ಕಥೆ – ಸವಿತಾ ರಮೇಶ್
ಮಧ್ಯಮ ವರ್ಗದ ಸಾಂಸಾರಿಕ ಜೀವನದ ಜಂಜಾಟಗಳಿಗೆ ಸಿಲುಕಿ ಶ್ರವಂತಿ ತತ್ತರಿಸಿ ಹೋಗಿದ್ದಳು. ಪತಿಯ ಅಕಾಲಿಕ ಮರಣ, ಮುಂದೆ ಮಗಳು ಮದುವೆಯಾಗಿ ಹೋದನಂತರ ಇವಳು ಸಂಪೂರ್ಣ ಏಕಾಂಗಿಯಾದಳು. ಮುಂದೆ ಶ್ರವಂತಿಯ ಭವಿಷ್ಯ……?
ಶ್ರವಂತಿ ಟೈಮ್ ನೋಡುತ್ತಾ ಬೇಗ ಮನೆಗೆಲಸ ಮುಗಿಸುತ್ತಿದ್ದಳು. ಇಂದು ಹತ್ತು ಗಂಟೆಗೆ ಒಂದು ಕಾಲೇಜಿನಲ್ಲಿ ಇಂಟರ್ ವ್ಯೂ ಇತ್ತು. `ದೇವರೇ ಈ ಕಾಲೇಜಿನಲ್ಲಿ ಕೆಲಸ ಸಿಕ್ಕುವ ಹಾಗೆ ಮಾಡು. ಮನೆಗೂ ಹತ್ತಿರವಿದೆ,’ ಎಂದು ಯೋಚಿಸುತ್ತಾ ಬೇಗ ಕೆಲಸ ಮುಗಿಸಿ ತಲೆ ಬಾಚಿಕೊಳ್ಳಲು ಕನ್ನಡಿ ಮುಂದೆ ನಿಂತಳು.`ಎಷ್ಟೊಂದು ಬಿಳಿ ಕೂದಲು. ಈ ವಯಸ್ಸಿನಲ್ಲಿ ನನ್ನನ್ನು ಕೆಲಸಕ್ಕೆ ತೆಗೆದುಕೊಳ್ತಾರಾ…..? ಈ ಪ್ರಯತ್ನ ಮಾಡೋಣ. ಅಣ್ಣ ಮ್ಯಾನೇಜ್ ಮೆಂಟ್ ಬಳಿ ಮಾತನಾಡಿದ್ದೇನೆ ಎಂದಿದ್ದಾನೆ. ಹೇಗೂ ತನಗೆ ಕಾಲೇಜ್ ಹಾಗೂ ಟ್ಯುಟೋರಿಯಲ್ ನಲ್ಲಿ ಪಾಠ ಮಾಡಿ ಅಭ್ಯಾಸವಿದೆ,’ ಎಂದು ಯೋಚಿಸುತ್ತಲೇ ರೆಡಿಯಾದಳು.
ಶ್ರವಂತಿ ಹಾಗೂ ಮಾಧವನಿಗೆ ಇಬ್ಬರೂ ಹೆಣ್ಣುಮಕ್ಕಳು. ಶ್ರವಂತಿಯ ಗಂಡ ಮಾಧವನಿಗೆ ಒಳ್ಳೆಯ ಕೆಲಸವಿರಲಿಲ್ಲ. ಯಾವುದೋ ಪ್ರೈವೇಟ್ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ. ಬರುವ ಸಂಬಳ ಏನೇನಕ್ಕೂ ಸಾಲುತ್ತಿರಲಿಲ್ಲ. ಡಿಗ್ರಿ ಮುಗಿಸಿದ್ದ ಶ್ರವಂತಿ ಸ್ಕೂಲಿನಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದಳು.
ಬರೀ ಡಿಗ್ರಿಯಾದರೆ ಸ್ಕೂಲ್ ನಲ್ಲಿ ಕೆಲಸ ಸಿಕ್ಕುವುದು ಕಷ್ಟ. ಅಲ್ಲದೆ ಶ್ರವಂತಿ ಪಾಠ ಮಾಡುವುದು ಸಂಸ್ಕೃತವಾದ ಕಾರಣ, ವಾರದಲ್ಲಿ ಮೂರು ದಿನ ಮಾತ್ರ ಕೆಲಸ, ಕಡಿಮೆ ಸಂಬಳ ಸಿಗುತ್ತಿತ್ತು. ಆದರೂ ಹೋಗುತ್ತಿದ್ದಳು. ಸ್ಕೂಲಿನಿಂದ ಮಕ್ಕಳು ಬಂದ ನಂತರ ಪರಿಚಯದವರ ಅಕ್ಕಪಕ್ಕದವರ ಮನೆಯಲ್ಲಿ ಇರಲು ವ್ಯವಸ್ಥೆ ಮಾಡಿದ್ದಳು. ಹೀಗೆ ಸಾಕು ಸಾಲದ ರೀತಿಯಲ್ಲಿ ಸಂಸಾರ ಮಾಡುತ್ತಿದ್ದರು.
ಈ ಸಮಯದಲ್ಲಿಯೇ ಕಾಲೇಜಿನಲ್ಲಿ ಪಾಠ ಮಾಡುವ ಆಸೆಯಿಂದ ಸಂಸ್ಕೃತದಲ್ಲಿ ಪ್ರೈವೇಟ್ ನಲ್ಲಿ ಪರೀಕ್ಷೆ ಕಟ್ಟಿ ಮಾಸ್ಟರ್ ಡಿಗ್ರಿ ಮುಗಿಸಿಕೊಂಡಳು. ಸಣ್ಣ ಸಣ್ಣ ಪ್ರೈವೇಟ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಳು. ಒಂದೇ ಕಡೆ ಪರ್ಮನೆಂಟ್ ಕೆಲಸ ಸಿಕ್ಕಿರಲಿಲ್ಲ. ವರ್ಷಾವರ್ಷ ಬೇರೆ ಬೇರೆ ಕಾಲೇಜುಗಳಿಗೆ ಹೋಗಬೇಕಿತ್ತು.
