ಕಿರುತೆರೆಯಿಂದ `ಕೂಲಿ‘ ಚಿತ್ರದವರೆಗೆ ಡಿಂಪಲ್ ಕ್ವೀನ್‌ ರಚಿತಾ ರಾಮ್ ಬಣ್ಣದ ಬದುಕಿನ ಜರ್ನಿಗೆ 14 ವರ್ಷದ ಸಂಭ್ರಮ…..

ಸ್ಯಾಂಡಲ್ ವುಡ್‌ ನಲ್ಲಿ ನಾಯಕಿಯರು ಬರುತ್ತಾರೆ, ಹೋಗುತ್ತಾರೆ. ಆದರೆ ದಶಕ ಕಳೆದರೂ ಅದೇ ಕ್ರೇಜ್‌, ಅದೇ ಸೌಂದರ್ಯ ಮತ್ತು ಅದೇ `ಡಿಂಪಲ್’ ಜಾದೂ ಉಳಿಸಿಕೊಂಡಿರುವ ನಟಿ ಎಂದರೆ ಬುಲ್ ಬುಲ್ ಬ್ಯೂಟಿ ರಚಿತಾ ರಾಮ್ ಮಾತ್ರ. ಕನ್ನಡ ಚಿತ್ರರಂಗದ `ಗುಳಿಗೆನ್ನೆಯ ಚೆಲುವೆ’ ಎಂದೇ ಖ್ಯಾತರಾಗಿರುವ ರಚಿತಾ ರಾಮ್ ಬಗ್ಗೆ ಇಷ್ಟೆಲ್ಲಾ ಹೇಳಲು ಕಾರಣ ಅವರ ಬಣ್ಣದ ಬದುಕು ಆರಂಭವಾಗಿ ಇಂದಿಗೆ 14 ವರ್ಷ ತುಂಬಿದೆ.

ರಚಿತಾ ರಾಮ್ ಸಿನಿ ಪಯಣ ಶುರುವಾಗಿ ಈಗ ಭರ್ತಿ 14 ವರ್ಷವಾಗಿದೆ. ಇಷ್ಟು ವರ್ಷಗಳಾದರೂ ಅದೇ ಚಾರ್ಮ್, ಅದೇ ಗ್ಲಾಮರ್‌, ಅದೇ ಡಿಮ್ಯಾಂಡ್‌ ಇದ್ದು ರಚ್ಚುಗೆ ಇವತ್ತಿಗೂ ಡಿಮ್ಯಾಂಡಪ್ಪೋ ಡಿಮ್ಯಾಂಡ್‌ ಅನ್ನೋ ಹಾಗಾಗಿದೆ.

Rachita-Ram-4

ಬುಲ್ ‌ಬುಲ್ ‌ನಿಂದ ಹೊಸ ಶಕೆ

ಕಿರುತೆರೆಯ ಅರಸಿ ಸೀರಿಯಲ್ ಮೂಲಕ ಬಂದ ಬಿಂದ್ಯಾ ರಾಮ್, ರಚಿತಾ ರಾಮ್ ಆಗಿ ಬದಲಾಗೋಕೆ ಕಾರಣವಾಗಿದ್ದು `ಬುಲ್ ‌ಬುಲ್‌’ ಸಿನಿಮಾ. ಹೊಸ ನಟಿ ದರ್ಶನ್‌ ಜೊತೆಗೆ ನಟಿಸೋ ಅವಕಾಶ ಪಡೆದಿದ್ದು ಇಡೀ ಗಾಂಧೀನಗರದಾದ್ಯಂತ ಸುದ್ದಿಯಾಗಿತ್ತು. `ಬುಲ್ ‌ಬುಲ್‌’ ಬಿಡುಗಡೆಯಾಗಿ ಇದೀಗ 14 ವರ್ಷಗಳು ಪೂರ್ಣಗೊಂಡಿವೆ. 2013, ಮೇ 10 ರಂದು ಬಿಡುಗಡೆಯಾದ ಈ ಸಿನಿಮಾದಲ್ಲಿ ದರ್ಶನ್‌ ಇದ್ದರು. ಎಂ.ಡಿ. ಶ್ರೀಧರ್‌ ಈ ಚಿತ್ರವನ್ನು ಡೈರೆಕ್ಷನ್‌ ಮಾಡಿದ್ದಾರೆ. ರೆಬೆಲ್ ‌ಸ್ಟಾರ್‌ ಅಂಬರೀಶ್‌ ಕೂಡ ಇದ್ದರು. ಇನ್ನು ಹಲವು ಕನ್ನಡದ ಹಿರಿಯ ನಟರು ಈ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ ಬಾಕ್ಸ್ಸ ಆಫೀಸ್‌ ನಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು.

