ಆಶಾ ರಘು
ಅಸಾಧಾರಣ ಕಲೆಗಳ ಆಗರ ಎನಿಸಿರುವ ಕಾದಂಬರಿಗಾರ್ತಿ ಆಶಾ ರಘು ಮಾಡದ ಸಾಧನೆ ಇಲ್ಲ. ಇವರ ಬಗ್ಗೆ ವಿವರವಾಗಿ ತಿಳಿಯೋಣವೇ…..?
`ಒಂದು ಒಳ್ಳೆಯ ಧಾರಣಶಕ್ತಿ ಇರುವ ಕಾದಂಬರಿಗಾರ್ತಿ’ ಹೀಗೆಂದು ಆಶಾ ರಘುರವರ ಬಗ್ಗೆ ಹೇಳಿದ್ದು ಕನ್ನಡ ಸಾರಸ್ವತ ಲೋಕದ ಖ್ಯಾತ ಕಾದಂಬರಿಕಾರರಾದ ಡಾ. ಎಸ್.ಎಲ್. ಭೈರಪ್ಪನವರು. ಈಕೆ ಒಬ್ಬ ಭಾವುಕ, ಸಮ್ಮೋಹಕ, ಚಿತ್ತಾಕರ್ಷಕ ಸುಸಂಸ್ಕೃತ ಭಾಷೆಯ ಪ್ರೌಢ ಸಾಹಿತಿ. ಪುರಾಣ, ಇತಿಹಾಸ, ಪ್ರಸ್ತುತ ಸನ್ನಿವೇಶಗಳನ್ನು ಒಳಗೊಂಡಂತೆ ಚಿತ್ರಕ ಶಕ್ತಿಯನ್ನು ಒಳಗೊಂಡಿರುವ ಆಶಾ ರಘುರವರ ಚಿಂತನೆ ವಿವಿಧ ತಂತ್ರಗಳನ್ನು ಬಳಸಿಕೊಂಡು ದೇಶ ಕಾಲವನ್ನು ಮೀರಿ ನಿಲ್ಲಬಲ್ಲ ಚಿತ್ರಣವನ್ನು ತಮ್ಮ ಬರಹಗಳ ಮೂಲಕ ಮೂಡಿಸಬಲ್ಲ ಅಂತಃಶಕ್ತಿ ಇವರು ಬರಹಗಾರ್ತಿ. ಮುದ್ದು ಮುಖದ, ಮುಗ್ಧ ನಗೆಯ, ನೇರ ನುಡಿಯ, ಒಂದು ಒಳ್ಳೆಯ ಪ್ರೊಫೆಶನ್ ಎನಿಸುವ ವ್ಯಕ್ತಿತ್ವ ಇವರದು.
ಇವರ ಹೃದಯದಿಂದ ಹೊರಹೊಮ್ಮುವ ಆತ್ಮೀಯ ಸ್ವಭಾವ, ಓದುಗರನ್ನು ತಮ್ಮತ್ತ ಸೆಳೆದುಕೊಳ್ಳುವಂತಹ ಯಾವುದೋ ಮಾಂತ್ರಿಕ ಶಕ್ತಿ ಆಕೆಯಲ್ಲಡಗಿದೆ ಎಂದರೆ ತಪ್ಪಾಗಲಾರದು. ಕಲ್ಪನೆಯ ಲೋಕದಲ್ಲಿ ವಿಹರಿಸುತ್ತಲೇ, ವಾಸ್ತವವನ್ನು ಹೇಳುವ ಇವರ ತಂತ್ರಗಾರಿಕೆಯನ್ನು ಅನೇಕ ಬರಹಗಳಲ್ಲಿ ನೋಡಬಹುದು. ಆದರೂ ಅಪ್ರಸ್ತುತ ಎನಿಸದ ಪ್ರಸಂಗಗಳು ಇವರ ಲೇಖನದ ಶೈಲಿ. ಅಂತಹ ಒಂದು ಅದ್ಭುತ ವ್ಯಕ್ತಿತ್ವದ ಪರಿಚಯ ಈ ಲೇಖನದ ಗುರಿ.

ಬಹುಮುಖ ಪ್ರತಿಭೆ
ಬಹುಮುಖ ಪ್ರತಿಭೆಯ ಆಶಾ ರಘು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದು ಕನ್ನಡ ಉಪನ್ಯಾಸಕಿಯಾಗಿ 2008-09ರವರೆಗೆ ವಿಜಯನಗರ ಪಿ.ಯು. ಕಾಲೇಜು ಹಾಗೂ ಆದಿಚುಂಚನಗಿರಿ ಬಿ.ಬಿ.ಎಂ. ಕಾಲೇಜುಗಳಲ್ಲಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸುವುದರ ಮೂಲಕ ಅಧ್ಯಾಪನ ವೃತ್ತಿಯಲ್ಲಿ ತೊಡಗಿಕೊಂಡರು.
ಆದರೆ ಮನದೊಳಗಿನ ಕಲಾ ಸೇವೆಯ ಕೂಗು ಅವರನ್ನು ಮತ್ತೊಂದು ಯಶಸ್ಸಿನತ್ತ ಕೊಂಡೊಯ್ಯಿತು. `ನವರಸ ಕಲಾಶಾಲೆ’ಯನ್ನು ಹುಟ್ಟು ಹಾಕಿ ಅಲ್ಲಿ ಅತಿಥಿ ಉಪನ್ಯಾಸಕರಾಗಿ ಮೂರು ವರ್ಷಗಳ ಕಾಲ ರಂಗಭೂಮಿ, ಸಿನಿಮಾ ಮೊದಲಾದ ವಿಭಾಗಗಳಲ್ಲಿ ಶಿಕ್ಷಕಿಯಾಗಿ ಮಾರ್ಗದರ್ಶನ ನೀಡಿದುದಲ್ಲದೆ, ಇತರ ಹಲವು ಕಲಾ ಶಾಲೆಗಳಿಗೂ ಸೇವೆ ಸಲ್ಲಿಸಿದ್ದಾರೆ.
ಒಂದೇ ಸೂರಿನಡಿ ಸಂಗೀತ, ನೃತ್ಯ, ಚಿತ್ರಕಲೆ, ರಂಗಭೂಮಿ, ಸಿನಿಮಾ ಮೊದಲಾದ ಕಲಾ ಪ್ರಕಾರಗಳ ತರಬೇತಿಯನ್ನು ನೀಡುವ ಈ ಕಲಾಶಾಲೆಯಲ್ಲಿ ತಮ್ಮ ಅಧ್ಯಾಪನ ವೃತ್ತಿಯನ್ನು ಮುಂದುವರಿಸುತ್ತಾ ಮೂರು ವರ್ಷಗಳ ಕಾಲ ರಂಗಭೂಮಿ ಹಾಗೂ ಸಿನಿಮಾ ವಿಭಾಗದ ವಿದ್ಯಾರ್ಥಿಗಳಗೆ ಬೋಧಿಸಿರುವುದಲ್ಲದೆ, ವಿದ್ಯಾರ್ಥಿಗಳಿಗಾಗಿಯೇ ಹಲವಾರು ನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದಾರೆ.

ರಂಗಭೂಮಿಯ ಗೀಳು
ಇವರಿಗೆ ರಂಗಭೂಮಿಯ ಗೀಳುವ ರಾತ್ರೋರಾತ್ರಿ ಬಂದುದಲ್ಲ. ಶಾಲಾ ಕಾಲೇಜು ದಿನಗಳಲ್ಲಿಯೇ ಅವರಿಗೆ ನಾಟಕ ರಚನೆ, ನಿರ್ದೇಶನ ಹಾಗೂ ಅಭಿನಯದಲ್ಲಿ ಆಸಕ್ತಿ ಇದ್ದು, ಅದನ್ನು ಕೂಡಾ ಸಾಕಾರಗೊಳಿಸಿದ್ದರು. 2000-01ರಲ್ಲಿ ಅಭಿನಯ ತರಂಗ ನಾಟಕ ಶಾಲೆಯಿಂದ ರಂಗಭೂಮಿಯ ಡಿಪ್ಲೊಮಾ ಪಡೆದು, ರಂಗ ಕ್ಷೇತ್ರದಲ್ಲಿ ಮತ್ತಷ್ಟು ಪರಿಣತಿ ಸಾಧಿಸಿದರು.
