Sj*
ಈಗಾಗಲೇ ‘ಅಮ್ಮ’ ಸಾಂಗ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ‘ಖೇಲಾ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಟ್ರೇಲರ್ ಅನ್ನು ಆ ಸಿನಿಮಾದ ಕಲಾವಿದರು ಮತ್ತು ತಂತ್ರಜ್ಞರ ತಾಯಂದಿರು ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು. ಈ ಚಿತ್ರವನ್ನು ವಿ.ಜೆ. ಭರತ್ ನಿರ್ದೇಶನದ ಜೊತೆಗೆ ನಿರ್ಮಾಣ ಕೂಡ ಮಾಡಿದ್ದಾರೆ.
ಟ್ರೇಲರ್ ಬಿಡುಗಡೆ ನಂತರ ಮಾತನಾಡಿದ ನಿರ್ದೇಶಕ – ನಿರ್ಮಾಪಕ ವಿ.ಜೆ ಭರತ್, ‘ವಿಹಾನ್ ಪ್ರಭಂಜನ್ ಈ ಚಿತ್ರದ ಹೀರೋ ಆದರೂ, ರಿಯಲ್ ಹೀರೋ ತಾಯಿ ಪಾತ್ರ ಮಾಡಿರುವ ಸ್ವಾತಿ ಅವರು ಎನ್ನಬಹುದು. ಅವರು ಪಾತ್ರವಾಗಿ ಜೀವಿಸಿದ್ದಾರೆ. ನನ್ನ ತಾಯಿ ಹಾಗೂ ತಂಗಿಯ ಸಹಕಾರದಿಂದ ಈ ಸಿನಿಮಾ ಮಾಡಲು ಸಾಧ್ಯವಾಯಿತು. ಚಿತ್ರದಲ್ಲಿ ಸ್ನೇಹ, ಪ್ರೀತಿ ಮತ್ತು ತಾಯಿಯ ಬಗ್ಗೆ ಹೇಳಲಾಗಿದೆ. ಬಿಗ್ಬಾಸ್ ಖ್ಯಾತಿಯ ಸಂಗೀತ ಭಟ್ ವಿಶೇಷ ಪಾತ್ರ ಮಾಡಿದ್ದಾರೆ. ಪ್ರಮೋದ್ ಗೌಡ ಅದ್ಭುತವಾಗಿ ಛಾಯಾಗ್ರಹಣ ಮಾಡಿದ್ದು, ತ್ಯಾಗು ಅವರ ಸಂಗೀತ ಚಿತ್ರದ ಶಕ್ತಿ ಹೆಚ್ಚಿಸಿದೆ. ತಂಡದ ಶ್ರಮದಿಂದ ಈ ಸಿನಿಮಾ ಆಗಿದೆ’ ಎಂದು ಹೇಳಿದರು.
ಈ ಚಿತ್ರದ ನಾಯಕನಾಗಿ ‘ಶ್ರಾವಣಿ ಸುಬ್ರಹ್ಮಣ್ಯ’ ಹಾಗೂ ‘ಮೈನಾ’ ಸೀರಿಯಲ್ ಖ್ಯಾತಿಯ ವಿಹಾನ್ ಪ್ರಭಂಜನ್ ಅಭಿನಯ ಮಾಡಿದ್ದು, ವೇದಿಕೆಯಲ್ಲಿ ಮಾತನಾಡಿದ ಅವರು ‘ದೊಡ್ಡ ಮಟ್ಟದಲ್ಲಿಯೇ ನಮ್ಮ ಸಿನಿಮಾ ಬಂದಿದೆ. ನಾನಿಲ್ಲಿ ಭರತ್ ಎಂಬ ಪಾತ್ರ ಮಾಡಿದ್ದೇನೆ. ಎಲ್ಲರ ಮನೆಯಲ್ಲಿ ನಡೆಯುವ ಸಾಧಾರಣವಾದ ಕಥೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಇದು ಎಲ್ಲರಿಗೂ ಕನೆಕ್ಟ್ ಆಗುತ್ತದೆ’ ಎಂದರು.
