ಮಹರ್ಷಿ ವಾಲ್ಮೀಕಿಯವರು ಸಮಾನತೆಗೆ ಆದ್ಯತೆ ನೀಡಿದ ಮಹನೀಯರು. ಅವರ ಆದರ್ಶ ಎಂದಿಗೂ ಪ್ರಸ್ತುತ. ಅದನ್ನು ನಾವೆಲ್ಲರೂ ಪಾಲಿಸುವ ಮೂಲಕ ಅವರನ್ನು ಸ್ಮರಿಸಬೇಕು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಹೇಳಿದರು.
ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಜಗದ್ಗುರುಗಳಾದ ಡಾ. ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮೀಜಿ ಅವರ ಸಾನಿಧ್ಯದಲ್ಲಿ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಮಾಯಣವು ಧರ್ಮಶಾಸ್ತ್ರ ಹಾಗೂ ನೀತಿ ಶಾಸ್ತ್ರವೂ ಆಗಿದೆ. ಇಂಥ ಮಹಾಕಾವ್ಯ ನೀಡಿದ ವಾಲ್ಮೀಕಿಯವರು ಸದಾ ಸ್ಮರಣೀಯರು ಎಂದರು.
ಶ್ರೀ ವಾಲ್ಮೀಕಿಯವರು ಮಾತೃಹೃದಯ ಹೊಂದಿದ ಸಂತ ಶ್ರೇಷ್ಠ ಮಹಾನ್ ಮಾನವತಾವಾದಿ, ದಾರ್ಶನಿಕ, ಮಾದರಿ ನೀತಿ ಶಾಸ್ತ್ರಜ್ಞ, ತತ್ವಜ್ಞಾನಿ, ಮಹಾನ್ ಚಿಂತಕ, ಅರ್ಥಶಾಸ್ತ್ರಜ್ಞ, ಸಮಾಜ ಸುಧಾರಕ, ರಾಜಕೀಯ ಚಿಂತಕರಾಗಿದ್ದಾರೆ. ಧರ್ಮಶಾಸ್ತ್ರದಲ್ಲಿ ಅಪಾರ ಜ್ಞಾನಹೊಂದಿದ್ದ ಮಹಾನ್ ಚೇತನರು ಎಂದು ಸ್ಮರಿಸಿದರು.
ಹೆಣ್ಣು-ಗಂಡು, ಮೇಲು-ಕೀಳು, ಬಡವ-ಬಲ್ಲಿದ ಎಂಬ ಬೇಧಭಾವಗಳಿಲ್ಲದೆ ನಾವೆಲ್ಲಾ ಒಂದೇ ಎನ್ನುವ ಮನೋಭಾವನೆಯಲ್ಲಿ ಬದುಕಬೇಕು. ಸ್ವಾತಂತ್ರ್ಯ ಮತ್ತು ಸಮಾನತೆ ಪ್ರತಿಯೊಬ್ಬರ ಹಕ್ಕು ಎಂಬುದನ್ನು ತಿಳಿಯಬೇಕು. ಆಗ ಶೋಷಣೆ ರಹಿತ ಸಮಾಜ ಕಟ್ಟಲು ಸಾಧ್ಯ ಎಂಬುದನ್ನು ನಿರೂಪಿಸಿದ್ದಾರೆ. ಸಂವಿಧಾನದ ಮೂಲ ಆಶಯವನ್ನು ಅಂದೇ ಶ್ರೀ ಮಹರ್ಷಿ ವಾಲ್ಮೀಕಿ ಅವರು ಸಾಕಾರಗೊಳಿಸಿದ್ದಾರೆ. ಶ್ರೀ ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳನ್ನು ನಾವೆಲ್ಲರೂ ಅನುಸರಿಸಬೇಕು. ಅವರ ಜೀವನ, ಸಾಧನೆ ಮತ್ತು ಆದರ್ಶಗಳ ಕುರಿತು ಯುವಪೀಳಿಗೆಗೆ ಜಾಗೃತಿ ಮೂಡಿಸಲು ಶ್ರಮಿಸೋಣ ಎಂದು ಕರೆ ನೀಡಿದರು.
ಪುಷ್ಪಾರ್ಚನೆ: ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೂ ಮುನ್ನ ಶಾಸಕರ ಭವನದ ಮುಂಭಾಗದ ತಪೋವನದಲ್ಲಿರುವ ವಾಲ್ಮೀಕಿ ಪ್ರತಿಮೆಗೆ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಸಚಿವ ರಘುಮೂರ್ತಿ ಹಾಗೂ ಇತರೆ ಗಣ್ಯರು ಪುಷ್ಪನಮನ ಸಲ್ಲಿಸಿದರು.
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಇಲಾಖೆ ಕಾರ್ಯದರ್ಶಿ ಎಂ. ಕನಗವಲ್ಲಿ, ನಿರ್ದೇಶಕ ಡಾ. ಅಶೋಕ್ ಡಿ.ಆರ್, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶೋಕ ದುಡಗುಂಟಿ ಮತ್ತಿತರರು ಹಾಜರಿದ್ದರು.





