆ ಪ್ರವೇಶಿಸಿದರು. ಆದರೆ ಅವರಿಗೆ ತಕ್ಷಣವೇ ಸ್ಟಾರ್ ಪಟ್ಟ ಸಿಗಲಿಲ್ಲ. ಸಣ್ಣ-ಸಣ್ಣ ಪಾತ್ರಗಳು, ವಿಭಿನ್ನ ಪಾತ್ರಗಳು, ಕಾಯುವಿಕೆ, ನಿರಾಕರಣೆ—ಇವೆಲ್ಲವನ್ನು ದಾಟಿ ಅವರು ತಮ್ಮದೇ ಆದ ಸ್ಥಾನ ನಿರ್ಮಿಸಿಕೊಂಡರು. ಅವರ ಪ್ರತಿಭೆಗೆ ದೊಡ್ಡ ತಿರುವು ನೀಡಿದ ಚಿತ್ರಗಳಲ್ಲಿ ‘ಪರಿಂಡಾ’ ಪ್ರಮುಖವಾದದ್ದು. 1989ರ ಈ ಚಿತ್ರದಲ್ಲಿನ ಅವರ ಅಭಿನಯ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಹಾಗೂ ಫಿಲ್ಮ್‌ಫೇರ್ ಪ್ರಶಸ್ತಿ ತಂದುಕೊಟ್ಟಿತು.

ಕ್ರಾಂತಿವೀರ್,  ನಟನಿಗೆ ರಾಷ್ಟ್ರೀಯ ಮಟ್ಟದ ಶಿಖರ

1994ರ ಕ್ರಾಂತಿವೀರ್ ನಾನಾ ಪಾಟೇಕರ್ ಅವರ ವೃತ್ತಿಜೀವನದ ಅತ್ಯಂತ ಮಹತ್ವದ ಚಿತ್ರ. ಅದರಲ್ಲಿನ ಪ್ರತಿಯೊಂದು ಸಂಭಾಷಣೆಯನ್ನೂ ಅವರು ಕೇವಲ ಹೇಳಲಿಲ್ಲ. ಅದನ್ನು ಬದುಕಿದರು. ಈ ಪಾತ್ರಕ್ಕಾಗಿ ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ಅವರ ವೃತ್ತಿಜೀವನದಲ್ಲಿ ಒಟ್ಟು ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ದಾಖಲಾಗಿವೆ.

ಅಗ್ನಿಸಾಕ್ಷಿಯಿಂದ ಖಾಮೋಶಿವರೆಗೆ

7 Nana Patekar roles that changed how India saw a villain, a cop and a comic don, from Anna Seth to Uday Shetty - The Statesman

1990ರ ದಶಕದಲ್ಲಿ ನಾನಾ ಪಾಟೇಕರ್ ತಮ್ಮನ್ನು ಒಂದೇ ರೀತಿಯ ಪಾತ್ರಕ್ಕೆ ಸೀಮಿತಗೊಳಿಸಲಿಲ್ಲ. ಪರಿಂಡಾ, ಕ್ರಾಂತಿವೀರ್, ಅಗ್ನಿಸಾಕ್ಷಿ, ಖಾಮೋಶಿ. ದಿ ಮ್ಯೂಸಿಕಲ್, ತಿರಂಗಾ, ಅಂಗಾರ್ ಮುಂತಾದ ಚಿತ್ರಗಳು ಅವರ ಅಭಿನಯದ ವಿಭಿನ್ನ ಮುಖಗಳನ್ನು ತೋರಿಸಿದವು. ಅಗ್ನಿಸಾಕ್ಷಿಗಾಗಿ ಅವರಿಗೆ ಮತ್ತೊಂದು ರಾಷ್ಟ್ರೀಯ ಪ್ರಶಸ್ತಿ ದೊರೆಯಿತು.

ಗಂಭೀರ ನಟನಿಂದ ಹಾಸ್ಯನಟನಿಗೂ!

ನಾನಾ ಪಾಟೇಕರ್ ಎಂದರೆ ಕೇವಲ ಗಂಭೀರ ಮುಖ, ಕೋಪದ ಧ್ವನಿ, ತೀವ್ರ ಸಂಭಾಷಣೆ ಎಂದುಕೊಂಡರೆ ಅದು ಅವರ ಪ್ರತಿಭೆಯ ಅರ್ಧಭಾಗವನ್ನಷ್ಟೇ ನೋಡುವುದು. ವೆಲ್ಕಮ್ ಚಿತ್ರದ ಉದಯ್ ಶೆಟ್ಟಿ ಪಾತ್ರ ಅವರ ಹಾಸ್ಯಪ್ರಜ್ಞೆಯ ಮತ್ತೊಂದು ಮುಖವನ್ನು ಜನರಿಗೆ ಪರಿಚಯಿಸಿತು. ಗಂಭೀರ ಪಾತ್ರಗಳಲ್ಲಿ ಪ್ರೇಕ್ಷಕರನ್ನು ಬೆಚ್ಚಿಬೀಳಿಸಿದ ವ್ಯಕ್ತಿಯೇ ಇಲ್ಲಿ ಪ್ರೇಕ್ಷಕರನ್ನು ನಗಿಸಿದರು. ಇದು ಅವರ versatilityಗೆ ಅತ್ಯುತ್ತಮ ಉದಾಹರಣೆ.

