ಕಥೆ – ಸುಮಾ ವೀಣಾ
ದಿನನಿತ್ಯದ ಜಂಜಾಟದ ಬದುಕಿನ ಮಧ್ಯೆ ಮಹತಿ ಮುಖ್ಯ ಬದಲಾವಣೆ ಹೊಂದಲು ಬಯಸಿದಳು. ಅವಳ ಯಾಂತ್ರಿಕ ಜೀವನದ ಮಧ್ಯೆ ಅವಳು ಕೇಳಿದಂಥ ಚೇಂಜ್ ಸಿಕ್ಕಿತೇ……?
“ರಿಜಿಸ್ಟ್ರಡ್ ಪೋಸ್ಟ್….. ತೂಕ ಮಾಡಿ ಎಷ್ಟು ಇದೆ ಹೇಳಿ ಮೇಡಮ್!” ಎಂದ ವ್ಯಕ್ತಿಯ ಕೈಯಲ್ಲಿದ್ದ 50ರ ನೋಟನ್ನು ಕಂಡು ಮಹತಿ, “24 ರೂಪಾಯಿ ಆಗುತ್ತೆ ಚೇಂಜ್ ಬೇಕು. ಚೇಂಜ್ ಇಲ್ವಲ್ಲ ಫಿಪ್ಟಿಗೆ ಬೆಳಗ್ಗೆನೆ ಹೀಗಾದ್ರೆ ಹೇಗೆ ಸರ್……? ಚೇಂಜ್ ಬೇಕು ಸರ್….! ಚೇಂಜ್….” ಎನ್ನುತ್ತಲೇ ಡ್ರಾಯರ್ ನಲ್ಲಿದ್ದ ಪುಡಿ ಚೇಂಜನ್ನೆಲ್ಲಾ ಒಟ್ಟು ಮಾಡಿದ ಮಹತಿ ಇಪ್ಪತ್ತಾರು ರೂ.ಗಳನ್ನು ರಿಸಿಪ್ಟ್ ಜೊತೆ ಕೊಟ್ಟು ಆ ವ್ಯಕ್ತಿಯನ್ನು ಕಳುಹಿಸಿದಳು.
ಚೇಂಜ್ ಚೇಂಜ್ ಎನ್ನುತ್ತಲೇ ಮಹತಿಯ ಮನಸ್ಸಿನಲ್ಲಿ, `ಈ ಚೇಂಜ್ ಏನೋ ಸಿಗುತ್ತೆ. ಬದುಕಿಗೂ ಚೇಂಜ್ ಬೇಕಲ್ವಾ…’ ಎಂಬ ಆಲೋಚನೆ ಬಂದದ್ದೇ ತಡ ಸದಾ ಕೆಲಸವಿಲ್ಲದೆ ಕುಳಿತು ತಿನ್ನು, ಕಿರಿಕಿರಿ ಮಾಡುವ ಗಂಡ. ಅವನಿಗೆ ನಾನು ಬೇಕಾಗಿಲ್ಲ. ನಮ್ಮಿಬ್ಬರ ನಡುವೆ ಇನ್ಯಾರೋ ಇದ್ದಾರೆ ಸಂಜೆ ಹೋಗುವಾಗ ರೂಮ್ ಅಸಹಜವಾಗಿರುತ್ತದೆ ಏನೋ ಅಸಹ್ಯ ಎನಿಸುತ್ತದೆ. ಏನು ಮಾಡೋದು…? ಬಾಯಿ ಬಿಟ್ರೆ ರಬ್ಬಿಶ್ ಟಾಕ್ ಅವನದ್ದು. ಸರ್ಕಾರಿ ಹುದ್ದೆಯಲ್ಲಿದ್ದಿದ್ದರೆ ರಿಟೈರ್ಡ್ ಮೆಂಟ್ ವಯಸ್ಸು ಅವನದ್ದು. ಅಂಥ ಮಗನಿಗೂ ಚಾಡಿ ಚುಚ್ಚುವ ಅತ್ತೆಯ ಕಟು ಮಾತುಗಳು ನೆನಪಿಗೆ ಬಂದವು.
`ಹೇಗೂ ಇಲ್ಲಿ ದಿನವೆಲ್ಲಾ ಕೆಲಸ. ಮರುದಿನ ಬೆಳಗ್ಗೆ ಬೇರೆ ಟೇಬಲ್ ಗೆ ಕಳುಹಿಸುತ್ತಾರೆ. ಅಲ್ಲಿ ಬೇರೆ ಕೆಲಸ. ಸಧ್ಯ ಆಫೀಸ್ ನಲ್ಲಿ ಚೇಂಜ್ ಇದೆ ಬದುಕಲ್ಲಿ ಏಕಿಲ್ಲ….’ ಎಂದುಕೊಂಡಳು, `ಅಚ್ಚಚ್ಚೋ ಇಲ್ಲಿ ಚೇಂಜ್ ಇದೆಯಲ್ಲ…..’ ಎನ್ನುವಷ್ಟರಲ್ಲಿ ಇನ್ನೊಬ್ಬರು ಬಂದು, “ಸ್ಪೀಡ್ ಪೋಸ್ಟ್…. ಎಷ್ಟಾಗುತ್ತೆ…? ಯಾವಾಗ ತಲುಪುತ್ತೇ…..? ಮಧ್ನಾಹ್ನವೇ ಮೂವ್ ಆಗುತ್ತಾ…..?” ಎಂದು ಪ್ರಶ್ನೆಗಳನ್ನು ಹಾಕಿದ ವ್ಯಕ್ತಿ ನೂರರ ಗರಿ ಗರಿ ನೋಟನ್ನು ಕೌಂಟರ್ ನೊಳಕ್ಕೆ ತೂರಿದ.
“ಸರ್…. ಎಲ್ಲಿಂದ ಚೇಂಜ್ ತರೋಣ…..? ನೀವೇ ತರಬೇಕು. ಬೆಳಗ್ಗೆನೇ ಹೀಗಾದ್ರೆ ಹೇಗೆ….?” ಎಂದಳು ಮಹತಿ.
“ಸಾರಿ ಮೇಡಂ…. ಚೇಂಜ್ ಇದೆ. ಎಷ್ಟು ಹೇಳಿ….” ಎಂದು ಅಗತ್ಯವಿದ್ದ ಚೇಂಜ್ ಕೊಟ್ಟ.
ಮಹತಿ, “ವಾವ್…. ಸರ್ ಚೇಂಜ್ ಕೇಳಿದ ಕೂಡಲೇ ಕೊಟ್ರಿ. ಹೀಗೆ ನಾವ್ ಕೇಳಿದಾಗ ಚೇಂಜ್ ಸಿಕ್ಕಿದ್ರೆ ಚೆನ್ನಾಗಿರುತ್ತೆ ಅಲ್ವಾ….? ಎಂದಳು.
“ಮೇಡಂ ಈ ಚೇಂಜ್ ಹೇಗೂ ಸಿಗುತ್ತೆ…. ಬದುಕಲ್ಲಿ ಚೇಂಜಸ್ ಅಷ್ಟು ಸುಲಭ ಅಲ್ಲ,” ಎಂದ.
`ಇವನದ್ದೂ ನನ್ನದೆ ಚಿಂತನಾ ಕ್ರಮ…’ ಎಂದುಕೊಳ್ಳುತ್ತಾ, “ಹೌದು ಸರ್, ಏನ್ ಮಾಡೋಣ ಹೇಳಿ….? ನಿಮಗೂ ಚೇಂಜ್ ಬೇಕಾ ಬದುಕಲ್ಲಿ….?”
ಅವನು, “ಸಿಗುತ್ತಾ…..?” ಎಂದು ಕೆಲಸವಾಗುತ್ತಿದ್ದಂತೆ ಅಲ್ಲಿಂದ ಹೊರಟ ಅವನನ್ನು ಮಹತಿ ಗೇಟ್ ಧಾಟಿ ಮರೆಯಾಗುವವರೆಗೂ ನೋಡಿದಳು.
