ಚಾಯ್ಸ್ ಯಾ ಕಂಪಲ್ಶನ್ಆಧುನಿಕ ಕಾಲದಲ್ಲಿ ಹಬ್ಬಗಳ ಆಚರಣೆ ಸಲುವಾಗಿ ಇಂದಿನ ಮಾಡಲ್ ಜೆನ್ಪೀಳಿಗೆಗೆ ಸೀರೆ ಉಡುವುದು ಅವಶ್ಯಕವೇ ಅಥವಾ ಅದು ಹಾಬಿ, ಕಂಪಲ್ಶನ್ ಆದೀತೇ….?
ಸೀರೆ! ಭಾರತೀಯ ಹೆಣ್ಣಿನ ಸಂಸ್ಕೃತಿಯ ಹೆಗ್ಗುರುತು. ಆದರೆ ಈ ಆಧುನಿಕ ಕಾಲದಲ್ಲಿ ಹಬ್ಬಗಳ ಆಚರಣೆಗಾಗಿ, ಇಂದಿನ ಮಾಡಲ್ ಜೆನ್ ಪೀಳಿಗೆಗೆ ಇದು ಅನಿವಾರ್ಯವೇ? ಹಾಬಿ ಯಾ ಕಂಪಲ್ಶನ್ ಅಲ್ಲಷ್ಟೇ….? 5-7 ಗಜಗಳ ಸುದೀರ್ಘ (ಇಂದಿನವರ ಲೆಕ್ಕಕ್ಕೆ) ಸೀರೆಯನ್ನು ಮೈತುಂಬಾ ಸುತ್ತಿಕೊಳ್ಳುವುದು…. ಅಬ್ಬಬ್ಬಾ! ಹಿಂಸೆ ಎಂದುಬಿಡುತ್ತಾರೆ. ಇದು ಚಳಿಗಾಲದ ಕಷ್ಟ ನೀಗಿಸುವುದು ಮಾತ್ರವಲ್ಲದೆ, ಭಾರತೀಯ ಸಂಸ್ಕೃತಿ, ಪರಂಪರೆ, ಸಂಪ್ರದಾಯಗಳ ದರ್ಪಣ ಹೌದು. ನಿಧಾನವಾಗಿ ಇದು ನಮ್ಮ ಹೆಣ್ಣುಮಕ್ಕಳ ಫ್ಯಾಷನ್ ವ್ಯಾಖ್ಯಾನದೊಂದಿಗೆ ಬೆರೆತು ಒಂದಾಗಿ ಹೋಯಿತು. ಇಂದಿನ ಆಧುನಿಕರ ನಿಟ್ಟಿನಲ್ಲಿ ಇದು ಅತ್ಯಾವಶ್ಯಕವಾಗಿ ಉಳಿದಿಲ್ಲ. ಈ ಕುರಿತಾಗಿ ಪರ V/S ವಿರೋಧದ ಚರ್ಚೆ ನಿತ್ಯ ನೂತನ! ಕೆಲವರಿಗೆ ಇದು ಅನಿವಾರ್ಯವಾದರೆ, ಹಲವರು ಇದನ್ನು ಇಷ್ಟಪಟ್ಟು ಉಡುತ್ತಾರೆ, ಉಳಿದವರಿಗೆ ……?
