ಮಕ್ಕಳಿಗೆ ಬೇಸಿಗೆಯ ರಜಾ ದಿನಗಳು ಮರಳಿ ಬಂದಿವೆ. ಅವರು ಬಯಸುವಂಥ ಈ ಬಗೆಬಗೆಯ ಬಾಯಿ ಚಪ್ಪರಿಸುವ ರುಚಿಕರ ಸ್ವೀಟ್ಸ್ ಹಾಗೂ ತಿನಿಸುಗಳನ್ನು ನೀವು ಏಕೆ ಟ್ರೈ ಮಾಡಿ ನೋಡಬಾರದು……?

ಪನೀರ್‌ ಕೊಲ್ಹಾಪುರಿ

ಮಸಾಲೆ ಪೇಸ್ಟ್ ಗಾಗಿ ಸಾಮಗ್ರಿ : ಒಂದಿಷ್ಟು ಜೀರಿಗೆ, ಧನಿಯಾ ಬೀಜ, ಏಲಕ್ಕಿ, ಲವಂಗ, ಚಕ್ಕೆ, ಮೊಗ್ಗು, ಸ್ಟಾರ್‌ ಅನೀಸ್‌, ಗಸಗಸೆ, ಕೊಬ್ಬರಿ ತುರಿ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಬೇರೆಯಾಗಿ ಬಾಡಿಸಿದ ಈರುಳ್ಳಿ, ಉಪ್ಪು, ಖಾರ, ಟೊಮೇಟೊ ಪೇಸ್ಟ್, ಅರ್ಧ ಸೌಟು ಎಣ್ಣೆ.

ಮೂಲ ಸಾಮಗ್ರಿ : 1 ಕಿಲೋ ಪನೀರ್‌ ಕ್ಯೂಬ್ಸ್, ಅರ್ಧ ಸೌಟು ಎಣ್ಣೆ, 1-2 ಪಲಾವ್ ಎಲೆ, 2-3 ಈರುಳ್ಳಿ, ಟೊಮೇಟೊ ಪೇಸ್ಟ್, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು (ದಂಟಿನ ಸಮೇತ), ರುಚಿಗೆ ಉಪ್ಪು, ಖಾರ, ಬೆಲ್ಲ, ಕರಿದ ಪನೀರ್‌ ಪೀಸ್‌, 2-3 ದೊಡ್ಡ ಕ್ಯಾಪ್ಸಿಕಂ. ಈರುಳ್ಳಿ ಫ್ರೈಗಾಗಿ ವಿಧಾನ : ಗ್ಯಾಸ್‌ ಸ್ಟವ್ ಹಚ್ಚಿ, ಅದರ ಮೇಲೆ ಚಿಕ್ಕ ಪಾಡ್‌ ಇರಿಸಿ. ಇದರ ಮೇಲೆ ಇಡಿಯಾದ ಈರುಳ್ಳಿ ಇರಿಸಿ, ಉರಿ ಮೇಲೆ ಇಕ್ಕಳದಿಂದ ತಿರುಗಿಸುತ್ತಾ ಈರುಳ್ಳಿ ತುಸು ಕಪ್ಪಾಗುವವರೆಗೂ ಫ್ರೈ ಮಾಡಿ. ನಂತರ ಅದರ ಸಿಪ್ಪೆ ಸುಲಿದು, ಒಳಗಿನ 1 ಪದರ ಸಹ ತೆಗೆಯಿರಿ. ಇದನ್ನು ಮಸಾಲೆ ಪೇಸ್ಟ್ ಗಾಗಿ ಬೇರೆ ಇರಿಸಿ.

ಮಸಾಲೆ ಪೇಸ್ಟ್ ಗಾಗಿ ವಿಧಾನ : ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ, ಹಿಂದೆ ಹೇಳಿದ ಎಲ್ಲಾ ಸಾಮಗ್ರಿ ಒಂದೊಂದಾಗಿ ಹಾಕಿ ಹುರಿಯಿರಿ. ಮೆಣಸು, ಬೆಳ್ಳುಳ್ಳಿ ಸುವಾಸನೆ ಬಿಟ್ಟುಕೊಳ್ಳುವಂತೆ ಫ್ರೈ ಮಾಡಿ. ನಂತರ ಇದಕ್ಕೆ ಫ್ರೈ ಮಾಡಿದ ಈರುಳ್ಳಿ ಸೇರಿಸಿ. ಕೆಳಗಿಳಿಸಿ ಆರಿದ ಮೇಲೆ ಇನ್ನೆಲ್ಲ ಒಟ್ಟಾಗಿ ಪೇಸ್ಟ್ ಮಾಡಿ, ಇದನ್ನು ಒಂದು ಕಡೆ ಇರಿಸಿ.

