ಬೆಂಕಿಯಲ್ಲಿ ಅರಳಿದ ಹೂ ಅಕ್ಕೈ ಪದ್ಮಶಾಲಿ
ಅಕ್ಕೈ ಪದ್ಮಶಾಲಿ ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಾರ್ತಿ, ಗಾಯಕಿ ಮತ್ತು ಸರ್ವೋಚ್ಚ ನ್ಯಾಯಾಲಯದ ಸಮಾನ ಅವಕಾಶ ನೀತಿ ಸಮಿತಿ ಸದಸ್ಯೆ. ಇವರು ತಮ್ಮ ಸಾಧನೆಗಳಿಂದ ಈ ಮಟ್ಟಕ್ಕೆ ಏರಿದ್ದು ಹೇಗೆ ಎಂದು ಅವರಿಂದಲೇ ವಿವರವಾಗಿ ತಿಳಿಯೋಣವೇ……?
ಅಕ್ಕೈ ಪದ್ಮಶಾಲಿ ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಾರ್ತಿ, ಗಾಯಕಿ ಮತ್ತು ಸರ್ವೋಚ್ಚ ನ್ಯಾಯಾಲಯದ ಸಮಾನ ಅವಕಾಶ ನೀತಿ ಸಮಿತಿ ಸದಸ್ಯೆ. ಇವರು ತಮ್ಮ ಕಾರ್ಯ ಚಟುವಟಿಕೆಗಾಗಿ, ಅತ್ಯುನ್ನತ ನಾಗರಿಕ ಗೌರವವಾದ ರಾಜ್ಯೋತ್ಸವ ಪ್ರಶಸ್ತಿ ಮತ್ತು ಭಾರತೀಯ ವರ್ಚುವಲ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಮೊದಲ ಟ್ರಾನ್ಸ್ ಜೆಂಡರ್ ಮಹಿಳೆ.

ಭಾರತದಲ್ಲೇ ಮೊದಲು
ತಮ್ಮ ಲಿಂಗವನ್ನು ಮಹಿಳೆ ಎಂದು ನಮೂದಿಸುವ ಚಾಲನಾ ಪರವಾನಗಿಯನ್ನು ಪಡೆದ ದೇಶದ ಮೊದಲ ಟ್ರಾನ್ಸ್ ಜೆಂಡರ್ ವ್ಯಕ್ತಿ ಅಕ್ಕೈ ಪದ್ಮಶಾಲಿ. ತಮ್ಮ ವಿವಾಹವನ್ನು ನೋಂದಾಯಿಸಿಕೊಂಡ ಕರ್ನಾಟಕದ ಮೊದಲ ಟ್ರಾನ್ಸ್ ಜೆಂಡರ್ ವ್ಯಕ್ತಿ ಕೂಡ ಹೌದು.
ಅಕ್ಕೈ ಪದ್ಮಶಾಲಿಯವರ ಪುತ್ರ ಅವಿನ್ ಗೆ ತನ್ನ ತಂದೆಯ ಹೆಸರಿಲ್ಲದ ಪಾಸ್ ಪೋರ್ಟ್ ದೊರೆತಿದೆ. ಅಪ್ಪನ ಹೆಸರಿಲ್ಲದ ಟ್ರಾನ್ಸ್ ಜೆಂಡರ್ ತಾಯಿಯ ಹೆಸರಿನಲ್ಲಿ ಪಾಸ್ ಪೋರ್ಟ್ ನೀಡಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲು. ಲೈಂಗಿಕ ಅಲ್ಪಸಂಖ್ಯಾತ ಸಮುದಾಯದಿಂದ ಕಾಂಗ್ರೆಸ್ ರಾಜ್ಯ ಘಟಕಕ್ಕೂ ಸೇರ್ಪಡೆಯಾದ ಮೊದಲ ವ್ಯಕ್ತಿ ಅಕ್ಕೈ ಪದ್ಮಶಾಲಿ.
2017ರ ನವೆಂಬರ್ ರಂದು ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಭಾರತಕ್ಕೆ ಭೇಟಿ ನೀಡಿದಾಗ, ಅಕ್ಕೈ ಪದ್ಮಶಾಲಿ ಟೌನ್ ಹಾಲ್ ನ ಭಾಗವಾಗಲು ಆಹ್ವಾನಿತರಾದ ಮೊದಲ ಟ್ರಾನ್ಸ್ ಮಹಿಳೆ. ಇದಕ್ಕೂ ಮೊದಲು 2015ರಲ್ಲಿ ಅವರನ್ನು ಶ್ವೇತಭವನಕ್ಕೆ ಆಹ್ವಾನಿಸಲಾಗಿತ್ತು. ಭಾರತದ ಸಿಜೆಐ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಭಾರತದ ರಾಷ್ಟ್ರಪತಿಗಳು ಅಕ್ಕೈ ಪದ್ಮಶಾಲಿಯವರನ್ನು ಆಹ್ವಾನಿಸಿದ್ದರು.
ಅಕ್ಕೈ ಪದ್ಮಶಾಲಿ ಬೆಂಗಳೂರಿನಲ್ಲಿ ಇರುವ ಹಕ್ಕುಗಳ ಗುಂಪಾದ ಸಂಗಮದಲ್ಲಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. ಲೈಂಗಿಕ ಅಲ್ಪಸಂಖ್ಯಾತರ ಜೊತೆ ಲಿಂಗತ್ವ ಅಲ್ಪಸಂಖ್ಯಾತರ ಘನತೆ ಮತ್ತು ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ ರ ಕಠಿಣ ಕಾನೂನನ್ನು ರದ್ದುಗೊಳಿಸಬೇಕು ಎಂಬುದು ಅವರ ನಿಲುವು. ಏಕೆಂದರೆ ಈ ಕಾನೂನಿನಡಿ ಪೊಲೀಸರು ಅವರನ್ನು ಹಲವಾರು ಬಾರಿ ನಿಂದಿಸಿದ್ದಾರೆ, ಲೈಂಗಿಕತೆಗೆ ಒತ್ತಾಯಿಸುತ್ತಾರೆ ಎನ್ನುತ್ತಾರೆ ಅಕ್ಕೈ.

