ಧಾರ್ಮಿಕ ಸೌಹಾರ್ದತೆಯ ಹೆಸರಿನಲ್ಲಿ ಹಿಂದೂ ದೇವಾಲಯಗಳ ಮೂಲ ಸ್ವರೂಪವನ್ನು ಬದಲಿಸುವುದು ಎಷ್ಟು ಸರಿ?
ಎಲ್ಲ ಧರ್ಮಗಳಿಗೂ ಸಮಾನ ಗೌರವ ನೀಡುವುದೇ ಜಾತ್ಯತೀತತೆ? ಅಥವಾ ಒಂದು ಧರ್ಮದ ಪವಿತ್ರ ಸ್ಥಳದಲ್ಲಿ ಮತ್ತೊಂದು ಧರ್ಮದ ಸಂಕೇತಗಳನ್ನು ಚಿತ್ರಿಸುವುದೇ ಧಾರ್ಮಿಕ ಸೌಹಾರ್ದತೆಯೇ? ಭಾರತವೆಂದರೆ ವಿವಿಧ ಧರ್ಮಗಳು, ಭಾಷೆಗಳು, ಸಂಸ್ಕೃತಿಗಳು ಮತ್ತು ಸಂಪ್ರದಾಯಗಳು ಸಹಬಾಳ್ವೆ ನಡೆಸುತ್ತಿರುವ ದೇಶ. ಇಲ್ಲಿನ ವೈವಿಧ್ಯವೇ ನಮ್ಮ ಶಕ್ತಿ. ಪರಸ್ಪರರ ಧಾರ್ಮಿಕ ನಂಬಿಕೆಗಳನ್ನು ಗೌರವಿಸುವುದು, ಮತ್ತೊಬ್ಬರ ಆರಾಧನಾ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟುಮಾಡದಿರುವುದು ಮತ್ತು ಎಲ್ಲರಿಗೂ ಸಮಾನ ಹಕ್ಕುಗಳನ್ನು ಖಾತರಿಪಡಿಸುವುದು ನಮ್ಮ ಸಂವಿಧಾನದ ಆಶಯವಾಗಿದೆ. ಆದರೆ ಕೆಲವೊಮ್ಮೆ ಜಾತ್ಯತೀತತೆ ಮತ್ತು ಧಾರ್ಮಿಕ ಸೌಹಾರ್ದತೆಯ ಅರ್ಥವನ್ನೇ ತಪ್ಪಾಗಿ ಗ್ರಹಿಸಲಾಗುತ್ತಿದೆಯೇ? ಎಂಬ ಅನುಮಾನ ಮೂಡುವ ಘಟನೆಗಳು ನಡೆಯುತ್ತವೆ.
ಧಾರ್ಮಿಕ ಸೌಹಾರ್ದತೆಯ ಉದ್ದೇಶ ಒಳ್ಳೆಯದೇ ಇರಬಹುದು. ಆದರೆ ಆ ಉದ್ದೇಶವನ್ನು ಸಾಧಿಸುವ ವಿಧಾನವೂ ಸರಿಯಾಗಿರಬೇಕಲ್ಲವೇ? ಯಾರ ಧಾರ್ಮಿಕ ಭಾವನೆಗಳಿಗೂ ನೋವುಂಟುಮಾಡದೆ ಸೌಹಾರ್ದತೆ ಬೆಳೆಸುವುದು ಸಾಧ್ಯವಿಲ್ಲವೇ? ಈ ಘಟನೆಯ ಹಿನ್ನೆಲೆಯಲ್ಲಿ ಕೆಲವು ಮೂಲಭೂತ ಪ್ರಶ್ನೆಗಳನ್ನು ಕೇಳುವುದು ಅಗತ್ಯವಾಗಿದೆ.
ಏನಿದು ಅರ್ಕೇಶ್ವರ ದೇವಾಲಯದ ಗೋಡೆಯ ಮೇಲಿನ ವಿವಾದ?