ಇಂತಹ `ಬುಲ್ ‌ಬುಲ್‌’ ಚಿತ್ರದಲ್ಲಿ ಕಾವೇರಿ ಎಂಬ ಪಾತ್ರವನ್ನು ನಿರ್ವಹಿಸಿದ್ದರು. ಈ ಸಿನಿಮಾದಲ್ಲಿನ ಅಮೋಘ ಅಭಿನಯಕ್ಕಾಗಿ ಫಿಲ್ಮ್ ಫೇರ್‌ ಬೆಸ್ಟ್ ಆ್ಯಕೆಲ್ ಟ್ರಸ್ಟ್ ಅವಾರ್ಡ್‌ ನ್ನು ಗೆದ್ದುಕೊಂಡಿದ್ದಾರೆ. ಈ ಚಿತ್ರದ ನಾಯಕ ನಟಿ ಪಾತ್ರಕ್ಕೆ 2012ರಲ್ಲಿ ನಡೆದ ಆಡಿಶನ್‌ ನಲ್ಲಿ 200 ಹುಡುಗಿಯರು ಸ್ಪರ್ಧಿಸಿದ್ದರು ಅನ್ನೋದು ಗಮನಾರ್ಹ ಸಂಗತಿ. ಮುಂದೆ ಅದೇ ನಟಿ ಸ್ಯಾಂಡಲ್ ವುಡ್‌ ನ ನಂ.1 ನಟಿಯಾಗಿ ಬುಲ್ ಬುಲ್ ‌ಅಂತಲೇ ಗುರುತಿಸಿಕೊಳ್ಳುತ್ತಾರೆ.

Rachita-Ram-13

ಕನ್ನಡ ಜನತೆಯ ಮನಗೆದ್ದ `ಅರಸಿ‘

ತಮ್ಮ ಸಿನಿ ಪಯಣದಲ್ಲಿ ರಚಿತಾ ರಾಮ್ ಹಲವಾರು ದೊಡ್ಡ ದೊಡ್ಡ ನಟರ ಜೊತೆ ಅಭಿನಯಿಸಿದ್ದಾರೆ. ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡ ಅವರು, ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಆದರೆ ಅವರು ತಮ್ಮ ನಟನಾ ಬದುಕು ಪ್ರಾರಂಭಿಸಿದ್ದು ಕಿರುತೆರೆಯ ಮೂಲಕ! ಕಿರುತೆರೆಯಲ್ಲಿ ಪ್ರಸಾರ ಕಂಡಿದ್ದ `ಅರಸಿ’ ಧಾರಾವಾಹಿ ಮೂಲಕ ತಮ್ಮ ನಟನಾ ಬದುಕು ಪ್ರಾರಂಭಿಸಿದವರು ಬಿಂದ್ಯಾ ರಾಮ್, ಮುಂದೆ ರಚಿತಾ ರಾಮ್ ಆಗಿ ಬದಲಾದದ್ದು ಈಗ ಇತಿಹಾಸ.

ದರ್ಶನ್‌, ಕಿಚ್ಚ ಸುದೀಪ್‌, ಪುನೀತ್‌ ರಾಜ್‌ ಕುಮಾರ್‌, ಶಿವರಾಜ್‌ ಕುಮಾರ್‌, ರಮೇಶ್‌ ಅರವಿಂದ್‌ ಹೀಗೆ ಎಲ್ಲ ಸ್ಟಾರ್‌ ಗಳ ಜೊತೆಗೆ ನಟಿಸಿ ಸೈ ಎನಿಸಿಕೊಂಡಿರುವ ರಚ್ಚು ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ತಲೈವಾ ಸೂಪರ್‌ ಸ್ಟಾರ್‌ ರಜನಿ ಜೊತೆಗೆ `ಕೂಲಿ’ ಸಿನಿಮಾದಲ್ಲಿಯೂ ವಿಶೇಷ ಪಾತ್ರದಲ್ಲಿ ನಟಿಸಿ ತಮಿಳು ಸಿನಿಮಂದಿ ಮನಸ್ಸು ಗೆದ್ದಿದ್ದಾರೆ. ಹಳ್ಳಿ ಹುಡುಗಿಯಿಂದ ಹಿಡಿದು ಸ್ಟೈಲಿಶ್‌ ಮಾಡರ್ನ್‌ ಗ್ಲಾಮರಸ್‌ ಪಾತ್ರಗಳವರೆಗೆ ವಿಭಿನ್ನ ಶೇಡ್‌ ಗಳಲ್ಲಿ ಅಭಿನಯಿಸಿದ ರಚಿತಾ ರಾಮ್, ಎಲ್ಲ ವರ್ಗದ ಪ್ರೇಕ್ಷಕರ ಮನಸ್ಸು ಗೆದ್ದರು.

