Sj*
ನಿರ್ದೇಶಕ ರಾಹುಲ್ ಸಂಕೃತ್ಯನ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ‘ರಣಬಾಲಿ’ ಚಿತ್ರದಲ್ಲಿ ವಿಜಯ್ ದೇವರಕೊಂಡಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಬಣ್ಣಹಚ್ಚಿದ್ದಾರೆ. ಈಗಾಗಲೇ ಪೋಸ್ಟರ್ಗಳು, ಪವರ್ಫುಲ್ ಟೀಸರ್, ಚಾರ್ಟ್ಬಸ್ಟರ್ ಹಾಡು ಹಾಗೂ ಇತ್ತೀಚೆಗೆ ತೆರೆಕಂಡ ಡಾಕ್ಯು-ಸರಣಿಯ ಮೂಲಕ ಸಿನಿಮಾ ವಲಯದಲ್ಲಿ ಕಲ್ಪನೆಗೂ ಮೀರಿದ ಹೈಪ್ ಸೃಷ್ಟಿಸಿದ್ದ ಚಿತ್ರತಂಡ, ಇದೀಗ ರಕ್ತ ರೋಮಾಂಚನಗೊಳಿಸುವಂತಹ ಟ್ರೈಲರ್ ಬಿಡುಗಡೆ ಮಾಡಿ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.
ಸುಮಾರು 3 ನಿಮಿಷ 47 ಸೆಕೆಂಡುಗಳ ಕಾಲ ದೃಶ್ಯವೈಭವದ ರಸದೌತಣ ನೀಡುವ ಈ ಟ್ರೈಲರ್ನಲ್ಲಿ, ವಿಜಯ್ ದೇವರಕೊಂಡ ಅವರ ನಟನಾ ಕೌಶಲ, ಪರಕಾಯ ಪ್ರವೇಶ ಮತ್ತು ಸಾಟಿಯಿಲ್ಲದ ಸ್ಕ್ರೀನ್ ಪ್ರೆಸೆನ್ಸ್ ಪ್ರೇಕ್ಷಕರನ್ನು ಕಣ್ಣಿವೆಯಿಕ್ಕದೆ ನೋಡುವಂತೆ ಮಾಡುತ್ತದೆ. ಯಾವುದೇ ಸವಾಲಿನ ಪಾತ್ರಕ್ಕೂ ತಮ್ಮದೇ ಆದ ತೀವ್ರತೆ ತುಂಬುವ ರೌಡಿ ಸ್ಟಾರ್, ಇಲ್ಲಿ ‘ಶಿಂಗನಮಲ ಬೊಬ್ಬಿಲಿ ರಣಬಾಲಿ’ಯಾಗಿ ಹಿಂದೆಂದೂ ಕಾಣದ ರುದ್ರಾವತಾರ ತಳೆದಿದ್ದಾರೆ. 1854ರಿಂದ 1878ರ ಅವಧಿಯಲ್ಲಿ ಬ್ರಿಟಿಷ್ ಇಂಡಿಯಾದ ರಾಯಲಸೀಮಾ ಪ್ರಾಂತ್ಯದಲ್ಲಿ ನಡೆದ ನೈಜ ಹಾಗೂ ರಕ್ತಸಿಕ್ತ ಘಟನೆಗಳನ್ನು ಆಧರಿಸಿ ಈ ಕಥೆಯನ್ನು ಹೆಣೆಯಲಾಗಿದ್ದು, ವಿಜಯ್ ಅವರ ಬೆಂಕಿಯಂತಹ ಕಣ್ಣುಗಳು, ಖಡಕ್ ಮ್ಯಾನರಿಸಂ ಮತ್ತು ಎದೆಝಲ್ಲೆನಿಸುವ ಆ್ಯಕ್ಷನ್ ದೃಶ್ಯಗಳು ಅವರ ನಟನಾ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿವೆ. ಬ್ರಿಟಿಷ್ ಸಾಮ್ರಾಜ್ಯಶಾಹಿಯ ಅಹಂಕಾರವನ್ನು ಅಡಗಿಸುವ ದೃಶ್ಯಗಳಲ್ಲಿ ವಿಜಯ್ ತೋರಿರುವ ರೌದ್ರಾವತಾರ ಅವರ ವೃತ್ತಿಜೀವನದಲ್ಲೇ ಮೈಲಿಗಲ್ಲಾಗುವ ಸೂಚನೆ ನೀಡಿದೆ.

