ಆಟೋ ಚಾಲನೆಯ ಚಾಲೆಂಜಿಂಗ್ ಪಾತ್ರಕ್ಕಾಗಿ ನಾನು ಅದನ್ನು ಕಲಿತೆ! `ರಾಮಾಚಾರಿ, ಕೃಷ್ಣ ರುಕ್ಕು‘ ಇತ್ಯಾದಿ ಧಾರಾವಾಹಿಗಳ ನಾಯಕಿ ಮೌನಾರ ಜೊತೆ ವಿಶೇಷ ಮಾತುಕಥೆ ಇಲ್ಲಿದೆ…..
ಕನ್ನಡ ಟೆಲಿವಿಷನ್ ಜಗತ್ತಿನಲ್ಲಿ ತಮ್ಮ ನಟನೆಯ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವ ಕಿರುತೆರೆ ನಟಿ ಮೌನಾ ಗುಡ್ಡೆಮನೆ, ಜನಪ್ರಿಯ ಧಾರಾವಾಹಿ `ರಾಮಾಚಾರಿ’ಯಲ್ಲಿ ಚಾರು ಪಾತ್ರದ ಮೂಲಕ ಮನೆಮಾತಾಗಿದ್ದಾರೆ. ಸಾವಿರಕ್ಕೂ ಹೆಚ್ಚು ಸಂಚಿಕೆಗಳಲ್ಲಿ ಪ್ರಸಾರವಾದ ಈ ಧಾರಾವಾಹಿಯಲ್ಲಿ ಸೊಕ್ಕಿನ ಬೆಡಗಿ ಚಾರು ಆಗಿ, ಬಳಿಕ ಪ್ರೇಮಿಯಾಗಿ, ನಂತರ ನಾರಾಯಣಚಾರ್ಯರ ಮನೆಯ ಮುದ್ದಿನ ಸೊಸೆಯಾಗಿ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿದ್ದರು.
ಮೌನಾರ ಅಭಿನಯ ವೀಕ್ಷಕರಲ್ಲಿ ಅಪಾರ ಮೆಚ್ಚುಗೆ ಗಳಿಸಿತು. ನಂತರ ಅವರು `ಕೃಷ್ಣ ರುಕ್ಕು’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. `ಒಲವಿನ ನಿಲ್ದಾಣ` ಧಾರಾವಾಹಿಯ ನಾಯಕ ಅಕ್ಷಯ್ ನಾಯಕ್ ಕೃಷ್ಣ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮೌನಾ ಗುಡ್ಡೆಮನೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿದ್ದು, ಅನೇಕ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಅವರು, 2020ರಲ್ಲಿ `ಮಿಸ್ ಟೀನ್ ತುಳುನಾಡು’ ಸ್ಪರ್ಧೆಯಲ್ಲಿ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದವರು.