ಮಹತಿಗೆ ಮತ್ತದೆ ಕೆಲಸ. ಮನೆಯಲ್ಲಿಯೂ ದಿನ ಅದೇ ಗೋಳು. ಮಗ ದೂರದ ನವೋದಯದಲ್ಲಿ ಹನ್ನೆರಡರಲ್ಲಿ ಓದುತ್ತಿದ್ದ. ಅವನ ಜೊತೆ ಮಾತುಕತೆ ಅಷ್ಟಕ್ಕೆ ತೃಪ್ತಿಪಡುತ್ತಾ ದಿನಗಳನ್ನು ದೂಡುತ್ತಿದ್ದಳು. ಹೀಗೆ ಬಿಲ್ಲಿಂಗ್ ಕೌಂಟರ್ ನಲ್ಲಿ ಕೆಲಸ ಮಾಡುವಾಗಲೇ ಚೇಂಜ್ ಬೇಕು ಎಂದಿದ್ದ ಅದೇ ವ್ಯಕ್ತಿ ಬಂದು ಮತ್ತೆ ಪೋಸ್ಟ್ ಕವರ್ ಕೊಟ್ಟು, “ಎಷ್ಟು….?” ಎಂದಾಗ ಮಹತಿ ಕತ್ತೆತ್ತಿ ನೋಡಿ, ಹಿಂದೆ ಅವನು ಬಂದಿದ್ದು ನೆನಪಾಗಿ, “ಸರ್ ಚೇಂಜ್ ಕೊಡಿ…..” ಎಂದಳು.
ಅವನು, “ಓ ಚೇಂಜ್ ತಾನೇ ಕೊಡುವೆ….! ಖಂಡಿತಾ ನಿಮಗಲ್ದೆ ಇನ್ಯಾರಿಗೆ ಚೇಂಜ್ ಕೊಡೋದು….” ಎಂದುಬಿಟ್ಟ.
ಮಹತಿಗೆ ಮೈಯಲ್ಲಿ ಮಿಂಚು ಸಂಚಾರ ಆದಂತಾಗಿ ಒಮ್ಮೆ ಅಡ್ರೆಸ್ ನ್ನು ದಿಟ್ಟಿಸಿ ನೋಡಿ ಬೇಗ ರೆಸಿಪ್ಟ್ ಹರಿದು ಕೊಡಬೇಕೆನ್ನುವಷ್ಟರಲ್ಲಿ, ಆ ವ್ಯಕ್ತಿ ಫೋನ್ ನಲ್ಲಿ, “ಕಳ್ಸಿದ್ದೀನಿ…. ಇವತ್ ಕಳ್ಸಿದ್ದೀನಿ…. ಹ್ಞೂಂ….. ಹ್ಞೂಂ….. ಇಲ್ಲ…. ಇಲ್ಲ…..! ಹ್ಞಾಂ ಸರಿ ಸರಿ…..” ಎನ್ನುತ್ತಿದ್ದ ಅವನನ್ನೇ ರೆಸಿಪ್ಟ್ ಕೈಯಲ್ಲಿ ಹಿಡಿದು ದಿಟ್ಟಿಸಿ ನೋಡುತ್ತಿದ್ದಳು. ಆತ ಫೋನ್ ಕತ್ತರಿಸಿದ.
ಮಹತಿ ಅಡ್ರೆಸ್ ನಲ್ಲಿದ್ದ ಪ್ರಭು ಎನ್ನುವ ಹೆಸರನ್ನು ನೋಡಿ, “ರೆಸಿಪ್ಟ್ ತಗೊಳ್ಳಿ ಪ್ರಭು,” ಎನ್ನುತ್ತಿದ್ದಂತೆ ದಡಬಡಾಯಿಸಿ ಪ್ರಭು ರೆಸಿಪ್ಟ್ ತೆಗೆದುಕೊಳ್ಳುವಾಗ ಮಹತಿಯ ಬೆಚ್ಚನೆ ಕೈ ಸ್ಪರ್ಶವಾಯಿತು. ಹಾಗಾಗುತ್ತಲೇ ಇಬ್ಬರೂ ಒಬ್ಬರನ್ನೊಬ್ಬರು ಕಣ್ಣಲ್ಲಿ ಕಣ್ಣಿಟ್ಟು ನೋಡಿದರು. ಮಹತಿಯ ನೋವು ಪ್ರಭುವಿಗೆ ಅರ್ಥವಾಗುತ್ತದೆ. ಪ್ರಭುವಿನ ಆತ್ಮವಿಶ್ವಾಸ ತುಂಬಿದ ಕಣ್ಣುಗಳು ಮಹತಿಗೆ ಧೈರ್ಯ ಹೇಳುತ್ತಿವೆಯೇನೋ ಎಂದೆನಿಸುತ್ತದೆ. ಹೀಗೆ ಇದೇ ರೀತಿಯ ಅನುಭವ ನಾಲ್ಕಾರು ಭಾರಿ ಆಗುತ್ತದೆ. ಇಬ್ಬರಿಗೂ ಒಬ್ಬರನ್ನೊಬ್ಬರು ಮತ್ತೆ ಮತ್ತೆ ನೋಡಬೇಕು, ಮಾತನಾಡಿಸಬೇಕು ಎನಿಸುತ್ತಿರುತ್ತದೆ.
ಮಹತಿ ಇನ್ನಷ್ಟು ದಿನಗಳನ್ನು ಅವನ ನಿರೀಕ್ಷೆಯಲ್ಲಿಯೇ ಅದೇ ಕೌಂಟರ್ ನಲ್ಲಿಯೇ ಕೆಲಸ ಮಾಡಲು ಇಚ್ಛಿಸುತ್ತಿರುತ್ತಾಳೆ. ಒನ್ ಫೈನ್ ಡೇ ಅದೇ ಪ್ರಭು ಪೋಸ್ಟ್ ಮಾಡಬೇಕಾದ ಎನ್ವಲಪ್ ಗಳನ್ನು ಹಿಡಿದು ಬರುತ್ತಾನೆ. ಆ ದಿನ ಮಹತಿ ಬಹಳ ಬೇಸರದಿಂದ ತಲೆ ತಗ್ಗಿಸಿ ಕುಳಿತಿರುತ್ತಾಳೆ.
ಪ್ರಭು ಸಹಜವಾಗಿ, “ಸ್ಪೀಡ್ ಪೋಸ್ಟ್…” ಎಂದಾಗ ಗಾಬರಿಯಿಂದ ಎಚ್ಚರಗೊಂಡ ಮಹತಿ ಪ್ರಭುವನ್ನು ನೋಡುತ್ತಾ ತನಗೆ ದುಃಖ ಹೇಳಿಕೊಳ್ಳಬೇಕು ಎನಿಸುತ್ತದೆ.
ಅವನು, “ಚೇಂಜ್ ಬೇಕಾ ತಗೋಳಿ ಮೇಡಂ…..” ಎಂದು ಬಿಡುತ್ತಾನೆ.
ಏನನ್ನಿಸಿತೋ ಮಹತಿಗ ಸುಮ್ಮನೆ ರೆಸಿಪ್ಟ್ ಹರಿದು ಕೊಡುವಾಗ ತನ್ನ ನಂಬರ್ ನ್ನು ಬರೆದುಕೊಡುತ್ತಾಳೆ. ಪ್ರಭುಗೆ ಯಾಕೆ ಈ ನಂಬರ್ ಎನಿಸಿದರೂ ಪೋಸ್ಟ್ ಆಫೀಸಿನ ಆಚೆ ಬಂದು ನಂಬರ್ ಫೀಡ್ ಮಾಡಿಕೊಳ್ಳುವ ಹೊತ್ತಿಗೆ ವಾಟ್ಸ್ ಆ್ಯಪ್ ನಲ್ಲಿ, `ಹಾಯ್….’ ಎಂದು ಮೆಸೇಜ್ ಕಳುಹಿಸಿಬಿಡುತ್ತಾನೆ. ಅದನ್ನೇ ಕಾಯುತ್ತಿದ್ದ ಮಹತಿಯೂ ಹಾಯ್ ಎಂದು ಕಳುಹಿಸುತ್ತಾಳೆ. ಅಂದಿನಿಂದ ಅವರಿಬ್ಬರ ನಡುವೆ ಗುಡ್ ಮಾರ್ನಿಂಗ್, ಗುಡ್ ನೈಟ್ ಮೆಸೇಜ್ ಗಳು ಪ್ರಾರಂಭವಾಗುತ್ತವೆ.