ಇತಿಹಾಸ : ಭಾರತದಲ್ಲಿ ಸೀರೆಯ ಇತಿಹಾಸ ಸುಮಾರು 5 ಸಾವಿರ ವರ್ಷಗಳಷ್ಟು ಹಳೆಯದು. ಆಗಮ, ವೇದ, ಉಪನಿಷತ್ತುಗಳ ಅತಿ ಪ್ರಾಚೀನ ಕಾಲದಲ್ಲೇ ಉಲ್ಲೇಖಿತಗೊಂಡು, ರಾಮಾಯಣ ಮಹಾಭಾರತದ ಯುಗಗಳನ್ನೂ ದಾಟಿಕೊಂಡೇ ಬಂದಿದೆ. ಮಧ್ಯಕಾಲೀನ ಭಾರತದಲ್ಲಿ ಇದರ ಚಾಲನೆ ಅತಿ ತೀವ್ರವಾಗಿತ್ತು. ಕ್ರಮೇಣ ಭಾರತೀಯ ಹೆಣ್ಣಿನ ದೈನಂದಿನ ಜೀವನದಲ್ಲಿ ಎಷ್ಟು ಬೆರೆತುಹೋಯಿತೆಂದರೆ, ಈ ಸೀರೆ ನಮ್ಮ ಭಾರತೀಯ ಹೆಣ್ಣುಮಕ್ಕಳ ಅವಿಭಾಜ್ಯ ಅಂಗವೇ ಆಗಿಹೋಯಿತು!
ಸೀರೆಗಳ ಕುರಿತಾದ ಸವಾಲು : ಇಂದಿನ ಆಧುನಿಕ ಕಾಲದಲ್ಲಿ ಗೃಹಿಣಿಯೇ ಇರಲಿ, ಹೊರಗಿನ ಕೆಲಸಕ್ಕೆ ಧಾವಿಸುವ ಉದ್ಯೋಗಸ್ಥ ವನಿತೆ ಇರಲಿ, ನಮ್ಮ ಭಾರತೀಯ ಹೆಣ್ಣುಮಕ್ಕಳ ಮಾಮೂಲಿ ಲೈಪ್ ಸ್ಟೈಲಿಗೆ ಸೀರೆ ಒಂದು ಆರಾಮದಾಯಕ ಪೋಷಾಕು ಎನ್ನಬಹುದು, ಇದು ನಿರ್ವಿವಾದ ಕೂಡ. ಆದರೆ ಮಾರ್ಕೆಟಿಂಗ್ ಹೆಸರಿನಲ್ಲಿ ಸದಾ ಹೊರಗೆ ಗಾಡಿ ಮೇಲೆ ಸುತ್ತಾಡಬೇಕಾದ ಹೆಂಗಸರಿಗೂ ಇದು ಆರಾಮದಾಯಕವೇ? ಇಂದಿನ ಪಾರ್ಟಿ, ಇವೆಂಟ್, ಮಾಡಲ್ ಲೈಫ್ ಸ್ಟೈಲ್ ಗೆ ಇದು ಹೊಂದುತ್ತದೆಯೇ….? ಹೀಗೆಯೇ ಇದನ್ನು ನಿರಾಕರಿಸುವವರ ಚರ್ಚೆಗೇನೂ ಕಡಿಮೆ ಇಲ್ಲ.
ಉದ್ಯೋಗಸ್ಥ ವನಿತೆ ಹಾಗೂ ಸೀರೆ : ಕಾಲ ಸರಿದಂತೆ ಫ್ಯಾಷನ್ ಲೋಕಕ್ಕೆ ಲಗ್ಗೆಯಿಟ್ಟ ಇತರ ಆಧುನಿಕ ಉಡುಗೆಗಳು, ಉ. ಭಾರತದ ಉಡುಗೆಗಳು ದಕ್ಷಿಣದಲ್ಲೂ ಅತಿ ಪ್ರಭಾವಶಾಲಿ ಎನಿಸಲು, ಸೀರೆಗಿದ್ದ ಜನಪ್ರಿಯತೆ ಮಂಕಾಗತೊಡಗಿತು. ದಿನೇದಿನೇ ಹೆಚ್ಚುತ್ತಿರುವ ಭಾರತೀಯರ ಜನಸಂಖ್ಯೆ, ಯುವ ಪೀಳಿಗೆಗೆ ನಡುವೆ ಅದರಲ್ಲೂ ಜೆನ್ತರುಣಿಯರು ಇದನ್ನು ಹಿಂದೆ ಸರಿಸುತ್ತಿದ್ದಾರೆ. ಇತರ ಉಡುಗೆಗಳ ಆಕರ್ಷಣೆ ಅಷ್ಟೇ ಹೆಚ್ಚುತ್ತಿದೆ.