ಮೌನಾ ಗುಡ್ಡೆಮನೆ ಸೀರಿಯಲ್ ಜೊತೆಗೆ ಸಿನಿಮಾ ಕೂಡ ಮಾಡಿದ್ದಾರೆ. ಇತ್ತೀಚೆಗೆ ರಿಲೀಸ್ ಆದ `ಕುಲದಲ್ಲಿ ಕೀಳ್ಯಾವುದೋ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಯೋಗರಾಜ್ ಭಟ್ ರವರ ಬ್ಯಾನರ್ ನಲ್ಲಿ ತಯಾರಾದ ಈ ಸಿನಿಮಾದಲ್ಲಿ ಮಡೆನೂರು ಮನು ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ರಾಮ್ ನಾರಾಯಣ್ ಈ ಚಿತ್ರದ ನಿರ್ದೇಶಕರು. ಇದರೊಂದಿಗೆ, ಇತ್ತೀಚೆಗೆ ಹೃದಯಾಘಾತದಿಂದ ಮರಣವನ್ನಪ್ಪಿದ ನಟ ಮತ್ತು ನಿರ್ದೇಶಕ ದಿಲೀಪ್ ರಾಜ್ ನಿರ್ದೇಶಿಸಿದ ಬುಲೆಟ್ ಮೈಕ್ರೋ ಸೀರೀಸ್
`ಲವ್ ಪಂಚ್’ನಲ್ಲಿ ಶರತ್ ಪದ್ಮನಾಭ್ ರ ಜೊತೆಯಾಗಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಆದರೆ, ರಾಮಚಾರಿ ಸೀರಿಯಲ್ ನ ಚಾರುಲತಾ ಆಗಿಯೇ ಎಲ್ಲರ ಮನದಲ್ಲಿ ವಿಶೇಷ ಜಾಗ ಮಾಡಿಕೊಂಡಿದ್ದಾರೆ ಎನ್ನಬಹುದು. ಈ ನಟಿಯೊಂದಿಗೆ `ಗೃಹಶೋಭಾ’ ನಡೆಸಿದ ವಿಶೇಷ ಮಾತುಕಥೆ ನಿಮ್ಮ ಮುಂದಿದೆ……

ಕೃಷ್ಣ ರುಕ್ಕು ಧಾರಾವಾಹಿಯಲ್ಲಿನ ಪಾತ್ರದ ಕುರಿತು ಹೇಳಿ.
ಕೃಷ್ಣ ರುಕ್ಕು ಧಾರಾವಾಹಿಯಲ್ಲಿನ ಪಾತ್ರ ರುಕ್ಕು. ನಾನಿದರಲ್ಲಿ ಆಟೋ ಚಾಲಕಿಯಾಗಿದ್ದೇನೆ. ಅಂದರೆ ಮೊದಲು ನನ್ನ ಅಣ್ಣ ಆಟೋ ಚಾಲಕನಾಗಿದ್ದ. ಅವನು ಸಾವನ್ನಪ್ಪಿದ ಕಾರಣ ಕುಟುಂಬ ನಿರ್ವಹಣೆಗಾಗಿ ನಾನು ಆಟೋ ಚಲಾಯಿಸಿಕೊಂಡು ಬಂದಿದ್ದೇನೆ. ಕೇವಲ ಹೆಣ್ಣುಮಕ್ಕಳಿರುವ ಕುಟುಂಬದಲ್ಲಿ ಗಂಡುಮಗನ ಸ್ಥಾನದಲ್ಲಿ ಇದ್ದುಕೊಂಡು ಕುಟುಂಬ ನಡೆಸುವ ಹುಡುಗಿಯ ಪಾತ್ರ ಇದಾಗಿದೆ. ಈ ಕುಟುಂಬದಲ್ಲಿದ್ದ ಅಕ್ಕ ಮದುವೆಯಾಗಿ ಹೋಗಿದ್ದಾಳೆ. ಈಗ ನಾನು, ಅಮ್ಮ ಹಾಗೂ ಒಬ್ಬ ತಂಗಿ ಮಾತ್ರ ಮನೆಯಲ್ಲಿರುತ್ತೇವೆ. ಇದೊಂದು ರೀತಿಯಲ್ಲಿ ಸ್ಟ್ರಾಂಗ್ ಹಾಗೂ ಬಬ್ಲಿ ಆಗಿರುವ ಯುವತಿಯ ಪಾತ್ರವಾಗಿದೆ.
ಈ ಧಾರಾವಾಹಿಗೆ ಆಯ್ಕೆಯಾಗಿದ್ದು ಹೇಗೆ?
