– ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡ ಚಿತ್ರರಂಗದಲ್ಲಿ ತಂತ್ರಜ್ಞಾನದ ಹೊಸ ಪ್ರಯೋಗವೊಂದು ಸದ್ದು ಮಾಡುತ್ತಿದೆ. ಸಿನಿಮಾಗಳಲ್ಲಿ ರೋಬೋಟ್ಗಳನ್ನು ತೋರಿಸಲು ಸಾಮಾನ್ಯವಾಗಿ ಸಿಜಿ ಗ್ರಾಫಿಕ್ಸ್ ಬಳಸಲಾಗುತ್ತದೆ. ಆದರೆ ಇಲ್ಲಿ ನಿಜವಾದ ರೋಬೋಟ್ನ್ನೇ ಪ್ರಮುಖ ಪಾತ್ರದಲ್ಲಿ ಬಳಸಲಾಗಿದೆ. ನಿರ್ದೇಶಕ ಸಿಂಪಲ್ ಸುನಿ ಅವರ ಬಹುನಿರೀಕ್ಷಿತ ‘ಲಂಬೋದರ 2.0’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಈ ವಿಭಿನ್ನ ಪ್ರಯೋಗ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ.
ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಟ್ರೇಲರ್ ಬಿಡುಗಡೆಯಾಗಿದೆ. ಈ ಸಿನಿಮಾದ ವಿಶೇಷತೆ ಎಂದರೆ, ಬೆಂಗಳೂರು ಮೂಲದ ‘ಮಚಾನಿ ರೋಬೋಟಿಕ್ಸ್’ ಸಂಸ್ಥೆ ಅಭಿವೃದ್ಧಿಪಡಿಸಿರುವ ‘ಜಿಯಾ’ ಎಂಬ ಹ್ಯೂಮನಾಯ್ಡ್ ರೋಬೋಟ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದೆ. ಡಿಜಿಟಲ್ ಎಫೆಕ್ಟ್ಸ್ ಅಥವಾ ಪ್ರಾಸ್ಥೆಟಿಕ್ಸ್ ಮೇಕಪ್ ಬಳಸದೆ, ನೈಜ ರೋಬೋಟ್ನ್ನೇ ಚಿತ್ರೀಕರಣದ ಸೆಟ್ನಲ್ಲಿ ನೇರವಾಗಿ ಬಳಸಿಕೊಳ್ಳಲಾಗಿದೆ.
ಕೃತಕ ಬುದ್ಧಿಮತ್ತೆ ಮತ್ತು ರೋಬೋಟಿಕ್ಸ್ ತಂತ್ರಜ್ಞಾನವನ್ನು ಸಿನಿಮಾ ಜಗತ್ತಿನಲ್ಲಿ ಹೇಗೆ ಬಳಸಬಹುದು ಎಂಬುದಕ್ಕೆ ಈ ಪ್ರಯೋಗ ಉದಾಹರಣೆಯಾಗಿದೆ. ಭಾರತೀಯ ಚಿತ್ರರಂಗದಲ್ಲೇ ಮೊದಲ ಬಾರಿಗೆ ಇಂತಹ ಪ್ರಯತ್ನ ಮಾಡಲಾಗಿದೆ ಎಂಬುದು ಚಿತ್ರತಂಡದ ವಿಶೇಷ ಹೆಗ್ಗಳಿಕೆ.
ಇನ್ನು ‘ಲಂಬೋದರ 2.0’ ಕೇವಲ ಸೈನ್ಸ್ ಫಿಕ್ಷನ್ ಸಿನಿಮಾವಲ್ಲ. ಬೆಂಗಳೂರಿನ ಹಿನ್ನೆಲೆಯಲ್ಲೇ ಸಾಗುವ ಈ ಚಿತ್ರ ಹೈ-ಕಾನ್ಸೆಪ್ಟ್ ಸೈಂಟಿಫಿಕ್ ಸೋಶಿಯಲ್ ಥ್ರಿಲ್ಲರ್ ಆಗಿದೆ. ಇಂದಿನ ಡಿಜಿಟಲ್ ಬದುಕು, ಅತಿಯಾದ ಸ್ಕ್ರೀನ್ ಟೈಮ್, ಒಂಟಿತನ ಮತ್ತು ಡಿಜಿಟಲ್ ಕಣ್ಗಾವಲಿನಂತಹ ವಿಚಾರಗಳನ್ನು ಕಥೆ ಒಳಗೊಂಡಿದೆ. ತಂತ್ರಜ್ಞಾನ ಬೆಳೆದಂತೆ ಮನುಷ್ಯನ ಜೀವನದಲ್ಲಿ ಸಂತೋಷದ ಮಹತ್ವ ಏನು ಎಂಬ ಪ್ರಶ್ನೆಯನ್ನೂ ಸಿನಿಮಾ ಮುಂದಿಡುತ್ತದೆ.
ಈ ಚಿತ್ರದ ಮೂಲಕ ಅನಿಲ್ ಶೆಟ್ಟಿ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ವಿಶೇಷವೆಂದರೆ, ಚಿತ್ರದ ಕಥೆ ಮತ್ತು ಸ್ಕ್ರಿಪ್ಟ್ ಅನ್ನು ಅನಿಲ್ ಶೆಟ್ಟಿ ಅವರೇ ಬರೆದಿದ್ದಾರೆ. ತಮ್ಮದೇ ಕಥೆಗಳಿಗೆ ನಿರ್ದೇಶನ ಮಾಡುತ್ತಿದ್ದ ಸಿಂಪಲ್ ಸುನಿ, ಇದೇ ಮೊದಲ ಬಾರಿಗೆ ಬೇರೆಯವರ ಸ್ಕ್ರಿಪ್ಟ್ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಾಚಿ ಬಿಂದ್ರಾ ನಾಯಕಿಯಾಗಿ ನಟಿಸಿದ್ದಾರೆ.
ಇನ್ನು ‘ರಂಗ್ ದೇ ಬಸಂತಿ’, ‘ಡಾನ್ 2’ ಖ್ಯಾತಿಯ ಕುನಾಲ್ ಕಪೂರ್ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅವರ ಪಾತ್ರ ಕಥೆಯಲ್ಲಿ ಪ್ರಮುಖ ತಿರುವು ನೀಡಲಿದೆ ಎನ್ನಲಾಗಿದೆ. ಮೇಘನಾ ಗಾವಂಕರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಕೃಷ್ಣ ಎಂಬ ರಹಸ್ಯ ಪಾತ್ರದ ಸುತ್ತಲೂ ಕುತೂಹಲ ಕಾಯ್ದುಕೊಳ್ಳಲಾಗಿದೆ.
ಒಟ್ಟಿನಲ್ಲಿ, ನೈಜ ರೋಬೋಟ್ ಜಿಯಾ, ವಿಭಿನ್ನ ಕಥೆ ಮತ್ತು ತಂತ್ರಜ್ಞಾನದ ಹೊಸ ಪ್ರಯೋಗದ ಮೂಲಕ ‘ಲಂಬೋದರ 2.0’ ಈಗಾಗಲೇ ಗಮನ ಸೆಳೆಯುತ್ತಿದೆ. ಟ್ರೇಲರ್ ಬಿಡುಗಡೆಯ ಬೆನ್ನಲ್ಲೇ ಸಿನಿಮಾ ಬಗ್ಗೆ ಸಿನಿಪ್ರಿಯರ ನಿರೀಕ್ಷೆಯೂ ಹೆಚ್ಚಾಗಿದೆ.





