ನಾಡಿನ ಸಂಸ್ಕೃತಿ, ಜನಪದ ಕಲೆ ಮತ್ತು ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಬೇಕಾದ ಯುವ ದಸರಾ — ಅದ್ಧೂರಿ ಸಂಗೀತ ಕಾರ್ಯಕ್ರಮಗಳಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವುದು ಎಷ್ಟು ಸಮರ್ಥನೀಯ? ಹೊರರಾಜ್ಯದ ಕಲಾವಿದರಿಗೆ ಅವಕಾಶ ನೀಡುವುದರ ನಡುವೆ ಕನ್ನಡದ ನೆಲದ ಪ್ರತಿಭೆಗಳಿಗೆ ನ್ಯಾಯ ಸಿಗುತ್ತಿದೆಯೇ? ಆಯೋಜನೆಯಲ್ಲಿ ಪಾರದರ್ಶಕತೆ ಇದೆಯೇ?

Mysuru Yuva dasara 2026: ಈ ಬಾರಿಯ ರಸಸಂಜೆಯ ವಿಶೇಷ ಅತಿಥಿಗಳು ಯಾರು? ದಿನಾಂಕ, ಸ್ಥಳ, ವಿವರ ಇಲ್ಲಿದೆ | Mysuru Yuva Dasara 2026 Chief Guests Dates Venue And Details Here Rav | Asianet Suvarna News

ಮೈಸೂರು ದಸರಾ ಎಂದರೆ ಕೇವಲ ಒಂದು ಹಬ್ಬವಲ್ಲ. ಅದು ಕರ್ನಾಟಕದ ಇತಿಹಾಸ, ಪರಂಪರೆ, ಸಾಂಸ್ಕೃತಿಕ ವೈಭವ ಮತ್ತು ಜನಜೀವನದ ಪ್ರತೀಕ. ಒಡೆಯರ ಕಾಲದಿಂದ ನಡೆದುಬಂದಿರುವ ಈ ಉತ್ಸವವು ಸಂಗೀತ, ಸಾಹಿತ್ಯ, ನೃತ್ಯ, ರಂಗಭೂಮಿ, ಜನಪದ ಕಲೆ, ಕುಸ್ತಿ, ಕ್ರೀಡೆ ಮತ್ತು ವಿವಿಧ ಸಮುದಾಯಗಳ ಸಾಂಸ್ಕೃತಿಕ ಆಚರಣೆಗಳನ್ನು ಒಳಗೊಂಡಿದೆ. ವಿಜಯನಗರ ಸಾಮ್ರಾಜ್ಯದ ಮಹಾನವಮಿ ಉತ್ಸವದ ಸಂಪ್ರದಾಯದಿಂದ ಪ್ರೇರಣೆ ಪಡೆದ ದಸರಾ ಆಚರಣೆಯನ್ನು ರಾಜ ಒಡೆಯರ್ ಅವರು 1610ರಲ್ಲಿ ಶ್ರೀರಂಗಪಟ್ಟಣದಲ್ಲಿ ಮುಂದುವರಿಸಿದರು. ನಂತರ ಮೈಸೂರು ರಾಜಧಾನಿಯಾದಾಗ ದಸರಾ ಆಚರಣೆಯೂ ಮೈಸೂರಿನಲ್ಲಿ ವೈಭವದಿಂದ ಬೆಳೆದಿತು. ಇಪ್ಪತ್ತನೇ ಶತಮಾನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಪ್ರದರ್ಶನಗಳು, ಕ್ರೀಡೆ ಮತ್ತು ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ಈ ಉತ್ಸವ ಮತ್ತಷ್ಟು ವಿಸ್ತಾರಗೊಂಡಿತು. 1970ರ ದಶಕದಿಂದ ಕರ್ನಾಟಕ ಸರ್ಕಾರ ದಸರಾವನ್ನು ರಾಜ್ಯದ ನಾಡಹಬ್ಬವಾಗಿ ಆಯೋಜಿಸುತ್ತಿದೆ.

ಇಂತಹ ದೀರ್ಘ ಇತಿಹಾಸ ಹೊಂದಿರುವ ಉತ್ಸವದ ಭಾಗವಾಗಿ ಯುವ ದಸರಾ ರೂಪುಗೊಂಡಿದೆ. ಯುವಜನರ ಆಸಕ್ತಿ, ಆಧುನಿಕ ಸಂಗೀತ ಮತ್ತು ಮನರಂಜನೆಗೆ ಅವಕಾಶ ಕಲ್ಪಿಸುವುದು ಇದರ ಪ್ರಮುಖ ಉದ್ದೇಶ. ಆದರೆ ಕಾಲಕ್ರಮೇಣ ಈ ಕಾರ್ಯಕ್ರಮದ ಸ್ವರೂಪದ ಬಗ್ಗೆ ಕೆಲವು ಪ್ರಶ್ನೆಗಳು ಎದುರಾಗಿವೆ.

ಯುವ ದಸರಾ ಯುವ ಪ್ರತಿಭೆಗಳನ್ನು ಬೆಳೆಸುವ ವೇದಿಕೆಯಾಗಬೇಕೇ? ಅಥವಾ ಜನಪ್ರಿಯ ಸಿನಿಮಾ ತಾರೆಯರನ್ನು ಕರೆಸಿ ಬೃಹತ್ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವುದೇ ಅದರ ಮುಖ್ಯ ಗುರಿಯಾಗಬೇಕೇ? ಸಾರ್ವಜನಿಕ ಹಣದಿಂದ ನಡೆಯುವ ಈ ಉತ್ಸವದಲ್ಲಿ ಮೈಸೂರಿನ ಮತ್ತು ಕರ್ನಾಟಕದ ಕಲಾವಿದರಿಗೆ ಎಷ್ಟು ಅವಕಾಶ ಸಿಗಬೇಕು? ಈ ಪ್ರಶ್ನೆಗಳು ಚರ್ಚೆಗೆ ಅರ್ಹವಾಗಿವೆ.

ಮೈಸೂರನ್ನು ಸಾಂಸ್ಕೃತಿಕ ರಾಜಧಾನಿಯನ್ನಾಗಿಸಿದ ಮೈಸೂರು ಅರಸರು

ಮುಮ್ಮಡಿ ಕೃಷ್ಣರಾಜ ಒಡೆಯರು - ವಿಕಿಪೀಡಿಯ

ಮೈಸೂರು ಕರ್ನಾಟಕದ ಸಾಂಸ್ಕೃತಿ ರಾಜಧಾನಿಯಾಗಿರುವುದರ ಹಿಂದೆ ಮೈಸೂರನ್ನು ಆಳಿದ ಅನೇಕ ಅರಸರ ಕೊಡುಗೆ ಇದೆ. ಅದರಲ್ಲೂ ಸ್ವತಃ ವೇದಪಾರಂಗತರೂ ಸಂಗೀತಗಾರರೂ ಆಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ದೇಶವಿದೇಶಗಳಿಗೆ ಪ್ರವಾಸ ಮಾಡಿ ಅಲ್ಲಿದ್ದ ಅತ್ಯುತ್ತಮ ಕಲಾವಿದರುಗಳನ್ನು ಮೈಸೂರಿಗೆ ಕರೆತಂದು ಮೈಸೂರನ್ನು ಸಾಂಸ್ಕೃತಿಕ ಕಲಾನಗರಿಯನ್ನಾಗಿ ಮಾಡುತ್ತಾರೆ. ಈ ಪ್ರೋತ್ಸಾಹದ ಪರಿಣಾಮವಾಗಿಯೇ ಇಂದೂ ಕೂಡಾ ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೇ ಹೆಸರು ಪಡೆದಿದೆ. ಅನೇಕ ಸಂಗೀತಗಾರರು, ಲೇಖಕರು ಮತ್ತು ಕಲಾಕಾರರು (ಉದಾ: ರಾಜಾ ರವಿ ವರ್ಮ) ಮೈಸೂರು ಸಂಸ್ಥಾನದಿಂದ ಪ್ರೋತ್ಸಾಹ ಪಡೆದು ಬೆಳಕಿಗೆ ಬಂದರು. ಅದೇ ರೀತಿ ಅವರ ದರ್ಬಾರ್ ಹಾಲಿನಲ್ಲಿ ಸಂಗೀತ ಕಛೇರಿ ಇದೆ ಎಂದರೇ ಅದು ಸಭಾ ಕಛೇರಿ ಎಂದೇ ಖ್ಯಾತಿ ಪಡೆದಿರುತ್ತದೆ. ದೇಶದ ಎಲ್ಲಾ ಕಲಾವಿದರಿಗೂ ಮೈಸೂರು ಅರಮನೆಯಲ್ಲಿ ಕಾರ್ಯಕ್ರಮ ಕೊಡುವುದೇ ಒಂದು ಹೆಮ್ಮೆಯ ಮತ್ತು ಗೌರವಯುತ ಸಂಗತಿಯಾಗಿರುತ್ತದೆ.

