ಮೈಸೂರು ದಸರಾ ಎಂದರೆ ಅರಮನೆಯ ವೈಭವ, ಜಂಬೂಸವಾರಿ, ಚಿನ್ನದ ಅಂಬಾರಿ, ಚಾಮುಂಡೇಶ್ವರಿ ದೇವಿಯ ಮೂರ್ತಿ, ವಾದ್ಯವೃಂದ, ಸಾಂಸ್ಕೃತಿಕ ಕಲಾತಂಡಗಳು ಮತ್ತು ಲಕ್ಷಾಂತರ ಜನರ ಸಂಭ್ರಮ. ಆದರೆ ಈ ಎಲ್ಲ ವೈಭವದ ಮಧ್ಯೆ ಮೈಸೂರು ದಸರಾಕ್ಕೆ ಜೀವ ತುಂಬುವ ನಿಜವಾದ ನಾಯಕರು ಗಜಪಡೆಯ ಆನೆಗಳು. ಕಾಡಿನ ನಿಶ್ಶಬ್ದ ವಾತಾವರಣದಲ್ಲಿ ಬದುಕುವ ಈ ಆನೆಗಳು ಕೆಲವು ವಾರಗಳ ಕಾಲ ಅರಮನೆಯ ಆವರಣದಲ್ಲಿ ಸಾವಿರಾರು ಜನರ ನಡುವೆ ಬದುಕುತ್ತವೆ. ಪ್ರತಿದಿನ ತಾಲೀಮು ಪಡೆಯುತ್ತವೆ, ವಿಶೇಷ ಆಹಾರ ಸೇವಿಸುತ್ತವೆ, ಪಟಾಕಿ–ವಾದ್ಯಗಳ ಸದ್ದುಗಳಿಗೆ ಒಗ್ಗಿಕೊಳ್ಳುತ್ತವೆ ಮತ್ತು ಕೊನೆಗೆ ವಿಜಯದಶಮಿಯಂದು ಹಲವು ಟನ್‌ಗಳಷ್ಟು ಅಲಂಕಾರ, ಜನಸಂದಣಿ ಹಾಗೂ ಭದ್ರತಾ ವ್ಯವಸ್ಥೆಗಳ ಮಧ್ಯೆ ರಾಜಮಾರ್ಗದಲ್ಲಿ ಹೆಜ್ಜೆ ಹಾಕುತ್ತವೆ.

Image

ಆದರೆ ದಸರಾ ಮುಗಿದ ಕೂಡಲೇ ಅವುಗಳ ಜೀವನ ಮತ್ತೆ ಬದಲಾಗುತ್ತದೆ. ಅರಮನೆಯ ರಾಜವೈಭವವನ್ನು ಬಿಟ್ಟು ತಮ್ಮ ತಮ್ಮ ಅರಣ್ಯ ಆನೆ ಶಿಬಿರಗಳಿಗೆ ಮರಳಿ, ಮಾವುತ ಮತ್ತು ಕಾವಾಡಿಗಳೊಂದಿಗೆ ಸಾಮಾನ್ಯ ಶಿಬಿರ ಜೀವನಕ್ಕೆ ಹಿಂದಿರುಗುತ್ತವೆ. 2026ರ ದಸರಾ ಸಂದರ್ಭದಲ್ಲಿ ಈ ಸಂಪೂರ್ಣ ಪ್ರಕ್ರಿಯೆ ಮತ್ತಷ್ಟು ಕುತೂಹಲಕಾರಿ. ಏಕೆಂದರೆ ಕಳೆದ ಆರು ವರ್ಷಗಳಿಂದ ಚಿನ್ನದ ಅಂಬಾರಿ ಹೊತ್ತಿದ್ದ ಅಭಿಮನ್ಯುಗೆ ನಿವೃತ್ತಿ ನೀಡಲಾಗಿದ್ದು, ಹೊಸ ಅಂಬಾರಿ ಆನೆಯ ಆಯ್ಕೆ ನಡೆಯುತ್ತಿದೆ.

ದಸರಾ ಆನೆಗಳನ್ನು ಎಲ್ಲಿಂದ ಆಯ್ಕೆ ಮಾಡಲಾಗುತ್ತದೆ?

ದಸರಾ ಗಜಪಡೆಗೆ ಬೇಕಾದ ಆನೆಗಳನ್ನು ಸಾಮಾನ್ಯವಾಗಿ ಕರ್ನಾಟಕ ಅರಣ್ಯ ಇಲಾಖೆಯ ವಿವಿಧ ಆನೆ ಶಿಬಿರಗಳಿಂದ ಆಯ್ಕೆ ಮಾಡಲಾಗುತ್ತದೆ.

2026ರ ಅಧಿಕೃತ ಪಟ್ಟಿಯಲ್ಲಿ ಒಟ್ಟು 12 ಆನೆಗಳನ್ನು ಆಯ್ಕೆ ಮಾಡಲಾಗಿದೆ. ಅವುಗಳು ಬಳ್ಳೆ, ದುಬಾರೆ, ಭೀಮನಕಟ್ಟೆ, ಮತ್ತಿಗೋಡು, ದೊಡ್ಡಹರವೆ ಮತ್ತು ರಾಮಾಪುರ ಮುಂತಾದ ಶಿಬಿರಗಳಿಗೆ ಸೇರಿದವು.ಇವುಗಳಲ್ಲಿ

  • ದುಬಾರೆ: ಧನಂಜಯ, ಪ್ರಶಾಂತ, ಗೋಪಿ, ಶ್ರೀರಾಮ, ಕಾವೇರಿ, ಸುಗ್ರೀವ
  • ಬಳ್ಳೆ: ಮಹೇಂದ್ರ, ಲಕ್ಷ್ಮೀ
  • ಭೀಮನಕಟ್ಟೆ: ಏಕಲವ್ಯ
  • ಮತ್ತಿಗೋಡು: ಶ್ರೀಕಂಠ
  • ದೊಡ್ಡಹರವೆ: ರೂಪಾ
  • ರಾಮಾಪುರ: ಚೈತ್ರ.