ಚಿತ್ರದಲ್ಲಿ ನಾಯಕಿಯಾಗಿ ಶಿವಮೊಗ್ಗ ಮೂಲದ ಆಶಿಕಾ ರಾವ್ ಅಭಿನಯ ಮಾಡಿದ್ದು, ‘ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಟ್ರೇಲರ್ನಂತೆ ಸಿನಿಮಾ ಕೂಡ ನಿಮಗೆಲ್ಲಾ ಇಷ್ಟ ಆಗುತ್ತದೆ. ಇದು ನನ್ನ ಮೊದಲ ಸಿನಿಮಾ. ನನ್ನ ಪಾತ್ರಕ್ಕೆ ನಟನೆ ಮಾಡಲು ತುಂಬಾ ಅವಕಾಶವಿತ್ತು’ ಎಂದು ಹೇಳಿಕೊಂಡರು.

ಇನ್ನು, ನಾಯಕನ ತಾಯಿ ಪಾತ್ರ ಮಾಡಿರುವ ಹಿರಿಯ ನಟಿ ಸ್ವಾತಿ, ‘ತಾಯಿ ಎಂಬುದು ಶ್ರೇಷ್ಠವಾದ ಪದ. ಮಕ್ಕಳಿಗಾಗಿ ಒಬ್ಬ ತಾಯಿ ಏನೆಲ್ಲಾ ಕಷ್ಟ ಪಡುತ್ತಾಳೆ ಎಂಬುದು ಈ ಚಿತ್ರದಲ್ಲಿದೆ. ಇಂದಿನ ಜನರೇಷನ್ ನೋಡಲೇಬೇಕಾದ ಸಿನಿಮಾ ಇದು’ ಎಂದು ಹೇಳಿದರು. ನಾಯಕನ ಗೆಳೆಯನ ಪಾತ್ರ ಮಾಡಿರುವ ಯುವರಾಜ್ ಗೌಡ ‘ಗೆಳೆತನ, ತಾಯಿ ಸೆಂಟಿಮೆಂಟ್, ಪ್ರೀತಿ ಎಲ್ಲಾ ಇರುವಂತ ಸಿನಿಮಾ ನಮ್ಮದು. ನೋಡಿ ಹರಿಸಿ’ ಎಂದರು.
ಕೊನೆಯಲ್ಲಿ ಮಾತನಾಡಿದ ಚಿತ್ರದ ಸಂಗೀತ ನಿರ್ದೇಶಕ ಎಂ.ಎಸ್ ತ್ಯಾಗರಾಜ್, ‘ಭರತ್ ಮತ್ತು ನಮ್ಮ ಬಾಂಡಿಂಗ್ ಚನ್ನಾಗಿತ್ತು. ಸಿನಿಮಾ ನೋಡುವಾಗ ತುಂಬಾ ಹತ್ತಿರ ಅನಿಸುತ್ತಿತ್ತು. ಆಗಾಗ ನನ್ನ ಹಿಂದಿನ ಲೈಫ್ ನೆನಪಾಗುತ್ತಿತ್ತು. ನಿರ್ದೇಶಕರು ಫ್ಯಾಶನ್ ಆಗಿ ಸಿನಿಮಾ ಮಾಡಿದ್ದಾರೆ. ಸ್ವಾತಿ ಅವರ ಅಭಿನಯ ಪ್ರೇಕ್ಷಕರಿಗೆ ತುಂಬಾ ಹತ್ತಿರ ಆಗುತ್ತದೆ. ಇದರಲ್ಲಿ ನಾಲ್ಕು ಹಾಡುಗಳಿದ್ದು, ದರ್ಶನ್ ನಾರಾಯಣ್, ಜಸ್ಕರಣ್ ಸಿಂಗ್ ಸೇರಿದಂತೆ ಹಲವು ಗಾಯಕರು ಹಾಡಿದ್ದಾರೆ’ ಎಂದು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಚಿತ್ರಕ್ಕೆ ಸಂಭಾಷಣೆ ಬರೆದಿರುವ ಪ್ರಮೋದ್ ಜೋಯಿಸ್, ಛಾಯಾಗ್ರಾಹಕ ಪ್ರಮೋದ್ ಗೌಡ ಅವರು ತಮ್ಮ ಅನುಭವವನ್ನು ಹಂಚಿಕೊಂಡರು.





