– ರಾಘವೇಂದ್ರ ಅಡಿಗ ಎಚ್ಚೆನ್.
ನಟ ದರ್ಶನ್ ಹೆಸರನ್ನು ಸ್ವಹಿತಾಸಕ್ತಿಗಾಗಿ ಬಳಸಿಕೊಳ್ಳುವವರಿಗೆ ಪತ್ನಿ ವಿಜಯಲಕ್ಷ್ಮಿ ಖಡಕ್ ಸಂದೇಶ ರವಾನಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ದರ್ಶನ್ ಜೊತೆಗಿನ ಹಳೆಯ ಫೋಟೋ ಹಂಚಿಕೊಂಡಿರುವ ವಿಜಯಲಕ್ಷ್ಮಿ, ಮೆಚ್ಚುಗೆ ಇರಲಿ ಅಥವಾ ಟೀಕೆ ಇರಲಿ, ಅಭಿಪ್ರಾಯ ವ್ಯಕ್ತಪಡಿಸುವಾಗ ಪ್ರಾಮಾಣಿಕತೆ ಮತ್ತು ಗೌರವ ಇರಬೇಕು ಎಂದು ಕಿವಿಮಾತು ಹೇಳಿದ್ದಾರೆ. ಇದೇ ವೇಳೆ ಚಾಮರಾಜನಗರದ ಕಾರ್ಯಕ್ರಮವೊಂದರಲ್ಲಿ ನಟ ಧನ್ವೀರ್ ಗೌಡ ಕೂಡ ದರ್ಶನ್ ಪರವಾಗಿ ಮಾತನಾಡಿದ್ದು, ಈ ಬೆಳವಣಿಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ವಿಜಯಲಕ್ಷ್ಮಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ, “ನಿಮ್ಮ ಡಿ ಬಾಸ್ ಹೆಸರು ಮೆಚ್ಚುಗೆಗಿರಲಿ, ಟೀಕೆಗಿರಲಿ, ಸ್ವಹಿತ ಸಾಧನೆಯ ಸಾಧನವಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ. ಅಭಿಪ್ರಾಯದಲ್ಲಿ ಪ್ರಾಮಾಣಿಕತೆ ಇರಲಿ, ಮಾತಿನಲ್ಲಿ ಗೌರವವಿರಲಿ” ಎಂಬ ಸಂದೇಶ ಹಂಚಿಕೊಂಡಿದ್ದಾರೆ. ಜೊತೆಗೆ ಎಲ್ಲರಿಗೂ ವಿಜಯದಶಮಿಯ ಶುಭಾಶಯಗಳನ್ನು ತಿಳಿಸಿದ್ದಾರೆ.
ದರ್ಶನ್ ಅವರ ಹೆಸರನ್ನು ಬಳಸಿಕೊಂಡು ಅನಗತ್ಯ ವಿವಾದಗಳನ್ನು ಸೃಷ್ಟಿಸುವ ಅಥವಾ ವೈಯಕ್ತಿಕ ಲಾಭ ಪಡೆಯುವ ಪ್ರಯತ್ನಗಳಿಗೆ ಕಡಿವಾಣ ಹಾಕಬೇಕು ಎಂಬ ಅರ್ಥದಲ್ಲಿ ವಿಜಯಲಕ್ಷ್ಮಿ ಅವರ ಸಂದೇಶವನ್ನು ಅಭಿಮಾನಿಗಳು ವ್ಯಾಖ್ಯಾನಿಸುತ್ತಿದ್ದಾರೆ. ಪತಿಯೊಂದಿಗಿನ ಹಳೆಯ ಫೋಟೋ ಹಂಚಿಕೊಂಡು ಈ ಮಾತುಗಳನ್ನು ಹೇಳಿರುವುದು ಕೂಡ ಗಮನ ಸೆಳೆದಿದೆ.
ಇನ್ನೊಂದೆಡೆ, ಚಾಮರಾಜನಗರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ದರ್ಶನ್ ಅಭಿಮಾನಿಗಳು ‘ಡಿ ಬಾಸ್’ ಎಂದು ಘೋಷಣೆ ಕೂಗಿದ್ದಾರೆ. ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ನಟ ಧನ್ವೀರ್ ಗೌಡ, ದರ್ಶನ್ ಅವರನ್ನು ಟೀಕಿಸುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಎಷ್ಟೇ ಕೂಗಿರಿ, ಏನೇ ಮಾಡ್ರಿ. ದರ್ಶನ್ಗೆ ಏನೂ ಮಾಡಕ್ಕಾಗಲ್ಲ. ಯಾವ ನಾಯಿ ನರಿಗಳು ಏನೇ ಕುತಂತ್ರ ಮಾಡಿದ್ರೂ ಏನೂ ಮಾಡಕ್ಕಾಗಲ್ಲ. ದರ್ಶನ್ ಆದಷ್ಟು ಬೇಗ ಹೊರಗೆ ಬರ್ತಾರೆ” ಎಂದು ಧನ್ವೀರ್ ಗೌಡ ಹೇಳಿದ್ದಾರೆ. ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದರ್ಶನ್ ಅಭಿಮಾನಿಗಳ ನಡುವೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಒಂದೆಡೆ ವಿಜಯಲಕ್ಷ್ಮಿ ಅವರ ಎಚ್ಚರಿಕೆಯ ಸಂದೇಶ, ಮತ್ತೊಂದೆಡೆ ಧನ್ವೀರ್ ಗೌಡ ಅವರ ಬಹಿರಂಗ ಬೆಂಬಲ—ಈ ಎರಡೂ ಬೆಳವಣಿಗೆಗಳು ದರ್ಶನ್ ವಿಚಾರ ಮತ್ತೆ ಮುನ್ನೆಲೆಗೆ ಬರುವಂತೆ ಮಾಡಿವೆ. ಡಿ ಬಾಸ್ ಕುರಿತ ಹೇಳಿಕೆಗಳು ಮತ್ತು ಪ್ರತಿಕ್ರಿಯೆಗಳು ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿವೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.