2026ರ ಅಕ್ಟೋಬರ್ನಲ್ಲಿ ನಾಡಿನಲ್ಲಿ ಎಲ್ಲೆಡೆ ದಸರಾ ಸಂಭ್ರಮದ ಕಳೆ ಮೂಡಿದ್ದರೆ, ಕೆ.ಆರ್ ನಗರ ಎಡತೊರೆ ಗ್ರಾಮದ ಐತಿಹಾಸಿಕ ಶ್ರೀ ಅರ್ಕೇಶ್ವರ ದೇಗುಲದ ನವೀಕರಣ ಗೊಳ್ಳುತ್ತಿರುವ ಸಮಯದಲ್ಲಿ ದೇವಾಲಯದ ಆವರಣದ ಗೋಡೆಯ ಹಸಿರು ಬಣ್ಣದಲ್ಲಿ ಮಸೀದಿ ಚಿತ್ರ ಹಾಗೂ ಕೆಂಪು ಬಣ್ಣದಲ್ಲಿ ಶಿಲುಬೆಯನ್ನು ಬಿಡಿಸಲಾಗಿರುವುದು ಪತ್ತೆಯಾಗಿದ್ದು ಸಹಜವಾಗಿ ಇದು ಹಿಂದೂ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಈ ಚಿತ್ರಗಳು ಸಾರ್ವಜನಿಕರ ಗಮನಕ್ಕೆ ಬಂದ ನಂತರ ಆಕ್ಷೇಪಗಳು ವ್ಯಕ್ತವಾದವು. ಘಟನೆಯ ಕುರಿತು ಸುದ್ದಿಗಳು ಪ್ರಕಟವಾದವು. ಸ್ಥಳೀಯ ಅಧಿಕಾರಿಗಳು ಪರಿಶೀಲನೆ ನಡೆಸಿದರು ಮತ್ತು ಗೋಡೆಯ ಮೇಲಿನ ಚಿತ್ರಗಳಿಗೆ ಬಣ್ಣ ಬಳಿದು ಅವುಗಳನ್ನು ಅಳಿಸುವ ಕ್ರಮ ಕೈಗೊಳ್ಳಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೇವಾಲಯದ ಪಾರುಪತ್ತೇದಾರ ಆರತಿ ಹಾಗೂ ಆರ್ಟಿಸ್ಟ್ ವಿನಯ್ ವಿರುದ್ದ ದೂರು ದಾಖಲಾಗಿದ್ದು, ಈ ಬೆಳವಣಿಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
- ಐತಿಹಾಸಿಕ ಹಿಂದೂ ದೇವಾಲಯದ ಗೋಡೆಯ ಮೇಲೆ ಇಂತಹ ಧಾರ್ಮಿಕ ಚಿತ್ರಗಳನ್ನು ಬಿಡಿಸುವ ನಿರ್ಧಾರವನ್ನು ಕೈಗೊಂಡವರು ಯಾರು?
- ದೇವಾಲಯದ ಆಡಳಿತ ಮಂಡಳಿ ಅಥವಾ ಸಂಬಂಧಪಟ್ಟ ಪ್ರಾಧಿಕಾರದ ಅನುಮತಿ ಪಡೆಯಲಾಗಿತ್ತೇ?
- ಈ ಚಿತ್ರಗಳನ್ನು ಬಿಡಿಸುವುದರ ಹಿಂದಿನ ಉದ್ದೇಶವೇನು?
- ದೇವಾಲಯದ ಮೂಲ ಸ್ವರೂಪ ಮತ್ತು ಧಾರ್ಮಿಕ ಪರಂಪರೆಯನ್ನು ಕಾಪಾಡುವ ಹೊಣೆಗಾರಿಕೆ ಯಾರದ್ದು?
- ಧಾರ್ಮಿಕ ಸೌಹಾರ್ದತೆಯನ್ನು ವ್ಯಕ್ತಪಡಿಸಲು ಇದೇ ವಿಧಾನವನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಏನಿತ್ತು?
ಹಳೆ ಎಡತೊರೆಯ ಶ್ರೀ ಅರ್ಕೇಶ್ವರ ದೇವಾಲಯ, ಪೌರಾಣಿಕ ಹಿನ್ನೆಲೆ, ಇತಿಹಾಸ ಮತ್ತು ವೈಶಿಷ್ಟ್ಯಗಳು

ಒಂದು ದೇವಾಲಯವೆಂದರೆ ಕೇವಲ ಪೂಜೆ ನಡೆಯುವ ಕಟ್ಟಡವಲ್ಲ. ಅದು ಒಂದು ಪ್ರದೇಶದ ಇತಿಹಾಸ, ಜನರ ನಂಬಿಕೆ, ರಾಜವಂಶಗಳ ಕೊಡುಗೆ, ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸುತ್ತದೆ. ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲ್ಲೂಕಿನ ಹಳೆ ಎಡತೊರೆಯಲ್ಲಿರುವ ಶ್ರೀ ಅರ್ಕೇಶ್ವರ ಸ್ವಾಮಿ ದೇವಾಲಯವು ಪೌರಾಣಿಕ ನಂಬಿಕೆ, ಐತಿಹಾಸಿಕ ಪರಂಪರೆ ಮತ್ತು ಕಾವೇರಿ ನದಿಯ ಪಾವಿತ್ರ್ಯವನ್ನು ತನ್ನೊಳಗೆ ಹುದುಗಿಸಿಕೊಂಡಿರುವ ಪ್ರಸಿದ್ಧ ಶಿವಕ್ಷೇತ್ರವಾಗಿದೆ. ಕಾವೇರಿ ನದಿಯ ತೀರದಲ್ಲಿರುವ ಈ ದೇವಾಲಯವು ಭಕ್ತರ ಪಾಲಿಗೆ ಧಾರ್ಮಿಕ ಶ್ರದ್ಧೆಯ ಕೇಂದ್ರವಾಗಿದ್ದು, ಈ ಪ್ರದೇಶದ ಸಾಂಸ್ಕೃತಿಕ ಪರಂಪರೆಯಲ್ಲಿಯೂ ಮಹತ್ವದ ಸ್ಥಾನ ಪಡೆದಿದೆ.