ನಟಸಾಮ್ರಾಟ್  ಪಾತ್ರವನ್ನೇ ಮೀರಿದ ಅಭಿನಯ

2016ರ ಮರಾಠಿ ಸಿನಿಮಾ ನಟಸಾಮ್ರಾಟ್’ ನಾನಾ ಪಾಟೇಕರ್ ಅವರ ಕಲಾಜೀವನದ ಶಿಖರಗಳಲ್ಲಿ ಒಂದು. ಗಣಪತ್ ಅಪ್ಪಾ ಬೆಲವಲ್ಕರ್ ಎಂಬ ನಿವೃತ್ತ ರಂಗನಟನ ಪಾತ್ರದಲ್ಲಿ ಅವರು ತೋರಿಸಿದ ನೋವು, ಅಹಂಕಾರ, ಪ್ರೀತಿ, ಏಕಾಂತ ಮತ್ತು ಕುಸಿತ ಪ್ರೇಕ್ಷಕರ ಮನಸ್ಸಿನಲ್ಲಿ ಆಳವಾಗಿ ಉಳಿಯಿತು. ಕುತೂಹಲಕಾರಿ ಸಂಗತಿಯೆಂದರೆ, ಅವರು ಇದೇ ಪಾತ್ರವನ್ನು ರಂಗಭೂಮಿಯಲ್ಲಿ ಮಾಡಲು ನಿರಾಕರಿಸಿದ್ದರು. ಅವರ ವಿವರಣೆ ಪ್ರಕಾರ, ಆ ಪಾತ್ರವನ್ನು ಪ್ರತಿಯೊಂದು ಪ್ರದರ್ಶನದಲ್ಲೂ ಸಂಪೂರ್ಣವಾಗಿ ಬದುಕುವುದು ದೈಹಿಕ ಮತ್ತು ಮಾನಸಿಕವಾಗಿ ಅತ್ಯಂತ ಕಠಿಣವಾಗುತ್ತಿತ್ತು. ಅದಕ್ಕಾಗಿ ಅವರು ನಾಟಕಕ್ಕಿಂತ ಸಿನಿಮಾ ಆಯ್ಕೆ ಮಾಡಿದರು.

ಪ್ರಹಾರ್ ಸಿನಿಮಾ, ಸಿನಿಮಾದ ಪಾತ್ರದಿಂದ ನಿಜ ಜೀವನದ ಸೇನೆಗೆ

Nana Patekar – KavitaChhibber.com

ಇದು ನಾನಾ ಪಾಟೇಕರ್ ಅವರ ಜೀವನದ ಅತ್ಯಂತ ಅಪರೂಪದ ಅಧ್ಯಾಯ. 1991ರ Prahaar. The Final Attack ಚಿತ್ರಕ್ಕಾಗಿ ಅವರು ಭಾರತೀಯ ಸೇನೆಯೊಂದಿಗೆ ಕಠಿಣ ತರಬೇತಿ ಪಡೆದರು. ಆ ತರಬೇತಿ ಕೇವಲ ಸಿನಿಮಾದ ಪಾತ್ರಕ್ಕಾಗಿ ಪಡೆದ ತರಬೇತಿಯಾಗಿ ಉಳಿಯಲಿಲ್ಲ. ಅದು ಅವರ ಬದುಕಿನ ಭಾಗವಾಯಿತು. ಅವರು Territorial Armyಗೆ ಸಂಬಂಧ ಹೊಂದಿದರು ಮತ್ತು ನಂತರ ಗೌರವಾನ್ವಿತ ಸೈನಿಕ ಹುದ್ದೆಯನ್ನೂ ಪಡೆದರು.

ಕನ್ನಡ ಚಿತ್ರರಂಗದೊಂದಿಗಿನ ಸಂಬಂಧ

Nana Patekar: ಕನ್ನಡದ ಯಕ್ಷ ಸಿನಿಮಾದಲ್ಲಿ ಖಡಕ್ ಪೊಲೀಸ್‌ ಅಧಿಕಾರಿಯಾಗಿ ಮಿಂಚಿದ್ದ ನಾನಾ ಪಾಟೇಕರ್

2010ರಲ್ಲಿ ಬಿಡುಗಡೆಯಾದ ರಮೇಶ್ ಬ್ಯಾಮದಕರೆ ನಿರ್ದೇಶನದ ಯಕ್ಷ (Yaksha) ಎಂಬ ಕನ್ನಡ ಚಲನಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು  ಈ ಸಿನಿಮಾದಲ್ಲಿ ಅವರು ಗಂಭೀರವಾದ ಮತ್ತು ಪ್ರಭಾವಶಾಲಿ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿ ತಮ್ಮ ವಿಶಿಷ್ಟವಾದ ಧ್ವನಿ ಹಾಗೂ ತೀವ್ರತೆಯ ಅಭಿನಯ ಶೈಲಿಯಿಂದ ಅವರು ಕರ್ನಾಟಕದ ಅಭಿಮಾನಿಗಳ ಮನಸ್ಸಿನಲ್ಲಿಯೂ ವಿಶೇಷ ಸ್ಥಾನವನ್ನು ಪಡೆದುಕೊಂಡಿದ್ದರು. ಕನ್ನಡದ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು.

ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ 60 ದಿನ ಸೈನಿಕರೊಂದಿಗೆ

Veteran Actor Nana Patekar Dies at 751999ರ ಕಾರ್ಗಿಲ್ ಯುದ್ಧ. ಬಹುತೇಕ ನಟರು ದೇಶಭಕ್ತಿ ಕುರಿತ ಸಿನಿಮಾಗಳಲ್ಲಿ ನಟಿಸುತ್ತಿದ್ದ ಸಮಯ. ಆದರೆ ನಾನಾ ಪಾಟೇಕರ್ ನಿಜವಾದ ಸೈನಿಕರೊಂದಿಗೆ ಗಡಿಭಾಗದಲ್ಲಿ ಕಾಲ ಕಳೆದರು. ವರದಿಗಳ ಪ್ರಕಾರ ಅವರು ಸುಮಾರು 60 ದಿನಗಳ ಕಾಲ ಸೈನಿಕರೊಂದಿಗೆ ಇದ್ದರು.  ದ್ರಾಸ್, ಲೇಹ್, ಕುಪ್ವಾರಾ, ಬಾರಾಮುಲ್ಲಾ ಸೇರಿದಂತೆ ಹಲವು ಪ್ರದೇಶಗಳಿಗೆ ತೆರಳಿದ್ದರು ಮತ್ತು Quick Reaction Team ಜೊತೆಗೂ ಕೆಲಸ ಮಾಡಿದ್ದರು.  ಅವರು ಈ ಅನುಭವವನ್ನು ತಮ್ಮ ಪ್ರಚಾರಕ್ಕಾಗಿ ಬಳಸಿಕೊಳ್ಳಲಿಲ್ಲ. ಇದು ಅವರ ವ್ಯಕ್ತಿತ್ವದ ಅತ್ಯಂತ ಗಮನಾರ್ಹ ಅಂಶ. ಮಾತಿಗಿಂತ ಕೃತಿಗೆ ಹೆಚ್ಚು ಬೆಲೆ ಕೊಟ್ಟ ವ್ಯಕ್ತಿ.

ಸಿನಿಮಾದ ಶೂಟಿಂಗ್ ಮಾತ್ರವಲ್ಲ, ನಿಜವಾದ ಶೂಟಿಂಗ್‌ನಲ್ಲೂ ರಾಷ್ಟ್ರೀಯ ಪದಕ!

ನಾನಾ ಪಾಟೇಕರ್ ಅವರ ಬಗ್ಗೆ ಬಹಳ ಜನರಿಗೆ ಗೊತ್ತಿಲ್ಲದ ಅದ್ಭುತ ಸಂಗತಿ ಇದು. ಅವರು ರಾಷ್ಟ್ರೀಯ ಮಟ್ಟದ ರೈಫಲ್ ಶೂಟರ್ ಕೂಡ ಆಗಿದ್ದರು. 1991ರ ಪ್ರಹಾರ್ಗಾಗಿ ಪಡೆದ ಸೇನಾ ತರಬೇತಿಯ ನಂತರ ಶೂಟಿಂಗ್‌ನಲ್ಲಿ ಅವರಿಗೆ ಆಸಕ್ತಿ ಬೆಳೆಯಿತು. ಆದರೆ ಅವರು ಗಂಭೀರ ಸ್ಪರ್ಧಾತ್ಮಕ ಶೂಟಿಂಗ್ ಆರಂಭಿಸಿದ್ದು ಸುಮಾರು 49ನೇ ವಯಸ್ಸಿನಲ್ಲಿ! 2004ರಲ್ಲಿ ನಡೆದ 48ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 300 ಮೀಟರ್ Big Bore ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರು. 2007ರಲ್ಲಿ ಮಹಾರಾಷ್ಟ್ರ ತಂಡದ ಪರವಾಗಿ ತಂಡ ವಿಭಾಗದಲ್ಲಿ ಕಂಚಿನ ಪದಕ ಗೆದ್ದರು. ಅವರಿಗೆ ನಂತರ Renowned Shot ಎಂಬ ಅಧಿಕೃತ ಮಾನ್ಯತೆಯೂ ದೊರೆಯಿತು.  ಅಂದರೆ, 50ರ ಆಸುಪಾಸಿನಲ್ಲಿ ಹೊಸ ಕ್ರೀಡೆಯನ್ನು ಕಲಿತು ರಾಷ್ಟ್ರೀಯ ಪದಕ ಗೆದ್ದ ನಟ! ಇದು ಸಾಮಾನ್ಯ ಸಾಧನೆಯಲ್ಲ.

ಇನ್ನೊಬ್ಬ ಶೂಟರ್‌ಗೆ ಸಹಾಯ ಮಾಡಿದ ನಾನಾ

ಶೂಟಿಂಗ್ ನಾನಾಗೆ ಕೇವಲ ವೈಯಕ್ತಿಕ ಹವ್ಯಾಸವಾಗಿರಲಿಲ್ಲ. ರಾಷ್ಟ್ರೀಯ ಮಟ್ಟದ ಶೂಟರ್ ಅಂಜಲಿ ಭಾಗವತ್ ಸೇರಿದಂತೆ ಕೆಲವು ಯುವ ಶೂಟರ್‌ಗಳಿಗೆ ಅವರು ಉಪಕರಣಗಳಿಗಾಗಿ ಸಹಾಯ ಮಾಡಿದ್ದರು ಎಂಬ ನೆನಪುಗಳನ್ನು ಶೂಟಿಂಗ್ ಕ್ಷೇತ್ರದವರು ಹಂಚಿಕೊಂಡಿದ್ದಾರೆ. ಅವರ ಬಳಿ ಹಣವಿದ್ದುದರಿಂದ ಮಾತ್ರ ಸಹಾಯ ಮಾಡಲಿಲ್ಲ. ತಾವು ಇಷ್ಟಪಟ್ಟ ಕ್ಷೇತ್ರದಲ್ಲಿ ಪ್ರತಿಭೆ ಇರುವವರನ್ನು ಕಂಡಾಗ ಅವರಿಗೆ ಅವಕಾಶ ಸಿಗಬೇಕು ಎಂಬ ಮನೋಭಾವದಿಂದ ಸಹಾಯ ಮಾಡಿದರು.