`ಅಂಬರೀಶ, ದಿಲ್ ರಂಗೀಲಾ, ರಥಾರ, ಚಕ್ರವ್ಯೂಹ, ಜಗ್ಗುದಾದ, ಭರ್ಜರಿ, ಅಯೋಗ್ಯ, ಸೀತಾರಾಮ ಕಲ್ಯಾಣ, ಭರಾಟೆ, ರುಸ್ತುಂ, ರನ್ನ, ಕ್ರಾಂತಿ, ಮಾನ್ಸೂನ್‌ ರಾಗ, ಲವ್ ಯೂ ರಚ್ಚು, ಮ್ಯಾಟ್ನಿ, ಸಂಜು ವೆಡ್ಸ್ ಗೀತಾ-2′ ಸೇರಿದಂತಿ ಹಲವು ಸಿನಿಮಾಗಳಲ್ಲಿ ನಟಿಸಿರುವ ರಚಿತಾ ರಾಮ್, ಗ್ಲಾಮರ್‌ ಜೊತೆಗೆ ಅಭಿನಯಕ್ಕೂ ಮೆಚ್ಚುಗೆ ಪಡೆದಿದ್ದಾರೆ. ಸುಮಾರು 14 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು ಇಂದಿಗೂ ಬೇಡಿಕೆಯ ನಟಿಯಾಗಿ ಮುಂದುವರಿದಿದ್ದಾರೆ.

ಇದೇ ವರ್ಷ ತೆರೆಗೆ ಬಂದಿದ್ದ ದುನಿಯಾ ವಿಜಯ್‌ ಅಭಿನಯದ `ಲ್ಯಾಂಡ್‌ ಲಾರ್ಡ್‌’ ಸಿನಿಮಾದಲ್ಲಿ ವಿಜಯ್‌ ಜೊತೆ ತೆರೆ ಹಂಚಿಕೊಂಡಿದ್ದರು. ಈ ಚಿತ್ರ ಜನವರಿ 23 ರಂದು ರಾಜ್ಯಾದ್ಯಂತ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಂಡು ಉತ್ತಮ ಪ್ರದರ್ಶ ಕಂಡಿತ್ತು. ಈ ವರ್ಷ ಬಿಡುಗಡೆಯಾದ ಕನ್ನಡದ ಮೊದಲ ಸ್ಟಾರ್‌ ಸಿನಿಮಾವಾಗಿ ಗುರುತಿಸಿಕೊಂಡಿದ್ದ `ಲ್ಯಾಂಡ್‌ ಲಾರ್ಡ್‌’ ಪ್ರೇಕ್ಷಕರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಮಾರ್ಚ್‌ 19 ರಿಂದ ಝೀ 5 ಕನ್ನಡ  ಒಟಿಟಿ ವೇದಿಕೆಯಲ್ಲಿ ಈ ಚಿತ್ರ ಪ್ರಸಾರ ಕಾಣುತ್ತಿದೆ. ಅನಿಲ್ ‌ಕುಮಾರ್‌ ನಿರ್ದೇಶನದ `ಕಲ್ಟ್’ ಸಿನಿಮಾ ಕೂಡ ಜನವರಿ 23ರಂದೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಸಚಿವ ಜಮೀರ್‌ ಪುತ್ರ ಝೈದ್‌ ಖಾನ್‌ ನಟನೆಯ ಈ ಚಿತ್ರದಲ್ಲಿ ಮಲೈಕಾ ಸುಪಾಲ್ ‌ಪ್ರಮುಖ ಪಾತ್ರ ವಹಿಸಿದ್ದರು.

