ಬೆಂಕಿಯಲ್ಲಿ ಅರಳಿದ ಹೂ ಅಕ್ಕೈ ಪದ್ಮಶಾಲಿ
ಅಕ್ಕೈ ಪದ್ಮಶಾಲಿ ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಾರ್ತಿ, ಗಾಯಕಿ ಮತ್ತು ಸರ್ವೋಚ್ಚ ನ್ಯಾಯಾಲಯದ ಸಮಾನ ಅವಕಾಶ ನೀತಿ ಸಮಿತಿ ಸದಸ್ಯೆ. ಇವರು ತಮ್ಮ ಸಾಧನೆಗಳಿಂದ ಈ ಮಟ್ಟಕ್ಕೆ ಏರಿದ್ದು ಹೇಗೆ ಎಂದು ಅವರಿಂದಲೇ ವಿವರವಾಗಿ ತಿಳಿಯೋಣವೇ......?
ಅಕ್ಕೈ ಪದ್ಮಶಾಲಿ ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಾರ್ತಿ, ಗಾಯಕಿ ಮತ್ತು ಸರ್ವೋಚ್ಚ ನ್ಯಾಯಾಲಯದ ಸಮಾನ ಅವಕಾಶ ನೀತಿ ಸಮಿತಿ ಸದಸ್ಯೆ. ಇವರು ತಮ್ಮ ಕಾರ್ಯ ಚಟುವಟಿಕೆಗಾಗಿ, ಅತ್ಯುನ್ನತ ನಾಗರಿಕ ಗೌರವವಾದ ರಾಜ್ಯೋತ್ಸವ ಪ್ರಶಸ್ತಿ ಮತ್ತು ಭಾರತೀಯ ವರ್ಚುವಲ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಮೊದಲ ಟ್ರಾನ್ಸ್ ಜೆಂಡರ್ ಮಹಿಳೆ.

ಭಾರತದಲ್ಲೇ ಮೊದಲು
ತಮ್ಮ ಲಿಂಗವನ್ನು ಮಹಿಳೆ ಎಂದು ನಮೂದಿಸುವ ಚಾಲನಾ ಪರವಾನಗಿಯನ್ನು ಪಡೆದ ದೇಶದ ಮೊದಲ ಟ್ರಾನ್ಸ್ ಜೆಂಡರ್ ವ್ಯಕ್ತಿ ಅಕ್ಕೈ ಪದ್ಮಶಾಲಿ. ತಮ್ಮ ವಿವಾಹವನ್ನು ನೋಂದಾಯಿಸಿಕೊಂಡ ಕರ್ನಾಟಕದ ಮೊದಲ ಟ್ರಾನ್ಸ್ ಜೆಂಡರ್ ವ್ಯಕ್ತಿ ಕೂಡ ಹೌದು.
ಅಕ್ಕೈ ಪದ್ಮಶಾಲಿಯವರ ಪುತ್ರ ಅವಿನ್ ಗೆ ತನ್ನ ತಂದೆಯ ಹೆಸರಿಲ್ಲದ ಪಾಸ್ ಪೋರ್ಟ್ ದೊರೆತಿದೆ. ಅಪ್ಪನ ಹೆಸರಿಲ್ಲದ ಟ್ರಾನ್ಸ್ ಜೆಂಡರ್ ತಾಯಿಯ ಹೆಸರಿನಲ್ಲಿ ಪಾಸ್ ಪೋರ್ಟ್ ನೀಡಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲು. ಲೈಂಗಿಕ ಅಲ್ಪಸಂಖ್ಯಾತ ಸಮುದಾಯದಿಂದ ಕಾಂಗ್ರೆಸ್ ರಾಜ್ಯ ಘಟಕಕ್ಕೂ ಸೇರ್ಪಡೆಯಾದ ಮೊದಲ ವ್ಯಕ್ತಿ ಅಕ್ಕೈ ಪದ್ಮಶಾಲಿ.
2017ರ ನವೆಂಬರ್ ರಂದು ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಭಾರತಕ್ಕೆ ಭೇಟಿ ನೀಡಿದಾಗ, ಅಕ್ಕೈ ಪದ್ಮಶಾಲಿ ಟೌನ್ ಹಾಲ್ ನ ಭಾಗವಾಗಲು ಆಹ್ವಾನಿತರಾದ ಮೊದಲ ಟ್ರಾನ್ಸ್ ಮಹಿಳೆ. ಇದಕ್ಕೂ ಮೊದಲು 2015ರಲ್ಲಿ ಅವರನ್ನು ಶ್ವೇತಭವನಕ್ಕೆ ಆಹ್ವಾನಿಸಲಾಗಿತ್ತು. ಭಾರತದ ಸಿಜೆಐ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಭಾರತದ ರಾಷ್ಟ್ರಪತಿಗಳು ಅಕ್ಕೈ ಪದ್ಮಶಾಲಿಯವರನ್ನು ಆಹ್ವಾನಿಸಿದ್ದರು.