ಆಧುನಿಕರು ಎಲ್ಲಾ ವಿಭಿನ್ನ ಕ್ಷೇತ್ರಗಳಲ್ಲೂ ಪಾದಾರ್ಪಣೆ ಮಾಡುತ್ತಾ ತಮ್ಮ ಹೊಸ ಐಡೆಂಟಿಟಿ ಸ್ಥಾಪಿಸಿಕೊಳ್ಳುತ್ತಿದ್ದಾರೆ. ಇದು ಅವರ ಯಶಸ್ಸಿನ ದ್ಯೋತಕ ಹೌದು. ಗಂಟೆಗಟ್ಟಲೇ ಮೀಟಿಂಗ್, ಹೊರಗಿನ ಸುತ್ತಾಟದ ಕಾರ್ಯಕ್ರಮ, ಬೆಳಗ್ಗಿನಿಂದ ಸಂಜೆಯವರೆಗಿನ ಮಾರ್ಕೆಟಿಂಗ್ ಕೆಲಸ, ಡೋರ್ ಟು ಡೋರ್ ಸೇಲ್ಸ್, ಮೆಟ್ರೋ ಬಸ್ಸುಗಳ ನೂಕುನುಗ್ಗಲಲ್ಲಿ ಪ್ರಯಾಣ, ಓಡೋಡುತ್ತಾ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ, ಕನ್ ಸ್ಟ್ರಕ್ಷನ್ ಸೈಟ್ ಗಳಲ್ಲಿ ಸೂಪರ್ ವಿಶನ್, ಡಾಮರು ರಸ್ತೆ ಕೆಲಸದಿಂದ ಕಷ್ಟಕರ ಕೂಲಿಕೆಲಸ…. ಇತ್ಯಾದಿ ಏನೇ ಇರಲಿ, ಇಂದಿನ ಉದ್ಯೋಗಸ್ಥ ವನಿತೆಗೆ 108 ಸಮಸ್ಯೆ ತಪ್ಪಿದ್ದಲ್ಲ. ಇಂಥವರಿಗೆ ಸೀರೆ ಉಟ್ಟು ಸಲೀಸಾಗಿ ಈ ಎಲ್ಲಾ ಕೆಲಸ ನಿಭಾಯಿಸುವುದು ಒಂದು ಸವಾಲೇ ಸರಿ.
ಇಂದಿನ ಆಧುನಿಕ ಯುವತಿಯರು ಸೀರೆ ತಮಗೆ ಬಲು ಸಲೀಸು ಎಂದು ಒಪ್ಪುವುದಿಲ್ಲ, ಇದು ಅವರ ತಪ್ಪೂ ಅಲ್ಲ! ಓಡೋಡುತ್ತಾ ಕೆಲಸ ಮಾಡಬೇಕಾದಾಗ ಕಾಲಿಗೆ ಸೀರೆ ತೊಡರುತ್ತದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಟೂವೀಲರ್ ಓಡಿಸುವ ಎಷ್ಟೋ ಹೆಂಗಸರ ಸೀರೆಯ ಸೆರಗು ಚಕ್ರಕ್ಕೆ ಸಿಲುಕಿ ಅನೇಕ ಅವಾಂತರಗಳಾಗಿವೆ, ಅಪಘಾತಗಳೂ ತಪ್ಪಿಲ್ಲ. ಬೆಂಗಳೂರು, ಮುಂಬೈ, ಚೆನ್ನೈ, ದೆಹಲಿಯಂಥ ಮಹಾನಗರಗಳ ರೈಲು, ಮೆಟ್ರೊ, ಬಸ್ಸುಗಳ ತೂರಾಟದಲ್ಲಿ ತಮ್ಮ ಸೆರಗನ್ನು ಎಳೆಯುವ ಪುಂಡುಪೋಕರಿಗಳಿಂದ ಸದಾ ಎಚ್ಚರವಹಿಸುತ್ತಾ, ಸಕಾಲಕ್ಕೆ ಆಫೀಸ್ ತಲುಪುದು ಸುಲಭದ ಮಾತಲ್ಲ.