ಮುಖ್ಯ ಶಿಬಿರಗಳಾಗಿವೆ. ಪ್ರತಿಯೊಂದು ಆನೆಯನ್ನೂ ಕೇವಲ ಅದರ ಗಾತ್ರ ಅಥವಾ ತೂಕದ ಆಧಾರದ ಮೇಲೆ ದಸರೆಗೆ ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ವಯಸ್ಸು, ದೈಹಿಕ ಸಾಮರ್ಥ್ಯ, ಸ್ವಭಾವ, ಜನಸಂದಣಿಯಲ್ಲಿ ವರ್ತನೆ, ಶಬ್ದ ಮತ್ತು ಪಟಾಕಿಗಳಿಗೆ ಸ್ಪಂದನೆ, ತರಬೇತಿಗೆ ಹೊಂದಿಕೊಳ್ಳುವ ಗುಣ ಹಾಗೂ ಹಿಂದಿನ ದಸರಾ ಅನುಭವ ಮುಂತಾದ ಹಲವು ಅಂಶಗಳನ್ನು ಪರಿಗಣಿಸಲಾಗುತ್ತದೆ.

ಆನೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ಆರೋಗ್ಯ ತಪಾಸಣೆಗೆ ವಿಶೇಷ ಒತ್ತು ನೀಡಲಾಗುತ್ತದೆ. ಮತ್ತಿಗೋಡು, ದುಬಾರೆ ಮತ್ತು ರಾಮಾಪುರ ಸೇರಿದಂತೆ ವಿವಿಧ ಆನೆ ಶಿಬಿರಗಳಲ್ಲಿ ಪಶುವೈದ್ಯ ತಜ್ಞರು ಆನೆಗಳನ್ನು ಪರಿಶೀಲಿಸಿ ಅವುಗಳ ರಕ್ತ ಮತ್ತು ಮಲದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ಮಾಡುವುದಲ್ಲದೇ, ಆನೆಗಳಿಗೆ ECG ಪರೀಕ್ಷೆ ಸಹಾ ನಡೆಸಲಾಗುತ್ತದೆ. ಹೆಣ್ಣಾನೆಗಳ ಗರ್ಭಧಾರಣೆಯನ್ನು ಪತ್ತೆಹಚ್ಚಲು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಕೂಡ ಮಾಡಿಸಿ, ವೈದ್ಯಕೀಯ ವರದಿಗಳು ಮತ್ತು ದೈಹಿಕ ಸಾಮರ್ಥ್ಯದ ಆಧಾರದ ಮೇಲೆ ಅಂತಿಮ ಆಯ್ಕೆ ಮಾಡಲಾಗುತ್ತದೆಯೇ ಹೊರತು, ಕೇವಲ ಪರಂಪರೆ ಅಥವಾ ಅನುಭವದ ಮೇಲೆ ಆಯ್ಕೆ ನಡೆಯುವುದಿಲ್ಲ

2026ರ ದಸರಾ ಮೆರವಣಿಗೆಗೆ ಆಯ್ಕೆಯಾಗಿರುವ ಗಜಪಡೆ

ಅರಣ್ಯ ಇಲಾಖೆಯು ಈ ಎಲ್ಲಾ ಪರೀಕ್ಷೆಗಳನ್ನು ನಡೆಸಿ ಅಧಿಕೃತವಾಗಿ 2026ರ ದಸರಾಗೆ 12 ಆನೆಗಳನ್ನು ಆಯ್ಕೆಮಾಡಿದ್ದು ಅವುಗಳೊಂದಿಗೆ ಸಂಬಂಧಿಸಿದ ಮಾವುತರು ಮತ್ತು ಕಾವಾಡಿಗಳೂ ಸಹಾ ದಸರಾ ಉತ್ಸವದ ಭಾಗವಾಗಿರುತ್ತಾರೆ

ಆನೆ ಶಿಬಿರ ವಯಸ್ಸು ತೂಕ
ಮಹೇಂದ್ರ ಬಳ್ಳೆ 42 4,764 ಕೆ.ಜಿ.
ಧನಂಜಯ ದುಬಾರೆ 45 5,280 ಕೆ.ಜಿ.
ಏಕಲವ್ಯ ಭೀಮನಕಟ್ಟೆ 41 5,800 ಕೆ.ಜಿ.
ಪ್ರಶಾಂತ ದುಬಾರೆ 54 5,100 ಕೆ.ಜಿ.
ಗೋಪಿ ದುಬಾರೆ 43 5,150 ಕೆ.ಜಿ.
ಶ್ರೀರಾಮ ದುಬಾರೆ 41 4,640 ಕೆ.ಜಿ.
ಶ್ರೀಕಂಠ ಮತ್ತಿಗೋಡು 57 5,860 ಕೆ.ಜಿ.
ಲಕ್ಷ್ಮೀ ಬಳ್ಳೆ 54 3,438 ಕೆ.ಜಿ.
ಕಾವೇರಿ ದುಬಾರೆ 46 3,060 ಕೆ.ಜಿ.
ರೂಪಾ ದೊಡ್ಡಹರವೆ 50 3,500 ಕೆ.ಜಿ.
ಸುಗ್ರೀವ ದುಬಾರೆ 44 5,800 ಕೆ.ಜಿ.
ಚೈತ್ರ ರಾಮಾಪುರ 55 2,988 ಕೆ.ಜಿ.

ಎಲ್ಲಾ ಆನೆಗಳೂ ಅಂಬಾರಿ ಹೊರುವುದಿಲ್ಲಾ!

ಇದು ಬಹಳ ಆಸಕ್ತಿದಾಯಕ ಸಂಗತಿ. ದಸರಾ ಗಜಪಡೆಯಲ್ಲಿರುವ ಪ್ರತಿಯೊಂದು ಆನೆಯೂ ಅಂಬಾರಿ ಹೊರುವುದಕ್ಕಾಗಿಯೇ ಇರುವುದಿಲ್ಲ. ಅವುಗಳಿಗೆ ವಿಭಿನ್ನ ಜವಾಬ್ದಾರಿಗಳಿರುತ್ತವೆ.