`ಒಂದೆಡೆ‘ ಸಂಘಟನೆ
ಮಕ್ಕಳು, ಮಹಿಳೆಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ಪ್ರತಿಪಾದಿಸಲು ಅಕ್ಕೈ `ಒಂದೆಡೆ’ ಎಂಬ ಮಾನವ ಹಕ್ಕುಗಳ ಸಂಘಟನೆಯನ್ನು ಸ್ಥಾಪಿಸಿದ್ದಾರೆ. ಈ ಸಂಸ್ಥೆ ಮೂಲಕ ಸಮಾಜವನ್ನು ತಲುಪಲು `ಭಯ ಬಿಡಿ ಪ್ರೀತಿ ಮಾಡಿ’ ಎಂಬ ಆಂದೋಲನವನ್ನೂ ಹಮ್ಮಿಕೊಂಡಿದ್ದಾರೆ. ಇವೆಲ್ಲ ಸಾಧನೆಯ ಹಿಂದೆ ಅಕ್ಕೈ ಪದ್ಮಶಾಲಿ ಪಟ್ಟ ಪರಿಶ್ರಮ, ನೋವು, ತೊಳಲಾಟ, ಗೊಂದಲ ಒಂದೆರಡಲ್ಲ. ಅವರ ಪ್ರತಿ ಹಂತ ಮುಳ್ಳಿನ ಹಾದಿಯೇ ಆಗಿತ್ತು.
ಬಾಲ್ಯದಲ್ಲಿ ಪುರುಷ ಲಿಂಗ ಪಾತ್ರಕ್ಕೆ ಹೊಂದಿಕೊಳ್ಳಲು ತನ್ನ ಶಕ್ತಿಮೀರಿ ಪ್ರಯತ್ನಿಸಿದರು. ಅದು ಸಾಧ್ಯವಾಗದಿದ್ದಾಗ 12ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಯತ್ನವನ್ನೂ ಮಾಡಿದ್ದರು. ಮಾನಸಿಕ ತೊಳಲಾಟ ತಾನು ಗಂಡೋ… ಹೆಣ್ಣೋ…? ತನ್ನ ದೇಹ ಗಂಡಿನಂತಿದ್ದರೆ, ತನ್ನ ಭಾವನೆಗಳೇಕೆ ಹೆಣ್ಣಿನಂತಿವೆ ಎಂದು ತಮ್ಮನ್ನು ತಾವು ಕೇಳಿಕೊಂಡು, ಗೊಂದಲಕ್ಕೆ ಒಳಗಾಗುತ್ತಿದ್ದರು. ತನ್ನ ಸಹೋದರಿಯ ಬಟ್ಟೆಗಳನ್ನು ಧರಿಸಿದಾಗ ಅಥವಾ ಹುಡುಗಿಯರೊಂದಿಗೆ ಆಟವಾಡಿದಾಗೆಲ್ಲಾ ತನ್ನ ಪೋಷಕರೇಕೆ ಕೋಪಗೊಳ್ಳುತ್ತಾರೆ? ಏಕೆ ಗದರಿಸುತ್ತಾರೆ ಎಂಬ ಪ್ರಶ್ನೆಗಳು ಅವರನ್ನು ಕಾಡುತ್ತಿದ್ದವು.
ಈ ತೊಳಲಾಟ, ಮನೆಯವರ ತಿರಸ್ಕಾರ ಭಾವ, ಸಮಾಜದ ಗೇಲಿ ಮಾತುಗಳಿಗೆ ಹೈರಾಣಾದ ಆ ಪುಟ್ಟ ಕಂದ ಮನೆ ಬಿಟ್ಟು ಮಾರುಕಟ್ಟೆಯ ಫ್ಲೈಓವರ್ ಕೆಳಗೆ ಗೋಣಿಚೀಲ ಹೊದ್ದು ಮಲಗಿ ಜೀವನ ಸಾಗಿಸಲು ಮುಂದಾಯಿತು. ಪುಟ್ಟ ಕಂದನೆಂದೂ ಎಣಿಸದೆ, ಹದ್ದುಗಳಂತೆ ಕುಕ್ಕಿ ತಿನ್ನಲು ಮೈಮೇಲೆ ಬಿದ್ದ ಪುರುಷ ಮೃಗಗಳೆಷ್ಟೋ….? ಗಂಡಸರ ದರ್ಪ, ಕಾಮ ಪಿಪಾಸುಗಳ ಕಾಟ ತಪ್ಪಿಸಿಕೊಳ್ಳಲು, ಹೊಟ್ಟೆ ಹಸಿವು ತಾಳಲಾರದ ಕಂದ, ಗಂಡು ಹುಡುಗನಂತೆ ವೇಷ ಹಾಕಿ ಬದುಕುವುದಾಗಿ ತಂದೆಗೆ ಮಾತುಕೊಟ್ಟು ಮತ್ತೆ ತನ್ನ ಮನೆ ಸೇರಿತು.
ತನ್ನಲ್ಲಿ ಆಗುತ್ತಿರುವ ಮಾನಸಿಕ ತೊಳಲಾಟವನ್ನು ತನ್ನ ಸಹೋದರನ ಬಳಿ ಹೇಳಿಕೊಂಡಾಗ ಅಕ್ಕೈಳನ್ನು ಅರ್ಥ ಮಾಡಿಕೊಳ್ಳಲು ಮತ್ತು ಹೇಗಿದ್ದಾಳೋ ಹಾಗೆಯೇ ಸ್ವೀಕರಿಸಲು ಪೋಷಕರ ಮನವೊಲಿಸಲು ಸಹೋದರ ಪ್ರಯತ್ನಿಸಿದ. ಆದರೆ ಪೋಷಕರು ಹಲವಾರು ವೈದ್ಯರು ಮತ್ತು ಇತರ ತಜ್ಞರ ಬಳಿ ಕರೆದೊಯ್ಯುತ್ತಿದ್ದರು. ಮಂತ್ರವಾದಿಗಳ ಬಳಿ ಕರೆದೊಯ್ದು ಚಿತ್ರಹಿಂಸೆಯನ್ನೂ ಕೊಡಿಸಿದರು.