ಪೌರಾಣಿಕ ಹಿನ್ನೆಲೆ, ಸೂರ್ಯ ದೇವನಿಗೆ ಶಾಪವಿಮೋಚನೆ ನೀಡಿದ ಶಿವ
ಸ್ಥಳೀಯ ಪೌರಾಣಿಕ ನಂಬಿಕೆಗಳ ಪ್ರಕಾರ, ಸೂರ್ಯದೇವನು (ಅರ್ಕ) ಒಮ್ಮೆ ಕುಷ್ಠರೋಗದ ಶಾಪಕ್ಕೆ ಗುರಿಯಾದಾಗ, ಈ ಘೋರ ಶಾಪದಿಂದ ಮುಕ್ತಿ ಪಡೆಯುವ ಸಲುವಾಗಿ ಭೂಲೋಕಕ್ಕೆ ಬಂದು, ಕಾವೇರಿ ನದಿಯ ದಡದಲ್ಲಿರುವ ಈ ಪವಿತ್ರ ಸ್ಥಳದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಅತ್ಯಂತ ಭಕ್ತಿಯಿಂದ ತಪಸ್ಸನ್ನು ಆಚರಿಸುತ್ತಾನೆ. ಸೂರ್ಯದೇವನ ಕಠಿಣ ತಪಸ್ಸಿಗೆ ಮೆಚ್ಚಿದ ಶಿವನು ಪ್ರತ್ಯಕ್ಷನಾಗಿ ಆತನಿಗೆ ಶಾಪ ವಿಮೋಚನೆ ಮಾಡುತ್ತಾನೆ. ಹೀಗೆ ಶಾಪವಿಮೋಚನೆಗೊಂಡ ಅರ್ಕ ನಿಂದ ಪ್ರತಿಸ್ಥಾಪಿಸಿ ಪೂಜಿಸಲ್ಪಟ್ಟ ಇಲ್ಲಿನ ಶಿವನನ್ನು ಅರ್ಕೇಶ್ವರ ಎಂದು ಕರೆಯಲಾಗುತ್ತದೆ. ಹಾಗಾಗಿಯೇ, ಕೆಲವು ಸ್ಥಳೀಯ ಉಲ್ಲೇಖಗಳಲ್ಲಿ ಈ ಪ್ರದೇಶವನ್ನು ಸೂರ್ಯ ಉದಯನಾಡು ಎಂದೂ ಕರೆಯಲಾಗುತ್ತಿತ್ತು ಎಂಬ ಮಾಹಿತಿ ದೊರೆಯುತ್ತದೆ.
ಎಡತೊರೆ ಎಂಬ ಹೆಸರಿನ ಹಿನ್ನೆಲೆ, ಚೋಳರು, ಹೊಯ್ಸಳರು ಮತ್ತು ಮೈಸೂರು ಅರಸರ ಐತಿಹಾಸಿಕ ಹಿನ್ನೆಲೆ
ನದಿಗೆ ತೊರೆ ಎಂದೂ ಕರೆಯಲಾಗುತ್ತದೆ. ಹಾಗಾಗಿ ಇಲ್ಲಿ ಕಾವೇರಿ ನದಿಯು ಎಡಕ್ಕೆ ತಿರುವು ಪಡೆದು ರಭಸವಾಗಿ ಹರಿಯುವುದರಿಂದ ಈ ಸ್ಥಳಕ್ಕೆ ಎಡತೊರೆ ಎಂಬ ಹೆಸರು ಬಂದಿದೆ. ಈ ಜಾಗದಲ್ಲಿ ಸ್ನಾನ ಮಾಡಿದರೆ ಆತ್ಮವು ಶುದ್ಧಿಯಾಗುತ್ತದೆ ಎಂಬ ಧಾರ್ಮಿಕ ನಂಬಿಕೆಯೂ ಇದೆ.
ಅರ್ಕೇಶ್ವರ ದೇವಾಲಯದ ಇತಿಹಾಸವು ಹಲವು ರಾಜವಂಶಗಳ ಆಡಳಿತ ಮತ್ತು ಧಾರ್ಮಿಕ ಕೊಡುಗೆಗಳೊಂದಿಗೆ ಸಂಬಂಧ ಹೊಂದಿದೆ ಎಂದು ವಿವಿಧ ಸ್ಥಳೀಯ ಹಾಗೂ ಐತಿಹಾಸಿಕ ಉಲ್ಲೇಖಗಳು ತಿಳಿಸುತ್ತವೆ. ಚೋಳರ ಕಾಲದ, ಮೊದಲನೇ ಕುಲೋತ್ತುಂಗ ಚೋಳ, ನಂತರದ ಕಾಲದಲ್ಲಿ ಹೊಯ್ಸಳರು ದೇವಾಲಯದ ಮೂಲ ನಿರ್ಮಾಣ, ವಿಸ್ತರಣೆ ಮತ್ತು ಪುನರ್ನಿರ್ಮಾಣಗಳಲ್ಲಿ ತೊಡಗಿಸಿಕೊಂಡಿದ್ದರು ಮೈಸೂರು ಒಡೆಯರ ಕಾಲ ಅದರಲ್ಲೂ ವಿಶೇಷವಾಗಿ ಮೂರನೇ ಕೃಷ್ಣರಾಜ ಒಡೆಯರ್ ಅವರು ಈ ದೇವಾಲಯವನ್ನು ದ್ರಾವಿಡ ಶೈಲಿಯಲ್ಲಿ ಪುನರ್ನಿರ್ಮಿಸಿದರು.