ರೈತರಿಗಾಗಿ ನಾನಾ ಪಾಟೇಕರ್

2015ರಲ್ಲಿ ಮಹಾರಾಷ್ಟ್ರದ ರೈತರ ಸಂಕಷ್ಟ, ಬರ ಮತ್ತು ರೈತರ ಆತ್ಮಹತ್ಯೆಗಳ ಹಿನ್ನೆಲೆ­ಯಲ್ಲಿ ನಾನಾ ಪಾಟೇಕರ್ ಮತ್ತು ನಟ ಮಕರಂದ್ ಅನಾಸ್ಪುರೇ ಸೇರಿ NAAM Foundation ಸ್ಥಾಪಿಸಿದರು. ಇದು ಕೇವಲ ಹಣ ಹಂಚುವ ಸಂಸ್ಥೆಯಾಗಿ ಉಳಿಯಲಿಲ್ಲ. ನೀರು ಸಂರಕ್ಷಣೆ, ಹಳ್ಳಿಗಳ ಅಭಿವೃದ್ಧಿ, ಕೆರೆ-ಕಾಲುವೆಗಳ ಪುನರುಜ್ಜೀವನ, ರೈತರಿಗೆ ನೆರವು, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಚಳವಳಿಯಾಗಿ ಬೆಳೆದಿದೆ.  NAAM Foundation ತನ್ನ ಉದ್ದೇಶವನ್ನು ರೈತರಿಗೆ ಗೌರವಯುತ ಮತ್ತು ಸುಸ್ಥಿರ ಜೀವನ ನಿರ್ಮಿಸುವುದು ಎಂದು ವಿವರಿಸುತ್ತದೆ.

ದುಬಾರಿ ಕಾರಿನ ಹಣವನ್ನು ರೈತರಿಗಾಗಿ ಬಳಸಿದ ಘಟನೆ

ನಾನಾ ಪಾಟೇಕರ್ ಅವರ ಸಮಾಜಸೇವೆಯ ಕುರಿತು ಪ್ರಸಿದ್ಧವಾಗಿರುವ ಘಟನೆಗಳಲ್ಲಿ ಒಂದು. ತಮ್ಮ ದುಬಾರಿ ಕಾರನ್ನು ಖರೀದಿಸಲು ಉಳಿಸಿದ್ದ ಹಣವನ್ನು ರೈತರ ನೆರವಿಗೆ ಬಳಸುವ ನಿರ್ಧಾರ. ಅವರ ಸಮಾಜಸೇವೆ ಕೇವಲ ಕ್ಯಾಮೆರಾ ಮುಂದೆ ಚೆಕ್ ಕೊಡುವ ರೀತಿಯದ್ದಾಗಿರಲಿಲ್ಲ. ನೀರು, ಕೃಷಿ, ಗ್ರಾಮೀಣ ಮೂಲಸೌಕರ್ಯ ಮತ್ತು ರೈತರ ಸ್ವಾವಲಂಬನೆ ಮೇಲೆ ಗಮನ ಹರಿಸುವುದು ಅವರ ದೃಷ್ಟಿಕೋನವಾಗಿತ್ತು.

ಸರಳ ಜೀವನ—ಇದು ನಾನಾ ಪಾಟೇಕರ್ ಅವರ ಮತ್ತೊಂದು ಮುಖ

Image of Acclaimed Indian actor Nana Patekar dies aged 75 | Cinema ...

ಖ್ಯಾತಿ ಹೆಚ್ಚಾದಂತೆ ಜೀವನಶೈಲಿ ಬದಲಾಗುವುದು ಸಾಮಾನ್ಯ. ಆದರೆ ನಾನಾ ಪಾಟೇಕರ್ ತಮ್ಮ ಸರಳ ಜೀವನದ ಕಾರಣದಿಂದಲೂ ಗಮನ ಸೆಳೆದವರು. ಅವರ ಕುರ್ತಾ-ಪೈಜಾಮಾ, ಸರಳ ಮಾತು, ನೇರ ಉತ್ತರ, ಅಲಂಕಾರವಿಲ್ಲದ ಬದುಕು—ಇವೆಲ್ಲ ಅವರ ಸಾರ್ವಜನಿಕ ವ್ಯಕ್ತಿತ್ವದ ಭಾಗವಾಗಿದ್ದವು. ಅವರು ತಮ್ಮನ್ನು “ಸ್ಟಾರ್”ಗಿಂತ ಗ್ರಾಮೀಣ ಹಿನ್ನೆಲೆಯಿಂದ ಬಂದ ಒಬ್ಬ ಮನುಷ್ಯ ಎಂದು ನೋಡಿಕೊಳ್ಳುತ್ತಿದ್ದರು.

