ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್

ಇಂಟ್ರಾ: ಏಷ್ಯನ್ ಗೇಮ್ಸ್ ಅಖಾಡದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಮುಗಿಲೆತ್ತರಕ್ಕೆ ಹಾರಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ ಮೈಸೂರಿನ ಮಗಳು ಪ್ರಣವಿ ಶರತ್ ಅರಸ್. ಜಪಾನ್‌ನ ಐಚಿ–ನಗೋಯಾದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ ವೈಯಕ್ತಿಕ ಗಾಲ್ಫ್ ವಿಭಾಗದಲ್ಲಿ 15-ಅಂಡರ್ 265 ಸ್ಕೋರ್‌ನೊಂದಿಗೆ ಚಿನ್ನ ಗೆದ್ದ ಪ್ರಣವಿ, ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಗಾಲ್ಫರ್ ಎನಿಸಿಕೊಂಡಿದ್ದಾರೆ.

ಭಾರತೀಯ ಗಾಲ್ಫ್ ಇತಿಹಾಸದಲ್ಲಿ ಕರ್ನಾಟಕದ ಹೆಮ್ಮೆಯ ಕುವರಿ, ಮೈಸೂರು ಮೂಲದ ಪ್ರಣವಿ ಶರತ್ ಅರಸ್ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಜಪಾನ್‌ನ ಐಚಿ–ನಗೋಯಾದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್ ಗಾಲ್ಫ್ ಕ್ರೀಡೆಯಲ್ಲಿ ಮಹಿಳಾ ವೈಯಕ್ತಿಕ ವಿಭಾಗದಲ್ಲಿ ಪ್ರಣವಿ ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟು ಚರಿತ್ರೆ ಸೃಷ್ಟಿಸಿದ್ದಾರೆ. ಏಷ್ಯನ್ ಗೇಮ್ಸ್ ಗಾಲ್ಫ್ ಇತಿಹಾಸದಲ್ಲೇ ಮಹಿಳಾ ವೈಯಕ್ತಿಕ ವಿಭಾಗದಲ್ಲಿ ಭಾರತಕ್ಕೆ ಸಿಕ್ಕ ಮೊದಲ ಚಿನ್ನದ ಪದಕ ಇದಾಗಿದ್ದು, ದೇಶದ ಕ್ರೀಡಾ ವಲಯದಲ್ಲಿ ಸಂಭ್ರಮ ಮನೆಮಾಡಿದೆ.

Pranavi urs (2)

ದೇಶದ ಕ್ರೀಡಾಭಿಮಾನಿಗಳ ಗಮನ ಸೆಳೆದಿರುವ ಈ ಚಿನ್ನದ ಹುಡುಗಿ ಒಂದು ದಿನದಲ್ಲೇ ಚಾಂಪಿಯನ್ ಆಗಿದ್ದಲ್ಲ. ಮೈಸೂರಿನ ಗಾಲ್ಫ್ ಮೈದಾನದಲ್ಲೇ ಅವರ ಕನಸಿನ ಮೊದಲ ಬೀಜ ಬಿತ್ತಲಾಗಿತ್ತು. ಜಯಚಾಮರಾಜೇಂದ್ರ ಒಡೆಯರ್ ಗಾಲ್ಫ್ ಕ್ಲಬ್‌ಗೆ ತಂದೆ ಹಾಗೂ ಅಣ್ಣನ ಜೊತೆ ಹೋಗುತ್ತಿದ್ದ ಪುಟ್ಟ ಬಾಲಕಿ, ಗಾಲ್ಫ್​ ಆಡುವುದನ್ನು ನೋಡುತ್ತಾ ಈ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸಿಕೊಂಡವಳು. ಆರು ವರ್ಷದ ವಯಸ್ಸಿನಲ್ಲೇ ಗಾಲ್ಫ್ ಅಭ್ಯಾಸ ಆರಂಭಿಸಿದ ಪ್ರಣವಿ, ಏಳನೇ ವಯಸ್ಸಿನಲ್ಲಿ ಸೌತ್ ಝೋನ್ ಜೂನಿಯರ್ ಗಾಲ್ಫ್ ಟೂರ್ನಮೆಂಟ್‌ನಲ್ಲಿ ಗೆದ್ದು ತಮ್ಮ ಸಾಮರ್ಥ್ಯದ ಮೊದಲ ದೊಡ್ಡ ಸೂಚನೆ ನೀಡಿದ್ದರು.