ನಾಟಕಗಳಲ್ಲಿ ಅಭಿನಯ
`ಬಣ್ಣದ ಕೊಡೆ, ಮೂಕಬಲಿ, ಸತ್ಯ ಪ್ರಮಾಣ’ ಮೊದಲಾದ ನಾಟಕಗಳಲ್ಲಿ ತಮ್ಮ ಅಭಿನಯ ಕಲೆಗೆ ಸಾಕ್ಷಿಯಾಗಿದ್ದಾರೆ. ಇವರಲ್ಲಡಗಿದ್ದ ಕಲಾ ಸರಸ್ವತಿ ಮತ್ತಷ್ಟು ಪ್ರಖರವಾಗಿ ಬೆಳಗಿದ್ದು ಆಕಾಶವಾಣಿಯಲ್ಲಿ `ಬಿ’ ಗ್ರೇಡ್ ಕಲಾವಿದೆಯಾಗಿ ಹಲವು ನಾಟಕಗಳಿಗೆ ಧ್ವನಿ ನೀಡುವುದರೊಂದಿಗೆ `ಯುವರಂಜನಿ ಯುವಕುಶೋಪರಿ’ ಕಾರ್ಯಕ್ರಮದ ಹಲವು ಕಂತುಗಳ ನಿರೂಪಣೆಯ ಕಾರ್ಯವನ್ನು ತನ್ನದಾಗಿಸಿಕೊಂಡು, ಆನಂತದ ದಿನಗಳಲ್ಲಿ ಕೆಲವು ನಾಟಕ ಕೃತಿಗಳನ್ನು ಪ್ರಕಟಿಸಿದ್ದಾರೆ.

ಪೂತನಿ ಎಂಬ ಅನನ್ಯ ನಾಟಕ
ಇತ್ತೀಚೆಗೆ ಇವರ `ಪೂತನಿ’ ಎಂಬ ಅತ್ಯದ್ಭುತ ಕಲ್ಪನೆಯ ನಾಟಕ ಕೃತಿಯ ಏಕವ್ಯಕ್ತಿ ಪ್ರದರ್ಶನ ನಾಟಕವನ್ನು ಸಂಪಿಗೆ ತೋಂಟದಾರ್ಯ ಮೂಡಲಪಾಯ ಮ್ಯಾಳಕ್ಕೆ ಅಳವಡಿಸಿದ್ದು, ಇದನ್ನು ಮಲ್ಲಿಕಾರ್ಜುನಸ್ವಾಮಿ ಮಹಾಮನೆಯವರು ನಿರ್ದೇಶಿಸಿ, ಯಶಸ್ವಿ ಪ್ರದರ್ಶನ ಕಂಡಿದೆ. ಈ ಪ್ರಸ್ತುತಿ ಆಶಾ ರಘುರವರಿಗೆ ಹೆಸರು ಮಾತ್ರವೇ ಅಲ್ಲದೆ, ಸಂತೃಪ್ತಿಯೂ ತಂದುಕೊಟ್ಟಂತಹ ಕೃತಿ ಮತ್ತು ಪ್ರಸ್ತುತಿ.
ಲೇಖಕಿಯ ಕಲ್ಪನೆಯ ಪೂತನಿ ರಕ್ಕಸಿಯಲ್ಲ. ಸಾಧಾರಣ ಮುಗ್ಧ ಹೆಂಗಸೊಬ್ಬಳು, ತನ್ನ ಸುತ್ತಲಿನ ವಾತಾವರಣದಿಂದ ಧೂರ್ತಳಾಗಿ ಪರಿವರ್ತನೆಯಾಗುವ ಪರಿಯನ್ನು ಮನೋವೈಜ್ಞಾನಿಕ ನೆಲೆಯಲ್ಲಿ ಚಿತ್ರಿಸಲಾಗಿದೆ. ಲೇಖಕಿಯದು ಎಂತಹ ಮಾತೃ ಹೃದಯವೆಂದರೆ ಒಬ್ಬ ರಕ್ಕಸಿಯಲ್ಲೂ ಸ್ತ್ರೀತ್ವವನ್ನು ಗುರುತಿಸಿ ಸಮಾಜದ ಆಗುಹೋಗುಗಳ ಪ್ರಭಾವದಿಂದ ಆಕೆಯ ಒಳಗಿನ ರಕ್ಕಸಿ ಜಾಗೃತಳಾಗಿದ್ದಳು ಎನ್ನುವ ಕಲ್ಪನೆ ನಿಜಕ್ಕೂ ಶ್ಲಾಘನೀಯ.

ಟಿವಿ ಧಾರಾವಾಹಿಗಳ ನಂಟು
ಹೊಸದಾಗಿ ಏನಾದರೂ ಸಾಧನೆ ಮಾಡಲೇಬೇಕೆಂಬ ಹಂಬಲ. ದೂರದರ್ಶಿತ್ವದ ಆಶಾ, ಲಗ್ಗೆ ಇಟ್ಟಿದ್ದು ಕಿರುತೆರೆಯತ್ತ. ಟಿ.ಎನ್. ಸೀತಾರಾಮ್ ರ `ಮುಕ್ತ ಮುಕ್ತ, ಮೋಹಿನಿ ವರ್ಸಸ್ ಮಾಲಿಂಗು,’ ನಾಗತಿಹಳ್ಳಿ ಚಂದ್ರಶೇಖರ್ ರ `ಅಪಾರ್ಟೆಮೆಂಟ್,’ ಎಂ.ಎನ್. ಜಯಂತ್ ರ `ಮಳೆಬಿಲ್ಲು’ ಹಾಗೂ ಬಿ. ಸುರೇಶ್ ರ `ಪ್ರೀತಿ ಪ್ರೇಮ’ ಧಾರಾವಾಹಿಗಳಿಗೆ ಕಥಾ ವಿಸ್ತರಣೆಯಲ್ಲಿ ನೆರವು ನೀಡಿ, ಕೆಲವಾರು ಕಂತುಗಳಿಗೆ ಸಂಭಾಷಣೆಯನ್ನೂ ಬರೆದಿದ್ದಾರೆ.
ಹಲವಾರು ಕಿರುತೆರೆ ಧಾರಾವಾಹಿಗಳಿಗೆ ಕಥೆ, ಸಂಭಾಷಣೆಗಳನ್ನು ರಚಿಸಿ, ಈಟಿವಿಯ `ಯುವಫಂಡಾ’ ಕಾರ್ಯಕ್ರಮದ ಹಲವು ಕಂತುಗಳಿಗೆ ನಿರೂಪಣಾ ಸಾಹಿತ್ಯವನ್ನು ರಚಿಸಿದ್ದಾರೆ.

ಪತಿಯ ಸಹಕಾರ
ಇವರ ಪತಿ ಆಧ್ಯಾತ್ಮ, ಆಹಾರ, ವಿಜ್ಞಾನ, ರಾಜಕೀಯ ಎಲ್ಲದರ ಬಗೆಗೂ ಅಪಾರ ಆಸಕ್ತಿ ಉಳ್ಳರಾಗಿದ್ದು, ಸಾವಿರಾರು ಪುಸ್ತಕಗಳ ಭಂಡಾರವನ್ನೇ ಹೊಂದಿದ್ದರು. ಆಶಾ, ಬರೆಯಲು ಯಾವುದೇ ವಸ್ತುವನ್ನು ಕೈಗೆತ್ತಿಕೊಂಡರೂ, ಅದಕ್ಕೆ ಸಂಬಂಧಿಸಿದ ಪುಸ್ತಕಗಳ ರಾಶಿಯನ್ನೇ ತಂದುಹಾಕಿ ಬಿಡುತ್ತಿದ್ದರಂತೆ. ಮಾತ್ರವಲ್ಲದೇ, ಪೂರಕವಾಗಿ ಚರ್ಚಿಸಿ, ಸಾಕಷ್ಟು ಮಾಹಿತಿ ಒದಗಿಸುತ್ತಿದ್ದರಂತೆ.
ಆಶಾ ರಘು, ಸಿನಿಮಾ ರಂಗವನ್ನು ಪ್ರವೇಶಿಸುವ ಆಸೆಯನ್ನು ವ್ಯಕ್ತಪಡಿಸಿದಾಗ, ತಮ್ಮ ಕಡೆಯ ದಿನಗಳಲ್ಲಿ, ಚಿತ್ರಕ್ಕೆ ಒಂದೆರಡು ಕಥೆಗಳನ್ನು ಕುರಿತು ಚರ್ಚಿಸಿದ್ದರಂತೆ. ನಿರ್ದೇಶನದ ತರಬೇತಿಗಾಗಿ ಟೆಂಟ್ ಸಿನಿಮಾ ಶಾಲೆಗೆ ಸೇರಿಸಿ, ನಿರ್ಮಾಣ, ಪಾತ್ರವೊಂದರಲ್ಲಿ ಅಭಿನಯ ಎಲ್ಲವನ್ನೂ ಮಾಡಲು ಪ್ರೋತ್ಸಾಹಿಸಿ, ಫಿಲಂ ಕ್ಯಾಮೆರಾ, ಲೈಟ್ಸ್, ಮಾನಿಟರ್ ಮೊದಲಾಗಿ ಬೇಕಾದ ಹಲವಾರು ವಸ್ತುಗಳಿಂದ ಹಿಡಿದು ಪೋಷಾಕಿನವರೆಗೆ ಎಲ್ಲವನ್ನೂ ಕೊಡಿಸಿದ್ದರಂತೆ. ಅವುಗಳನ್ನು ಈಗಲಾದರೂ ಉಪಯೋಗಿಸಿ ಸಾರ್ಥಕಪಡಿಸಿಕೊಳ್ಳಬೇಕಿದೆ ಎನ್ನುತ್ತಾರೆ ಆಶಾ ರಘು.
