– ರಾಘವೇಂದ್ರ ಅಡಿಗ ಎಚ್ಚೆನ್.
ಹಾಸನ ಜಿಲ್ಲೆಯಲ್ಲಿರುವ ಇತರೆ ಪ್ರವಾಸಿ ತಾಣಗಳಂತೆ ಆ ತಾಣವೂ ಇತ್ತು. ಅದರ ಸೌಂದರ್ಯಕ್ಕೆ ಮನಸೋತವರು ಆಗೊಮ್ಮೆ ಈಗೊಮ್ಮೆ ಬಂದು ಹೋಗುತ್ತಿದ್ದರು. ಒಂದಷ್ಟು ಮಂದಿಗಷ್ಟೇ ಗೊತ್ತಿತ್ತು. ಆದರೀಗ ಪ್ರವಾಸಿಗರು ಲಗ್ಗೆಯಿಡುತ್ತಿದ್ದಾರೆ… ಪರಿಣಾಮ ಪ್ರತಿದಿನವೂ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ… ಹಾಗಾದರೆ ಯಾವುದು ಈ ತಾಣ ಎಂದು ಯೋಚಿಸುತ್ತಿದ್ದೀರ ಹಾಗಿದ್ದರೆ ಬನ್ನಿ ನಾವು ನೀವು ಹೋಗೋಣ ಸೀಗೆಗುಡ್ಡದ ಕಡೆಗೆ… ಒಂದೆಡೆ ‘ಪ್ರೇಮದ ಊರಲಿ’ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ.. ಜನ ಸಿನಿಮಾ ನೋಡಿ ಖುಷಿ ಪಡುತ್ತಿದ್ದಾರೆ. ಮತ್ತೊಂದು ಕಡೆ ಸಿನಿಮಾ ಚಿತ್ರೀಕರಣ ಸ್ಥಳವಾದ ಹಾಸನದ ಸೀಗೆ ಗುಡ್ಡ(seege gudda) ಕ್ಕೆ ಲಗ್ಗೆಯಿಡುತ್ತಿದ್ದಾರೆ. ಸಿನಿಮಾದಿಂದ ಪ್ರಭಾವಿತರಾಗಿ ಸೀಗೆಗುಡ್ಡದ ಚೆಲುವಿಗೆ ಮನಸೋತು ನೇರವಾಗಿ ತಂಡೋಪ ತಂಡವಾಗಿ ಬರುತ್ತಿದ್ದಾರೆ. ಒಮ್ಮೆಲೆ ಇಷ್ಟೊಂದು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಿರುವುದನ್ನು ನೋಡಿದ ಸ್ಥಳೀಯರು ಅಚ್ಚರಿ ಪಡುತ್ತಿದ್ದಾರೆ.

ಸಿನಿಮಾಗಳ ಮೂಲಕ ಪ್ರವಾಸಿ ತಾಣಗಳು ಮುನ್ನಲೆಗೆ ಬರುವುದು ಇದೇ ಮೊದಲೇನಲ್ಲ. ನಮ್ಮ ರಾಜ್ಯಾದ್ಯಂತ ಹಲವು ಊರು, ದೇಗುಲಗಳು ಇದೇ ರೀತಿ ಸಿನಿಮಾದ ಬಳಿಕ ಹೆಸರುವಾಸಿಯಾಗಿವೆ. ಇದಕ್ಕೆ ಒಂದು ಉದಾಹರಣೆ ಕೊಡಗಿನ ಮಾಂದಾಲಪಟ್ಟಿ.. ಗಾಳಿಪಟ ಸಿನಿಮಾದಲ್ಲಿ ಮುಗಿಲಪೇಟೆ ಎಂದು ತೋರಿಸಲಾಗಿತ್ತು. ಆ ನಂತರ ಪ್ರವಾಸಿಗರು ಲಗ್ಗೆಯಿಟ್ಟಿದ್ದರು. ಇವತ್ತಿಗೂ ಹೆಸರುವಾಸಿ ತಾಣವಾಗಿ ಉಳಿದಿದೆ. ಇದೀಗ ಸೀಗೆ ಗುಡ್ಡ(seege gudda)ದ ಸರದಿ..
ಸೀಗೆಗುಡ್ಡಕ್ಕೆ ಇಷ್ಟೊಂದು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆಂದು ಯಾರೂ ಊಹಿಸಿರಲಿಲ್ಲ. ಹೀಗಾಗಿ ಇಲ್ಲಿ ಸಮಸ್ಯೆಗಳಾಗುತ್ತಿವೆ. ಪ್ರವಾಸಿಗರನ್ನು ನಿಯಂತ್ರಿಸುವುದೇ ಸ್ಥಳೀಯ ಆಡಳಿತಕ್ಕೆ ಕಷ್ಟವಾಗುತ್ತಿದೆ. ಪ್ರತಿದಿನವೂ ನೂರಾರು ವಾಹನಗಳು ಸಾವಿರಾರು ಜನರು ಬರುತ್ತಿರುವುದರಿಂದ ಮೂಲಸೌಕರ್ಯದ ಸಮಸ್ಯೆಗಳು ಎದುರಾಗಿವೆ.

ಇಲ್ಲಿಗೆ ಕಿರಿದಾದ ರಸ್ತೆಗಳು ಇರುವುದರಿಂದ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ. ಇದರಿಂದ ಜಗಳ, ವಾಗ್ವಾದ, ಕಿರಿಕ್ ಗಳು ಆಗುತ್ತಿವೆ. ಜತೆಗೆ ಕೆಲವರ ಅತಿರೇಕದ ವರ್ತನೆಗಳು ಮುಜುಗರ ತರುತ್ತಿವೆ. ಅಲ್ಲಲ್ಲಿ ಗಲಾಟೆ ಮಾರಾಮಾರಿಗಳು ನಡೆಯುತ್ತಿವೆ. ಇದೀಗ ದಸರಾ ರಜೆಯಿರುವ ಕಾರಣದಿಂದಾಗಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ನಿಭಾಯಿಸುವುದು ಕಷ್ಟವಾಗುತ್ತಿದೆ. ಪ್ರವಾಸಿ ಸ್ಥಳವನ್ನು ವೀಕ್ಷಿಸಲು ಬರುವವರು ನೋಡಿಕೊಂಡು ಹಿಂತಿರುಗುತ್ತಾರೆ. ಆದರೆ ಮೋಜು ಮಸ್ತಿಗೆ ಬರುವವರಿಗೆ ಸಾಕಷ್ಟು ತೊಂದರೆಗಳಾಗುತ್ತಿವೆ ಎಂಬ ಆರೋಪವೂ ಕೇಳಿ ಬರುತ್ತಿದೆ