ಯುವ ದಸರಾವನ್ನು ಯಾವಾಗ, ಯಾರು ಆರಂಭಿಸಿದರು?

ಕಲಾವಿದರ ತಂಡವನ್ನು ದೃಢಪಡಿಸಿದ ನಂತರ ಯುವ ದಸರಾ ಸ್ಥಳವನ್ನು ನಿರ್ಧರಿಸಲಾಗುವುದು - ಸ್ಟಾರ್ ಆಫ್ ಮೈಸೂರು

ಮೈಸೂರು ದಸರಾಕ್ಕೆ ನೂರಾರು ವರ್ಷಗಳ ದಾಖಲಿತ ಇತಿಹಾಸವಿದ್ದರೂ, ಯುವ ದಸರಾ ಅದೇ ರೀತಿಯ ಪ್ರಾಚೀನ ರಾಜಪರಂಪರೆಯ ಕಾರ್ಯಕ್ರಮವಲ್ಲ. ಇದು ಯುವಜನರ ಆಸಕ್ತಿಗೆ ತಕ್ಕಂತೆ ನಂತರ ರೂಪುಗೊಂಡ ಆಧುನಿಕ ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮವಾಗಿದೆ. ಯುವ ದಸರಾವನ್ನು ಮೊದಲ ಬಾರಿಗೆ ಯಾವ ವರ್ಷದಲ್ಲಿ ಆರಂಭಿಸಲಾಯಿತು, ಅದಕ್ಕೆ ನಿಖರವಾಗಿ ಯಾರು ಪ್ರಸ್ತಾಪ ಮಾಡಿದರು ಮತ್ತು ಯಾವ ಅಧಿಕಾರಿಯ ಅಥವಾ ಸರ್ಕಾರದ ಅವಧಿಯಲ್ಲಿ ಮೊದಲ ಕಾರ್ಯಕ್ರಮ ನಡೆಯಿತು ಎಂಬುದರ ಕುರಿತು ವಿಶ್ವಾಸಾರ್ಹ ಅಧಿಕೃತ ಮೂಲಗಳಲ್ಲಿ ಸ್ಪಷ್ಟವಾದ ಮಾಹಿತಿ ದೊರೆಯುವುದಿಲ್ಲ.

ಆದರೆ ಇಂದು ಯುವ ದಸರಾ ಮೈಸೂರು ದಸರಾ ಮಹೋತ್ಸವದ ಅಧಿಕೃತ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ದಸರಾ ಉನ್ನತಾಧಿಕಾರ ಸಮಿತಿ, ಮೈಸೂರು ಜಿಲ್ಲಾಡಳಿತ ಮತ್ತು ಸಂಬಂಧಿತ ಉಪಸಮಿತಿಗಳ ಮೂಲಕ ಇದರ ಆಯೋಜನೆ ನಡೆಯುತ್ತದೆ. 2026ರ ಅಧಿಕೃತ ದಸರಾ ಸಮಿತಿ ವಿವರಗಳಲ್ಲಿಯೂ ಯುವ ದಸರಾಕ್ಕಾಗಿ ಪ್ರತ್ಯೇಕ ಉಪಸಮಿತಿ ಇರುವುದನ್ನು ಕಾಣಬಹುದು.

ಯುವ ದಸರಾದ ಮೂಲ ಉದ್ದೇಶವೇನು?

ಯುವ ದಸರಾ 2024: ಮೈಸೂರಿನಲ್ಲಿ ನೆನಪಿಡುವ ಸಂಗೀತ ಸಂಭ್ರಮ - ಮಸ್ತ್ ಮೈಸೂರು - ಮೈಸೂರಿನ ಜನಪ್ರಿಯ ಸಿಟಿ ಪೋರ್ಟಲ್

ಯುವ ದಸರಾದ ಆಶಯವನ್ನು ಅರ್ಥಮಾಡಿಕೊಳ್ಳಲು ಅದರ ಹೆಸರೇ ಹೇಳುವಂತೆ, ಇದು ಯುವಜನರ ಹಬ್ಬ. ಯುವಜನರ ಪ್ರತಿಭೆ, ಸೃಜನಶೀಲತೆ, ಸಂಗೀತದ ಆಸಕ್ತಿ, ನೃತ್ಯಕಲೆ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಗೆ ವೇದಿಕೆ ಕಲ್ಪಿಸುವ ಕಾರ್ಯಕ್ರಮ. ಇಂದಿನ ಯುವಜನರು ಶಾಸ್ತ್ರೀಯ ಸಂಗೀತ ಮತ್ತು ಜನಪದ ಕಲೆಯ ಜೊತೆಗೆ ಚಲನಚಿತ್ರ ಸಂಗೀತ, ಪಾಶ್ಚಾತ್ಯ ಸಂಗೀತ, ರಾಕ್, ಹಿಪ್-ಹಾಪ್, ಫ್ಯೂಷನ್ ಮತ್ತು ಆಧುನಿಕ ನೃತ್ಯಗಳಲ್ಲಿಯೂ ಆಸಕ್ತಿ ಹೊಂದಿದ್ದಾರೆ. ಆ ಆಸಕ್ತಿಗಳನ್ನು ದಸರಾ ಉತ್ಸವದೊಂದಿಗೆ ಬೆಸೆಯುವುದು ತಪ್ಪಲ್ಲ. ಬದಲಾಗಿ, ಯುವಜನರನ್ನು ನಾಡಹಬ್ಬದತ್ತ ಆಕರ್ಷಿಸುವ ಪರಿಣಾಮಕಾರಿ ವಿಧಾನವಾಗಬಹುದು.

ಆದರೆ ಇಲ್ಲಿ ಎರಡು ಉದ್ದೇಶಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು.

ಮೊದಲನೆಯದು: ಯುವ ಪ್ರತಿಭೆಗಳಿಗೆ ಅವಕಾಶ ನೀಡುವುದು.

ಹೊಸ ಗಾಯಕರು, ಸಂಗೀತ ಸಂಯೋಜಕರು, ವಾದ್ಯ ಕಲಾವಿದರು, ನೃತ್ಯ ತಂಡಗಳು, ಕಾಲೇಜುಗಳ ಸಾಂಸ್ಕೃತಿಕ ಬಳಗಗಳು ಮತ್ತು ಸ್ಥಳೀಯ ಸ್ವತಂತ್ರ ಸಂಗೀತ ತಂಡಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸುವುದು.

ಎರಡನೆಯದು: ಯುವಜನರನ್ನು ಆಕರ್ಷಿಸುವುದು.

ಜನಪ್ರಿಯ ಗಾಯಕರನ್ನು, ಸಂಗೀತ ನಿರ್ದೇಶಕರನ್ನು ಮತ್ತು ಸಿನಿಮಾ ಕಲಾವಿದರನ್ನು ಆಹ್ವಾನಿಸಿ ದೊಡ್ಡ ಪ್ರಮಾಣದ ಪ್ರೇಕ್ಷಕರನ್ನು ಸೆಳೆಯುವುದು.

ಈ ಎರಡೂ ಗುರಿಗಳು ಪರಸ್ಪರ ವಿರೋಧಿಗಳಲ್ಲ. ಆದರೆ ಎರಡನೆಯ ಉದ್ದೇಶಕ್ಕೆ ಮಾತ್ರ ಹೆಚ್ಚಿನ ಆದ್ಯತೆ ದೊರೆತು ಮೊದಲನೆಯದು ಹಿನ್ನೆಲೆಗೆ ಸರಿದರೆ ಯುವ ದಸರಾದ ಮೂಲ ಆಶಯವೇ ಪ್ರಶ್ನಾರ್ಹವಾಗುತ್ತದೆ. ಯುವಜನರನ್ನು ಕಾರ್ಯಕ್ರಮಕ್ಕೆ ಕರೆತರುವುದಷ್ಟೇ ಸಾಕಾಗದು. ಅವರಲ್ಲಿ ಪ್ರತಿಭೆ ಹೊಂದಿರುವವರಿಗೆ ಮುಂದಿನ ವೃತ್ತಿಜೀವನಕ್ಕೆ ಸಹಾಯವಾಗುವ ಅವಕಾಶವನ್ನೂ ನೀಡಬೇಕು.