ಈ ಐತಿಹಾಸಿಕ ಹೋರಾಟದ ನಡುವೆ ಭಾವನಾತ್ಮಕ ಎಳೆಗಳನ್ನು ಗಟ್ಟಿಯಾಗಿ ಬೆಸೆದಿರುವುದು ವಿಜಯ್ ಮತ್ತು ರಶ್ಮಿಕಾ ಜೋಡಿ. ರಣಬಾಲಿಯ ಅರ್ಧಾಂಗಿ ಜಯಮ್ಮನ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಆಪ್ತವಾಗಿ ಕಾಣಿಸಿಕೊಂಡಿದ್ದು, ತೆರೆಯ ಮೇಲಿನ ಇವರ ಕೆಮಿಸ್ಟ್ರಿ ಮತ್ತೊಮ್ಮೆ ಮೋಡಿ ಮಾಡುವಂತಿದೆ. ‘ಗೀತ ಗೋವಿಂದಂ’ ಹಾಗೂ ‘ಡಿಯರ್ ಕಾಮ್ರೇಡ್’ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ಈ ಜೋಡಿ, ನಿಜ ಜೀವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಮೊದಲ ಸಿನಿಮಾ ಇದಾಗಿರುವುದು ಅಭಿಮಾನಿಗಳ ನಿರೀಕ್ಷೆಯನ್ನು ಮುಗಿಲುಮುಟ್ಟಿಸಿದೆ. ಇನ್ನು ಇವರ ಎದುರು ಬ್ರಿಟಿಷ್ ಕ್ರೌರ್ಯದ ಪ್ರತೀಕವಾಗಿ ‘ಸರ್ ಥಿಯೋಡರ್ ಹೆಕ್ಟರ್’ ಪಾತ್ರದಲ್ಲಿ ಹಾಲಿವುಡ್ನ ದಿಗ್ಗಜ ಖಳನಟ ಅರ್ನಾಲ್ಡ್ ವೋಸ್ಲೂ ಅಬ್ಬರಿಸಿದ್ದು, ವಿಜಯ್ ಮತ್ತು ಅರ್ನಾಲ್ಡ್ ನಡುವಿನ ಸಂಘರ್ಷದ ದೃಶ್ಯಗಳು ಅಂತರರಾಷ್ಟ್ರೀಯ ಗುಣಮಟ್ಟವನ್ನು ನೆನಪಿಸುತ್ತವೆ.
ಮೈತ್ರಿ ಮೂವಿ ಮೇಕರ್ಸ್ ಮತ್ತು ಟಿ-ಸೀರೀಸ್ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ, ವೈ. ರವಿಶಂಕರ್ ಜೊತೆಯಾಗಿ ಅನುರಾಗ್ ಪರ್ವತನೇನಿ ಹಾಗೂ ಶಿವ್ ಚನಾನ ನಿರ್ಮಿಸಿರುವ ಈ ಚಿತ್ರಕ್ಕೆ ತಾಂತ್ರಿಕವಾಗಿಯೂ ಅಪಾರ ಬಲವಿದೆ. ಅಜಯ್-ಅತುಲ್ ಜೋಡಿಯ ರೋಮಾಂಚನಕಾರಿ ಸಂಗೀತ ಮತ್ತು ನೀರವ್ ಶಾ ಹಾಗೂ ಜಿಷ್ಣು ಭಟ್ಟಾಚಾರ್ಜಿ ಅವರ ಜೀವಂತಿಕೆ ತುಂಬಿದ ಛಾಯಾಗ್ರಹಣ ಟ್ರೈಲರ್ನ ಪ್ರತಿಯೊಂದು ಫ್ರೇಮ್ನಲ್ಲೂ ಎದ್ದು ಕಾಣುತ್ತದೆ. ವಿಶ್ವದೆಲ್ಲೆಡೆ ಅಕ್ಟೋಬರ್ 16 ರಂದು ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ‘ರಣಬಾಲಿ’ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರ ನಟನಾ ವಿಶ್ವರೂಪವನ್ನು ಕಣ್ತುಂಬಿಕೊಳ್ಳಲು ಸಿನಿರಸಿಕರು ಕಾತರದಿಂದ ಎದುರುನೋಡುತ್ತಿದ್ದಾರೆ.