ಪ್ರಭುವಿನ ಡಿಪಿಯಲ್ಲಿ ಒಂದರ ಮೇಲೆ ಇನ್ನೊಂದು ಕೈ ಇರುವ ಚಿತ್ರ ಮಹತಿಗೆ ಯಾವಾಗಲೂ ಸಮಾಧಾನ ನೀಡುತ್ತಿರುತ್ತದೆ. ಮಹತಿ ಬರೀ ಹೂವಿನ ಚಿತ್ರಗಳನ್ನು ಡಿಪಿಗೆ ಹಾಕಿಕೊಳ್ಳುತ್ತಿದ್ದವಳು, ತನ್ನ ಹಳೆಯ ಫೋಟೋಸ್ ಹಾಕಿಕೊಳ್ಳಲು ಪ್ರಾರಂಭಿಸುತ್ತಾಳೆ. ಗಂಡ ಗುರುವಿನಿಂದ ಅದಕ್ಕೂ ಆಕ್ಷೇಪ ಬರುತ್ತದೆ, ನಂತರ ಸುಮ್ಮನಾಗುತ್ತಾಳೆ. ಆದರೆ ಪ್ರಭು ಕಳುಹಿಸುತ್ತಿದ್ದ ಮೆಸೇಜ್ ಗಳು ಫಾರ್ವರ್ಡೆಡ್ ಆದರೂ ಆತ್ಮವಿಶ್ವಾಸ ತುಂಬಿಸುತ್ತಿದ್ದವು.
ಮಹತಿಯ ಬೇಸರ ತುಂಬಿದ ಮುಖವನ್ನು ಮರೆಯಿಂದ ನೋಡುತ್ತಿದ್ದ ಪ್ರಭು, ಒಂದು ದಿನ ಬೆಳಗ್ಗೆ ಬಂದವನೇ ಮಹತಿಗೆ, “ಇವತ್ತು ರಜೆ ಮಾಡಿ ಎಲ್ಲಾದರೂ ಹೋಗಿ ಮುಕ್ತ ಮಾತನಾಡೋಣ,” ಎಂದು ವಾಯ್ಸ್ ಮೆಸೇಜ್ ಕಳುಹಿಸಿಬಿಟ್ಟ. ಮಹತಿ ಅದನ್ನು ಕೇಳಿಸಿಕೊಂಡಳೇ, “ಬೇಡ…. ಬೇಡ…. ಇವತ್ಬೇಡ….” ಟೈಪಿಸಿಬಿಟ್ಟಳು.
ಅಲ್ಲಿಗೆ ಮಹತಿ ನನ್ನೊಂದಿಗೆ ಕಾಲಕಳೆಯ ಬಯಸುತ್ತಾಳೆ ಎನ್ನುವ ಸಂದೇಶ ಪ್ರಭುಗೆ ಬೇಗ ಡೆಲಿವರಿ ಆಯಿತು ಎನ್ನಿ.
ಮಹತಿಗೆ ಪ್ರಭುವಿನ ಆ ವಾಯ್ಸ್ ಮೆಸೇಜನ್ನು ಮತ್ತೆ ಮತ್ತೆ ಕೇಳಬೇಕೆನಿಸಿ ಕೇಳಿದಳು. ಅವನಿಗೆ ಎಲ್ಲಾ ಹೇಳಿಯೇ ಬಿಡಬೇಕು ಎಂದರೆ ಮಾತುಗಳು ಬರುವುದೇ ಇಲ್ಲ. ಅಷ್ಟಕ್ಕೂ ಅಷ್ಟು ಹೊತ್ತು ಎಲ್ಲಿ ಮಾತನಾಡುವುದು….? ಊಟದ ನಂತರ ಕೌಂಟರ್ ಅಷ್ಟು ಬ್ಯುಸಿಯಾಗಿಲ್ಲದ್ದರಿಂದ ತನ್ನ ಮೊದಲಿನ ಫೋಟೋಗಳನ್ನು, ಗಂಡ ಮಗನ ಸಂಗಡ ಇದ್ದ ಒಂದಷ್ಟು ಫೋಟೋಗಳನ್ನು ಕಳುಹಿಸುತ್ತಾಳೆ. ಪ್ರಭು ಎಲ್ಲದಕ್ಕೂ ಲೈಕ್ ಕೊಡುತ್ತಾನೆ. ಮಹತಿಗೆ ಅದು ಬೇಕಾಗಿರುವುದಿಲ್ಲ. ಆದರೆ ಪ್ರಭು ಒಂದು ಫೋಟೋವನ್ನೂ ಕಳುಹಿಸುವುದಿಲ್ಲ. ಮಹತಿಗೆ ಆತನ ಬಗ್ಗೆ ತಿಳಿಯಬೇಕು ಎನ್ನುವುದಕ್ಕಿಂತ ತನ್ನ ನೋವನ್ನು ಹೇಳಿಕೊಳ್ಳಬೇಕು ಅನ್ನಿಸುತ್ತಿರುತ್ತದೆ. ಮರುದಿನ ಸಂಜೆ ವೇಳೆಗೆ ತಾನು ಗಂಡನ ಜೊತೆ ಪೂಜೆ ಮಾಡುತ್ತಿರುವ ಫೋಟೋವನ್ನು ಕಳುಹಿಸುತ್ತಾಳೆ. ಅದರಲ್ಲಿ ಮುದಿ ಹೆಂಗಸೊಬ್ಬಳು ಕೆಕ್ಕರಿಸಿಕೊಂಡು ನೋಡುತ್ತಿರುವುದನ್ನು ಕಂಡ ಪ್ರಭು, ಅದನ್ನು ಮಾರ್ಕ್ ಮಾಡಿ, “ಹೂ ಈಸ್‌ಶೀ….” ಎಂದರೆ ಮಹತಿ, “ಅತ್ತೆ,” ಎಂದು ಟೈಪಿಸಿ ಕಳುಹಿಸುತ್ತಾಳೆ.

ಪ್ರಭು ಕೋಪಗೊಂಡ ಇಮೋಜಿಯನ್ನು ಕಳುಹಿಸಿದರೆ ಮಹತಿ ಅಳುತ್ತಿರುವ ಇಮೋಜಿಯನ್ನು ಕಳುಹಿಸುತ್ತಾಳೆ. ಮರುದಿನ ಆಫೀಸಿಗೆ ಬಂದ ಮಹತಿಗೆ ತಲೆ ಸುತ್ತಿದಂತೆ ಆಗುತ್ತದೆ. ರಜೆ ಮಾಡಿ ಮನೆಗೆ ಹೋಗುತ್ತಾಳೆ. ಮನೆಯ ಬಳಿ ಕೆಂಪು ಬಣ್ಣದ ಸ್ಕೂಟಿ ನಿಂತಿರುತ್ತದೆ. ಗೇಟ್ ಲಾಕ್ ಆಗಿರುವುದಿಲ್ಲ. ಮಹತಿಯ ಸಂಶಯದಂತೆ ಅವಳ ಪ್ರವೇಶ ಎಂದೋ ಆಗಿದೆ ಎನ್ನುವ ಖಾತ್ರಿಯಾಗುತ್ತದೆ. ಅವರತ್ತೆ ಕಾಫಿ ತಿಂಡಿ ಮಾಡುವುದರಲ್ಲಿ ಬಹಳ ಬ್ಯುಸಿಯಾಗಿರುತ್ತಾರೆ. ಬಂದ ಕೆಂಪು ಬಣ್ಣದ ಸ್ಕೂಟಿಯವಳು ಗಂಡನ ಪಕ್ಕ ಬಹಳ ಸಲಿಗೆಯಿಂದ ಕುಳಿತಿರುತ್ತಾಳೆ. ಅವಳು ದೂರದ ಸಂಬಂಧಿಯೇ ಆಗಿರುತ್ತಾಳೆ. ಅದನ್ನು ನೋಡಿ ಮಹತಿಗೆ ತನ್ನ ಅನಿಸಿಕೆ ಸರಿ ಎನಿಸುತ್ತದೆ.