ಎರಡು ವರ್ಷಗಳ ಹಿಂದೆ ಅಕಾಲಿಕವಾಗಿ ರಘು ತೀರಿಕೊಂಡರು. ಅವರು ನೀಡಿದ ಪ್ರೋತ್ಸಾಹ, ಉತ್ತೇಜನದಿಂದ ಸದಾ ಹೊಸದೇನಾದರೂ ಮಾಡುತ್ತ ಇವರ ಮನಸ್ಸು ತುಡಿಯುತ್ತಲೇ ಇರುತ್ತದೆ. ಅಧ್ಯಾಪಕ ವೃತ್ತಿಯಿಂದ ಆರಂಭವಾದ ಇವರ ವೃತ್ತಿ, ಕೃತಿ ರಚನೆ, ನಿರ್ದೇಶನವೇ ಅಲ್ಲದೆ, ಕಿರುತೆರೆಯ ಪಾತ್ರಧಾರಿಯಾಗಿ ಸಿಹಿಕಹಿ ಚಂದ್ರುರವರ `ಪಾಪ ಪಾಂಡು,’ ಸಕ್ರೇಬೈಲು ಶ್ರೀನಿವಾಸ್ ರ `ಬಿದಿಗೆ ಚಂದ್ರಮ’ ಧಾರಾವಾಹಿಗಳಲ್ಲಿ ಇವರ ಅಭಿನಯ ಚಾತುರ್ಯದ ಪರಿಚಯ ಮಾಡಿಸುತ್ತಾರೆ.

ಕನ್ನಡ ಬೆಳ್ಳಿತೆರೆಗೆ ಲಗ್ಗೆ
ಪ್ರಸಿದ್ಧ ಸಾಹಿತಿ, ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ರ `ಅಮೃತಧಾರೆ’ ಚಿತ್ರಕ್ಕೆ ಸಹಾಯಕ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ಮುಂದೆ ತಾನು ಸ್ವತಂತ್ರ ನಿರ್ದೇಶಕಿಯಾಗಬಲ್ಲೆ ಎಂಬ ಛಾಪನ್ನು ಚಿತ್ರರಸಿಕರ ಮನದಲ್ಲಿ ಮೂಡಿಸಿದ್ದಾರೆ. ಹೀಗೆ ಅಭಿನಯ, ಸಾಹಿತ್ಯ ರಚನೆ, ನಿರ್ದೇಶನ ಎಲ್ಲದರಲ್ಲೂ ಇವರ ಪ್ರತಿಭೆ ಅನಾವರಣಗೊಳ್ಳುತ್ತಾ ಹೋಗುತ್ತದೆ.
ಯಾವುದೇ ಕೆಲಸವಾದರೂ ಸರಿ ಶಿಸ್ತಿನಿಂದ, ಪರಮ ಆಸಕ್ತಿಯಿಂದ ತಮ್ಮ ನಿದ್ರಾಹಾರವನ್ನು ತ್ಯಜಿಸಿ ತಮ್ಮ ಸ್ವಂತಿಕೆಯನ್ನು ಧಾರೆ ಎರೆಯುತ್ತಾ ಸಮಯಕ್ಕೆ ಸ್ಪಂದಿಸುವ, ಕೆಲಸದ ಬಗ್ಗೆ ಇವರಿಗಿರುವ ಅರ್ಪಣಾಭಾವವನ್ನು ಎಂಥವರೂ ಮೆಚ್ಚಬೇಕಾದದ್ದೆ!
ತಮ್ಮೆಲ್ಲ ಕೆಲಸ ಕಾಯಗಳ ಜೊತೆಯಲ್ಲಿಯೇ `ಮಾತಾಡ್ ಮಾತಾಡ್ ಮಲ್ಲಿಗೆ’ ಚಿತ್ರದ ಕಥಾ ವಿಸ್ತರಣೆಯಲ್ಲಿ ನೆರವು ನೀಡುವ ಮೂಲಕ ತಮ್ಮೊಳಗಿರುವ ಸಾಹಿತಿಯನ್ನೂ ಬಡಿದೆಬ್ಬಿಸಿದ್ದಾರೆ. ಇವರ `ಚಿತ್ತರಂಗ’ ಕಾದಂಬರಿಯು 70-80 ದಶಕದ ಕನ್ನಡ ಚಿತ್ರರಂಗದ ವಾತಾವರಣವುಳ್ಳ ಚಿತ್ರರಂಗದ ಕಾಲ್ಪನಿಕ ವ್ಯಕ್ತಿಗಳ ಮನೋರಂಗದ ಚಿತ್ರಣವನ್ನು ಕಟ್ಟಿಕೊಡು ಪ್ರಯತ್ನವಾಗಿದ್ದು, ಇದನ್ನು ಕೂಡಾ ಈ ಸಂದರ್ಭದಲ್ಲಿ ಉಲ್ಲೇಖಿಸಬಹುದಾಗಿದೆ.
ಆರ್ತ ಪ್ರಮುಖವಾಗಿ ಆಶಾ ರಘುರ ಒಲವು ಕಾದಂಬರಿಯತ್ತ. `ಆರ್ತ’ ದಂತಹ ಕಾದಂಬರಿಯನ್ನು ಸಾಹಿತ್ಯಾಸಕ್ತರಿಗೆ ನೀಡಿರುವ ಇವರು ಕನ್ನಡ ಸಾರಸ್ವತ ಲೋಕದಲ್ಲಿ `ಕನ್ನಡದ ಪ್ರಮುಖ ಕಾದಂಬರಿಗಾರ್ತಿ’ಯಾಗಿ ಗುರುತಿಸಿಕೊಂಡರು. ಪ್ರೊ.ಜಿ. ವೆಂಕಟಸುಬ್ಬಯ್ಯನವರು ಈ ಕೃತಿಯ ಬಗ್ಗೆ ಮಾತನಾಡುತ್ತಾ, `ಒಬ್ಬ ಯುವತಿಯ ಮಹತ್ವಾಕಾಂಕ್ಷೆಯ ಕೃತಿ ಪುಸ್ತಕ, ತಾತ್ವಿಕ ಚಿಂತನೆಯ ಪ್ರಾಧಾನ್ಯವುಳ್ಳ ಕೃತಿ’ ಎಂದರೆ, `ಒಬ್ಬ ಮಹಿಳೆ ಈ ಪ್ರಮಾಣದ ಕಾದಂಬರಿಯೊಂದನ್ನು ಬರೆದಿರುವುದು ತಮಗೆ ಸಂತಸ ತಂದಿರುವುದಾಗಿ ತಿಳಿಸುತ್ತಾರೆ ಪ್ರಸಿದ್ಧ ಸಾಹಿತಿ ಕುಂವೀ.
ಇನ್ನೂ ಅನೇಕ ಪ್ರಸಿದ್ಧ ಸಾಹಿತಿಗಳು ಶಾಸ್ತ್ರೀಯ ಮತ್ತು ಆಧುನಿಕನ್ನು ಬಳಸಿಕೊಂಡ ಸೃಜನಾತ್ಮಕ ಶೈಲಿಯಲ್ಲಿ ಹಳೆಗನ್ನಡ, ನಡುಗನ್ನಡ ಭಾಷೆಯನ್ನು ಬಳಸಿಕೊಂಡು ರಚಿಸಿರುವ ಈ ಕಾದಂಬರಿಯ ಒಳಸುಳಿವುಗಳ ಚಿತ್ರಣಗಳ ಬಗ್ಗೆ ಪ್ರಶಂಸಿಸುತ್ತಾರೆ.