ಇಂಗ್ಲಿಷ್ ಭಾಷೆಯ ಬಗ್ಗೆ ಅವರ ನಿಲುವು ಕೂಡ ವಿಶೇಷ

ನಾನಾ ಪಾಟೇಕರ್ ಅವರ ಮಾತಿನಲ್ಲಿ ಒಂದು ವಿಶಿಷ್ಟ ಆತ್ಮವಿಶ್ವಾಸ ಇತ್ತು. ಅವರು ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತನಾಡದಿರುವುದನ್ನು ತಮ್ಮ ದೌರ್ಬಲ್ಯವೆಂದು ಪರಿಗಣಿಸಲಿಲ್ಲ. ತಾವು ಯಾವ ಹಿನ್ನೆಲೆಯಿಂದ ಬಂದಿದ್ದಾರೋ ಅದನ್ನು ಮರೆಮಾಚದೆ ಬದುಕಿದ ವ್ಯಕ್ತಿ. ಅವರ ಮಾತಿನಲ್ಲಿ ನಾನು ಹಳ್ಳಿಯಿಂದ ಬಂದವನು ಎಂಬ ಸರಳ ಆತ್ಮಪರಿಚಯವೂ ಇತ್ತು. ಇದು ಇಂದಿನ ಪೀಳಿಗೆಗೆ ಒಂದು ದೊಡ್ಡ ಪಾಠ: ಯಶಸ್ಸು ಎಂದರೆ ನಮ್ಮ ಮೂಲವನ್ನು ಮರೆತುಬಿಡುವುದು ಅಲ್ಲ; ನಮ್ಮ ಮೂಲದಿಂದ ಬಂದ ಶಕ್ತಿಯನ್ನು ಬಳಸಿಕೊಂಡು ಮುಂದೆ ಸಾಗುವುದು.

ಪಾತ್ರದೊಳಗೆ ಹೋಗುವುದು. ಆದರೆ ಪಾತ್ರವನ್ನು ಮನೆಗೆ ತರುವುದಿಲ್ಲ!

ನಾನಾ ಪಾಟೇಕರ್ ಅವರ ಅಭಿನಯದ ಬಗ್ಗೆ ಕೇಳಿದಾಗ ಅವರು ಹೇಳಿದ್ದ ಒಂದು ವಿಚಾರ ಬಹಳ ಆಸಕ್ತಿದಾಯಕ. ಅವರು ಸೆಟ್‌ನಲ್ಲಿರುವಾಗ ಪಾತ್ರದಲ್ಲಿ ಸಂಪೂರ್ಣವಾಗಿ ಮುಳುಗುತ್ತಾರೆ. ಆದರೆ ಶೂಟಿಂಗ್ ಮುಗಿದ ನಂತರ ಪಾತ್ರವನ್ನು ಅಲ್ಲಿಯೇ ಬಿಟ್ಟುಬಿಡಲು ಪ್ರಯತ್ನಿಸುತ್ತಾರೆ. ಅವರು ತಮ್ಮನ್ನು switch-on and off actor ಎಂದು ವಿವರಿಸಿದ್ದರು.  ಇದು ಮನೋವಿಜ್ಞಾನ ದೃಷ್ಟಿಯಿಂದಲೂ ಕುತೂಹಲಕಾರಿ. ಅಂದರೆ ಪಾತ್ರವನ್ನು ಆಳವಾಗಿ ಅನುಭವಿಸುವುದು ಮತ್ತು ವೈಯಕ್ತಿಕ ಬದುಕನ್ನು ಪಾತ್ರದಿಂದ ಪ್ರತ್ಯೇಕಿಸುವುದು—ಎರಡನ್ನೂ ಅವರು ಸಮತೋಲನಗೊಳಿಸಿದ್ದರು.

ನಟಸಮ್ರಾಟ್ ಪಾತ್ರವನ್ನು 25 ಬಾರಿ ನೋಡಿದ್ದ ವ್ಯಕ್ತಿ

ಇನ್ನೊಂದು ಅಪರೂಪದ ಸಂಗತಿ. ಯುವಕನಾಗಿದ್ದಾಗ ನಾನಾ ಪಾಟೇಕರ್ ಅವರು ಡಾ. ಶ್ರೀರಾಮ ಲಾಗೂ ಅಭಿನಯಿಸಿದ್ದ ನಟಸಮ್ರಾಟ್ ನಾಟಕವನ್ನು ಸುಮಾರು 25 ಬಾರಿ ನೋಡಿದ್ದರು ಎಂದು ವರದಿಯಾಗಿದೆ. ಅವರು ಆ ಪಾತ್ರದೊಂದಿಗೆ ವರ್ಷಗಳ ಕಾಲ ಮಾನಸಿಕವಾಗಿ ಸಂಪರ್ಕ ಹೊಂದಿದ್ದರು. ನಂತರ ಅದೇ ಪಾತ್ರವನ್ನು ತಾವು ಸಿನಿಮಾದಲ್ಲಿ ನಿರ್ವಹಿಸಿದರು.  ಇದರಿಂದ ಒಂದು ಸಂಗತಿ ಸ್ಪಷ್ಟವಾಗುತ್ತದೆ: ಅವರು ಪಾತ್ರವನ್ನು ಓದಿ ಅಭಿನಯಿಸುವ ನಟರಲ್ಲ; ಪಾತ್ರವನ್ನು ವರ್ಷಗಳ ಕಾಲ ಅಧ್ಯಯನ ಮಾಡಿ ನಂತರ ಅಭಿನಯಿಸುವ ನಟ.

ನಿರ್ದೇಶಕ ನಾನಾ ಪಾಟೇಕರ್

ನಾನಾ ಪಾಟೇಕರ್ ಕೇವಲ ನಟರಾಗಿರಲಿಲ್ಲ. 1991ರಲ್ಲಿ ಅವರು ‘Prahaar. The Final Attack’ ಚಿತ್ರವನ್ನು ನಿರ್ದೇಶಿಸಿದರು. ಅದರ ಮೂಲಕ ಅವರು ಅಭಿನಯದ ಹೊರತಾಗಿಯೂ ಸಿನಿಮಾ ನಿರ್ಮಾಣದ ಮತ್ತೊಂದು ಆಯಾಮವನ್ನು ಪರಿಚಯಿಸಿಕೊಂಡರು.

