ಆಟೋ ಚಾಲನೆಯ ಚಾಲೆಂಜಿಂಗ್ ಪಾತ್ರಕ್ಕಾಗಿ ನಾನು ಅದನ್ನು ಕಲಿತೆ! `ರಾಮಾಚಾರಿ, ಕೃಷ್ಣ ರುಕ್ಕು' ಇತ್ಯಾದಿ ಧಾರಾವಾಹಿಗಳ ನಾಯಕಿ ಮೌನಾರ ಜೊತೆ ವಿಶೇಷ ಮಾತುಕಥೆ ಇಲ್ಲಿದೆ.....
ಕನ್ನಡ ಟೆಲಿವಿಷನ್ ಜಗತ್ತಿನಲ್ಲಿ ತಮ್ಮ ನಟನೆಯ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವ ಕಿರುತೆರೆ ನಟಿ ಮೌನಾ ಗುಡ್ಡೆಮನೆ, ಜನಪ್ರಿಯ ಧಾರಾವಾಹಿ `ರಾಮಾಚಾರಿ'ಯಲ್ಲಿ ಚಾರು ಪಾತ್ರದ ಮೂಲಕ ಮನೆಮಾತಾಗಿದ್ದಾರೆ. ಸಾವಿರಕ್ಕೂ ಹೆಚ್ಚು ಸಂಚಿಕೆಗಳಲ್ಲಿ ಪ್ರಸಾರವಾದ ಈ ಧಾರಾವಾಹಿಯಲ್ಲಿ ಸೊಕ್ಕಿನ ಬೆಡಗಿ ಚಾರು ಆಗಿ, ಬಳಿಕ ಪ್ರೇಮಿಯಾಗಿ, ನಂತರ ನಾರಾಯಣಚಾರ್ಯರ ಮನೆಯ ಮುದ್ದಿನ ಸೊಸೆಯಾಗಿ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿದ್ದರು.
ಮೌನಾರ ಅಭಿನಯ ವೀಕ್ಷಕರಲ್ಲಿ ಅಪಾರ ಮೆಚ್ಚುಗೆ ಗಳಿಸಿತು. ನಂತರ ಅವರು `ಕೃಷ್ಣ ರುಕ್ಕು' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. `ಒಲವಿನ ನಿಲ್ದಾಣ` ಧಾರಾವಾಹಿಯ ನಾಯಕ ಅಕ್ಷಯ್ ನಾಯಕ್ ಕೃಷ್ಣ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮೌನಾ ಗುಡ್ಡೆಮನೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿದ್ದು, ಅನೇಕ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಅವರು, 2020ರಲ್ಲಿ `ಮಿಸ್ ಟೀನ್ ತುಳುನಾಡು' ಸ್ಪರ್ಧೆಯಲ್ಲಿ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದವರು.
ಮೌನಾ ಗುಡ್ಡೆಮನೆ ಸೀರಿಯಲ್ ಜೊತೆಗೆ ಸಿನಿಮಾ ಕೂಡ ಮಾಡಿದ್ದಾರೆ. ಇತ್ತೀಚೆಗೆ ರಿಲೀಸ್ ಆದ `ಕುಲದಲ್ಲಿ ಕೀಳ್ಯಾವುದೋ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಯೋಗರಾಜ್ ಭಟ್ ರವರ ಬ್ಯಾನರ್ ನಲ್ಲಿ ತಯಾರಾದ ಈ ಸಿನಿಮಾದಲ್ಲಿ ಮಡೆನೂರು ಮನು ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ರಾಮ್ ನಾರಾಯಣ್ ಈ ಚಿತ್ರದ ನಿರ್ದೇಶಕರು. ಇದರೊಂದಿಗೆ, ಇತ್ತೀಚೆಗೆ ಹೃದಯಾಘಾತದಿಂದ ಮರಣವನ್ನಪ್ಪಿದ ನಟ ಮತ್ತು ನಿರ್ದೇಶಕ ದಿಲೀಪ್ ರಾಜ್ ನಿರ್ದೇಶಿಸಿದ ಬುಲೆಟ್ ಮೈಕ್ರೋ ಸೀರೀಸ್
`ಲವ್ ಪಂಚ್'ನಲ್ಲಿ ಶರತ್ ಪದ್ಮನಾಭ್ ರ ಜೊತೆಯಾಗಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಆದರೆ, ರಾಮಚಾರಿ ಸೀರಿಯಲ್ ನ ಚಾರುಲತಾ ಆಗಿಯೇ ಎಲ್ಲರ ಮನದಲ್ಲಿ ವಿಶೇಷ ಜಾಗ ಮಾಡಿಕೊಂಡಿದ್ದಾರೆ ಎನ್ನಬಹುದು. ಈ ನಟಿಯೊಂದಿಗೆ `ಗೃಹಶೋಭಾ' ನಡೆಸಿದ ವಿಶೇಷ ಮಾತುಕಥೆ ನಿಮ್ಮ ಮುಂದಿದೆ......

ಕೃಷ್ಣ ರುಕ್ಕು ಧಾರಾವಾಹಿಯಲ್ಲಿನ ಪಾತ್ರದ ಕುರಿತು ಹೇಳಿ.
ಕೃಷ್ಣ ರುಕ್ಕು ಧಾರಾವಾಹಿಯಲ್ಲಿನ ಪಾತ್ರ ರುಕ್ಕು. ನಾನಿದರಲ್ಲಿ ಆಟೋ ಚಾಲಕಿಯಾಗಿದ್ದೇನೆ. ಅಂದರೆ ಮೊದಲು ನನ್ನ ಅಣ್ಣ ಆಟೋ ಚಾಲಕನಾಗಿದ್ದ. ಅವನು ಸಾವನ್ನಪ್ಪಿದ ಕಾರಣ ಕುಟುಂಬ ನಿರ್ವಹಣೆಗಾಗಿ ನಾನು ಆಟೋ ಚಲಾಯಿಸಿಕೊಂಡು ಬಂದಿದ್ದೇನೆ. ಕೇವಲ ಹೆಣ್ಣುಮಕ್ಕಳಿರುವ ಕುಟುಂಬದಲ್ಲಿ ಗಂಡುಮಗನ ಸ್ಥಾನದಲ್ಲಿ ಇದ್ದುಕೊಂಡು ಕುಟುಂಬ ನಡೆಸುವ ಹುಡುಗಿಯ ಪಾತ್ರ ಇದಾಗಿದೆ. ಈ ಕುಟುಂಬದಲ್ಲಿದ್ದ ಅಕ್ಕ ಮದುವೆಯಾಗಿ ಹೋಗಿದ್ದಾಳೆ. ಈಗ ನಾನು, ಅಮ್ಮ ಹಾಗೂ ಒಬ್ಬ ತಂಗಿ ಮಾತ್ರ ಮನೆಯಲ್ಲಿರುತ್ತೇವೆ. ಇದೊಂದು ರೀತಿಯಲ್ಲಿ ಸ್ಟ್ರಾಂಗ್ ಹಾಗೂ ಬಬ್ಲಿ ಆಗಿರುವ ಯುವತಿಯ ಪಾತ್ರವಾಗಿದೆ.
ಈ ಧಾರಾವಾಹಿಗೆ ಆಯ್ಕೆಯಾಗಿದ್ದು ಹೇಗೆ?





