ಮೈಸೂರು ದಸರಾ ಎಂದರೆ ಅರಮನೆಯ ವೈಭವ, ಜಂಬೂಸವಾರಿ, ಚಿನ್ನದ ಅಂಬಾರಿ, ಚಾಮುಂಡೇಶ್ವರಿ ದೇವಿಯ ಮೂರ್ತಿ, ವಾದ್ಯವೃಂದ, ಸಾಂಸ್ಕೃತಿಕ ಕಲಾತಂಡಗಳು ಮತ್ತು ಲಕ್ಷಾಂತರ ಜನರ ಸಂಭ್ರಮ. ಆದರೆ ಈ ಎಲ್ಲ ವೈಭವದ ಮಧ್ಯೆ ಮೈಸೂರು ದಸರಾಕ್ಕೆ ಜೀವ ತುಂಬುವ ನಿಜವಾದ ನಾಯಕರು ಗಜಪಡೆಯ ಆನೆಗಳು. ಕಾಡಿನ ನಿಶ್ಶಬ್ದ ವಾತಾವರಣದಲ್ಲಿ ಬದುಕುವ ಈ ಆನೆಗಳು ಕೆಲವು ವಾರಗಳ ಕಾಲ ಅರಮನೆಯ ಆವರಣದಲ್ಲಿ ಸಾವಿರಾರು ಜನರ ನಡುವೆ ಬದುಕುತ್ತವೆ. ಪ್ರತಿದಿನ ತಾಲೀಮು ಪಡೆಯುತ್ತವೆ, ವಿಶೇಷ ಆಹಾರ ಸೇವಿಸುತ್ತವೆ, ಪಟಾಕಿ–ವಾದ್ಯಗಳ ಸದ್ದುಗಳಿಗೆ ಒಗ್ಗಿಕೊಳ್ಳುತ್ತವೆ ಮತ್ತು ಕೊನೆಗೆ ವಿಜಯದಶಮಿಯಂದು ಹಲವು ಟನ್‌ಗಳಷ್ಟು ಅಲಂಕಾರ, ಜನಸಂದಣಿ ಹಾಗೂ ಭದ್ರತಾ ವ್ಯವಸ್ಥೆಗಳ ಮಧ್ಯೆ ರಾಜಮಾರ್ಗದಲ್ಲಿ ಹೆಜ್ಜೆ ಹಾಕುತ್ತವೆ.
ಆದರೆ ದಸರಾ ಮುಗಿದ ಕೂಡಲೇ ಅವುಗಳ ಜೀವನ ಮತ್ತೆ ಬದಲಾಗುತ್ತದೆ. ಅರಮನೆಯ ರಾಜವೈಭವವನ್ನು ಬಿಟ್ಟು ತಮ್ಮ ತಮ್ಮ ಅರಣ್ಯ ಆನೆ ಶಿಬಿರಗಳಿಗೆ ಮರಳಿ, ಮಾವುತ ಮತ್ತು ಕಾವಾಡಿಗಳೊಂದಿಗೆ ಸಾಮಾನ್ಯ ಶಿಬಿರ ಜೀವನಕ್ಕೆ ಹಿಂದಿರುಗುತ್ತವೆ. 2026ರ ದಸರಾ ಸಂದರ್ಭದಲ್ಲಿ ಈ ಸಂಪೂರ್ಣ ಪ್ರಕ್ರಿಯೆ ಮತ್ತಷ್ಟು ಕುತೂಹಲಕಾರಿ. ಏಕೆಂದರೆ ಕಳೆದ ಆರು ವರ್ಷಗಳಿಂದ ಚಿನ್ನದ ಅಂಬಾರಿ ಹೊತ್ತಿದ್ದ ಅಭಿಮನ್ಯುಗೆ ನಿವೃತ್ತಿ ನೀಡಲಾಗಿದ್ದು, ಹೊಸ ಅಂಬಾರಿ ಆನೆಯ ಆಯ್ಕೆ ನಡೆಯುತ್ತಿದೆ.
ದಸರಾ ಆನೆಗಳನ್ನು ಎಲ್ಲಿಂದ ಆಯ್ಕೆ ಮಾಡಲಾಗುತ್ತದೆ?
ದಸರಾ ಗಜಪಡೆಗೆ ಬೇಕಾದ ಆನೆಗಳನ್ನು ಸಾಮಾನ್ಯವಾಗಿ ಕರ್ನಾಟಕ ಅರಣ್ಯ ಇಲಾಖೆಯ ವಿವಿಧ ಆನೆ ಶಿಬಿರಗಳಿಂದ ಆಯ್ಕೆ ಮಾಡಲಾಗುತ್ತದೆ.