ಈಗ ದೊಡ್ಡ ಪ್ರಶ್ನೆ ಎಂದರೆ, ಯುವತಿಯರ ಈ ದೈನಂದಿನ ಕಷ್ಟಕರ ಅಲೆದಾಟದಲ್ಲಿ ಸೀರೆ ಅವರ ಅಚ್ಚುಮೆಚ್ಚಿನ ಚಾಯ್ಸ್ ಆಗಿ ಉಳಿದಿದೆಯೇ? ಅವರುಗಳಿಗೆ ಇದು ಕಂಫರ್ಟೆಬಲ್ ಆಗಿದೆಯೇ ಅಥವಾ ಕೇವಲ ಕಂಪಲ್ಶನ್ನೇ?
ಸೀರೆ ನಿಜಕ್ಕೂ ಕಂಫರ್ಟೆಬಲ್ಲೇ? : `ಅಯ್ಯೋ… ಹೊಟ್ಟೆ ಕಾಣ್ತಿದೆ, ಹೊಕ್ಕುಳ ಕೆಳಗೆ ಜಾರಿದೆ,’ `ಅಯ್ಯೋ…. ಈ ನೂಕು ನುಗ್ಗಲಿನಲ್ಲಿ ನನ್ನ ಸೀರೆಯ ಮಡಿಕೆಗಳು ಬಿಟ್ಟಿಕೊಂಡಿವೆ,’ `ಛೇ….ಛೇ! ಇದನ್ನು ಸಂಭಾಳಿಸಿಕೊಂಡು ಹೋಗುವಷ್ಟರಲ್ಲಿ ನನ್ನ ಬಸ್ ಮಿಸ್ ಆಯ್ತು…. ಇನ್ಯಾವಾಗ ಆಫೀಸ್ ಸೇರೋದು….?’ `ಈ ಸೀರೆಯಿಂದ ಬೇಗ ಬೇಗ ಓಡಲು ಆಗ್ತಾ ಇಲ್ಲ….’ `ಅಯ್ಯೋ! ನನ್ನ ಸೀರೆಯ ಸೆರಗು ಸಿಕ್ಕಿಹಾಕಿಕೊಂಡಿತು!’ ಇಂಥ ಹಲವಾರು ಉದ್ಗಾರಗಳು ಕೆಲಸಕ್ಕೆ ಧಾವಿಸುವ ಹೆಣ್ಣುಮಕ್ಕಳ ಮಾಮೂಲು ಟೆನ್ಶನ್ಸ್ ಆಗಿರುತ್ತವೆ. ಸೀರೆ ಉಟ್ಟು ಉದ್ಯೋಗಕ್ಕೆ ಧಾವಿಸುತ್ತಿರುವ ಈ ಹೆಂಗಸರ ಮಾತುಗಳನ್ನು ಅಲ್ಲಗಳೆಯಲಾಗದು. ಹಾಗಿರುವಾಗ ಹೆಂಗಸರಿಗೆ ಸೀರೆ ನಿಜಕ್ಕೂ ಕಂಫರ್ಟೆಬಲ್ಲೇ?
ಮತ್ತೆ ಮತ್ತೆ ಸೀರೆ ಉಡುವುದರಲ್ಲಿ ನಿಪುಣರಾದರೆ ಹೆಂಗಸರಿಗೆ ಇದೇನೂ ಕಷ್ಟಲ್ಲ ಎಂಬುದು ಒಂದು ವಾದ. ಆದರೆ ಎಷ್ಟೇ ನಿಪುಣರಾದರೂ ಒಮ್ಮೊಮ್ಮೆ ಕೆಲಸ ಎಡವಟ್ಟಾಗುತ್ತದೆ ಎಂಬ ವಾದನ್ನೂ ತಳ್ಳಿಹಾಕುವಂತಿಲ್ಲ.