ಪನೀರ್‌ ಕರಿಯಲು ವಿಧಾನ : ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ. ಇದಕ್ಕೆ ಪನೀರ್‌ ತುಂಡು ಸೇರಿಸಿ, ಹೊಂಬಣ್ಣ ಬರುವಂತೆ ಫ್ರೈ ಮಾಡಿ. ಇದನ್ನು ಹೊರತೆಗೆದು, ಟಿಶ್ಯು ಪೇಪರ್‌ ಮೇಲೆ ಹರಡಿ, ಹೆಚ್ಚುವರಿ ಎಣ್ಣೆ ತೊಲಗಿಸಿ.

ಕೊಲ್ಹಾಪುರಿ ಪನೀರ್‌ ಗ್ರೇವಿಯ ವಿಧಾನ : ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ. ಇದಕ್ಕೆ ಪಲಾವ್ ಎಲೆ, ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ನಂತರ ಇದಕ್ಕೆ ರೆಡಿ ಮಾಡಿದ ಮಸಾಲೆ ಪೇಸ್ಟ್ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ನಂತರ ಟೊಮೇಟೊ ಪೇಸ್ಟ್, ದಂಟಿನ ಸಮೇತ ಕೊ.ಸೊಪ್ಪು ಹಾಕಿ 7-8 ನಿಮಿಷ ಕೆದಕಿರಿ. ನಂತರ ಇದಕ್ಕೆ ಉಪ್ಪು, ಖಾರ, ಬೆಲ್ಲ ಹಾಕಿ 1 ಕಪ್‌ ನೀರು ಬೆರೆಸಿ ಕುದಿಸಿರಿ. ನಂತರ ಪನೀರ್‌, ಹೆಚ್ಚಿದ ಈರುಳ್ಳಿ ಹಾಕಿ ಮತ್ತಷ್ಟು ಹೊತ್ತು ಮಂದ ಉರಿಯಲ್ಲಿ ಕೈಯಾಡಿಸಿ. ಕೊನೆಯಲ್ಲಿ ಹೆಚ್ಚಿದ ಕ್ಯಾಪ್ಸಿಕಂ ಹಾಕಿ ಬಾಡಿಸಿ. ಇದನ್ನು ಕೆಳಗಿಳಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ, ರೊಟ್ಟಿ ಜೊತೆ ಸವಿಯಿರಿ.

IMG_20210930_140836-(2)

ಬೇಸನ್‌ ಬರ್ಫಿ

ಸಾಮಗ್ರಿ : 2 ಕಪ್‌ ಕಡಲೆಹಿಟ್ಟು, ಅರ್ಧ ಕಪ್‌ ಖೋವಾ, 1 ಕಪ್‌ ಸಕ್ಕರೆ, 1 ಕಪ್‌ ತುಪ್ಪ, 2 ಚಮಚ ಹಾಲು, 20 ಗೋಡಂಬಿ, 10 ಪಿಸ್ತಾ, 1 ಚಿಕ್ಕ ಚಮಚ ಏಲಕ್ಕಿ ಪುಡಿ.