ಇಂತಹ ಮಗಳನ್ನು ಪಡೆದ ಇವರ ಮಾತಾಪಿತೃಗಳಾದ ಕೇಶವ ಅಯ್ಯಂಗಾರ್ ಹಾಗೂ ಸುಲೋಚನಾ ದಂಪತಿಗಳೇ ಧನ್ಯರು. ಇವರ ಹಿರಿಯ ಮಗಳಾಗಿ 1979ರ ಜೂನ್ 18ನೇ ತಾರೀಖಿನಿಂದ ಬೆಂಗಳೂರಿನಲ್ಲಿ ಜನಿಸಿದ ಬಹುಮುಖ ಪ್ರತಿಭೆ ಆಶಾ ರಘು ಸಮಾಜದಲ್ಲಿ ಕೇವಲ ಸಾಹಿತಿ ಎಂದು ಗುರುತಿಸಿಕೊಂಡಿಲ್ಲ. ಆಡುಮುಟ್ಟದ ಸೊಪ್ಪಿಲ್ಲ ಎನ್ನುವ ಹಾಗೆ ಉಪನ್ಯಾಸಕರಾಗಿ ರಂಗಭೂಮಿ, ಕಿರುತೆರೆ, ಬೆಳ್ಳಿತೆರೆಗಳಲ್ಲಿಯೂ ಕಲಾವಿದೆಯಾಗಿ, ಸಂಭಾಷಣೆಕಾರರಾಗಿ, ಸಹಾಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಉಪಾಸನಾ ಬುಕ್ಸ್ ಪ್ರಸ್ತುತ
`ಉಪಾಸನಾ ಬುಕ್ಸ್’ ಎಂಬ ಪ್ರಕಾಶನ ಸಂಸ್ಥೆಯನ್ನೂ, `ಅವರು ಕ್ರಿಯೇಶನ್ಸ್’ ಎಂಬ ನಿರ್ಮಾಣ ಸಂಸ್ಥೆಯನ್ನೂ ನಡೆಸುತ್ತಿದ್ದಾರೆ. 2014ರಲ್ಲಿ ಆರಂಭವಾದ `ಉಪಾಸನಾ ಬುಕ್ಸ್’ ಪ್ರಕಾಶನ ಸಂಸ್ಥೆಯು, 2025ರಲ್ಲಿ ಮರುಚಾಲನೆಯನ್ನು ಪಡೆದುಕೊಂಡಿದೆ. ಖ್ಯಾತ ಬರಹಗಾರರ ಕೃತಿಗಳನ್ನು ಪ್ರಕಟಿಸುವುದರೊಂದಿಗೆ, ಹೆಚ್ಚು ಹೊಸ ಬರಹಗಾರರ ಕೃತಿಗಳನ್ನು ಪ್ರಕಟಿಸಿ ಪ್ರೋತ್ಸಾಹಿಸುವ ಆಶಯವನ್ನು ಹೊಂದಿದೆ. ಇವರ ಕ್ರಿಯಾಶೀಲತೆಗೆ ಮತ್ತೊಂದು ಉದಾಹರಣೆ `ಅವರು ಕ್ರಿಯೇಶನ್ಸ್’ ನಿರ್ಮಾಣ ಸಂಸ್ಥೆ.
ಅವರ ಕ್ರಿಯೇಶನ್ಸ್
ಆಶಾ ರಘು ನಡೆಸುತ್ತಿರುವ ಈ ನಿರ್ಮಾಣ ಸಂಸ್ಥೆ ಕಿರುಚಿತ್ರ, ಸಂಗೀತದ ಧ್ವನಿ ಸುರುಳಿ, ದೃಶ್ಯರೂಪಗಳು, ಚಲನಚಿತ್ರಗಳು ಮತ್ತಿತರ ಸೃಜನಾತ್ಮಕ ಯೋಜನೆಗಳನ್ನು ರೂಪಿಸುತ್ತದೆ. ಈ ಸಂಸ್ಥೆ ತನ್ನದೇ ಆದ ಯೂಟ್ಯೂಬ್ ಚಾನೆಲ್ ಕೂಡಾ ಹೊಂದಿದೆ. ಇದಕ್ಕಾಗಿ ಅಮ್ಮನ ಬೆಂಬಲಕ್ಕೆ ನಿಂತವರು ಮಗಳು ಉಪಾಸನಾ. ಆಸಕ್ತರಿಗೆ ಆನ್ ಲೈನ್ ನಲ್ಲಿ ಇಂಗ್ಲಿಷ್ ಕಲಿಸು, ಎನ್ಜಿಓ ಮೂಲಕ ನಿರ್ಗತಿಕರ ಸೇವೆ ಮಾಡು, ಚಿಕ್ಕ ವಯಸ್ಸಿನಲ್ಲಿಯೇ ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ಉಪಾಸನಾ ಕಿರಿ ವಯಸ್ಸಿಗೇ ಆಂಗ್ಲ ಭಾಷೆಯ ಕವನ ಸಂಕಲವನ್ನು ಹೊರ ತಂದಿದ್ದಾರೆ. ಆಶಾ ರಘುರವರ ಕೃತಿಗಳತ್ತ ಒಂದು ಸಿಂಹಾವಲೋಕನ ನಡೆಸಿದರೆ, ಸಾಹಿತ್ಯದಲ್ಲಿನ ಆಳ, ವಿಸ್ತಾರ, ದೂರದರ್ಶಿತ್ವ, ಸಂದರ್ಭೋಚಿತ ವಿಷಯಗಳು, ಹಳೆಯ ವಸ್ತುವನ್ನು ಹೊಸದಾಗಿ ಹೇಳುವ ವಿಭಿನ್ನ ರೀತಿ ಇವೆಲ್ಲ ಗೋಚರವಾಗುತ್ತದೆ.
ವೈಚಾರಿಕ ಕಾದಂಬರಿ
`ಆರ್ತ’ ವೇದೋತ್ತರ ಕಾಲಘಟ್ಟದ ಕಾಲ್ಪನಿಕ ಕಾದಂಬರಿ, ಯಾವುದೇ ಪುರಾಣವನ್ನಾಗಲೀ ಅಥವಾ ಇತಿಹಾಸವನ್ನಾಗಲೀ ಆಧರಿಸದೆ ರಚಿಸಿರುವ ಸ್ವತಂತ್ರವಾದ ತಾತ್ವಿಕ ಚಿಂತನೆಯ ಕೃತಿ ಇದು. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳ ಸುಳಿಯಲ್ಲಿ ಸಿಕ್ಕಿಕೊಂಡು ತೊಳಲಾಡುವ, ಬಿಡಿಸಿಕೊಳ್ಳಲು ಯತ್ನಿಸುವ, ಕಡೆಗೆ ಒಳಗಿದ್ದೂ ಇರದ ಹದವನ್ನು ಕಂಡುಕೊಳ್ಳುವ ಪ್ರತೀಪನೆಂಬ ರಾಜನ ಬದುಕಿನ ಚಿತ್ರಣ ಈ ಕಾದಂಬರಿಯ ವಸ್ತು.
ನಾನಾ ಕಾರಣಗಳಿಂದ ಎಲ್ಲ ಸಂಬಂಧಗಳಿಗೂ ವಿಮುಖನಾಗಿ ಆತ್ಮಜ್ಞಾನವನ್ನು ಅರಸುತ್ತಾ ಸಾಗುತ್ತಾನೆ. ಆದರೂ ಬಿಡದ ಮೋಹ ಪುನಃ ಲೌಕಿಕ ಬದುಕಿಗೆ ಎಳೆತರುತ್ತದೆ. ಒಂದರ ಹಿಂದೊಂದರಂತೆ ಎಲ್ಲ ಸಂಬಂಧಗಳೂ ಹಿಂಬಾಲಿಸುತ್ತವೆ. ಕಡೆಗೆ, ಆರ್ತದ ಚಕ್ರದೊಳಗೆ ಬಂಧಿಯಾದರೂ ಮುಕ್ತನಾಗಿ, ಯೋಗಾಭೋಗಗಳ ಸಮನ್ವಯ ಸಾಧಿಸಬಹುದಾದ ಹೊಳಹಿನೊಂದಿಗೆ ಆತ್ಮಜ್ಞಾನಕ್ಕೂ, ಲೌಕಿಕ ಬದುಕಿಗೂ ಅಭಿಮುಖನಾಗುತ್ತಾನೆ. ಈ ಕಾದಂಬರಿ 2014ರಲ್ಲಿ ಮೊದಲ ಮುದ್ರಣ ಕಂಡಿತು. ಆ ವರ್ಷದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ, ಸೂರ್ಯನಾರಾಯಣ ಚಡಗ ಪ್ರಶಸ್ತಿಯನ್ನೂ ಪಡೆದುಕೊಂಡಿದೆ.
ಮುಂದೆ ಮತ್ತೆರಡು ಮುದ್ರಣಗಳನ್ನು ಕಂಡಿರುವ ಈ ಕಾದಂಬರಿಗೆ ಬಂದಿರುವ ಅಭಿಪ್ರಾಯಗಳನ್ನು ಒಳಗೊಂಡ `ಆರ್ತ ಮಂಥನ’ ಎಂಬ ಇನ್ನೊಂದು ಸಂಗ್ರಹ ಕೃತಿಯೂ ಪ್ರಕಟಗೊಂಡಿರುವುದು ಈ ಕಾದಂಬರಿಯ ಹೆಗ್ಗಳಿಕೆ. ಮೊದಲ ಮುದ್ರಣ : 2014, ಉಪಾಸನಾ ಪ್ರಕಾಶನ, ಎರಡನೇ ಮುದ್ರಣ: 2018, ಸಾಹಿತ್ಯ ಭಂಡಾರ, ಮೂರನೇ ಮುದ್ರಣ : 2022.
ಗತದ ಕುರಿತು
ಇವರ ಎರಡನೆ ಕಾದಂಬರಿ `ಗತ.’ ಇದು ಪುನರ್ಜನ್ಮದ ರೋಚಕ ಕಾದಂಬರಿ. `ಮನುಷ್ಯ ಮರಣ ಹೊಂದಿದ ಮೇಲೆ ಪುನಃ ಈ ಭೂಮಿಯ ಮೇಲೆ ಹುಟ್ಟಿ ಬರುತ್ತಾನೆ. ಹುಟ್ಟು ಆರಂಭ ಅಲ್ಲ, ಸಾವು ಅಂತ್ಯ ಅಲ್ಲ…’ ಎಂದು ಭಾರತೀಯ ವೇದಾಂತ ಸೇರಿದಂತೆ ಇತರ ಕೆಲವು ಧರ್ಮಗಳೂ ಹೇಳುತ್ತವೆ. ಈ ನಂಬಿಕೆಯ ಬೆನ್ನಿಗೆ ಬೀಳದಿದ್ದರೂ ಪುನರ್ಜನ್ಮದ ವಿಷಯ ಯಾವತ್ತಿಗೂ ಅತ್ಯಂತ ಕುತೂಹಲಕಾರಿಯಾದುದು. ಅಂತಹುದೇ ರೋಚಕ, ಕುತೂಹಲಕಾರಿಯೂ ಆದ ಕಥಾವಸ್ತು ಈ ಕಾದಂಬರಿಯದ್ದು.