ಸೀರೆ ಒಂದು ಅನಿವಾರ್ಯ ಡ್ರೆಸ್ : ಇಂದಿನ ಹೆಂಗಸರು ಕಳೆದ ಕೆಲವು ವರ್ಷಗಳಿಂದ ಸೋಶಿಯಲ್ ಟ್ಯಾಬೂ ಮುರಿದುಹಾಕುತ್ತಾ, ತಮ್ಮ ಕೆರಿಯರ್ ನಲ್ಲಿ ಯಶಸ್ಸಿನ ಎಷ್ಟೋ ಶಿಖರಗಳನ್ನು ತಲುಪಿದ್ದಾರೆ. ಆದರೂ ಇಂಥ ಎಷ್ಟೋ ಯುವತಿಯರಿಗೆ ಸ್ವತಂತ್ರರಾಗಿ ತಮ್ಮ ಮನದ ಆಸೆಯಂತೆ ತಮಗೆ ಬೇಕಾದ್ದನ್ನು ಧರಿಸುವ ಹಕ್ಕಿಲ್ಲ! ಅವರು ಏನನ್ನು ಧರಿಸಬೇಕು, ಎಂಥ ನೌಕರಿ ಮಾಡಬೇಕು, ಹೇಗೆ ಮೇಕಪ್ ಮಾಡಿಕೊಳ್ಳಬೇಕು…. ಇತ್ಯಾದಿಗಳನ್ನೆಲ್ಲ ಬೇರೆ ಇನ್ನಾರೋ ನಿರ್ಧರಿಸುವಂತಾಗಿದೆ. ಈ ಆಧುನಿಕ ಕಾಲದಲ್ಲಿ ಇದು ತುಸು ಉತ್ಪ್ರೇಕ್ಷೆ ಎನಿಸಿದರೂ, ಇಂದಿಗೂ ಇದು ನಿಜ, ಪ್ರಸ್ತುತ.
21ನೇ ಶತಮಾನದ ಇಂದಿನ ಮಾದರಿ ಹೆಣ್ಣು ನಮ್ಮ ದೇಶದಲ್ಲಿ ಈಗಲೂ ಸಹ ಹಲವಾರು ಬಲವಂತದ ಕಟ್ಟುಪಾಡುಗಳಿಗೆ ಒಳಗಾಗಿರುತ್ತಾಳೆ. ಸೀರೆ ಉಡುವುದಷ್ಟೇ ಅವಳ ಪ್ರತಿಷ್ಠೆಯ ಪ್ರತೀಕ ಎಂದು ಭಾವಿಸಲಾಗುತ್ತದೆ. ಇಂಥ ಸಂದಿಗ್ಧಕ್ಕೆ ಒಳಗಾದ ಎಷ್ಟೋ ಉದ್ಯೋಗಸ್ಥ ವನಿತೆಯರು, ತಮ್ಮ ಇಷ್ಟಾನಿಷ್ಟಗಳನ್ನು ಕಾಂಪ್ರಮೈಸ್ ಮಾಡಿಕೊಳ್ಳುತ್ತಾ, ಸೀರೆಯನ್ನು ಒಂದು ಅನಿವಾರ್ಯ ಡ್ರೆಸ್ ಎಂದಷ್ಟೇ ಒಪ್ಪುತ್ತಾರೆ.