ಸದ್ಯ ರಚಿತಾ ರಾಮ್, ಧ್ರುವ ಜೊತೆ ಕ್ರಿಮಿನ್‌, ಸತೀಶ್‌ ನೀನಾಸಂ ಜೊತೆ ಅಯೋಗ್ಯ-2 ನಟಿಸುತ್ತಿದ್ದು, ತಮಿಳಿನಲ್ಲಿ ದೊಡ್ಡ ನಿರ್ಮಾಣ ಸಂಸ್ಥೆ ಜೊತೆ ಮಾತುಕತೆ ನಡೆದಿದ್ದು, ತೆಲುಗಿನಲ್ಲಿ ಎರಡು ಸಿನಿಮಾಗಳು ಈ ತಿಂಗಳಲ್ಲಿ ಅನೌನ್ಸ್ ಆಗಲಿವೆ.

rachita14years

ರಚ್ಚು ನೈಜ ಬ್ಯೂಟಿ

ರಚಿತಾ ರಾಮ್ ಒಪ್ಪಿಕೊಳ್ಳುತ್ತಿರುವ ಈಗಿನ ಸಿನಿಮಾಗಳಲ್ಲಿ ಡೀಗ್ಲಾಮರ್‌ ರೋಲ್ ಜಾಸ್ತಿ ಇವೆ ಅನಿಸುತ್ತದೆ. ತಮಿಳಿನ ಕೂಲಿ ಚಿತ್ರದಲ್ಲಿ ಒಳ್ಳೆಯ ಪಾತ್ರವನ್ನೇ ಮಾಡಿದ್ದಾರೆ. ಕಲ್ಯಾಣಿ ಎನ್ನುವ ಈ ರೋಲ್ ‌ನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ದುನಿಯಾ ವಿಜಯ್‌ ಅಭಿನಯದ ಮತ್ತು ಜಡೇಶ್‌ ಹಂಪಿ ನಿರ್ದೇಶನದ `ಲ್ಯಾಂಡ್‌ ಲಾರ್ಡ್‌’ ಚಿತ್ರದಲ್ಲೂ ರಚಿತಾ ರಾಮ್ ಅಭಿನಯಿಸಿದ್ದಾರೆ. ಇಲ್ಲೂ ರಚಿತಾ ಡೀಗ್ಲಾಮರಸ್‌ ರೋಲ್ ಮಾಡಿದ್ದಾರೆ. ಎಲ್ಲೂ ಗ್ಲಾಮರಸ್‌ ಅನಿಸೋದೇ ಇಲ್ಲ. ಒಂದು ಹಳ್ಳಿಯ ಹೆಣ್ಣುಮಗಳು ಹಾಗೂ ಒಬ್ಬ ಮಗಳ ತಾಯಿ ಹೇಗೆ ಕಾಣಿಸಬೇಕೋ ಹೀಗೆ ಇರುವ ಇಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರದ ನ್ಯೂಸ್‌ ಇರುವಾಗಲೇ ಈಗ ಮತ್ತೊಂದು ಡೀಗ್ಲಾಮರಸ್‌ ರೋಲ್ ಒಪ್ಪಿಕೊಂಡಿದ್ದಾರೆ. ಇನ್ನು ಧ್ರುವ ಸರ್ಜಾ ಮತ್ತು ರಚಿತಾ ರಾಮ್ ಮತ್ತೊಮ್ಮೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ಕ್ರಿಮಿನಲ್ ಚಿತ್ರದಲ್ಲೂ ರಚಿತಾ ರಾಮ್ ಡೀಗ್ಲಾಮರ್‌ರೋಲ್ ಮಾಡಿದ್ದಾರೆ. ಇಲ್ಲೂ ಬಣ್ಣ ಹಚ್ಚಿಕೊಳ್ಳುವ ಚಾನ್ಸ್ ಇಲ್ಲವೇ ಇಲ್ಲ. ಕಂಪ್ಲೀಟ್‌ ರಗಡ್‌ ಕಥೆಯ ಚಿತ್ರ ಇದಾಗಿದೆ. ಆದರೆ, ಇಲ್ಲಿ ರಿಯಲ್ ಲವ್ ಸ್ಟೋರೀನೇ ಚಿತ್ರ ಆಗುತ್ತಿದೆ. ಡೈರೆಕ್ಟರ್‌ ರಾಜ್‌ ಗುರು ಈ ಚಿತ್ರದಲ್ಲಿ ಹಾನಗಲ್ ಲವ್ ಸ್ಟೋರಿ ಹೇಳುತ್ತಿದ್ದಾರೆ. ಕಂಪ್ಲೀಟ್ ಉತ್ತರ ಕರ್ನಾಟಕ ಭಾಷೆಯ ಲವ್ ಸ್ಟೋರಿಯ ಸಿನಿಮಾ ಇದಾಗಿದೆ. ಒಟ್ಟಾರೆ ರಚಿತಾ ರಾಮ್ ಪ್ರಯೋಗಾತ್ಮಕ ಮತ್ತು ಅಭಿನಯಕ್ಕೆ ಅವಕಾಶ ಇರುವ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಅಂತಲೇ ಹೇಳಬಹುದು.