ಬೇಗನೆ, “ಕನ್ನಡಕ, ಆಫೀಸ್ ಕೀ ಮರೆತಿದ್ದೆ……” ಎನ್ನುತ್ತಲೇ ಬೇಡವಾಗಿರುವ ಯಾವುದೋ ಕೀ ತಗೊಂಡು ಆಫೀಸಿಗೆ ಎಂದು, ಗೆಳತಿ ಮನೆಗೆ ಹೋಗಿ ನಿತ್ಯ ಸಂಜೆ ಮನೆಗೆ ಹೋಗುವ ಸಮಯಕ್ಕೆ ಹಾಜರಾಗುತ್ತಾಳೆ. ಆ ದಿನ ಮನೆಯಲ್ಲಿ ವಿಚಿತ್ರ ನಿಶ್ಶಬ್ದ ಇರುತ್ತದೆ. ಗಂಡನ ಕಿರಿಕಿರಿ, ಅತ್ತೆಯ ಕೊಂಕು ನುಡಿ ಯಾವುದೂ ಇರುವುದಿಲ್ಲ. ಅಸಹಜ ಅನಿಸುತ್ತಿರುತ್ತದೆ. ಒಂದು ವಾರ ಕಳೆಯುತ್ತಿದ್ದಂತೆ ಗಂಡನ ಅಸಡ್ಡೆ ಮತ್ತೆ ಪ್ರಾರಂಭವಾಗುತ್ತದೆ. ಅತ್ತೆಯ ಮುಖದಲ್ಲಿ ವ್ಯಂಗ್ಯ ತುಂಬಿ ತುಳುಕುತ್ತಿರುತ್ತದೆ.
ಮಹತಿ ಇವರನ್ನು ಇನ್ನೊಮ್ಮೆ ಹಿಡಿಯಲೇ ಬೇಕು ಎಂದು ನಿರ್ಧರಿಸಿ ಮೊದಲೇ ರಜೆ ಹಾಕಿ ಆಫೀಸಿಗೆ ಹೊರಟಂತೆ ರೆಡಿಯಾಗಿ ಹೊರಟರೆ ಗಂಡ ಮತ್ತು ಅತ್ತೆ ಗಮನವನ್ನೇ ಕೊಡುವುದಿಲ್ಲ. ಇವಳಿಗೂ ಅದೇ ಬೇಕಾಗಿರುತ್ತದೆ. ಸ್ಕೂಟಿಯನ್ನು ಸ್ಟಾರ್ಟ್ ಮಾಡಿ ಒಂದಷ್ಟು ದೂರ ಹೋದಂತೆ ಹೋಗಿ ಮನೆ ಹಿಂದಿನ ರೋಡಲ್ಲಿ ಮತ್ತೆ ಬಂದು ಪಾಳು ಬಿದ್ದ ಸೈಟ್ ನ ಹತ್ತಿರ ನಿಲ್ಲಿಸಿ ಕವರ್ ಹಾಕಿ ಮನೆ ಹತ್ತಿರ ಬರುತ್ತಾಳೆ. ಮನೆಯ ಬಾಗಿಲು ತೆಗೆದಿರುತ್ತದೆ. ಮಹತಿ ಹೋದ ನಂತರ ಗೇಟನ್ನೂ ಹಾಕಿಕೊಂಡಿರುವುದಿಲ್ಲ. ಅಲ್ಲೇ ತಿಳಿಯುತ್ತದೆ ದಿನವಿಡೀ ದುಡಿಯುವ ಮಹತಿ ಬಗ್ಗೆ ಗಂಡ ಮತ್ತು ಅತ್ತೆಗೆ ಎಷ್ಟು ಕಾಳಜಿ ಇತ್ತೂ ಅಂತ.
ಮಹತಿಗೆ `ಸಿಕ್ಕಿ ಹಾಕೊತ್ತೀನಿ…. ನಾನು… ಒಂದು ವೇಳೆ ಕಂಡರೆ ಏನೋ ನೆಪ ಹೇಳಿದ್ರಾಯ್ತು,’ ಎನ್ನುತ್ತಾ ಬೇಗನೆ ಬಂದು ಗೆಸ್ಟ್ ರೂಮಿಗೆ ಸೇರಿಕೊಳ್ಳುತ್ತಾಳೆ. ಯಾರಿಗೂ ಗೊತ್ತೇ ಆಗಲ್ಲ. ಅವರತ್ತೆ, “ಇಲ್ಲೇ ದೇವಸ್ಥಾನಕ್ಕೆ ಹೋಗ್ ಬರ್ತೀನಿ,” ಎನ್ನುತ್ತಾ ಹೊರಟುಬಿಡುತ್ತಾಳೆ. ಗಂಡ ಅಮ್ಮನನ್ನು ಕಳುಹಿಸಲು ಗೇಟ್ ಹತ್ತಿರ ಹೋಗಿ, “ಹುಷಾರು ಅಮ್ಮಾ…. ಬೇಗ ಬಾ, ಇಲ್ಲ…. ಇಲ್ಲ…. ತಡವಾಗಿಯೇ ಬಾ ಪರವಾಗಿಲ್ಲ…..” ಎಂದು ನಗುತ್ತಾ ಕಳುಹಿಸುತ್ತಾನೆ.
ಗುರು ಮನೊಳಗೆ ಬಂದವನೆ ಸೆಂಟ್ ಹಾಕಿಕೊಳ್ಳುತ್ತಾನೆ. ಆ ಪರಿಮಳ ಗೆಸ್ಟ್ ರೂಮನ್ನು ದಾಟಿ ಹೊರಹೋಗುತ್ತಿರುತ್ತದೆ. ಸ್ವಲ್ಪ ಹೊತ್ತು ಕಳೆಯುತ್ತಲೇ ಕೆಂಪು ಬಣ್ಣದ ಸ್ಕೂಟಿಯಲ್ಲಿ ಅವಳು ಬಂದೇಬಿಟ್ಟಳು. ಮಹತಿ ಗಂಡ ಗುರು ಬೇಗನೆ ಹೋಗಿ ಗೇಟ್, ಮನೆ ಮೇನ್ ಡೋರ್ ಹಾಕಿ ಕೈ ಹಿಡಿದು ಬರಮಾಡಿಕೊಂಡು ಹಾಲ್ ನಲ್ಲಿ ಕೂರಿಸಿಕೊಂಡು ಹೆಗಲ ಮೇಲೆ ಕೈ ಹಾಕುವನು. ಮಾದಕ ನೋಟದಿಂದ ಇಬ್ಬರೂ ಪರಸ್ಪರ ನೋಡುತ್ತಾರೆ.
“ಇಲ್ಲಿ ಬೇಡ ಏಕೋ ಸರಿಹೋಗುತ್ತಿಲ್ಲ,” ಎನ್ನುತ್ತಾ ರೂಮಿಗೆ ಹೋಗುತ್ತಾರೆ. ಅವರ ಕೇಕೆಯೇನು….? ಖುಷಿಯೇನು….? ಅವನ್ನು ಕೇಳಿಸಿಕೊಳ್ಳುತ್ತಿದ್ದ ಮಹತಿಗೆ ಆವೇಶ ಉಕ್ಕಿ ಬರುತ್ತಿರುತ್ತದೆ.
`ರೆಡ್ ಹ್ಯಾಂಡ್ ಆಗಿ ಸಿಕ್ಕಿದ್ದಾರೆ ಹೇಗೋ ಇವ್ರು ಹಳಬರು. ಫೋಟೋ ವಿಡಿಯೋ, ವಾಯ್ಸ್ ರೆಕಾರ್ಡ್ ಎಲ್ಲಾ ಮಾಡೋಣ ನನ್ ಕರ್ಮ….’ ಎನ್ನುತ್ತಾ ಬರುವ ಸಿಟ್ಟನ್ನು ತಡೆದುಕೊಂಡು, ತನ್ನ ಕೈಗಳನ್ನೇ ಕಚ್ಚಿಕೊಳ್ಳುತ್ತಾ ಹಣೆ ಬಡಿದುಕೊಳ್ಳುತ್ತಾ, ತನಗೆ ತಾನೇ ಶಿಕ್ಷೆ ಕೊಟ್ಟುಕೊಳ್ಳುತ್ತಾ ಹೊತ್ತು ಸಾಗಿಸುತ್ತಾಳೆ. ಅವರಿಬ್ಬರೂ ಮೊಬೈಲ್ ಆಫ್ ಮಾಡುತ್ತಾರೆ. ಮತ್ತದೇ ನಗು… ಕೇಕೆ. ಆದರೆ ನಗು ಹೆಚ್ಚು ಹೊತ್ತು ಉಳಿಯುವುದಿಲ್ಲ.“ನಾವ್ ತಪ್ ಮಾಡ್ತಾ ಇದೀವಿ…. ಮಹತಿ ಕಂಡರೆ ಎಷ್ಟು ಕೋಪ ಮಾಡ್ಕೋಬಹುದು….? ಪಾಪ ಅನ್ಸುತ್ತೆ ದಿನವಿಡೀ ಪೋಸ್ಟ್ ಆಫೀಸಿನ ಕೆಲಸ. ಬೆಳಗ್ಗೆ ಹೋದರೆ ಸಂಜೆ ಬರ್ತಾಳೆ…..” ಎಂದು ಗುರು ನೊಂದುಕೊಳ್ಳುತ್ತಿದ್ದರೆ, ಅದಕ್ಕೆ ಬಂದ ಆ ಕೆಂಪು ಬಣ್ಣದ ಸ್ಕೂಟಿಯವಳು, “ನಿಂಗೆ ಪೋಸ್ಟ್ ಆಫೀಸಿನಲ್ಲಿ ಕುಟ್ಟೋ ಮಹತಿನೇ ನೆನಪಾಗ್ತಾ ಇದ್ದಾಳೆ…. ಹತ್ತಿರದಲ್ಲಿ ನಾನಿಲ್ವೇನು….?” ಎನ್ನುತ್ತಾಳೆ.