ವಿಧಾನ : ಕಡಲೆಹಿಟ್ಟನ್ನು ಒಂದು ತಟ್ಟೆಯಲ್ಲಿ ಹಾಕಿ ಅದಕ್ಕೆ ಖೋವಾ, ಹಾಲು ಮತ್ತು ಎರಡು ಚಮಚ ತುಪ್ಪ ಬೆರೆಸಿ ಕೈಯಲ್ಲಿ ಚೆನ್ನಾಗಿ ನಾದಿಕೊಳ್ಳಿ. ಬಾಣಲೆಯಲ್ಲಿ ತುಪ್ಪ ಹಾಕಿ ಬಿಸಿ ಮಾಡಿ. ಇದಕ್ಕೆ ರೆಡಿ ಮಾಡಿದ ಕಡಲೆಹಿಟ್ಟನ್ನು ಹಾಕಿ ಹುರಿಯಿರಿ. ತಳ ಹಿಡಿಯದಂತೆ ಎಡೆಬಿಡದೆ ಕೈ ಆಡಿಸುತ್ತಿರಿ. ಘಮ್ ಎಂದು ಪರಿಮಳ/ ತಿಳಿ ಕಂದುಬಣ್ಣ ಅಥವಾ ಮಿಶ್ರಣದಿಂದ ತುಪ್ಪ ಬಿಡುವಾಗ ಒಲೆಯಿಂದ ಕೆಳಗಿಳಿಸಿ. ಸಕ್ಕರೆಗೆ ಅರ್ಧ ಕಪ್‌ ನೀರು ಹಾಕಿ ಕಾಯಿಸಿ. ಸಕ್ಕರೆ ಕರಗಿದ ಬಳಿಕ ಎರಡು ನಿಮಿಷಗಳ ಕಾಲ ಕುದಿಸಿ. ಎರಡು ಎಳೆ ನೂಲಿನ ಪಾಕ ಬಂದಾಗ, ಕಡಲೆಹಿಟ್ಟಿನ ಮಿಶ್ರಣಕ್ಕೆ ಬೆರೆಸಿ. ಮತ್ತೆ ಎರಡು ನಿಮಿಷ ಬಿಸಿ ಮಾಡಿ. ಮೇಲೆ ಗೋಡಂಬಿ, ಪಿಸ್ತಾ ಚೂರು, ಏಲಕ್ಕಿ ಪುಡಿ ಹಾಕಿ. ಒಂದು ತಟ್ಟೆಗೆ ತುಪ್ಪ ಸವರಿ ತಯಾರಾದ ಈ ಕಡಲೆಹಿಟ್ಟಿನ ಮಿಶ್ರಣವನ್ನು ಹಾಕಿ, ಸಮನಾಗಿ ಹರಡಿ. ಮೇಲೆ ಪಿಸ್ತಾ, ಗೋಡಂಬಿಯ ಚಿಕ್ಕ ಚೂರುಗಳಿಟ್ಟು ಬರ್ಫಿಯ ಒಳಗೆ ಸೇರುವಂತೆ ಚಮಚದಲ್ಲಿ ಒತ್ತಿ ಅಲಂಕರಿಸಿ. ಬರ್ಫಿ ತಣ್ಣಗಾದ ಮೇಲೆ ಬೇಕಾದ ಆಕಾರದಲ್ಲಿ ಕತ್ತರಿಸಿ. ಹದಿನೈದು ದಿನ ಇಟ್ಟರೂ ಕೆಡುವುದಿಲ್ಲ.

IMG_20210930_140910-(1)-(1)

ಖಾಜಾ ಸಿಹಿ

ಸಾಮಗ್ರಿ : 2 ಕಪ್‌ ಮೈದಾ, 5 ಚಮಚ ತುಪ್ಪ, 2 ಕಪ್‌ ಸಕ್ಕರೆ, ಅರ್ಧ ಚಮಚ ಬೇಕಿಂಗ್‌ ಸೋಡಾ, ಸ್ವಲ್ಪ ಕೇಸರಿದಳ, 5 ಏಲಕ್ಕಿ, ಕರಿಯಲು ಎಣ್ಣೆ.