ಹಿನ್ನೆಲೆ ಮೂಲತಃ ಬೆಂಗಳೂರಿನ ಮಧ್ಯಮ ಕುಟುಂಬದಲ್ಲಿ ಹುಡುಗನಾಗಿ ಹುಟ್ಟಿದವರು ಅಕ್ಕೈ ಪದ್ಮಶಾಲಿ. ಅವರ ತಂದೆ ಭಾರತೀಯ ರಕ್ಷಣಾ ಸಚಿವಾಲಯದ ಏರೋನಾಟಿಕ್ ಡೆವಲಪ್ ಮೆಂಟ್ ಸಂಸ್ಥೆಯಲ್ಲಿ ಕಾರ್ಮಿಕರಾಗಿದ್ದರು. ತಾಯಿ ಗೃಹಿಣಿ, ಒಬ್ಬ ಅಕ್ಕ ಹಾಗೂ ತಮ್ಮನ ಜೊತೆ ಜಗದೀಶನಾಗಿ ಹುಟ್ಟಿದವರು ಅಕ್ಕೈ.
ಗೆಜ್ಜೆ ತೊಟ್ಟು, ಅಮ್ಮನ ಸೀರೆಯುಟ್ಟು ಸಿಂಗಾರ ಮಾಡಿಕೊಳ್ಳುತ್ತಿದ್ದ ಜಗದೀಶ್, ತಲೆಗೆ ಟವೆಲ್ ಸುತ್ತಿಕೊಂಡು, ಉದ್ದ ಕೂದಲಿನವಳೆಂದು ನಟಿಸುತ್ತಿದ್ದ. ಅಕ್ಕನ ಚಪ್ಪಲಿಗಳನ್ನು ಕದ್ದು, ಅವುಗಳಲ್ಲಿ ಹೆಜ್ಜೆಯಿಟ್ಟು ನಡೆಯಲು ಪ್ರಯತ್ನಿಸುತ್ತಿದ್ದ. ಸ್ನೇಹಿತರ ನಡುವೆ ಹುಡುಗಿಯಂತೆಯೇ ವರ್ತಿಸುತ್ತಿದ್ದ. ನನ್ನಲ್ಲಿ ಹೆಣ್ಣಿನ ಲಕ್ಷಣಗಳು ತೋರುತ್ತಿರುವುದನ್ನು ಪೋಷಕರು ಗಮನಿಸಿದ್ದರು. ನೀನು ಹುಡುಗನಾಗಿ ಹುಟ್ಟಿದ್ದೀಯ, ಹುಡುಗನಂತೆಯೇ ಮಾತನಾಡಬೇಕು, ಗಂಡಸಿನಂತೆಯೇ ನಡೆಯಬೇಕು ಎಂದು ಗದರಿಸುತ್ತಿದ್ದರು. ಹುಡುಗನಂತೆ ವರ್ತಿಸಲು, ಮಾತನಾಡಲು ಪ್ರಯತ್ನಿಸಿದಷ್ಟೂ ಕಷ್ಟವೇ ಆಗುತ್ತಿತ್ತು. ಇದರಿಂದಾಗಿ ಅಪ್ಪನಿಂದ ಪೆಟ್ಟುಗಳೆಷ್ಟೋ….. ಒದೆಸಿಕೊಂಡಿದ್ದೆಷ್ಟೋ….. ನೆರೆಹೊರೆಯವರ ಹೀಯಾಳಿಕೆ ಮಾತುಗಳೆಷ್ಟೋ….? ತಂದೆಯ ಘನತೆ, ಪ್ರತಿಷ್ಠೆ ಆಕೆಯ ಜೀವನವನ್ನು ಹೈರಾಣಾಗಿಸಿಬಿಟ್ಟಿತ್ತು. ತನ್ನದಲ್ಲದ ಬದುಕು ಅವರನ್ನು ಉಸಿರು ಬಿಗಿಹಿಡಿಯುವಂತೆಯೇ ಮಾಡಿತ್ತು.

ಮನೆಯೇ ಸೆರೆಮನೆ
ಕೊನೆಗೆ ಮನೆಯೇ ಸೆರೆಮನೆಯಂತಾಯಿತು. ಮನೆಯವರ ಎದುರು ಗಂಡಿನಂತೆ, ತನ್ನೊಳಗೆ ಹೆಣ್ಣಿನಂತೆ ಬದುಕುವ ಪರಿಸ್ಥಿತಿ. ಈ ದ್ವಿಪಾತ್ರಕ್ಕೆ ನನ್ನನ್ನು ಪೋಷಕರು, ಆಸ್ಪತ್ರೆಗಳಿಗೆ, ದೆವ್ವ ಹಿಡಿದಿದೆ ಎಂದು ಮಂತ್ರವಾದಿಗಳ ಬಳಿಗೂ ಕರೆದೊಯ್ದರು. ಹುಡುಗರೊಂದಿಗೆ ಆಟವಾಡಲು ಹೋದರೆ, ಪ್ಯಾಂಟ್ ಶರ್ಟ್ ಎಳೆದು ಕಿರುಕುಳ ಕೊಡುತ್ತಿದ್ದರು. ಹುಡುಗಿಯರ ಬಳಿ ಕುಂಟೆ ಬಿಲ್ಲೆ ಆಡಲು ಹೋದರೆ ಆಟದಿಂದಲೇ ಹೊರ ಹಾಕುತ್ತಿದ್ದರು. ಹಾಗಾಗಿ ಮನೆ, ಸಮಾಜ ಎಲ್ಲೆಡೆಯಿಂದಲೂ ತಿರಸ್ಕಾರ ಅನುಭವಿಸಿದೆ ಎನ್ನುತ್ತಾರೆ ಅಕ್ಕೈ.