ನಾನು ಈ ಮೊದಲು `ರಾಮಾಚಾರಿ’ ಎನ್ನುವ ಧಾರಾವಾಹಿಯಲ್ಲಿ ನಟಿಸುತ್ತಿದ್ದೆ. ಅದು ಮುಗಿದು ಒಂದು ತಿಂಗಳೂ ಸಹ ಆಗಿರಲಿಲ್ಲ, ಆಗಲೇ ಈ ಧಾರಾವಾಹಿಗಾಗಿ ಕರೆ ಬಂದಿತ್ತು. ಮೊದಲು ನನಗೆ ಈ ಪಾತ್ರ ಸೂಕ್ತವಾಗುತ್ತದೆಯೇ ಎಂದು ಒಮ್ಮೆ ಆಲೋಚಿಸಿದೆ. ಆದರೆ ಅಂತಿಮವಾಗಿ ಒಪ್ಪಿಕೊಂಡೆ. ಈ ಧಾರಾವಾಹಿಯ ನಿರ್ಮಾಪಕರಾಗಿದ್ದ ದಿವಂಗತ ದಿಲೀಪ್ ರಾಜ್, ನನಗೆ ಈ ಪಾತ್ರದ ಕುರಿತಂತೆ ವಿವರಿಸಿದರು. ಇಡೀ ಧಾರಾವಾಹಿ ರುಕ್ಕು ಪಾತ್ರದ ಮೇಲೆ ನಿಂತಿರುತ್ತದೆ. ಮದುವೆಯಾಗಿರುವ ಅಕ್ಕ ಆ ಮನೆಯವರನ್ನು ದ್ವೇಷಿಸುತ್ತಿರುತ್ತಾಳೆ, ಆದರೆ ರುಕ್ಕು ಅದನ್ನು ಹೇಗೆ ಸರಿಪಡಿಸುತ್ತಾಳೆ ಎನ್ನುವುದು ಮುಂದಿನ ಕಥೆ ಎಂದು ನನಗೆ ತಿಳಿಯಿತು. ಹಾಗಾಗಿ ಇದೊಂದು ಗಟ್ಟಿ ಕಥೆಯಾಗಿದೆ ಎಂದು ತಿಳಿದು ಪಾತ್ರ ಮಾಡಲು ಒಪ್ಪಿಕೊಂಡೆ.
ಆಟೋ ಓಡಿಸಲು ಯಾವುದಾದರೂ ತರಬೇತಿ ಪಡೆದಿದ್ದೀರಾ?
ನಿಜ ಹೇಳಬೇಕೆಂದರೆ ನನಗೆ ಆಟೋ ಚಾಲನೆ ಗೊತ್ತಿರಲಿಲ್ಲ. ಅದೊಂದು ಚಾಲೆಂಜ್ ಆಗಿತ್ತು, ಆದರೆ ಈಗ ನಾನು ಆಟೋ ಚಾಲನೆ ಕಲಿತಿದ್ದೇನೆ. ಅದೇನೇ ದೃಶ್ಯವಾಗಿರಲಿ, ಈಗ ನಾನು ಆಟೋ ಚಲಾಯಿಸುತ್ತೇನೆ. ಏಕೆಂದರೆ ಇದಕ್ಕಾಗಿ ನಾನು ಯಾವುದೇ ತರಬೇತಿ ಪಡೆದಿದ್ದಿಲ್ಲ. ಅದೊಂದು ದಿನ ಧಾರಾವಾಹಿಯ ಪ್ರಚಾರದಲ್ಲಿದ್ದ ಸಮಯದಲ್ಲಿ ಆಟೋ ಚಾಲಕರೊಬ್ಬರು ಬಂದಿದ್ದರು. ಅವರು ನನಗೆ ಆಟೋ ಚಾಲನೆ ಹೇಳಿಕೊಟ್ಟರು. ನನಗೆ ಮೊದಲಿನಿಂದ ಎಲ್ಲಾ ವಿಷಯವನ್ನೂ ಬೇಗನೇ ಕಲಿತುಕೊಳ್ಳುವ ಅಭ್ಯಾಸ ಇದೆ. ಹಾಗಾಗಿ ಅವರು ಒಂದು ಬಾರಿ ಹೇಳಿಕೊಟ್ಟಿದ್ದನ್ನೇ ನಾನು ಕಲಿತುಕೊಂಡೆ.