  • ಅಂಬಾರಿ ಆನೆ : ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಹೊರುವ ಆನೆ.
  • ನಿಶಾನೆ ಆನೆ : ಮೆರವಣಿಗೆಯಲ್ಲಿ ಧ್ವಜ ಅಥವಾ ನಿಶಾನೆಯೊಂದಿಗೆ ಪ್ರಮುಖ ಸ್ಥಾನದಲ್ಲಿ ಸಾಗುವ ಆನೆ.
  • ಪಟ್ಟದ ಆನೆ : ಅರಮನೆಯ ಸಾಂಪ್ರದಾಯಿಕ ಹಾಗೂ ಧಾರ್ಮಿಕ ವಿಧಿವಿಧಾನಗಳಲ್ಲಿ ಪ್ರಮುಖ ಪಾತ್ರ ವಹಿಸುವ ಆನೆ.
  • ಕುಮ್ಕಿ : ಇತರ ಆನೆಗಳಿಗೆ ಬೆಂಬಲ ನೀಡುವ, ನಿಯಂತ್ರಣ ಮತ್ತು ಭದ್ರತಾ ಕಾರ್ಯಗಳಲ್ಲಿ ಅನುಭವ ಹೊಂದಿರುವ ಆನೆ.

2026ರಲ್ಲಿ ಶ್ರೀಕಂಠನನ್ನು ಪಟ್ಟದ ಆನೆಯಾಗಿ ಮತ್ತು ಏಕಲವ್ಯನನ್ನು ಪಟ್ಟದ ನಿಶಾನೆ ಆನೆಯಾಗಿ ಆಯ್ಕೆ ಮಾಡಲಾಗಿದೆ. ಆದರೆ ಇವೆರಡರ ಆಯ್ಕೆಯು ಚಿನ್ನದ ಅಂಬಾರಿ ಹೊರುವ ಆನೆಯ ಆಯ್ಕೆಯಿಂದ ಪ್ರತ್ಯೇಕ ಪ್ರಕ್ರಿಯೆ.

ಈ ಬಾರಿಯ ಅಂಬಾರಿ ಹೊರುವವರು ಯಾರು?

2020ರಿಂದ 2025ರವರೆಗೆ ಸತತವಾಗಿ ಆರು ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಅಭಿಮನ್ಯುಗೆ 60 ವರ್ಷ ವಯಸ್ಸಾದ ಹಿನ್ನೆಲೆಯಲ್ಲಿ ಈ ಬಾರಿ ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತಿ ನೀಡಲಾಗಿದೆ. ಆದರೆ ಅವರ ಸೇವೆಯನ್ನು ಗೌರವಿಸಿ 2026ರ ದಸರಾದಲ್ಲಿ ನಿಶಾನೆ ಆನೆಯಾಗಿ ಭಾಗವಹಿಸಲು ಅವಕಾಶ ನೀಡಲಾಗಿದೆ.  ಹೊಸ ಅಂಬಾರಿ ಆನೆಗಾಗಿ ಮೊದಲ ಹಂತದಲ್ಲಿ ಧನಂಜಯ, ಮಹೇಂದ್ರ, ಪ್ರಶಾಂತ, ಏಕಲವ್ಯ ಮತ್ತು ಸುಗ್ರೀವ ಸೇರಿದಂತೆ ಅನುಭವಿ ಆನೆಗಳನ್ನು ಪರಿಗಣಿಸಲಾಗಿತ್ತು. ನಂತರದ ತಾಲೀಮುಗಳಲ್ಲಿ ಸ್ಪರ್ಧೆ ಮುಖ್ಯವಾಗಿ ಕೆಲವು ಆನೆಗಳ ನಡುವೆ ಸೀಮಿತಗೊಂಡಿತು ಆದರೆ ಇತ್ತೀಚಿನ ವರದಿಗಳ ಪ್ರಕಾರ ಧನಂಜಯ ಮುಂಚೂಣಿಯಲ್ಲಿದ್ದು, ಅಂತಿಮ ನಿರ್ಧಾರವನ್ನು ಅರಣ್ಯ ಇಲಾಖೆ/ಸರ್ಕಾರ ಅಧಿಕೃತವಾಗಿ ಪ್ರಕಟಿಸಬೇಕಿದೆ.

2013ರಲ್ಲಿ ಹಾಸನ ಜಿಲ್ಲೆಯ ಯಸಳೂರಿನಲ್ಲಿ ಸೆರೆಹಿಡಿಯಲ್ಪಟ್ಟ, ದುಬಾರೆ ಆನೆ ಶಿಬಿರದ 45 ವರ್ಷದ ಸುಮಾರು 5,280 ಕೆ.ಜಿ ತೂಕದ  ಗಂಡಾನೆ   ಧನಂಜಯ, ಈಗಾಗಲೇ ಹಲವು ದಸರಾಗಳ ಅನುಭವ ಹೊಂದಿದೆ. ಕಳೆದ ವರ್ಷ ನಿಶಾನೆ ಆನೆಯಾಗಿ ಸೇವೆ ಸಲ್ಲಿಸಿತ್ತು. ಇದರ ಅನುಭವವೇ ದೊಡ್ಡ ಬಲ. ಅಂಬಾರಿ ಆನೆಯಾಗಿ ಆಯ್ಕೆಯಾಗಲು ಕೇವಲ ದೈಹಿಕ ಬಲ ಸಾಕಾಗುವುದಿಲ್ಲ. ಅರಮನೆಯ ವಾತಾವರಣ, ಜನಸಂದಣಿ, ವಾದ್ಯಗಳ ಸದ್ದು, ಪಟಾಕಿ, ಮೆರವಣಿಗೆ, ದೀರ್ಘ ನಡಿಗೆ ಮತ್ತು ಅಂಬಾರಿಯ ಭಾರ—ಇವೆಲ್ಲವನ್ನೂ ಒಂದೇ ಸಮಯದಲ್ಲಿ ಎದುರಿಸುವ ಮಾನಸಿಕ ಸ್ಥಿರತೆ ಬೇಕಾಗುತ್ತದೆ.