ಯುವ ದಸರಾ ಯಾಕಿಷ್ಟು ದುಬಾರಿ?

Mysuru: Yuva Dasara begins today; popular artistes to enthrall public for five days

2024 ಮತ್ತು 2025ರ ದಸರಾ ವೆಚ್ಚದ ಲೆಕ್ಕಪತ್ರಗಳನ್ನು ಗಮನಿಸಿದರೆ ಯುವ ದಸರಾ ಅತ್ಯಂತ ದುಬಾರಿ ಕಾರ್ಯಕ್ರಮಗಳಲ್ಲಿ ಒಂದಾಗಿರುವುದು ಸ್ಪಷ್ಟವಾಗುತ್ತದೆ. 2024ರಲ್ಲಿ ಒಟ್ಟು ದಸರಾ ವೆಚ್ಚದ ಸುಮಾರು ಶೇ. 43ರಷ್ಟು ಯುವ ದಸರಾಕ್ಕೆ ಖರ್ಚಾಗಿತ್ತು. 2025ರಲ್ಲಿ ಯುವ ದಸರಾದ ವೆಚ್ಚ ₹15.94 ಕೋಟಿಯಾಗಿತ್ತು. ಇದು ಸಣ್ಣ ಮೊತ್ತವಲ್ಲ.  ಸಾರ್ವಜನಿಕ ಹಣದ ಬಳಕೆಗೆ ಸಂಬಂಧಿಸಿದಂತೆ ಇಂತಹ ಅಂಕಿಅಂಶಗಳನ್ನು ಪರಿಶೀಲಿಸುವುದು ಸಹಜವೂ ಅಗತ್ಯವೂ ಆಗಿದೆ.

ಆದರೆ, ಖರ್ಚು ಕೇವಲ ಗಾಯಕರ ಸಂಭಾವನೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ವೇದಿಕೆ ನಿರ್ಮಾಣ, ಧ್ವನಿ ಮತ್ತು ಬೆಳಕಿನ ವ್ಯವಸ್ಥೆ, ವಿದ್ಯುತ್, ಭದ್ರತೆ, ಸಂಚಾರ ನಿರ್ವಹಣೆ, ತಾತ್ಕಾಲಿಕ ಮೂಲಸೌಕರ್ಯ, ನಿರ್ವಹಣಾ ವೆಚ್ಚ ಮತ್ತು ಇತರ ವ್ಯವಸ್ಥೆಗಳೂ ಒಟ್ಟು ವೆಚ್ಚದ ಭಾಗವಾಗಿರಬಹುದು. ಹೀಗಾಗಿ ₹15.94 ಕೋಟಿ ಸಂಪೂರ್ಣವಾಗಿ ಕಲಾವಿದರಿಗೇ ನೀಡಲಾಗಿದೆ ಎಂದು ಹೇಳಲಾಗದು.

ಆದರೆ ಇಷ್ಟೊಂದು ದೊಡ್ಡ ಮೊತ್ತವನ್ನು ಖರ್ಚು ಮಾಡಿದಾಗ ಕರ್ನಾಟಕದ ಯುವ ಕಲಾವಿದರಿಗೆ ದೊರೆಯುವ ದೀರ್ಘಕಾಲೀನ ಪ್ರಯೋಜನವೇನು?

ದೊಡ್ಡ ಸಂಗೀತ ಕಾರ್ಯಕ್ರಮದಿಂದ ಸಾವಿರಾರು ಜನರಿಗೆ ಮನರಂಜನೆ ಸಿಗಬಹುದು. ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯಬಹುದು. ಆದರೆ ಹೊಸ ಕಲಾವಿದರಿಗೆ ಅವಕಾಶ, ಸ್ಥಳೀಯ ಸಾಂಸ್ಕೃತಿಕ ಉದ್ಯಮಕ್ಕೆ ಆದಾಯ, ಯುವ ಪ್ರತಿಭೆಗಳಿಗೆ ತರಬೇತಿ ಮತ್ತು ಮುಂದಿನ ಕಾರ್ಯಕ್ರಮಗಳಿಗೆ ಆಹ್ವಾನ ದೊರೆಯುತ್ತಿದೆಯೇ ಎಂಬುದನ್ನೂ ಅಳೆಯಬೇಕು. ವೆಚ್ಚವನ್ನು ಸಮರ್ಥಿಸಿಕೊಳ್ಳಲು ಜನಸಮೂಹದ ಗಾತ್ರ ಮಾತ್ರ ಸಾಕಾಗದು. ಸಾಂಸ್ಕೃತಿಕ ಪರಿಣಾಮ ಮತ್ತು ಸ್ಥಳೀಯ ಪ್ರತಿಭೆಗಳ ಬೆಳವಣಿಗೆಯೂ ಮುಖ್ಯ.

ಸಾರ್ವಜನಿಕರ ಹಣ ಈ ರೀತಿಯಾಗಿ ಖರ್ಚಾದಾಗ, ಆ ಖರ್ಚಿನ ಲೆಕ್ಕಪತ್ರ ಪಾರದರ್ಶಕವಾಗಿರಬೇಕು

  • ಪ್ರಮುಖ ಕಲಾವಿದರಿಗೆ ಎಷ್ಟು ಸಂಭಾವನೆ ನೀಡಲಾಯಿತು?
  • ವೇದಿಕೆ, ಧ್ವನಿ, ಬೆಳಕು ಮತ್ತು ತಾಂತ್ರಿಕ ವ್ಯವಸ್ಥೆಗಳಿಗೆ ಎಷ್ಟು ವೆಚ್ಚವಾಯಿತು?
  • ಕಾರ್ಯಕ್ರಮ ನಿರ್ವಹಣೆಯ ಗುತ್ತಿಗೆಯನ್ನು ಯಾರಿಗೆ ನೀಡಲಾಯಿತು?
  • ಟೆಂಡರ್ ಪ್ರಕ್ರಿಯೆ ನಡೆದಿದ್ದರೆ ಎಷ್ಟು ಸಂಸ್ಥೆಗಳು ಭಾಗವಹಿಸಿದ್ದವು?
  • ಪ್ರಾಯೋಜಕತ್ವದಿಂದ ಬಂದ ಹಣ ಎಷ್ಟು?
  • ಟಿಕೆಟ್ ಮತ್ತು ವಿಶೇಷ ಪ್ರವೇಶ ಪಾಸ್‌ಗಳಿಂದ ಬಂದ ಆದಾಯ ಎಷ್ಟು?
  • ಸ್ಥಳೀಯ ಕಲಾವಿದರಿಗೆ ನೀಡಿದ ಸಂಭಾವನೆ ಮತ್ತು ಅವಕಾಶಗಳ ಪ್ರಮಾಣವೆಷ್ಟು?

ಈ ವಿವರಗಳನ್ನು ಹೊರತರುವುದರಿಂದ ಆಯೋಜಕರ ವಿರುದ್ಧ ಆರೋಪ ಮಾಡುವುದು ಉದ್ದೇಶವಲ್ಲ. ಸಾರ್ವಜನಿಕ ಹಣವನ್ನು ಪಾರದರ್ಶಕವಾಗಿ ಬಳಸಲಾಗಿದೆ ಎಂಬ ವಿಶ್ವಾಸವನ್ನು ಜನರಲ್ಲಿ ಮೂಡಿಸುವುದೇ ಉದ್ದೇಶ. ದಸರಾ ಲೆಕ್ಕಪತ್ರವನ್ನು ಹಲವು ತಿಂಗಳ ನಂತರ ಪ್ರಕಟಿಸುವ ಬದಲು, ಪ್ರತಿಯೊಂದು ಕಾರ್ಯಕ್ರಮದ ಅಂತಿಮ ವೆಚ್ಚವನ್ನು ಸಾಧ್ಯವಾದಷ್ಟು ಬೇಗ ಸಾರ್ವಜನಿಕವಾಗಿ ಪ್ರಕಟಿಸಿದರೆ ಇಂತಹ ಚರ್ಚೆಗಳಿಗೆ ಸ್ಪಷ್ಟವಾದ ಉತ್ತರ ಸಿಗುತ್ತದೆ.

ಹೊರರಾಜ್ಯದ ಕಲಾವಿದರಿಗೆ ಅವಕಾಶ ನೀಡುವುದು ತಪ್ಪೇ?

Yuva Dasara 2025 ಮೈಸೂರು ದಸರಾ ಸಂಭ್ರಮ-2025 ಯುವ ದಸರಾ 2025 ಕಾರ್ಯಕ್ರಮದ ನೇರಪ್ರಸಾರ | Mysurulive@MMTV-News

2026ರ ಯುವ ದಸರಾದಲ್ಲಿ ಶಂಕರ–ಎಹಸಾನ್–ಲಾಯ್, ಸಿಡ್ ಶ್ರೀರಾಮ್ ಮತ್ತು ಜಾಸ್ಮಿನ್ ಸ್ಯಾಂಡ್ಲಾಸ್ ಅವರಂತಹ ಜನಪ್ರಿಯ ಕಲಾವಿದರು ಕಾರ್ಯಕ್ರಮ ನೀಡಲು ನಿಗದಿಯಾಗಿದ್ದಾರೆ. ಅದೇ ಸಮಯದಲ್ಲಿ ಕನ್ನಡದ ಸಂಗೀತ ಸಂಯೋಜಕ ಬಿ. ಅಜನೀಶ್ ಲೋಕನಾಥ್ ಅವರ ತಂಡ ಮತ್ತು ಸ್ಯಾಂಡಲ್‌ವುಡ್ ಕಲಾವಿದರಿಗಾಗಿ ಪ್ರತ್ಯೇಕ ಸಂಜೆಯೂ ಇದೆ. ಹೊರರಾಜ್ಯದ ಕಲಾವಿದರನ್ನು ಕರೆಸುವುದು ತನ್ನಷ್ಟಕ್ಕೆ ತಪ್ಪಲ್ಲ. ಭಾರತದ ವಿವಿಧ ಭಾಷೆಗಳ ಸಂಗೀತ ಮತ್ತು ಕಲಾ ಪ್ರಕಾರಗಳನ್ನು ಪರಿಚಯಿಸುವುದರಿಂದ ಯುವಜನರಿಗೆ ವಿಭಿನ್ನ ಅನುಭವ ದೊರೆಯುತ್ತದೆ. ಜನಪ್ರಿಯ ಕಲಾವಿದರು ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯಬಹುದು. ಇದರಿಂದ ಮೈಸೂರು ಪ್ರವಾಸೋದ್ಯಮಕ್ಕೂ ನೆರವಾಗಬಹುದು. ಆದರೆ, ಹೊರರಾಜ್ಯದ ಕಲಾವಿದರನ್ನು ಆಹ್ವಾನಿಸುವ ಉದ್ದೇಶವು ಸ್ಥಳೀಯ ಕಲಾವಿದರಿಗೆ ಅವಕಾಶ ನಿರಾಕರಿಸುವಂತಿರಬಾರದು.

ಮೈಸೂರಿನಲ್ಲಿ ಶಾಸ್ತ್ರೀಯ ಸಂಗೀತ, ಭರತನಾಟ್ಯ, ಜನಪದ ಸಂಗೀತ, ನಾಟಕ, ಸುಗಮ ಸಂಗೀತ, ವಾದ್ಯ ಸಂಗೀತ ಮತ್ತು ಆಧುನಿಕ ಸಂಗೀತದ ಹಲವು ಪ್ರತಿಭಾವಂತ ಕಲಾವಿದರು ಇದ್ದಾರೆ. ಮೈಸೂರು ಮಾತ್ರವಲ್ಲದೆ, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನೂರಾರು ಯುವ ಕಲಾವಿದರು ಬೆಳೆಯುತ್ತಿದ್ದಾರೆ. ಅವರಿಗೆ ಅವಕಾಶ ನೀಡದೆ, ಜನಪ್ರಿಯತೆಯ ಆಧಾರದ ಮೇಲೆ ಹೊರರಾಜ್ಯದ ಕಲಾವಿದರಿಗೆ ಮಾತ್ರ ಹೆಚ್ಚಿನ ವೇದಿಕೆ ನೀಡಿದರೆ ಸ್ಥಳೀಯ ಪ್ರತಿಭೆಗಳು ಹಿನ್ನಡೆ ಅನುಭವಿಸಬಹುದು.

ಸಮಸ್ಯೆ ಹೊರರಾಜ್ಯದ ಕಲಾವಿದರು ಬರುವುದು ಅಲ್ಲ. ಸ್ಥಳೀಯ ಕಲಾವಿದರಿಗೆ ಸಮಾನ ಗೌರವ, ಗೋಚರತೆ ಮತ್ತು ಬೆಳವಣಿಗೆಯ ಅವಕಾಶ ಸಿಗುತ್ತಿದೆಯೇ ಎಂಬುದೇ ಮುಖ್ಯ.2026ರ ವೇಳಾಪಟ್ಟಿಯಲ್ಲಿ ಸ್ಥಳೀಯ ಕಲಾವಿದರು ಮತ್ತು ಬೇರೆಡೆಗಳಿಂದ ಆಯ್ಕೆಯಾದ ಕಲಾವಿದರಿಗೆ ಸಂಜೆ 5.30ರಿಂದ 7.30ರವರೆಗೆ ಅವಕಾಶವಿದ್ದು, ಮುಖ್ಯ ಸಂಗೀತ ಕಾರ್ಯಕ್ರಮಗಳು 7.30ರಿಂದ 10.30ರವರೆಗೆ ನಡೆಯುತ್ತವೆ. ಸಮಯದ ಈ ವ್ಯತ್ಯಾಸವನ್ನೇ ಗಮಸಿದಲ್ಲಿ, ಹೆಚ್ಚಿನ ಪ್ರೇಕ್ಷಕರು ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿಸಿ ಮುಖ್ಯ ಕಾರ್ಯಕ್ರಮದ ಸಮಯದಲ್ಲಿ ಭಾಗವಹಿಸಿದರೆ, ಸ್ಥಳೀಯ ಕಲಾವಿದರ ಕಾರ್ಯಕ್ರಮಗಳಿಗೆ ಕೇವಲ ಬೆರಳೆಣಿಕೆಯಷ್ಟು ಪ್ರೇಕ್ಷಕರು ಸೇರುವ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ಒಂದು ರೀತಿಯಾಗಿ ಅವಮಾನ ಮಾದುತ್ತಿರುವುದು ಸ್ಪಷ್ಟವಾಗುತ್ತದೆ. ಸ್ಥಳೀಯ ಪ್ರತಿಭೆಗಳಿಗೆ ಕಾಟಾಚಾರಕ್ಕೆ ಕೇವಲ ಆರಂಭಿಕ ಸಮಯ ನೀಡುವ ಮೂಲಕ ಒಂದು ರೀತಿಯಾದ ತಾರತಮ್ಯ ಮಾಡುತ್ತಿರುವುದು ಎದ್ದು ಕಾಣುತ್ತಿದೆ. ಯಾರಿಗೆ ಗೊತ್ತು ಮುಂದೊಂದು ದಿನ ಇದೇ ಸ್ಥಳೀಯ ಪ್ರತಿಭೆ ಬಹಳ ಜನಪ್ರಿಯವಾದರೆ, ಇದೇ ದಸರಾ ಆಯೋಜಕರು ಅಂತಹವರಿಗೆ ಕೋಟಿ ಕೋಟಿ ಹಣ ನೀಡಿ ಪ್ರಮುಖ ಸಮಯದಲ್ಲಿ ಕಾರ್ಯಕ್ರಮ ನೀಡುವುದನ್ನೂ ನೋಡಿದ್ದೇವೆ.

ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡುವುದು ಹೇಗೆ?

ಮೈಸೂರು ಯುವ ದಸರಾಗೆ ಚಾಲನೆ ನೀಡಿದ ನಟ ಪ್ರಭುದೇವ | Public TV - Latest Kannada News, Public TV Kannada Live, Public TV News

ಕರ್ನಾಟಕದ ಕಲಾವಿದರಿಗೆ ಅವಕಾಶ ನೀಡುವುದು ಎಂದರೆ ಕೇವಲ ಕನ್ನಡ ಹಾಡುಗಳನ್ನು ಹಾಡಿಸುವುದಲ್ಲ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೆಳೆಯುತ್ತಿರುವ ವಿಭಿನ್ನ ಕಲಾ ಪ್ರಕಾರಗಳನ್ನು ಗುರುತಿಸುವುದು ಕೂಡ ಮುಖ್ಯ. ಮೈಸೂರು ದಸರಾ ಜನಪದ ಕಲೆಗೆ ಪ್ರಸಿದ್ಧವಾಗಿದೆ. ಜಿಲ್ಲಾಡಳಿತದ ಇತಿಹಾಸದ ವಿವರಣೆಯಲ್ಲಿಯೂ ಡೊಳ್ಳು ಕುಣಿತ, ಪೂಜಾ ಕುಣಿತ ಮತ್ತು ಇತರ ಜನಪದ ಪ್ರಕಾರಗಳು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಭಾಗವೆಂದು ದಾಖಲಿಸಲಾಗಿದೆ.