“ಹಾಗಲ್ಲ…. ನಾವ್ ತಿಂತಾ ಇರೋ ಒಂದೊಂದೂ ಅಗುಳೂ ಅವಳ ಋಣ. ನಿಂಗೆ ಕಳೆದ ಬರ್ತ್ ಡೇನಲ್ಲಿ ಈ ಸರ ಕೊಟ್ಟಿದ್ನಲ್ಲ ಅದೂ ಅವಳ ದುಡ್ಡೇ….” ಎಂದು ಗುರುವಿನ ಮಾತಿಗೆ, “ಅಯ್ಯೋ…. ಹೀಗೆ ಹೇಳ್ತಾ ಇದ್ರೆ ನಾನು ಹೊರಟೆ,” ಎನ್ನುತ್ತಾ ಬಂದಿದ್ದ ಅವಳು ಹೊರಡಲು ಕೊಸಾರನೆ ಏಳುತ್ತಾಳೆ.
ಮಹತಿ ಗಂಡ ಅವಳನ್ನು ಕೈಹಿಡಿದು ಕೂರಿಸಿಕೊಂಡು, “ಹೋಗ್ಲಿ ಬಿಡು ಎಂಜಾಯ್ ಮಾಡೋಣ…..” ಎನ್ನುತ್ತಾ ಅವಳನ್ನೆ ನೀವುತ್ತಾ ದಿಟ್ಟಿಸತೊಡಗಿದ.
ಮತ್ತೆ ಯಾಕೋ, “ತಪ್ ಮಾಡ್ತಾ ಇದೀವಿ…” ಎಂದ ಮಹತಿಯ ಗಂಡನ ಮಾತಿಗೆ, “ಅಯ್ಯೋ…. ನಿಮ್ಮಮ್ಮನೆ ಸಪೋರ್ಟ್ ಮಾಡ್ತಿರುವಾಗ ಇದೇನು ಹೊಸ್ದು….?” ಎಂದು ಅವಳು ವಾದಕ್ಕಿಳಿಯುತ್ತಾಳೆ.
ಅವರ ವಾದವನ್ನು ಹಾಗೇ ಕೇಳಿಸಿಕೊಳ್ಳುತ್ತಿದ್ದ ಮಹತಿಯ ಕಿವಿಗೆ ಹಿಂದೆ ಮನೆಯಲ್ಲಿ ಸಾಕಷ್ಟು ಬಾರಿ ಗಲಾಟೆ ಆದಾಗ, `ನಿನ್ನನ್ನು ಸಾಕ್ಷಿ ಇಲ್ಲದ ಹಾಗೆ ಮುಗಿಸ್ತೀವಿ,’ ಎಂದು ಹೇಳಿದ್ದ ಅಮ್ಮ ಮಗನ ಮಾತುಗಳು ರಿಂಗಣಿಸತೊಡಗುತ್ತವೆ.
“ನಾನೇ ಸಾಯ್ತೀನಿ,” ಎಂದಿದ್ದಾಗ, “ನೀನು ಸತ್ರೆ ನಿನ್ನ ಮಗನಿಗ್ಯಾರೆ ದಿಕ್ಕು….? ಯಾರ್ ನೋಡ್ಕೋತಾರೆ….? ನಮಗೇನು ಹಣೆಬರಹನಾ….? ಸತ್ರೆ ಸಾಯ್ತೀಯ ಬಿಡು! ಶನಿ ತೊಲಗ್ತು ಅಂತೀವಿ….. ಹೇಗೋ ಮಗ ನವೋದಯದಲ್ಲಿ ಫ್ರೀ ಓದ್ದಾ ಇದ್ದಾನೆ. ಹಂಗೆ ಸಾಗುತ್ತೆ ಬಿಡು,” ಎಂದ ಅವರ ಕಟು ಮಾತುಗಳು ಮಹತಿಯ ಎದೆಯನ್ನು ಮತ್ತೆ ಮತ್ತೆ ಕುಟುಕುತ್ತಿದ್ದವು.
ಅಷ್ಟರಲ್ಲಿ ಗಂಡ ಮತ್ತು ಅವಳು ಮತ್ತೆ ಬಂದು ಹಾಲ್ ನಲ್ಲಿ ಕುಳಿತು ಮಹತಿ ಬಗ್ಗೆನೇ ಮಾತಾಡ್ತಾ, “ಏನೇ ಆಗಲಿ ಟ್ವೆಂಟಿ ಫೋರ್ ಕ್ಯಾರೆಟ್ ಅವಳು! ನನ್ನ ಹಾಗಲ್ಲ…. ಅವಳೇ ಮನೆ ಬಿಟ್ಟು ಹೋಗ್ಲಿ ಅಂತ ನರಕ ಕೊಟ್ಟೆ…..! ನಮ್ಮಪ್ಪ ಸತ್ತಾಗ ಜಮೀನ್ ಮಾರ್ಕೊಂಡು ಇಲ್ಲಿ ಮನೆ ತಗೊಂಡ್ವಿ! ಒಂದಷ್ಟು ತಂಗಿಗೆ ಕೊಟ್ವಿ….” ಎನ್ನುತ್ತಿದ್ದವನಿಗೆ, “ಇಷ್ಟು ದಿನ ಇಲ್ದ ಯೋಚನೆ ಇತ್ಯಾಕೆ….? ಹಾಗಿದ್ರೆ ನಾನ್ ಕ್ಯಾರೆಕ್ಟ್ ಲೆಸ್, ಅವಳು ಟ್ವೆಂಟಿಫೋರ್ ಕ್ಯಾರೆಟ್,” ಎಂದು ಕೆಂಪು ಬಣ್ಣದ ಸ್ಕೂಟಿಯವಳು ವಾದಕ್ಕಿಳಿದಳು.
ಅಷ್ಟರಲ್ಲಿ ಮನೆ ಮುಂದೆ ಆಟೋ ನಿಲ್ಲಿಸಿದ ಸದ್ದಾಯಿತು. ಯಾರು ಎಂದು ಬಾಗಿಲು ತೆಗೆದರೆ ಅವರಮ್ಮ ಮನೆ ಒಳಗೆ ಬರುತ್ತಲೇ, “ಇವತ್ಯಾಕೋ ದಿನಾನೇ ಸರಿಯಾಗಿಲ್ಲ ಕಣೋ….! ದೇವರ ಪ್ರಸಾದ ಕೈಯಿಂದ ಬಿತ್ತು! ಅಲ್ನೋಡಿದರೆ ಯಾವುದೋ ಗೂಳಿ ಅಡ್ಡ ಬರ್ತಾ ಇತ್ತು ಅಂತ ಸೈಡಿಗೆ ಬಂದು ಕಾಲು ಎಡವಿಕೊಂಡು ಗಾಯ ಮಾಡ್ಕೊಂಡೆ,” ಎನ್ನುತ್ತಿದ್ದಳು.
