- ರಾಘವೇಂದ್ರ ಅಡಿಗ ಎಚ್ಚೆನ್.
ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ‘ರಾಮಾಯಣ: ಭಾಗ 1’ ಸಿನಿಮಾ ನವೆಂಬರ್ 5ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಇದೇ ದಿನ ರಾಷ್ಟ್ರಪತಿ ಭವನದಲ್ಲಿ ಚಿತ್ರದ ವಿಶೇಷ ಪ್ರದರ್ಶನ ಆಯೋಜಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಸಾಮಾನ್ಯವಾಗಿ ರಾಜಕೀಯ ಗಣ್ಯರಿಗಾಗಿ ಇಂತಹ ವಿಶೇಷ ಸಿನಿಮಾ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತದೆ. ಇದೀಗ ‘ರಾಮಾಯಣ’ ಚಿತ್ರ ಪ್ರದರ್ಶನಕ್ಕೂ ಅನುಮತಿ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಪ್ರಕಟವಾಗಿಲ್ಲ.
ಮೂಲಗಳ ಪ್ರಕಾರ, ವಿಶೇಷ ಪ್ರದರ್ಶನಕ್ಕೆ ನಟರಾದ ರಣಬೀರ್ ಕಪೂರ್, ಯಶ್, ನಟಿ ಸಾಯಿ ಪಲ್ಲವಿ ಹಾಗೂ ನಿರ್ದೇಶಕ ನಿತೇಶ್ ತಿವಾರಿ ಹಾಜರಾಗುವ ನಿರೀಕ್ಷೆಯಿದೆ.
ಜಟಾಯು ಪಾತ್ರದ ಪೋಸ್ಟರ್ ಬಿಡುಗಡೆ
ಚಿತ್ರತಂಡವು ಪೌರಾಣಿಕ ಮಹಾಕಾವ್ಯದಲ್ಲಿ ಪ್ರಮುಖ ಪಾತ್ರ ವಹಿಸುವ ಜಟಾಯುವಿನ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಈ ಪಾತ್ರಕ್ಕೆ ನಟ ಅನುಪಮ್ ಖೇರ್ ಧ್ವನಿ ನೀಡಿದ್ದಾರೆ.
ರಾವಣನು ಸೀತೆಯನ್ನು ಅಪಹರಿಸುವ ಸಂದರ್ಭದಲ್ಲಿ ಜಟಾಯು ಆಕೆಯನ್ನು ರಕ್ಷಿಸಲು ಮುಂದಾಗುತ್ತಾನೆ. ಅಪಾಯದ ಅರಿವಿದ್ದರೂ ರಾವಣನನ್ನು ಎದುರಿಸಿ ತನ್ನ ಪ್ರಾಣವನ್ನೇ ತ್ಯಾಗ ಮಾಡುವ ಜಟಾಯುವಿನ ಸಾಹಸವು ರಾಮಾಯಣದ ಮಹತ್ವದ ಘಟನೆಯಾಗಿದೆ.
ಈ ಪೌರಾಣಿಕ ಕಥೆಯನ್ನು ಆಧರಿಸಿದ ಚಿತ್ರದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್, ರಾವಣನಾಗಿ ಯಶ್, ಸೀತೆಯಾಗಿ ಸಾಯಿ ಪಲ್ಲವಿ, ಲಕ್ಷ್ಮಣನಾಗಿ ರವಿ ದುಬೆ ಹಾಗೂ ಹನುಮಂತನಾಗಿ ಸನ್ನಿ ಡಿಯೋಲ್ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆಗೆ ರಕುಲ್ ಪ್ರೀತ್ ಸಿಂಗ್, ಲಾರಾ ದತ್ತಾ, ವಿವೇಕ್ ಒಬೆರಾಯ್, ಶೀಬಾ ಚಡ್ಡಾ, ಅರುಣ್ ಗೋವಿಲ್ ಮತ್ತು ಇಂದಿರಾ ಕೃಷ್ಣನ್ ಸೇರಿದಂತೆ ಹಲವು ಪ್ರಮುಖ ಕಲಾವಿದರು ನಟಿಸಿದ್ದಾರೆ.
ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ ಸಿನಿಮಾ
‘ರಾಮಾಯಣ’ ಚಿತ್ರವನ್ನು ಎರಡು ಭಾಗಗಳಾಗಿ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ. ಮೊದಲ ಭಾಗವಾದ ‘ರಾಮಾಯಣ: ಭಾಗ 1’ ನವೆಂಬರ್ 5ರಂದು ವಿಶ್ವದಾದ್ಯಂತ ತೆರೆಕಾಣಲಿದ್ದು, ಎರಡನೇ ಭಾಗವು 2027ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ.
ಈ ಚಿತ್ರ ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.