ಅಕ್ಕೈ ಪದ್ಮಶಾಲಿ ಬೆಂಗಳೂರಿನಲ್ಲಿ ಇರುವ ಹಕ್ಕುಗಳ ಗುಂಪಾದ ಸಂಗಮದಲ್ಲಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. ಲೈಂಗಿಕ ಅಲ್ಪಸಂಖ್ಯಾತರ ಜೊತೆ ಲಿಂಗತ್ವ ಅಲ್ಪಸಂಖ್ಯಾತರ ಘನತೆ ಮತ್ತು ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ ರ ಕಠಿಣ ಕಾನೂನನ್ನು ರದ್ದುಗೊಳಿಸಬೇಕು ಎಂಬುದು ಅವರ ನಿಲುವು. ಏಕೆಂದರೆ ಈ ಕಾನೂನಿನಡಿ ಪೊಲೀಸರು ಅವರನ್ನು ಹಲವಾರು ಬಾರಿ ನಿಂದಿಸಿದ್ದಾರೆ, ಲೈಂಗಿಕತೆಗೆ ಒತ್ತಾಯಿಸುತ್ತಾರೆ ಎನ್ನುತ್ತಾರೆ ಅಕ್ಕೈ.

`ಒಂದೆಡೆ' ಸಂಘಟನೆ
ಮಕ್ಕಳು, ಮಹಿಳೆಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ಪ್ರತಿಪಾದಿಸಲು ಅಕ್ಕೈ `ಒಂದೆಡೆ' ಎಂಬ ಮಾನವ ಹಕ್ಕುಗಳ ಸಂಘಟನೆಯನ್ನು ಸ್ಥಾಪಿಸಿದ್ದಾರೆ. ಈ ಸಂಸ್ಥೆ ಮೂಲಕ ಸಮಾಜವನ್ನು ತಲುಪಲು `ಭಯ ಬಿಡಿ ಪ್ರೀತಿ ಮಾಡಿ' ಎಂಬ ಆಂದೋಲನವನ್ನೂ ಹಮ್ಮಿಕೊಂಡಿದ್ದಾರೆ. ಇವೆಲ್ಲ ಸಾಧನೆಯ ಹಿಂದೆ ಅಕ್ಕೈ ಪದ್ಮಶಾಲಿ ಪಟ್ಟ ಪರಿಶ್ರಮ, ನೋವು, ತೊಳಲಾಟ, ಗೊಂದಲ ಒಂದೆರಡಲ್ಲ. ಅವರ ಪ್ರತಿ ಹಂತ ಮುಳ್ಳಿನ ಹಾದಿಯೇ ಆಗಿತ್ತು.
ಬಾಲ್ಯದಲ್ಲಿ ಪುರುಷ ಲಿಂಗ ಪಾತ್ರಕ್ಕೆ ಹೊಂದಿಕೊಳ್ಳಲು ತನ್ನ ಶಕ್ತಿಮೀರಿ ಪ್ರಯತ್ನಿಸಿದರು. ಅದು ಸಾಧ್ಯವಾಗದಿದ್ದಾಗ 12ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಯತ್ನವನ್ನೂ ಮಾಡಿದ್ದರು. ಮಾನಸಿಕ ತೊಳಲಾಟ ತಾನು ಗಂಡೋ... ಹೆಣ್ಣೋ...? ತನ್ನ ದೇಹ ಗಂಡಿನಂತಿದ್ದರೆ, ತನ್ನ ಭಾವನೆಗಳೇಕೆ ಹೆಣ್ಣಿನಂತಿವೆ ಎಂದು ತಮ್ಮನ್ನು ತಾವು ಕೇಳಿಕೊಂಡು, ಗೊಂದಲಕ್ಕೆ ಒಳಗಾಗುತ್ತಿದ್ದರು. ತನ್ನ ಸಹೋದರಿಯ ಬಟ್ಟೆಗಳನ್ನು ಧರಿಸಿದಾಗ ಅಥವಾ ಹುಡುಗಿಯರೊಂದಿಗೆ ಆಟವಾಡಿದಾಗೆಲ್ಲಾ ತನ್ನ ಪೋಷಕರೇಕೆ ಕೋಪಗೊಳ್ಳುತ್ತಾರೆ? ಏಕೆ ಗದರಿಸುತ್ತಾರೆ ಎಂಬ ಪ್ರಶ್ನೆಗಳು ಅವರನ್ನು ಕಾಡುತ್ತಿದ್ದವು.