ವಿಧಾನ : ಮೈದಾ ಹಿಟ್ಟಿಗೆ ತುಪ್ಪ, ಬೇಕಿಂಗ್‌ ಸೋಡಾ ಬೆರೆಸಿ, ನೀರು ಹಾಕಿ ಗಟ್ಟಿಯಾಗಿ ಕಲಸಿ, ಅರ್ಧ ಗಂಟೆ ಕಾಲ ಮುಚ್ಚಿಡಿ. ಸಕ್ಕರೆಗೆ 1 ಕಪ್‌ ನೀರು ಹಾಕಿ, ಗಟ್ಟಿಯಾದ ನಾರು ಪಾಕ ಮಾಡಿಕೊಳ್ಳಿ. ಇದಕ್ಕೆ ಏಲಕ್ಕಿ ಪುಡಿ ಮತ್ತು ಕೇಸರಿದಳ ಹಾಕಿ 2 ನಿಮಿಷ ಕುದಿಸಿ ಕೆಳಗಿಳಿಸಿ. ಕಲಸಿದ ಮೈದಾ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿ ಚಪಾತಿ ಅಗಲಕ್ಕೆ ಲಟ್ಟಿಸಿ. ಇದೇ ರೀತಿ 5-6 ಮಾಡಿಕೊಂಡು, ಒಂದರ ಮೇಲೊಂದು ಇಟ್ಟು ಮತ್ತೆ ದಪ್ಪನಾಗಿ ಲಟ್ಟಿಸಿ, ಚಾಕುವಿನಿಂದ ಚಿಕ್ಕ ತುಂಡುಗಳಾಗಿ ಚೌಕಾಕಾರವಾಗಿ ಕತ್ತರಿಸಿಟ್ಟುಕೊಳ್ಳಿ. ನಂತರ ಬಾಣಲೆಯಲ್ಲಿ ಎಣ್ಣೆ  ಕಾಯಿಸಿ, ಕತ್ತರಿಸಿದ ಬಿಲ್ಲೆಗಳನ್ನು ಒಂದಾಂದಾಗಿ ಬಿಟ್ಟು ಹೊಂಬಣ್ಣ ಬರುವಂತೆ ಕರಿಯಿರಿ. ನಂತರ  ಸಕ್ಕರೆ ಪಾಕಕ್ಕೆ ಹಾಕಿ ಪಾಕ ಹೀರಿಕೊಂಡ ಮೇಲೆ ತೆಗೆದು ತಟ್ಟೆಯಲ್ಲಿ ಜೋಡಿಸಿ, ಸವಿಯಲು ಕೊಡಿ.

DSCN3304-(1)

ಬಬ್ರೂ

ಸಾಮಗ್ರಿ : 1 ಕಪ್‌ ಗೋಧಿಹಿಟ್ಟು, 2 ಕಪ್‌ ಸಕ್ಕರೆ ಅಥವಾ ಬೆಲ್ಲ, ಅರ್ಧ ಕಪ್‌ ಕೊಬ್ಬರಿ ತುರಿ, 1 ಚಮಚ ಯೀಸ್ಟ್, ಅರ್ಧ ಚಮಚ ಸೋಂಪು, ಏಲಕ್ಕಿ, ಕರಿಯಲು ಎಣ್ಣೆ.

ವಿಧಾನ : 1 ಕಪ್‌ ಸಕ್ಕರೆಗೆ ನೀರು ಹಾಕಿ ಒಲೆಯ ಮೇಲಿಟ್ಟು ಕರಗಿಸಿ, ಇದಕ್ಕೆ ಏಲಕ್ಕಿ ಪುಡಿ ಹಾಕಿ ಪಾಕ ಮಾಡಿಕೊಳ್ಳಿ. ಗೋಧಿಹಿಟ್ಟಿಗೆ ಯೀಸ್ಟ್, ಸೋಂಪು, ಕೊಬ್ಬರಿ ತುರಿ ಹಾಕಿ ಕಲಸಿ. ನಂತರ ಸಕ್ಕರೆ ಹಾಕಿ ಕಲಸಿ. ಐದು ನಿಮಿಷ  ಚೆನ್ನಾಗಿ ಮೃದುವಾಗಿ ನಾದಿ, ಭದ್ರವಾಗಿ ಮುಚ್ಚಳ ಮುಚ್ಚಿ, ಐದು ಗಂಟೆಗಳ ಕಾಲ ಮುಚ್ಚಿಡಿ. ನಂತರ ಮುಚ್ಚಳ ತೆರೆದರೆ ಗೋಧಿಹಿಟ್ಟು ಉಬ್ಬಿರುತ್ತದೆ. ನಿಂಬೆಕಾಯಿ ಗಾತ್ರದ ಉಂಡೆ ಮಾಡಿ, ಪೂರಿಯಂತೆ ಲಟ್ಟಿಸಿ, ಎಣ್ಣೆಯಲ್ಲಿ ಕರಿಯಿರಿ. ಇದು ಮೇಲೆ ಗರಿಗರಿಯಾಗಿ ಒಳಗೆ ಮೃದುವಾಗಿ ಪದರಪದರವಾಗಿ ಇರುತ್ತದೆ.