ಅವರು ಪಾತ್ರಗಳನ್ನು ಆರಿಸುತ್ತಿದ್ದ ರೀತಿ

ನಾನಾ ಪಾಟೇಕರ್ ಅವರಿಗೆ ಕೇವಲ ದೊಡ್ಡ ಸಂಭಾವನೆ ಅಥವಾ ದೊಡ್ಡ ಬ್ಯಾನರ್ ಮುಖ್ಯವಾಗಿರಲಿಲ್ಲ. ಕಥೆ ತಮಗೆ ಇಷ್ಟವಾಗಬೇಕು, ಸಾಮಾನ್ಯ ಪ್ರೇಕ್ಷಕ ಅದನ್ನು ಇಷ್ಟಪಡಬೇಕು ಎಂಬುದು ಮುಖ್ಯ ಎಂದು ಅವರು ಹೇಳಿದ್ದರು. 2025ರ ಸಂದರ್ಶನವೊಂದರಲ್ಲಿ, ಉತ್ತಮವಾಗಿಲ್ಲದ ಕಥೆಗೆ “ಇಲ್ಲ” ಎನ್ನುವ ಧೈರ್ಯ ಇರಬೇಕು; ಹಣಕ್ಕಾಗಿಯೇ ಪ್ರತಿಯೊಂದು ಅವಕಾಶವನ್ನು ಸ್ವೀಕರಿಸುವ ಅಗತ್ಯವಿಲ್ಲ ಎಂಬ ಅರ್ಥದ ಮಾತುಗಳನ್ನು ಅವರು ಹೇಳಿದ್ದಾರೆ.  ಇದು ಅವರ ವೃತ್ತಿಜೀವನವನ್ನು ಅರ್ಥಮಾಡಿಕೊಳ್ಳಲು ಬಹಳ ಮುಖ್ಯ.

ವೆಲ್ಕಮ್ ಮಾಡಿದ ನಟನೇ ಡಾ. ಪ್ರಕಾಶ್ ಆಮ್ಟೆ ಕೂಡ ಆದರು

ಒಂದೆಡೆ ವೆಲ್ಕಮ್ನ ಉದಯ್ ಶೆಟ್ಟಿ. ಮತ್ತೊಂದೆಡೆ Dr. Prakash Baba Amte.  The Real Heroನಂತಹ ಮಾನವೀಯ ಪಾತ್ರ. ಒಂದೆಡೆ ಪೊಲೀಸ್ ಅಧಿಕಾರಿಗಳು, ಗ್ಯಾಂಗ್‌ಸ್ಟರ್‌ಗಳು, ರಾಜಕಾರಣಿಗಳು. ಮತ್ತೊಂದೆಡೆ ಸಾಮಾಜಿಕ ಕಾರ್ಯಕರ್ತರು ಮತ್ತು ಸಾಮಾನ್ಯ ಮನುಷ್ಯರು. ಇದೇ ನಾನಾ ಪಾಟೇಕರ್ ಅವರ ಅಭಿನಯದ ವ್ಯಾಪ್ತಿ. ಅವರ ಬಗ್ಗೆ ಹೇಳುವಾಗ “ಗಂಭೀರ ನಟ” ಎಂಬ ಒಂದೇ ಪದ ಸಾಲದು. ಅವರು ಪಾತ್ರಗಳ ಮನೋವಿಜ್ಞಾನವನ್ನು ಹಿಡಿದಿಟ್ಟ ನಟ.

ನಾನಾ ಅವರ ಕೋಪ, ವ್ಯಕ್ತಿತ್ವದ ಒಂದು ವಿವಾದಾತ್ಮಕ ಮುಖ

ನಾನಾ ಪಾಟೇಕರ್ ಅವರ ಬಗ್ಗೆ ಮಾತನಾಡುವಾಗ ಅವರ ಕೋಪ ಮತ್ತು ಕಠಿಣ ಸ್ವಭಾವದ ಬಗ್ಗೆ ಮಾತನಾಡದೇ ಹೋದರೆ ಚಿತ್ರ ಅಪೂರ್ಣವಾಗುತ್ತದೆ. ಅವರು ತಮ್ಮ temper ಮತ್ತು ಕಠಿಣ ಸ್ವಭಾವದ ಬಗ್ಗೆ ಸ್ವತಃ ಮುಕ್ತವಾಗಿ ಮಾತನಾಡಿದ್ದರು. ಚಿತ್ರರಂಗದಲ್ಲಿಯೂ ಅವರ “difficult actor” ಎಂಬ ಇಮೇಜ್ ಕೆಲವೊಮ್ಮೆ ಅವರ ವೃತ್ತಿಜೀವನದ ಮೇಲೆ ಪರಿಣಾಮ ಬೀರಿತ್ತು ಎಂದು ವರದಿಯಾಗಿದೆ. ಅದೇ ಸಮಯದಲ್ಲಿ, 2018ರ #MeToo ಸಂದರ್ಭದಲ್ಲಿ ನಟಿ ತನುಶ್ರೀ ದತ್ತ ಅವರು ನಾನಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು; ನಾನಾ ಅದನ್ನು ನಿರಾಕರಿಸಿದ್ದರು.