ರಥಸಪ್ತಮಿಯಂದು ನಡೆಯುವ ರಥೋತ್ಸವ
,ಮಾಘ ಮಾಸದ ರಥಸಪ್ತಮಿಯ ಸಂದರ್ಭದಲ್ಲಿ ಶ್ರೀ ಅರ್ಕೇಶ್ವರ ಸ್ವಾಮಿಯ ವಾರ್ಷಿಕ ರಥೋತ್ಸವ ನಡೆಯುತ್ತದೆ. ಸೂರ್ಯನ ಆರಾಧನೆಯೊಂದಿಗೆ ಸಂಬಂಧ ಹೊಂದಿರುವ ಅರ್ಕೇಶ್ವರ ಕ್ಷೇತ್ರದಲ್ಲಿ. ರಥೋತ್ಸವದ ವೇಳೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ದೇವರ ದರ್ಶನ ಪಡೆದು, ಪೂಜೆ ಸಲ್ಲಿಸಿ, ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಇಂತಹ ಜಾತ್ರೆಗಳು ಧಾರ್ಮಿಕ ಭಕ್ತಿಯನ್ನು ವ್ಯಕ್ತಪಡಿಸುವುದರ ಜೊತೆಗೆ ಸ್ಥಳೀಯ ಜನರ ಒಗ್ಗಟ್ಟು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತವೆ.
ಇಂತಹ ದೇವಾಲಯಗಳು ಹಿಂದಿನ ತಲೆಮಾರುಗಳಿಂದ ಮುಂದಿನ ತಲೆಮಾರುಗಳಿಗೆ ವರ್ಗಾಯಿಸಲ್ಪಡುವ ಸಾಂಸ್ಕೃತಿಕ ಸಂಪತ್ತು. ಅವುಗಳ ಜೀರ್ಣೋದ್ಧಾರ ಅಥವಾ ಸೌಂದರ್ಯೀಕರಣ ಮಾಡುವಾಗ ಮೂಲ ವಾಸ್ತುಶೈಲಿ, ಧಾರ್ಮಿಕ ಸ್ವರೂಪ ಮತ್ತು ಐತಿಹಾಸಿಕ ಮಹತ್ವವನ್ನು ಗಮನದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ. ಪರಂಪರೆಯನ್ನು ಉಳಿಸುವುದೆಂದರೆ ಕಟ್ಟಡಕ್ಕೆ ಹೊಸ ಬಣ್ಣ ಬಳಿಯುವುದಷ್ಟೇ ಅಲ್ಲ; ಅದರ ಮೂಲ ಸ್ವರೂಪ ಮತ್ತು ಐತಿಹಾಸಿಕ ಅಸ್ತಿತ್ವವನ್ನು ಕಾಪಾಡುವುದೂ ಆಗಿದೆ.
ಕೋತಿ ತಾನು ಮೊಸರು ತಿಂದು ಮೇಕೆ ಬಾಯಿಗೆ ಒರೆಸಿತು. ಪಾರುಪತ್ತೇದಾರ ಆರತಿ ಹಾಗೂ ವಿನಯ್

ಹಾಗೆ ನೋಡಿದರೆ ಜೀರ್ಣೋದ್ಧಾರ ಆಗುತ್ತಿರುವ ಈ ಹಿಂದೂ ದೇವಾಲಯದ ಮೇಲೆ ಮಸೀದಿ ಮತ್ತು ಶಿಲುಬೆಯ ಚಿತ್ರವನ್ನು ಬಿಡಿಸಿ, ಅನಗತ್ಯವಾಗಿ ಕೋಮು ಸೌಹಾರ್ಧವನ್ನು ಹಾಳು ಮಾಡುತ್ತಿರುವುದಲ್ಲದೇ, ಕೋತಿ ತಾನು ಮೊಸರು ತಿಂದು ಮೇಕೆ ಬಾಯಿಗೆ ಒರೆಸಿತು ಎನ್ನುವಂತೆ ಈ ರೀತಿಯ ಕೆಟ್ಟ ಹೆಸರನ್ನು ಮುಸಲ್ಮಾನರು ಅಥವಾ ಕ್ರೈಸ್ತರ ಮೇಲೆ ಹಾಕಲು ಹವಣಿಸುತ್ತಿರುವ ಆರತಿ ಹಾಗೂ ಚಿತ್ರ ಕಲಾವಿದ ವಿನಯ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯ ಮುಸಲ್ಮಾನರು ಮತ್ತು ಕ್ರೈಸ್ತರು ಪೋಲೀಸ್ ಇಲಾಖೆ ಮತ್ತು ಸರ್ಕಾರದ ಮೇಲೆ ಒತ್ತಾಯ ಹಾಕಬೇಕು. ಏಕೆಂದರೆ, ಈ ರೀತಿಯ ಕುಕೃತ್ಯದ ಹಿಂದೆ ಮುಸಲ್ಮಾನರು ಅಥವಾ ಕ್ರಿಶ್ಚಿಯನ್ನರಿಗಿಂತಲೂ, ಜಾತ್ಯಾತೀತ ಎಂದು ತೋರಿಸಿಕೊಳ್ಳುವ ಹಪಾಹಪಿಯಲ್ಲಿರುವ ಅಥವಾ ಅನಗತ್ಯವಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಮನಸ್ಥಿತಿಯ ಬೆರಕೆ ಹಿಂದೂ ಪಾರುಪತ್ತೇದಾರ ಆರತಿ ಅವರು ಬಹಳಷ್ಟು ಕಾಲ ಕಲಾವಿದ ವಿನಯ್ ಅವರ ಮೇಲೆ ಒತ್ತಡವನ್ನು ಹೇರಿ ಈ ರೀತಿಯಾದ ಕುಕೃತ್ಯವನ್ನು ಮಾಡಿಸಿದ್ದಾರೆ. ಎನ್ನುವುದು ಆರಂಭಿಕ ತನಿಖೆಯಲ್ಲಿ ತಿಳಿದು ಬಂದ್ದಿದ್ದು, ಆರತಿಯವರು ಆ ರೀತಿಯಾಗಿ ಏಕೆ ಮಾಡಿಸಿದ್ದಾರೆ.? ಆ ರೀತಿಯಾಗಿ ಮಾಡಲು ಆಕೆಯ ಹಿಂದೆ ಯಾರದ್ದಾದರೂ ಕೈವಾಡ ಅಥವಾ ಒತ್ತಡವಿತ್ತೇ? ಎಂಬುದನ್ನು ಅದಷ್ಟು ಶೀಘ್ರವಾಗಿ ತನಿಖೆ ನಡೆಸಿ ಬಯಲಿಗೆ ತರಬೇಕು ಮತ್ತು ಈ ಕೃತ್ಯದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗಿಗಳಾದವರಿಗೆ ಶಿಕ್ಷೆ ಆಗಬೇಕು ಎಂದು ಸ್ಥಳೀಯ ಹಿಂದೂ ಮುಖಂಡರು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಕೋಲಾಹಲವನ್ನುಂಟು ಮಾಡಿದೆ.
ಹಾಗಾದರೆ ಜಾತ್ಯತೀತತೆ ಎಂದರೇನು?
ಭಾರತೀಯ ಸಂವಿಧಾನದ ದೃಷ್ಟಿಯಲ್ಲಿ ಜಾತ್ಯತೀತತೆ ಎಂದರೆ ರಾಜ್ಯವು ಧರ್ಮದ ಆಧಾರದಲ್ಲಿ ನಾಗರಿಕರ ನಡುವೆ ತಾರತಮ್ಯ ಮಾಡಬಾರದು ಮತ್ತು ಎಲ್ಲರಿಗೂ ಸಂವಿಧಾನಾತ್ಮಕ ಹಕ್ಕುಗಳನ್ನು ಖಾತರಿಪಡಿಸಬೇಕು ಎಂಬ ಆಶಯಕ್ಕೆ ಸಂಬಂಧಿಸಿದೆ. ಸಂವಿಧಾನದ 25ನೇ ವಿಧಿಯು ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ. 26ನೇ ವಿಧಿಯು ಧಾರ್ಮಿಕ ಪಂಥಗಳಿಗೆ ತಮ್ಮ ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಹಕ್ಕುಗಳನ್ನು ಒದಗಿಸುತ್ತದೆ; ಇವು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ, ಆರೋಗ್ಯ ಮತ್ತು ಇತರ ಸಂವಿಧಾನಾತ್ಮಕ ಮಿತಿಗಳಿಗೆ ಒಳಪಟ್ಟಿವೆ. 27 ಮತ್ತು 28ನೇ ವಿಧಿಗಳೂ ಧರ್ಮ ಮತ್ತು ರಾಜ್ಯದ ಸಂಬಂಧಕ್ಕೆ ಸಂಬಂಧಿಸಿದ ಮಹತ್ವದ ನಿಯಮಗಳನ್ನು ಒಳಗೊಂಡಿವೆ.
ಒಂದು ಹಿಂದೂ ದೇವಾಲಯದ ಮೇಲೆ ಮಸೀದಿಯ ಚಿತ್ರ ಬಿಡಿಸಿದರೆ ಮಾತ್ರ ಜಾತ್ಯತೀತತೆ ಸಾಬೀತಾಗುವುದಿಲ್ಲ. ಅದೇ ರೀತಿ ಮಸೀದಿಯ ಮೇಲೆ ದೇವಾಲಯದ ಚಿತ್ರ ಬಿಡಿಸುವುದರಿಂದಲೂ ಧಾರ್ಮಿಕ ಸಮಾನತೆ ಸ್ಥಾಪನೆಯಾಗುವುದಿಲ್ಲ. ಧರ್ಮಗಳ ನಡುವೆ ಸೌಹಾರ್ದತೆ ಬೆಳೆಸಬೇಕಾದರೆ ಅದನ್ನು ಸಂವಾದ, ಪರಸ್ಪರ ಸಹಕಾರ, ಸೇವಾ ಕಾರ್ಯಗಳು ಮತ್ತು ಎಲ್ಲರ ಹಬ್ಬ-ಹರಿದಿನಗಳಿಗೆ ಗೌರವ ನೀಡುವ ಮೂಲಕ ಸಾಧಿಸಬಹುದು. ಅದಕ್ಕಾಗಿ ಒಂದು ಧರ್ಮದ ಪವಿತ್ರ ಸ್ಥಳವನ್ನು ಮತ್ತೊಂದು ಧರ್ಮದ ಸಂಕೇತಗಳಿಂದ ಅಲಂಕರಿಸುವುದು ಕಡ್ಡಾಯವಲ್ಲ.