ಯುವ ದಸರಾದಲ್ಲಿ ಕೆಳಗಿನ ರೀತಿಯ ಕಲಾ ಪ್ರದರ್ಶನಗಳನ್ನು ಪರಿಣಾಮಕಾರಿಯಾಗಿ ಒಳಗೊಳ್ಳಬಹುದು:

  1. ಜನಪದ ಮತ್ತು ಸಾಂಪ್ರದಾಯಿಕ ಕಲೆ: ಡೊಳ್ಳು ಕುಣಿತ, ಕಂಸಾಳೆ, ವೀರಗಾಸೆ, ಪೂಜಾ ಕುಣಿತ, ಯಕ್ಷಗಾನ, ಕೋಲಾಟ ಮತ್ತು ಇತರ ಪ್ರಾದೇಶಿಕ ಕಲೆಗಳು.
  2. ಯುವ ಸಂಗೀತ ತಂಡಗಳು: ಕನ್ನಡದ ಸ್ವತಂತ್ರ ಸಂಗೀತ ತಂಡಗಳು, ರಾಕ್ ಬ್ಯಾಂಡ್‌ಗಳು, ಹಿಪ್-ಹಾಪ್ ಕಲಾವಿದರು, ಫ್ಯೂಷನ್ ಸಂಗೀತಗಾರರು ಮತ್ತು ಹೊಸ ಸಂಯೋಜಕರು.
  3. ಕಾಲೇಜುಗಳ ಪ್ರತಿಭೆಗಳು: ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಸಂಗೀತ, ನೃತ್ಯ ಮತ್ತು ನಾಟಕ ತಂಡಗಳಿಗೆ ಆಯ್ಕೆಯ ಅವಕಾಶ.
  4. ಜಿಲ್ಲಾವಾರು ಪ್ರತಿಭೆಗಳ ಆಯ್ಕೆ: ಮೈಸೂರು ಮಾತ್ರವಲ್ಲದೆ ಮಲೆನಾಡು, ಕರಾವಳಿ, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಮತ್ತು ಹಳೆಯ ಮೈಸೂರು ಭಾಗದ ಕಲಾವಿದರಿಗೂ ಸಮಾನ ಅವಕಾಶ.
  5. ಹೊಸ ಕಲಾವಿದರಿಗೆ ಮುಖ್ಯ ವೇದಿಕೆ: ಪ್ರೇಕ್ಷಕರ ಮುಂದೆ ನೇರ ಪ್ರದರ್ಶನದ ಅನುಭವ ಮತ್ತು ಜನಪ್ರಿಯತೆ ಗಳಿಸುವ ಅವಕಾಶ.

ಇದಕ್ಕೆ ಸ್ಪಷ್ಟ ಆಯ್ಕೆ ವಿಧಾನವೂ ಇರಬೇಕು. ಅರ್ಜಿಗಳನ್ನು ಆಹ್ವಾನಿಸಿ, ಪ್ರದರ್ಶನದ ಗುಣಮಟ್ಟ, ಹೊಸತನ, ಕಲಾತ್ಮಕ ಸಾಮರ್ಥ್ಯ ಮತ್ತು ಪ್ರಾದೇಶಿಕ ಪ್ರತಿನಿಧಿತ್ವದ ಆಧಾರದಲ್ಲಿ ಕಲಾವಿದರನ್ನು ಆಯ್ಕೆ ಮಾಡಬೇಕು. ಆಯ್ಕೆಯಾಗದವರಿಗೆ ಕನಿಷ್ಠ ಕಾರಣಗಳ ವಿವರಣೆಯನ್ನು ನೀಡುವ ವ್ಯವಸ್ಥೆಯೂ ಇರಬಹುದು.

ಹೀಗೆ ಮಾಡಿದರೆ ಆಯ್ಕೆ ಪಕ್ಷಪಾತದಿಂದ ನಡೆದಿದೆ ಎಂಬ ಅನುಮಾನ ಕಡಿಮೆಯಾಗುತ್ತದೆ.

ಯುವ ದಸರಾ ಹೆಸರಿನಲ್ಲಿ ಅಸಹ್ಯಕರ ಅಥವಾ ಅಶ್ಲೀಲ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದು ಸರಿಯೇ?

ಸಾರ್ವಜನಿಕ ಹಣದಿಂದ ನಡೆಯುವ ಉತ್ಸವದಲ್ಲಿ ಕಾರ್ಯಕ್ರಮಗಳ ಗುಣಮಟ್ಟ, ಭಾಷೆ, ಹಾಡುಗಳ ಸಾಹಿತ್ಯ, ನೃತ್ಯ ಸಂಯೋಜನೆ ಮತ್ತು ವೇದಿಕೆಯ ವರ್ತನೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವುದರಲ್ಲಿ ತಪ್ಪಿಲ್ಲ. ಯುವಜನರಿಗೆ ಮನರಂಜನೆ ಬೇಕು. ಆಧುನಿಕ ಸಂಗೀತ, ನೃತ್ಯ ಮತ್ತು ಹೊಸ ಕಲಾ ಪ್ರಕಾರಗಳು ಬೇಕು. ಆದರೆ ಆಧುನಿಕತೆ ಎಂದರೆ ಅಸಭ್ಯತೆ ಎಂದು ಅರ್ಥವಲ್ಲ. ಹಾಗೆಯೇ ಸಾಂಪ್ರದಾಯಿಕ ಕಲೆ ಎಂದರೆ ಮಾತ್ರ ಉನ್ನತ ಮಟ್ಟದ ಕಲೆ, ಆಧುನಿಕ ಸಂಗೀತ ಎಂದರೆ ಕೆಳಮಟ್ಟದ ಕಲೆ ಎಂಬ ಅಭಿಪ್ರಾಯವೂ ಸರಿಯಲ್ಲ.

Chandan Shetty Love Proposal to Niveditha Gowda | Mysuru Yuva Dasara Live Concert | - YouTubeಆದರೆ 2019ರಲ್ಲಿ ಇದೇ ವೇದಿಕೆಯ ಮೇಲೆ ಕನ್ನಡದ ರ್ಯಾಪ್ ಗಾಯಕ ಚಂದನ್ ಶೆಟ್ಟಿ ತನ್ನ ಅಂದಿನ ಪ್ರೇಯಸಿ ನಿವೇದಿತಾ ಗೌಡಳಿಗೆ ಇದೇ ವೇದಿಕೆಯ ಮೇಲೆ ಹೂ ಗುಚ್ಚವನ್ನು ನೀಡುವ ಮೂಲಕ ತಮ್ಮ ಪ್ರೀತಿಯ ನಿವೇದನೆ ಮಾಡಿಕೊಳ್ಳುವ ಮೂಲಕ ಈ ವೇದಿಕೆಯನ್ನು ದುರ್ಬಳಕೆ ಮಾಡಿಕೊಂದಿದ್ದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಯಾವುದೇ ಕಾರ್ಯಕ್ರಮದಲ್ಲಿ ನಿಜವಾಗಿಯೂ ಆಕ್ಷೇಪಾರ್ಹ ವಿಷಯ ಕಂಡುಬಂದರೆ, ಅದು ಯಾವ ಕಲಾವಿದನ ಪ್ರದರ್ಶನವಾಗಿತ್ತು ಎಂಬುದರ ಆಧಾರದಲ್ಲಿ ಅಲ್ಲದೆ, ಎಲ್ಲ ಕಲಾವಿದರಿಗೂ ಒಂದೇ ರೀತಿಯ ನಿಯಮ ಅನ್ವಯಿಸಬೇಕು. ಯುವ ದಸರಾ ಆಯೋಜಕರು ಮುಂಚಿತವಾಗಿ ಕಾರ್ಯಕ್ರಮಗಳ ವರ್ತನಾ ಸಂಹಿತೆ ರೂಪಿಸಬೇಕು. ಅಸಭ್ಯ ಅಥವಾ ಅವಹೇಳನಕಾರಿ ವಿಷಯಗಳ ಕುರಿತು ದೂರು ಸ್ವೀಕರಿಸುವ ವ್ಯವಸ್ಥೆ ಇರಬೇಕು. ಅಗತ್ಯವಿದ್ದರೆ ಸ್ವತಂತ್ರ ಸಮಿತಿ ಪರಿಶೀಲನೆ ನಡೆಸಬೇಕು. ಇದರಿಂದ ಕಲಾವಿದರ ಸ್ವಾತಂತ್ರ್ಯವನ್ನು ಗೌರವಿಸುವುದರ ಜೊತೆಗೆ ಸಾರ್ವಜನಿಕ ಕಾರ್ಯಕ್ರಮದ ಘನತೆಯನ್ನೂ ಕಾಪಾಡಬಹುದು.

