ಧಾರ್ಮಿಕ ಸೌಹಾರ್ದತೆಯ ಹೆಸರಿನಲ್ಲಿ ಹಿಂದೂ ದೇವಾಲಯಗಳ ಮೂಲ ಸ್ವರೂಪವನ್ನು ಬದಲಿಸುವುದು ಎಷ್ಟು ಸರಿ?
ಎಲ್ಲ ಧರ್ಮಗಳಿಗೂ ಸಮಾನ ಗೌರವ ನೀಡುವುದೇ ಜಾತ್ಯತೀತತೆ? ಅಥವಾ ಒಂದು ಧರ್ಮದ ಪವಿತ್ರ ಸ್ಥಳದಲ್ಲಿ ಮತ್ತೊಂದು ಧರ್ಮದ ಸಂಕೇತಗಳನ್ನು ಚಿತ್ರಿಸುವುದೇ ಧಾರ್ಮಿಕ ಸೌಹಾರ್ದತೆಯೇ? ಭಾರತವೆಂದರೆ ವಿವಿಧ ಧರ್ಮಗಳು, ಭಾಷೆಗಳು, ಸಂಸ್ಕೃತಿಗಳು ಮತ್ತು ಸಂಪ್ರದಾಯಗಳು ಸಹಬಾಳ್ವೆ ನಡೆಸುತ್ತಿರುವ ದೇಶ. ಇಲ್ಲಿನ ವೈವಿಧ್ಯವೇ ನಮ್ಮ ಶಕ್ತಿ. ಪರಸ್ಪರರ ಧಾರ್ಮಿಕ ನಂಬಿಕೆಗಳನ್ನು ಗೌರವಿಸುವುದು, ಮತ್ತೊಬ್ಬರ ಆರಾಧನಾ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟುಮಾಡದಿರುವುದು ಮತ್ತು ಎಲ್ಲರಿಗೂ ಸಮಾನ ಹಕ್ಕುಗಳನ್ನು ಖಾತರಿಪಡಿಸುವುದು ನಮ್ಮ ಸಂವಿಧಾನದ ಆಶಯವಾಗಿದೆ. ಆದರೆ ಕೆಲವೊಮ್ಮೆ ಜಾತ್ಯತೀತತೆ ಮತ್ತು ಧಾರ್ಮಿಕ ಸೌಹಾರ್ದತೆಯ ಅರ್ಥವನ್ನೇ ತಪ್ಪಾಗಿ ಗ್ರಹಿಸಲಾಗುತ್ತಿದೆಯೇ? ಎಂಬ ಅನುಮಾನ ಮೂಡುವ ಘಟನೆಗಳು ನಡೆಯುತ್ತವೆ.
ಧಾರ್ಮಿಕ ಸೌಹಾರ್ದತೆಯ ಉದ್ದೇಶ ಒಳ್ಳೆಯದೇ ಇರಬಹುದು. ಆದರೆ ಆ ಉದ್ದೇಶವನ್ನು ಸಾಧಿಸುವ ವಿಧಾನವೂ ಸರಿಯಾಗಿರಬೇಕಲ್ಲವೇ? ಯಾರ ಧಾರ್ಮಿಕ ಭಾವನೆಗಳಿಗೂ ನೋವುಂಟುಮಾಡದೆ ಸೌಹಾರ್ದತೆ ಬೆಳೆಸುವುದು ಸಾಧ್ಯವಿಲ್ಲವೇ? ಈ ಘಟನೆಯ ಹಿನ್ನೆಲೆಯಲ್ಲಿ ಕೆಲವು ಮೂಲಭೂತ ಪ್ರಶ್ನೆಗಳನ್ನು ಕೇಳುವುದು ಅಗತ್ಯವಾಗಿದೆ.
ಏನಿದು ಅರ್ಕೇಶ್ವರ ದೇವಾಲಯದ ಗೋಡೆಯ ಮೇಲಿನ ವಿವಾದ?