ಅಂಬಾರಿ ಹೊರುವ ಆನೆಯನ್ನು ಹೇಗೆ ಆಯ್ಕೆ ಮಾಡುತ್ತಾರೆ?

ಇದು ಅತ್ಯಂತ ಕಠಿಣ ಪ್ರಕ್ರಿಯೆ. ಅಧಿಕೃತ ದಸರಾ ಮಾಹಿತಿಯ ಪ್ರಕಾರ ಅಂಬಾರಿ ಆನೆಗೆ:

  • ಸ್ಥಿರ ಸ್ವಭಾವ ಜನಸಂದಣಿಯಲ್ಲೂ ಆತಂಕಗೊಳ್ಳಬಾರದು.
  • ಅಗಲವಾದ, ಸಮತಟ್ಟಾದ ಬೆನ್ನು ಅಂಬಾರಿಯನ್ನು ಸುರಕ್ಷಿತವಾಗಿ ಹೊರುವಂತಿರಬೇಕು.
  • ಪಟಾಕಿ ಮತ್ತು ಭಾರೀ ಶಬ್ದಗಳಿಗೆ ಶಾಂತ ಪ್ರತಿಕ್ರಿಯೆ ಮೆರವಣಿಗೆಯಲ್ಲಿ ಸಿಡಿಮದ್ದು, ಬ್ಯಾಂಡ್, ಜನರ ಕೂಗು ಇರುತ್ತದೆ.
  • ದೈಹಿಕ ಸಾಮರ್ಥ್ಯ ಚಿನ್ನದ ಅಂಬಾರಿ ಸುಮಾರು 750 ಕೆ.ಜಿ. ತೂಕ ಹೊಂದಿದೆ.
  • ದೀರ್ಘ ನಡಿಗೆ ಸುಮಾರು ಐದು ಕಿಲೋಮೀಟರ್‌ಗಳಷ್ಟು ಮೆರವಣಿಗೆ ಮಾರ್ಗದಲ್ಲಿ ಸಮತೋಲನದಿಂದ ಸಾಗಬೇಕಾಗುತ್ತದೆ.
  • ಹಿಂದಿನ ಅನುಭವ ದಸರಾ ಮೆರವಣಿಗೆಯ ವಾತಾವರಣಕ್ಕೆ ಈಗಾಗಲೇ ಪರಿಚಿತವಾಗಿರುವುದು ದೊಡ್ಡ ಅನುಕೂಲ.

ಈ ಎಲ್ಲಾ ಮಾನದಂಡಗಳನ್ನು ಪರಿಗಣಿಸಿ ತರಬೇತಿ ಅವಧಿಯ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.

ಅಂಬಾರಿ ತರಬೇತಿ ಹೇಗೆ ನಡೆಯುತ್ತದೆ?

ಆನೆಯನ್ನು ನೇರವಾಗಿ 750 ಕೆ.ಜಿ. ಅಂಬಾರಿ ಮೇಲೆ ನಿಲ್ಲಿಸುವುದಿಲ್ಲ. ಮೊದಲು ಕಡಿಮೆ ತೂಕದಿಂದ ಪ್ರಾರಂಭಿಸಲಾಗುತ್ತದೆ. ನಂತರ, ಮರಳು ಚೀಲ → ಮರದ ಅಂಬಾರಿ → ಹೆಚ್ಚುವರಿ ತೂಕ → ಮೆರವಣಿಗೆ ಮಾರ್ಗದ ಅಭ್ಯಾಸ → ಪಟಾಕಿ ತಾಲೀಮು → ಜನಸಂದಣಿ ಮತ್ತು ವಾದ್ಯಗಳ ನಡುವೆ ಅಭ್ಯಾಸ ಎಂಬ ರೀತಿಯಲ್ಲಿ ಹಂತ ಹಂತವಾಗಿ ಆನೆಯ ಸುರಕ್ಷತೆಯನ್ನು ಗಮನಿಸಿ ತರಬೇತಿ ನೀಡಲಾಗುತ್ತದೆ. ದಸರಾ ವೈಭವಕ್ಕಿಂತ ಆನೆಯ ಸುರಕ್ಷತೆ ಮೊದಲು.

ದಸರಾ ಆನೆಗಳ  ಆಹಾರ ಹೇಗಿರುತ್ತದೆ?

ಅರಮನೆಗೆ ಬಂದ ನಂತರ ಆನೆಗಳ ದೈನಂದಿನ ಆಹಾರ ಕ್ರಮ ಬದಲಾಗುತ್ತದೆ.  ಆನೆಗಳಿಗೆ ಅಕ್ಕಿ, ರಾಗಿ, ಬೆಲ್ಲ, ತೆಂಗಿನಕಾಯಿ, ಹುರುಳಿ ಮತ್ತು ಹಸಿರು ಮೇವು ಒಳಗೊಂಡ ಹೆಚ್ಚಿನ ಕ್ಯಾಲೊರಿ ಹಾಗೂ ಪ್ರೋಟೀನ್‌ಯುಕ್ತ ಆಹಾರ ನೀಡಲಾಗುತ್ತದೆ.  ಇದರ ಉದ್ದೇಶ ಕೇವಲ ದೇಹದ ತೂಕ ಹೆಚ್ಚಿಸುವುದಲ್ಲ. ಬದಲಾಗಿ ಮೆರವಣಿಗೆಯಲ್ಲಿ,

  • ದೀರ್ಘಕಾಲ ನಡೆಯಬೇಕು
  • ಅಂಬಾರಿ ಹೊತ್ತು ಸಾಗಬೇಕು
  • ನಿರಂತರ ಶಬ್ದ ಎದುರಿಸಬೇಕು
  • ಜನಸಂದಣಿಯ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು
  • ಹಲವು ಗಂಟೆಗಳ ಕಾಲ ಸಕ್ರಿಯವಾಗಿರಬೇಕು

ಆದ್ದರಿಂದ ದಸರಾ ಸಮಯದಲ್ಲಿ ಆನೆಗಳ ಆಹಾರವೇ ಒಂದು ರೀತಿಯ ಕ್ರೀಡಾಪಟುವಿನ ‘ಪ್ರೀ-ಕಾಂಪಿಟಿಷನ್ ಡಯಟ್’ನಂತಿರುತ್ತದೆ.