`ರಾಮಾಚಾರಿ‘ ಧಾರಾವಾಹಿಯಲ್ಲಿ ನೀವು ನಿರ್ವಹಿಸಿದ ಪಾತ್ರ ತುಂಬಾ ಪ್ರಸಿದ್ಧವಾಗಿತ್ತು. ನೀವು ಈ ಕ್ಷೇತ್ರಕ್ಕೆ ಹೇಗೆ ಬಂದಿರಿ?
ನಾನು 18 ವರ್ಷದವಳಿದ್ದಾಗ ನಟನಾ ಕ್ಷೇತ್ರಕ್ಕೆ ಬಂದೆ. ಆ ಸಮಯದಲ್ಲಿ ನಾನು ಮಾಡೆಲಿಂಗ್ ಮಾಡುತ್ತಿದ್ದೆ. ಆ ಮಾಡೆಲಿಂಗ್ ಫೋಟೋ ನೋಡಿದವರೊಬ್ಬರು ನನಗೆ ಕರೆ ಮಾಡಿದರು. `ರಾಮಾಚಾರಿ’ ಧಾರಾವಾಹಿಯಲ್ಲಿ ನಟಿಸುತ್ತೀರಾ ಎಂದು ಕೇಳಿದರು. ಆ ಮೊದಲು ನಾನು `ಶಾಂತಂ ಪಾಪಂ’ ಸಂಚಿಕೆಯೊಂದರಲ್ಲಿ ಅಭಿನಯಿಸಿದ್ದೆ. ನನಗೆ ನಟನೆಯಲ್ಲಿ ಆಸಕ್ತಿ ಇರಲಿಲ್ಲ, ನನ್ನ ಸ್ನೇಹಿತನ ಬಲವಂತಕ್ಕೆ ಕಟ್ಟುಬಿದ್ದು ಅಭಿನಯಿಸಲು ಒಪ್ಪಿದೆ. ಆ ಸಂಚಿಕೆಯ ಪ್ರೋವೋ ಹಾಗೂ ಕೆಲವು ಫೋಟೋ ನೋಡಿದವರು `ರಾಮಾಚಾರಿ’ ಧಾರಾವಾಹಿಗಾಗಿ ಸ್ಕ್ರೀನ್ ಟೆಸ್ಟ್ ಗೆ ಕರೆದರು ಮತ್ತು ನನ್ನನ್ನು ಆಯ್ಕೆ ಮಾಡಿದರು. ನನಗೆ ನಟನೆ ಬರುವುದಿಲ್ಲ ಎಂದು ನಾನು ಅವರಿಗೂ ಹೇಳಿದೆ. ಅವರು ನಾವೇ ನಿಮಗೆ ಆ್ಯಕ್ಟಿಂಗ್ ಕ್ಲಾಸ್ ಗೆ ಸೇರಿಸಿ ತರಬೇತಿ ಕೊಡಿಸುವುದಾಗಿ ಹೇಳಿದರು. ನನಗೂ ಅವಕಾಶ ಸಿಕ್ಕಿದೆಯಲ್ಲ ಎಂದು ಒಪ್ಪಿಕೊಂಡು ನಟನೆಯನ್ನು ಪ್ರಾರಂಭಿಸಿದೆ.