ಇದೇ ಕ್ರಮವನ್ನು ಎಲ್ಲ ಧರ್ಮಗಳಲ್ಲೂ ಅನುಸರಿಸಲಾಗುತ್ತದೆಯೇ?
ಒಂದು ಹಿಂದೂ ದೇವಾಲಯದ ಗೋಡೆಯ ಮೇಲೆ ಮಸೀದಿಯ ಚಿತ್ರ ಬಿಡಿಸುವುದನ್ನು ಧಾರ್ಮಿಕ ಸೌಹಾರ್ದತೆಯ ಸಂಕೇತವೆಂದು ಪರಿಗಣಿಸಿದರೆ, ಮಸೀದಿಯ ಗೋಡೆಯ ಮೇಲೆ ಓಂ ಅಥವಾ ತ್ರಿಶೂಲದ ಚಿತ್ರ ಬಿಡಿಸುವುದು ಅಥವಾ ಚರ್ಚ್ನ ಗೋಡೆಯ ಮೇಲೆ ಮತ್ತೊಂದು ಧರ್ಮದ ಸಂಕೇತವನ್ನು ಬಿಡಿಸುವುದನ್ನು ಯಾವುದೇ ಆಕ್ಷೇಪವಿಲ್ಲದೆ ಇದೇ ರೀತಿಯಲ್ಲಿ ಒಪ್ಪಿಕೊಳ್ಳಲಾಗುತ್ತದೆಯೇ?
ಈ ರೀತಿಯಾಗಿ ಪ್ರಶ್ನೆಗಳನ್ನು ಕೇಳುವುದು ಯಾವುದೇ ಧರ್ಮವನ್ನು ಅವಮಾನಿಸುವುದಕ್ಕಲ್ಲ. ಎಲ್ಲ ಧರ್ಮಗಳಿಗೂ ಒಂದೇ ರೀತಿಯ ಗೌರವ ಮತ್ತು ನಿಯಮಗಳು ಅನ್ವಯಿಸಬೇಕೆಂಬ ತತ್ವವನ್ನು ನೆನಪಿಸುವುದಕ್ಕಾಗಿ. ಒಂದು ಧರ್ಮದ ನಂಬಿಕೆಗಳನ್ನು ಗೌರವಿಸುವುದು ಎಂದರೆ ಮತ್ತೊಂದು ಧರ್ಮದ ನಂಬಿಕೆಗಳನ್ನು ಅವಗಣಿಸುವುದಲ್ಲ. ಹಾಗೆಯೇ ಒಂದು ಧರ್ಮದ ಆಚರಣೆಯನ್ನು ಮತ್ತೊಂದು ಧರ್ಮದ ಆಚರಣೆಯೊಂದಿಗೆ ಕಡ್ಡಾಯವಾಗಿ ಬೆರೆಸುವುದೂ ಸೌಹಾರ್ದತೆಯ ಏಕೈಕ ಮಾರ್ಗವಲ್ಲ. ನಿಜವಾದ ಸಮಾನತೆ ಎಂದರೆ ಎಲ್ಲರಿಗೂ ಒಂದೇ ಮಾನದಂಡ. ನಿಜವಾದ ಸೌಹಾರ್ದತೆ ಎಂದರೆ ಪರಸ್ಪರರ ಗಡಿಗಳನ್ನು ಮತ್ತು ಧಾರ್ಮಿಕ ಹಕ್ಕುಗಳನ್ನು ಗೌರವಿಸುವುದು.
ಹಿಂದೂ ಧಾರ್ಮಿಕ ಭಾವನೆಗಳಿಗೆ ಗೌರವ ನೀಡುವುದು ಎಂದರೆ ಇತರ ಧರ್ಮಗಳನ್ನು ವಿರೋಧಿಸುವುದೇ?