ಪ್ರತಿದಿನ ನಗರದಲ್ಲಿ ತಾಲೀಮು

ಆನೆಗಳನ್ನು ಕೇವಲ ಅರಮನೆಯೊಳಗೆ ನಿಲ್ಲಿಸಿ ತರಬೇತಿ ನೀಡುವುದಿಲ್ಲ. ಅವುಗಳನ್ನು ಪ್ರತೀದಿನ ಬೆಳಗ್ಗೆ ಮೆರವಣಿಗೆ ನಡೆಯುವ ಮಾರ್ಗದಲ್ಲಿ ಅಂಬಾರಿಯಂತೆಯೇ ನಡೆಸಿ ಅಭ್ಯಾಸ ಮಾಡಿಸುವ ಮೂಲಕ ವಿಜಯದಶಮಿಯ ದಸರಾ ಮೆರವಣಿಗೆಯಂದು, ಲಕ್ಷಾಂತರ ಜನ ಸಂದಣಿ, ವಾಹನ ಸಂಚಾರ, ಬ್ಯಾಂಡ್‌ಗಳ ಶಬ್ದ, ಜನರ ಘೋಷಣೆಗಳು, ಪೊಲೀಸ್ ವ್ಯವಸ್ಥೆ, ಕ್ಯಾಮೆರಾಗಳು, ಬೆಳಕು ಪಟಾಕಿ, ಅಲಂಕಾರ ಇವೆಲ್ಲವುಗಳಿಗೂ ಆನೆಗಳು ಒಗ್ಗಿಕೊಳ್ಳುವಂತೆ ಮಾಡಲಾಗುತ್ತದೆ

ಆನೆಗಳಷ್ಟೇ ಅಲ್ಲದೇ ಅದರ ಮಾವುತರೂ ದೈಹಿಕ ಮತ್ತು ಮಾನಸಿಕವಾಗಿ ಸಿದ್ಧರಾಗುತ್ತಾರೆ

Imageಮಾವುತ ಎಂದರೆ ಕೇವಲ ಆನೆಯ ಮೇಲೆ ಕುಳಿತು ಅದನ್ನು ನಿಯಂತ್ರಿಸುವ ವ್ಯಕ್ತಿಯಲ್ಲ. ಅವನಿಗೆ ಆನೆಯ ಆಹಾರ ಪದ್ದತಿ, ಸ್ನಾನ, ಆರೋಗ್ಯ, ಮನಸ್ಥಿತಿ, ನಡವಳಿಕೆ, ಚಲನವಲನ, ದೈಹಿಕ ಸ್ಥಿತಿ, ತರಬೇತಿ ಎಲ್ಲದರ ಮೇಲೂ ಗಮನ ಇರಬೇಕು.

ಆನೆಗೆ ಏನು ಇಷ್ಟ? ಯಾವ ಶಬ್ದಕ್ಕೆ ಅದು ಹೆದರುತ್ತದೆ? ಯಾವ ಸಂದರ್ಭದಲ್ಲಿ ಅದು ಕೋಪಗೊಳ್ಳಬಹುದು? ಅದು ಯಾವಾಗ ವಿಶ್ರಾಂತಿ ಬಯಸುತ್ತದೆ? ಇವೆಲ್ಲವನ್ನು ಮಾವುತ ತನ್ನ ಆನೆಗಳ ದೇಹಭಾಷೆಯಿಂದಲೇ ಅರ್ಥಮಾಡಿಕೊಳ್ಳಬೇಕು. ಹೀಗಾಗಿಯೇ ಮಾವುತ ಮತ್ತು ಆನೆಯ ಸಂಬಂಧ ಕೇವಲ ಕೆಲಸದ ಸಂಬಂಧವಲ್ಲ. ದೀರ್ಘಕಾಲದ ನಂಬಿಕೆ ಮತ್ತು ಒಡನಾಟದ ಸಂಬಂಧ. ಆನೆಗಳಿಗೂ ಮಾವುತನ ನದುವೆ ಭಾಷೆ ಮತ್ತು ಸಂಜ್ಞೆಗಳ ಮೂಲಕ ನಿರಂತವಾಗಿ ಸಂಭಾಷಣೆ ನಡೆಯುತ್ತಲೇ ಇರುತ್ತದೆ ಮತ್ತು ಅವರಿಬ್ಬರ ನಡುವೆ ಒಂದು ಸುಮಧುರ ಸಂಬಂಧ ಏರ್ಪಟ್ಟಿರುತ್ತದೆ. ಹಾಗಾಗಿಯೇ ಒಂದು ಪಳಗಿದ ಆನೆಯನ್ನು ಮತ್ತೊಬ್ಬ ಮಾವುತ ನಿಭಾಯಿಸಲಾಗದು.

ಹಾಗಾದರೆ ಕಾವಾಡಿ ಯಾರು?