ತಂದೆಯಾಗಿ ನಾನಾ ಪಾಟೇಕರ್

Nana Patekar's family reaches Goa hospital, three-doctor team to conduct post-mortem | India News

ನಾನಾ ಪಾಟೇಕರ್ ಅವರ ವೈಯಕ್ತಿಕ ಜೀವನ ಬಹಳಷ್ಟು ಬಾರಿ ಸಾರ್ವಜನಿಕ ಚರ್ಚೆಯಿಂದ ದೂರವೇ ಇತ್ತು. ಅವರು ಪತ್ನಿ ನೀಲಕಾಂತಿ ಮತ್ತು ಮಗ ಮಲ್ಹಾರ್ ಅವರನ್ನು ಹೊಂದಿದ್ದರು ಎಂದು ವರದಿಗಳು ತಿಳಿಸುತ್ತವೆ.  ತಮ್ಮ ವೈಯಕ್ತಿಕ ಜೀವನವನ್ನು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿಕೊಳ್ಳದಿರುವುದು ಅವರ ಸಾರ್ವಜನಿಕ ವ್ಯಕ್ತಿತ್ವದ ಮತ್ತೊಂದು ವಿಶೇಷತೆ.

ನಾನಾ ಪಾಟೇಕರ್ ಅವರನ್ನು ವಿಭಿನ್ನವಾಗಿಸಿದ ಐದು ನಾನಾಗಳು

ನಾನಾ ಪಾಟೇಕರ್ ಅವರನ್ನು ಕೇವಲ ನಟನಾಗಿ ನೋಡಿದರೆ ಅವರ ಬದುಕಿನ ದೊಡ್ಡ ಭಾಗವನ್ನು ಕಳೆದುಕೊಳ್ಳುತ್ತೇವೆ. ಅವರೊಳಗೆ ಕನಿಷ್ಠ ಐದು ವಿಭಿನ್ನ ವ್ಯಕ್ತಿಗಳು ಇದ್ದರು:

  •  ಕಲಾವಿದ ನಾನಾ : ಚಿತ್ರಕಲೆ ಕಲಿತವರು. ಸಿನಿಮಾ ಪೋಸ್ಟರ್‌ಗಳನ್ನು ಬರೆದವರು.
  • ರಂಗಭೂಮಿ ನಾನಾ : ರಂಗಭೂಮಿಯಿಂದ ನಟನೆಯ ಆಳ ಕಲಿತವರು.
  • ಸಿನಿಮಾ ನಾನಾ : ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ನಟ.
  • ಸೈನಿಕ ನಾನಾ : ಸೇನಾ ತರಬೇತಿ ಪಡೆದವರು; ಕಾರ್ಗಿಲ್ ಸಂದರ್ಭದಲ್ಲಿ ಸೈನಿಕರೊಂದಿಗೆ ಇದ್ದವರು.
  • ಶೂಟರ್ ನಾನಾ : 49ನೇ ವಯಸ್ಸಿನಲ್ಲಿ ಸ್ಪರ್ಧಾತ್ಮಕ ಶೂಟಿಂಗ್ ಆರಂಭಿಸಿ ರಾಷ್ಟ್ರೀಯ ಪದಕ ಗೆದ್ದವರು.
  • ಸಮಾಜಸೇವಕ ನಾನಾ : ರೈತರಿಗಾಗಿ NAAM Foundation ಮೂಲಕ ಕೆಲಸ ಮಾಡಿದವರು.

ಅವರ ಬದುಕಿನ ಅತ್ಯಂತ ದೊಡ್ಡ ವೈರುಧ್ಯ

ನಾನಾ ಪಾಟೇಕರ್ ಸಿನಿಮಾಗಳಲ್ಲಿ ಅನೇಕ ಬಾರಿ ಕೋಪ, ಹಿಂಸೆ, ಅಧಿಕಾರ, ಪ್ರತೀಕಾರ ಮತ್ತು ಸಂಘರ್ಷದ ಪಾತ್ರಗಳನ್ನು ನಿರ್ವಹಿಸಿದರು. ಆದರೆ ನಿಜ ಜೀವನದಲ್ಲಿ ಅವರ ಮತ್ತೊಂದು ಮುಖ, ರೈತ, ನೀರು, ಗ್ರಾಮ, ಸೈನಿಕ, ಯುವ ಶೂಟರ್, ಬಡವ, ಸಮಾಜದ ಅಂಚಿನಲ್ಲಿರುವ ವ್ಯಕ್ತಿ.

ಇದು ಅವರ ಬದುಕಿನ ದೊಡ್ಡ ವೈರುಧ್ಯ. ಪರದೆಯ ಮೇಲೆ ಬಂದೂಕು ಹಿಡಿದ ನಟ, ನಿಜ ಜೀವನದಲ್ಲಿ ಬಂದೂಕಿನ ಶೂಟಿಂಗ್‌ನಲ್ಲೂ ಪದಕ ಗೆದ್ದರು. ಪರದೆಯ ಮೇಲೆ ಸೈನಿಕನಾಗಿ ನಟಿಸಿದ ನಟ. ನಿಜ ಜೀವನದಲ್ಲೂ ಸೈನಿಕರೊಂದಿಗೆ ಗಡಿಯಲ್ಲಿ ಕಾಲ ಕಳೆದರು. ಪರದೆಯ ಮೇಲೆ ರೈತನ ನೋವನ್ನು ತೋರಿಸಿದ ನಟ, ನಿಜ ಜೀವನದಲ್ಲಿ ರೈತರಿಗಾಗಿ ಸಂಘಟನೆ ಕಟ್ಟಿದರು. ಇದೇ ನಾನಾ ಪಾಟೇಕರ್ ಅವರನ್ನು ಕೇವಲ ನಟನಿಗಿಂತ ದೊಡ್ಡ ವ್ಯಕ್ತಿಯನ್ನಾಗಿ ಮಾಡುತ್ತದೆ.

