ಇದು ಸುಮ್ಮನ ಹೇಳಿದ ಮಾತಲ್ಲಾ…
ನಮಗೆಲ್ಲರಿಗೂ ತಿಳಿದಂತೆ ನಮ್ಮ ಅಖಂಡ ಧಾರವಾಡ ಜಿಲ್ಲೆ ಒಂದಾನೊಂದು ಕಾಲದಲ್ಲಿ ಹತ್ತಿ ಬೆಳೆಗೆ ಸುಪ್ರಸಿದ್ಧವಾಗಿತ್ತು. ಇಲ್ಲಿಯ ಹತ್ತಿ ಇಂಗ್ಲೆಂಡಿನ ಮ್ಯಾಂಚೆಸ್ಟರ್ ನಗರಕ್ಕೆ ಹೋಗಿ ಬಟ್ಟೆಯಾಗಿ ಬರುತ್ತಿತ್ತು.
ಹತ್ತಿ ಖಂಡಿಗೆಗಳನ್ನು ಎತ್ತಿನ ಗಾಡಿಯ ಮೂಲಕ ಉತ್ತರಕನ್ನಡದ ಕುಮಟಾ ಬಂದರಿಗೆ ತಲುಪಿಸಿ ಅಲ್ಲಿಂದ ಅವುಗಳು ಹಡುಗಗಳ ಮೂಲಕ ಇಂಗ್ಲೆಂಡಿಗೆ ಪ್ರಯಾಣ ಬೆಳೆಸುತ್ತಿದ್ದವು. ಹೀಗಾಗಿ ಇಂಗ್ಲೆಂಡಿನಲ್ಲಿ ಧಾರವಾಡದ ಹತ್ತಿಗೆ ಕುಮಟಾ ಕಾಟನ್ ಎಂದೇ ಬ್ರ್ಯಾಂಡ್ ನೇಮ್.
1844 ರವರೆಗೂ ಧಾರವಾಡ ಜಿಲ್ಲೆಯಲ್ಲಿ ಸಾರ್ವಕಾಲಿಕವಾಗಿ ಬಳಕೆಯಾಗಬಲ್ಲ ಎತ್ತಿನ ಬಂಡಿ ದಾರಿಗಳು ಇರಲಿಲ್ಲ. ಮಳೆಗಾಲದಲ್ಲಿ ಇವುಗಳ ಸಂಪರ್ಕ ತಪ್ಪುತ್ತಿತ್ತು. ಹೇರು ಪ್ರಾಣಿಗಳಿಂದಲೇ ಸಾರಿಗೆ ಸಾಧ್ಯವಿತ್ತು.

1856 ರ ಹೊತ್ತಿಗೆ ಹುಬ್ಬಳ್ಳಿಯಿಂದ ಹರಿಹರದವರೆಗೆ ಸರ್ವಋತು ರಸ್ತೆ ನಿರ್ಮಾಣವಾಯಿತು. 1866ರಲ್ಲಿ ಪುಣೆ ಬೆಂಗಳೂರು ರಸ್ತೆಯ ವರದಾ ನದಿಗೆ ಸೇತುವೆ ಕಟ್ಟಿದರು.
ಇದಲ್ಲದೆ ಹುಬ್ಬಳ್ಳಿಯಿಂದ ಮುಂಡಗೋಡ, ಶಿರಸಿ, ದೇವಿಮನೆ ಘಟ್ಟದಿಂದ ಕುಮಟಾ ಬಂದರು ತಲುಪಲು ಒಂದು ರಸ್ತೆಯಿತ್ತು. ಸ್ಥಳೀಯ ಸಂಸ್ಥೆಗಳಿಂದ ರಸ್ತೆ ರಚನೆ ಕಾರ್ಯ 1866 ರಿಂದ ಆರಂಭವಾಗಿ ಸೇತುವೆಗಳ ಕಟ್ಟುವಿಕೆ ಕೂಡ ಆರಂಭವಾಯಿತು.
ಆ ಕಾಲದಲ್ಲಿ ಈ ಪ್ರದೇಶದಲ್ಲಿ ಆದ ಒಂದು ವಿಲಕ್ಷಣ ಸಂಗತಿ ಎಂದರೆ ‘ಅರಳೆಯ ಉಬ್ಬರ’ ಅಥವಾ ‘ಕಾಟನ್ ಬೂಮ್’. ಅಮೆರಿಕದಲ್ಲಿ ನಡೆದ ಯಾದವೀ ಯುದ್ಧದ ಕಾಲಕ್ಕೆ ಆ ದೇಶದಿಂದ ಇಂಗ್ಲೆಂಡ್ಗೆ ಬರುವ ಹತ್ತಿಯ ಆಮದು ನಿಂತುದರಿಂದ ಇಂಗ್ಲೆಂಡ್ ಭಾರತದ ಹತ್ತಿಯ ಮೇಲೆ ಹೆಚ್ಚಿನ ಅವಲಂಬಿತವಾಗತೊಡಗಿತು.