ಇತ್ತ ಕಡೆ ಬಡತನದಿಂದ ಮನೆಯ ಪರಿಸ್ಥಿತಿಯೂ ಹದಗೆಟ್ಟಿತ್ತು. ಸತ್ತ ಹೆಣಕ್ಕೆ ಜನ ಇಡುತ್ತಿದ್ದ ಎಡೆಯನ್ನು ತಿನ್ನುವ ಪರಿಸ್ಥಿತಿ ಕುಟಂಬಕ್ಕೆ ಇತ್ತು. ಮೃತದೇಹಗಳ ಮೇಲೆ ಇಡುತ್ತಿದ್ದ ಹಣ ಎತ್ತಿಕೊಂಡು, ಅದರಲ್ಲಿ ಹಾಲು ಸಕ್ಕರೆ ಕೊಂಡುತಂದದ್ದೂ ಉಂಟು. ಮಕ್ಕಳ ಹಸಿವು ನೀಗಿಸಲು ತಾಯಿ ಸಾಂಬಾರು ಪುಡಿ ಮಾರಾಟ ಮಾಡುವ ಪರಿಸ್ಥಿತಿ ಎದುರಾಯಿತು.

ಬದಲಾದ ಲೈಫ್ ಸ್ಟೈಲ್
ತನ್ನ ಧ್ವನಿ, ದೈಹಿಕ ಹಾವಭಾವ, ಉಡುತ್ತಿದ್ದ ಬಟ್ಟೆ, ಮಾಡಿಕೊಳ್ಳುತ್ತಿದ್ದ ಮೇಕಪ್ ನಿಂದಲೇ ಜನ ಕಿರುಕುಳ ನೀಡುತ್ತಿದ್ದರು. ತಾನು ಯಾವ ಲಿಂಗ ಹೊಂದಿದ್ದೇನೆಂದು ಸ್ನೇಹಿತರಿಗೆ ಕುತೂಹಲ. ಮನೆ, ಶಾಲೆ, ಸಮಾಜ ಎಲ್ಲದರಿಂದಲೂ ಒಂದಲ್ಲಾ ಒಂದು ರೀತಿಯ ಕಿರುಕುಳ ತಾಳಲಾರದೆ ಸಾವಿನ ಕುಣಿಕೆಗೆ ಕೊರಳೊಡ್ಡುವ ಸಾಹಸವನ್ನೂ ಮಾಡಿದ್ದರು ಅಕ್ಕೈ.
ಪ್ರತಿಷ್ಠೆಯೇ ಮುಖ್ಯ ಎಂದುಕೊಂಡ ತಂದೆ, ಮಗನನ್ನು ಮನೆಯಿಂದ ಹೊರಗಟ್ಟಿದರು. ಮನೆಯಿಂದ ಹೊರ ಬಂದ ಬಾಲಕ, ಬೆಡ್ ಶೀಟ್, ದಿಂಬು, ಚಾಪೆ ಏನೂ ಇಲ್ಲದೆ ಕೊರೆವ ಚಳಿಯಲ್ಲಿ ಮಾರುಕಟ್ಟೆ ಫ್ಲೈಓವರ್ ಬಳಿ ಬಂದು ಕುಳಿತುಬಿಟ್ಟ. ಮನೆಗೆ ಹಿಂದಿರುಗಿದರೆ, ಅಪ್ಪ ತನ್ನನ್ನು ಕೊಲ್ಲುತ್ತಾರೆಂಬ ಭಯ. ಫ್ಲೈಓವರ್ ಕೆಳಗೆ ವಾಸ ಪ್ರಾರಂಭವಾಯಿತು. ಬದುಕು ಬಹಳ ಅಸಹನೀಯವಾಗಿಬಿಟ್ಟಿತು.

ಬಾಣಲೆಯಿಂದ ಬೆಂಕಿಗೆ
ವಿಪರೀತ ಚಳಿ, ತಿನ್ನಲು ಊಟವಿರಲಿಲ್ಲ. ನನ್ನ ನಡಾವಳಿ, ತೊಟ್ಟ ಬಟ್ಟೆ ನೋಡಿದ ಸಾರ್ವಜನಿಕ ಟಾಯ್ಲೆಟ್ ಗೆ ಬರುತ್ತಿದ್ದ ಜನ ಸೆಕ್ಸ್ ಮಾಡಲು ಬಯಸಿದರು. ಅದು ಹೇಗೆ ಮಾಡುವುದು ಎಂದೂ ತಿಳಿಯಲಿಲ್ಲ. ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಮಾಡುವಂತೆ ಹೇಳುತ್ತಿದ್ದರು. ಸಾರ್ವಜನಿಕ ಟಾಯ್ಲೆಟ್ ನ ಗಂಡಸರು ಮೂತ್ರ ವಿಸರ್ಜಿಸುವ ಜಾಗದ ಮೂಲೆಯಲ್ಲೇ, ಬಾಲಕನ ಮೇಲೆ ಅತ್ಯಾಚಾರ ನಡೆಸಿದರು.
ಅಲ್ಲಿಂದ ಜಾಗ ಖಾಲಿ ಮಾಡುವಂತೆ ಗದರುತ್ತಿದ್ದ ಸ್ಥಳೀಯ ಪೊಲೀಸರೇ ಹಲವಾರು ಬಾರಿ ಸೆಕ್ಸ್ ಮಾಡಿದ್ದೂ ಇದೆ. ಬೀದಿಯ ಬದುಕು ಎಷ್ಟು ದುಸ್ತರ ಎಂಬುದನ್ನು ಮನಗಂಡ ಬಾಲಕ, ಕುಟುಂಬ ಎಷ್ಟೇ ಹಿಂಸೆ ಕೊಟ್ಟರೂ ಪರವಾಗಿಲ್ಲ, ಅದನ್ನೇ ಸ್ವೀಕರಿಸುವೆ ಎಂದು ನಿರ್ಧರಿಸಿದ.