ಗಂಡನ ಸಂಬಳ, ಇವಳದ್ದೂ ಸೇರಿ ಹೇಗೋ ಸಾಕಾಗುತ್ತಿತ್ತು. ಮಕ್ಕಳಿಗೆ ಒಳ್ಳೆಯ ಎಜುಕೇಶನ್ ಕೊಡಿಸಬೇಕು ಎಂದು ಬ್ಯಾಂಕಿನಲ್ಲಿ ಲೋನ್ ಮಾಡಿ ದೊಡ್ಡವಳನ್ನು ಎಂಜಿನಿಯರಿಂಗ್ ಗೆ ಸೇರಿಸಿದರು.
ಅಷ್ಟರಲ್ಲಿ ಇವರಿಗೂ ವಯಸ್ಸಾಗುತ್ತಿದ್ದಂತೆ, ಕೆಲಸ ಮಾಡಲು ಕಷ್ಟವಾಗುತ್ತಿತ್ತು. ಕಾಲೇಜು, ಅಲ್ಲಿಯ ರಾಜಕೀಯ ಕಂಡು ಒಮ್ಮೊಮ್ಮೆ ಜೀವನವೇ ಬೇಸರವಾಗುತ್ತಿತ್ತು. ಅಟ್ಲೀಸ್ಟ್ ಮಗಳಾದರೂ ಓದಿ ಅವಳಿಗೊಂದು ಒಳ್ಳೆಯ ಕೆಲಸವಾದರೆ ಸಾಕು ಎಂದು ಕಾಯುತ್ತಿದ್ದರು. ಅಂದುಕೊಂಡಂತೆ ಮಗಳು ಎಂಜಿನಿಯರಿಂಗ್ ಮುಗಿಸಿದಳು. ಚಿಕ್ಕವಳು ಇನ್ನೂ ಒಂಬತ್ತನೇ ಕ್ಲಾಸ್ ಓದುತ್ತಿದ್ದಳು. ದೊಡ್ಡ ಮಗಳಿಗೆ ಇನ್ನೂ ಕೆಲಸವಾಗಿರಲಿಲ್ಲ.
ಅಷ್ಟರಲ್ಲಿ ಒಂದು ದಿನ ಮಾಧವ ಆಫೀಸ್ ನಲ್ಲಿ ತಲೆಸುತ್ತು ಬಂದು ಬಿದ್ದುಬಿಟ್ಟ. ಹಾಸ್ಪಿಟಲ್ ಗೆ ಅಡ್ಮಿಟ್ ಮಾಡಿ ಇವರಿಗೆ ಎಂದು ಫೋನ್ ಮಾಡಿದರು. ನಾಲ್ಕು ದಿನ ಆಸ್ಪತ್ರೆಯಲ್ಲಿ ಇದ್ದ ಮಾಧವ ಹೆಂಡತಿ ಮಕ್ಕಳನ್ನು ಅನಾಥರನ್ನಾಗಿಸಿ ಹೋಗಿಬಿಟ್ಟ.
ಶ್ರವಂತಿ ಈಗ ಎರಡು ವರ್ಷದಿಂದ ಶುಗರ್, ಬಿಪಿ ಎಲ್ಲಾ ಜಾಸ್ತಿಯಾಗಿ ಕೆಲಸ ಮಾಡಲು ಕಷ್ಟವಾಗುತ್ತದೆ ಎಂದು ಕೆಲಸ ಬಿಟ್ಟು ಮನೆಯಲ್ಲಿ ನಾಲ್ಕು ಮಕ್ಕಳಿಗೆ ಪಾಠ ಮಾಡಿ ಸ್ವಲ್ಪ ಹಣ ಸಂಪಾದಿಸುತ್ತಿದ್ದಳು. ಈಗ ಮಗಳಿಗೆ ಇನ್ನೂ ಕೆಲಸವಾಗಿರಲಿಲ್ಲ. ಮಾಧವನ ಸಂಬಳ ಬೇರೆ ಇಲ್ಲ. ಆಕಾಶ ಕಳಚಿ ತಲೆಯ ಮೇಲೆ ಬಿದ್ದಂತಾಯಿತು.
ಕೂಡಿಟ್ಟ ಹಣದಲ್ಲಿ ಸ್ವಲ್ಪ ಮಾಧವನ ಕಾರ್ಯಗಳಿಗೆ ಖರ್ಚಾಯಿತು. ಮುಂದೆ ಜೀವನ ಹೇಗೆ….? ಮಗಳಿಗಾದರೂ ಕೆಲಸ ಸಿಕ್ಕಿದ್ದರೆ ಹೇಗೋ ನಡೆಯುತ್ತದೆ ಅಂದುಕೊಂಡು ಇನ್ನಷ್ಟು ಮಕ್ಕಳಿಗೆ ಪಾಠ ಮಾಡುತ್ತಾ, ಮತ್ತೆ ಕೆಲಸ ಹುಡುಕುತ್ತಿದ್ದಳು.
ಶ್ರವಂತಿಗೆ ತಂದೆ ತಾಯಿ ಇರಲಿಲ್ಲ. ಇವರು ಇಬ್ಬರು ಅಣ್ಣಂದಿರು ಇವಳಿಗೆ ಸಹಾಯ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಮಗಳು ಹೇಗಿದ್ದರೂ ಎಂಜಿನಿಯರ್. ಅವಳಿಗೆ ಕೆಲಸ ಸಿಗುವವರೆಗೂ ಹೇಗೋ ಕೂಡಿಟ್ಟ ಹಣದಲ್ಲಿ ಜೀವನ ನಡೆಸೋಣ ಎಂದು ಧೈರ್ಯವಾಗಿದ್ದಳು.