Pranavi urs (5)

ಅಲ್ಲಿಂದ ಆರಂಭವಾದ ಪ್ರಣವಿಯ ಪಯಣ ಜೂನಿಯರ್ ಹಾಗೂ ಅಮೆಚೂರ್ ಹಂತಗಳಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಮಿಂಚಿದರು. 2018ರ ಸಿಂಗಾ ವರ್ಲ್ಡ್ ಜೂನಿಯರ್ ಚಾಂಪಿಯನ್‌ಶಿಪ್ ಸೇರಿದಂತೆ ಪ್ರಮುಖ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗೆದ್ದರು. ನಿರಂತರ ಅಭ್ಯಾಸ, ದೈಹಿಕ ಸಿದ್ಧತೆ ಮತ್ತು ಸ್ಪರ್ಧಾತ್ಮಕ ಮನೋಭಾವವೇ ಅವರನ್ನು ಮುಂದಕ್ಕೆ ಕೊಂಡೊಯ್ದಿತು. 2020ರಲ್ಲಿ ಪ್ರಣವಿ ವೃತ್ತಿಪರ ಗಾಲ್ಫ್‌ಗೆ ಕಾಲಿಟ್ಟರು. ಅದೇ ವರ್ಷ ಹೀರೋ ವುಮೆನ್ಸ್ ಪ್ರೊ ಗಾಲ್ಫ್ ಟೂರ್‌ನ ಎರಡನೇ ಮತ್ತು ಮೂರನೇ ಲೆಗ್‌ಗಳಲ್ಲಿ ಗೆಲುವು ದಾಖಲಿಸಿ ವೃತ್ತಿಪರ ಹಂತದಲ್ಲೂ ತಮ್ಮ ಛಾಪು ಮೂಡಿಸಿದರು.

Pranavi urs (4)

ನಂತರ ಲೇಡೀಸ್ ಯುರೋಪಿಯನ್ ಟೂರ್‌ನಲ್ಲಿ ಸ್ಪರ್ಧಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದರು. 2024ರ ಅಂಡಲುಸಿಯಾ ಕೋಸ್ಟಾ ಡೆಲ್ ಸೋಲ್ ಓಪನ್ ಡಿ ಎಸ್ಪಾನಾದಲ್ಲಿ ಮೂರನೇ ಸ್ಥಾನ ಹಾಗೂ ಅದೇ ವರ್ಷ ಹೆಲ್ಸಿಂಗ್‌ಬೋರ್ಗ್ ಓಪನ್ನಲ್ಲೂ ಮೂರನೇ ಸ್ಥಾನಕ್ಕೆ ಸಮನಾದ ಸಾಧನೆ ಅವರ ಬೆಳೆಯುತ್ತಿರುವ ಸಾಮರ್ಥ್ಯಕ್ಕೆ ಸಾಕ್ಷಿಯಾಯಿತು. 2024ರ LET ಸೀಸನ್‌ನ್ನು 17ನೇ ಸ್ಥಾನದಲ್ಲೂ ಮುಗಿಸಿದ್ದರು.