2026ರ ಅಕ್ಟೋಬರ್ನಲ್ಲಿ ನಾಡಿನಲ್ಲಿ ಎಲ್ಲೆಡೆ ದಸರಾ ಸಂಭ್ರಮದ ಕಳೆ ಮೂಡಿದ್ದರೆ, ಕೆ.ಆರ್ ನಗರ ಎಡತೊರೆ ಗ್ರಾಮದ ಐತಿಹಾಸಿಕ ಶ್ರೀ ಅರ್ಕೇಶ್ವರ ದೇಗುಲದ ನವೀಕರಣ ಗೊಳ್ಳುತ್ತಿರುವ ಸಮಯದಲ್ಲಿ ದೇವಾಲಯದ ಆವರಣದ ಗೋಡೆಯ ಹಸಿರು ಬಣ್ಣದಲ್ಲಿ ಮಸೀದಿ ಚಿತ್ರ ಹಾಗೂ ಕೆಂಪು ಬಣ್ಣದಲ್ಲಿ ಶಿಲುಬೆಯನ್ನು ಬಿಡಿಸಲಾಗಿರುವುದು ಪತ್ತೆಯಾಗಿದ್ದು ಸಹಜವಾಗಿ ಇದು ಹಿಂದೂ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಈ ಚಿತ್ರಗಳು ಸಾರ್ವಜನಿಕರ ಗಮನಕ್ಕೆ ಬಂದ ನಂತರ ಆಕ್ಷೇಪಗಳು ವ್ಯಕ್ತವಾದವು. ಘಟನೆಯ ಕುರಿತು ಸುದ್ದಿಗಳು ಪ್ರಕಟವಾದವು. ಸ್ಥಳೀಯ ಅಧಿಕಾರಿಗಳು ಪರಿಶೀಲನೆ ನಡೆಸಿದರು ಮತ್ತು ಗೋಡೆಯ ಮೇಲಿನ ಚಿತ್ರಗಳಿಗೆ ಬಣ್ಣ ಬಳಿದು ಅವುಗಳನ್ನು ಅಳಿಸುವ ಕ್ರಮ ಕೈಗೊಳ್ಳಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೇವಾಲಯದ ಪಾರುಪತ್ತೇದಾರ ಆರತಿ ಹಾಗೂ ಆರ್ಟಿಸ್ಟ್ ವಿನಯ್ ವಿರುದ್ದ ದೂರು ದಾಖಲಾಗಿದ್ದು, ಈ ಬೆಳವಣಿಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
- ಐತಿಹಾಸಿಕ ಹಿಂದೂ ದೇವಾಲಯದ ಗೋಡೆಯ ಮೇಲೆ ಇಂತಹ ಧಾರ್ಮಿಕ ಚಿತ್ರಗಳನ್ನು ಬಿಡಿಸುವ ನಿರ್ಧಾರವನ್ನು ಕೈಗೊಂಡವರು ಯಾರು?
- ದೇವಾಲಯದ ಆಡಳಿತ ಮಂಡಳಿ ಅಥವಾ ಸಂಬಂಧಪಟ್ಟ ಪ್ರಾಧಿಕಾರದ ಅನುಮತಿ ಪಡೆಯಲಾಗಿತ್ತೇ?
- ಈ ಚಿತ್ರಗಳನ್ನು ಬಿಡಿಸುವುದರ ಹಿಂದಿನ ಉದ್ದೇಶವೇನು?
- ದೇವಾಲಯದ ಮೂಲ ಸ್ವರೂಪ ಮತ್ತು ಧಾರ್ಮಿಕ ಪರಂಪರೆಯನ್ನು ಕಾಪಾಡುವ ಹೊಣೆಗಾರಿಕೆ ಯಾರದ್ದು?
- ಧಾರ್ಮಿಕ ಸೌಹಾರ್ದತೆಯನ್ನು ವ್ಯಕ್ತಪಡಿಸಲು ಇದೇ ವಿಧಾನವನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಏನಿತ್ತು?
ಹಳೆ ಎಡತೊರೆಯ ಶ್ರೀ ಅರ್ಕೇಶ್ವರ ದೇವಾಲಯ, ಪೌರಾಣಿಕ ಹಿನ್ನೆಲೆ, ಇತಿಹಾಸ ಮತ್ತು ವೈಶಿಷ್ಟ್ಯಗಳು

ಒಂದು ದೇವಾಲಯವೆಂದರೆ ಕೇವಲ ಪೂಜೆ ನಡೆಯುವ ಕಟ್ಟಡವಲ್ಲ. ಅದು ಒಂದು ಪ್ರದೇಶದ ಇತಿಹಾಸ, ಜನರ ನಂಬಿಕೆ, ರಾಜವಂಶಗಳ ಕೊಡುಗೆ, ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸುತ್ತದೆ. ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲ್ಲೂಕಿನ ಹಳೆ ಎಡತೊರೆಯಲ್ಲಿರುವ ಶ್ರೀ ಅರ್ಕೇಶ್ವರ ಸ್ವಾಮಿ ದೇವಾಲಯವು ಪೌರಾಣಿಕ ನಂಬಿಕೆ, ಐತಿಹಾಸಿಕ ಪರಂಪರೆ ಮತ್ತು ಕಾವೇರಿ ನದಿಯ ಪಾವಿತ್ರ್ಯವನ್ನು ತನ್ನೊಳಗೆ ಹುದುಗಿಸಿಕೊಂಡಿರುವ ಪ್ರಸಿದ್ಧ ಶಿವಕ್ಷೇತ್ರವಾಗಿದೆ. ಕಾವೇರಿ ನದಿಯ ತೀರದಲ್ಲಿರುವ ಈ ದೇವಾಲಯವು ಭಕ್ತರ ಪಾಲಿಗೆ ಧಾರ್ಮಿಕ ಶ್ರದ್ಧೆಯ ಕೇಂದ್ರವಾಗಿದ್ದು, ಈ ಪ್ರದೇಶದ ಸಾಂಸ್ಕೃತಿಕ ಪರಂಪರೆಯಲ್ಲಿಯೂ ಮಹತ್ವದ ಸ್ಥಾನ ಪಡೆದಿದೆ.