ಕೆಲವು ಖಾಸಗಿ ಹಾಗೂ ವಿಶೇಷವಾಗಿ ಬಹುತೇಕ ಸರ್ಕಾರಿ ಕಛೇರಿ, ಶಾಲಾ ಕಾಲೇಜುಗಳಲ್ಲಿನ ಶಿಕ್ಷಕಿಯರಿಗೆ ಸೀರೆ ಒಂದೇ ಅಫಿಶಿಯಲ್ ಡ್ರೆಸ್ ಕೋಡ್ ಆಗಿರುತ್ತದೆ. ಹೀಗಾದಾಗ, ಎಷ್ಟೇ ಸಮಸ್ಯೆಗಳಿರಲಿ, ಈ ಹೆಂಗಸರು ಅನಿವಾರ್ಯವಾಗಿ ಸೀರೆಯುಟ್ಟು ತಂತಮ್ಮ ಡ್ಯೂಟಿಗೆ ಹಾಜರಾಗಬೇಕಾಗುತ್ತದೆ.
ಅವರವರ ಇಷ್ಟದ ಚಾಯ್ಸ್ ಆಗಿ ಸೀರೆ : ಫ್ಯಾಷನ್ ಟ್ರೆಂಡ್ ಗೆ ತಕ್ಕಂತೆ ಸಾಮಾನ್ಯವಾಗಿ ಸೀರೆ ಹೆಂಗಸರ ಅಚ್ಚುಮೆಚ್ಚಿನ ಡ್ರೆಸ್. ಸೀರೆ ಉಡುವುದು, ಬಿಡುವುದು ಅವರವರ ವೈಯಕ್ತಿಕ ಆಯ್ಕೆ ಎಂಬುದೇ ಸರಿ. ಕೆಲವು ಹೆಂಗಸರು ಇದನ್ನು ಸಂಪ್ರದಾಯ, ಪರಂಪರೆ, ಫ್ಯಾಷನ್ನಿನ ಫ್ಯೂಷನ್ ರೂಪದಲ್ಲಿ ಉಡಲು ಬಯಸುತ್ತಾರೆ. ಎಷ್ಟೋ ಜನ ಸಮಾಜದ ಒತ್ತಡಕ್ಕೆ ಮಣಿದು ಅನಿವಾರ್ಯವಾಗಿ ಉಡುತ್ತಾರೆ.
ಪ್ರತಿಯೊಬ್ಬ ವ್ಯಕ್ತಿಗೂ ತಮ್ಮದೇ ಆದ ವೈಯಕ್ತಿಕ ಇಷ್ಟಾನಿಷ್ಟಗಳಿರುತ್ತವೆ. ಹಾಗೆಯೇ ಹೆಂಗಸರಿಗೂ ಯಾವ ಸಂದರ್ಭಕ್ಕೇ ಆಗಲಿ, ಸೀರೆ ಉಡುವುದೋ ಬಿಡುವುದೋ ಅವರವರ ಆಯ್ಕೆಗೆ ಬಿಟ್ಟದ್ದು. ತಮ್ಮ ದೈನಂದಿನ ಕಷ್ಟಕಾರ್ಪಣ್ಯಗಳ ನಡುವೆ ಯಾ ಡ್ರೆಸ್ ಬಯಸುತ್ತಾರೋ ಅದನ್ನೇ ಧರಿಸಲಿ, ಸೀರೆ ಬೇಕೆನಿಸಿದರೆ ಅದನ್ನೇ ಉಟ್ಟುಕೊಳ್ಳಲಿ. ಅವರ ಈ ಪರ್ಸನಲ್ ಡಿಸಿಶನ್ ಗೆ ಬೇರೆಯವರು ಖಂಡಿತಾ ಆಕ್ಷೇಪಣೆ ಮಾಡುವುದು ಸಲ್ಲದು. ಯಾವ ಹೆಣ್ಣಿಗೇ ಆಗಲಿ, ಯಾವ ಸಮಯ ಸಂದರ್ಭವೇ ಇರಲಿ, ಸೀರೆ ಉಡುವುದು ತನ್ನ ಹಕ್ಕು, ತಾನು ಅದರಲ್ಲಿ ಕಂಫರ್ಟೆಬಲ್, ಅದೇ ತನಗೆ ಸ್ಟೈಲಿಶ್ ಎಂದು ಯಾವ ಹೆಣ್ಣು ಭಾವಿಸುತ್ತಾಳೋ, ಅಂಥವಳು ಸೀರೆ ಉಡಲಿ. ಅದು ಬಿಟ್ಟು ಬಲವಂತದ ಮಾಘ ಸ್ನಾನ ಬೇಡ.