ಅಲ್ಲಮನ ಮಾಯೆ
ಅಲ್ಲಮನ ವಚನವೊಂದನ್ನು ಆಧರಿಸಿದ ಮತ್ತೊಂದು ಕಾದಂಬರಿ `ಮಾಯೆ.’ ಇದರ ಕಥಾವಸ್ತು ಅಲ್ಲಮನ ವಚನದಿಂದ ಪ್ರೇರಿತವಾದದ್ದು. `ಹೊನ್ನು ಮಾಯೆಯೆಂಬವರು ಹೊನ್ನು ಮಾಯೆಯಲ್ಲ, ಹೆಣ್ಣು ಮಾಯೆಯೆಂಬವರು ಹೆಣ್ಣು ಮಾಯೆಯಲ್ಲ, ಮಣ್ಣು ಮಾಯೆಯೆಂಬವರು ಮಣ್ಣು ಮಾಯೆಯಲ್ಲ, ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರ!’
ಈ ವಚನದಂತೆಯೇ, ಒಬ್ಬ ವ್ಯಕ್ತಿ ಹೊನ್ನು, ಹೆಣ್ಣು, ಮಣ್ಣುಗಳ ಆಸೆಗೆ ಬಿದ್ದು ದಕ್ಕಿಸಿಕೊಳ್ಳಲು ಹೋಗಿ, ಆತೀವವಾದ ಘಾಸಿಗೆ ಒಳಗಾಗಿ, ಕಡೆಗೆ ಈ ಮೂವರನ್ನು ಪಡೆಯುವಲ್ಲಿ ತನಗಿದ್ದ ಅಪಾರವಾದ ಆಸೆಯೇ ಕಾರಣ ಎಂದು ಕಂಡುಕೊಳ್ಳುವಂತಹ ಕಥಾ ಹಂದರದ ಕಾದಂಬರಿ ಇದು.
ಕಾದಂಬರಿಯ ನಾಯಕ ಪರಸ್ತ್ರೀಯನ್ನು ತನ್ನವಳನ್ನಾಗಿಸಿಕೊಳ್ಳಲು ಇನ್ನಿಲ್ಲದ ಹಾಗೆ ಯತ್ನಿಸಿ ಅತೀ ದುಃಖಕ್ಕೆ ಒಳಗಾಗುತ್ತಾನೆ. ಪರರ ಭೂಮಿಯನ್ನು ಆಕ್ರಮಿಸಿಕೊಳ್ಳುವ ಪ್ರಯತ್ನದಲ್ಲಿ ರಕ್ತಪಾತಕ್ಕೆ ಕಾರಣವಾಗಿ ಸೆರೆವಾಸ ಅನುಭವಿಸುತ್ತಾನೆ. ನಿಧಿಶೋಧದ ಬೆನ್ನು ಹತ್ತಿ ಊರೂರು ಸಂಚರಿಸಿ, ನಾನಾ ರೀತಿಯ ಅಕೃತ್ಯಗಳನ್ನು ಎಸಗಿ, ಇನ್ನೇನು ನಿಧಿ ಸಿಕ್ಕಿತು ಎನ್ನುವಷ್ಟರಲ್ಲಿ ಪ್ರಾಣಕ್ಕೇ ಕುತ್ತು ತಂದುಕೊಳ್ಳುತ್ತಾನೆ. ಈ ಮೂರಕ್ಕೂ ಒಂದಕ್ಕೊಂದು ಸಂಬಂಧವಿದೆಯೇ? ಅಥವಾ ಮೂರರ ಸಮಾನ ಅಂಶ ಯಾವುದು ಎಂದು ಚಿಂತಿಸುವಾಗ, ಅವನಿಗೆ `ಆಸೆ’ ಎನ್ನುವ ಉತ್ತರ ಗೋಚರಿಸುತ್ತದೆ! ಆಸೆಯನ್ನು ಮೀರುವ ಪ್ರಯತ್ನ, ಸರಳವಾದ ಬದುಕನ್ನು ಕಟ್ಟಿಕೊಳ್ಳುವ ಪರಿಯೂ ಅದರ ಮುಂದಿನ ಕಥೆ. ಜಯಕೀರ್ತಿಯ ಸುದೀರ್ಘ ನಿಧಿ ಶೋಧ ಕಾರ್ಯ, ಮದನನ ಜನ್ಮರಹಸ್ಯ, ವೈಶಾಲಿಯ ಪಾಡು, ವೇಶ್ಯೆ ಸನಕ್ವನ ಅಂತರಂಗ, ಮಂಗಳೆಯ ತವರಿನ ಹಿನ್ನೆಲೆ, ಹೆಣ್ಣೊಬ್ಬಳ ಸಹಗಮನದ ಚಿತ್ರಣ ಮೊದಲಾದ ವಿವರಗಳು ಓದುಗರಿಗೆ ಆಸಕ್ತಿದಾಯಕವೆನಿಸುತ್ತವೆ.
ಚಿತ್ತರಂಗದ ಕುರಿತು
`ಚಿತ್ತರಂಗ’ ಕನ್ನಡ ಚಿತ್ರರಂಗದ ಕಾಲ್ಪನಿಕ ಕಲಾವಿದರ ಮನೋಲೋಕದ ಚಿತ್ರಣವಿರುವ ಕಾದಂಬರಿ. ಎಪ್ಪತ್ತು ಎಂಭತ್ತರ ದಶಕದ ಕನ್ನಡ ಚಿತ್ರರಂಗದ ವಾತಾವರಣವನ್ನು ಈ ಕಾದಂಬರಿ ಹೊಂದಿದೆ. ಈ ಕಾದಂಬರಿಯಲ್ಲಿ ಬರುವ ಎಲ್ಲಾ ಪಾತ್ರಗಳೂ ಹಾಗೂ ಸನ್ನಿವೇಶಗಳೂ ಕೇವಲ ಕಾಲ್ಪನಿಕವಾಗಿದ್ದು, ಯಾರದೇ ನಿಜ ಬದುಕು ಅಥವಾ ಘಟನೆಗಳಿಗೆ ಸಂಬಂಧಪಟ್ಟುವುದಲ್ಲವೆಂಬುದು ಲೇಖಕಿಯ ಅರಿಕೆ. ಚಿತ್ರ ನಿರ್ದೇಶಕನೊಬ್ಬನ ಹಾಗೂ ಅವನೊಂದಿಗೆ ನಿಕಟ ಸ್ನೇಹವಲಯಕ್ಕೆ ಬರುವ ಕಲಾವಿದೆಯರ ಬದುಕಿನ ತೆರೆಮರೆಯ ಅಂತರಂಗವೇ `ಚಿತ್ತರಂಗ.’ ಕೇವಲ ತಾಂತ್ರಿಕ ಅಥವಾ ಮನೋಧರ್ಮದ ದೃಷ್ಟಿಯಿಂದ ಇದು 70-80ರ ದಶಕದ ಕನ್ನಡ ಚಿತ್ರರಂಗದ ವಾತಾವರಣವುಳ್ಳದ್ದಾಗಿದೆ ಎಂದು ಉಲ್ಲೇಖಿಸಿದ್ದರೂ, ಇದು ಯಾವ ಕಾಲಘಟ್ಟದಲ್ಲಿ ಬೇಕಾದರೂ ಕಲ್ಪಿಸಿಕೊಳ್ಳಬಹುದಾದ ಕಥೆಯೇ ಆಗಿದೆ.
ವಕ್ಷಸ್ಥಲ
ಪೌರಾಣಿಕ ಹಾಗೂ ಸಾಮಾಜಿಕ ಎರಡು ವರ್ಗಕ್ಕೂ ಸಲ್ಲುವ ಕಾದಂಬರಿ `ವಕ್ಷಸ್ಥಲ.’ ಶ್ರೀನಿವಾಸ ಕಲ್ಯಾಣದೊಂದಿಗೆ, ವೆಂಕಟೇಶ್ವರ ಮಹಾತ್ಮೆಯನ್ನೂ, ಮೀರಾ, ರಾಧೆ, ಆಂಡಾಳು, ಬೀಬಿ ನಾಚಿಯಾರ್, ವೆಂಕಮಾಂಬ ಮೊದಲಾದ ವಿಷ್ಣು ಭಕ್ತೆಯರ ಕಥೆಗಳನ್ನೂ ಈ ಕಾದಂಬರಿ ಒಳಗೊಂಡಿದೆ. ಈ ಎಲ್ಲ ಭಕ್ತೆಯರೂ ಬಯಸಿದ್ದು ಶ್ರೀಹರಿಯ ವಕ್ಷಸ್ಥಲದಲ್ಲಿ ಸಣ್ಣ ಜಾಗವನ್ನು. ಪದತಲದಲ್ಲಿಯೇ ಇರುವೆನೆಂದು ಕೋರಿಕೊಂಡರೂ, ಒಂದೇ ಒಂದು ಕ್ಷಣವಾದರೂ ಶ್ರೀಹರಿಯ ಹೃದಯದಲ್ಲಿ ತಮ್ಮ ಕಡೆಗೆ ಒಂದು ಪರಿಗಣನೆ ಸಿಗುವುದೋ ಎಂದು ದೈನ್ಯ, ಕಾತರಗಳಿಂದ ಜೀವಿತವಿಡೀ ಕಾದವರು ಅವರು.