IMG_20210930_132515-(2)

ಸೋಹನ್‌ ಹಲ್ವಾ

ಸಾಮಗ್ರಿ : ಅರ್ಧ ಕಿಲೋ ಸಕ್ಕರೆ, ಅರ್ಧ ಕಿಲೋ ಮೈದಾ ಅಥವಾ ಕಾರ್ನ್‌ ಫ್ಲೋರ್‌, ಬಾದಾಮಿ, ಪಿಸ್ತಾ ಚೂರು (ಒಟ್ಟಾರೆ ಅರ್ಧ ಕಪ್‌), 5 ಏಲಕ್ಕಿ, ಅರ್ಧ ಕಪ್‌ ತುಪ್ಪ, 1 ಕಪ್‌ ಹಾಲು, 2 ಲೀಟರ್‌ ನೀರು, ಅರ್ಧ ಚಮಚ ಕೇಸರಿ ಎಸಳು.

ವಿಧಾನ : ನೀರನ್ನು ಕುದಿಸಿ, ಸಕ್ಕರೆ ಹಾಕಿ. ಅದು ಕರಗಿದ ಬಳಿಕ, ಒಂದು ಕಪ್‌ ಹಾಲು ಸೇರಿಸಿ. ಇನ್ನೂ ಐದು ನಿಮಿಷ ಕುದಿಸಿ. ಆಗ ಸಕ್ಕರೆಯಲ್ಲಿರುವ ಕೊಳೆ ಹೊರ ಬರುತ್ತದೆ. ಇದನ್ನು ತೆಳ್ಳಗಿನ ಬಟ್ಟೆಯಲ್ಲಿ ಸೋಸಿ. ಕೊಳೆಯನ್ನು ತೆಗೆಯಿರಿ. ಕಾರ್ನ್‌ ಫ್ಲೋರ್‌ ನ್ನು ಒಂದು ಕಪ್‌ ಬಿಸಿ ನೀರಿನಲ್ಲಿ ಬೆರೆಸಿ ಸಕ್ಕರೆ ಪಾಕಕ್ಕೆ ಹಾಕಿ. ಇದನ್ನು ಒಲೆಯ ಮೇಲಿರಿಸಿ, ಕಡಿಮೆ ಉರಿಯಲ್ಲಿ ಬೇಯಿಸಿ. ಪಾತ್ರೆ ತಳ ಹಿಡಿಯದಂತೆ ಸೌಟಿನಲ್ಲಿ ಕಲಸುತ್ತಾ ಇರಿ. ನಂತರ ಒಂದು ಚಿಕ್ಕ ಚಮಚ ತುಪ್ಪ ಸೇರಿಸಿ, ಹಾಗೆ ಕೊಂಚ ಕೊಂಚವೇ ತುಪ್ಪ ಸೇರಿಸುತ್ತಾ ಪೂರ್ತಿ ತುಪ್ಪ ಹಾಕಿ. ಚೆನ್ನಾಗಿ ಬೆಂದಾಗ ತುಪ್ಪ ಬಿಡಲಾರಂಭಿಸುತ್ತದೆ. ಈಗ ಇದಕ್ಕೆ ಅರ್ಧದಷ್ಟು ಬಾದಾಮಿ, ಪಿಸ್ತಾ ಚೂರು ಮತ್ತು ಏಲಕ್ಕಿ ಪುಡಿ ಸೇರಿಸಿ, ಕೈಯಾಡಿಸಿ ಬಳಿಕ ಒಲೆಯಿಂದ ಕೆಳಗಿಳಿಸಿ. ಒಂದು ತಟ್ಟೆಗೆ ತುಪ್ಪ ಸವರಿ, ಅದರ ಮೇಲೆ ಹಲ್ವಾ ಮಿಶ್ರಣ ಹರಡಿ, ಮರದ ಸೌಟಿನಲ್ಲಿ ಒತ್ತಿ ಸಮನಾಗಿ ಮಾಡಿ. ಇದರ ಮೇಲೆ ಉಳಿದ ಬಾದಾಮಿ, ಪಿಸ್ತಾ ಚೂರುಗಳನ್ನು ಏಲಕ್ಕಿ ಪುಡಿಯಿದ ಅಲಂಕರಿಸಿ. ಇದೇ ಸೋಹನ್‌ ಹಲ್ವಾ. ತಣ್ಣಗಾದಾಗ ಡೈಮಂಡ್‌ ಆಕಾರಕ್ಕೆ ಕತ್ತರಿಸಿ, ತಿನ್ನಲು ಬಲು ಸ್ವಾದಿಷ್ಟವಾಗಿರುತ್ತದೆ.