ಆದರೆ ಅದು ನನ್ನ ಜೀವನವನ್ನೇ ಬದಲಿಸಿದ ಪಾತ್ರವಾಗಿತ್ತು. ಬಹಳಷ್ಟು ಜನರಿಗೆ ಅಂತಹ ಅವಕಾಶ ಸಿಕ್ಕುವುದಿಲ್ಲ. ಜನರು ಅತ್ಯುತ್ತಮ ರೇಟಿಂಗ್ ನೀಡಿದ್ದರು. ಇದು ನಿಜಕ್ಕೂ ಆಶ್ಚರ್ಯಕರವಾಗಿತ್ತು. ಇತ್ತೀಚಿನ ದಿನಗಳಲ್ಲಿ ಎಲ್ಲರೂ ನನ್ನನ್ನು ಚಾರು ಎಂದು ಕರೆಯುತ್ತಾರೆ. ಚಾರು ನಮಗೆ ಇಷ್ಟ ಎಂದೇ ಈಗಲೂ ಹೇಳುತ್ತಾರೆ. ಹಾಗಾಗಿ ಆ ಪಾತ್ರದಿಂದ ಈಗಿನ ರುಕ್ಕು ಪಾತ್ರಕ್ಕೆ ಡಿಫರೆಂಟ್ ಆಗಿ ಕಾಣಿಸಿಕೊಳ್ಳುವುದು ಸ್ವಲ್ಪ ಕಷ್ಟವಾಗಿತ್ತು. ಚಾರು ಉನ್ನತ ವರ್ಗಕ್ಕೆ ಸೇರಿದ ಯುವತಿ, ಅವಳು ಗಂಡನಿಗಾಗಿ ತುಸು ಬದಲಾದರೂ ಅವಳು ಯಾವತ್ತೂ ಉನ್ನತದ ವರ್ಗದ ಯುವತಿಯೇ ಆಗಿದ್ದಳು. ಆದರೆ ರುಕ್ಕು ತೀರಾ ಮಧ್ಯಮ ವರ್ಗದ ಹುಡುಗಿ, ಹಾಗಾಗಿ ನನಗೆ ಈ ಪಾತ್ರಕ್ಕೆ ಹೊಂದಿಕೊಳ್ಳುವುದಕ್ಕೆ ತುಸು ಕಷ್ಟವಾಗಿತ್ತು. ಜನರು ಇಂದಿಗೂ ನನ್ನನ್ನು ಚಾರು ಎಂದೇ ಗುರುತಿಸುತ್ತಾರೆ. ಇವತ್ತಿಗೂ ಬೇರೆ ಹೊಸ ಧಾರಾವಾಹಿಯಲ್ಲಿ ನಟಿಸುತ್ತಿದ್ದೀರಾ ಎಂದೇ ಕೇಳುತ್ತಾರೆ.

ನಿಮ್ಮ ಬಾಲ್ಯ, ಶಿಕ್ಷಣದ ಬಗ್ಗೆ ತಿಳಿಸಿ?
ನಾನು ಸೈನ್ಯಕ್ಕೆ ಸೇರಬೇಕೆನ್ನುವುದು ನನ್ನ ಗುರಿಯಾಗಿತ್ತು. ನನ್ನ ಅಪ್ಪ, ದೊಡ್ಡಪ್ಪ ಸೇರಿ ಮೂವರು ಸಹ ಸೈನ್ಯದಲ್ಲಿದ್ದರು. ಹಾಗಾಗಿ ನಾನೂ ಸಹ ಏರ್ ಪೋರ್ಸ್ ಸೇರಬೇಕೆಂದುಕೊಂಡಿದ್ದೆ. ಆದರೆ ಅದಕ್ಕೆ ಮನೆಯಲ್ಲಿ ಬೆಂಬಲ ಸಿಕ್ಕಲಿಲ್ಲ. ಅವರಿಗೆ ಸೈನ್ಯದ ಒಳಹೊರಗು ತಿಳಿದಿದ್ದ ಕಾರಣ ಅವರು ನಾನು ಸೈನ್ಯ ಸೇರುವುದಕ್ಕೆ ಒಪ್ಪಿಗೆ ಕೊಡಲಿಲ್ಲ, ಹಾಗಾಗಿ ನಾನು ಜೀವಶಾಸ್ತ್ರ ವಿದ್ಯಾರ್ಥಿಯಾಗಿದ್ದೆ. ನಾನು ಪದವಿ ಪಡೆದಾಗ ನಟನೆಯ ಅವಕಾಶ ದೊರಕಿತು. ಆದರೆ ನಾನು ಶಾಲಾ ದಿನಗಳಲ್ಲಿ ಸಹ ನಾಟಕದಲ್ಲಿ ಅಭಿನಯಿಸಿದವಳಲ್ಲ. ನನಗೆ ಅದರ ಬಗ್ಗೆ ಯಾವುದೇ ಕಲ್ಪನೆ ಇರಲಿಲ್ಲ. ವಾಸ್ತವವಾಗಿ, ನಟನೆ ಕಲಿಸುವುದಕ್ಕೆ ಒಂದು ತರಬೇತಿ ಸಂಸ್ಥೆ ಇರುತ್ತದೆ ಎಂದೂ ಗೊತ್ತಿರಲಿಲ್ಲ.