ಪ್ರಮುಖ ಹತ್ತಿ ಬೆಳೆಯುವ ಜಿಲ್ಲೆಯಾದ ಧಾರವಾಡ ಪ್ರದೇಶದಲ್ಲಿ ಆಗ ಕಾಣಿಸಿಕೊಂಡ ಅರಳೆ ಉಬ್ಬರದಿಂದ ಜಿಲ್ಲೆ ಸಾಕಷ್ಟು ಏರಿಳಿತಗಳನ್ನು ಕಂಡಿತು. ಆವರೆಗೂ ಒಂದು ಹತ್ತಿ ಖಂಡಿಗೆ ಸುಮಾರು 75 ರಿಂದ 100 ರೂ ಇದ್ದ ಅಮೆರಿಕನ್ ತಳಿಯ ಅರಳೆಯ ಬೆಲೆ 1863ರಲ್ಲಿ 380 ರೂ, 1864ರಲ್ಲಿ 465 ರೂ. ಆಯಿತು.
ರೈತರು ಬೇರೆಲ್ಲಾ ಬೆಳೆಗಳನ್ನು ಬಿಟ್ಟು ಅರಳೆಯನ್ನೇ ಬೆಳೆಯಹತ್ತಿದರು. ಹತ್ತಿ ಬೆಳೆದ ರೈತರ ಕೈಯಲ್ಲಿ ಹಣದ ಓಡಾಟ ಮಿತಿಮೀರಿ ಹೆಚ್ಚಿತು. ಶ್ರೀಮಂತರಾದ ರೈತರು ಎಷ್ಟು ಅಪವ್ಯಯಕ್ಕೆ ತೊಡಗಿದರೆಂದರೆ, ಒಂದು ಉಲ್ಲೇಖದಂತೆ ಎತ್ತುಗಳ ಕೊಂಬುಗಳಿಗೆ ಬಂಗಾರದ ಅಣಸು ಮಾಡಿಸಿದರಂತೆ.
ಹಣದ ಹರಿವಿನ ಪ್ರಮಾಣ ಹೆಚ್ಚಾದಂತೆ ಜಗಳ, ಖಟ್ಲೆಗಳು ಹೆಚ್ಚಿ, ವಕೀಲರಿಗೆ ಬೇಡಿಕೆ ಹೆಚ್ಚಾಗತೊಡಗಿತು. ಇದರಿಂದಾಗಿ ಅನೇಕರು ವಕೀಲಿ ವೃತ್ತಿಗೆ ನುಗ್ಗುವಂತಾಯಿತು. ಭೂಮಿಯ ಬೆಲೆ ಗಗನಕ್ಕೇರಿತು. ಅತಿಯಾದ ವರದಕ್ಷಿಣೆ ರೂಢಿಗೆ ಬಂತು.

ಇದೇ ಕಾಲಕ್ಕೆ ಉಳಿತಾಯದ ಸ್ವಭಾವವೂ ಬೆಳೆದು ಕೂಡು ಬಂಡವಾಳದ ಸಂಸ್ಥೆಗಳು ಅನೇಕರ ಉಳಿತಾಯವನ್ನು ಆಕರ್ಷಿಸಿದ್ದು ಕೂಡ ಸತ್ಯ ಆದರೆ ಎಲ್ಲ ಬೂಮ್ ಗಳಂತೆ ಇದು ಕೂಡ ಕೆಲ ಸಮಯದ ನಂತರ ಮಾಯವಾದಾಗ ಹತ್ತಿ ಬೆಳೆದ ಅನೇಕ ರೈತರು ಅಕ್ಷರಶಃ ಹಾಳಾದರು ಎಂದು ಕೂಡ ಹೇಳಲಾಗುತ್ತದೆ.
ಈ ಕಾರಣಕ್ಕಾಗಿಯೇ ‘ಹತ್ತಿ ಬೆಳೆದ ರೈತ ಹಾಳಾದ’ ಅಥವಾ ಹಾಳ ಮಾಡಿ ಹತ್ತಿ ಬಿತ್ತೋದು ಎಂದು ಮಾತು ಸಮಾಜದಲ್ಲಿ ಪ್ರಚಲಿತವಾಗಿ ಅದು ಇಂದಿಗೂ ಬೇರೆ ಬೇರೆ ಸಂದರ್ಭದಲ್ಲಿ ಉಪಯೋಗವಾಗುತ್ತದೆ. ಉದಾ: ಅಭಿವೃದ್ಧಿ ಹೆಸರನ್ಯಾಗ ಊರ ಹಾಳ ಮಾಡಿ ಹತ್ತಿ ಬಿತ್ತಿದ್ರು ಅನ್ನೋದು…..ಇತ್ಯಾದಿ ಇತ್ಯಾದಿ.
ಅಂದ ಹಾಗೆ ಎಲ್ಲಾ ಬೂಮಗಳ ಕಥಎ ಇಷ್ಟೇ.. ಮೈನಿಂಗ್ ಬೂಮ್, ರಿಯಲ್ ಎಸ್ಟೇಟ್ ಬೂಮ್…ಎಲ್ಲಾ ಹಿಂಗೆ.. ಮೊದಲು ಮೆರವಣಗಿ, ನಂತರ ಉರೋಣಗಿ… ಆಮೇಲೆ… ಶಾಂತ ಸ್ಮಶಾನ ಮೌನ…
ಅಮೃತ ಜೋಶಿ
ಹುಬ್ಬಳ್ಳಿ