Image

ಮಾವುತನಿಗೆ ನೆರವಾಗುವ ವ್ಯಕ್ತಿಯೇ ಕಾವಾಡಿ. ಸರಳವಾಗಿ ಹೇಳುವುದಾದರೆ, ಕಾವಾಡಿ = ಸಹಾಯಕ ಪಾಲಕ. ಆನೆಯ ಆಹಾರ, ಸ್ವಚ್ಛತೆ, ಸ್ನಾನ, ಸ್ಥಳಾಂತರ, ತಾಲೀಮು ಮತ್ತು ದೈನಂದಿನ ಆರೈಕೆಯಲ್ಲಿ ಕಾವಾಡಿ ಪ್ರಮುಖ ಪಾತ್ರ ವಹಿಸುತ್ತಾನೆ. ಒಂದು ದೊಡ್ಡ ದಸರಾ ಆನೆಯ ಹಿಂದೆ ಕೇವಲ ಒಬ್ಬ ವ್ಯಕ್ತಿ ಇರುವುದಿಲ್ಲ. ಮಾವುತ,  ಕಾವಾಡಿ,  ಪಶುವೈದ್ಯರು,  ಅರಣ್ಯ ಇಲಾಖೆ ಸಿಬ್ಬಂದಿ,  ಇತರ ಸಹಾಯಕರು ಸೇರಿ ಒಂದು ತಂಡವಾಗಿ ಕೆಲಸ ಮಾಡುತ್ತಾರೆ. ಆನೆಗಳು ಮೈಸೂರಿಗೆ ಬಂದಾಗ ಮಾವುತರು ಮತ್ತು ಕಾವಾಡಿಗಳು ಮಾತ್ರ ಬರುವುದಿಲ್ಲ. ಅವರ ಕುಟುಂಬಗಳೂ ಕೆಲವು ಸಂದರ್ಭಗಳಲ್ಲಿ ಮೈಸೂರಿನಲ್ಲಿ ನೆಲೆಸುತ್ತವೆ. ಅರಮನೆ ಆವರಣದಲ್ಲಿ ಆನೆಗಳಿಗಾಗಿ ತಾತ್ಕಾಲಿಕ ಶೆಡ್‌ಗಳು ಮತ್ತು ಮಾವುತ–ಕಾವಾಡಿ ಕುಟುಂಬಗಳಿಗಾಗಿ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಲಾಗುತ್ತದೆ.

ಕಾವಾಡಿಗಳ ದಿನಚರಿ ಹೇಗಿರುತ್ತದೆ?

Imageಮಾವುತ ರು ಮತ್ತು ಕಾವಾಡಿಗಳ ದಿನಚರಿ ಬಹಳ ಕುತೂಹಲಕಾರಿ ಬೆಳಗ್ಗೆ ಬೇಗ ಎದ್ದು, ಆನೆಗಳನ್ನು ಸ್ವಚ್ಛಗೊಳಿಸಿ, ಸ್ನಾನ ಮಾಡಿಸಿ, ಆನೆಗಳಿಗೆ ಆಹಾರ ನೀಡುವುದು, ಕಾಲ ಕಾಲಕ್ಕೆ ಕಾಲು ಮತ್ತು ಉಗುರುಗಳನ್ನು ಪರಿಶೀಲಿಸುವುದು, ಆನೆಯ ದೇಹವನ್ನು ಒರೆಸಿ, ಅವುಗಳನ್ನು ತಾಲೀಮಿಗೆ ಸಿದ್ಧಪಡಿಸುವುದು ಆವರ ನಿಯಮಿತ ಕೆಲಸವಾಗಿರುತ್ತದೆ.

Image

ಮಾವುತರು ಮತ್ತು ಕಾವಾಡಿಗಳ ಪತ್ನಿಯರು ಮನೆಯ ಅಡುಗೆ, ಮಕ್ಕಳ ಆರೈಕೆ ಮತ್ತು ಕುಟುಂಬದ ದೈನಂದಿನ ಅಗತ್ಯಗಳನ್ನು ನೋಡಿಕೊಳ್ಳುತ್ತಾರೆ.  ಅವರ ಕುಟುಂಬಗಳು ಕಾಡಿನ ಜೀವನಕ್ಕೆ ಹೆಚ್ಚು ಒಗ್ಗಿಕೊಂಡಿದ್ದು, ಮೈಸೂರಿನ ನಗರ ಜೀವನದ ಗದ್ದಲ ಅವರಿಗೆ ಕೆಲವೊಮ್ಮೆ ಅಸೌಕರ್ಯ ಉಂಟುಮಾಡುತ್ತದೆ ಎಂದು ವಿವರಿಸಲಾಗಿದೆ.  ಮಾವುತ ಕಾವಾಡಿಗಳ ಮಕ್ಕಳು ದಸರಾ ಸಮಯದಲ್ಲಿ ಮೈಸೂರಿನಲ್ಲಿ ಉಳಿಯುವ ಸಂದರ್ಭಗಳಲ್ಲಿ ಅವರಿಗೂ ವಿಶೇಷ ವ್ಯವಸ್ಥೆ ಮಾಡಲಾಗುತ್ತದೆ. ಮಕ್ಕಳಿಗಾಗಿ ಟೆಂಟ್ ಶಾಲೆ ನಡೆಸಲಾಗುತ್ತಿತ್ತು  ಒಂದೆಡೆ ತಂದೆ ಆನೆಯ ಆರೈಕೆಯಲ್ಲಿ ನಿರತರಾಗಿದ್ದರೆ, ಮತ್ತೊಂದೆಡೆ ಮಕ್ಕಳು ತಮ್ಮ ಶಿಕ್ಷಣ ಮುಂದುವರಿಸುತ್ತಾರೆ. ಹೀಗಾಗಿ ದಸರಾ ಸಮಯದಲ್ಲಿ ಒಂದು ಚಿಕ್ಕ “ಅರಣ್ಯ ಕುಟುಂಬ–ನಗರ ಜೀವನ” ಎಂಬ ವಿಶಿಷ್ಟ ಜಗತ್ತು ಅರಮನೆಯ ಸುತ್ತ ರೂಪುಗೊಳ್ಳುತ್ತದೆ.

ದಸರಾ ಮುಗಿದ ಮೇಲೆ ಏನಾಗುತ್ತದೆ?