– ಸುನೇತ್ರಾ ಭಟ್
ಯೂನಿಸೆಕ್ಸ್ ಡ್ರೆಸ್ ಎಲ್ಲಕ್ಕಿಂತ ಬೆಸ್ಟ್!
ಫೇಮಸ್ ಸೆಲೆಬ್ಸ್ ರಿಂದ ಹಿಡಿದು ಯಶಸ್ವೀ ಮಹಿಳಾ ಉದ್ಯಮಿಗಳವರೆಗೂ, ಇಂದು ಪ್ರತಿಯೊಬ್ಬ ಹೆಣ್ಣೂ ಟ್ರೌಸರ್ ಶರ್ಟ್, ಬ್ಲೇಝರ್ ಪ್ಯಾಂಟ್ ಇತ್ಯಾದಿ ಮಾಡ್ ಡ್ರೆಸೆಸ್ ಧರಿಸುತ್ತಾರೆ. ಈ ಆಧುನಿಕ ಉಡುಗೆಗಳು ಅವರಿಗೆ ಬಲು ಕಂಫರ್ಟೆಬಲ್ ಎನಿಸುತ್ತಿ, ಅಷ್ಟೇ ಸ್ಟೈಲಿಶ್ಗ್ಲಾಮರಸ್ ಸಹ! ಸೀರೆ ಉಟ್ಟುಕೊಳ್ಳುವುದು, ಅದನ್ನು ಶಿಸ್ತುಬದ್ಧಾಗಿ ಮಡಿಕೆಗೆಳ ಸಹಿತ ಪಿನ್ ಅಪ್ ಮಾಡಿ ನೀಟಾಗಿ ಸಿದ್ಧಗೊಳ್ಳುವುದಕ್ಕೆ ಖಂಡಿತಾ ಕಾಲಾವಕಾಶ ಬೇಕು. ಅದೇ ಸಂದರ್ಭದಲ್ಲಿ ಯಾವುದೋ ಒಂದು ಮಾಡ್ ಡ್ರೆಸ್ ಧರಿಸಿ ಸಿದ್ಧರಾಗುವುದು ಕೆಲವೋ ನಿಮಿಷಗಳ ಕೆಲಸ. ಇಂಥ ಮಾಡ್ ಡ್ರೆಸ್ ಧರಿಸಿದವರಿಗೆ, ಅದನ್ನು ಘಳಿಗೆ ಘಳಿಗೆಗೂ ಸಂಭಾಳಿಸಿಕೊಳ್ಳುತ್ತಾ ಇರಬೇಕು ಎಂಬ ಟೆನ್ಶನ್ಸ್ ಇರುವುದಿಲ್ಲ. ಹಾಗಾಗಿ ಅಂಥವರು ತಮ್ಮ ಕೆಲಸಗಳತ್ತ ಹೆಚ್ಚು ಪೇಕಸ್ಡ್ ಆಗಿರುತ್ತಾರೆ. ಸೀರೆ ಉಡುವುದೇನೂ ಕಷ್ಟಕರವಲ್ಲ, ಅದನ್ನು ಸಂಭಾಳಿಸುವುದು ಬ್ರಹ್ಮಾಂಡದ ಕೆಲಸವಲ್ಲ ಎಂದು ನಿಜವಾಗಿ ನಂಬುವರು, ಹಾಯಾಗಿ ಸೀರೆಯುಟ್ಟು ತಮ್ಮ ಕೆಲಸದಲ್ಲಿ ತಲ್ಲೀನರಾಗಲಿ, ಆಯ್ಕೆ ಅವರವರದು!