Pranavi urs (6)

ಪ್ರಣವಿಯ ಸಾಧನೆಯ ಮತ್ತೊಂದು ದೊಡ್ಡ ಮೈಲಿಗಲ್ಲು 2023ರಲ್ಲಿ ಬಂದಿತು. ಅವರಿಗೆ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಲಭಿಸಿತು. ಇದಕ್ಕೂ ಮೊದಲು 2022ರಲ್ಲೇ ಅವರನ್ನು ಭಾರತದ Target Olympic Podium Scheme (TOPS) Core Groupಗೆ ಸೇರಿಸಲಾಗಿತ್ತು. ಅಂದರೆ, ಏಷ್ಯನ್ ಗೇಮ್ಸ್ ಚಿನ್ನಕ್ಕೂ ಮುನ್ನವೇ ದೇಶದ ಕ್ರೀಡಾ ವ್ಯವಸ್ಥೆ ಪ್ರಣವಿಯ ಸಾಮರ್ಥ್ಯವನ್ನು ಗುರುತಿಸಿತ್ತು ಆದರೆ ಏಷ್ಯನ್ ಗೇಮ್ಸ್ ಚಿನ್ನದ ಕಥೆಯಲ್ಲೇ ಒಂದು ರೋಚಕ ತಿರುವಿದೆ. 2022ರ ಏಷ್ಯನ್ ಗೇಮ್ಸ್‌ಗಾಗಿ ನಡೆದ ಭಾರತೀಯ ಆಯ್ಕೆ ಟ್ರಯಲ್ಸ್‌ನ ಮೊದಲ ದಿನವೇ ಬಲ ಭುಜದ ಸ್ನಾಯು ಗಾಯಕ್ಕೆ ಒಳಗಾದ ಕಾರಣ ಪ್ರಣವಿ ಹಿಂದೆ ಸರಿಯಬೇಕಾಯಿತು. ಕೋವಿಡ್ ಕಾರಣದಿಂದ ಕ್ರೀಡಾಕೂಟ ಮುಂದೂಡಲ್ಪಟ್ಟ ನಂತರ 2023ರಲ್ಲಿ ಮತ್ತೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸ್ಥಾನ ಪಡೆದು ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಆಡಿದರು. ಅಲ್ಲಿ ವೈಯಕ್ತಿಕ ವಿಭಾಗದಲ್ಲಿ 13ನೇ ಸ್ಥಾನ ಪಡೆದ ಅವರು, ಭಾರತೀಯ ಮಹಿಳಾ ತಂಡದ ನಾಲ್ಕನೇ ಸ್ಥಾನಕ್ಕೂ ಕೊಡುಗೆ ನೀಡಿದರು.

Pranavi urs (7)

ಹೀಗಾಗಿ 2026ರ ಏಷ್ಯನ್ ಗೇಮ್ಸ್ ಅವರಿಗೆ ಕೇವಲ ಮತ್ತೊಂದು ಟೂರ್ನಿ ಆಗಿರಲಿಲ್ಲ; ಮೂರು ವರ್ಷಗಳ ಹಿಂದಿನ ಅಪೂರ್ಣ ಅಧ್ಯಾಯಕ್ಕೆ ಉತ್ತರ ಕೊಡುವ ವೇದಿಕೆಯಾಗಿತ್ತು. ಅಂತಿಮ ಸುತ್ತಿಗೆ ಮೂರು ಶಾಟ್‌ಗಳ ಮುನ್ನಡೆಯೊಂದಿಗೆ ಇಳಿದಿದ್ದ ಪ್ರಣವಿಗೆ ಮೂರನೇ ಹೋಲ್‌ನಲ್ಲೇ ಟ್ರಿಪಲ್ ಬೋಗಿ ಬಂದು ದೊಡ್ಡ ಆಘಾತ ನೀಡಿತು. ಒಂದು ಕ್ಷಣದಲ್ಲಿ ಮುನ್ನಡೆ ಕಳೆದುಹೋದರೂ ಅವರು ಒತ್ತಡಕ್ಕೆ ಕುಗ್ಗಲಿಲ್ಲ. ನಂತರ ಮೂರು ಬರ್ಡಿಗಳನ್ನು ದಾಖಲಿಸಿ, ಉಳಿದ 15 ಹೋಲ್‌ಗಳನ್ನು ಮೂರು-ಅಂಡರ್‌ನಲ್ಲಿ ಮುಗಿಸಿ ಫೈನಲ್ ರೌಂಡ್‌ನಲ್ಲಿ ಈವನ್-ಪಾರ್ 70 ಆಡಿದರು. ಅಂತಿಮವಾಗಿ 15-ಅಂಡರ್ 265ರೊಂದಿಗೆ ಕೇವಲ ಒಂದು ಶಾಟ್ ಅಂತರದಲ್ಲಿ ಚಿನ್ನವನ್ನು ತಮ್ಮದಾಗಿಸಿಕೊಂಡರು ಇಷ್ಟಕ್ಕೇ ಪ್ರಣವಿಯ ಸಾಧನೆ ಮುಗಿದಿಲ್ಲ. ಅದಿತಿ ಅಶೋಕ್ ಮತ್ತು ದೀಕ್ಷಾ ದಾಗರ್ ಅವರೊಂದಿಗೆ ಭಾರತ ಮಹಿಳಾ ತಂಡವನ್ನು ಮುನ್ನಡೆಸಿದ ಪ್ರಣವಿ, ತಂಡ ವಿಭಾಗದಲ್ಲೂ ಬೆಳ್ಳಿ ಪದಕ ಗೆದ್ದರು. ಭಾರತದ ತಂಡದ ಒಟ್ಟು ಸ್ಕೋರ್ 14-ಅಂಡರ್ 546 ಆಗಿದ್ದರೆ, ಚೀನಾ 22-ಅಂಡರ್ 538ರೊಂದಿಗೆ ಚಿನ್ನ ಗೆದ್ದಿತು. ಹೀಗಾಗಿ ಒಂದೇ ಏಷ್ಯನ್ ಗೇಮ್ಸ್‌ನಲ್ಲಿ ಪ್ರಣವಿಯ ಕಂಠಕ್ಕೆ ಚಿನ್ನವೂ, ಬೆಳ್ಳಿಯೂ ಒಟ್ಟಿಗೆ ಸೇರಿತು.