ಯುವ ದಸರಾದಲ್ಲಿ ಆಯೋಜಕರ ಕುಟುಂಬದ್ದೇ ಪ್ರಾಬಲ್ಯ?

ದಸರಾ ಸಮಿತಿ ಪಟ್ಟಿಯಲ್ಲಿ ಯುವ ದಸರಾಕ್ಕೆ ಪ್ರತ್ಯೇಕ ಉಪಸಮಿತಿ ಇದೆ. ಅದರಲ್ಲಿ ಪೊಲೀಸ್ ವರಿಷ್ಠಾಧಿಕಾರಿ, ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಇತರ ಸರ್ಕಾರಿ ಅಧಿಕಾರಿಗಳಿಗೆ ವಿವಿಧ ಜವಾಬ್ದಾರಿಗಳನ್ನು ನೀಡಲಾಗಿದೆ.

ಆದರೆ, ಕಲಾವಿದರ ಆಯ್ಕೆ, ಕಾರ್ಯಕ್ರಮ ನಿರ್ವಹಣೆಯ ಗುತ್ತಿಗೆ ಅಥವಾ ಎಲ್ಲ ನಿರ್ಧಾರಗಳೂ ಪಾರದರ್ಶಕವಾಗಿರದೇ  ಆಯೋಜಕರ ಕುಟುಂಬವೇ ಎಲ್ಲವನ್ನು ನಿಯಂತ್ರಿಸುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿರುವುದು ನಿಜಕ್ಕೂ ದುರಾದೃಷ್ಟಕರ. ಅವರ ಇಷ್ಟದ ಕಲಾವಿದ/ಕಲಾವಿದೆಯರನ್ನು ಆಯ್ಕೆ ಮಾಡಲು ಪರೋಕ್ಷವಾಗಿ ಒತ್ತಡ ಹೇರುವುದಲ್ಲದೇ, ಕಾರ್ಯಕ್ರಮ ಮುಂದಿನ ಹಲವಾರು ಆಸನಗಳು ಆಯ್ಕೆ ಸಮಿತಿಯ ಕಡೆಯವರಿಗೇ ಮೀಸಲಾಗಿರುವುದು ಈಗ ಸುಳ್ಳಾಗಿಯೇನೂ ಉಳಿದಿಲ್ಲ

ಯುವ ದಸರಾದಲ್ಲಿ ಕಾಣಿಸಿಕೊಳ್ಳುವ ಪ್ರಮುಖ ಸಮಸ್ಯೆಗಳು

ಸಿನಿಮಾ ತಾರೆಯರ ಮೇಲೆ ಅತಿಯಾದ ಅವಲಂಬನೆ : ದೊಡ್ಡ ಹೆಸರುಗಳು ಪ್ರೇಕ್ಷಕರನ್ನು ಸೆಳೆಯುತ್ತವೆ ಎಂಬುದು ನಿಜ. ಆದರೆ ಯುವ ದಸರಾ ಜನಪ್ರಿಯ ಗಾಯಕರು ಮತ್ತು ಸಂಗೀತ ನಿರ್ದೇಶಕರ ಕಾರ್ಯಕ್ರಮಗಳಿಗಷ್ಟೇ ಸೀಮಿತವಾದರೆ ಹೊಸ ಪ್ರತಿಭೆಗಳಿಗೆ ಅವಕಾಶ ಸೀಮಿತವಾಗಬಹುದು.

ಸ್ಥಳೀಯ ಕಲಾವಿದರಿಗೆ ಕಡಿಮೆ ಸಮಯ : ಸ್ಥಳೀಯ ಕಲಾವಿದರಿಗೆ ಮುಖ್ಯ ಕಾರ್ಯಕ್ರಮಕ್ಕಿಂತ ಮೊದಲಿನ ಸಮಯವನ್ನಷ್ಟೇ ನೀಡಿದರೆ, ಅವರಿಗೆ ಸಿಗುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ. ಅವರು ಮುಖ್ಯ ವೇದಿಕೆಯಲ್ಲಿ ಪ್ರದರ್ಶನ ನೀಡುವ ಅವಕಾಶವನ್ನೂ ಹೊಂದಿರಬೇಕು.

ವೆಚ್ಚ ಮತ್ತು ಸಾಂಸ್ಕೃತಿಕ ಲಾಭದ ನಡುವೆ ಸಮತೋಲನದ ಕೊರತೆ : ಕೋಟ್ಯಂತರ ರೂಪಾಯಿ ಖರ್ಚು ಮಾಡಿದ ನಂತರ ಕಾರ್ಯಕ್ರಮ ಎಷ್ಟು ಜನರನ್ನು ಸೆಳೆಯಿತು ಎಂಬುದರ ಜೊತೆಗೆ ಎಷ್ಟು ಸ್ಥಳೀಯ ಕಲಾವಿದರಿಗೆ ಅವಕಾಶ ದೊರೆಯಿತು, ಎಷ್ಟು ಹೊಸ ಕಲಾವಿದರು ಮುಂದಿನ ಕೆಲಸ ಪಡೆದರು ಎಂಬುದನ್ನೂ ಪರಿಶೀಲಿಸಬೇಕು.

ಆಯ್ಕೆ ಪ್ರಕ್ರಿಯೆಯ ಬಗ್ಗೆ ಮಾಹಿತಿ ಕೊರತೆ : ಕಲಾವಿದರ ಆಯ್ಕೆ ಮಾನದಂಡಗಳು, ಸಂಭಾವನೆ, ಗುತ್ತಿಗೆ ಮತ್ತು ಪ್ರಾಯೋಜಕತ್ವದ ವಿವರಗಳು ಎಲ್ಲರಿಗೂ ಸುಲಭವಾಗಿ ದೊರೆಯದಿದ್ದರೆ ಅನುಮಾನಗಳು ಹೆಚ್ಚುತ್ತವೆ.

ದಸರಾ ಸಂಸ್ಕೃತಿಯೊಂದಿಗೆ ದುರ್ಬಲ ಸಂಪರ್ಕ : ಯುವ ದಸರಾ ಆಧುನಿಕವಾಗಿರಬಹುದು. ಆದರೆ ಅದು ಮೈಸೂರಿನ ಸಂಸ್ಕೃತಿಯಿಂದ ಸಂಪೂರ್ಣವಾಗಿ ದೂರವಾಗಬಾರದು. ಕನ್ನಡ ಭಾಷೆ, ಸ್ಥಳೀಯ ಸಂಗೀತ, ಕರ್ನಾಟಕದ ಜನಪದ, ಯುವ ಬರಹಗಾರರು ಮತ್ತು ಸ್ವತಂತ್ರ ಕಲಾವಿದರಿಗೆ ವೇದಿಕೆ ನೀಡುವುದು ಕಾರ್ಯಕ್ರಮದ ವೈಶಿಷ್ಟ್ಯವನ್ನು ಹೆಚ್ಚಿಸುತ್ತದೆ. ಕಲೆಯ ಯಶಸ್ಸಿನ ಮೌಲ್ಯಮಾಪನಕ್ಕೆ ಸ್ಪಷ್ಟ ಮಾನದಂಡಗಳ ಕೊರತೆ : ಜನಸಮೂಹ ಎಷ್ಟು ದೊಡ್ಡದಿತ್ತು ಎಂಬುದೇ ಯಶಸ್ಸಿನ ಏಕೈಕ ಮಾನದಂಡವಾಗಬಾರದು. ಯುವ ದಸರಾ ಹೊಸ ಕಲಾವಿದರಿಗೆ ಎಷ್ಟು ಅವಕಾಶ ನೀಡಿತು ಮತ್ತು ಸ್ಥಳೀಯ ಸಾಂಸ್ಕೃತಿಕ ಚಟುವಟಿಕೆಗಳನ್ನು ಎಷ್ಟು ಉತ್ತೇಜಿಸಿತು ಎಂಬುದನ್ನೂ ವಾರ್ಷಿಕವಾಗಿ ಮೌಲ್ಯಮಾಪನ ಮಾಡಬೇಕು.