ಆದರೆ ಅವಳ ಮಗಳು ಪುಣ್ಯಾ ಕಾಲೇಜಿಗೆ ಹೋಗುತ್ತಿರುವಾಗಲೇ ಒಬ್ಬ ಹುಡುಗನನ್ನು ಲವ್ ಮಾಡುತ್ತಿದ್ದಳು. ಅವನು ಅನ್ಯಜಾತಿಯ ಹುಡುಗ. ಅಮ್ಮ ಅಪ್ಪ ಒಪ್ಪುವುದಿಲ್ಲ ಎಂದು ಅವರಿಗೆ ಹೇಳಿರಲಿಲ್ಲ. ಆದರೆ ಈಗ ಹುಡುಗನಿಗೆ ವಿದೇಶದಲ್ಲಿ ಕೆಲಸ ಸಿಕ್ಕಿತು. ಅವನ ಮನೆಯಲ್ಲಿ ಮದುವೆ ಮಾಡಿ ವಿದೇಶಕ್ಕೆ ಕಳುಹಿಸುತ್ತೇವೆ ಎಂದು ಹೇಳಿದರು.
ಅವನು ಪುಣ್ಯಾಳಿಗೆ ಮನೆಯಲ್ಲಿ ತಮ್ಮ ವಿಷಯ ಮಾತನಾಡುವಂತೆ ಬಲವಂತ ಮಾಡಿದ. ಮಗಳು ಬಂದು ಅಮ್ಮನ ಬಳಿ ಈ ವಿಷಯ ಹೇಳಿದಳು.
“ಪುಣ್ಯಾ…. ಈ ಸಮಯದಲ್ಲಿ ನಾನು ಹೇಗೆ ಮದುವೆ ಮಾಡಲಿ….? ನೀನೇ ಯೋಚಿಸು, ನಿನಗೆ ಕೆಲಸ ಸಿಕ್ಕರೆ ನೀನು ತಂಗಿಯನ್ನು ಒಂದು ದಡ ಸೇರಿಸುತ್ತೀಯಾ…. ಮನೆಗೆ ನೀನೇ ಆಧಾರವಾಗುತ್ತೀಯ ಎಂದು ಯೋಚಿಸಿದ್ದೆ. ನೀನೂ ನಮ್ಮನ್ನು ಬಿಟ್ಟು ಹೋದರೆ ನಾವು ಏನು ಮಾಡಬೇಕು…..?” ಎಂದು ಬೇಸರ ಮಾಡಿಕೊಂಡಳು ಶ್ರವಂತಿ.
“ಅಮ್ಮಾ…. ನೀನೇನು ಯೋಚಿಸಬೇಡ. ನಾನು ವಿದೇಶಕ್ಕೆ ಹೋದ ಮೇಲೆ ಕೆಲಸಕ್ಕೆ ಸೇರುತ್ತೇನೆ. ಅಲ್ಲಿ ತುಂಬಾ ಸಂಬಳ ಸಿಗುತ್ತದೆ. ಮಗನಿಗೆ ನಾನೇ ಹಣ ಕಳುಹಿಸುತ್ತೇನೆ,” ಎಂದಳು ಪುಣ್ಯಾ.
“ಅದು ಸರಿಯಮ್ಮಾ…… ಆದರೆ ಈಗ ಮದುವೆಗೆ ಹಣವನ್ನು ಹೇಗೆ ಹೊಂದಿಸಲಿ….? ಇನ್ನು ಎರಡು ಮೂರು ವರ್ಷ ಬಿಟ್ಟು ನಂತರ ನೀನು ಮದುವೆಯಾದರೆ ಒಳ್ಳೆಯದು.”
“ಅಪ್ಪನ ಇನ್ಶೂರೆನ್ಸ್ ಹಣ ಒಂದು ಲಕ್ಷ ಬಂದಿದೆಯಲ್ಲಾ…. ಅದನ್ನು ಹುಡುಗನ ಮನೆಯವರಿಗೆ ಕೊಟ್ಟರೆ ಅವರೇ ಮದುವೆ ಮಾಡಿಕೊಳ್ಳುತ್ತಾರೆ. ನಮಗೆ ಬೇರೆ ಯಾವುದೇ ಖರ್ಚು ಇರುವುದಿಲ್ಲ.”
“ಓಹೋ…. ಎಲ್ಲಾ ಯೋಚಿಸಿಯೇ ನನ್ನ ಬಳಿ ಬಂದಿದ್ದೀಯಾ….?” ಶ್ರವಂತಿ ಚಿಂತೆಯಿಂದ ನುಡಿದಳು.
ಇಷ್ಟು ಬೇಗ ಮದುವೆ ಬೇಡ… ಅಮ್ಮ ತಂಗಿಯ ಬಗ್ಗೆ ಯೋಚಿಸು ಎಂದು ಶ್ರವಂತಿಯ ಗೆಳತಿಯರು, ಅವಳ ಅಣ್ಣಂದಿರು ಎಲ್ಲರೂ ಪುಣ್ಯಾಳ ಬಳಿ ಮಾತನಾಡಿದರು.
ಆದರೆ ಅವಳದು ಒಂದೇ ಹಠ. “ಈಗ ಮದುವೆಯಾಗದಿದ್ದರೆ ನಾನು ಮುಂದೆ ಮದುವೆಯನ್ನೇ ಆಗುವುದಿಲ್ಲ. ಆ ಹುಡುಗನಿಗೆ ಅವರ ಮನೆಯಲ್ಲಿ ಬೇರೆ ಮದುವೆ ಮಾಡುತ್ತಾರೆ. ಅಲ್ಲದೆ, ಈಗ ಒಂದು ವರ್ಷದಿಂದ ಇಂಡಿಯಾದಲ್ಲಿ ಕೆಲಸಕ್ಕಾಗಿ ಎಷ್ಟೊಂದು ಕಂಪನಿಗೆ ಅಲೆದಾಡಿದ್ದೇನೆ. ಇಲ್ಲಿ ಕೆಲಸ ಸಿಗಲಿಲ್ಲ. ಈಗ ನಾನು ಅವನನ್ನು ಮದುವೆಯಾದರೆ ಅವನದೇ ಖರ್ಚಿನಲ್ಲಿ ವಿದೇಶಕ್ಕೆ ಹೋಗಬಹುದು. ಅಲ್ಲಿ ಒಳ್ಳೊಳ್ಳೆಯ ಆಪರ್ಚುನಿಟಿ ಇರುತ್ತದೆ. ಆಗ ಅಮ್ಮನಿಗೆ ಹಣ ಕಳುಹಿಸುತ್ತೇನೆ.”