ಒಂದು ಹಿಂದೂ ದೇವಾಲಯದ ಮೂಲ ಸ್ವರೂಪವನ್ನು ಕಾಪಾಡಬೇಕು ಎಂದು ಒತ್ತಾಯಿಸುವುದರಿಂದಲೇ ಯಾರೂ ಇತರ ಧರ್ಮಗಳ ವಿರೋಧಿಯಾಗುವುದಿಲ್ಲ. ಹಾಗೆಯೇ ಮಸೀದಿ ಅಥವಾ ಚರ್ಚ್ನ ಧಾರ್ಮಿಕ ಸ್ವರೂಪವನ್ನು ಕಾಪಾಡಬೇಕು ಎಂದು ಹೇಳುವುದರಿಂದ ಹಿಂದೂ ಧರ್ಮದ ವಿರೋಧಿಯಾಗುವುದಿಲ್ಲ. ಪ್ರತಿಯೊಂದು ಧರ್ಮಕ್ಕೂ ತನ್ನದೇ ಆದ ಪವಿತ್ರ ಸಂಕೇತಗಳು, ಆರಾಧನಾ ವಿಧಾನಗಳು ಮತ್ತು ಪರಂಪರೆಗಳಿವೆ. ಅವುಗಳನ್ನು ಗೌರವಿಸುವುದು ಪರಸ್ಪರರ ಹಕ್ಕುಗಳನ್ನು ಒಪ್ಪಿಕೊಳ್ಳುವುದರ ಒಂದು ಭಾಗವಾಗಿದೆ.
ಹಿಂದೂ ಧರ್ಮದ ದೇವಾಲಯಗಳಲ್ಲಿ ದೇವತೆಗಳ ಮೂರ್ತಿಗಳು, ಗರ್ಭಗುಡಿ, ಧ್ವಜಸ್ತಂಭ, ಗೋಪುರ ಮತ್ತು ವಿವಿಧ ಶಿಲ್ಪಗಳು ಧಾರ್ಮಿಕ ಹಾಗೂ ಸಾಂಸ್ಕೃತಿಕ ಅರ್ಥವನ್ನು ಹೊಂದಿವೆ. ಅದೇ ರೀತಿ ಮಸೀದಿಗಳು ಮತ್ತು ಚರ್ಚ್ಗಳಿಗೂ ಅವುಗಳದೇ ಆದ ವಾಸ್ತುಶಿಲ್ಪ ಮತ್ತು ಧಾರ್ಮಿಕ ಮಹತ್ವವಿದೆ. ಒಂದು ಧರ್ಮದ ಹಕ್ಕುಗಳನ್ನು ಕಾಪಾಡಲು ಮತ್ತೊಂದು ಧರ್ಮದ ಹಕ್ಕುಗಳನ್ನು ಕಸಿದುಕೊಳ್ಳಬೇಕಾಗಿಲ್ಲ. ಎಲ್ಲರ ಹಕ್ಕುಗಳನ್ನೂ ಒಂದೇ ಸಮಯದಲ್ಲಿ ಗೌರವಿಸುವುದೇ ಸಂವಿಧಾನಾತ್ಮಕ ಮಾರ್ಗ.
ಸರ್ಕಾರ ಮತ್ತು ಅಧಿಕಾರಿಗಳ ಹೊಣೆಗಾರಿಕೆ ಏನು?
ಧಾರ್ಮಿಕ ಸ್ಥಳಗಳಿಗೆ ಸಂಬಂಧಿಸಿದ ವಿವಾದಗಳು ಉಂಟಾದಾಗ ಸರ್ಕಾರ ಮತ್ತು ಸ್ಥಳೀಯ ಆಡಳಿತವು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಘಟನೆಯ ವಾಸ್ತವಾಂಶಗಳನ್ನು ಪರಿಶೀಲಿಸಿ, ಈ ವಿಚಾರಗಳಲ್ಲಿ ಅನಗತ್ಯ ಉದ್ವಿಗ್ನತೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಮತ್ತು ಕಾನೂನು ಉಲ್ಲಂಘನೆ ಮಾಡಿದ್ದವರ ವಿರುದ್ಧ ಅತ್ಯಂತ ಶೀಘ್ರವೇ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಅದಲ್ಲದೇ ಸರ್ಕಾರವು ಕೇವಲ ಒಂದು ಧರ್ಮದ ಭಾವನೆಗಳಿಗೆ ಮಾತ್ರ ಸ್ಪಂದಿಸಿ ಮತ್ತೊಂದು ಧರ್ಮದ ಭಾವನೆಗಳನ್ನು ಕಡೆಗಣಿಸುವುದು ಮತ್ತು ಈ ರೀತಿಯ ಧಾರ್ಮಿಕ ವಿವಾದವನ್ನು ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದೂ ಸರಿಯಲ್ಲ. ವಾಸ್ತವಾಂಶ, ಕಾನೂನು ಮತ್ತು ಸಮಾನ ಮಾನದಂಡಗಳ ಆಧಾರದ ಮೇಲೆ ಎಲ್ಲಾ ನಿರ್ಧಾರಗಳನ್ನು ಕೈಗೊಳ್ಳುವುದೇ ಆಡಳಿತದ ನೈಜ ಕರ್ತವ್ಯ.