“ನನಗೂ ಅಷ್ಟೇ ಅಮ್ಮಾ…. ಮನಸ್ಸಿಗೆ ಕಳವಳ ಭಯ ಆಗ್ತಿದೆ,” ಎಂದು ಗುರು ಮಾತು ಮುಗಿಸುವಷ್ಟರಲ್ಲಿ ಗೆಸ್ಟ್ ರೂಮಿನಲ್ಲಿದ್ದ ಮಹತಿ ಫೋನ್ ಹಿಡಿದುಕೊಂಡು, ಬೇಕೆಂತಲೇ ಜೋರು ಸದ್ದು ಮಾಡುತ್ತಾ ರೂಮಿನಿಂದ ಆಚೆ ಬಂದಳು. ಗುರೂಗೆ ಗರ ಬಡಿದಂತಾಯಿತು. ಅತ್ತೆ ಕುಂಟುತ್ತಲೇ, “ಅಮ್ಮಾ….. ಮಹತಿ…. ಅದೂ….. ಅದೂ ಅದೇನು ಅಂದ್ರೆ… ” ಎಂದು ಹೇಳಲು ಬಂದರು.
ಮಹತಿ ಎತ್ತರದ ಧ್ವನಿಯಲ್ಲಿ, “ಐ ನೋ ಎರಿವಥಿಂಗ್ ಐ ಗಾಟ್…. ಗಾಟ್ ಇಟ್. ಎವರಿಥಿಂಗ್ ಈಸ್ ಈನ್ ಮೈ ಫೋನ್. ನೌ ಐ ಆ್ಯಮ್ ಕ್ಲೆವರ್ ವೆರಿ ಕ್ಲೆವರ್….. ಎವರಿಥಿಂಗ್ ಈಸ್ ಇನ್ ಡ್ರೈವ್. ಐ ಸೆಂಟ್ ಇಟು ಟು ಮೈ ಕಿಡ್ ಆಲ್ಸೋ….” ಎನ್ನುತ್ತಾ ರೂಮಿಗೆ ಹೋಗಿ ನೋವು ಆಕ್ರೋಶ ತುಂಬಿದ ಧ್ವನಿಯಲ್ಲಿ “ಅಸಹ್ಯ….. ಅಸಹ್ಯ….” ಎನ್ನುತ್ತಲೇ ತನ್ನ ಬಟ್ಟೆಗಳನ್ನೆಲ್ಲಾ ತುಂಬಿಕೊಂಡು ಬಂದು ಗೆಸ್ಟ್ ರೂಮಿನಲ್ಲಿ ಗುಡ್ಡೆ ಹಾಕಿದಳು.
ಅವಳು ಹಾಗೆ ತರುವಾಗ ಕೆಲವು ಬಟ್ಟೆಗಳು ಚೆಲ್ಲಾಡಿದ್ದವು. ಅತ್ತೆ ಕುಂಟುತ್ತಲೇ ಅವೆಲ್ಲವನ್ನೂ ಎತ್ತಿ ಮಹತಿಯ ಕೈಗೆ ಕೊಡಲು ಬಂದ ಅತ್ತೆಯ ಕೈಯನ್ನು ಕೊಸರಿಕೊಂಡು ತಳ್ಳುತ್ತಾ, ಜನರಲ್ ರೂಮಿನಲ್ಲಿಯೇ ತಣ್ಣೀರನ್ನು ಸುರುವಿಕೊಂಡು, ತಲೆ ಒರೆಸದೆ ಕೈಗೆ ಸಿಕ್ಕ ಯಾವುದೋ ಪ್ಯಾಂಟ್, ಯಾವುದೋ ಟಾಪ್ ಹಾಕಿಕೊಂಡು ರಾಯರ ಮಠಕ್ಕೆ ಬಂದು ರಾಯರಲ್ಲಿ, “ಇದು ಸರೀನಾ….? ನಿನಗೆ ಒಪ್ಗೆನಾ…..? ನನ್ ತಪ್ಪಿದ್ಯಾ…..? ನಾನೇನ್ ಮಾಡ್ಲಿ…..?” ಎನ್ನುವ ಪ್ರಶ್ನೆಗಳನ್ನು ಹಾಕುತ್ತಾ…. ಕಣ್ಣೀರು ಸುರಿಸುತ್ತಾ ಇತರರಿಗೆ ಗೊತ್ತಾಗಬಾರ್ದು ಎನ್ನುತ್ತಾ ಕತ್ತಲಲ್ಲಿ ಬಂದು ಆ ದಿನ ತೆಗೆದ ಅಷ್ಟೂ ಫೋಟೋವನ್ನು ಪ್ರಭುವಿಗೆ ಕಳುಹಿಸಿದಳು.
ಪ್ರಭುವಿಗೆ ಭಯವಾಗಿ ಮಹತಿಗೆ ಕಾಲ್ ಮಾಡ್ತಾನೆ. ಮಹತಿ ಕಾಲ್ ಪಿಕ್ ಮಾಡಿ ಅಳುತ್ತಾಳೆ.
ಪ್ರಭು, “ಈಗ ಸಂಜೆ ಮನೆಗೆ ಹೋಗಿ ನಾಳೆ ಊರಿಂದ ಆಚೆ ಹೋಗೋಣ ಅಲ್ಲಿ ಎಲ್ಲವನ್ನೂ ಹೇಳಿ,” ಎಂದು ಮನೆಗೆ ಹೋಗಲು ತಿಳಿಸುತ್ತಾನೆ.
ಮಹತಿ ಬಂದವಳೇ ಗೆಸ್ಟ್ ರೂಮಿಗೆ ಸೇರಿ ಬಾಗಿಲು ಹಾಕಿ ಬೆಳಗ್ಗೆ ತೆಗೆದ ಎಲ್ಲಾ ಫೋಟೋಗಳನ್ನೂ ಅವಳ ನಾದಿನಿಗೂ ಕಳುಹಿಸುತ್ತಾಳೆ. ಇತ್ತ ಪ್ರಭು, “ಈಗಲೇ ಬಂದು ವಿಚಾರಿಸಲೇ,” ಎಂದು ಮೆಸೇಜ್ ಮಾಡಿದರೆ, “ನೀನು ಯಾರು… ಎಂದರೆ ಏನಿದೆ ನಿಮ್ಮ ಹತ್ತಿರ ಉತ್ತರ….?” ಎನ್ನುವ ಪ್ರಶ್ನೆ ಹಾಕುತ್ತಾಳೆ.
ಮರುದಿನ ಯಾರೊಂದಿಗೂ ಮಾತನಾಡದೆ ಮಹತಿ ಎಲ್ಲಿಗೂ ಎನ್ನದೆ ಬಂದುಬಿಡುತ್ತಾಳೆ. ಆದರೆ ಅವರತ್ತೆಗೆ ಯೋಚನೆ, “ನೂರು ದಿವಸ ಕದ್ದ ಕಳ್ಳ ಸಿಕ್ಕಿಹಾಕೊತ್ತಾನೆ ಅಂತಾರಲ್ಲ ಹಾಗಾಯ್ತು! ಇವಳು ಇಲ್ಲ ಅಂದ್ರೆ ಮನೆ ನಡೆಯೋದು ಹೇಗೆ….?” ಎನ್ನುವ ಪ್ರಶ್ನೆಗಳನ್ನು ಗುರುವಿಗೆ ಕೇಳುತ್ತಾಳೆ.
ಮಹತಿಗೋಸ್ಕರ ಕಾಯುತ್ತಿದ್ದ ಪ್ರಭು ಮಹತಿಯನ್ನು ಕಾಣುತ್ತಲೇ, “ಮಡಿಕೇರಿಗೆ ಹೋಗೋಣ, ವೀರಾಜಪೇಟೆಯಿಂದ ಮುಕ್ಕಾಲುಗಂಟೆ ಅಷ್ಟೇ,” ಎನ್ನುತ್ತಾ ಮಡಿಕೇರಿಗೆ ಹೋಗುತ್ತಾರೆ.
ಹೋಗ್ತಾ ಹೋಗ್ತಾ ಗಾಲ್ಫ್ ಗ್ರೌಂಡ್ ಕಡೆಗೆ ಹೋಗುತ್ತಾರೆ. ಪ್ರಭು ಏನೂ ಮಾತನಾಡುವುದಿಲ್ಲ. ಮಹತಿಯೂ ಮೌನವಾಗಿರುತ್ತಾಳೆ. ಕಡೆಗೆ ಪ್ರಭು ಮೌನ ಮುರಿದು, “ಬೇಸರ ಬೇಡ! ಬಿಡಿ ಅವರನ್ನು ಅವರ ಪಾಡಿಗೆ! ನಾನು ನಿಮ್ಮ ಬದುಕನ್ನು ಚೇಂಜ್ ಮಾಡ್ತೀನಿ,” ಎನ್ನುತ್ತಾ ತನ್ನ ಹೆಂಡತಿಯ ಸಂಗಡ ಇದ್ದ ಸೆಲ್ಛಿಯನ್ನು, ಅವಳ ಫೋಟೋಕ್ಕೆ ಹಾರ ಹಾಕಿದ್ದ ಫೋಟೋವನ್ನು ಒಟ್ಟಿಗೆ ತೋರಿಸ್ತಾನೆ.