ಈ ಪೌರಾಣಿಕ ಕಥೆಗಳೊಂದಿಗೆ ಕಾದಂಬರಿಯಲ್ಲಿ ಜಾನಕಿ ಹಾಗೂ ರಾಘವ್ ಎಂಬ ದಂಪತಿಗಳ ಸಾಮಾಜಿಕ ಕಥೆಯನ್ನೂ ಹೆಣೆಯಾಗಿದೆ. ಪುರಾಣ ಕಥೆಯ ಎಲ್ಲ ಹೆಣ್ಣುಗಳೂ ತಮ್ಮ ವಲ್ಲಭನ ವಕ್ಷಸ್ಥಲದಲ್ಲಿಯೇ ನೆಲೆಸಲು ಬಯಸುವಂತೆ, ಜಾನಕಿಯೆಂಬ ಕಥಾನಾಯಕಿಯೂ ಕಾಣೆಯಾದ ತನ್ನ ವಲ್ಲಭ ರಾಘವನ ವಕ್ಷಸ್ಥಳವನ್ನೇ ಬಯಸುತ್ತಾಳೆ. ಅವನಿಗಾಗಿ ಹುಡುಕುತ್ತಾ, ತಿರುಪತಿಯ ವೆಂಕಟೇಶ್ವರನಲ್ಲಿ ಮೊರೆಯಿಡುತ್ತಾಳೆ.
ಮಾರ್ಕೋಲು
`ಮಾರ್ಕೋಲು’ ವಿಧಿಯ ಕುರಿತ ಜನಪದ ಕಥೆಗಳ ಆಧಾರಿತ ಕಾದಂಬರಿ. ವಿಧಿಗೆ ಸಂಬಂಧಿಸಿದ ಕನ್ನಡ, ಮರಾಠಿ, ಸಂತಾಲಿ, ಗೊಂಡಿ, ತಮಿಳು ಮೊದಲಾದ ಎಲ್ಲ ಭಾಷೆಗಳಲ್ಲಿಯೂ ಇವರು ಹಲವು ಜನಪದ ಕಥೆಗಳನ್ನು ಆಧರಿಸಿ ಈ ಕಾದಂಬರಿಯನ್ನು ರಚಿಸಲಾಗಿದೆ. ಮೇಲ್ನೋಟಕ್ಕೆ ಇದು ಈಡಿಪಸ್ ಕಥೆಯ ಮಾದರಿ ಅನ್ನಿಸುತ್ತದೆ. ಆದರೆ ಅದನ್ನು ಮೀರಿ ಈ ನೆಲದ ಸಾಂಸ್ಕೃತಿಕ ಪ್ರಜ್ಞೆಯನ್ನು ಈ ಕಾದಂಬರಿ ಸೆರೆಹಿಡಿಯುತ್ತದೆ. ಈ ಕಥೆಗಳಲ್ಲಿ ಕೆಲವು `ಬದುಕು ವಿಧಿಯ ಅನುಸಾರವೇ ನಡೆಯುತ್ತದೆ’ ಎಂಬ ಸಿದ್ಧಾಂತವನ್ನು ಸಾರಿದರೆ, `ಮನುಷ್ಯ ಪ್ರಯತ್ನದಿಂದ ಅಥವಾ ಯುಕ್ತಿಯಿಂದ ವಿಧಿಗೇ ತಿರುಗೇಟು ನೀಡಬಹುದು,’ ಎಂಬ ವಾದವನ್ನು ಇನ್ನೂ ಕೆಲವು ಕಥೆಗಳು ಪ್ರತಿಪಾದಿಸುತ್ತವೆ. ಎರಡೂ ಬಗೆಯ ಕಥೆಗಳನ್ನೂ ಇಲ್ಲಿ ಸ್ವೀಕರಿಸಲಾಗಿದೆ. ಕಡೆಗೆ ವಿಧಿಗೆ ಮರುಬಾಣವೆಂಬಂತೆ `ಮಾರ್ಕೋಲು’ ಎಂಬ ಶೀರ್ಷಿಕೆಯ ಈ ಕಾದಂಬರಿ ಸಾಂಕೇತಿಕವಾಗಿ ಕೊನೆಗೊಳ್ಳುತ್ತದೆ.
ಕಥಾಸಂಕಲನಗಳು `ಆರನೇ ಬೆರಳು, ಕೆಂಪು ದಾಸವಾಳ, ಬೊಗಸೆಯಲ್ಲಿ ಕಥೆಗಳು, ಅಪರೂಪದ ಪುರಾಣ ಕಥೆಗಳು’ ಮೊದಲಾದ ಕಥಾಸಂಕಲನಗಳನ್ನೂ ರಚಿಸಿದ್ದಾರೆ. `ನೂತನ ಜಗದಾ ಬಾಗಿಲು’ ಎಂಬ ಕಥಾ ಸಂಕಲನವನ್ನು ಸಂಪಾದಿಸಿದ್ದಾರೆ. 58 ಕಥೆಗಾರರ ಕಥೆಗಳನ್ನು ಒಳಗೊಂಡಿರುವ ಈ ಪುಸ್ತಕದಲ್ಲಿ ಹಲವು ಲೇಖಕರ ಮೊದಲ ಪ್ರಕಟಣೆ. ಹೀಗೆ ಹೊಸ ಲೇಖಕರಿಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಅತ್ಯಂತ ಶ್ರಮ ವಹಿಸುವ ಇವರ ಹೃದಯ ವೈಶಾಲ್ಯತೆಗೆ ಬೆಲೆ ಕಟ್ಟಲಾಗದು. ಮುಂದೊಮ್ಮೆ ಅವರು ಪ್ರಸಿದ್ಧ ಲೇಖಕರಾದಾಗ ತಮ್ಮ ಮೊದಲ ಕಥೆ ಪ್ರಕಟವಾಗಿದ್ದು `ಉಪಾಸನಾ ಬುಕ್ಸ್’ ಸಂಸ್ಥೆಯಿಂದ ಎಂದು ನೆನೆಸಿಕೊಂಡರೆ ಅದೇ ತಮಗೆ ಅತ್ಯಂತ ಸಂತೋಷ ಕೊಡುವ ವಿಷಯ ಎನ್ನುತ್ತಾರೆ.
ಮಕ್ಕಳ ಸಾಹಿತ್ಯ
ಇಷ್ಟಕ್ಕೆ ಇವರ ಸಾಹಿತ್ಯ ಸೀಮಿತವಾಗಿರದೆ ಮಕ್ಕಳ ಸಾಹಿತ್ಯದ ಕಡೆಗೂ ಒಲವು ತೋರಿಸಿರುವುದು ಬಹಳ ಸಂತೋಷದ ವಿಷಯ. ಪ್ರಬುದ್ಧ ಲೇಖನಗಳತ್ತ ಚಿತ್ತ ಹರಿದಾಗ ಮಕ್ಕಳ ಮಟ್ಟಕ್ಕೆ ಇಳಿದು ಅವರಿಗೆ ಪ್ರಿಯಾಗುವಂತೆ ಕೃತಿ ರಚನೆ ಬಹಳ ಕಷ್ಟದ ಕೆಲಸವೇ. ಅಸಾಧ್ಯ ಎನ್ನುವ ಮಾತೇ ಇಲ್ಲ ಎನ್ನುವ ಆಶಾ ಅವರ ಸಾಧನೆಗೆ ಇನ್ನೊಂದು ಚಿನ್ನದ ಗರಿ. `ಚೂಡಾಮಣಿ, ಕ್ಷಮಾದಾನ, ಬಂಗಾರದ ಪಂಜರ ಮತ್ತು ಇತರ ಮಕ್ಕಳ ನಾಟಕಗಳು, ‘ ಮಕ್ಕಳಿಗಾಗಿ ರಚಿಸಿದ ಕೃತಿಗಳು.