Pranavi urs (8)

ಇದು ಕೇವಲ ಮೈಸೂರಿನ ಗೆಲುವಲ್ಲ, ಭಾರತೀಯ ಮಹಿಳಾ ಗಾಲ್ಫ್‌ನ ಹೊಸ ಅಧ್ಯಾಯ. ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ ವೈಯಕ್ತಿಕ ಗಾಲ್ಫ್ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಇತಿಹಾಸವನ್ನು ಪ್ರಣವಿ ಬರೆದಿದ್ದಾರೆ. ವಿಶ್ವದ ಮಾಜಿ ನಂಬರ್‌ ಒನ್ ಹಾಗೂ ಅಂದಿನ ವಿಶ್ವ ನಂ.6 ಆಟಗಾರ್ತಿ ಯಿನ್ ರುಯೋನಿಂಗ್ ಅವರಂತಹ ಪ್ರಬಲ ಸ್ಪರ್ಧಿಗಳ ಎದುರು ಈ ಗೆಲುವು ಬಂದಿರುವುದು ಸಾಧನೆಯ ಮಹತ್ವವನ್ನು ಇನ್ನಷ್ಟು ಹೆಚ್ಚಿಸಿದೆ. ದೇಶದ ಕ್ರೀಡಾ ಇತಿಹಾಸದಲ್ಲಿ ಇಂದು ಪ್ರಣವಿ ಅರಸ್​ ಹೆಸರು ಶಾಶ್ವತವಾಗಿದೆ.

Pranavi urs (1)

“ಏಷ್ಯನ್​ ಗೇಮ್ಸ್​ನಲ್ಲಿ ಕಠಿಣ ಸ್ಪರ್ಧೆ ಇದ್ದು, ಸತತ ಅಭ್ಯಾಸ ಹಾಗೂ ಕೋಚ್​ಗಳ ಮಾರ್ಗದರ್ಶನದಿಂದ ಗೆಲುವು ಸಾಧ್ಯವಾಯಿತು. ಮುಂದೇನಿದ್ದರೂ 2028ರ ಒಲಿಂಪಿಕ್ಸ್​ಗೆ ಸಿದ್ಧತೆ” ಎನ್ನುತ್ತಾರೆ ಪ್ರಣವಿ ಅರಸ್​.