2026ರ ಅಧಿಕೃತ ಪಟ್ಟಿಯಲ್ಲಿ ಒಟ್ಟು 12 ಆನೆಗಳನ್ನು ಆಯ್ಕೆ ಮಾಡಲಾಗಿದೆ. ಅವುಗಳು ಬಳ್ಳೆ, ದುಬಾರೆ, ಭೀಮನಕಟ್ಟೆ, ಮತ್ತಿಗೋಡು, ದೊಡ್ಡಹರವೆ ಮತ್ತು ರಾಮಾಪುರ ಮುಂತಾದ ಶಿಬಿರಗಳಿಗೆ ಸೇರಿದವು.ಇವುಗಳಲ್ಲಿ
- ದುಬಾರೆ: ಧನಂಜಯ, ಪ್ರಶಾಂತ, ಗೋಪಿ, ಶ್ರೀರಾಮ, ಕಾವೇರಿ, ಸುಗ್ರೀವ
- ಬಳ್ಳೆ: ಮಹೇಂದ್ರ, ಲಕ್ಷ್ಮೀ
- ಭೀಮನಕಟ್ಟೆ: ಏಕಲವ್ಯ
- ಮತ್ತಿಗೋಡು: ಶ್ರೀಕಂಠ
- ದೊಡ್ಡಹರವೆ: ರೂಪಾ
- ರಾಮಾಪುರ: ಚೈತ್ರ.
ಮುಖ್ಯ ಶಿಬಿರಗಳಾಗಿವೆ. ಪ್ರತಿಯೊಂದು ಆನೆಯನ್ನೂ ಕೇವಲ ಅದರ ಗಾತ್ರ ಅಥವಾ ತೂಕದ ಆಧಾರದ ಮೇಲೆ ದಸರೆಗೆ ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ವಯಸ್ಸು, ದೈಹಿಕ ಸಾಮರ್ಥ್ಯ, ಸ್ವಭಾವ, ಜನಸಂದಣಿಯಲ್ಲಿ ವರ್ತನೆ, ಶಬ್ದ ಮತ್ತು ಪಟಾಕಿಗಳಿಗೆ ಸ್ಪಂದನೆ, ತರಬೇತಿಗೆ ಹೊಂದಿಕೊಳ್ಳುವ ಗುಣ ಹಾಗೂ ಹಿಂದಿನ ದಸರಾ ಅನುಭವ ಮುಂತಾದ ಹಲವು ಅಂಶಗಳನ್ನು ಪರಿಗಣಿಸಲಾಗುತ್ತದೆ.
ಆನೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ಆರೋಗ್ಯ ತಪಾಸಣೆಗೆ ವಿಶೇಷ ಒತ್ತು ನೀಡಲಾಗುತ್ತದೆ. ಮತ್ತಿಗೋಡು, ದುಬಾರೆ ಮತ್ತು ರಾಮಾಪುರ ಸೇರಿದಂತೆ ವಿವಿಧ ಆನೆ ಶಿಬಿರಗಳಲ್ಲಿ ಪಶುವೈದ್ಯ ತಜ್ಞರು ಆನೆಗಳನ್ನು ಪರಿಶೀಲಿಸಿ ಅವುಗಳ ರಕ್ತ ಮತ್ತು ಮಲದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ಮಾಡುವುದಲ್ಲದೇ, ಆನೆಗಳಿಗೆ ECG ಪರೀಕ್ಷೆ ಸಹಾ ನಡೆಸಲಾಗುತ್ತದೆ. ಹೆಣ್ಣಾನೆಗಳ ಗರ್ಭಧಾರಣೆಯನ್ನು ಪತ್ತೆಹಚ್ಚಲು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಕೂಡ ಮಾಡಿಸಿ, ವೈದ್ಯಕೀಯ ವರದಿಗಳು ಮತ್ತು ದೈಹಿಕ ಸಾಮರ್ಥ್ಯದ ಆಧಾರದ ಮೇಲೆ ಅಂತಿಮ ಆಯ್ಕೆ ಮಾಡಲಾಗುತ್ತದೆಯೇ ಹೊರತು, ಕೇವಲ ಪರಂಪರೆ ಅಥವಾ ಅನುಭವದ ಮೇಲೆ ಆಯ್ಕೆ ನಡೆಯುವುದಿಲ್ಲ
2026ರ ದಸರಾ ಮೆರವಣಿಗೆಗೆ ಆಯ್ಕೆಯಾಗಿರುವ ಗಜಪಡೆ
ಅರಣ್ಯ ಇಲಾಖೆಯು ಈ ಎಲ್ಲಾ ಪರೀಕ್ಷೆಗಳನ್ನು ನಡೆಸಿ ಅಧಿಕೃತವಾಗಿ 2026ರ ದಸರಾಗೆ 12 ಆನೆಗಳನ್ನು ಆಯ್ಕೆಮಾಡಿದ್ದು ಅವುಗಳೊಂದಿಗೆ ಸಂಬಂಧಿಸಿದ ಮಾವುತರು ಮತ್ತು ಕಾವಾಡಿಗಳೂ ಸಹಾ ದಸರಾ ಉತ್ಸವದ ಭಾಗವಾಗಿರುತ್ತಾರೆ