Imageವಿಜಯದಶಮಿಯ ಜಂಬೂಸವಾರಿ ಮುಗಿದರೆ ಆನೆಗಳ ಕೆಲಸ ಮುಗಿದಂತಲ್ಲ. ಕೆಲವು ದಿನಗಳ ನಂತರ ಅವುಗಳಿಗೆ ವಿದಾಯ ಪೂಜೆ ನಡೆಯುತ್ತದೆ. ನಂತರ ಅವು ಮತ್ತೆ ತಮ್ಮ ತಮ್ಮ ಶಿಬಿರಗಳಿಗೆ ಮರಳುತ್ತವೆ. 2026ರ ಅಧಿಕೃತ ವೇಳಾಪಟ್ಟಿಯ ಪ್ರಕಾರ ಅಕ್ಟೋಬರ್ 22ರಂದು ಬೆಳಿಗ್ಗೆ 10:45ಕ್ಕೆ ಮೈಸೂರು ಅರಮನೆಯಿಂದ ವೀರನಹೊಸಹಳ್ಳಿಯತ್ತ ಆನೆಗಳ ಮರುಪಯಣ ನಿಗದಿಯಾಗಿದೆ. ಅಂದರೆ ಸುಮಾರು ಎರಡು ತಿಂಗಳ ಕಾಲ ಮೈಸೂರಿನಲ್ಲಿ ನಡೆದ ವಿಶೇಷ ಅಧ್ಯಾಯ ಮತ್ತೆ ಕಾಡಿನ ಶಿಬಿರದಲ್ಲಿ ಮುಂದುವರಿಯುತ್ತದೆ.

ದಸರಾ ಇಲ್ಲದ ಸಮಯದಲ್ಲಿ ಆನೆಗಳು ಎಲ್ಲಿರುತ್ತವೆ? ದಿನಚರಿ ಮತ್ತು ಹೇಗಿರುತ್ತದೆ?

Imageದಸರಾ ಆನೆಗಳು ವರ್ಷಪೂರ್ತಿ ಮೈಸೂರು ಅರಮನೆಯಲ್ಲಿ ಇರುವುದಿಲ್ಲ. ಅವುಗಳ ಮೂಲ ಆನೆ ಶಿಬಿರಗಳಾದ ದುಬಾರೆ, ಮತ್ತಿಗೋಡು, ಬಳ್ಳೆ, ಭೀಮನಕಟ್ಟೆ, ದೊಡ್ಡಹರವೆ ಮತ್ತು ರಾಮಾಪುರ ಮರಳುತ್ತವೆ. ಅಲ್ಲಿ ಅವುಗಳ ದೈನಂದಿನ ಜೀವನ ಮತ್ತೆ ಅರಣ್ಯ ಶಿಬಿರದ ನಿಯಮಿತ ಚಟುವಟಿಕೆಗಳಿಗೆ ಮರಳುತ್ತದೆ.

ದಸರಾ ಇಲ್ಲದ ಸಮಯದಲ್ಲಿ ಆನೆಗಳ ಜೀವನವೂ ವಿಶ್ರಾಂತಿಯ ಜೀವನವಲ್ಲ. ಅವುಗಳನ್ನು:

  • ಆಹಾರ ನೀಡುವುದು
  • ಸ್ನಾನ ಮಾಡಿಸುವುದು
  • ಆರೋಗ್ಯ ತಪಾಸಣೆ
  • ನಿಯಮಿತ ನಡಿಗೆ
  • ತರಬೇತಿ
  • ದೈಹಿಕ ಆರೈಕೆ
  • ಅಗತ್ಯವಿದ್ದಾಗ ಕಾರ್ಯಾಚರಣೆಗಳಲ್ಲಿ ಬಳಸುವುದು

ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಲಾಗುತ್ತದೆ.

ಉದಾಹರಣೆಗೆ ದುಬಾರೆ ಆನೆ ಶಿಬಿರದಲ್ಲಿಯೂ ಆನೆಗಳಿಗೆ ಆಹಾರದಲ್ಲಿ ರಾಗಿ, ಬೆಲ್ಲ, ಕಬ್ಬು, ಬಾಳೆಹಣ್ಣು ಮತ್ತು ತೆಂಗಿನಕಾಯಿ ಮುಂತಾದವುಗಳನ್ನು ನೀಡಲಾಗುತ್ತದೆ.  ಅಂದರೆ ದಸರಾ ಸಮಯದಲ್ಲಿ ಮಾತ್ರವಲ್ಲದೆ ವರ್ಷಪೂರ್ತಿ ಆನೆಗಳ ಆರೈಕೆ ಒಂದು ನಿರಂತರ ಜವಾಬ್ದಾರಿ.

ದಸರಾ ಮುಗಿದ ಮೇಲೆ ಮಾವುತ–ಕಾವಾಡಿಗಳ ಜೀವನವೂ ಬದಲಾಗುತ್ತದೆ

ಮೈಸೂರಿನಲ್ಲಿ ತಾತ್ಕಾಲಿಕವಾಗಿ ನೆಲೆಸಿದ್ದ ಕುಟುಂಬಗಳು ತಮ್ಮ ಶಿಬಿರಗಳಿಗೆ ಹಿಂದಿರುಗುತ್ತವೆ. ಅಲ್ಲಿ ಮತ್ತೆ, ಕಾಡು → ಆನೆ → ಕುಟುಂಬ → ಶಿಬಿರ ಎಂಬ ಸಾಮಾನ್ಯ ಜೀವನ ಆರಂಭವಾಗುತ್ತದೆ. ದಸರಾ ಸಮಯದಲ್ಲಿ ಅವರಿಗೆ ದೊರೆಯುವ ನಗರ ಜೀವನ, ಜನರ ಗಮನ, ಗೌರವ, ಉತ್ಸವದ ವಾತಾವರಣ ಮುಗಿಯುತ್ತದೆ. ಮತ್ತೆ ಅವರ ಬದುಕಿನ ಕೇಂದ್ರಬಿಂದು ಆನೆ ಮತ್ತು ಅರಣ್ಯ.  ದಸರಾ ಮುಗಿದ ನಂತರ ಆನೆಗಳು ಮತ್ತು ಅವುಗಳ ಪಾಲಕರು ಶಿಬಿರಗಳಿಗೆ ಮರಳಿದ ಸಂದರ್ಭದಲ್ಲಿ ಕುಟುಂಬ ಸದಸ್ಯರು ಭಾವುಕರಾಗಿ ವಿದಾಯ ಹೇಳುವ ಸಂದರ್ಭಗಳೂ ಇವೆ.