IMG_20210930_134621-(2)

ಪೇಡಾ

ಸಾಮಗ್ರಿ : ಎರಡೂವರೆ ಕಪ್‌ ಖೋವಾ, 500 ಗ್ರಾಂ ಪುಡಿ ಸಕ್ಕರೆ, 2 ಚಮಚ ತುಪ್ಪ, ಅರ್ಧ ಕಪ್‌ ಹಾಲು, ಕಾಲು ಚಮಚ ಏಲಕ್ಕಿ ಪುಡಿ.

ವಿಧಾನ : ದಪ್ಪ ತಳದ ಬಾಣಲೆಯಲ್ಲಿ ಖೋವಾ ಹಾಕಿ ಚೆನ್ನಾಗಿ ಹುರಿಯಿರಿ. ಸಾಧ್ಯವಾದಷ್ಟು ರೋಸ್ಟ್ ಮಾಡಿ. ಇದರಿಂದ ಪೇಡಾದ ಬಾಳಿಕೆ ಹೆಚ್ಚುತ್ತದೆ. ಅದು ಕರಟಿ ಹೋಗದಂತೆ ಆಗಾಗ ತುಪ್ಪ ಸೇರಿಸುತ್ತಿರಿ. ಖೋವಾ ಕಂದು ಬಣ್ಣಕ್ಕೆ ತಿರುಗುವ ತನಕ ಹುರಿಯಿರಿ. ಕೆಲವರು ತುಪ್ಪದ ಬದಲು ಹಾಲು ಹಾಕುತ್ತಾರೆ. ಈ ಖೋವಾವನ್ನು ತಣ್ಣಗಾಗಲು ಬಿಡಿ. ನಂತರ ಇದಕ್ಕೆ 400 ಗ್ರಾಂ ಸಕ್ಕರೆ ಪುಡಿ, ಏಲಕ್ಕಿ ಪುಡಿ ಬೆರೆಸಿ ಚೆನ್ನಾಗಿ ಕಲಸಿ. ಇದು ಪೇಡಾದ ಮಿಶ್ರಣ. ಉಳಿದ 100 ಗ್ರಾಂ ಸಕ್ಕರೆ ಪುಡಿಯನ್ನು ಒಂದು ತಟ್ಟೆಯಲ್ಲಿ ಹಾಕಿ. ಪೇಡಾದ ಮಿಶ್ರಣದಿಂದ ದಪ್ಪ ಗೋಲಿ ಗಾತ್ರದ ಉಂಡೆಗಳನ್ನು ತಯಾರಿಸಿ, ಸಕ್ಕರೆ ಪುಡಿಯಲ್ಲಿ ಹೊರಳಿಸಿ. ಅಂಗೈ ಮೇಲೆ ಮತ್ತೊಮ್ಮೆ ಉಂಡೆಯಾಗಿ ತಿರುಗಿಸಿ. ಇದೀಗ ಮಥುರಾದ ಪೇಡಾ ತಯಾರು. ಇದನ್ನು ಗಾಳಿಯಾಡದ ಡಬ್ಬದಲ್ಲಿ ಇಡಿ. ಒಂದು ತಿಂಗಳ ಕಾಲ ಕೆಡದೆ ಉಳಿಯುತ್ತದೆ. ಬಲು ರುಚಿಯಾದ ಈ ಪೇಡಾ ಎಲ್ಲರಿಗೂ ಇಷ್ಟವಾಗುತ್ತದೆ.

IMG_20210930_134236-(2)

ಕೊಕಾಡಾ

ಸಾಮಗ್ರಿ : 1 ತೆಂಗಿನಕಾಯಿ, 400 ಗ್ರಾಂ ಶ್ಯಾವಿಗೆ, 750 ಗ್ರಾಂ ಸಕ್ಕರೆ, 5 ಏಲಕ್ಕಿ.