ಅವಳು ಮದುವೆಯಾಗಲು ನಿರ್ಧಾರ ಮಾಡಿಬಿಟ್ಟಿದ್ದಳು. ಯಾರ ಮಾತು, ಉಪದೇಶಗಳೂ ಅವಳ ತಲೆಗೆ ಹೋಗುತ್ತಿರಲಿಲ್ಲ.
ಮತ್ತೆ ಒಂದು ತಿಂಗಳಲ್ಲೇ ಪುಣ್ಯಾಳ ಮದುವೆಯಾಗಿತ್ತು. ಅವಳು ವಿದೇಶಕ್ಕೂ ಹೋಗಿಯೂ ಆಯಿತು. ಇನ್ನು ಅವಳಿಗೆ ಕೆಲಸ ಸಿಕ್ಕಿ ಅವಳು ಹಣ ಕಳುಹಿಸುವುದು ಯಾವಾಗಲೋ…. ಇದ್ದಬದ್ದ ಹಣವನ್ನೆಲ್ಲಾ ಅವಳ ಮದುವೆಗೆ ಖರ್ಚು ಮಾಡಿಯಾಗಿತ್ತು.
ಶ್ರವಂತಿ ಗಂಡ ಇದ್ದಾಗಲೂ ಲೆಕ್ಕಾಚಾರದ ಜೀವನ ನಡೆಸಿ ಸ್ವಲ್ಪ ಹಣ ಉಳಿಸಿದ್ದಳು. ಅದು ಈ ರೀತಿಯಾಗಿ ಖಾಲಿಯಾಗಿತ್ತು. ಮತ್ತೆ ಅದೇ ಸ್ಥಿತಿ ಒಂದು ಹೊತ್ತಿನ ಊಟಕ್ಕೂ ಪರದಾಟ.
ಶ್ರವಂತಿಯ ಕಷ್ಟವನ್ನು ನೋಡಿದ ಅವಳ ಗೆಳತಿ ವೀಣಾ, ಮರುಮದುವೆಯಾಗಲು ಸೂಚಿಸಿದಳು.
“ನನಗೆ ಈಗಾಗಲೇ 55 ವರ್ಷ. ಈ ವಯಸ್ಸಿನಲ್ಲಿ ಮರುಮದುವೆಯಾ….? ತಮಾಷೆ ಮಾಡುತ್ತೀಯಾ….?”
“ತಮಾಷೆ ಅಲ್ಲಾ….. ಶ್ರವಂತಿ ನಿಜವಾಗಲೂ ಹೇಳುತ್ತಿದ್ದೇನೆ. ನಮ್ಮ ಆಫೀಸಿನಲ್ಲಿ ಒಬ್ಬರು ವಿಧುರ ಇದ್ದಾರೆ. ಅವರಿಗೆ ರಿಟೈರ್ಡ್ ಆಗಲು ಇನ್ನೂ ಎರಡು ವರ್ಷ ಸಮಯವಿದೆ. ಅವರಿಗೆ 24 ವರ್ಷದ ಒಬ್ಬ ಮಗನಿದ್ದಾನೆ. ಹೆಂಡತಿ ತೀರಿಹೋಗಿ ಒಂದು ವರ್ಷವಾಯಿತು. ಪಾಪ ಅಡುಗೆ, ಮನೆ ಕೆಲಸಕ್ಕೆ ತುಂಬಾ ಒದ್ದಾಡುತ್ತಿದ್ದಾರೆ. ಅದಕ್ಕೆ ಮತ್ತೆ ಮದುವೆಯಾಗಲು ಯೋಚಿಸಿದ್ದಾರೆ.”
“ಅವರು ಗಂಡಸರು. ಅವರಿಗೆ ಮತ್ತೆ ಮದುವೆಯಾದರೆ ಯಾರೂ ಏನೂ ಹೇಳುವುದಿಲ್ಲ. ಸಮಾಜ ಒಪ್ಪಿಗೆ ನೀಡುತ್ತದೆ. ಆದರೆ ನಾನು ಇಬ್ಬರು ಹೆಣ್ಣು ಮಕ್ಕಳಿರುವವಳು, ಅದರಲ್ಲೂ 55 ವರ್ಷ. ಈಗ ಮದುವೆಯಾದರೆ ಸಮಾಜ ಏನನ್ನನ್ನುತ್ತದೆ. ಛೇ….. ಖಂಡಿತಾ ಈ ವಿಷಯ ಬಿಟ್ಟುಬಿಡು. ಬೇರೆ ಏನಾದರೂ ಸಲಹೆ ಇದ್ದರೆ ಕೊಡು,” ಎಂದಳು ಶ್ರವಂತಿ.
ಆದರೆ ಅವಳ ಗೆಳತಿ ಬಹಳ ಬಲವಂತ ಮಾಡಿದಾಗ, ಶ್ರವಂತಿ ತನ್ನ ಅಣ್ಣಂದಿರ ಬಳಿ ವಿಷಯ ಹೇಳಿದಳು.
“ಇದೇನಿದು ಈ ವಯಸ್ಸಿನಲ್ಲಿ ಮದುವೆಯಾ….? ಈ ವಿಷಯ ಹೇಳಲು ನಿನಗೆ ನಾಚಿಕೆ ಆಗುವುದಿಲ್ಲವೇ….? ಅಲ್ಲದೆ, ಈ ಚಿಕ್ಕ ಮಗಳನ್ನು ಮುಂದೆ ಯಾರು ಮದುವೆಯಾಗುತ್ತಾರೆ? ಅವಳ ಭವಿಷ್ಯದ ಬಗ್ಗೆಯೂ ನೀನು ಯೋಚಿಸಬೇಕು. ಹೇಗಿದ್ದರೂ ನಿನಗೆ ವಿದ್ಯೆ ಇದೆ. ನಾನು ಕಾಲೇಜಿನಲ್ಲಿ ಮಾತನಾಡಿದ್ದೇನೆ. ಅಲ್ಲಿ ಹೋಗಿ ಸೇರಿಕೋ,” ಎಂದರು.
