ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರಿಗೆ ದಕ್ಷಿಣದಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅಂತೆಯೇ ದಕ್ಷಿಣದ ಸ್ಟಾರ್ ನಟರಿಗೆ ಇರುವಂತೆಯೇ ಪಕ್ಕಾ ಫ್ಯಾನ್ ಫಾಲೋವಿಂಗ್ ನಟಿ ನಯನತಾರಾ ಅವರಿಗೂ ಇದೆ.
ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಿನಿಮಾಗಳಿಗೆ ಸ್ಟಾರ್ ನಟರ ಕಟೌಟ್ ಹಾಕುವುದು ಸಾಮಾನ್ಯ. ಆದರೆ ನಟಿಯರಿಗೆ ಹೀಗೆ ಕಟೌಟ್ ಹಾಕುವ ಸಂಪ್ರದಾಯ ಕಡಿಮೆ. ಆದರೆ ಇದೀಗ ನಯನತಾರಾ ಅವರಿಗೂ ಭಾರಿ ದೊಡ್ಡ ಕಟೌಟ್ ಅನ್ನು ಅಭಿಮಾನಿಗಳು ಹಾಕಿದ್ದಾರೆ.
ನಯನತಾರಾ ಪ್ರಸ್ತುತ ‘ಮೂಕುತಿ ಅಮ್ಮನ್ 2’ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾದ ಬಿಡುಗಡೆಗೆ ಕೆಲವೇ ದಿನಗಳಿವೆ. ಇದೀಗ ಸಿನಿಮಾದ ಪ್ರಚಾರ ಚಾಲ್ತಿಯಲ್ಲಿದ್ದು, ಚಿತ್ರದ ಬಿಡುಗಡೆಗೆ ಮುನ್ನ ಚೆನ್ನೈನ ವೆಲ್ಸ್ ಥಿಯೇಟರ್ ಬಳಿ ನಯನತಾರಾ ಅವರ 60 ಅಡಿ ಎತ್ತರದ ಬೃಹತ್ ಕಟೌಟ್ ನಿರ್ಮಿಸಲಾಗಿದೆ. ನಯನತಾರಾ ಅವರು ತ್ರಿಶೂಲ ಹಿಡಿದು ದೇವಿಯ ರೂಪದಲ್ಲಿರುವ ಆ ಬೃಹತ್ ಕಟೌಟ್ ಪ್ರೇಕ್ಷಕರ ಹಾಗೂ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ನಟಿಯೊಬ್ಬರಿಗೆ ಹೀಗೆ ಕಟೌಟ್ ಹಾಕುವುದು ಅಪರೂಪದಲ್ಲೇ ಅಪರೂಪ. ಈಗ ನಯನತಾರಾ ಅವರಿಗೆ ಈ ಗೌರವ ನೀಡಿರುವ ಬಗ್ಗೆ ಸಾಕಷ್ಟು ಧನಾತ್ಮಕ ಅಭಿಪ್ರಾಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಸುಂದರ್ ಸಿ ನಿರ್ದೇಶನದಲ್ಲಿ ಮೂಡಿಬಂದಿರುವ ‘ಮೂಕುತಿ ಅಮ್ಮನ್ 2’ ಚಿತ್ರವು 2020ರಲ್ಲಿ ಬಿಡುಗಡೆಯಾದ ‘ಮೂಕುತಿ ಅಮ್ಮನ್’ ಚಿತ್ರದ ಮುಂದುವರಿದ ಭಾಗ. ಈ ಚಿತ್ರದಲ್ಲಿ ನಯನತಾರಾ ದೇವಿಯ ಪಾತ್ರದ ಜೊತೆಗೆ ಪೊಲೀಸ್ ಅಧಿಕಾರಿಯ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಕನ್ನಡದ ನಟ ದುನಿಯಾ ವಿಜಯ್ ಸಹ ನಟಿಸಿದ್ದಾರೆ. ಜೊತೆಗೆ ರೆಜಿನಾ ಕ್ಯಾಸಂದ್ರ, ಊರ್ವಶಿ ಮತ್ತು ಯೋಗಿ ಬಾಬು ಮುಂತಾದ ಪ್ರಮುಖ ತಾರಾಗಣವಿದೆ. ಈ ಬಹುನಿರೀಕ್ಷಿತ ಚಿತ್ರವು ನವೆಂಬರ್ 6 ರಂದು ಬಿಡುಗಡೆಯಾಗಲಿದೆ.