ವಿಧಾನ : ತೆಂಗಿನಕಾಯಿಯನ್ನು ತುರಿದುಕೊಳ್ಳಿ. ಒಂದು ಕಪ್‌ ನೀರಿನಲ್ಲಿ ಸಕ್ಕರೆಯ ಪಾಕ ತಯಾರಿಸಿ. ಇದಕ್ಕೆ ಶ್ಯಾವಿಗೆ ಮತ್ತು ತೆಂಗಿನಕಾಯಿ ತುರಿ ಸೇರಿಸಿ ಕೈಯಾಡಿಸಿ. ಇದು ಮುದ್ದೆಯಾಗಿ, ಪಾತ್ರೆಯ ತಳ ಬಿಡುವವರೆಗೂ ಕೈಯಾಡಿಸಿ, ಒಲೆಯಿಂದ ಕೆಳಗಿಳಿಸಿ. ಇದಕ್ಕೆ ಏಲಕ್ಕಿಪುಡಿ ಹಾಕಿ ಮತ್ತೆ ಕೈಯಾಡಿಸಿ. ಒಂದು ತಟ್ಟೆಗೆ ತುಪ್ಪ ಸವರಿ, ಅದರ ಮೇಲೆ ಈ ಮಿಶ್ರಣ ಹರಡಿ ಸಮತಟ್ಟಾಗಿ ಮಾಡಿ. ಸ್ವಲ್ಪ ತಣ್ಣಗಾದಾಗ ಚೌಕ ಅಥವಾ ವಜ್ರಾಕೃತಿಯಲ್ಲಿ ಕತ್ತರಿಸಿ ಅಥವಾ ಉಂಡೆಯಾಗಿಯೂ ಸಹ ಕಟ್ಟಿ ತಿನ್ನಲು ಕೊಡಿ.

IMG_20210930_133048-(2)

ಪಿನ್ನಿ

ಸಾಮಗ್ರಿ : 3 ಕಪ್‌ ಗೋಧಿ ಹಿಟ್ಟು, 2 ಕಪ್‌ ಪುಡಿ ಸಕ್ಕರೆ, 1 ಕಪ್‌ ಖೋವಾ (ಅಗತ್ಯವಿದ್ದರೆ ಮಾತ್ರ), ಬಾದಾಮಿ, ಗೋಡಂಬಿ ಚೂರು ಒಟ್ಟಾರೆ 1 ಕಪ್‌, 3-4 ಚಮಚ ಹಾಲು, ಕಾಲು ಚಮಚ ಏಲಕ್ಕಿ ಪುಡಿ.

ವಿಧಾನ : ದಪ್ಪ ತಳದ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ. ಇದಕ್ಕೆ ಗೋಧಿ ಹಿಟ್ಟು ಸೇರಿಸಿ, ಕಡಿಮೆ ಉರಿಯಲ್ಲಿ ಹುರಿಯಿರಿ. ತಳ ಹಿಡಿಯದಂತೆ ತಿರುಗಿಸುತ್ತಿರಿ. ತಿಳಿ ಕಂದು ಬಣ್ಣಕ್ಕೆ ತಿರುಗಿದಾಗ ಖೋವಾದ ತುರಿಯನ್ನು ಹಾಕಿ ತಿರುಗಿಸಿ. ಮಿಶ್ರಣ ಕಂದು ಬಣ್ಣಕ್ಕೆ ತಿರುಗಿದಾಗ ಪರಿಮಳ ಬರುತ್ತದೆ. ಆಗ ಅದಕ್ಕೆ ಸಕ್ಕರೆ ಪುಡಿ ಸೇರಿಸಿ ತಿರುಗಿಸುಸ್ತಾ 1-2 ನಿಮಿಷಗಳ ಕಾಲ ಕಾಯಿಸಿ. ಬಾಣಲೆಯನ್ನು ಒಲೆಯಿಂದ ಇಳಿಸಿ, ಬಾದಾಮಿ, ಗೋಡಂಬಿ ಚೂರು, ಏಲಕ್ಕಿ ಬೆರೆಸಿ. ಇದನ್ನು ದೊಡ್ಡ ತಟ್ಟೆಗೆ ಹಾಕಿ ತಣ್ಣಗಾಗಲು ಬಿಡಿ. ಮಿಶ್ರಣವನ್ನು ಚೆನ್ನಾಗಿ ತಿರುಗಿಸಿ, ಇದರ ಮೇಲೆ ಮತ್ತೆ ಹಾಲು ಹಾಕಿ ಕಲಸಿ. ಈ ಮಿಶ್ರಣವನ್ನು ನಿಂಬೆ ಗಾತ್ರದ ಉಂಡೆಗಳನ್ನಾಗಿ ಕಟ್ಟಿ. ಮೇಲೆ ಗೋಡಂಬಿ ಚೂರುಗಳಿಂದ ಅಲಂಕರಿಸಿ. ತಣ್ಣಗಾದ ಮೇಲೆ ಡಬ್ಬಕ್ಕೆ ತುಂಬಿಸಿ.