ನೀವು ಅನಿರೀಕ್ಷಿತವಾಗಿ ನಟನಾ ಕ್ಷೇತ್ರಕ್ಕೆ ಬಂದಾಗ ನಿಮ್ಮ ಕುಟುಂಬದ ಪ್ರತಿಕ್ರಿಯೆ ಹೇಗಿತ್ತು?
ನಾನು ಧಾರಾವಾಹಿಯಲ್ಲಿ ಅಭಿನಯಿಸುತ್ತೇನೆ, ನಾನು ಕೆಲಸ ಮಾಡಲು ಬಯಸುತ್ತೇನೆ ಎಂದು ನನ್ನ ಮನೆಯವರಿಗೆ ಎಂದಿಗೂ ಹೇಳಲಿಲ್ಲ. ನಾನು ಭರತನಾಟ್ಯ ಮಾಡುತ್ತಿದ್ದೆ ಎಂಬುದು ಮಾತ್ರ ಅವರಿಗೆ ಗೊತ್ತಿತ್ತು. ಇದೇ ಭರತನಾಟ್ಯ ನನಗೆ ಅಭಿನಯಕ್ಕೆ ಸಹ ಅನುಕೂಲವಾಗಿದೆ ಎನಿಸುತ್ತದೆ. ಮನೆಯಲ್ಲಿ ನಾನು ಧಾರಾವಾಹಿಯಲ್ಲಿ ಅಭಿನಯಿಸುವುದು ತಿಳಿದಾಗ ಅವರು ಆಶ್ಚರ್ಯಚಕಿತರಾದವರು ಮತ್ತು ತುಂಬಾ ಸಂತೋಷಪಟ್ಟರು. ನಾನು ತೀರಾ ಚಿಕ್ಕವಳಿದ್ದಾಗ ಮಾತ್ರ ಮನೆಯಲ್ಲಿ ನಾನು ಹೀರೋಯಿನ್ ಆಗುತ್ತೇನೆ ಎಂದು ಹೇಳುತ್ತಿದ್ದೆ ಎಂದು ಮನೆಯವರು ಹೇಳುತ್ತಾರೆ. ನಾನು ಎಂದೂ ನಟನೆಯ ಬಗ್ಗೆ ಆಲೋಚಿಸಿದವಳೇ ಅಲ್ಲ, ಆದರೆ ಈಗ ನನ್ನ ಕುಟುಂಬದ ಸದಸ್ಯರು ಹಾಗೂ ಸಂಬಂಧಿಗಳು ನನಗೆ ತೋರುವ ಗೌರವವೇ ಬೇರೆ. ನನ್ನನ್ನು ನೋಡಿದಾಗೆಲ್ಲಾ ನಾನು ಚಿಕ್ಕವಳೇ ಆದರೂ ಹೀರೋಯಿನ್ ಎಂದು ಗುರುತಿಸಿ ಮೆಚ್ಚುಗೆ ಸೂಚಿಸುತ್ತಾರೆ.

ಸಿನಿಮಾ ನಟನೆಯ ಅನುಭವ ಹೇಗಿತ್ತು?