Rachita-Ram-5

ಮೊದಲ ಸಂಬಳ

ಇಂದು ರಚಿತಾ ಒಂದು ಚಿತ್ರಕ್ಕೆ ಲಕ್ಷಾಂತರ ರೂ. ಸಂಭಾವನೆ ಪಡೆದುಕೊಳ್ಳುತ್ತಾರೆ. ಆದರೆ ಅವರ ಮೊದಲ ಸಂಬಳ ಎಷ್ಟಿತ್ತು ಎನ್ನುವುದರ ಬಗ್ಗೆ ನೋಡೋಣ. ಅವರು ಮೊದಲ ಬಾರಿ ಧಾರಾವಾಹಿಗಳಲ್ಲಿ ನಟಿಸುವಾಗ ದಿನಕ್ಕೆ ಕೇವಲ 750 ರೂ. ಸಂಭಾವನೆ ಪಡೆಯುತ್ತಿದ್ದರು. ಅವರು ನಟಿಸಿದ ಮೊದಲ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಇರಲಿಲ್ಲ. ಹೀಗಾಗಿ ಅತಿ ಕಡಿಮೆ ಸಂಬಳಕ್ಕೆ ಕೆಲಸ ಮಾಡಬೇಕಾದ ಪರಿಸ್ಥಿತಿ ಇತ್ತು.

Rachita-Ram-14

ಐಷಾರಾಮಿ ಬದುಕು

ರಚಿತಾ ರಾಮ್ ಇಂದು ಕನ್ನಡದ ಟಾಪ್‌ ನಟಿಯರಲ್ಲಿ ಒಬ್ಬರು. ಡಿಂಪಲ್ ಕ್ವೀನ್‌ ಎಂದು ಖ್ಯಾತಿ ಪಡೆದಿರುವ ರಚಿತಾ ರಾಮ್, ಸಿನಿಮಾ ಮಾತ್ರವಲ್ಲದೇ ಐಷಾರಾಮಿ ಜೀವನಶೈಲಿಯಿಂದಲೂ ಸಾಕಷ್ಟು ಸುದ್ದಿಯಾಗುತ್ತಾರೆ. ರಚಿತಾ ರಾಮ್ ಒಂದು ಸಿನಿಮಾಗೆ ಲಕ್ಷಾಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದ್ದು, ಸಿನಿಮಾಗಳ ಜೊತೆಗೆ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುವುದು, ಬ್ರ್ಯಾಂಡ್‌ ಪ್ರಚಾರಗಳು ಹಾಗೂ ಸೋಶಿಯಲ್ ಮೀಡಿಯಾ ಪ್ರಮೋಶನ್‌ ಗಳಿಂದಲೂ ಅವರು ಆದಾಯ ಗಳಿಸುತ್ತಿದ್ದಾರೆ.

ರಚಿತಾ ಬಳಿ ಪ್ರೈವೇಟ್‌ ಜೆಟ್‌ ಕೂಡ ಇದ್ದು ದುಬಾರಿ ಕಾರುಗಳು, ಭವ್ಯ ಬಂಗಲೆ ಹಾಗೂ ಲಕ್ಸುರಿ ಲೈಫ್‌ ಸ್ಟೈಲ್ ‌ನಿಂದ ಅವರು ಆಗಾಗ ಸುದ್ದಿಯಾಗುತ್ತಾರೆ. ಇನ್ನು ಅವರ ಒಟ್ಟು ಆಸ್ತಿ ಮೌಲ್ಯ ಹಲವು ಕೋಟಿ ರೂಪಾಯಿಗಳಷ್ಟಿದೆ ಎನ್ನಲಾಗುತ್ತದೆ.

