ಬುಡಕಟ್ಟು ಸಮುದಾಯವರ ಶ್ರೇಯೋಭಿವೃದ್ಧಿಗಾಗಿ ಕಾಂಗ್ರೆಸ್‌ ಸರ್ಕಾರ ಸದಾ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಚಿತ್ರದುರ್ಗದ ಸಮೀಪ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುತ್ತಿದೆ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ವಾಲ್ಮೀಕಿ ಜಯಂತಿ ಪ್ರಧಾನ ಕಾರ್ಯಕ್ರಮದಲ್ಲಿ ಸಚಿವರು ಹಲವಾರು ಮಾಹಿತಿಗಳನ್ನು ಹಂಚಿಕೊಂಡರು. ಚಿತ್ರದುರ್ಗದಲ್ಲಿ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪಿಸಲಾಗುತ್ತಿದೆ. 120 ಎಕರೆ ಜಾಗದಲ್ಲಿ ಇದನ್ನು ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಈ ಬಗ್ಗೆ ಪ್ರಸ್ತಾಪ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿಗಳ ಜೊತೆ ಸುಧೀರ್ಘವಾಗಿ ಚರ್ಚಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದು ಬುಡಕಟ್ಟು ಸಮುದಾಯದವರ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ನೆರವಾಗುವ ಉದ್ದೇಶ ಹೊಂದಿದೆ. ಬುಡಕಟ್ಟು ಕಲೆ, ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು  ಸಾಂಪ್ರಾಯಿಕ ಜ್ಞಾನವನ್ನು ಅಧ್ಯಯನ ಮಾಡಬಹುದಾಗಿದೆ ಎಂದರು.ಬುಡಕಟ್ಟು ಸಮುದಾಯಗಳ ಜೀವನ ಶೈಲಿ, ಸಾಮಾಜಿಕ ಅಭಿವೃದ್ಧಿ, ಆರ್ಥಿಕ ಅಭಿವೃದ್ಧಿ ಹಾಗೂ ಇತರೆ ವ್ಯವಸ್ಥೆಗಳ ಕುರಿತು ಸಂಶೋಧನೆಗೆ ಉತ್ತೇಜನ ನೀಡಬಹುದಾಗಿದೆ. ಕೌಶಲ್ಯಾಧಾರಿತ ಶಿಕ್ಷಣ, ವೃತ್ತಿಪರ ಕೋರ್ಸ್‌ ಮೂಲಕ ಉದ್ಯೋಗಕ್ಕೆ ಅಗತ್ಯ ಶಿಕ್ಷಣ ಸಾಮರ್ಥ್ಯ ಹೆಚ್ಚಿಸಬಹುದಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭ ಮತ್ತೊಂದು ವಿಷಯ ಪ್ರಸ್ತಾಪಿಸಿದ ಸಚಿವರು, ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆಯಾದವರೆಲ್ಲರೂ ಒಂದೊಂದು ವಿಷಯದಲ್ಲಿ ಸಾಧನೆ ಮಾಡಿದ್ದಾರೆ, ಸಮುದಾಯದ ಬಗ್ಗೆ ತಮ್ಮ ದನಿ ಎತ್ತಿದ್ದಾರೆ ಎಂದು ತಿಳಿಸಿದರು.

ಪ್ರಶಸ್ತಿ ಆಯ್ಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ಉಗ್ರಪ್ಪ ಅವರಿಗೆ ವೇದಿಕೆಯಲ್ಲಿಯೇ ಸಚಿವರು ಸ್ಪಷ್ಟನೆ ನೀಡಿದರು.