Pranavi urs (9)

“ಏಷ್ಯನ್ ಗೇಮ್ಸ್​ಗಾಗಿ ನಿರಂತರ ಅಭ್ಯಾಸ ನಡೆಸಿದ್ದೆ. ನಿತ್ಯ ಐದಾರು ತಾಸು ಮೈದಾನದಲ್ಲಿ ಬೆವರು ಹರಿಸುವ ಜೊತೆಗೆ ಜಿಮ್​ನಲ್ಲಿ ವರ್ಕೌಟ್​ ಹಾಗೂ ಮನಃಶಾಸ್ತ್ರಜ್ಞರ ಜೊತೆ ಸಂವಾದ ನಡೆಸುತ್ತಿದ್ದೆ. ಮೈಸೂರಿನ ಗಾಲ್ಫ್​ ಅಂಗಳ ನನ್ನ ಎರಡನೇ ತವರಾಗಿತ್ತು. ಜೂನಿಯರ್​ ಟೂರ್ನಿಗಳು ಹಾಗೂ ಆರಂಭಿಕ ಶಿಬಿರಗಳು ನನ್ನ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿವೆ” ಎಂದಿದ್ದಾರೆ ಪ್ರಣವಿ.

BoX

Pranavi urs (2)

ಮಿಲ್ಖಾ ಸಿಂಗ್​ ಪ್ರೇರಣೆ

ಕ್ರೀಡಾ ಜೀವನಕ್ಕೆ ಪ್ರೇರಕವಾದ ಮಿಲ್ಖಾ ಸಿಂಗ್​ ಅವರೊಂದಿಗಿನ ಒಡನಾಡವನ್ನು ಸ್ಮರಿಸಿಕೊಳ್ಳುವ ಪ್ರಣವಿ ಅವರ ತಾಯಿ ಕೈವಲ್ಯ ಅರಸ್​, ಪ್ರಣವಿ ಚಿಕ್ಕವಳಿದ್ದಾಗ ಮಿಲ್ಖಾಸಿಂಗ್​ ಅವರ ಮನೆಗೆ ಭೇಟಿ ನೀಡಿದ್ದೆವು. “ನೀನು ನನ್ನನ್ನು ಗೌರವಿಸುವುದನ್ನು ನೋಡಿ ಖುಷಿಪಡುವುದಷ್ಟೇ ಅಲ್ಲ, ಮುಂದೆ ನನ್ನಂತೆಯೇ ರಾಷ್ಟ್ರಮಟ್ಟದಲ್ಲಿ ಗೆದ್ದು ಭಾರತಕ್ಕೆ ಚಿನ್ನದ ಪದಕ ತಂದುಕೊಡಬೇಕು ಎಂದು ಮಿಲ್ಖಾಸಿಂಗ್ ಪ್ರಣವಿಗೆ ಹಾರೈಸಿದ್ದರು”. ಅವರ ಆಶೀರ್ವಾದ ಇಂದು ಫಲಿಸಿದೆ ಎಂದು ಹೇಳಿದ್ದಾರೆ.

Pranavi urs (3)

************************

ಬಾಕ್ಸ್​:

ಶ್ರೀಮಂತರ ಕ್ರೀಡೆಯಲ್ಲ

ಗಾಲ್ಫ್​ ಶ್ರೀಮಂತ ಕ್ರೀಡೆ ಎನ್ನುವುದು ಸರಿಯಲ್ಲ. ಆಸಕ್ತಿ ಹಾಗೂ ಸತತ ಪ್ರಯತ್ನವಿದ್ದರೆ ಎಲ್ಲ ವರ್ಗದವರೂ ತೊಡಗಿಸಿಕೊಳ್ಳಬಹುದು. ಆರಂಭದಲ್ಲಿ ದುಬಾರಿ ಎನಿಸಿದರೂ ಒಮ್ಮೆ ಅಂಗಳಕ್ಕಿಳಿದ ನಂತರ ಅಗತ್ಯವಾದ ಮಾರ್ಗದರ್ಶನ ಮತ್ತು ಪ್ರೋತ್ಸಾಹ ತಾನಾಗಿಯೇ ದೊರೆಯುತ್ತದೆ.