Rachita-Ram-15

ರಚಿತಾ ಫ್ಯಾಷನ್‌ ಐಕಾನ್‌

ರಚಿತಾ ರಾಮ್ ಎಂದ ಕೂಡಲೇ ನೆನಪಾಗುವುದು ಅವರ ಆ ಸುಂದರವಾದ ಗುಳಿಗೆನ್ನೆ, ಅದಕ್ಕೇ ಅಭಿಮಾನಿಗಳು ಆಕೆಯನ್ನು `ಡಿಂಪಲ್ ಕ್ವೀನ್‌’ ಎಂದು ಕರೆಯುತ್ತಾರೆ. ಹದಿನಾಲ್ಕು ವರ್ಷ ಕಳೆದರೂ ಅವರ ಸೌಂದರ್ಯ ಮತ್ತು ನಗುವಿನಲ್ಲಿ ಅದೇ ಹಸಿರಿದೆ. ಅವರು ಧರಿಸುವ ಸಾಂಪ್ರದಾಯಿಕ ಸೀರೆಗಳಿರಲಿ ಅಥವಾ ಮಾಡರ್ನ್‌ ಡ್ರೆಸ್‌ ಗಳಿರಲಿ, ಪ್ರತಿಯೊಂದರಲ್ಲೂ ಅವರದೇ ಆದ ವಿಶಿಷ್ಟ ಶೈಲಿ ಇರುತ್ತದೆ. ಯುವತಿಯರಿಗೆ ಅವರ ಫ್ಯಾಷನ್‌ ಸೆನ್ಸ್ ಸದಾ ಸ್ಛೂರ್ತಿ. ತಮ್ಮ ಫಿಟ್‌ ನೆಸ್‌ ಮತ್ತು ಚರ್ಮದ ಆರೈಕೆಗೆ ಅವರು ನೀಡುವ ಆದ್ಯತೆ ಅವರ ಸೌಂದರ್ಯದ ಗುಟ್ಟು ಎನ್ನಬಹುದು. ಸದಾ ಸಕಾರಾತ್ಮಕವಾಗಿ ಚಿಂತಿಸುವ ರಚಿತಾ, ಸೋಶಿಯಲ್ ಮೀಡಿಯಾದಲ್ಲೂ ಸಕ್ರಿಯವಾಗಿದ್ದು, ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ.

Rachita-Ram-16

ಹೆಣ್ಣುಮಕ್ಕಳಿಗೆ ಸ್ಫೂರ್ತಿ

ನಟಿ ರಚಿತಾ ರಾಮ್ ತಾವು ತಮ್ಮ ನಡವಳಿಕೆ, ಮಾತುಗಳಿಂದ ಹೆಣ್ಣುಮಕ್ಕಳಿಗೆ ಸ್ಛೂರ್ತಿಯಾಗುತ್ತಾರೆ. ಅದರಲ್ಲಿಯೂ ಹೆಣ್ಣುಮಕ್ಕಳ ದೇಹದ ಬಗ್ಗೆ ಕಮೆಂಟ್‌ ಬಂದಾಗ ರಚಿತಾ ತಾವು ಅದರ ಕುರಿತಂತೆ ಖಚಿತವಾಗಿ ಮಾತನಾಡುತ್ತಾರೆ. `ಸಾಕಷ್ಟು ಕಮೆಂಟ್ಸ್ ಬರುತ್ತವೆ. ಆ ಕಮೆಂಟ್‌ ಗಳ ಬಗ್ಗೆ ತಲೆ ಕೆಡಿಸಿಕೊಳ್ಳಲೇಬಾರದು. ಕಮೆಂಟ್‌ ಗಳನ್ನು ಇಗ್ನೋರ್‌ ಮಾಡಬೇಕು. ಹಾಗೆ ಮಾಡಿದರೆ ನಾವು ನೆಮ್ಮದಿಯಾಗಿ ಇರುತ್ತೇವೆ,’ ಎನ್ನುವ ನಟಿ, `ನೆಗೆಟಿವ್ ‌ಕಮೆಂಟ್‌ ಬರ್ತಿವೆ ಅಂತ ನಾವು ಏಕೆ ತಲೆ ಕೆಡಿಸಿಕೊಳ್ಳಬೇಕು? ಇದನ್ನು ನಾನು ಕೇರೇ ಮಾಡೋದಿಲ್ಲ. ನಮ್ಮ ದೇಹ ನಮ್ಮ ಇಷ್ಟ… ನಮಗೆ ಹೇಗೆ ಬೇಕೋ ಹಾಗೆ ಇರುತ್ತೇವೆ. ಅದರ ಬಗ್ಗೆ ಯಾರೋ ಕಮೆಂಟ್‌ ಹೊಡೆದ್ರು ಅಂತ ನಾವ್ಯಾಕೆ ತಲೆಗೆ ಹಚ್ಚಿಕೊಳ್ಳಬೇಕು? ತಲೆ ಕೆಡಿಸಿಕೊಳ್ಳಲೇಬಾರದು,’ ಎನ್ನುತ್ತಾರೆ.