ಅಭಿಮನ್ಯುವಿನ ನಿವೃತ್ತಿ — ಒಂದು ಯುಗದ ಅಂತ್ಯ

2020ರಿಂದ 2025ರವರೆಗೆ ಸತತವಾಗಿ ಆರು ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಅಭಿಮನ್ಯು ಈ ಬಾರಿ ಆ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾನೆ. 60 ವರ್ಷ ವಯಸ್ಸಿನ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.  ಆದರೆ ಅಭಿಮನ್ಯುವಿನ ಸೇವೆಯನ್ನು ಸಂಪೂರ್ಣವಾಗಿ ಮರೆಯಲಾಗಿಲ್ಲ. ಅವನಿಗೆ ನಿಶಾನೆ ಆನೆಯಾಗಿ ಗೌರವಪೂರ್ವಕ ವಿದಾಯ ನೀಡಲಾಗುತ್ತಿದೆ.  ಅರ್ಜುನ, ಬಲರಾಮ, ಅಭಿಮನ್ಯು ಮುಂತಾದ ಆನೆಗಳು ಮೈಸೂರು ದಸರಾದ ಇತಿಹಾಸದಲ್ಲಿ ತಮ್ಮದೇ ಅಧ್ಯಾಯ ಬರೆದಿವೆ. ಈಗ ಆ ಪರಂಪರೆಯನ್ನು ಮುಂದುವರಿಸುವ ಜವಾಬ್ದಾರಿ ಹೊಸ ಪೀಳಿಗೆಯ ಗಜರಾಜರ ಮೇಲಿದೆ.

ದಸರಾ ಆನೆಗಳನ್ನು ನೋಡಿದಾಗ ನಾವು ನೆನಪಿಡಬೇಕಾದದ್ದು

Imageಜಂಬೂಸವಾರಿಯಲ್ಲಿ ಅಲಂಕರಿಸಿಕೊಂಡು ಸಾಗುವ ಆನೆಯನ್ನು ನೋಡಿ ನಾವು ಆಶ್ಚರ್ಯಪಡುತ್ತೇವೆ. ಆದರೆ ಅದರ ಹಿಂದೆ ಇರುವ ಆರು ವಾರಗಳ ಸಿದ್ಧತೆ, ಆಹಾರ, ತಾಲೀಮು, ವೈದ್ಯಕೀಯ ಪರೀಕ್ಷೆ, ಮಾವುತ–ಕಾವಾಡಿಗಳ ಶ್ರಮ ಮತ್ತು ಕುಟುಂಬಗಳ ತಾತ್ಕಾಲಿಕ ಜೀವನವನ್ನು ನೆನಪಿಸಿಕೊಂಡಾಗ ಮಾತ್ರ ದಸರಾ ಗಜಪಡೆಯ ನಿಜವಾದ ಕಥೆ ಅರ್ಥವಾಗುತ್ತದೆ.

ಅವುಗಳನ್ನು ನಾವು ಕೇವಲ ದಸರಾ ಆನೆಗಳು ಎಂದು ಕರೆಯುತ್ತೇವೆ. ಆದರೆ ಅವುಗಳ ಪಾಲಕರಿಗೆ ಅವು ಕುಟುಂಬದ ಸದಸ್ಯರಂತೆ. ಒಂದು ಆನೆಯೊಂದಿಗೆ ವರ್ಷಗಳ ಕಾಲ ಬದುಕಿದ ಮಾವುತನಿಗೆ ಆನೆಯ ಹೆಜ್ಜೆಯ ಶಬ್ದವೇ ಅದರ ಆರೋಗ್ಯದ ಸೂಚನೆ. ಆನೆಯ ಕಣ್ಣಿನ ನೋಟವೇ ಅದರ ಮನಸ್ಥಿತಿಯ ಸಂಕೇತ. ಆನೆಯ ಆಹಾರ ಸೇವನೆಯಲ್ಲಿನ ಸಣ್ಣ ಬದಲಾವಣೆಯೂ ಮಾವುತನಿಗೆ ಎಚ್ಚರಿಕೆಯ ಗಂಟೆ. ಅಂತಹ ನಂಬಿಕೆ, ಪ್ರೀತಿ ಮತ್ತು ಪರಸ್ಪರ ಅವಲಂಬನೆಯ ಸಂಬಂಧವೇ ಮೈಸೂರು ದಸರಾದ ಗಜಪಡೆಯ ನಿಜವಾದ ಶಕ್ತಿ.

ಕೊನೆಯ ಮಾತು

ಮೈಸೂರು ದಸರಾ ಜಂಬೂಸವಾರಿ ದಿನ ಅರಮನೆಯಿಂದ ಬನ್ನಿಮಂಟಪದವರೆಗೆ ಸಾಗುವ ಆನೆಗಳ ಸಾಲನ್ನು ನೋಡಿದಾಗ ನಮಗೆ ಕಾಣುವುದು ರಾಜವೈಭವ. ಆದರೆ ಆ ವೈಭವದ ಹಿಂದೆ ಒಂದು ಸಂಪೂರ್ಣ ಜಗತ್ತಿದೆ

ಕಾಡಿನಲ್ಲಿ ಆರಂಭವಾಗುವ ಜೀವನ, ಶಿಬಿರದಲ್ಲಿ ನಡೆಯುವ ತರಬೇತಿ, ಮಾವುತನ ಕೈಯಲ್ಲಿನ ಆರೈಕೆ, ಕಾವಾಡಿಯ ನೆರವು, ಕುಟುಂಬದ ತ್ಯಾಗ, ಅರಮನೆಯ ಆರು ವಾರಗಳ ಕಠಿಣ ತಾಲೀಮು, ವಿಜಯದಶಮಿಯ ಐತಿಹಾಸಿಕ ಜಂಬೂಸವಾರಿ, ಮತ್ತು ಕೊನೆಗೆ ಮತ್ತೆ ಕಾಡಿನತ್ತ ಮರಳುವ ಪಯಣ.  ಇದೇ  ಮೈಸೂರು ದಸರಾ ಗಜಪಡೆಯ ನಿಜವಾದ ಕಥೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