ಶ್ರವಂತಿ ಇಂದು ಅಣ್ಣ ಹೇಳಿದ ಕಾಲೇಜಿಗೆ ಇಂಟರ್ ವ್ಯೂಗೆ ಹೊರಟಿದ್ದಳು. ಶ್ರವಂತಿಗೆ ಆ ಕೆಲಸ ಸಿಕ್ಕಿತು. ಆದರೆ ಅಲ್ಲಿ ಕೊಡುವ ಸಣ್ಣ ಸಂಬಳದಲ್ಲಿ ಇಬ್ಬರ ಜೀವನಕ್ಕೆ ಸಾಲುತ್ತಿರಲಿಲ್ಲ. ಮತ್ತೆ ಮನೆಯಲ್ಲಿ ಟ್ಯೂಶನ್ ಮಾಡತೊಡಗಿದಳು.
ದೊಡ್ಡ ಮಗಳಿಗೆ ಕೆಲಸ ಸಿಕ್ಕಿರಲಿಲ್ಲ. ಅವಳು ಡಿಪೆಂಡೆಂಟ್ ವೀಸಾದಲ್ಲಿ ವಿದೇಶಕ್ಕೆ ಹೋದಕಾರಣ ಅವಳಿಗೆ ಕೆಲಸ ಸಿಗುವುದು ಕಷ್ಟವಾಗಿತ್ತು. ಇನ್ನು ಅವಳು ಹಣ ಕಳಿಸುವುದು ದೂರದ ಮಾತು. ಗೆಳತಿ ವೀಣಾ ಮತ್ತೆ ಮತ್ತೆ ಮರು ಮದುವೆಗೆ ಒತ್ತಾಯ ಮಾಡುತ್ತಿದ್ದಳು.

“ಅವರಿಗೆ ಸ್ವಂತ ಮನೆ ಇದೆ. ಅಲ್ಲದೆ, ಸರ್ಕಾರಿ ಕೆಲಸ. ರಿಟೈರ್ಡ್ ಆದರೂ ಪೆನ್ಶನ್ ಬರುತ್ತದೆ. ಯಾವ ಯೋಚನೆ ಇರುವುದಿಲ್ಲ. ನಿನ್ನ ಮಗಳನ್ನು ತನ್ನ ಮಗಳಂತೆ ನೋಡಿಕೊಳ್ಳುತ್ತೇನೆ, ಎಂದು ಹೇಳಿದ್ದಾರೆ. ಅವರನ್ನು ಭೇಟಿ ಮಾಡಿಸುತ್ತೇನೆ,” ಎಂದು ಹೇಳಿದಳು. ಈ ವಿಷಯ ತಿಳಿದ ಅಣ್ಣಂದಿರು ಹಾಗೂ ಗಂಡನ ಮನೆಯವರು ಮರು ಮದುವೆ ಆಗುವುದು ಬೇಡ ಎನ್ನುತ್ತಿದ್ದರು. ಮತ್ತಿಬ್ಬರು ಗೆಳತಿಯರು ಸಹ, “ದುಡುಕಬೇಡ ಶ್ರವಂತಿ, ಯೋಚಿಸು. ಅವರು ಈಗ ತಮ್ಮ ಮನೆಯ ಕೆಲಸಕ್ಕೋಸ್ಕರ ಮದುವೆ ಮಾಡಿಕೊಳ್ಳಬಹುದು. ಮುಂದೆ ಆತನ ಮಗನಿಗೆ ಮದುವೆಯಾಗಿ ಸೊಸೆ ಬಂದರೆ ನಿನ್ನನ್ನು ಮನೆ ಬಿಟ್ಟು ಕಳುಹಿಸಿದರೆ…. ಆಗ ನಿನಗೆ ಇನ್ನೂ ವಯಸ್ಸಾಗಿರುತ್ತದೆ. ಆಗ ಕೆಲಸ ಮಾಡುವುದು ಕಷ್ಟ….” ಎಂದು ಹೇಳಿದರು.
`ಅವರುಗಳು ಹೇಳುವುದರಲ್ಲೂ ಅರ್ಥವಿದೆ. ನಾನು ಇನ್ನೊಂದು ಮದುವೆಯಾದರೆ ಸುಖವಾಗಿ ಇರುತ್ತೇನೆ ಎನ್ನುವುದಕ್ಕೆ ಏನು ಗ್ಯಾರಂಟಿ….? ಮುಂದೆ ಎರಡು ವರ್ಷಕ್ಕೆ ರಿಟೈರ್ಡ್ ಆಗುತ್ತಾರೆ. ಸ್ವಂತ ಮನೆ ಇದ್ದರೂ ಅದು ನಿನಗೆ ಸಿಗುವುದಿಲ್ಲ. ಅದು ಹೇಗಿದ್ದರೂ ಅವರ ಮಗನಿಗೆ ಸೇರುತ್ತದೆ. ಅವರ ಪೆನ್ಶನ್ ನಲ್ಲಿ ಸ್ವಲ್ಪ ಹಣ ಕೊಡಬಹುದು ಅಷ್ಟೇ….? ಸುಮ್ಮನೆ ಅವರ ಮನೆಯಲ್ಲಿ ಅಡುಗೆಯಳಾಗಿ ಇರುವುದಾಗುತ್ತದೆ,’ ಎಂದು ಅಣ್ಣಂದಿರು ಹೇಳಿದ್ದರು.
`ಕಷ್ಟದ ಸಮಯದಲ್ಲಿ ಯಾರೂ ಸರಿಯಾದ ಸಲಹೆ ಕೊಡುವುದಿಲ್ಲ. ನಾನೇ ಯೋಚಿಸಬೇಕು. ಎಲ್ಲರೂ ಹೇಳುವಂತೆ ಇನ್ನೊಂದು ಮದುವೆಯಾಗಿ ಸಮಾಜದವರ ಎದುರು ಅಪಹಾಸ್ಯಕ್ಕೆ ಈಡಾಗುವಂತಾದರೆ….. ಈಗ ನನಗೆ 55 ವರ್ಷ ಎಷ್ಟು ವರ್ಷ ಬದುಕಿರುತ್ತೇನೋ…? ಈ ಮಗಳು ದಡ ಸೇರುವ ತನಕ ಹೋರಾಡಿದರಾಯಿತು. ದೊಡ್ಡ ಮಗಳು ಕೆಲಸ ಸಿಕ್ಕಿದ ನಂತರ ಹಣ ಕಳುಹಿಸಬಹುದು. ಮತ್ತೆ ಮದುವೆ ಹೊಸ ಸಂಬಂಧ ಬೇಡವೇ ಬೇಡ,’ ಎಂದುಕೊಂಡಳು.