ನೀ ರಘುರಾಮ
2018ರಲ್ಲಿ ಪ್ರಕಟಗೊಂಡ `ನೀ ರಘುರಾಮ’ ಆಶಾ ರಘು ಅವರ ರಚನೆಯ ಭಾವಗೀತೆಗಳಲ್ಲಿ ಆಯ್ದ ಕೆಲವು ಗೀತೆಗಳು `ನೀ ರಘುರಾಮ’ ದಾಂಪತ್ಯ ಗೀತೆಗಳ ಧ್ವನಿಸುರುಳಿಯಲ್ಲಿವೆ. ಇದರಲ್ಲಿ `ನೀ ರಘುರಾಮ, ಸೆರೆ ಹಿಡಿಯುವೆ ನಿನ್ನ, ಚಟಪಟ ಸಾಸಿವೆ, ಕತ್ತಲಾಗುತ್ತಿದೆ ಹಚ್ಚು ಹಣತೆ, ಬಾ ನನ್ನ ಕನಸಿನೂರಿಗೆ, ಒಂದು ಇರುಳಿನ ಬಾನಿನಲಿ, ಎಲ್ಲೋ ಇದ್ದೆ ನೀ, ತೂಗುಯ್ಯಾಲೆ ಬರಿ ಆಟವಲ್ಲ’ ಎಂಬ ಎಂಟು ಗೀತೆಗಳಿದ್ದು, ಇವುಗಳಿಗೆ ಪ್ರೇಮಲತಾ ದಿವಾಕರ್ ಸಂಗೀತ ಸಂಯೋಜನೆ ನೀಡಿ, ಎಲ್ಲ ಹಾಡುಗಳನ್ನೂ ತಾವೇ ಹಾಡಿದ್ದಾರೆ. ಲಹರಿ ಮ್ಯೂಸಿಕ್ ಸಂಸ್ಥೆ ಈ ಧ್ವನಿಸುರುಳಿಯನ್ನು ಹೊರತಂದಿದ್ದು, ಇದು ಯೂಟ್ಯೂಬ್ ನಲ್ಲಿ ಲಭ್ಯವಿದೆ.
ಭಕ್ತಿಗೀತೆಗಳು
ಬಂದಳು ಅಮ್ಮ (ಭಕ್ತಿಗೀತೆಗಳು) 2020, ಇದು ಆಶಾ ರಘು ಬನಶಂಕರಿ ದೇವಿಯ ಕುರಿತು ರಚಿಸಿರುವ ಭಕ್ತಿಗೀತೆಗಳು. ಇವು `ಬಂದಳು ಅಮ್ಮ’ ಧ್ವನಿ ಸುರುಳಿಯಲ್ಲಿದೆ. ಇದರಲ್ಲಿ `ಬನಶಂಕರಿ ಅಮ್ಮ, ಒಮ್ಮೆ ಬನದಮ್ಮ, ದೀಪ ಹಚ್ಚು, ಏನ ಕೊಟ್ಟರು, ನಿನ್ನ ಆಲಯದ, ಬೆಳಗಿನ ಜಾವ, ಮಿಂದು ನಾ, ಬಂದವಳು ಅಮ್ಮ,’ ಮೊದಲಾದ ಗೀತೆಗಳಿವೆ. ಅನೇಕ ಪ್ರಸಿದ್ಧ ಗಾಯಕರು ಹಾಡಿದ್ದಾರೆ. ರಾಘವೇಂದ್ರ ಬಿಜಾಡೆಯವರು ಇದಕ್ಕೆ ಸಂಗೀತ ನಿರ್ದೇಶನ ನೀಡಿ, ಲಹರಿ ಮ್ಯೂಸಿಕ್ ಸಂಸ್ಥೆ ಈ ಧ್ವನಿಸುರುಳಿಯನ್ನು ಹೊರತಂದಿದೆ.
ಇದಾದ ಮೇಲೆ `ಶರಣಾಗಿ ಬಂದಿರುವೆ ಬನಶಂಕರಿ’ ಎಂಬ ಇನ್ನೊಂದು ಭಕ್ತಿಗೀತೆಗಳ ಗುಚ್ಛ ಹೊರಬಂದಿದೆ. ಅದರ ಎಲ್ಲಾ ಸಾಹಿತ್ಯವನ್ನೂ ಆಶಾ ರಘು ರಚಿಸಿದ್ದು, ಇದಕ್ಕೂ ಸಹ ಪ್ರೇಮಲತಾ ದಿವಾಕರ್ ಸಂಗೀತ ಸಂಯೋಜನೆ ಹಾಗೂ ಗಾಯನವಿದೆ.
ಹೊಸಬರಿಗೆ ಪ್ರೋತ್ಸಾಹ
ಆಶಾ ರಘು ನೇತೃತ್ವದಲ್ಲಿ 2014ರಲ್ಲಿ ಆರಂಭವಾದ `ಉಪಾಸನಾ ಬುಕ್ಸ್’ ಪ್ರಕಾಶನ ಸಂಸ್ಥೆಯು, 2025ರಲ್ಲಿ ಮರುಚಾಲನೆಯನ್ನು ಪಡೆದುಕೊಂಡಿದೆ. ಖ್ಯಾತ ಬರಹಗಾರರ ಕೃತಿಗಳನ್ನು ಪ್ರಕಟಿಸುವುದರೊಂದಿಗೆ, ಹೆಚ್ಚು ಹೊಸ ಬರಹಗಾರರ ಕೃತಿಗಳನ್ನು ಪ್ರಕಟಿಸಿ ಪ್ರೋತ್ಸಾಹಿಸುವ ಆಶಯವನ್ನು ಹೊಂದಿದೆ.
ಏಳು ಲೇಖಕರು ರಚಿಸಿರು ಕಾದಂಬರಿಗಳು, `ಅದೃಶ್ಯ ಬೇರುಗಳು, ನೇಗಿಲ ಗೆರೆ, ಕವನ ಸಂಚಲನ, ನೀರ ಮೇಗಲ ಸಹಿ, ಸುಡೋಕು, ಅಮ್ಮ ಅಂದ್ರೆ ಭೂಮಿ’ ಕಥಾ ಸಂಕಲನಗಳು ಇವರ ಪ್ರಕಾಶನದಲ್ಲಿ ಬೆಳಕು ಕಂಡ ಕೃತಿಗಳು. ತಮ್ಮ ಪ್ರೊಫೆಶನಲಿಸಂ ಸ್ವಲ್ಪ ಮಟ್ಟಕ್ಕೆ ಪಕ್ಕಕ್ಕೆ ಸರಿಸಿ ಅತ್ಯಂತ ಸಣ್ಣ ಕಾದಂಬರಿಕಾರ ಹದಿನಾಲ್ಕು ವರ್ಷದ ಹುಡುಗ ಮಾಸ್ಟರ್ ಪ್ರಣವ್ ಭಾರದ್ವಾಜನ `ಅಂಗದ’ ಎನ್ನುವ ಪೌರಾಣಿಕ ಕಾದಂಬರಿಯನ್ನು ತಮ್ಮ `ಉಪಾಸನಾ ಬುಕ್ಸ್’ ಸಂಸ್ಥೆಯಿಂದ ಪ್ರಕಟಿಸುವ ಮೂಲಕ ಈ ಹುಡುಗನ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು.
ಹೊಸ ಬರಹಗಾರರನ್ನು ಸಾಹಿತ್ಯಲೋಕಕ್ಕೆ ಪರಿಚಯಿಸುವ ಇವರ ಉದಾರ ವ್ಯಕ್ತಿತ್ವದ ಮತ್ತೊಂದು ಮುಖದ ಪರಿಚಯ ಮಾಡಿಕೊಡುತ್ತದೆ. ಸಮಾಜೋನ್ಮುಖಿ ಆಶಾ ರಘುರವರ ಮತ್ತೊಂದು ಮುಖವನ್ನು ಇಲ್ಲಿ ಕಾಣಬಹುದು.
ನ್ಯಾನೋ ಕಥೆಗಳು
`ಬೊಗಸೆಯಲ್ಲಿ ಕಥೆಗಳು’ ಅತಿಸಣ್ಣ ಕಥೆಗಳ ಸಂಕಲನ ನ್ಯಾನೋ ಕಥೆಗಳೆಂದೇ ಹೆಚ್ಚು ಜನಪ್ರಿಯವಾಗಿರುವ ಅತಿಸಣ್ಣ ಕಥೆಗಳ ಸಂಕಲನವಿದು. ಇಲ್ಲಿನ ಕಥೆಗಳು ಸುಮಾರು ಮೂರ್ನಾಲ್ಕು ಸಾಲುಗಳಲ್ಲಿ ಅಥಾವಾ ಕೆಲವೊಂದು ಒಂದರ್ಧ ಪುಟದಲ್ಲಿ ಮುಗಿದುಬಿಡುತ್ತವೆ. ಇಲ್ಲಿನ ರಚನೆಯ ಕುರಿತು ಅರಿಕೆಯಲ್ಲಿ ಬರೆಯುತ್ತಾ ಲೇಖಕಿ `ನನ್ನ ಮಗಳನ್ನು ಮುದ್ದು ಮಾಡುವಾಗಿನ ಖುಷಿಯನ್ನೇ ಇವುಗಳ ರಚನೆಯಲ್ಲಿ ಕಂಡಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ. ಈ ಸಂಕಲನಕ್ಕೆ `ಬೊಗಸೆಯ ಕಥೆಗಳು’ ಎಂಬ ಹೆಸರಿಡಲು ಜಯಂತ್ ಕಾಯ್ಕಿಣಿಯವರ `ಬೊಗಸೆಯಲ್ಲಿ ಮಳೆ’ ಕೃತಿಯೇ ಪ್ರೇರಣೆ ಎನ್ನುತ್ತಾರೆ ಲೇಖಕಿ.