ಯುವ ದಸರಾ ವಿಐಪಿಗಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ರಿಂಗ್ ರಸ್ತೆಗಳು ಅಘೋಷಿತ ಬಂದ್

ಮೈಸೂರು ನಗರದಲ್ಲಿನ ಜನದಟ್ಟಣೆಯನ್ನು ಕಡಿಮೆ ಮಾಡುವ ಸಲುವಾಗಿ ಕೆಲ ವರ್ಷಗಳಿಂದ ಯುವ ದಸರಾವನ್ನು ನಗರದ ಕೇಂದ್ರ ಭಾಗದಿಂದ ಹೊರಗೆ, ಮೈಸೂರು–ನಂಜನಗೂಡು ರಸ್ತೆಯಲ್ಲಿರುವ ಉತ್ತನಹಳ್ಳಿ ಪ್ರದೇಶದಲ್ಲಿ ಆಯೋಜಿಸಲಾಗುತ್ತಿದ್ದು, ಅಲ್ಲಿ ನಡೆಯುವ ಸಂಗೀತ ಕಾರ್ಯಕ್ರಮಗಳು, ಯುವಜನರ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಪ್ರೇಕ್ಷಕರು ಮತ್ತು ವಿಐಪಿಗಳಿಗೆ ಸುಗಮ ಸಂಚಾರಕ್ಕೆ ಆದ್ಯತೆ ನೀಡುವ ನೆಪದಲ್ಲಿ ಸುತ್ತಮುತ್ತಲಿನ ಹಳ್ಳಿಗಳ ಸಾಮಾನ್ಯ ಜನರ ದೈನಂದಿನ ಬದುಕಿಗೆ ತೊಂದರೆಯಾಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

  • ರಸ್ತೆಗಳು ಆಘೋಷಿತ ಬಂದ್: ಅಧಿಕೃತವಾಗಿ ಪ್ರಕಟಿಸಿದ ಸಂಚಾರ ಬದಲಾವಣೆಗಳಿಗಿಂತ ಹೆಚ್ಚಾಗಿ, ಅಘೋಷಿತವಾಗಿ ರಸ್ತೆಗಳಲ್ಲಿ ಹೇರುವ ನಿರ್ಬಂಧಗಳಿಂದಾಗಿ ಅಲ್ಲಿ ನೂರಾರು ಬ್ಯಾರಿಕೇಡ್‌ಗಳು ಮತ್ತು ಪೊಲೀಸರ ಸೂಚನೆಯಿಂದಾಗಿ ಸ್ಥಳೀಯ ಜನರಿಗೆ ಪರ್ಯಾಯ ಮಾರ್ಗ ಹುಡುಕುವ ಅನಿವಾರ್ಯತೆಗಿಂತ ತೊಂದರೆಯೇ ಹೆಚ್ಚಾಗಿದೆ.
  • ದೈನಂದಿನ ಸಂಚಾರಕ್ಕೆ ಅಡ್ಡಿ: ಇದರಿಂದಾಗಿ ರಾತ್ರಿಯ ಹೊತ್ತಿನಲ್ಲಿ ಉದ್ಯೋಗದಿಂದ ಮನಗೆ ಬರುವವರಿಗೆ, ವಿದ್ಯಾರ್ಥಿಗಳಿಗೆ, ರೈತರು, ವ್ಯಾಪಾರಿಗಳು ಮತ್ತು ಆಸ್ಪತ್ರೆಗಳಿಗೆ ತೆರಳುವವರಿಗೆ ಈ ರೀತಿಯ ಸುತ್ತುಮಾರ್ಗಗಳ ಮೂಲಕ ವಿಪರೀತ ತೊಂದರೆಯಾಗುತ್ತಿದೆ.
  • ವಿಐಪಿ ಸಂಚಾರಕ್ಕೆ ಅತಿಯಾದ ಆದ್ಯತೆ: ಗಣ್ಯರ ಭದ್ರತೆ ಮುಖ್ಯವಾದರೂ, ಸಾರ್ವಜನಿಕ ರಸ್ತೆಗಳು ಕೇವಲ ಗಣ್ಯರ ಅನುಕೂಲಕ್ಕಾಗಿ ಇರುವುದಲ್ಲ. ಸ್ಥಳೀಯ ನಿವಾಸಿಗಳ ಸಂಚಾರ ಹಕ್ಕುಗಳಿಗೂ ಸಮಾನ ಮಹತ್ವವಿದೆ.
  • ತುರ್ತು ಸಂದರ್ಭಗಳ ಆತಂಕ: ಆಂಬ್ಯುಲೆನ್ಸ್, ಅಗ್ನಿಶಾಮಕ ವಾಹನಗಳು ಹಾಗೂ ತುರ್ತು ವೈದ್ಯಕೀಯ ನೆರವಿಗೆ ಯಾವುದೇ ಅಡ್ಡಿಯಾಗದಂತೆ ವ್ಯವಸ್ಥೆ ರೂಪಿಸಬೇಕು.
  • ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೆ ತೊಂದರೆ: ರಸ್ತೆ ಪ್ರವೇಶ ನಿರ್ಬಂಧಗಳಿಂದ ಸಣ್ಣ ವ್ಯಾಪಾರಿಗಳು, ಅಂಗಡಿಕಾರರು ಮತ್ತು ದಿನಗೂಲಿ ಕಾರ್ಮಿಕರ ಕೆಲಸದ ಮೇಲೂ ಪರಿಣಾಮ ಬೀರಬಹುದು.

ದಸರಾ ಮೈಸೂರಿನ ಹೆಮ್ಮೆ. ಯುವ ದಸರಾ ಯುವಜನರ ಉತ್ಸಾಹದ ಪ್ರತೀಕ. ಆದರೆ ಹಬ್ಬದ ಸಂಭ್ರಮದ ಬೆಲೆ ಸುತ್ತಮುತ್ತಲಿನ ಹಳ್ಳಿಗಳ ಜನರು ತಮ್ಮ ದೈನಂದಿನ ಬದುಕಿನಲ್ಲಿ ತೊಂದರೆ ಅನುಭವಿಸುವಂತಿರಬಾರದು. ವಿಐಪಿಗಳ ಅನುಕೂಲಕ್ಕಾಗಿ ಸಾಮಾನ್ಯ ಜನರನ್ನು ರಸ್ತೆಯಲ್ಲಿ ಕಾಯಿಸುವುದು ಆಡಳಿತದ ಯಶಸ್ಸಿನ ಮಾನದಂಡವಾಗಬಾರದು. ಸಾರ್ವಜನಿಕರ ಸುರಕ್ಷತೆ ಮತ್ತು ಸಂಚಾರದ ಅನುಕೂಲವನ್ನು ಕಾಪಾಡಿಕೊಂಡೇ ಗಣ್ಯರ ಭದ್ರತೆಯನ್ನು ಖಚಿತಪಡಿಸುವುದು ಉತ್ತಮ ಆಡಳಿತದ ಕರ್ತವ್ಯ.

ಯುವ ದಸರಾವನ್ನುಮೈಸೂರಿನ ಗುರುತನ್ನು ಉಳಿಸಿಕೊಂಡೇ  ಹೇಗೆ ಸುಧಾರಿಸಬಹುದು?

ಮೈಸೂರು ಭಾರತದ ಪ್ರಮುಖ ಸಾಂಸ್ಕೃತಿಕ ನಗರಗಳಲ್ಲಿ ಒಂದು. ಅದರ ಹೆಸರನ್ನು ಕೇಳಿದಾಗ ಅರಮನೆ, ಶಾಸ್ತ್ರೀಯ ಸಂಗೀತ, ಚಿತ್ರಕಲೆ, ನಾಟಕ, ಯೋಗ, ಸಾಹಿತ್ಯ ಮತ್ತು ಜನಪದ ಪರಂಪರೆ ನೆನಪಾಗುತ್ತವೆ. ಹೀಗಿರುವಾಗ ಯುವ ದಸರಾ ಕೇವಲ ಇತರ ನಗರಗಳಲ್ಲಿ ನಡೆಯುವ ಬೃಹತ್ ಸಂಗೀತ ಕಾರ್ಯಕ್ರಮಗಳ ಮಾದರಿಯನ್ನು ಅನುಸರಿಸಬೇಕೆಂದಿಲ್ಲ. ಮೈಸೂರಿನ ವಿಶಿಷ್ಟ ಸಾಂಸ್ಕೃತಿಕ ಗುರುತನ್ನು ಉಳಿಸಿಕೊಂಡೇ ಆಧುನಿಕ ಸಂಗೀತ ಮತ್ತು ಮನರಂಜನೆಗೆ ಅವಕಾಶ ನೀಡಬಹುದು.