ಇನ್ನೊಂದು ಮನಸ್ಸು, `ವೀಣಾ ಹೇಳಿದಂತೆ ಮರುಮದುವೆಯಾದರೆ ನನ್ನ ಅದೃಷ್ಟ ಬದಲಾಗಬಹುದು….. ಮದುವೆಯಾದ ಮೇಲೆ ಹೇಗಿದ್ದರೂ ಅವರು ನನ್ನ ಗಂಡ, ಅವರ ಮನೆ ನನ್ನ ಮನೆಯಾಗುತ್ತದೆ. ಅವರು ಒಳ್ಳೆಯವರಾಗಿ ನಮ್ಮಿಬ್ಬರನ್ನು ಚೆನ್ನಾಗಿ ನೋಡಿಕೊಂಡರೆ…. ದೊಡ್ಡ ಮಗಳು ಸ್ವಾರ್ಥಿ…. ಅವಳು ಹಣ ಕಳುಹಿಸುತ್ತಾಳೆ ಎನ್ನುವುದು ಸುಳ್ಳು…..’
ಶ್ರವಂತಿಗೆ ಎರಡು ಮನಸ್ಸು. ಪರ್ಮನೆಂಟ್ ಕೆಲಸ ಇಲ್ಲದೆ, ತನ್ನಿಂದ ತಮ್ಮಿಬ್ಬರ ಜೀವನ ನಡೆಸಿ, ಈ ಮಗಳನ್ನು ದಡ ಸೇರಿಸಲು ಸಾಧ್ಯಾ….? ವೀಣಾ ಹೇಳಿದಂತೆ ಅವರನ್ನು ಮದುವೆಯಾದರೆ ತಾವಿಬ್ಬರೂ ಸುಖವಾಗಿ ಇರಬಹುದೇನೋ….? ಆದರೆ ಅಣ್ಣ ಹೇಳಿದಂತೆ ಆಗಿಹೋದರೆ…..
“ಆತ ಈ ವಯಸ್ಸಿನಲ್ಲಿ ಯಾಕೆ ಮರು ಮದುವೆಯಾಗುತ್ತಾರೆ ಗೊತ್ತಾ…..? ಮನೆಯಲ್ಲಿ ಅಡುಗೆಗೆ ಕೆಲಸದವರನ್ನು ಇಟ್ಟುಕೊಂಡರೆ, ಹತ್ತು ಸಾವಿರವಾದರೂ ಕೊಡಬೇಕು. ಇನ್ನೂ ಮನೆ ಕೆಲಸಕ್ಕೆ ಐದು ಸಾವಿರ…. ತಿಂಗಳಿಗೆ ಹದಿನೈದು ಸಾವಿರ ಖರ್ಚಾಗುತ್ತದೆ. ಅದಕ್ಕೆ ಸುಲಭವಾಗಿ ನಿನ್ನನ್ನು ಮದುವೆಯಾಗಲು ಪ್ಲಾನ್ ಮಾಡಿದ್ದಾರೆ. ನಿಮ್ಮಿಬ್ಬರ ಊಟ ತಿಂಡಿ ವಗೈರೆ ಮೂರು ಸಾವಿರಕ್ಕಿಂತ ಜಾಸ್ತಿ ಆಗುವುದಿಲ್ಲ. ಅಲ್ಲಿ ಸಂಬಳವಿಲ್ಲದ ಕೆಲಸದವಳಾಗಿ ಇರಬೇಕು,” ಎಂದು ಅಣ್ಣ ಹೇಳಿದ್ದರು.
ಇದ್ದರೂ ಇರಬಹುದು ಹಾಗೂ ಯೋಚಿಸಿರಬಹುದು. ಮತ್ತೆ ಮದುವೆ ಬೇಡ ಅಂತ ಎಷ್ಟು ಯೋಚಿಸಿದರೂ, ವೀಣಾ ಬಿಡಲಿಲ್ಲ. “ಇಂತಹ ಅವಕಾಶ ಕಳೆದುಕೊಳ್ಳಬೇಡ. ನೀನಲ್ಲದ್ದಿದ್ದರೆ ಇನ್ನೊಬ್ಬರು ಮದುವೆಯಾಗುತ್ತಾರೆ. ನೀನೊಮ್ಮೆ ಅವರನ್ನು ನೋಡು, ಅವರ ಮಾತು ಕೇಳು, ನಿನಗೆ ಇಷ್ಟವಾದರೆ ಮಾತ್ರ ಮದುವೆ. ನಿನಗೆ ಇಷ್ಟವಾಗದಿದ್ದರೆ ನಾನು ಬಲವಂತ ಮಾಡುವುದಿಲ್ಲ. ನೀನೊಮ್ಮೆ ಅವರನ್ನು ಭೇಟಿಯಾಗು,” ಎಂದು ಒಂದು ಭಾನುವಾರ ಅವರ ಮನೆಗೆ ಕರೆದುಕೊಂಡು ಹೋದಳು.
ಇವರಿಬ್ಬರನ್ನು ಸ್ವಾಗತಿಸಿದದ ಶೇಖರ್ ತಾವೇ ಒಳಗಡೆ ಹೋಗಿ ಕಾಫಿ ಮಾಡಿ ತಂದರು. ಶೇಖರ್ ನೋಡಲು ಐವತ್ತೆಂಟು ವರ್ಷದವರಂತೆ ಇರಲಿಲ್ಲ, ಇನ್ನೂ ಯಂಗಾಗಿ ತುಂಬಾ ಚೆನ್ನಾಗಿ ಕಾಣುತ್ತಿದ್ದರು.