ಈ ಸಂಕಲನದಲ್ಲಿ ಸುಮಾರು 160 ಅತಿ ಸಣ್ಣ ಕಥೆಗಳಿವೆ. ರಾಮಾಯಣ, ಮಹಾಭಾರತ, ಭಾಗವತ, ಉಪನಿಷತ್ತು, ಶಿವಪುರಾಣ ಮೊದಲಾದವುಗಳಿಂದ ಆಯ್ದ ಭಾರತೀಯ ಸಂಸ್ಕೃತಿಯಲ್ಲಿ ಅಡಗಿರುವ ಉದಾತ್ತ ಅಂಶಗಳತ್ತ ಬೆಳಕು ಚೆಲ್ಲುವ ಹಲವು ಅಪರೂಪದ ಕಥೆಗಳು ಇಲ್ಲಿವೆ.
ಅಂಕಣಗಾರ್ತಿ
ಅಂಕಣಕಾರರಾಗಿಯೂ ಆಶಾ ರಘು ಓದುಗರ ಗಮನ ಸೆಳೆದಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯ `ಬೋಧಿವೃಕ್ಷ’ದಲ್ಲಿ ಕೆಲಕಾಲ `ಸ್ವಾರಸ್ಯ ಕಥೆಗಳು’ ಎಂಬ ಹೆಸರಿನಲ್ಲಿ ಇವರ ಅಂಕಣ ಪ್ರಕಟಗೊಳ್ಳುತ್ತಿತ್ತು. ನಂತರ ವಿಜಯವಾಣಿ ಪತ್ರಿಕೆಯಲ್ಲಿಯೂ ಕೆಲವು ಕಥೆಗಳು ಪ್ರಕಟವಾಗಿವೆ.
ಪುರಾಣಗಳಿಂದ ಕಥೆಗಳನ್ನು ಆಯ್ದುಕೊಂಡು ಲೇಖಕಿ ಇಲ್ಲಿ ಮರು ನಿರೂಪಣೆ ಮಾಡಿದ್ದಾರೆ. ಕೆಲವು ಕಡೆ ಕಥೆಯ ಸ್ವಾರಸ್ಯಕ್ಕಾಗಿ, ಅವರು ತಮ್ಮ ಕಲ್ಪನೆಯನ್ನೂ ಪೂರಕ, ಪೋಷಕವಾಗಿ ಸೇರಿಸಿದ್ದಾರೆ.
ಭಾರತೀಯ ಸಂಸ್ಕೃತಿಯ ಪರಿಚಯ
ರಾಮಾಯಣ, ಮಹಾಭಾರತ, ಭಾಗತ, ಉಪನಿಷತ್ತು, ಶಿವಪುರಾಣ ಮೊದಲಾದವುಗಳಿಂದ ಆಯ್ದ ಭಾರತೀಯ ಸಂಸ್ಕೃತಿಯಲ್ಲಿ ಅಡಗಿರುವ ಉದಾತ್ತ ಅಂಶಗಳತ್ತ ಬೆಳಕು ಚೆಲ್ಲುವ ಹಲವು ಅಪರೂಪದ ಕಥೆಗಳು ಇಲ್ಲಿವೆ.`ಪಟಾಚಾರ’ ನಾಟಕ ಬೌದ್ಧ ಭಿಕ್ಷುಣಿಯೊಬ್ಬಳ ಕಥೆಯನ್ನು ಆಧರಿಸಿದ್ದು. `ಚೂಡಾಮಣಿ’ ನಾಟಕ ರಾಮಾಯಣವನ್ನು ಆಧರಿಸಿದ ರಾಮಸೀತೆಯರ ಪ್ರೇಮಕಥೆಯಾಗಿದ್ದು, ಇದಾಗಲೇ ಪ್ರತ್ಯೇಕವಾದ ಕೃತಿಯಾಗಿ ಪ್ರಕಟಗೊಂಡಿತ್ತು. ಆದರಲ್ಲಿ ಒಂದಷ್ಟು ತಿದ್ದುಪಡಿಗಳೊಂದಿಗೆ ಸೇರಿಕೊಂಡಿದೆ.
`ಕ್ಷಮದಾನ, ಬಂಗಾರದ ಪಂಜರ, ಎಣ್ಣೆಗಾಯ್, ಕೃಷ್ಣ ಸುಧಾಮ, ಒನಕೆ ಪೂಜೆ, ಚಿನ್ನದ ಮಾವಿನಹಣ್ಣು’ ಮೊದಲಾದ ಇನ್ನಿತರ ನಾಟಕಗಳೂ ಸಂಕಲನದಲ್ಲಿದೆ. ಹೀಗೆ ಈ ಸಂಕಲನದಲ್ಲಿ ದೊಡ್ಡ ನಾಟಕಗಳೂ ಇವೆ. ಕಿರು ನಾಟಕಗಳೂ, ಹಿರಿಯರದೂ ಜೊತೆಗೆ ಮಕ್ಕಳದೂ ಇವೆ.
ಕಿರು ಸಾಮಾಜಿಕ ನಾಟಕ
ಇದೊಂದು ಕಿರು ಸಾಮಾಜಿಕ ನಾಟಕ. ಈ ನಾಟಕವನ್ನು ಹದಿನಾಲ್ಕು ವರ್ಷ ವಯಸ್ಸಿನ ಹುಡುಗಿಯ ಅತ್ಯಾಚಾರ ಹಾಗೂ ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 14, 2004ರಂದು ಗಲ್ಲಿಗೇರಿಸಲ್ಪಟ್ಟ ಕೋಲ್ಕತಾದ ಧನಂಜಯ್ ಚಟರ್ಜಿಯ ಪ್ರಕರಣದ ಹಿನ್ನೆಲೆಯಲ್ಲಿ ರಚಿಸಲಾಗಿದೆ. ಧನಂಜಯ್ ಪ್ರಕರಣವನ್ನು ಆಧಾರವಾಗಿ ಇಟ್ಟುಕೊಳ್ಳಲಾಗಿದೆಯೇ ವಿನಾ ಉಳಿದಂತೆ ಇಲ್ಲಿನ ಯಾವ ಪಾತ್ರಗಳೂ ಜೀವಂತವಲ್ಲ. ವಾಸ್ತವದ ಸಂಗತಿಯೊಂದರ ಹಿನ್ನೆಲೆಯಲ್ಲಿ ಕಲ್ಪನೆಯ ಆಸರೆಯೊಂದಿಗೆ ರಚಿಸಲಾಗಿರುವ ನಾಟಕವಿದು.
ಪ್ರಶಸ್ತಿ ಪುರಸ್ಕಾರಗಳು
ಈ ಸಾಧಕಿಗೆ ದೊರೆತ ಗೌರವ, ಮನ್ನಣೆಗಳೆಂದರೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (2014), ಸೂರ್ಯನಾರಾಯಣ ಚಡಗ ಪ್ರಶಸ್ತಿ (2014), ಕನ್ನಡ ಸಾಹಿತ್ಯ ಪರಿಷತ್ತಿನ ಪಳಕಳ ಸೀತಾರಾಮಭಟ್ಟ ಪ್ರಶಸ್ತಿ (2019), ರಾಯಚೂರು ಕನ್ನಡ ಸಾಹಿತ್ಯ ಪರಿಷತ್ತಿನ ರಾಜಲಕ್ಷ್ಮಿ ಬರಗೂರು ರಾಮಚಂದ್ರಪ್ಪ ಪ್ರಶಸ್ತಿ (2020), ಸೇಡಂನ ಅಮ್ಮ ಪ್ರಶಸ್ತಿ (2021), ಕರ್ನಾಟಕ ಲೇಖಕಿಯರ ಸಂಘದ ತ್ರಿವೇಣಿ ದತ್ತಿನಿಧಿ ಪ್ರಶಸ್ತಿ (2023) ಇತ್ಯಾದಿ ಪಡೆದಿದ್ದಾರೆ. ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 2023ರಲ್ಲಿ ಇವರಿಗೆ `ಸಾಹಿತ್ಯಾಮೃತ ಸರಸ್ವತಿ’ ಎಂಬ ಬಿರುದು ನೀಡಿ ಗೌರವಿಸಿದೆ.
– ಟಿ.ಆರ್. ಉಷಾರಾಣಿ
(ಈ ಲೇಖನ ಅಚ್ಚಿಗೆ ಹೋಗುವ ಹೊತ್ತಿಗೆ ಸಾಧಕಿ ಆಶಾ ರಘು ತೀರಿಕೊಂಡಿದ್ದರು. ಓದುಗರ ಪರವಾಗಿ ಗೃಹಶೋಭಾ ಇವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಾಳೆ. ಸಂ.)