ಕೊನೆಯ ಮಾತು ನಮ್ಮ ಪರಂಪರೆಯನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ
ಭಾರತದ ದೇವಾಲಯಗಳು, ಮಸೀದಿಗಳು, ಚರ್ಚ್ಗಳು, ಗುರುದ್ವಾರಗಳು ಮತ್ತು ಇತರ ಧಾರ್ಮಿಕ ಕೇಂದ್ರಗಳು ಕೇವಲ ಒಂದು ಸಮುದಾಯದ ಇಂದಿನ ನಂಬಿಕೆಯನ್ನು ಮಾತ್ರ ಪ್ರತಿನಿಧಿಸುವುದಿಲ್ಲ. ಅವು ಹಲವು ಶತಮಾನಗಳ ಇತಿಹಾಸ, ಕಲೆ, ವಾಸ್ತುಶಿಲ್ಪ ಮತ್ತು ಸಾಮಾಜಿಕ ಬದುಕಿನ ಸಾಕ್ಷಿಗಳಾಗಿವೆ.
ಒಂದು ಧರ್ಮದ ಪವಿತ್ರ ಸ್ಥಳವನ್ನು ಗೌರವಿಸುವುದು ಮತ್ತೊಂದು ಧರ್ಮವನ್ನು ವಿರೋಧಿಸುವುದಲ್ಲ. ಹಾಗೆಯೇ ಎಲ್ಲ ಧರ್ಮಗಳಿಗೂ ಸಮಾನ ಗೌರವ ನೀಡುವುದು ಎಂದರೆ ಪ್ರತಿಯೊಂದು ಧಾರ್ಮಿಕ ಸ್ಥಳದ ಮೂಲ ಸ್ವರೂಪವನ್ನು ಬದಲಿಸುವುದೂ ಅಲ್ಲ. ಜಾತ್ಯತೀತತೆ ಎಂದರೆ ಧರ್ಮಗಳ ನಡುವಿನ ವ್ಯತ್ಯಾಸಗಳನ್ನು ಅಳಿಸಿಹಾಕುವುದಲ್ಲ. ಆ ವ್ಯತ್ಯಾಸಗಳ ನಡುವೆಯೂ ಸಮಾನ ಹಕ್ಕು, ಗೌರವ ಮತ್ತು ಸಹಬಾಳ್ವೆಯನ್ನು ಕಾಪಾಡುವುದು.
ಹಾಗಾಗಿ ಹಳೆ ಎಡತೊರೆಯ ಶ್ರೀ ಅರ್ಕೇಶ್ವರ ದೇವಾಲಯದ ಗೋಡೆಯ ಮೇಲೆ ಮಸೀದಿ ಮತ್ತು ಶಿಲುಬೆಯ ಚಿತ್ರಗಳನ್ನು ಬಿಡಿಸಿದ ಆರತಿ ಮತ್ತು ವಿನಯ್ ಅವರುಗಳನ್ನು ಬಂಧಿಸಿ ಅವರ ವಿರುದ್ಧ ಕಾಟಾಚಾರಕ್ಕೆ ಕ್ರಮವನ್ನು ತೆಗೆದುಕೊಳ್ಳುವುದಕ್ಕಷ್ಟೇ ಸೀಮಿತವಾಗದೇ, ಅವರ ಹಿಂದಿರುವ ವಿಛಿದ್ರ ಶಕ್ತಿಯನ್ನು ಸರ್ಕಾರ ಅದಷ್ಟು ಬೇಗನೇ ಕಂಡು ಹಿಡಿದು ಅವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳುವುದೇ ಭಾರತದ ಸಂವಿಧಾನದ ಆಶಯ. ಅದೇ ನಿಜವಾದ ಧಾರ್ಮಿಕ ಸೌಹಾರ್ದತೆ. ಅದೇ ನಮ್ಮ ಐತಿಹಾಸಿಕ ಪರಂಪರೆಯನ್ನು ಮುಂದಿನ ಪೀಳಿಗೆಗಳಿಗೆ ಗೌರವದಿಂದ ಹಸ್ತಾಂತರಿಸುವ ಮಾರ್ಗ.
ಹಿಂದೂ ವಿರೋಧಿ ಮನಸ್ಥಿತಿಯನ್ನು ಹೊಂದಿರುವ, ತನ್ನ ರಾಜಕೀಯ ಅಸ್ಥಿತ್ವಕ್ಕಾಗಿ ಸ್ಟಿಂಗ್ ಆಪರೇಷನ್ ನಡೆಸುತ್ತಾ, ಹಾದಿ ಬೀದಿಯಲ್ಲಿ ದೊಂಬಿ ಎಬ್ಬಿಸುವಂತಹ ದೇಶ ವಿರೋಧಿಗಳಿಗೆ ಆರ್ಥಿಕ ನೆರವು ನೀಡುತ್ತಾ, ದೇಶದಲ್ಲಿ ಆಂತರಿಕ ಅಸ್ಥಿತ್ವಕ್ಕೆ ಧಕ್ಕೆ ತರಲು ಪ್ರಯತ್ನಿಸುತ್ತಿರುವ ಈ ಸರ್ಕಾರದಿಂದ ಹಿಂದೂಗಳು ಮತ್ತು ಹಿಂದೂ ದೇವಾಲಯಗಳ ರಕ್ಷಣೆಯನ್ನು ನಿರೀಕ್ಷಿಸಲು ಸಾಧ್ಯವೇ?
ಏನಂತೀರೀ?
ನಿಮ್ಮವನೇ ಉಮಾಸುತ