“ನೀವಿಬ್ಬರೂ ಮಾತನಾಡಿ. ನಾನು ಆಚೆ ಇರುತ್ತೇನೆ,” ಎಂದಳು ವೀಣಾ.
“ಬೇಡ ಬೇಡ…. ನೀವು ಇಲ್ಲೇ ಇರಿ…..” ಎಂದ ಶೇಖರ್ ಮಾತನಾಡಲು ಶುರು ಮಾಡಿದರು.
“ನನ್ನ ಹೆಂಡತಿ ಹೋಗಿ ಎರಡು ವರ್ಷವಾಯಿತು. ಅಡುಗೆ, ತಿಂಡಿ, ಮನೆಗೆಲಸ ಹೇಗೋ ನಡೆದು ಹೋಗುತ್ತದೆ. ನಾನು ಇನ್ನೊಂದು ಮದುವೆಯಾಗಲು ಅದು ಕಾರಣವಲ್ಲ. ಇನ್ನೊಂದೆರಡು ವರ್ಷದಲ್ಲಿ ಮಗನಿಗೆ ಮದುವೆ ಆಗುತ್ತದೆ. ಸದ್ಯಕ್ಕೆ ಮಗ ಇಲ್ಲಿಯೇ ಕೆಲಸದಲ್ಲಿ ಇದ್ದಾನೆ. ಮುಂದೆ ಅವನು ಬೇರೆ ಊರಿಗೆ ಅಥವಾ ವಿದೇಶಕ್ಕೆ ಹೋಗಬಹುದು. ಆಗ ನಾನು ಒಂಟಿ ಆಗುತ್ತೇನೆ. ಈಗಿನ ಮಕ್ಕಳೇ ಹಾಗೇ, ಅವರದೇ ಬೇರೆ ಪ್ರಪಂಚ. ಅವರಿಗೂ ನಮಗೂ ಹೊಂದಾಣಿಕೆ ಕಡಿಮೆ ಆಗುತ್ತದೆ.
“ಈಗ ಆಫೀಸ್ ಇದೆ, ಹೇಗೋ ಸಮಯ ಕಳೆದುಬಿಡುತ್ತದೆ. ಮುಂದೆ ರಿಟೈರ್ಡ್ ಆದಮೇಲೆ ನನಗೆ ಒಂಟಿತನ ಬಾಧಿಸಬಾರದು ಎಂದು ಮದುವೆಯಾಗಲು ಯೋಚಿಸಿದೆ. ನನ್ನ ಕಷ್ಟ ಸುಖದಲ್ಲಿ ಭಾಗಿಯಾಗುವ ಕಂಪ್ಯಾನಿಯನ್ ಬೇಕೇ ಬೇಕು ಎನಿಸಿತು. ಅದಕ್ಕೆ ಮರುಮದುವೆಯಾಗಲು ತೀರ್ಮಾನ ಮಾಡಿದೆ,” ಎಂದು ಮಾತು ನಿಲ್ಲಿಸಿ ಶ್ರವಂತಿ ಮುಖ ನೋಡಿದರು.
“ನಿಮಗೆ ನನ್ನ ವಿಷಯ ಗೊತ್ತಿದೆಯಲ್ಲಾ…. ನನಗೆ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ,” ಎಂದಳು ಶ್ರವಂತಿ.
“ಗೊತ್ತು ಗೊತ್ತು…. ವೀಣಾ ಎಲ್ಲವನ್ನೂ ಹೇಳಿದ್ದಾರೆ. ನಮ್ಮ ಮದುವೆ ನಡೆದರೆ….. ನಿಮ್ಮ ಹೆಣ್ಣುಮಕ್ಕಳು ನನಗೂ ಹೆಣ್ಣು ಮಕ್ಕಳಿದ್ದಂತೆ. ಮದುವೆಯಾದ ನಿಮ್ಮ ದೊಡ್ಡ ಮಗಳಿಗೂ ಇದು ತವರುಮನೆ ಎಂದುಕೊಳ್ಳಬಹುದು. ನಿಮ್ಮ ಚಿಕ್ಕಮಗಳು ಎಷ್ಟು ಓದುತ್ತಾಳೋ ಓದಲಿ. ನಂತರ ಮದುವೆ ಮಾಡುವ ಜವಾಬ್ದಾರಿ ನನ್ನದು,” ಎಂದರು.
“ನಾನು ನನ್ನ ಅಣ್ಣಂದಿರ ಬಳಿ ಮಾತನಾಡಿ. ನನ್ನ ನಿರ್ಧಾರ ವೀಣಾ ಬಳಿ ಹೇಳುತ್ತೇನೆ.”
“ಓಕೆ…. ಓಕೆ….. ಖಂಡಿತಾ ಹಾಗೆ ಮಾಡಿ, ಮತ್ತೆ ಇನ್ನೊಂದು ವಿಷಯ, ನಾನು ಮದುವೆ ಆಗುವ ತೀರ್ಮಾನ ಮಾಡಿದ ಮೇಲೆ ಕಷ್ಟದಲ್ಲಿ ಇರುವವರನ್ನೇ ಮದುವೆ ಆದರೆ ಒಳ್ಳೆಯದು ಎನಿಸಿತು. ವೀಣಾ, ನಿಮ್ಮ ವಿಷಯ ಹೇಳಿದಾಗ, ಈ ಮದುವೆಯಿಂದ ನನ್ನಂತೆ ನಿಮಗೂ ಸಹಾಯವಾಗಲಿ ಎಂದು ಒಪ್ಪಿಕೊಂಡೆ.
“ಅಲ್ಲದೆ, ನೀವು ಮುಂದೆ ಹೇಗೋ ಏನೋ ಎಂದು ಯೋಚಿಸುವ ಅಗತ್ಯವಿಲ್ಲ. ಏಕೆಂದರೆ ನಾನು ನಿಮ್ಮನ್ನು ಮದುವೆಯಾದ ಮೇಲೆ ನೀವು ನನ್ನ ಧರ್ಮಪತ್ನಿಯಾಗುತ್ತೀರಾ…. ಕಾನೂನು ಪ್ರಕಾರ ನಿಮಗೆ ಏನು ಸಿಗಬೇಕು ಎಲ್ಲ ಸಿಗುತ್ತದೆ. ಮುಂದಿನ ಭವಿಷ್ಯದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.”