`ಹೆಣ್ಣುಮಕ್ಕಳ ದೇಹ ಒಂದೇ ತರಹ ಇರೋದಿಲ್ಲ. ಕೆಲವರು ಕಡಿಮೆ ಮಲಗಿದರೆ ದೇಹದ ತೂಕ ಹೆಚ್ಚಾಗುತ್ತದೆ. ಟೆನ್ಶನ್ ಮಾಡಿಕೊಂಡ್ರು ದೇಹದ ತೂಕ ಹೆಚ್ಚುತ್ತದೆ. ಹಾಗಂತ ನಮಗೆ ಇರುವ ಸಮಸ್ಯೆಗಳನ್ನು ಎಲ್ಲರಿಗೂ ಹೇಳೋಕೆ ಆಗುತ್ತಾ? ಕಮೆಂಟ್‌ ಹೊಡೆಯೋರ ಮಾತುಗಳನ್ನು ಕೇಳ್ತಾ ಅಳ್ತಾ ಕುಳಿತುಕೊಳ್ಳುವುದಕ್ಕೆ ಆಗುತ್ತಾ…? ಇಲ್ಲ ಅಲ್ವೇ….? ಹಾಗಾದರೆ ಯಾಕೆ ಕಮೆಂಟ್‌ ಗಳಿಗೆ ತಲೆ ಕೆಡಿಸಿಕೊಳ್ಳಬೇಕು?’ ಎಂಬುದು ನಟಿ ರಚಿತಾರ ಸ್ಪಷ್ಟ ಮಾತು.

ಇನ್ನು ಯುವಕ ಯುವತಿರ ಆತ್ಮಹತ್ಯೆಯೆ ಬಗ್ಗೆ ಮಾತನಾಡುವ ರಚಿತಾ, `ಯಾರೋ ಕಮೆಂಟ್‌ ಹೊಡೆದರು ಅಂತ ಆತ್ಮಹತ್ಯೆ ಮಾಡಿಕೊಳ್ಳುವುದು ಎಷ್ಟು ಸರಿ. ಅಪ್ಪ ಅಮ್ಮ ಸಾಕಷ್ಟು ಕಷ್ಟಪಟ್ಟು ಬೆಳೆಸಿರುತ್ತಾರೆ. ಆದರೆ, ಅದ್ಯಾರೋ ಕಮೆಂಟ್‌ ಹೊಡೆದರು ಅಂತ ಆತ್ಮಹತ್ಯೆ ಮಾಡಿಕೊಳ್ಳುವವರು ಮುಠ್ಠಾಳರು,’ ಎಂದು ಸ್ವಲ್ಪ ಖಾರವಾಗಿಯೇ ಹೇಳಿದ್ದಾರೆ.