PDVD_110-(2)

ಕಾಶ್ಮೀರಿ ಹಲ್ವಾ

ಸಾಮಗ್ರಿ : 1 ಬಟ್ಟಲು ಸಣ್ಣ ರವೆ, 150 ಗ್ರಾಂ ಪುಡಿ ಸಕ್ಕರೆ, ಒಂದೂವರೆ ಬಟ್ಟಲು ತುಪ್ಪ. 20-20 ಗೋಡಂಬಿ, ದ್ರಾಕ್ಷಿ, ಬಾದಾಮಿ, 5 ಏಲಕ್ಕಿ, 1 ಚಮಚ ಪಿಸ್ತಾ ಚೂರು.

ವಿಧಾನ : ಸಕ್ಕರೆಯಲ್ಲಿ ನೀರು ಬೆರೆಸಿ ಹದ ಬರುವವರೆಗೂ ಪಾಕ ಮಾಡಿಕೊಳ್ಳಿ. ಸಣ್ಣ ಉರಿಯಲ್ಲಿ ಅಗಲ ಪಾತ್ರೆಯಲ್ಲಿ ತುಪ್ಪ ಹಾಕಿ ಕರಗಿಸಿ, ಅದಕ್ಕೆ ರವೆ ಹಾಕಿ ಘಮ್ಮೆಂದು ಪರಿಮಳ ಬರುವವರೆಗೂ ನಿಧಾನವಾಗಿ ಹುರಿಯಿರಿ. ಅದಕ್ಕೆ ಸಕ್ಕರೆಯ ಪಾಕ ಸುರಿಯಿರಿ. ರವೆ, ಪಾಕ ಹೀರಿಕೊಳ್ಳುವರೆಗೂ ಕೈಯಾಡಿಸುತ್ತಾ ಇರಿ. ನಂತರ ಪಾತ್ರೆಯನ್ನು ಒಲೆಯ ಮೇಲಿಂದ ಇಳಿಸಿ, ತುಪ್ಪದಲ್ಲಿ ಹುರಿದ ಬಾದಾಮಿ, ಗೋಡಂಬಿ, ದ್ರಾಕ್ಷಿ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕೈಯಾಡಿಸಿ, ಕೊನೆಯಲ್ಲಿ ಪಿಸ್ತಾ ಉದುರಿಸಿ.

IMG_20210930_134022-(2)

ರಾಶ್‌ ಬಾರಾ

ಸಾಮಗ್ರಿ : 1 ಕಪ್‌ ಉದ್ದಿನ ಬೇಳೆ, ಅರ್ಧ ಕಪ್‌ ಬೆಲ್ಲದ ಪುಡಿ, 1 ಚಮಚ ಸೋಂಪು, ಕರಿಯಲು ತುಪ್ಪ.

ವಿಧಾನ : ಉದ್ದಿನ ಬೇಳೆಯನ್ನು ಎಂಟು ಗಂಟೆಗಳ ಕಾಲ ನೆನೆಹಾಕಿ. ಆ ನಂತರ ನೀರು ಸೋಸಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ಸೋಂಪನ್ನು ಕುಟ್ಟಿ ಪುಡಿ ಮಾಡಿ ಮಿಶ್ರ ಮಾಡಿ, ಬಾರಾ (ಕಜ್ಜಾಯ)ದಂತೆ ತಟ್ಟಿಕೊಂಡು, ಬಾಣಲೆಯಲ್ಲಿ ತುಪ್ಪ ಕಾಯಿಸಿ ಒಂದೊಂದನ್ನೇ ಕರಿದು ತೆಗೆಯಿರಿ. ಬೆಲ್ಲಕ್ಕೆ ಸ್ವಲ್ಪ ನೀರು ಹಾಕಿ ಗಟ್ಟಿ ಪಾಕ ಮಾಡಿಕೊಳ್ಳಿ. ಕರಿದ ಬಾರಾವನ್ನು ಬೆಲ್ಲದ ಪಾಕದಲ್ಲಿ ಅದ್ದಿ ತೆಗೆಯಿರಿ. ಅದು ತಣ್ಣಗಾಗಿ ಗಟ್ಟಿಯಾದ ಮೇಲೆ ಕಜ್ಜಾಯಕ್ಕಿಂತಲೂ ಹೆಚ್ಚು ರುಚಿಯಾಗಿರುತ್ತದೆ.

– ರಾಜೇಶ್ವರಿ ವಿಶ್ವನಾಥ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