ಕನ್ನಡದ ಹೊಸ ಸಂಗೀತಗಾರರು, ಸ್ಥಳೀಯ ರಾಕ್ ಬ್ಯಾಂಡ್‌ಗಳು, ಜನಪದ ಸಂಗೀತದ ಹೊಸ ರೂಪಾಂತರಗಳು, ಯುವ ನೃತ್ಯ ಸಂಯೋಜಕರು, ರಂಗಭೂಮಿ ಕಲಾವಿದರು ಮತ್ತು ವಿದ್ಯಾರ್ಥಿ ತಂಡಗಳನ್ನು ಒಳಗೊಂಡ ಕಾರ್ಯಕ್ರಮ ರೂಪಿಸಬಹುದು. ಮೈಸೂರು ದಸರಾದಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡುವುದೆಂದರೆ ಇತರ ಭಾಷೆಗಳನ್ನು ಹೊರಗಿಡುವುದಲ್ಲ. ಕನ್ನಡದ ನೆಲದ ಕಲಾವಿದರು ಮತ್ತು ಕಲಾಪ್ರಕಾರಗಳಿಗೆ ನ್ಯಾಯಯುತ ಸ್ಥಾನ ಕಲ್ಪಿಸುವುದಾಗಿದೆ. ಅದೇ ರೀತಿ ಹೊರರಾಜ್ಯದ ಕಲಾವಿದರನ್ನು ಆಹ್ವಾನಿಸುವುದೆಂದರೆ ಕನ್ನಡ ಸಂಸ್ಕೃತಿಯನ್ನು ಕಡೆಗಣಿಸುವುದಲ್ಲ. ಆದರೆ ಆಹ್ವಾನಿಸುವ ಕಲಾವಿದರ ಜನಪ್ರಿಯತೆಯ ನಡುವೆ ಸ್ಥಳೀಯ ಪ್ರತಿಭೆಗಳು ಮರೆಯಾಗದಂತೆ ನೋಡಿಕೊಳ್ಳುವುದು ಆಯೋಜಕರ ಹೊಣೆ.

ಯುವ ದಸರಾ ಯಾರಿಗಾಗಿ?

ಯುವ ದಸರಾ ಯಾರಿಗಾಗಿ ನಡೆಯುತ್ತದೆ? ಜನಪ್ರಿಯ ಕಲಾವಿದರಿಗಾಗಿ? ಪ್ರಾಯೋಜಕರಿಗಾಗಿ? ಪ್ರೇಕ್ಷಕರಿಗಾಗಿ? ಅಥವಾ ಯುವಜನರ ಭವಿಷ್ಯಕ್ಕಾಗಿ? ನಿಜವಾಗಿ ಈ ಎಲ್ಲರಿಗೂ ಇದರೊಂದಿಗೆ ಸಂಬಂಧವಿದೆ. ಆದರೆ ಸಾರ್ವಜನಿಕ ಹಣದಿಂದ ನಡೆಯುವ ನಾಡಹಬ್ಬದ ಕಾರ್ಯಕ್ರಮದಲ್ಲಿ ಯುವಜನರ ಸಾಂಸ್ಕೃತಿಕ ಬೆಳವಣಿಗೆಗೆ ಆದ್ಯತೆ ದೊರೆಯಬೇಕು. ಪ್ರೇಕ್ಷಕರು ದೊಡ್ಡ ಸಂಗೀತ ಕಾರ್ಯಕ್ರಮಗಳನ್ನು ಇಷ್ಟಪಡಬಹುದು. ಸರ್ಕಾರವೂ ಪ್ರವಾಸೋದ್ಯಮ ಮತ್ತು ಸಾರ್ವಜನಿಕ ಮನರಂಜನೆಯನ್ನು ಉತ್ತೇಜಿಸಬಹುದು. ಇವುಗಳನ್ನೆಲ್ಲ ಸಮತೋಲನಗೊಳಿಸಬಹುದು. ಅದಕ್ಕಾಗಿ ಸ್ಥಳೀಯ ಕಲಾವಿದರಿಗೆ ಮುಖ್ಯ ವೇದಿಕೆ ನೀಡುವುದು, ಆಯ್ಕೆ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸುವುದು, ವೆಚ್ಚದ ವಿವರಗಳನ್ನು ಬಹಿರಂಗಪಡಿಸುವುದು ಮತ್ತು ಸಾಂಸ್ಕೃತಿಕ ಪರಿಣಾಮವನ್ನು ಮೌಲ್ಯಮಾಪನ ಮಾಡುವುದು ಅಗತ್ಯ. ಹೊರರಾಜ್ಯದ ಕಲಾವಿದರಿಗೆ ಅವಕಾಶ ನೀಡುವುದನ್ನು ಸಂಪೂರ್ಣವಾಗಿ ತಿರಸ್ಕರಿಸುವ ಬದಲು, ಸ್ಥಳೀಯರಿಗೆ ನ್ಯಾಯಯುತ ಅವಕಾಶ ಸಿಗುವಂತೆ ವ್ಯವಸ್ಥೆ ರೂಪಿಸಬೇಕು. ಯುವ ದಸರಾ ತನ್ನ ಹೆಸರಿನ ಅರ್ಥವನ್ನು ಮರೆಯಬಾರದು. ಅದು ಯುವಜನರ ಹಬ್ಬವಾಗಿಯೇ ಉಳಿಯಬೇಕು—ಕೇವಲ ದೊಡ್ಡ ವೇದಿಕೆ, ದುಬಾರಿ ಬೆಳಕು ಮತ್ತು ಜನಪ್ರಿಯ ತಾರೆಯರ ಪ್ರದರ್ಶನಗಳ ಹಬ್ಬವಾಗಬಾರದು.

ಕೊನೆಯ ಮಾತು

ಮೈಸೂರು ದಸರಾ ಕರ್ನಾಟಕದ ಹೆಮ್ಮೆ. ಆ ಹೆಮ್ಮೆಯ ಭಾಗವಾಗಿರುವ ಯುವ ದಸರಾವನ್ನು ಟೀಕಿಸುವುದಕ್ಕಿಂತ ಅದರ ಆಶಯಕ್ಕೆ ತಕ್ಕಂತೆ ಇನ್ನಷ್ಟು ಉತ್ತಮಗೊಳಿಸುವುದು ಮುಖ್ಯ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸುವುದು ತಪ್ಪಲ್ಲ. ಆದರೆ ಅದರೊಂದಿಗೆ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡುವುದು, ಜನಪದ ಕಲೆಯನ್ನು ಆಧುನಿಕ ಯುವಜನರಿಗೆ ಪರಿಚಯಿಸುವುದು, ಹೊಸ ಪ್ರತಿಭೆಗಳಿಗೆ ಬೆಳವಣಿಗೆಯ ಅವಕಾಶ ಕಲ್ಪಿಸುವುದು ಮತ್ತು ಸಾರ್ವಜನಿಕ ಹಣದ ಲೆಕ್ಕವನ್ನು ಪಾರದರ್ಶಕವಾಗಿ ನೀಡುವುದು ಅನಿವಾರ್ಯ. ಯುವ ದಸರಾ ಮೈಸೂರಿನ ಸಾಂಸ್ಕೃತಿಕ ನೆಲೆಯನ್ನು ಮರೆತು ಜನಪ್ರಿಯತೆಯ ಹಿಂದೆ ಓಡುವ ಕಾರ್ಯಕ್ರಮವಾಗದೆ, ಕರ್ನಾಟಕದ ಕಲಾ ಪ್ರತಿಭೆಗಳನ್ನು ದೇಶದ ಮುಂದೆ ಪರಿಚಯಿಸುವ ವೇದಿಕೆಯಾಗಬೇಕು.

ಹೊರರಾಜ್ಯದ ಕಲಾವಿದರು ಬರಲಿ. ಆದರೆ ಸ್ಥಳೀಯರು ಮರೆಯಾಗಬಾರದು. ಆಧುನಿಕ ಸಂಗೀತ ಮೊಳಗಲಿ; ಆದರೆ ಕನ್ನಡದ ಮಣ್ಣಿನ ಸೊಗಡು ಕಳೆದುಹೋಗಬಾರದು. ಪ್ರೇಕ್ಷಕರು ಸಂಭ್ರಮಿಸಲಿ; ಆದರೆ ಸಾರ್ವಜನಿಕ ಹಣದ ಜವಾಬ್ದಾರಿಯೂ ಉಳಿಯಲಿ. ಇದೇ ಯುವ ದಸರಾವನ್ನು ಇನ್ನಷ್ಟು ಅರ್ಥಪೂರ್ಣ, ಪಾರದರ್ಶಕ ಮತ್ತು ನಿಜವಾದ ಯುವಜನೋತ್ಸವವನ್ನಾಗಿಸುವ ದಾರಿ.

ಏನಂತೀರೀ?
ನಿಮ್ಮವನೇ ಉಮಾಸುತ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