“ಅವಳಿಗೆ ಬ್ರೆಸ್ಟ್ ಕ್ಯಾನ್ಸರ್ ಇತ್ತು. ಅಪಾಯದ ಜೊತೆಗೆ ಬದುಕಿದ್ವಿ ನಾವು. ಮಗ ಎಂ.ಬಿ.ಬಿ.ಎಸ್ ಸೇರುತ್ತಲೇ ಗೆದ್ದೇ ಎನ್ನುತ್ತಲೇ ಅವಳು ಸೋತು ಹೊರಟುಬಿಟ್ಳು. ಈಗ ಮಗ ಬೆಂಗಳೂರಿನಲ್ಲಿ ಎಂ.ಡಿ ಮಾಡ್ತಾ ಇದ್ದಾನೆ. ನಾನು ಕೆಲಸದಲ್ಲಿ ಫೋಕಸ್ ಮಾಡಕ್ಕಾಗದೆ ರಿಟೈರ್ಡ್ ಮೆಂಟ್ ತಗೊಂಡೆ. ನನ್ನ ಹೆಂಡ್ತಿ ಯಾವಾಗಲೂ ನನಗಿಂತ ಒಳ್ಳೆ ಪಾರ್ಟನರ್ ಸಿಗ್ತಾರೆ ನೋಡ್ತಾ ಇರಿ ಅಂತಾ ಇದ್ಲು,” ಎಂದ.
ಅಳುತ್ತಲೇ ಇದ್ದ ಮಹತಿಗೆ, “ಅತ್ತು ಪ್ರಯೋಜನವಿಲ್ಲ,” ಎನ್ನುತ್ತಾ ಅವಳೆರಡೂ ಕೈಗಳನ್ನು ಭದ್ರವಾಗಿ ಹಿಡಿದುಕೊಂಡು, “ನಾನಿದ್ದೇನೆ ನಿನ್ನ ಬದುಕಿನಲ್ಲಿ ಚೇಂಜಸ್ ತರ್ತೇನೆ,” ಎನ್ನುತ್ತಾ ಎದೆಗವುಚಿಕೊಂಡ.
ಮಹಿತಿ, “ಇಲ್ಲ ಇದೆಲ್ಲಾ ಸಾಧ್ಯ ಇಲ್ಲ….! ನನಗೆ ಮಾರಲ್ ಸಪೋರ್ಟ್ ಬೇಕು,” ಎಂದು ಪ್ರಭುವನ್ನೇ ನೋಡುತ್ತಾ, “ದೈಹಿಕ ಸುಖ ಶಾಶ್ವತವೇ….? ಸೆಕೆಂಡ್ ಗಳದ್ದು! ಅದನ್ನು ಮೀರಿ ನನಗೆ ಮಾನಸಿಕ ಸುಖ ಬೇಕು! ನನಗೇನೂ ಬೇಡ,” ಎನ್ನುತ್ತಾಳೆ.
ಹೌದು ಎನ್ನುತ್ತ ಪುನಃ ಅವಳನ್ನು ಸಮಾಧಾನಿಸಿದ ಪ್ರಭು, “ಇದೇನು ಕಣ್ಣೀರಲ್ಲೇ ಹೊಟ್ಟೆ ತುಂಬಿಸಿಕೊಳ್ಳುವ ಹಾಗೆ ಕಾಣ್ಸುತ್ತೆ. ಬನ್ನಿ, ಊಟಕ್ಕೆ ಹೋಗೋಣ!” ಎಂದು ಕಾರ್ ಸ್ಟಾರ್ಟ್ ಮಾಡಲು ಕೀ ತೆಗೆದುಕೊಂಡ.
ಮಹತಿ ಅವನ ಕೈಯನ್ನು ಹಿಡಿದು, “ಪ್ಲೀಸ್ ಬೇಡ,” ಎನ್ನುತ್ತಾ ಅವನನ್ನು ತಬ್ಬಿಕೊಂಡು ಕಣ್ಣೀರು, ಸಿಂಬಳ ಒರೆಸುತ್ತಾಳೆ. ಅವಳೇ ಕರ್ಚೀಪ್ ನಿಂದ ಕ್ಲೀನ್ ಮಾಡ ಹೋದಾಗ ಇರಲಿ ಎನ್ನುತ್ತಾನೆ ಪ್ರಭು.
ಹಾಗೆಯೇ ತಾವಿದ್ದಲ್ಲಿಗೇ ಆನ್ ಲೈನ್ ನಲ್ಲಿ ಮಸಾಲೆ ದೋಸೆ ಆರ್ಡರ್ ಮಾಡಿ ತರಿಸಿ, ಬಲವಂತ ಮಾಡಿ ಮಹತಿಗೆ ತಿನ್ನಿಸುತ್ತಾನೆ. ತಮ್ಮಿಬ್ಬರ ಮಕ್ಕಳಿಗೂ ವಿಷಯನ್ನು ತಿಳಿಸುವ ನಿರ್ಧಾರ ಮಾಡುತ್ತಾರೆ. “ನನ್ನ ಮಗನ ಅಭ್ಯಂತರವಿಲ್ಲ,” ಎನ್ನುತ್ತಾನೆ ಪ್ರಭು.
“ನನ್ನ ಮಗ ಹೇಗೆ ರಿಯಾಕ್ಟ್ ಮಾಡ್ತಾನೋ ಗೊತ್ತಿಲ್ಲ,” ಎನ್ನುತ್ತಾ ಮಹಿತಿ ಮನೆ ತಲುಪುತ್ತಾಳೆ.
ಅಷ್ಟರಲ್ಲಿ ಮಹತಿಯ ನಾದಿನಿ, “ಮಹತಿ ನಿನ್ನನ್ನು ನಂಬಿದ್ಲು. ಯಾವತ್ತಾದ್ರೂ ಬದಲಾಗ್ತಾನೆ ಅನ್ನೋ ನಿರೀಕ್ಷೆ ಇಟ್ಕೊಂಡಿದ್ಲು. ನೀವು ಹೀಗೆ ಮಾಡ್ಬಾರ್ದಿತ್ತು. ನೊಂದ ಜೀವದ ಸಂಕಟ ತಟ್ಟುತ್ತೆ,” ಎಂದು ಅಣ್ಣ ಮತ್ತು ತಾಯಿಯನ್ನು ತರಾಟೆಗೆ ತಗೊಂಡಿದ್ಲು.
ಮಹತಿಯನ್ನು ನೋಡಿ, “ಅತ್ತಿಗೆ ಹೀಗೆ ಆಗ್ಬಾರದಿತ್ತು. ಸಾರಿ….” ಎಂದರೆ ಮಹತಿ ಅವಳನ್ನು ಒಮ್ಮೆ ನೋಡಿ, “ಮನೆ ಮಗಳು ಬಂದಿದ್ದೀಯಾ ಇರು,” ಎನ್ನುತ್ತಾ ಗೆಸ್ಟ್ ರೂಮಿಗೆ ಹೋಗಿ ಲಾಕ್ ಮಾಡಿಕೊಂಡಳು.
ಮತ್ತೆ ಪ್ರಭುಗೆ ವಾಟ್ಸ್ ಆ್ಯಪ್ ನಲ್ಲಿ, “ನಾನು ಇಲ್ಲಿ ಇರಲ್ಲ,” ಎಂದು ಮೆಸೇಜ್ ಮಾಡುತ್ತಾಳೆ.
“ಈಗಲೇ ಬಂದ್ಬಿಡು,” ಎನ್ನುತ್ತಾನೆ ಪ್ರಭು.
“ಅಷ್ಟು ಸುಲಭ ಅಲ್ಲ…..”
“ನಾನೇ ಬಂದು ಕರ್ಕೊಂಡು ಬರ್ತೀನಿ…..”
“ಬೇಡ…”
“ನಾಳೆ ಡ್ಯೂಟಿಗೆ ಹೋಗಬೇಕಾ….?”