ಸೀರಿಯಲ್ ನೋಡೋಕೆ ಇಷ್ಟ

ದಿನವಿಡೀ ಸಿನಿಮಾ, ಶೂಟಿಂಗ್‌ ಎಂದು ಬ್ಯುಸಿಯಾಗಿರುವ ರಚಿತಾರಿಗೆ ಸೀರಿಯಲ್ ನೋಡುವ ಹವ್ಯಾಸ ಕೂಡ ಇದೆ. ಅದೇನೇ ಇರಲಿ, ಆ ಎರಡು ಸೀರಿಯಲ್ ಗಳನ್ನು ಮಿಸ್‌ ಮಾಡದೆ ನೋಡ್ತೀನಿ ಎಂದಿದ್ದಾರೆ. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಎರಡು ಸೀರಿಯಲ್ ಗಳು ನನ್ನ ಫೇವರಿಟ್‌. ಆ ಎರಡು ಧಾರಾವಾಹಿಗಳನ್ನು ಮಾತ್ರ ನಾನು ಮಿಸ್‌ ಮಾಡದೆ ನೋಡ್ತೀನಿ ಎಂದು ರಚಿತಾ ಹೇಳಿದ್ದಾರೆ. ಝೀ ವಾಹಿನಿಯಲ್ಲಿ ಪ್ರಸರವಾಗುವ `ಕರ್ಣ’ ಹಾಗೂ `ಲಕ್ಷ್ಮಿ ನಿವಾಸ’ ಸೀರಿಯಲ್ ಗಳು ನನಗೆ ಇಷ್ಟ. ಇನ್ನು `ಲಕ್ಷ್ಮಿನಿವಾಸ’ ಧಾರಾವಾಹಿಯಲ್ಲಿ ಸಿದ್ದೇಗೌಡರ ಪಾತ್ರ ನನಗೆ ಸಿಕ್ಕಾಪಟ್ಟೆ ಇಷ್ಟ ಎಂದು ನಟಿ ಹೇಳಿದ್ದಾರೆ.

ಮದುವೆ ಯಾವಾಗ?

ರಚಿತಾ ರಾಮ್ ರ ಸಿನಿ ಪಯಣಕ್ಕೆ 14 ವರ್ಷ. ಆಗುತ್ತಿರುವಾಗಲೇ ಅವರ ಮದುವೆ ಕುರಿತಂತೆ ಸುದ್ದಿಗಳು ಸಹ ಹರಿದಾಡುತ್ತಿವೆ. ತಮ್ಮ ನೆಚ್ಚಿನ ನಟಿಯ ಮದುವೆ ಬಗ್ಗೆ ಅಭಿಮಾನಿಗಳಲ್ಲಿ ಸದಾ ಕುತೂಹಲ ಇದ್ದೇ ಇದೆ. ಈ ಬಗ್ಗೆ ಮಾತನಾಡಿದ್ದ ನಟಿ, `ಸರಿಯಾದ ಸಮಯ ಬಂದಾಗ ಮದುವೆ ಆಗ್ತೀನಿ. ಒಳ್ಳೆಯ ವ್ಯಕ್ತಿ ಸಿಕ್ಕರೆ ಖಂಡಿತಾ ಮದುವೆಯಾಗುತ್ತೇನೆ,’ ಎಂದು ಹೇಳಿದ್ದಾರೆ. ಕುಟುಂಬ ಮತ್ತು ಜೀವನ ಸಂಗಾತಿಯ ಬೆಂಬಲ ಇದ್ದರೆ ನಟನೆಯನ್ನೂ ಮುಂದುರಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಿನಲ್ಲಿ ಪ್ರತಿಭೆ, ಪರಿಶ್ರಮ ಮತ್ತು ಸ್ಟೈಲ್ ನಿಂದ ಕನ್ನಡ ಸಿನಿರಂಗದಲ್ಲಿ ತಮ್ಮದೇ ಬ್ರ್ಯಾಂಡ್‌ ಕಟ್ಟಿಕೊಂಡಿರುವ ರಚಿತಾ ರಾಮ್, ಇಂದಿಗೂ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನ ಉಳಿಸಿಕೊಂಡಿದ್ದಾರೆ. ರಚಿತಾ ರಾಮ್ ಸಿನಿ ಜೀವನಕ್ಕೆ 14 ವರ್ಷ, ಈ ಸಂದರ್ಭದಲ್ಲಿ ಅಭಿಮಾನಿಗಳೆಲ್ಲರೂ ಶುಭಾಶಯ ತಿಳಿಸಿದ್ದು, ಮತ್ತಷ್ಟು ಸಿನಿಮಾಗಳಲ್ಲಿ ಡಿಂಪಲ್ ಕ್ವೀನ್‌ ನಟಿಸಲಿ, ಕನ್ನಡದ ನಟಿ ಮತ್ತಷ್ಟು ಸಿನಿಮಾಗಳಲ್ಲಿ ಮಿಂಚಲಿ ಎನ್ನುವುದು `ಗೃಹಶೋಭಾ’ಳ ಆಶಯವಾಗಿದೆ.

– ರಾಘವೇಂದ್ರ ಅಡಿಗ ಎಚ್ಚೆನ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