ಪ್ರಶಸ್ತಿಗೆ ಆಯ್ಕೆಯಾದವರು ತಮ್ಮದೇ ರೀತಿಯಲ್ಲಿ ಸಮುದಾಯದ ಏಳಿಗೆಗೆ, ದಮನಿತರ ಪರವಾಗಿ ದನಿ ಎತ್ತಿದ್ದಾರೆ.  ಸಮಾಜದ ಬಗ್ಗೆ ಕಾಳಜಿ ಹೊಂದಿದ್ದಾರೆ. ಅವರೆಲ್ಲರೂ ಪ್ರಶಸ್ತಿಗೆ ಅರ್ಹರೇ ಆಗಿದ್ದರು. ಇದರಲ್ಲಿ ಯಾವುದೇ ರಾಜೀ ಇಲ್ಲ ಎಂದು ರಘುಮೂರ್ತಿ ಸ್ಪಷ್ಟಪಡಿಸಿದರು.

ವೀರ ಮದಕರಿನಾಯಕ ವಾಲ್ಮೀಕ ಸಂಘ, ರೈಲ್ವೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬೆಂಗಳೂರಿನ ಎಂ.ಜಿ. ರೈಲ್ವೆ ಕಾಲೋನಿ ಬಳಿ ನಡೆದ ವಾಲ್ಮೀಕಿ ಜಯಂತಿಯಲ್ಲಿ ಭಾಷಣ ಮಾಡಿದ ರಘುಮೂರ್ತಿ ಅವರು ಶ್ರೀ ವಾಲ್ಮೀಕಿಯವರು ಮಾತೃಹೃದಯ ಹೊಂದಿದ ಸಂತ ಶ್ರೇಷ್ಠ ಮಹಾನ್ ಮಾನವತಾ ವಾದಿ, ದಾರ್ಶನಿಕ, ಮಾದರಿ ನೀತಿ ಶಾಸ್ತ್ರಜ್ಞ, ತತ್ವಜ್ಞಾನಿ, ಮಹಾನ್ ಚಿಂತಕ, ಸಮಾಜ ಸುಧಾರಕ ಎಂದು ಸಚಿವರು ಬಣ್ಣಿಸಿದರು.

ವಾಲ್ಮೀಕಿಗೆ ಪೂಜೆ ಮಾಡಿ: ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ  ಜಗದ್ಗುರುಗಳಾದ ಡಾ. ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಿದರು.

ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಕರೆ ನೀಡಿದ ಅವರು, ಮುಂದಿನ ವರ್ಷ ವಾಲ್ಮೀಕಿ ಜಯಂತಿಯಂದು ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ವಾಲ್ಮೀಕಿ ಫೋಟೋಗೆ ಪೂಜೆ ಮಾಡಬೇಕು. ಆರ್ಥಿಕವಾಗಿ ಶಕ್ತಿವಂತರು ಅನ್ನದಾಸೋಹ ಕೂಡ ಏರ್ಪಡಿಸಬೇಕು. ಅದು ಮಾಡಲು ಆಗದವರು ಮನೆಯಲ್ಲಿ ಕಡ್ಡಾಯವಾಗಿ ಪೂಜೆ ಮಾಡಿ, ಹಬ್ಬದಂತೆ ಜಯಂತಿಯನ್ನು ಆಚರಿಸಬೇಕು ಎಂದು ಹೇಳಿದರು.

ಬೆಂಗಳೂರಿನಲ್ಲಿರುವ ಮೆಟ್ರೋ ನಿಲ್ದಾಣವೊಂದಕ್ಕೆ ಮಹರ್ಷಿ ವಾಲ್ಮೀಕಿ ಹೆಸರನ್ನು ಇಡಬೇಕು ಎಂದು ಸ್ವಾಮೀಜಿಗಳು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.

ಮಾಜಿ ಸಚಿವರಾದ ದಿನೇಶ್‌ ಗುಂಡೂರಾವ್‌, ಮಾಜಿ ಸಂಸದರಾದ ಬಿ.ವಿ. ನಾಯಕ್‌, ನಿವೃತ್ತ ನ್ಯಾಯಮೂರ್ತಿಗಳಾದ ಎನ್‌.ಎಸ್‌. ಪಾಟೀಲ್‌, ಸಂಘದ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