ಮತ್ತೆ ಮನೆಗೆ
ಅಪ್ಪನ ಹೊಡೆತ ತಿಂದು ಮನೆಯೊಳಗೆ ಸೇರಿದೆ. ಮನೆಯವರ ಷರತ್ತುಗಳನ್ನು ಒಪ್ಪಿಕೊಂಡು ಹುಡುಗನಂತೆ ವರ್ತಿಸಲು ಪ್ರಯತ್ನಿಸಿದೆ. ನನ್ನ ಗುರುತಿನ ಬಗ್ಗೆ ನನಗೇ ಅಸಹ್ಯಭಾವ ಮೂಡಿ ಮತ್ತೆ ನೇಣಿನ ಕುಣಿಕೆಗೆ ಕೊರಳೊಡ್ಡಿದೆ. ಅದ್ಯಾಕೋ ಸಾವಿಗೂ ನಾನೆಂದರೆ ತಾತ್ಸಾರ. ಜೊತೆಗೆ ಮನದಲ್ಲಿ ಹಲವಾರು ಪ್ರಶ್ನೆಗಳು ಎದುರಿಗೆ ಬಂದು ನಿಂತವು.
ನಾನೇಕೆ ಸಾಯಬೇಕು….? ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ಈ ಸಮಾಜಕ್ಕೆ ಏಕೆ ಹೆದರಬೇಕು? ನನ್ನಂಥವರಿಗಾಗಿ ಬದುಕಬೇಕು ಎನ್ನುವ ದೃಢ ಸಂಕಲ್ಪ ಇಡೀ ಜೀವನವನ್ನೇ ಬದಲಾಯಿಸಿಬಿಟ್ಟಿತು, ಎಂದು ಅಕ್ಕೈ ನೆನಪಿಸಿಕೊಳ್ಳುತ್ತಾರೆ.
ತಮ್ಮನ ಸ್ನೇಹಿತರು ನನ್ನ ಬಗ್ಗೆ ಲೇವಡಿ ಮಾಡುತ್ತಿದ್ದರು. ನೀನೇಕೆ ನನ್ನಂತೆ ವರ್ತಿಸುವುದಿಲ್ಲ ಎಂದು ತಮ್ಮ ಪ್ರಶ್ನಿಸುತ್ತಿದ್ದ. ನಾನು ಏನಾಗಿ ಹುಟ್ಟಿದೆ, ಹೆಣ್ತನದ ಲಕ್ಷಣಗಳು ಭಾವನೆಗಳೊಂದಿಗೆ ಹೇಗೆ ಬೆಸೆದುಕೊಂಡಿವೆ, ನನಗಾದ ಆಘಾತಗಳು, ಬೀದಿಯಲ್ಲಿ ಬದುಕಿದ ಹತ್ತು ದಿನಗಳ ಬದುಕಿನ ಬಗ್ಗೆ ತಮ್ಮನಿಗೆ ವಿವರಿಸಿದಾಗ, ಅವನಿಗೆ ಮನವರಿಕೆಯಾಯಿತು. ಗಾಢವಾದ ವಿಷಾದ ಅವನೊಳಗೆ ಮೂಡಿತು. ಆದರೆ ನನ್ನನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿ, ನಾನಿರುವಂತೆಯೇ ಸಹಜವಾಗಿ ಸ್ವೀಕರಿಸಿ, ನನಗೆ ಬೆಂಬಲವಾಗಿ ನಿಂತ.
ಮನೆಯಲ್ಲಿ ಬಡತನ ಇದ್ದುದರಿಂದ ಮನೆಗೆಲಸವನ್ನೂ ಮಾಡುತ್ತಿದ್ದೆ. ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸವನ್ನೂ ಮಾಡಿದೆ. ಹೆಣ್ತನದ ಕಾರಣದಿಂದ ಕಾರ್ಖಾನೆಯಲ್ಲಿ ಕೆಲಸ ಮಾಡಲಾಗಲಿಲ್ಲ. ಸಮಾಜದ ಕಿರುಕುಳ ಆರ್ಟಿಟಿಸಿ ತರಬೇತಿ ಕೇಂದ್ರಕ್ಕೆ ಸೇರಿದಾಗ, ನನ್ನೊಂದಿಗೇ ಓದುತ್ತಿದ್ದ ಸ್ನೇಹಿತರು ನನ್ನ ಮೇಲೆ ಮೃಗಗಳಂತೆ ಎರಗಿದರು. ಬಿಟ್ಟುಬಿಡುವಂತೆ ಪರಿಪರಿಯಾಗಿ ಬೇಡಿಕೊಂಡರೂ ಕೇಳದೆ, ಸಾಮೂಹಿಕ ಅತ್ಯಾಚಾರ ನಡೆಸಿದರು. ನನ್ನನ್ನು ಬೆದರಿಸಿ, ಯಾರಿಗೂ ಹೇಳಬಾರದೆಂದೂ ಎಚ್ಚರಿಕೆ ನೀಡಿದರು.
ಕಾಲೇಜಿಗೆ ಬಂದು ಪ್ರಾಂಶುಪಾಲರ ಬಳಿ ಈ ಬಗ್ಗೆ ಅಲವತ್ತುಕೊಂಡೆ. ಸ್ನೇಹಿತರಿಂದಲೇ ತನಗಾದ ಪರಿಸ್ಥಿತಿ ವಿವರಿಸಿದೆ. ಅದಕ್ಕೆ ಅವರು, “ನೀನು ಗಂಡಸಿನಂತೆ ವರ್ತಿಸುತ್ತಿದ್ದರೆ ನಿನಗೆ ಹೀಗಾಗುತ್ತಿರಲಿಲ್ಲ. ನೀನು ಹೆಣ್ಣಾಗಿದ್ದರಿಂದಲೇ ನಿನಗೆ ಹೀಗಾಗಿದ್ದು ನಿನ್ನ ಮುಖ ತೋರಿಸಬೇಡ, ದಯವಿಟ್ಟು ಇಲ್ಲಿಂದ ಹೊರಡು,” ಎಂದು ಗದರಿಸಿದರು. ಕೊನೆಗೆ ತರಗತಿಗೆ ಹೋಗುವುದನ್ನೇ ನಿಲ್ಲಿಸಿದೆ.