Pranavi urs (1)

ಏಷ್ಯನ್​ ಗೇಮ್ಸ್​ನಂತಹ ದೊಡ್ಡ ವೇದಿಕೆಗಳಲ್ಲಿ ವಿಶ್ವದ ಅಗ್ರ ಶ್ರೇಯಾಂಕಿತ ಕ್ರೀಡಾಪಟುಗಳ ಸವಾಲನ್ನು ಎದುರಿಸಲು ನಿರಂತರ ತರಬೇತಿ ಮತ್ತು ಮಾನಸಿಕ ಸಿದ್ಧತೆ ನೆರವಾಯಿತು. ಉದಯೋನ್ಮುಖ ಆಟಗಾರರಿಗೆ ಉತ್ತಮ ತರಬೇತಿ ಸೌಲಭ್ಯ ಹಾಗೂ ಮೂಲಸೌಕರ್ಯ ಕಲ್ಪಿಸಿದರೆ ದೇಶದಿಂದ ಮತ್ತಷ್ಟು ಪ್ರತಿಭೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸಾಧ್ಯವಾಗುತ್ತದೆ” ಎನ್ನುತ್ತಾರೆ ಪ್ರಣವಿ ಅರಸ್​.

Pranavi urs (1)

**********************

ಕ್ರೀಡಾ ಕುಟುಂಬ

ಪ್ರಣವಿ ಅರಸ್​ ಅವರದ್ದು ಕ್ರೀಡಾ ಕುಟುಂಬ. ಅವರ ಸಾಧನೆಗೆ ಪರೋಕ್ಷವಾಗಿ ಪ್ರೇರಣೆಯೂ ಇದೆ. ತಂದೆ ಶರತ್​ ಚಂದ್ರರಾಜೆ ಅರಸ್​, ಸಹೋದರ ಸಮರ್ಥ್​ ಅರಸ್​ ಕೂಡಾ ಗಾಲ್ಫರ್​. ತಾಯಿ ರಾಜ್ಯಮಟ್ಟದ ಖೋ ಖೋ ಪಟು. ಅಜ್ಜ ಸುಬ್ರಹ್ಮಣ್ಯರಾಜೆ ಅರಸ್​ ಹಾಗೂ ಅಜ್ಜಿ ಚಂದ್ರಭಾಗ ಅರಸ್​ ಕೂಡಾ ರಾಷ್ಟ್ರ ಮಟ್ಟದ ಅಥ್ಲಿಟ್​ ಆಗಿದ್ದವರು.

Pranavi urs (3)

*************************

ಕೋಟ್ಸ್​:

“ಗಾಲ್ಫ್​ನಲ್ಲಿ ನಾವು ಮತ್ತೊಬ್ಬ ಆಟಗಾರನ ವಿರುದ್ಧ ಮಾತ್ರವಲ್ಲದೆ, ನಮ್ಮ ವಿರುದ್ಧವೂ ಹಾಗೂ ಗಾಲ್ಫ್​ ಕೋರ್ಟ್​ ವಿರುದ್ಧವೂ ಸ್ಪರ್ಧಿಸುತ್ತಿರುತ್ತೇವೆ. ಹಾಗಾಗಿ ಏಕಾಗ್ರತೆ, ಸ್ವಯಂ ನಿಯಂತ್ರಣ, ಪ್ರಾಮಾಣಿಕತೆ ಈ ಕ್ರೀಡೆಯಲ್ಲಿ ಬಹಳ ಮುಖ್ಯ. ನಾನು ಈ ಸೂಕ್ಷ್ಮತೆಗಳನ್ನು ಅರಿತು ರೂಢಿಸಿಕೊಂಡಿದ್ದು ಈ ಗೆಲುವಿಗೆ ಕಾರಣವಾಯಿತು.”

  • ಪ್ರಣವಿ ಅರಸ್​, ಚಿನ್ನದ ಪದಕ ವಿಜೇತೆ

***************************

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