ಅವರ ಮಾತು ಕೇಳಿ ಶ್ರವಂತಿಗೆ ಸ್ವಲ್ಪ ಧೈರ್ಯ ಬಂದಿತ್ತು. `ಆಯ್ತು ಸರ್….. ನಾನು ವೀಣಾ ಹತ್ತಿರ ತಿಳಿಸುತ್ತೇನೆ,” ಎಂದು ಹೇಳಿದಳು.
ದಾರಿಯಲ್ಲಿ ವೀಣಾ, “ಶ್ರವಂತಿ, ಆತನನ್ನು ನೋಡಿದೆಯಲ್ಲಾ…. ಏನನಿಸಿತು….?” ಎಂದು ಕೇಳಿದಳು.
“ವೀಣಾ, ಅವರ ಮಾತು ಕೇಳಿ ಧೈರ್ಯ ಬಂದಿತು. ಮತ್ತೆ ಮದುವೆಯಾದರೆ ಸುಖವಾಗಿ ಇರಬಹುದು ಎನ್ನುವ ಭರವಸೆ ಮೂಡಿತು. ಆದರೆ ನನ್ನ ದೊಡ್ಡ ಮಗಳು ಅಳಿಯ, ಅಣ್ಣಂದಿರು ಹಾಗೂ ನನ್ನ ಗಂಡನ ಮನೆಯವರು ಏನು ಹೇಳುತ್ತಾರೋ ಗೊತ್ತಿಲ್ಲ,” ಎಂದು ಅತಂಕದಿಂದ ಹೇಳಿದಳು.
“ಶ್ರವಂತಿ ನೀನು ಧೈರ್ಯ ತಂದುಕೊಳ್ಳಬೇಕು. ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ನೀನು ಒಪ್ಪಿಗೆ ಕೊಟ್ಟರೆ ಸಾಕು ದೇವಸ್ಥಾನದಲ್ಲಿ ಸರಳ ಮದುವೆಗೆ ಶೇಖರ್ ರವರೇ ಏರ್ಪಾಟು ಮಾಡುತ್ತಾರೆ. ಅವರಿಗೆ ಸರ್ಕಾರಿ ಕೆಲಸ ಇರುವುದರಿಂದ ಅವರಿಗೆ ಪೆನ್ಶನ್ ಬರುತ್ತದೆ. ಮುಂದೆ ಏನಾದರೂ ತೊಂದರೆಯಾಗಿ ನೀನು ದೂರ ಬಂದರೂ ಕಾನೂನು ಪ್ರಕಾರ ನಿನಗೆ ಪ್ರತಿ ತಿಂಗಳು ಒಂದಿಷ್ಟು ಹಣ ಸಿಗುತ್ತದೆ. ಬದುಕಿಗೆ ಒಂದು ಭದ್ರತೆಯಾಗುತ್ತದೆ,” ಎಂದು ಶ್ರವಂತಿಯನ್ನು ಮದುವೆಗೆ ಒಪ್ಪಿಸಿದಳು.
ಶ್ರವಂತಿಯ ಮರು ಮದುವೆಗೆ ಮಗಳು ಅಳಿಯ, ಅಣ್ಣಂದಿರು, ಗಂಡನ ಮನೆಯವರು ಯಾರೂ ಸಪೋರ್ಟ್ ಮಾಡಲಿಲ್ಲ. ಇನ್ನೊಂದೆರಡು ವರ್ಷದಲ್ಲಿ ಮತ್ತೆ ಅಲ್ಲಿಂದ ಅಳುತ್ತಾ ವಾಪಸ್ ಬರ್ತೀಯಾ…. ಎಂದು ಆಡಿಕೊಂಡರು.
ವೀಣಾ ಧೈರ್ಯ ಹೇಳಿ ತಾನೇ ಮುಂದೆ ನಿಂತು ಈ ಮದುವೆ ಮಾಡಿಸಿದಳು. ಎರಡು ವರ್ಷದಲ್ಲಿ ಶ್ರವಂತಿ ಹಾಗೂ ಅವಳ ಮಗಳು ಆ ಮನೆಯವರೇ ಆಗಿಬಿಟ್ಟರು. ಪ್ರತಿ ವಾರ ಶೇಖರ್, ಅವರ ಮಗ ಹಾಗೂ ಶ್ರವಂತಿ, ಅವಳ ಮಗಳು ನಾಲ್ಕು ಜನರು ಸಿನಿಮಾ ಹೋಟೆಲ್ ಎಂದು ಹೋಗುತ್ತಿದ್ದರು. 3-4 ತಿಂಗಳಿಗೊಮ್ಮೆ ಪ್ರವಾಸ ಹೋಗುತ್ತಿದ್ದರು. ಎಂದೂ ಕಾಣದ ಸುಖ, ಸಂತೋಷ, ನೆಮ್ಮದಿ ಶ್ರವಂತಿಗೆ ಸಿಕ್ಕಿತ್ತು. ಶ್ರವಂತಿ ಮುಂದೆ ನಿಂತು ಮಗನಿಗೆ ಮದುವೆ ಗೊತ್ತು ಮಾಡಿದಳು. ಜೀವನದಲ್ಲಿ ಎಂದೂ ಕಾಣದ ನಗು ಶ್ರವಂತಿಯ ಮುಖದಲ್ಲಿ ಮೂಡಿತ್ತು. ಬಾಳಿನ ತಿರುವಿನಲ್ಲಿ ನಿಂತು ತತ್ತರಿಸಿದ ಶ್ರವಂತಿ…. ಬೇರೆಯವರು ಹೆದರಿಸಿದಂತೆ ತಪ್ಪು ನಿರ್ಧಾರ ಮಾಡಿರಲಿಲ್ಲ. ಸರಿಯಾದ ನಿರ್ಧಾರ ಮಾಡಿದ ಶ್ರವಂತಿ ತನ್ನ ಹಾಗೂ ಮಗಳ ಜೀವನ ಭದ್ರ ಮಾಡಿಕೊಂಡಳು.