“ಮನಸ್ಸಿಲ್ಲ…..”
“ಮತ್ತೆ….”
“ಮಗನ ಹತ್ರ ಹೋಗೋಣ…..”
“ಸರಿ….” ಎಂದ ಪ್ರಭು.
ಹೀಗೆ ಚಾಟ್ ಮಾಡಿಕೊಂಡು ಮರುದಿನ ಬೇಗ ಹೊರಟು ಮಗನಿದ್ದಲ್ಲಿಗೆ ಹೋಗಿ ಅವನನ್ನು ಕರೆದು ಕೂರಿಸಿಕೊಂಡರೆ ಅವನು ಅಳುವುದಕ್ಕೆ ಪ್ರಾರಂಭ ಮಾಡುತ್ತಾನೆ. ಪ್ರಭು ಅವನನ್ನು ಸಮಾಧಾನಿಸುತ್ತಾನೆ. ಆದರೆ ವಿಷಯ ಹೇಳಲು ಇಬ್ಬರೂ ತಡವರಿಸುತ್ತಾರೆ.
ಮಹತಿಯ ಮಗ ವಿನೀಶ್ ಬುದ್ಧಿವಂತ. ಅವನು ಅಮ್ಮನಿಗೆ, “ಅಮ್ಮಾ….. ಅಪ್ಪನ ವಿಚಾರ ಬಿಡು. ನನಗೆ ಅರ್ಥ ಆಗುತ್ತೆ. ಈ ಅಂಕಲ್ ನಿನಗೆ ಪಾರ್ಟನರ್ ಆದ್ರೆ ಚೆನ್ನಾಗಿರುತ್ತೆ. ನಾನು ಅಲ್ಲಿದ್ದಾಗ ಸಂಜೆ ನೀನು ಬಂದಾಗ ಅಪ್ಪ ಹೇಗೆ ಆಡ್ತಾ ಇದ್ದರು…. ಭಯ ಆಗ್ತಿತ್ತು….. ಅಜ್ಜಿ ಎಷ್ಟು ಕಿರಿಕಿರಿ ಮಾಡ್ತಾ ಇದ್ರು. ಆದ್ದರಿಂದ ನವೋದಯಕ್ಕೆ ಬಂದೆ. ನಮ್ಮ ನೆಮ್ಮದಿ ಮುಂದೆ ಯಾವ ಸಮಾಜ ಇಲ್ಲ ಅಮ್ಮಾ……” ಎಂದು ಅಮ್ಮನ ಕೈ ನೇವರಿಸಿದ.
ಪ್ರಭುವಿಗೆ, “ಅಂಕಲ್…. ನಮ್ಮಮ್ಮಾ ತುಂಬಾ ಒಳ್ಳೆಯವರು,” ಎಂದ ಅಷ್ಟರಲ್ಲಿ ಪ್ರಭುವಿನ ಮಗ ವಿಡಿಯೋ ಕಾಲ್ ಮಾಡಿ, “ಅಪ್ಪಾ ಎಲ್ಲಾ ಹೇಳಿದ್ರು ಅಂಟಿ. ಮತ್ತೆ ನಮ್ಮಮ್ಮನನ್ನು ನೋಡ್ತಾ ಇದ್ದೀನಿ ಅನ್ನಿಸ್ತಿದೆ. ವೆಲ್ ಕಂ ಟು ಅವರ್ ಹೋಮ್….” ಎಂದ ಹಾರ್ದಿಕವಾಗಿ.
“ಬದುಕು ನಮ್ ನಾಲ್ಕು ಜನರದ್ದು. ನಾವು ಇಮ್ಮಾರಲ್ ಇಲ್ಲೀಗ್ ಅಂತ ಏನೂ ಮಾಡ್ತಿಲ್ಲ,” ಎಂದ ಪ್ರಭುವಿನ ಮಾತಿಗೆ ಮಹತಿಯೂ ದನಿಗೂಡಿಸಿದಳು. ಅಂದೆ ಮಗ ಹಾಗೂ ಪ್ರಭುವಿನೊಡನೆ ಮಹತಿ ಗಂಡನ ಮನೆಗೆ ಬಂದಳು. ಗುರುವಿಗೆ ಏನಾಗ್ತಿದೆ ಎಂದು ತಿಳಿಯುವಷ್ಟರಲ್ಲಿ, ಪ್ರಭು, “ಗುರು, ಇವಳನ್ನು ನಾನು ನೋಡ್ಕೋತೀನಿ,” ಎಂದ.
ಅವರತ್ತೆ ಏನೋ ಹೇಳಕೆ ಬಂದರೂ ಮಾತು ಬರಲಿಲ್ಲ. ತಪ್ಪು ಆಗಿದ್ದರಿಂದ ಗುರುವಿಗೂ ಮಾತು ಹೊರಡಲಿಲ್ಲ. ಮಹತಿಯ ಮಗ, ಅಪ್ಪ ಮತ್ತು ಅಜ್ಜಿಗೆ, “ಇನ್ನಾದ್ರೂ ಅಮ್ಮ ಈ ಅಂಕಲ್ ಜೊತಗಿರಲಿ ಬಿಡಿ,” ಎಂದ.
ಪ್ರಭು ಮಹತಿಗೆ, “ಈಗಲೇ ಹೊರಡಿ,” ಎಂದ.
ಮಹತಿಗೆ ಗೋಡೆ ಮೇಲಿದ್ದ ತನ್ನ ಮದುವೆ ಫೋಟೋ ಮತ್ತು ತನ್ನ ವಸ್ತುಗಳನ್ನು ಪ್ಯಾಕ್ ಮಾಡಲು ಯೋಚಿಸುತ್ತಿದ್ದರೆ, “ಎಲ್ಲಾ ಚೇಂಜಸ್ ಆಗಲಿ. ಹಳೆಯ ಬೇಡ,” ಎಂದು ಮಹತಿ ಮತ್ತು ಅವಳ ಮಗನನ್ನೂ ಕರೆದುಕೊಂಡು ಹೊರಟ.
ಇಷ್ಟೆಲ್ಲಾ ಆದ ಮೇಲೆ ಒಂದೇ ಊರಿನ ವಾಸ ಬೇಡವೆಂದು ಪ್ರಭು ಬೇಗ ಮಡಕೇರಿಯಲ್ಲಿ ಮನೆ ಮಾಡಿದ. ಮಹತಿ ಕೆಲಸಕ್ಕೆ ಹೋದರೂ, ಹೋಗದೆ ಇದ್ರೂ ಪರವಾಗಿಲ್ಲ ಎನ್ನುವ ಅನಿಸಿಕೆ ಪ್ರಭುವಿನದ್ದಾಗಿತ್ತು. ಕೆಲಸ ಬಿಡಲೊಪ್ಪದ ಮಹತಿ ಮಡಿಕೇರಿಯಿಂದ ವಿರಾಜಪೇಟೆಗೆ ಓಡಾಡುತ್ತಿದ್ದಳು. ಮಹತಿ ಅಲ್ಲಿ ಅಡ್ಜಸ್ಟ್ ಆಗುಷ್ಟವರಲ್ಲಿ ಅವಳಿಗೆ ಪ್ರಮೋಷನ್ ಆಗಿ ಆರ್ಡರ್ ಬಂದಾಗ, ಪ್ರಭು, “ನಿರ್ಧಾರ ನಿನ್ನದೇ…..” ಎಂದ.
“ಬೆಂಗಳೂರಿಗೆ ಹೋಗೋಣ. ಮಕ್ಕಳ ಹತ್ತಿರ ಇದ್ದ ಹಾಗೂ ಆಗುತ್ತೆ,” ಎಂದಳು ಮಹತಿ.
“ಓಹೋ ಮಹತಿ ಮೇಡಂ ನಿಮಗೆ ಚೇಂಜ್ ಬೇಕಾ….. ಬೆಂಗಳೂರಿಗೆ ಹೋದ್ರೆ ಚೇಂಜ್ ಸಿಗುತ್ತೆ ಅಲ್ವಾ…..?” ಎಂದು ಪ್ರಭು ಕಾಲೆಳೆಯುತ್ತಾನೆ.
“ಹೌದೂ….!” ಎಂದು ಮಹತಿ ಮಂದಹಾಸ ಬೀರುತ್ತಾಳೆ.