ಕೊನೆಯ ಮಾತು

ನಾನಾ ಪಾಟೇಕರ್ ಅವರ ಜೀವನವನ್ನು ಒಂದು ವಾಕ್ಯದಲ್ಲಿ ಹೇಳಬೇಕಾದರೆ, ಹಸಿವಿನಿಂದ ಆರಂಭವಾದ ಬದುಕು, ಕಲೆಯಿಂದ ರೂಪುಗೊಂಡಿತು; ಅಭಿನಯದಿಂದ ಪ್ರಸಿದ್ಧಿಯಾಯಿತು; ಶಿಸ್ತಿನಿಂದ ಗಟ್ಟಿಯಾಯಿತು. ಸೇವೆಯಿಂದ ಅರ್ಥಪೂರ್ಣವಾಯಿತು.

ನಾನಾ ಪಾಟೇಕರ್ ಅವರ ನಿಧನದಿಂದ ಭಾರತೀಯ ಚಿತ್ರರಂಗ ಒಬ್ಬ ಶ್ರೇಷ್ಠ ನಟನನ್ನು ಕಳೆದುಕೊಂಡಿದೆ. ಆದರೆ ಅವರ ಪರಂಪರೆ ಕೇವಲ ಕ್ರಾಂತಿವೀರ್,ಪರಿಂಡಾ, ಅಗ್ನಿಸಾಕ್ಷಿ, ಖಾಮೋಶಿ, ಅಬ ತಕ್ ಛಪ್ಪನ್, ವೆಲ್ಕಮ್, ರಾಜನೀತಿ, ನಟಸಮ್ರಾಟ್ ಮುಂತಾದ ಸಿನಿಮಾಗಳಲ್ಲಿ ಮಾತ್ರ ಉಳಿಯುವುದಿಲ್ಲ.

  • ಅದು ಒಂದು ₹35 ಸಂಬಳದ ಸಿನಿಮಾ ಪೋಸ್ಟರ್ ಪೇಂಟರ್‌ನಿಂದ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟನಾದ ಹೋರಾಟದಲ್ಲಿ ಉಳಿಯುತ್ತದೆ.
  • ಅದು ಕಾರ್ಗಿಲ್‌ನಲ್ಲಿ ಸೈನಿಕರೊಂದಿಗೆ ಕಳೆದ 60 ದಿನಗಳಲ್ಲಿ ಉಳಿಯುತ್ತದೆ.
  • ಅದು 50ರ ವಯಸ್ಸಿನಲ್ಲಿ ಗೆದ್ದ ರಾಷ್ಟ್ರೀಯ ಶೂಟಿಂಗ್ ಪದಕಗಳಲ್ಲಿ ಉಳಿಯುತ್ತದೆ.
  • ಅದು ರೈತರಿಗಾಗಿ ನಿರ್ಮಿಸಿದ NAAM Foundationನ ಕೆಲಸದಲ್ಲಿ ಉಳಿಯುತ್ತದೆ.

ಮತ್ತು ಮುಖ್ಯವಾಗಿ, ಯಶಸ್ಸು ಬಂದ ಮೇಲೆ ನಾವು ಎಷ್ಟು ಎತ್ತರಕ್ಕೆ ಹೋದೆವು? ಎನ್ನುವುದಕ್ಕಿಂತ, ನಾವು ಎಷ್ಟು ಜನರ ಬದುಕಿಗೆ ಉಪಯೋಗವಾದೆವು? ಎಂಬ ಪ್ರಶ್ನೆಯನ್ನು ಕೇಳುವ ಮನಸ್ಸಿನಲ್ಲಿ ನಾನಾ ಪಾಟೇಕರ್ ಅವರ ನಿಜವಾದ ವ್ಯಕ್ತಿತ್ವ ಉಳಿಯುತ್ತದೆ. ಅವರ ಜೀವನದ ಅತ್ಯಂತ ದೊಡ್ಡ ಸಿನಿಮಾ ಬಹುಶಃ ಅವರು ಅಭಿನಯಿಸಿದ ಯಾವ ಸಿನಿಮಾವೂ ಅಲ್ಲ.

ಅವರದೇ ಬದುಕು.

ಅದರ ಮೊದಲ ದೃಶ್ಯದಲ್ಲಿ ಹಸಿವಿನಿಂದ ಬಳಲುತ್ತಿದ್ದ 13 ವರ್ಷದ ಹುಡುಗನಿದ್ದ. ಕೊನೆಯ ದೃಶ್ಯದಲ್ಲಿ ಭಾರತೀಯ ಚಿತ್ರರಂಗ ತನ್ನದೇ ಆದ ಒಂದು ವಿಶಿಷ್ಟ ಕಲಾವಿದನನ್ನು ಕಳೆದುಕೊಂಡಿತು. ಆದರೆ ಆ ಕಥೆಯ ಸಂದೇಶ ಮಾತ್ರ ಉಳಿಯುತ್ತದೆ:

ಪರಿಸ್ಥಿತಿ ಮನುಷ್ಯನನ್ನು ಮುರಿಯಬಹುದು. ಆದರೆ ಅದೇ ಪರಿಸ್ಥಿತಿಯನ್ನು ಪಾಠವನ್ನಾಗಿ ಮಾಡಿಕೊಂಡ ಮನುಷ್ಯನನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ ಅಲ್ವೇ?

ಏನಂತೀರೀ?

ನಿಮ್ಮವನೇ

ಉಮಾಸುತ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