ಸಿನಿಮಾದಲ್ಲಿ ಹಾಡಿನ ಚಿತ್ರೀಕರಣ ವಿಭಿನ್ನವಾಗಿತ್ತು. ಬೇರೆ ಬೇರೆ ನಟರೊಂದಿಗೆ ಕೆಲಸ ಮಾಡುವುದು ಹೊಸ ಅನುಭವಗಳನ್ನು ನೀಡಿದೆ. ಅದೆಲ್ಲಾ ಒಳ್ಳೆಯ ಅನುಭವ. ಸಿನಿಮಾಗಳಲ್ಲಿ ಆಫರ್ ಈಗಲೂ ಬರುತ್ತಿದೆ, ಆದರೆ ನನಗೆ ಈಗ ಯಾವುದೇ ಸಮಯವಿಲ್ಲದ ಕಾರಣ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಇನ್ನೂ ಐದಾರು ತಿಂಗಳು ಯಾವ ಸಿನಿಮಾದಲ್ಲಿಯೂ ನಾನು ಕಾಣಿಸಿಕೊಳ್ಳಲು ಸಾಧ್ಯವಿಲ್ಲ.
ನಿಮ್ಮ ನೆಚ್ಚಿನ ನಾಯಕಿ ಅಥವಾ ರೋಲ್ ಮಾಡೆಲ್ ಯಾರು?
ನಟರ ಬಗ್ಗೆ ಹೇಳುವುದಾದರೆ ನನಗೆ ದರ್ಶನ್ ಬಹಳ ಇಷ್ಟ. ನಾಯಕಿಯರ ಬಗ್ಗೆ ಹೇಳಬೇಕೆಂದರೆ ನಾನು ರಾಧಿಕಾ ಪಂಡಿತ್ ರನ್ನು ಆಯ್ಕೆ ಮಾಡುತ್ತೇನೆ. ಅವರು ತುಂಬಾ ಸಕ್ರಿಯರು ಮತ್ತು ಇತರ ಯಾವುದೇ ಪಾತ್ರದಲ್ಲಿಯೂ ಅದೇ ಎನರ್ಜಿ ತೋರಿಸುತ್ತಾರೆ. ಅವರ ಹೊರತಾಗಿ ನಾನು ಸಾಯಿ ಪಲ್ಲವಿಯವರನ್ನು ಇಷ್ಟಪಡುತ್ತೇನೆ. ಅವರು ಸರಳ ಮತ್ತು ಅದ್ಭುತ ಕಲಾವಿದೆ. ಅವರೇ ನನ್ನ ಸ್ಛೂರ್ತಿ!

ನಿಮ್ಮ ಆಹಾರಾಭ್ಯಾಸ, ಹವ್ಯಾಸದ ಕುರಿತು ಹೇಳಿ.
ನನಗೆ ಮನೆಯಲ್ಲಿ ಮಾಡಿದ ಅಡುಗೆ ಇಷ್ಟ. ಯಾವಾಗಲೂ ಮನೆಯ ಊಟವನ್ನೇ ಇಷ್ಟಪಟ್ಟು ತಿನ್ನುತ್ತೇನೆ. ಬಿಡುವಿದ್ದಾಗ ಸ್ವಿಮ್ಮಿಂಗ್ ಮಾಡ್ತೀನಿ. ಡ್ರೈವಿಂಗ್ ಎಂದರೆ ನನಗೆ ಹೆಚ್ಚು ಇಷ್ಟ. ಆಗಾಗ ನಮ್ಮ ಮನೆಯವರೆಲ್ಲಾ ಸೇರಿ ಲಾಂಗ್ ಡ್ರೈವ್ ಹೋಗುತ್ತೇವೆ. ಡ್ರೈವಿಂಗ್ ಎಂದರೆ ನನಗೆ ಕ್ರೇಜ್, ಆಗಾಗ ಹೊಸ ಹೊಸ ಜಾಗಗಳನ್ನು ಎಕ್ಸ್ ಪ್ಲೋರ್ ಮಾಡುತ್ತಾ ಟ್ರೆಕ್ಕಿಂಗ್ ಹೋಗುತ್ತೇನೆ. ಇತ್ತೀಚೆಗೆ ನನ್ನ ಊರಾದ ಕೊಡಗಿನಲ್ಲೇ ಹೊಸ ಜಾಗಗಳಲ್ಲಿ ಟ್ರೆಕ್ಕಿಂಗ್ ಮಾಡಿದ್ದೇನೆ. ಹೊಸ ಜಾಗಗಳನ್ನು ಹುಡುಕುವುದು ನನಗೆ ಇಷ್ಟ.