ಸೇಂಟ್ ಮಾರ್ಕ್ಸ್ ರಸ್ತೆಯ ರಾಮ್ ಸೆರಾಮಿಕ್ಸ್ ನಲ್ಲಿ ಕೆಲಸಕ್ಕೆ ಸೇರಿದೆ. ಅಲ್ಲೂ ಸಹೋದ್ಯೋಗಿಗಳಿಂದ ಬಲವಂತದ ಲೈಂಗಿಕ ಕ್ರಿಯೆಗೆ ಒಳಗಾಗಬೇಕಾಯಿತು. ಅಲ್ಲಿನ ಕಿರುಕುಳದಿಂದ ಕಂಪನಿ ತೊರೆದು ಬರುವಾಗ ಬದುಕು ಹೊಸ ತಿರುವು ತೆರೆದುಕೊಂಡಿತು.

ತನ್ನವರನ್ನು ಗುರುತಿಸಿದಾಗ
ಮನೆಗೆ ಹಿಂದಿರುಗುತ್ತಿದ್ದಾಗ, ಕಾರ್ಪೋರೇಶನ್ ಸರ್ಕಲ್ ಬಳಿಯ ಕಬ್ಬನ್ ಪಾರ್ಕ್ ನಲ್ಲಿ ಲೈಂಗಿಕ ಅಲ್ಪಸಂಖ್ಯಾತರನ್ನು ನೋಡಿದೆ. ಇವರು ನನ್ನಂತೆಯೇ ಮಾತನಾಡುತ್ತಾರೆ, ನಾನು ಇವರ ಸಮುದಾಯವಿರಬಹುದು ಎಂದು ಅವರ ಬಳಿ ವಿಚಾರಿಸಿದೆ.
ಅವರು ನನ್ನನ್ನು ಬಹಳ ಪ್ರೀತಿಯಿಂದ ಮಾತನಾಡಿಸಿ, “ನಮ್ಮಂತೆ ನೀನೂ ಆಗಬೇಡ. ನೀನು ಚೆನ್ನಾಗಿ ಓದಿ, ನಿಮ್ಮ ಕುಟುಂಬದೊಂದಿಗೆ ಬದುಕು,” ಎಂದು ಬುದ್ಧಿ ಹೇಳಿದರು. ಆದರೆ ನನಗೆ ಇದೇ ನನ್ನ ಕುಟುಂಬ ಎನಿಸಿತು. ಜೈವಿಕವಾಗಿ ಹುಟ್ಟಿದ ಕುಟುಂಬ ನನ್ನದಾಗಿರಲಿಲ್ಲ. ನಾನಿದ್ದಂತೆ ನನ್ನನ್ನು ಹಿಜ್ರಾ ಸಮುದಾಯ ಒಪ್ಪಿಕೊಂಡಿತು, ಎಂದು ಅಕ್ಕೈ ನೆನೆಯುತ್ತಾರೆ.
“ನಾನು ಸಮಾಜ ವಿರೋಧಿ ಅಂಶ ಅಥವಾ ಸಮಾಜಕ್ಕೆ ಬೇಡವಾದ ವ್ಯಕ್ತಿಯಾಗಲು ಈ ಕೆಲಸ ಆಯ್ಕೆ ಮಾಡಿಕೊಳ್ಳಲಿಲ್ಲ. ನನ್ನ ಹೋರಾಟ ಸ್ವೀಕಾರ ಮತ್ತು ಸಾಮಾಜಿಕ ಸೇರ್ಪಡೆ,’ಗಾಗಿಯೇ! ಹುಟ್ಟಿನಿಂದಲೇ ನನ್ನೊಂದಿಗಿದ್ದ ಜೈವಿಕ ಲೈಂಗಿಕತೆಯ ವಿರುದ್ಧ ಪರಿವರ್ತನೆ ಮತ್ತು ತಾರತಮ್ಯಕ್ಕಾಗಿ,” ಎಂದು ಅಕ್ಕೈ ಹೇಳುತ್ತಾರೆ.
ಇತರ ಟ್ರಾನ್ಸ್ ವ್ಯಕ್ತಿಗಳ ಸಹವಾಸದಲ್ಲಿ, ಸರ್ಕಾರದ ನೀತಿಗಳು ಟ್ರಾನ್ಸ್ ಜೆಂಡರ್ ಸಮುದಾಯದ ಪರವಾಗಿಲ್ಲ ಮತ್ತು ಅವರು ವಿವಿಧ ಸಂದರ್ಭಗಳಲ್ಲಿ ಕಠಿಣ ಅಸಮಾನತೆಯನ್ನು ಎದುರಿಸುತ್ತಾರೆ ಎಂಬ ಅರಿವು ಅವರಿಗೆ ಮೂಡಿತು. 16ನೇ ವಯಸ್ಸಿನಲ್ಲಿದ್ದಾಗ ಕಾರ್ಪೊರೇಷನ್ ಸರ್ಕಲ್ ನಲ್ಲಿ ತನ್ನಂತೆ ಕಂಡ ಮಂಗಳಮುಖಿಯರ ಪರಿಚಯವಾಯಿತು.