ಇತ್ತೀಚೆಗೆ ನಿಧನರಾದ ನಿಮ್ಮ ಧಾರಾವಾಹಿಯ ನಿರ್ಮಾಪಕ ದಿಲೀಪ್ ರಾಜ್ ಬಗ್ಗೆ ಹೇಳಿ.
ನನಗೆ ದಿಲೀಪ್ ರಾಜ್ ಪರಿಚಯವಾಗಿದ್ದೇ ಈ ಧಾರಾವಾಹಿಯ ಮೂಲಕ. ನನಗೆ ನೆನಪಿರುವಂತೆ ಮೊದಲ ದಿನ ಅವರು ಹಾಗೂ ಅವರ ಪತ್ನಿ ವಿದ್ಯಾ ನನಗೆ ಕಥೆ ವಿವರಿಸಿದ ಸಮಯ. ಅವರಿಗೆ ನಾನೇ ಈ ಪಾತ್ರ ಮಾಡಬೇಕು ಎನ್ನುವ ಹಂಬಲ ಬಲವಾಗಿತ್ತು. ಅವರು ಬಹಳ ಸಪೋರ್ಟಿವ್ ಆಗಿದ್ದರು. ಅವರು ಎಂದೂ ನಿರ್ಮಾಪಕರಂತೆ ವರ್ತಿಸುತ್ತಿರಲಿಲ್ಲ, ಬದಲಾಗಿ ಎಲ್ಲರೊಡನೆ ಧಾರಾವಾಹಿಯ ಜೊತೆಗೆ ಮೈಕ್ರೋ ಸೀರೀಸ್ ಸಹ ಮಾಡಿದ್ದು, ಅವರಿಂದ ನಾನು ಸಹ ಸ್ಟ್ರಾಂಗ್ ಆಗಿದ್ದೇನೆ. ಮೈಕ್ರೋ ಸೀರೀಸ್ ನಲ್ಲಿ ನನ್ನ ಪಾತ್ರ ಸ್ವಲ್ಪ ಬೋಲ್ಡ್ ಆಗಿತ್ತು. ಆದರೆ ದಿಲೀಪ್ ರಾಜ್ ಮತ್ತು ಅವರ ಪತ್ನಿ ವಿದ್ಯಾ ಈ ಬಗ್ಗೆ ನನಗೆ ಸಾವಕಾಶವಾಗಿ ವಿವರಿಸಿದ್ದರು. ಅದರಿಂದ ನಾನು ಸಹ ಸ್ವಲ್ಪ ಸ್ಟ್ರಾಂಗ್ ಆಗಿದ್ದೆ. ಅವರು ಯಾವತ್ತೂ ನಾನು ಇನ್ನೂ ಏನಾದರೂ ಮಾಡಬೇಕು ಎನ್ನುವ ಹಂಬಲ ಹೊಂದಿದ್ದರು. ಅದನ್ನು ನೋಡಿ ನಮಗೂ ಬದುಕಿನಲ್ಲಿ ಸ್ಛೂರ್ತಿ ಸಿಗುತ್ತಿತ್ತು.
ಭವಿಷ್ಯದಲ್ಲಿ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುವ ಆಸೆ ಇದೆ?
ನನಗೆ `ಮಹಾನಟಿ’ಯಂತಹ ಚಿತ್ರದ ಪಾತ್ರದಲ್ಲಿ ಅಭಿನಯಿಸಲು ಆಸೆ ಇದೆ, ಅಂತಹ ಗಟ್ಟಿ ಹಿನ್ನೆಲೆಯ ಪಾತ್ರ ನನಗೆ ಸಿಗಲಿ ಎಂದು ನಾನು ನಿರೀಕ್ಷಿಸುತ್ತಿದ್ದೇನೆ.
– ರಾಘವೇಂದ್ರ ಅಡಿಗ ಎಚ್ಚೆನ್