ಟರ್ನಿಂಗ್ ಪಾಯಿಂಟ್
“ಅದು ನನ್ನ ಜೀವನದ ಟರ್ನಿಂಗ್ ಪಾಯಿಂಟ್ ಆಗಿತ್ತು! ನನ್ನನ್ನು ಬೇರೆ ಎಂಬಂತೆ ನೋಡದೆ, ನನ್ನಂತೆಯೇ ಇರುವವರು ಸಿಕ್ಕಾಗ ನನಗೆ ಖುಷಿಯಾಗಿತ್ತು. ಆಮೇಲೆ ಸುಮಾರು 17ನೇ ವಯಸ್ಸಿನಲ್ಲಿ ಹೆಣ್ಣಾಗಿ ಪರಿವರ್ತನೆಗೊಂಡೆ.
“ಹೊಸೂರು ರಸ್ತೆ, ಕಬ್ಬನ್ ಪಾರ್ಕ್ ನಲ್ಲಿ ಭಿಕ್ಷೆ ಬೇಡಿದೆ, ಲೈಂಗಿಕ ಕಾರ್ಯಕರ್ತೆಯಾಗಿ ದುಡಿದೆ. 20 ವರ್ಷಕ್ಕೆ ಕಾಲಿಟ್ಟಾಗ, ಈ ಕೆಲಸವನ್ನೆಲ್ಲಾ ನಿಲ್ಲಿಸಬೇಕೆಂದು ನಿರ್ಧರಿಸಿದೆ. ಸಮಾಜದಲ್ಲಿ ಗೌರವದಿಂದ ಬಾಳಬೇಕೆಂದು ಬಯಸಿದೆ. ಹಾಗೆಯೇ 2004ರಲ್ಲಿ ನಾನು ಸಂಗಮ (ಲೈಂಗಿಕ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಸಂಸ್ಥೆ)ಕ್ಕೆ ಸೇರಿಕೊಂಡೆ.
“ಅಲ್ಲಿಗೆ ಸೇರಿದ ಮೇಲೆ ನನಗೆ ನ್ಯಾಯಾಂಗ, ಮಾಧ್ಯಮ ಮತ್ತು ರಾಜಕೀಯದಲ್ಲಿ ಇರುವ ವಿವಿಧ ಜನರ ಪರಿಚಯವಾಯಿತು. ಅವರಲ್ಲಿ ನಾನು ಮಂಗಳಮುಖಿಯರ ಕಷ್ಟಗಳನ್ನು ತೋಡಿಕೊಂಡೆ. ಇಂತಹ ಜನರಿಗೆ ನಮ್ಮ ಕಷ್ಟಗಳನ್ನು ಮನವರಿಕೆ ಮಾಡಿಕೊಟ್ಟಾಗಲೇ ನಮ್ಮ ಧ್ವನಿ ತಲುಪಬೇಕಾದ ಸ್ಥಳಕ್ಕೆ ತಲುಪುತ್ತದೆ. ಸಾರ್ವಜನಿಕರೂ ನಮ್ಮ ದನಿಯನ್ನು ಕೇಳಿಸಿಕೊಂಡರು.`ಸಮಾನಮನಸ್ಕರೊಂದಿಗೆ ಒಂದೆಡೆ’
“2013ರಲ್ಲಿ ನಾನು ಸಂಗಮವನ್ನು ಬಿಟ್ಟು `ಸಮಾನಮನಸ್ಕರೊಂದಿಗೆ ಒಂದೆಡೆ’ ಎಂಬ ಸಂಸ್ಥೆಯನ್ನು ಸ್ಥಾಪಿಸಿದೆ. ಸಮಾಜದಲ್ಲಿ ಅತ್ಯಂತ ಶೋಷಣೆಗೆ ಒಳಗಾಗುತ್ತಿರುವ ಸಮುದಾಯ ನಮ್ಮದು. ಯಾವುದೇ ರೀತಿಯ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ನಮಗಿಲ್ಲ.
“ನಮ್ಮ ಸಮುದಾಯಕ್ಕೆ ಲಿಂಗತ್ವ ಅಲ್ಪಸಂಖ್ಯಾತರ ಕಲ್ಯಾಣ ಮಂಡಳಿ ರಚಿಸಬೇಕು. ಬಜೆಟ್ ನಲ್ಲಿ ದೊಡ್ಡ ಮೊತ್ತವನ್ನು ಎತ್ತಿಡಬೇಕು. ರಾಜಕೀಯ ಪ್ರಾತನಿಧ್ಯ ನೀಡಬೇಕು. ನಮ್ಮ ಪರ ಧ್ವನಿ ಎತ್ತುವವರು ಯಾರೂ ಇಲ್ಲ. ಹಾಗಾಗಿ ನಮಗೆ ರಾಜಕೀಯ ಪ್ರಾತಿನಿಧ್ಯ ಅನಿವಾರ್ಯ,” ಎನ್ನುತ್ತಾರೆ ಅಕ್ಕೈ.
ನ್ಯಾಯಾಲಯ ಹೇಳುವುದೇನು?
ಭಾರತದ ಸರ್ವೋಚ್ಚ ನ್ಯಾಯಾಲಯ ಹಲವಾರು ತೀರ್ಮಾನಗಳನ್ನು ನೀಡಿದೆ. ನ್ಯಾಯಮೂರ್ತಿ ಆಶಾ ಮೆನನ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಲಿಂಗತ್ವ ಅಲ್ಪಸಂಖ್ಯಾತರ ಸಮಾನ ಅವಕಾಶ ನೀತಿ ಜಾರಿಗೆ ತರಬೇಕೆಂದು ಸುಪ್ರೀಂ ಕೋರ್ಟ್ ಕೂಡಾ ಸಲಹಾ ಸಮಿತಿ ರಚಿಸಿದ್ದು, ಈ ಸಮಿತಿಗೆ ಕರ್ನಾಟಕದಿಂದ ಅಕ್ಕೈ ಪದ್ಮಶಾಲಿ ಅವರನ್ನು ಆಯ್ಕೆ ಮಾಡಿದೆ.
“ನಮ್ಮ ಸಮುದಾಯದ ಪರವಾಗಿ ಇಡೀ ದೇಶದಾದ್ಯಂತ ಕೆಲಸ ಮಾಡುವಂತಹ ದೊಡ್ಡ ಜವಾಬ್ದಾರಿ ಇದು. ಸಮಾನ ಅವಕಾಶಕ್ಕೆ ಸಂಬಂಧಪಟ್ಟ ಕೆಲಸಗಳು ನಡೆಯಬೇಕು. ಇದರಲ್ಲಿ ನಮ್ಮ ಆರೋಗ್ಯ, ಶಿಕ್ಷಣ, ವಸತಿ ಹಾಗೂ ಕುಟುಂಬ ನಮ್ಮನ್ನು ಒಪ್ಪುವಂತಹ ವಿಚಾರಗಳೂ ಸೇರಿವೆ. ಇದರೊಂದಿಗೆ ಸರ್ಕಾರದ ನೀತಿ, ನಿರೂಪಣೆಗಳೂ ನಮ್ಮ ಸಮುದಾಯಕ್ಕೆ ಹತ್ತಿರವಾಗಬೇಕು,” ಎನ್ನುತ್ತಾರೆ ಅಕ್ಕೈ.
“ಈ ಸಮುದಾಯದ ಜನಗಣತಿ ಕೂಡಾ ಸಮಾಧಾನ ತಂದಿಲ್ಲ. ದೇಶಾದ್ಯಂತ ನಮ್ಮ ಸಮುದಾಯದವರು ಲಕ್ಷಾಂತರ ಮಂದಿ ಇದ್ದಾರೆ. ಆದರೆ ಸಾವಿರಾರು ಮಂದಿಯಷ್ಟೇ ಅಂಕಿಅಂಶದಲ್ಲಿ ದಾಖಲಾಗಿದ್ದಾರೆ. ನಮಗೆ ಕುಟುಂಬದವರ ಸಹಕಾರವಿಲ್ಲ. ಪೊಲೀಸರ ದೌರ್ಜನ್ಯಕ್ಕೂ ಒಳಗಾಗುತ್ತೇವೆ.
“ಹಸಿವು ನಮ್ಮನ್ನು ಲೈಂಗಿಕ ಕಾರ್ಯಕರ್ತೆಯರಾಗಿ, ದಂಧೆ ಹಾಗೂ ಭಿಕ್ಷೆ ಬೇಡುವ ಕಾರ್ಯಕ್ಕೆ ತಳ್ಳಿಬಿಡುತ್ತದೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ಕಾನೂನು ವಿಚಾರದಲ್ಲಿ ಸಾಕಷ್ಟು ಕೆಲಸಗಳು ನಡೆಯಬೇಕು. ಹೀಗಾಗಬೇಕಾದರೆ ನಮ್ಮ ಸಮುದಾಯದವರು ಎಲ್ಲಾ ಕ್ಷೇತ್ರದಲ್ಲೂ ಇರಬೇಕು. ನಮ್ಮವರು ಸುಶಿಕ್ಷಿತರಾಗಬೇಕು. ಹಾಗಾದಾಗ ಮಾತ್ರ ನಾವು ಕೂಡಾ ಸಾಮಾನ್ಯ ಜನರಂತೆ ನೆಮ್ಮದಿಯ ಜೀವನ ನಡೆಸಬಹುದು,” ಎಂಬುದು ಅವರ ಆಶಯ.
ರಾಜಕೀಯ ಪ್ರಾತಿನಿಧ್ಯ ಬೇಕು
ಲಿಂಗತ್ವ ಅಲ್ಪಸಂಖ್ಯಾತರನ್ನು ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಹಾಗೂ ವಿಧಾನಪರಿಷತ್ ಗೆ ಆಯ್ಕೆ ಮಾಡುವುದರ ಮೂಲಕ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂಬುದು ಅಕ್ಕೈ ಪದ್ಮಶಾಲಿ ಆಗ್ರಹ.
“ದೇಶದಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಸಿಗಬೇಕಾದ ಮೂಲಭೂತ ಹಕ್ಕುಗಳು ಸಿಗುತ್ತಿಲ್ಲ. ಎಲ್ಲ ಸಮುದಾಯಗಳಿಗೆ ನೀಡಿದಂತೆ ಶೇಕಡವಾರು ರಾಜಕೀಯ ಪ್ರಾತಿನಿಧ್ಯ ನಮಗೂ ಒದಗಿಸಬೇಕು. ಸಮುದಾಯದ ಪ್ರತಿನಿಧಿಯೊಬ್ಬರು ಶಾಸನಸಭೆಗಳಲ್ಲಿದ್ದರೆ ನಮ್ಮವರ ಹಕ್ಕುಗಳಿಗೆ ಧ್ವನಿಯಾಗುತ್ತಾರೆ,” ಎಂಬುದು ಅವರ ಆಶಯ.
ಕತ್ತಲಿನಿಂದ ಬೆಳಕಿನೆಡೆಗೆ
15 ವರ್ಷಗಳ ಹಿಂದೆ ನಮ್ಮ ಮೇಲೆ ಸಮಾಜ ದೌರ್ಜನ್ಯ ಎಸಗುತ್ತಿತ್ತು. ಆದರೆ ಈಗ ನಮ್ಮಂಥವರು ಸಂಜೆ ಕಾಲೇಜಿಗೆ ಹೋಗುತ್ತಿದ್ದಾರೆ, ಒಳ್ಳೆ ಕಡೆ ಕೆಲಸ ಮಾಡುತ್ತಿದ್ದಾರೆ. ಈ ಬದಲಾವಣೆಗಳು ಒಂದೆರಡು ದಿನಗಳಲ್ಲಿ ಆಗಿರುವುದಲ್ಲ, ಜಗತ್ತು ಮಂಗಳಮುಖಿಯರನ್ನು ಬೇರೆಯವರಂತೆ ನೋಡಡೆ, ಮನುಷ್ಯರಂತೆ ಕಾಣಬೇಕಾಗಿದೆ. ಅದೇ ನನ್ನ ಆಸೆ!
– ಸುನೀತಾ ಬಿ.ಎಂ.





